ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗುವುದೆಂದು?

Srinivasa Murthy VN
Updated On : 21 Sept 2013, 12:05 pm

ದೊಡ್ಡ ಮರಗಳು, ಅಗಲವಾದ ರಸ್ತೆ, ಅಲ್ಲೊಂದು ಇಲ್ಲೊಂದು ವಾಹನ, ರಾಯಲ್ ಆರ್ಕೆಡ್‌ನಲ್ಲಿ ತುಂಬಿ ತುಳುಕುವ ಕಿತ್ತಳೆ ಹಣ್ಣಿನ ಮರಗಳು, ಗೋಡಂಬಿ ಬೆಳೆಯ ಸಿರಿ, ಹಸಿರಿನಿಂದ ಕಂಗೊಳಿಸುವ ಗದ್ದೆಗಳು, ವರ್ಷವಿಡೀ 18ರಿಂದ 25 ಡಿಗ್ರಿ ಸೆಲ್ಶಿಯಸ್ ನಡುವಿನ ಉಷ್ಣಾಂಶದ ಹಿತ ಅನುಭವ, ನಿವೃತ್ತರ ಪಾಲಿನ ಸ್ವರ್ಗ. ಮಂಚನಬೆಲೆ, ನಂದಿ ಬೆಟ್ಟ ಸೇರಿದಂತೆ ಹಲವು ಸುಂದರ ಬೆಟ್ಟ, ಗುಡ್ಡಗಳಿಂದ ಕೂಡಿ ಹಚ್ಚ ಹಸಿರಿನಿಂದ ಕಂಗೊಳಿಸುವ ವಾತಾವರಣ, ಇದು ಮೈಸೂರು ಅರಸರ ಕಾಲದಲ್ಲಿದ್ದ 'ನಮ್ಮ ಬೆಂಗಳೂರಿನ' ಚಿತ್ರಣ.
ಕಳೆದ 20 ವರ್ಷಗಳ ಈಚೆಗೆ ಬೆಂಗಳೂರು ಬೆಳೆಯಲು ಆರಂಭಿಸಿದೆ. ಬೆಳವಣಿಗೆಯ ಪ್ರಗತಿ ನಿರೀಕ್ಷೆಗೂ ಮೀರಿ ಆಗುತ್ತಿದ್ದು, ಈ ಮೇಲಿನ ವೈಭವಗಳೆಲ್ಲಾ ತದ್ವಿರುದ್ಧವಾಗಿವೆ. ನಗರದ ಸುಂದರ ನೋಟ ಬದಲಾಗಿ ಕೊಳೆಗೇರಿ ಪ್ರದೇಶಗಳು ನಿರ್ಮಾಣವಾಗಿವೆ. ಅಗಲವಾದ ರಸ್ತೆಗಳು ಮರೆಯಾಗಿವೆ. ಹೊಸ ಬಡಾವಣೆಗಳು ಅವೈಜ್ಞಾನಿಕವಾಗಿ ತಲೆ ಎತ್ತುತ್ತಿವೆ. ಅಸ್ಪಷ್ಟ ಹಾಗೂ ಗುರಿ ಇಲ್ಲದೇ ಬೆಳೆಯುತ್ತಿರುವ ನಗರ ಹಲವು ಆತಂಕಗಳನ್ನು ಎದುರು ನೋಡುವಂತೆ ಮಾಡುತ್ತಿದೆ. ನಾಡಪ್ರಭು ಕೆಂಪೇಗೌಡರು ನಗರ ಒಂದು ಮಿತಿಯಲ್ಲಿ ಮಾತ್ರ ಬೆಳೆಯಬೇಕೆಂಬ ಉದ್ದೇಶದಿಂದ ಲಾಲ್‌ಬಾಗ್, ಕೆಂಪಾಂಬುದಿ ಕೆರೆ, ಅಲಸೂರು ಕೆರೆ ಹಾಗೂ ಮೇಖ್ರಿ ವೃತ್ತದಲ್ಲಿ ಒಂದೊಂದು ಗೋಪುರ ನಿರ್ಮಿಸಿದ್ದರು. ಆದರೆ ಇಂದು ನಗರ ಇದರ ಎರಡರಷ್ಟು ಆಚೆ ಬೆಳೆದು ನಿಂತಿದೆ.  
