ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಆಧಾರ್ ಕಾರ್ಡ್ ಸ್ವಾಗತಾರ್ಹ ನಿಲವು

Lingaraj Badiger
Updated On : 25 Sept 2013, 12:10 pm

ಫಲಾನುಭವಿಗಳಿಗೆ ಮತ್ತು ನಾಗರಿಕರಿಗೆ ಆಧಾರ್ ಕಾರ್ಡ್ ಇಲ್ಲವೆಂಬ ಕಾರಣಕ್ಕಾಗಿ ಯಾವುದೇ ಸೌಲಭ್ಯವನ್ನು ನಿರಾಕರಿಸುವಂತಿಲ್ಲವೆಂದು ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಆಧಾರ್ ಕಾರ್ಡ್ ಐಚ್ಛಿಕ  ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿಯೂ ತಿಳಿಸಲಾಗಿದೆ ಎನ್ನಲಾಗಿದೆ. ಅಕ್ರಮ ವಲಸಿಗರಿಗೂ ಆಧಾರ್ ನೀಡದಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿರುವುದು ಗಮನಾರ್ಹ.

ಇಷ್ಟಕ್ಕೂ ಆಧಾರ್‌ನಲ್ಲಿ ಹುಟ್ಟಿದ ವರ್ಷವನ್ನು ಮಾತ್ರ ದಾಖಲಿಸಲಾಗಿದೆ. ಹುಟ್ಟಿದ ದಿನಾಂಕ ಮತ್ತು ತಿಂಗಳನ್ನೂ ದಾಖಲಿಸಿರುವುದಿಲ್ಲ. ಅಂದರೆ ಪ್ರಜೆಯ ಸರಿಯಾದ ವಯಸ್ಸನ್ನು ತಿಳಿಸುವುದರಲ್ಲೂ ಆಧಾರ್ ಆಧಾರವಾಗಿಲ್ಲ.  ಸರಿಯಾದ ವಯಸ್ಸನ್ನು ನಿರೂಪಿಸಲು ವ್ಯಕ್ತಿಯು ಪಾನ್‌ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಚುನಾವಣಾ ಗುರುತಿನ ಚೀಟಿ ಇಂತಹವುಗಳನ್ನು ಒದಗಿಸಲೇಬೇಕಾಗಿದೆ. ಕೆಲವೊಮ್ಮೆ ವಿಳಾಸವನ್ನೂ ಸರಿಯಾಗಿ ದಾಖಲಿಸದ ಕಾರ್ಡ್‌ಗಳನ್ನು ಕಾಣಲಾಗಿದೆ.  ಆಧಾರ್ ಕಾರ್ಡ್ ಮಾಡಿಸುವಾಗ ಸಂಬಂಧಪಟ್ಟವರಿಗೆ ವಿಳಾಸವು ದಾಖಲಿಸಿರುವುದು ಸರಿಯೇ ಎಂದು ನೋಡಲು ಅವಕಾಶ ಮಾಡಿಕೊಟ್ಟಿದ್ದರೂ ಅವಿದ್ಯಾವಂತರಿಗೆ ಆಗಿರುವ ತಪ್ಪನ್ನು ಗಮನಿಸಲು ಸಾಧ್ಯವಾಗದೆ ಇದ್ದಾಗ ಅವು ಹಾಗೆಯೇ ಉಳಿದುಕೊಂಡಿರುವುದು ಸಾಮಾನ್ಯವಾಗಿದೆ.  ಆಧಾರ್ ಕಾರ್ಡ್ ಹಿಂಬದಿಯಲ್ಲಿ ಆಧಾರ್ ಎಂಬುವುದು ಗುರುತಿನ ಚೀಟಿ ಮಾತ್ರ, ಪೌರತ್ವವನ್ನು ದೃಢೀಕರಿಸುವುದಿಲ್ಲ ಮತ್ತು ಭವಿಷ್ಯದಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸೇವೆಗಳನ್ನು ಪಡೆಯುವುದಕ್ಕಾಗಿ ಆಧಾರ್ ನಿಮಗೆ ಸಹಾಯ ಮಾಡುವುದು ಎಂದು ಸೂಚನೆ ನೀಡಲಾಗಿದೆ.  
ಆಧಾರ್‌ನಲ್ಲಿ ಮುಖ್ಯವಾಗಿ ಇರುವುದು ವಯಸ್ಸು ಮತ್ತು ವಿಳಾಸ. ಅದೂ ಸಂಪೂರ್ಣವಾಗಿ ಮತ್ತು ಸರಿಯಾಗಿರುವುದಿಲ್ಲ. ಅಂದ ಮೇಲೆ ಯಾವ ಪುರುಷಾರ್ಥಕ್ಕಾಗಿ ಆಧಾರ್ ಕಾರ್ಡ್ ಬೇಕು ಎಂಬ ಪ್ರಶ್ನೆ ಬೆನ್ನಟ್ಟುತ್ತದೆ. ಆಧಾರ್ ಕಾರ್ಡ್ ನೀಡುವುದಕ್ಕೆ ಭಾರತ ಸರ್ಕಾರದ ಬೊಕ್ಕಸದಿಂದ ಈಗಾಗಲೇ ಕೋಟ್ಯಂತರ ರುಪಾಯಿಗಳನ್ನು ವ್ಯಯ ಮಾಡಿದೆ. ಇದಕ್ಕಾಗಿ ಜನರ ಸಮಯ, ಶಕ್ತಿ ಮತ್ತು ಹಣವನ್ನೂ ಹಾಳು ಮಾಡಲಾಗಿದೆ. ಆಧಾರ್ ಕಾರ್ಡ್ ಕಡ್ಡಾಯ ವಿರುದ್ಧ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ ಮತ್ತಿತರರು ಸಲ್ಲಿಸಿದ ಅರ್ಜಿ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದಿಂದ ಜನರಿಗೆ ಸಮಾಧಾನವಾಗಿದೆ.  ಆದರೆ ಅರ್ಜಿದಾರರು ಈ ಕೆಲಸವನ್ನು ಆಧಾರ್ ಕಾರ್ಡ್ ನೀಡಲು ಪ್ರಾರಂಭಿಸಿದ್ದಾಗಲೇ ಮಾಡಿದ್ದರೆ ಇನ್ನೂ ಬಹಳಷ್ಟು ಜನರಿಗೆ ಅನುಕೂಲವಾಗುತ್ತಿತ್ತು. ತಡವಾದರೂ ಚಿಂತೆ ಇಲ್ಲ  ಆಗದೇ ಇರುವುದಕ್ಕಿಂತ ವಾಸಿ ಎಂಬುವುದು ಈ ವಿಷಯದಲ್ಲೂ ಸತ್ಯ.

-ಕೆ.ವಿ. ಸೀತಾರಾಮಯ್ಯ, ಹಾಸನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement