ಶಿಕ್ಷಣ ಸಂಯೋಜಕರ ಅರ್ಹತೆ ಪರೀಕ್ಷೆಯ ಸಮಸ್ಯೆಗಳು
ಕೆಲವೊಂದು ಸಾರಿ ಸರ್ಕಾರದ ನೀತಿ ನಿರೂಪಣೆಗಳು ಗೊಂದಲದಿಂದ ಕೂಡಿ ನೌಕರರನ್ನು ಪೇಚಿಗೆ ತಂದಿಡುತ್ತವೆ. ಇದೀಗ ಶಿಕ್ಷಣ ಸಂಯೋಜಕರು ಆಯ್ಕೆ ಅರ್ಹತೆ ಮತ್ತು ಪರೀಕ್ಷೆಯಲ್ಲಿನ ನಿಯಮಗಳಲ್ಲಿನ ಸ್ಪಷ್ಟತೆಯ ಕೊರತೆಯಿಂದಾಗಿ ಶಿಕ್ಷಕರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ.
ವಿಷಯ ಏನೆಂದರೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ದಿನಾಂಕ 14-08-2013 ರಂದು ಒಂದು ಆದೇಶ ಹೊರಡಿಸಿ, ರಾಜ್ಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಖಾಲಿಯಿರುವ ಶಿಕ್ಷಣ ಸಂಯೋಜಕರ ಹುದ್ದೆಗಳಿಗೆ ಅರ್ಹ ಪ್ರೌಢ ಶಾಲಾ ಮತ್ತು ಪ್ರಾಥಮಿಕ ಶಾಲಾ ಪದವಿಧರೇತರ ಮುಖ್ಯ ಗುರುಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಆದೇಶದಲ್ಲಿ ಶಿಕ್ಷಣ ಸಂಯೋಜಕರ ಹುದ್ದೆಗೆ ಅರ್ಜಿ ಸಲ್ಲಿಸಲು 50 ವರ್ಷ ವಯಸ್ಸಿನ ಒಳಗಿರಬೇಕು ಎಂದು ಹೇಳಲಾಗಿದೆ. ಹಲವಾರು ಪ್ರಾಥಮಿಕ ಶಾಲಾ ಶಿಕ್ಷಕರು ಪದವಿಧರೇತರ ಮುಖ್ಯ ಶಿಕ್ಷಕರು ಬಡ್ತಿ ಪಡೆಯುವದರೊಳಗೆ ಅವರ ವಯಸ್ಸು 50 ವರ್ಷ ತಲುಪಿರುತ್ತಾರೆ. ಅಲ್ಲದೆ, 31-08-2013 ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯಕ್ತರು ಪರಿಷ್ಕೃತ ಆದೇಶ ಹೊರಡಿಸಿರುತ್ತಾರೆ. ಈ ಅದೇಶದ ಪ್ರಕಾರ ಶಿಕ್ಷಣ ಸಂಯೋಜಕರ ಹುದ್ದೆಗೆ ಅರ್ಜಿ ಸಲ್ಲಿಸುವ ಶಿಕ್ಷಕರು 55 ವರ್ಷ ಒಳಗಿನವರಾಗಿರಬೇಕು. ಅಂದರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಈ ಆದೇಶಗಳಿಂದ 55 ವರ್ಷ ಮೇಲ್ಪಟ್ಟ ಪದವಿಧರೇತರ ಮುಖ್ಯ ಶಿಕ್ಷಕರು ಹಾಗೂ ಪ್ರೌಢ ಶಾಲೆ ಶಿಕ್ಷಕರು ಶಿಕ್ಷಣ ಸಂಯೋಜಕರಾಗಲು ಅನರ್ಹರು ಎಂದಾಯಿತು. ಸೇವಾ ಹಿರಿತನ ಹೊಂದಿರುವ 55ರಿಂದ 60 ವರ್ಷದೊಳಗಿನ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳಲ್ಲಿ ಶಿಕ್ಷಣ ಸಂಯೋಜಕರಾಗಲು ಅಸಮರ್ಥರೇ? ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಾಗಲಿ ಅಥವಾ ಸರಕಾರದ ಬೇರೆ ಯಾವುದೇ ಇಲಾಖೆಯಲ್ಲಿ ಸೇವಾ ಹಿರಿತನ ಆಧರಿಸಿ ಪದೋನ್ನತಿ ನೀಡುವುದಿಲ್ಲವೇ? ಈಗ ನಡೆಯುತ್ತಿರುವ ಶಿಕ್ಷಣ ಸಂಯೋಜಕರ ಆಯ್ಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ವಯೋವುತಿ ಗರಿಷ್ಠ ಮಿತಿಯನ್ನು ತೆಗೆದುಹಾಕಿ ಎಲ್ಲರಿಗೂ ಅರ್ಜಿ ಹಾಕಲು ಅವಕಾಶ ನೀಡಬೇಕು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳಲ್ಲಿ ಇರುವ ಶಿಕ್ಷಣ ಸಂಯೋಜಕರ ಹುದ್ದೆಗಳೆಲ್ಲವು ಒಂದೇ ವೃಂದ ಹುದ್ದೆಯಾಗಿರುತ್ತವೆ. ಹೀಗಿರುವಾಗ ಪ್ರಾಥಮಿಕ ಶಾಲೆಯಿಂದ ಬಡ್ತಿ ಪಡೆದು ಪ್ರೌಢ ಶಾಲೆಗೆ ಬಂದ ಶಿಕ್ಷಕರಿಗೆ 5 ವರ್ಷ ಸೇವಾ ಅನುಭವ ಹಾಗೂ ಪ್ರೌಢ ಶಾಲೆಗೆ ನೇರ ನೇಮಕ ಹೊಂದಿದ ಶಿಕ್ಷಕರಿಗೆ 10 ವರ್ಷಗಳ ಸೇವಾ ಅನುಭವ ನಿಗದಿಪಡಿಸಿರುವುದು ಸರಿಯೇ? ಮುಂದೆ ಬರುವ ಪ್ರೌಢ ಶಾಲಾ ಮುಖ್ಯ ಗುರುಗಳ ಬಡ್ತಿಯಲ್ಲಿ ಯಾವ ಮಾನದಂಡಗಳನ್ನು ಅನುಸರಿಸಲಾಗುತ್ತದೆ? ಒಂದೇ ಪ್ರೌಢ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಶಾಲೆಯಿಂದ ಬಡ್ತಿ ಪಡೆದು ಬಂದ ಶಿಕ್ಷಕ ಹಾಗೂ ನೇರ ನೇಮಕವಾಗಿರುವ ಶಿಕ್ಷಕರ ಸೇವಾ ಜೇಷ್ಠತೆ ಪರಿಗಣಿಸುವಾಗ ಪ್ರೌಢ ಶಾಲೆಗೆ ಬಂದ ದಿನಾಂಕವನ್ನು ಪರಿಗಣಿಸಲಾಗುತ್ತದೆ. ಇಂತಹ ಇಬ್ಬರು ಶಿಕ್ಷಕರು ಒಂದೇ ಪ್ರೌಢ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭಗಳಲ್ಲಿ ಪ್ರಾಥಮಿಕ ಶಾಲೆಯಿಂದ ಬಡ್ತಿ ಮೂಲಕ ಬಂದ ಶಿಕ್ಷಕ 5 ವರ್ಷ ಪ್ರೌಢ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸಿದಲ್ಲಿ ಶಿಕ್ಷಣ ಸಂಯೋಜಕ ಹುದ್ದೆಗೆ ಅರ್ಜಿ ಹಾಕಲು ಅವಕಾಶ ಸಿಗುತ್ತದೆ. ಆದರೆ, ಅದೇ ಶಾಲೆಯಲ್ಲಿ ನೇರ ನೇಮಕ ಹೊಂದಿದ ಪ್ರೌಢ ಶಾಲಾ ಶಿಕ್ಷಕ 10ನೇ ವರ್ಷದಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಆ ಶಿಕ್ಷಕನಿಗೆ ಶಿಕ್ಷಣ ಸಂಯೋಜಕನಾಗಲು ಶಿಕ್ಷಣ ಇಲಾಖೆಯ ಆದೇಶ ಅವಕಾಶ ನೀಡುವುದಿಲ್ಲ. ಇದು ತಾರತಮ್ಯವಲ್ಲವೇ?