ಯಾವುದೇ ನಗರ, ದೇಶ ಪ್ರಗತಿ ಸಾಧಿಸಬೇಕೆಂದರೆ ಅಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಇನ್ನಿತರ ಮೂಲಸೌಕರ್ಯಗಳಿಗೆ ಆದ್ಯತೆ ನೀಡಬೇಕು.  ಈ ಅಂಶಗಳನ್ನು ಅಳವಡಿಸಿಕೊಂಡ ಹೊಸ ನಗರಗಳಾದ ಹಾಂಕಾಂಗ್, ಶಾಂಘೈ ಬೆಳೆದಿವೆ. ಅದೇ ರೀತಿ ಹಳೆಯ ನಗರಗಳಾದ ಲಂಡನ್, ಮಾಸ್ಕೋ, ಸಿಂಗಪೂರ್‌ಗಳು ಅಭಿವೃದ್ಧಿಗೊಂಡಿವೆ. ವಿಶ್ವಕ್ಕೆ ಮಾದರಿಯಾಗಬಲ್ಲ ಅಂತಾರಾಷ್ಟ್ರೀಯ ನಗರವಾಗಿ ಇವು ಬೆಳೆದಿದ್ದು, ಇವುಗಳ ಅಭಿವೃದ್ಧಿ ಪಥವನ್ನು ಬೆಂಗಳೂರನ್ನು ಬೆಳೆಸಲು ಮಾನದಂಡವಾಗಿಸಿಕೊಂಡರೆ ಮಹಾನಗರವನ್ನು ಅಂತಾರಾಷ್ಟ್ರೀಯ ನಗರವಾಗಿ ಬೆಳೆಸುವುದು ಕಷ್ಟವೇನಲ್ಲ.
ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಎಸ್.ಎಂ. ಕೃಷ್ಣ ಅವರು ಬೆಂಗಳೂರನ್ನು ಸಿಂಗಪೂರ್ ರೀತಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಆಗ ಅದು ತುಂಬಾ ಚರ್ಚೆಗೊಳಗಾಗಿತ್ತು. ಆದರೆ ಅದನ್ನು ಸಾಧಿಸುವ ಅವಕಾಶ ಇದೆ ಅನ್ನುವುದು ಮಾತ್ರ ಸತ್ಯ. ಅದೇನೂ ಕಷ್ಟದ ಕೆಲಸವಲ್ಲ. ಆದರೆ ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗಬೇಕು. ಎಸ್.ಎಂ. ಕೃಷ್ಣ ಅವರು ತಮ್ಮ ಅಧಿಕಾರಾವಧಿಯಲ್ಲಿ ರಸ್ತೆ ಕಾಮಗಾರಿ ಮತ್ತು ಕರೆತಂದ ಕಂಪನಿಗಳ ಮೂಲಕ ಕಣ್ಣಿಗೆ ಕಾಣುವ ಬದಲಾವಣೆ ಅಂದೇ ಮಾಡಿ ತೋರಿಸಿದ್ದಾರೆ. ಅವರ ಹೇಳಿಕೆಯ ತಾತ್ಪರ್ಯ ನಗರವನ್ನು ಸಿಂಗಪೂರ್ ಮಾದರಿಯಲ್ಲಿ ಉನ್ನತೀಕರಿಸುವುದಾಗಿತ್ತು.
ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕೆಂದರೆ ಮೊದಲನೆಯದಾಗಿ ಅಗಲವಾದ ರಸ್ತೆಗಳ ನಿರ್ಮಾಣಕ್ಕೆ ಒತ್ತು ಸಿಗಬೇಕು. ವಿಶಾಲ ಪಾದಚಾರಿ ಮಾರ್ಗ, ಸ್ಕೈವಾಕರ್‌ಗಳ ನಿರ್ಮಾಣವಾಗಬೇಕು. ಇವುಗಳೊಂದಿಗೆ ಸಮೂಹ ಸಾರಿಗೆಗೆ ಒತ್ತು ಸಿಕ್ಕರೆ ನಗರದ ಪ್ರಗತಿ ಕ್ಷಿಪ್ರಗತಿಯಲ್ಲಿ ಆಗಲಿದೆ. ನಗರ ಕೇಂದ್ರದಿಂದ ನಾಲ್ಕೂ ದಿಕ್ಕಿನಲ್ಲೂ ಇರುವ ಮಾಗಡಿ, ದೊಡ್ಡಬಳ್ಳಾಪುರ, ರಾಮನಗರ, ಚಿಕ್ಕಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ, ನೆಲಮಂಗಲ ಮತ್ತು ಆನೇಕಲ್ ಪಟ್ಟಣವನ್ನು ಉಪನಗರಗಳನ್ನಾಗಿ ಅಭಿವೃದ್ಧಿಪಡಿಸುವ ಕಾರ್ಯ ಆಗಬೇಕು. ಈ ಪ್ರದೇಶಗಳಿಗೆ ಉತ್ತಮ ಮೂಲ ಸೌಕರ್ಯ, ಶಾಲೆಗಳು, ಮನರಂಜನಾ ತಾಣ, ಕಲೆ, ಉದ್ಯಾನಗಳು, ಕ್ರೀಡಾಂಗಣಗಳ ನಿರ್ಮಾಣ, ವಾಹನ ಸಂಚಾರ ಸೌಲಭ್ಯ ಕಲ್ಪಿಸಿದರೆ ನಗರ ಕೇಂದ್ರದಲ್ಲಿ ವಾಸಿಸಲು ಇಚ್ಛಿಸುವವರೂ ಉಪನಗರದಲ್ಲಿ ನೆಲೆಸಲು ಮನಸ್ಸು ಮಾಡುತ್ತಾರೆ.
