ಅಭಿವ್ಯಕ್ತಿ ಸ್ವಾತಂತ್ರ್ಯ ಸಾಹಿತಿಗಳಿಗೆ ಮಾತ್ರವೇ?
ಬರೆಯೋ ಧರ್ಮ ನಮ್ಮದು. ಅದರಿಂದ ಮನಸ್ಸಿಗೆ ನೋವಾದ್ರೆ ಅದನ್ನು ಸಹಿಸಿಕೊಳ್ಳಬೇಕು - ಹೀಗೆಂದು ಹೇಳಿದವರು ಜ್ಞಾನಪೀಠ ಪ್ರಶಸ್ತಿ ವಿಜೇತ ಬುದ್ಧಿಜೀವಿ, ಗಿರೀಶ್ ಕಾರ್ನಾಡ್ ಅವರು. ಲೇಖಕನಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಹೇಳುತ್ತಾ, ಹಿಂದೂ ಧರ್ಮದ ಎಲ್ಲಾ ವರ್ಗಗಳ ಜನರ ಪ್ರಿಯನಾದ ಗಣಪತಿಯನ್ನು ಅವಹೇಳನಕಾರಿಯಾಗಿ ಬಿಂಬಿಸಿರುವ 'ಡುಂಢಿ'ಯ ಲೇಖಕ ಯೋಗೇಶ್ ಮಾಸ್ಟರ್ ವಿರುದ್ಧ ಇರುವ ಮೊಕದ್ದಮೆಯನ್ನು ವಾಪಸ್ ಪಡೆಯಬೇಕು. ಅಲ್ಲದೆ ನಾವು(ಲೇಖಕರು) ಮನಸ್ಸಿಗೆ ನೋವು ಮಾಡುತ್ತೇವಯೇ ಹೊರತು ದೈಹಿಕ ನೋವನ್ನೇನೂ ನೀಡಿಲ್ಲ ಎಂದೂ ಹೇಳಿದ್ದಾರೆ.
ಕಾರ್ನಾಡರೇ, ಒಂದು ವೇಳೆ ಯಾರಾದರೂ ನೀವು ಓಲೈಸುವ ಅಲ್ಪಸಂಖ್ಯಾತರ ದೇವರ/ಧರ್ಮದ ವಿರುದ್ಧ ಬರೆದು, ಅವರ ವಿರುದ್ಧ ಮೊಕದ್ದಮೆ ದಾಖಲಾಗಿದ್ದ ಪಕ್ಷದಲ್ಲಿ ನೀವು ಇದೇ ಮಾತು ಆಡುತ್ತಿದ್ದಿರೇನು?
'ಉಗುಳಿದರೆ, ಕೆಮ್ಮಿದರೆ ತಪ್ಪು, ಅವರಿಗೆ ಶಿಕ್ಷೆ ಕೊಡಿ' ಎಂದು ಆದೇಶ ಮಾಡುವ ಧಾರ್ಮಿಕ ಮುಖಂಡರಿಗೂ, ನಿಮಗೂ ಏನು ವ್ಯತ್ಯಾಸವಿದೆ ಸ್ವಾಮಿ? ಇನ್ನು ನಿಮ್ಮ "ನಾವು ಮನಸ್ಸಿಗೆ ನೋವು ಮಾಡುತ್ತೇವೆಯೇ ಹೊರತು ದೈಹಿಕ ನೋವನ್ನೇನೂ ನೀಡಿಲ್ಲ" ಎನ್ನುವ ಮಾತಿನ ಅರ್ಥವೇನು ಕಾರ್ನಾಡರೆ?
ಮಾಸಲಾಗದಂಥ ಗುರುತು ಹಾಗು ಎಲ್ಲಾ ವರ್ಗದ ಜನರನ್ನೂ ಘಾಸಿಗೊಳಿಸುವುದು ಮನಸ್ಸಿಗೆ ನೋವುಂಟು ಮಾಡುವ ಮಾತೇ ಹೊರತು ದೈಹಿಕ ಹೊಡೆತವಲ್ಲ. ನಿಮ್ಮಂಥ ಉತ್ತಮ ಲೇಖಕರಿಗೆ ನನ್ನಂಥ ಪಾಮರನೊಬ್ಬ ಈ ವಿಚಾರ ಹೇಳಬಾರದು.
ನಮ್ಮ ದೇಶದಲ್ಲಿ ಈಗ ಹುಸಿ ಜಾತ್ಯತೀತ (Pseudo Secular) ಜನರು ತೋರಿಕೆಗೋಸ್ಕರ, ಮತ್ತೊಂದು ರಾಜಕೀಯ ಪಕ್ಷದ ಓಲೈಕೆಗೋಸ್ಕರ ಹೀಗೆ ನುಡಿಮುತ್ತುಗಳನ್ನು ಉದುರಿಸುತ್ತಾರೆ. ತಾವು ಹೇಳಿದ ಹಾಗೆ ಬರೀ ಮನಸ್ಸಿಗೆ ನೋವುಂಟು ಮಾಡುವ ಮಾತುಗಳಿಂದಲೇ ವರ್ಷಾನುಗಟ್ಟಲೆ ಮಾಸದ ಹಾಗೆ ಇದ್ದ ಕೋಮು ಸೌಹಾರ್ದತೆ ಮಾಯವಾಗುತ್ತದೆ.
ಹೀಗೆಲ್ಲ ಸಹನೆಯ ಪಾಠ ಹೇಳುವವರು ತಮ್ಮ ಹೇಳಿಕೆಗಳಿಗೆ ಟೀಕೆ ವ್ಯಕ್ತವಾದಾಗ ಮಾತ್ರ ಅದು ಮಾಧ್ಯಮ ಸ್ವಾತಂತ್ರ್ಯದ ದುರುಪಯೋಗ ಎಂದು ಹರಿಹಾಯುವುದು ಮಹಾದುರಂತ.
ಬರೆಯುವ ಧರ್ಮ, ಪ್ರತಿಕ್ರಿಯೆ, ಭಾವನೆಗಳಿಗೆ ನೋವು ಮಾಡಿಕೊಳ್ಳುವುದು ಇವೆಲ್ಲ ಸಾಹಿತಿಗಳ ಸ್ವತ್ತು ಮಾತ್ರವೇ?
-ಶಂಕರ್ ಪ್ರಸಾದ್ ಎಂ.