ಆದೇಶದಲ್ಲಿ ತಿಳಿಸಿರುವಂತೆ ಶಿಕ್ಷಣ ಸಂಯೋಜಕರಾಗಿ 5 ವರ್ಷ ಅವಧಿ ಮುಗಿದ ಶಿಕ್ಷಕರನ್ನು ಪುನಾ ಕೌನ್ಸೆಲಿಂಗ್ ಮೂಲಕ ಪ್ರೌಢ ಶಾಲೆಗಳಿಗೆ ವರ್ಗಾವಣೆ ಮಾಡಲಾಗುವುದು. ಬಡ್ತಿ ಮತ್ತು ವರ್ಗಾವಣೆಯ ಮೂಲಕ ಶಿಕ್ಷಣ ಸಂಯೋಜಕರ ಹುದ್ದೆಗೆ ಬಂದ ಶಿಕ್ಷಕರೂ ಕೂಡಾ ಶಿಕ್ಷಣ ಸಂಯೋಜಕರ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಆದರೆ, ಬಡ್ತಿ ಹಾಗೂ ಶಿಕ್ಷಕರ ವರ್ಗಾವಣೆಯ ಪ್ರಕ್ರಿಯೆಯಲ್ಲಿ ಶಿಕ್ಷಣ ಸಂಯೋಜಕರ ಹುದ್ದೆಗೆ ಬಂದ ಶಿಕ್ಷಣ ಸಂಯೋಜಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೂ ಕೂಡ ಅವರಲ್ಲಿ ಶಿಕ್ಷಕರು ಪ್ರೌಢ ಶಾಲೆಯಲ್ಲಿ 5 ರಿಂದ 9 ವರ್ಷ ಸೇವೆ ಸಲ್ಲಿಸಿದ್ದರೂ 10 ವರ್ಷ ಸೇವೆ ಸಲ್ಲಿಸಿಲ್ಲ ಎಂಬ ಕಾರಣದಿಂದಾಗಿ ಅವರಿಗೆ ಪರೀಕ್ಷಾ ಪ್ರವೇಶ ಪತ್ರ ನೀಡಿಲ್ಲದಿರುವದು ಇಲಾಖೆಯ ಆದೇಶದ ಉಲ್ಲಂಘನೆ ಅಲ್ಲವೆ? ಹಾಗಾದರೆ ಈ ಶಿಕ್ಷಕರಿಗೆ ಪರೀಕ್ಷೆಯಲ್ಲಿ ಆಯ್ಕೆಯಾಗುವ ಅವಕಾಶ ಇಲ್ಲ ಎಂದಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಶಿಕ್ಷಕರ ವರ್ಗಾವಣೆಯಲ್ಲಿ ಈ ಶಿಕ್ಷಕರಿಗೆ ಶಿಕ್ಷಣ ಸಂಯೋಜಕರ ಹುದ್ದೆಯನ್ನು ಪಡೆಯಲು ಅವಕಾಶ ನೀಡಿದ್ದು ಏಕೆ? ಇಂತಹ ಶಿಕ್ಷಕರನ್ನು ಪ್ರೌಢ ಶಾಲೆಗಳಿಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವುದಾದಲ್ಲಿ ಶಿಕ್ಷಕರ ವರ್ಗಾವಣೆ ಅಧಿನಿಯಮ 2007 ಅನ್ನು ಶಿಕ್ಷಣ ಇಲಾಖೆ ಅಧಿಕಾರಿಗಳೇ ಉಲ್ಲಂಘಿಸಿದಂತಾಗುವುದಿಲ್ಲವೇ? ಇಂಥ ಸಮಸ್ಯೆಗಳಿಗೆ ಇಲಾಖೆಯ ಆದೇಶದಲ್ಲಿ ಯಾವುದೇ ಸ್ಪಷ್ಟತೆ ಇರುವದಿಲ್ಲ. ಇಲಾಖೆಯ ಮಾನ್ಯ ಶಿಕ್ಷಣ ಮಂತ್ರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರು ಹಾಗೂ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ನೀಡುವರೇ?
- ರೇಣುಕಾ ಗಾಣಿಗೇರ, ಐನಾಪುರ