ಇದೇನೇ ಇದ್ದರೂ ನಗರದಲ್ಲಿ ಇಂದು ರಸ್ತೆ ಗುಣಮಟ್ಟದಿಂದ ಕೂಡಿಲ್ಲ. ಅಭಿವೃದ್ಧಿ ಯೋಜನೆಗಳು ನಿಧಾನವಾಗಿ ಸಾಗಿದ್ದು, ಸಂಚಾರ ದಟ್ಟಣೆಯಿಂದ ಒಂದೆಡೆಯಿಂದ ಇನ್ನೊಂದೆಡೆ ತಲುಪುವುದು ಬಹಳ ಕಷ್ಟಕರವಾಗಿದೆ. ಮೇಖ್ರಿ ವೃತ್ತದಿಂದ ಜಯನಗರ ತಲುಪಲು ಒಂದು ಗಂಟೆ ಬೇಕು. ಅದೇ ರೀತಿ ಸದಾಶಿವನಗರದಿಂದ ವೈಟ್‌ಫೀಲ್ಡ್‌ಗೆ ಒಂದು ಗಂಟೆಗೂ ಅಧಿಕ ಕಾಲಾವಧಿ ಹಿಡಿಯುತ್ತದೆ. ಹಾಗಾಗೇ ಅರ್ಧಗಂಟೆಯಲ್ಲಿ ನಗರ ಕೇಂದ್ರದಿಂದ ಆಯಾ ಉಪನಗರಕ್ಕೆ ತಲುಪುವ ಗುಣಮಟ್ಟದ ರೈಲು, ಬಸ್ ಹಾಗೂ ಸುರಂಗ ಮಾರ್ಗ ರೈಲುಗಳ ಸೌಲಭ್ಯ ಕಲ್ಪಿಸುವುದು ಅವಶ್ಯ. ಬೆಂಗಳೂರು ಮೆಟ್ರೊ ಸಂಚಾರ ಈಗ ಆರಂಭವಾಗುತ್ತಿದೆ. ಆದರೆ ವಸ್ತುಸ್ಥಿತಿಯೆಂದರೆ 15 ವರ್ಷಗಳ ಹಿಂದೆಯೇ ಈ ಸೇವೆ ನಗರಕ್ಕೆ ಅಗತ್ಯವಾಗಿತ್ತು.
ಉಪನಗರ ನಿರ್ಮಾಣಕ್ಕೆ ಲಂಡನ್‌ನಗರ ಬೆಂಗಳೂರಿಗೆ ಮಾದರಿಯಾಗಬಲ್ಲದು. ಈ ನಗರದ ಸುತ್ತಲೂ ಅನೇಕ ಉಪನಗರಗಳಿವೆ. ಇವುಗಳಲ್ಲಿ ಪ್ರಮುಖವಾದದ್ದು ಬೆಡ್ಫೋರ್ಡ್‌ಶೇರ್, ಬಕಿಂಗ್‌ಹ್ಯಾಂಶೇರ್, ಕೇಂಬ್ರಿಡ್ಜ್‌ಶೇರ್, ಎಸೆಕ್ಸ್, ಕೆಂಟ್ ಮತ್ತಿತರೆ ನಗರಗಳು. ಇವು ಪರಿಪೂರ್ಣ ಅಭಿವೃದ್ಧಿ ಹೊಂದಿವೆ.
ಸಿಂಗಾಪೂರ್ ಒಂದು ಚಿಕ್ಕ ರಾಷ್ಟ್ರ.  ಕೇವಲ 650 ಚದರ ಕಿ.ಮೀ. ವ್ಯಾಪ್ತಿಯ ಈ ದೇಶ 4.2 ದಶಲಕ್ಷ ಜನಸಂಖ್ಯೆಯನ್ನು ಒಳಗೊಂಡಿದೆ. ನಗರೀಕರಣದ ಪ್ರಭಾವದಿಂದ ಹೇರಳ ಆರ್ಥಿಕ ಸಮೃದ್ಧಿ ಹೊಂದಿದ ರಾಷ್ರ ಇದು. ಇಲ್ಲಿ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಲಾಗಿದೆ. ಇದರಿಂದ ದಟ್ಟಣೆ ಸಮಸ್ಯೆ ಇಲ್ಲ. ರಾಷ್ಟ್ರದ ಒಟ್ಟು ಭೂಪ್ರದೇಶದ ಶೇ.12ರಷ್ಟನ್ನು ರಸ್ತೆಗೆ ಮೀಸಲಿಡಲಾಗಿದೆ. ಭವಿಷ್ಯದಲ್ಲಿ ವೃದ್ಧಿಸುವ ವಾಹನಗಳ ಸಂಖ್ಯೆಯನ್ನು ಅಂದಾಜಿಸಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ.
ನಗರದ ಕ್ಷಿಪ್ರ ಪ್ರಗತಿಯಲ್ಲಿ 'ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ' ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಬಡಾವಣೆ ನಿರ್ಮಿಸುವಾಗ ಬಿಡಿಎ, ಹಾಂಕಾಂಗ್ ನಿರ್ಮಾಣ ಮಾದರಿ ಅಳವಡಿಸಿಕೊಳ್ಳುವುದು ಉತ್ತಮ. ಹಾಂಕಾಂಗ್‌ನಲ್ಲಿ ಎಫ್‌ಎಆರ್ ಅಂದರೆ ಮಹಡಿ ಪ್ರದೇಶ ವ್ಯಾಪ್ತಿ ದೀರ್ಘವಾಗಿರುತ್ತದೆ. ಸದ್ಯ ಬೆಂಗಳೂರಿನಲ್ಲಿ ಇದು 3 ರಿಂದ 3.5 ಎಫ್‌ಎಆರ್ ಮಾತ್ರ ಇದೆ. ಇದು ಇನ್ನೂ ಮೂರರಷ್ಟು ಹೆಚ್ಚಾಗಬೇಕಾದ್ದು ಅನಿವಾರ್ಯ. ಇದಲ್ಲದೇ ಮಾಸ್ಕೊ ಪಟ್ಟಣದಲ್ಲಿ ಇಂದು ನೆಲ ಮಟ್ಟದಿಂದ ಕೆಳಭಾಗದಲ್ಲಿ ಸುಮಾರು 100 ಅಡಿವರೆಗೂ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಮೂರು ಅಂತಸ್ತುಗಳು ನೆಲದೊಳಗೆ ನಿರ್ಮಾಣವಾಗುತ್ತವೆ.
ನಗರದ ರಿಯಲ್ ಎಸ್ಟೇಟ್ ಪ್ರಗತಿ ವ್ಯವಸ್ಥಿತ ರೂಪದಲ್ಲಿ ಆಗಬೇಕಿದೆ. ಇದಕ್ಕೆ ಸಿಂಗಪೂರ್ ಮಾದರಿ ಅನುಕರಣೀಯ. ದರ ಹೆಚ್ಚಳವನ್ನು ಸರ್ಕಾರವೇ ನಿಗದಿಪಡಿಸುತ್ತದೆ. ಸರಿಯಾದ ಮಾರ್ಗಸೂಚಿ ನಿಯಮ ಅಳವಡಿಕೆಯ ಮೂಲಕ ಇದರ ನಿಯಂತ್ರಣ ಆಗಬೇಕು. ಇಲ್ಲವಾದರೆ ಮನಸೋ ಇಚ್ಛೆ ನಿಯಮಾವಳಿಗಳು ಜಾರಿಯಾದರೆ ಮಧ್ಯಮ ವರ್ಗಕ್ಕೆ ಬಹಳ ತೊಂದರೆ ಆಗಲಿದೆ.
ಸುರಂಗ ಮೆಟ್ರೊ ಸಾರಿಗೆ ಅಭಿವೃದ್ಧಿ ಕಾಮಗಾರಿಯಲ್ಲಿ ರಷ್ಯಾ ಅತ್ಯುತ್ತಮ ಸಾಧನೆ ಮಾಡಿದೆ. ಅಲ್ಲಿ ಸೀಮಿತ ಪ್ರದೇಶವನ್ನು ಸದುಪಯೋಗಪಡಿಸಿಕೊಳ್ಳಲಾಗುತ್ತಿದೆ. ಮಾಸ್ಕೊದಲ್ಲಿ 1935ರಲ್ಲಿಯೇ ಮೆಟ್ರೊ ರೈಲು ಸೇವೆ ಆರಂಭವಾಯಿತು. ನೆಲದ ಕೆಳ ಮಟ್ಟದಲ್ಲಿ ರೈಲು ಮಾರ್ಗ ರಚಿಸಿ ಮೂರು ಟೈರ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಬೆಂಗಳೂರು ಮೆಟ್ರೊ ರೈಲು ಕಾಮಗಾರಿ ನಡೆಯುತ್ತಿರುವ ಕಡೆಗಳಲ್ಲೆಲ್ಲಾ ಹದಗೆಟ್ಟ ರಸ್ತೆಗಳು, ಗುಂಡಿಗಳು ಸಂಚಾರ ದಟ್ಟಣೆ ಸೃಷ್ಟಿಸಿವೆ. ಮೆಟ್ರೊ ರೈಲು ಕಾಮಗಾರಿ ಮೊದಲ ಹಂತದ ಯೋಜನೆ ಆರಂಭವಾಗುವಾಗ ಯೋಜನೆ ವೆಚ್ಚ ರು. 6,000 ಕೋಟಿ ಎಂದು ಹೇಳಲಾಗಿತ್ತು. ಈಗ ಅದು 11,608 ಕೋಟಿ ರುಪಾಯಿಗೆ ದಾಟಿದೆ.
ತ್ಯಾಜ್ಯ ವಿಲೇವಾರಿಗೆ ನಮಗೆ ದುಬೈ, ಲಂಡನ್ ಹಾಗೂ ಚೀನಾ ಮಾದರಿಯಾಗಬಲ್ಲವು. ದುಬೈ ಸರ್ಕಾರ ಅನೇಕ ರಾಷ್ಟ್ರಗಳನ್ನು ಸಂಪರ್ಕಿಸಿ ಅಲ್ಲಿನ ಪರಿಣಾಮಕಾರಿ ತ್ಯಾಜ್ಯ ವಿಲೇವಾರಿ ವಿಧಾನವನ್ನು ಅಧ್ಯಯನ ಮಾಡಿ ತನ್ನ ನಗರಕ್ಕೆ ಸೂಕ್ತ ಎನಿಸಿದ ವಿಧಾನವನ್ನು ಅಳವಡಿಸಿಕೊಂಡಿದೆ. ಬೆಂಗಳೂರು ಎದುರಿಸುತ್ತಿರುವ ಮಾದರಿಯ ಸಮಸ್ಯೆಯನ್ನೇ ಅದೂ ಎದುರಿಸುತ್ತಿತ್ತು. ಪರಿಣಾಮಕಾರಿ ವಿಧಾನಕ್ಕೆ ಅವರು ಖಾಸಗಿ ಸಹಭಾಗಿತ್ವಕ್ಕೆ ಮುಂದಾಗಿದ್ದು ಯಶ ತಂದುಕೊಟ್ಟಿತು.
ಸಾಕಷ್ಟು ಪ್ರವಾಸಿಗರು ಬೆಂಗಳೂರಿಗೆ ಬಂದಾಗ ಸಮೀಪದ ಯಾವುದಾದರೂ ಪ್ರವಾಸಿ ತಾಣಕ್ಕೆ ಭೇಟಿ ನೀಡಲು ಬಯಸುತ್ತಾರೆ. ಇದಕ್ಕೆ ಪೂರಕವಾಗಿ ನಂದಿಬೆಟ್ಟ, ರಾಮನಗರ ಜನಪದ ಲೋಕ, ಮಂಚನಬಲೆ, ಮೇಕೆದಾಟು ಇತ್ಯಾದಿ ಪ್ರವಾಸಿ ತಾಣಗಳಿವೆ. ಅವನ್ನು ಅಭಿವೃದ್ಧಿ ಪಡಿಸುವ ಕಾರ್ಯ ಆಗಬೇಕು. ಪ್ರಗತಿಗೆ ಮುಂದಾದಾಗ ಕ್ಷಿಪ್ರಗತಿಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಅನ್ಯ ರಾಷ್ಟ್ರದ ಉದ್ಯಮಗಳು, ಕಂಪನಿಗಳು ರಾಜ್ಯದ ರಾಜಧಾನಿಯತ್ತ ಬರಲಿ ಎಂದು ಬಯಸುವುದು ತಪ್ಪಲ್ಲ. ಆದರೆ ಅದಕ್ಕೆ ಪೂರಕ ವಾತಾವರಣ ಇಲ್ಲಿದೆಯೇ ಎಂದು ಗಮನಿಸಬೇಕಾಗುತ್ತದೆ.

- ಡಾ. ಕೆ. ಸುಧಾಕರ್, ಶಾಸಕರು
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement