ಪ್ರತಿಮಾತಲ್ಲೂ ದ್ವಂದ್ವವೇ ಮೂರ್ತಿವೆತ್ತಂತೆ...
'ಕನ್ನಡ ಪ್ರಭ' ಪತ್ರಿಕೆಯಲ್ಲಿ ಪ್ರಕಟವಾದ ವಿವಿಧ ಹೇಳಿಕೆಗಳನ್ನು ಗಮನಿಸೋಣ....
ಸೆಪ್ಟೆಂಬರ್ 15 2012 ರ ವಾರ್ತೆ- 'ಮೋದಿ ಪ್ರಧಾನಿಯಾದರೆ ನಾಚಿಕೆಗೇಡು. ಅವನ ಫೋಟೋ ನೋಡಿದರೆ ಸಿಟ್ಟು ಬರುತ್ತದೆ. ಅವನನ್ನು ಅಸ್ಪೃಶ್ಯರಾಗಿ ಕಾಣಿರಿ' ಅನಂತಮೂರ್ತಿ ಹೇಳಿಕೆ.
ಮಾರ್ಚ್ 21 2013 ರ ವಾರ್ತೆ- 'ನಾನು ಬದುಕಿರುವಷ್ಟು ಕಾಲ ಮೋದಿಯನ್ನು ವಿರೋಧಿಸುವೆ' ಅನಂತ ಮೂರ್ತಿ ಹೇಳಿಕೆ.
ಸೆಪ್ಟೆಂಬರ್ 16 2013 ರ ವಾರ್ತೆ - 'ಮೋದಿ ಆಳುವ ನಾಡಲ್ಲಿ ಬದುಕಲಾರೆ..' ಅನಂತ ಮೂರ್ತಿ.
ಈ ಸೆಪ್ಟೆಂಬರ್ ಮಾರ್ಚ್ನ ಮೋದಿ ತೆಗಳುವ ಸೆಮಿಸ್ಟರ್ ಸ್ಕೀಮ್ನ ಇತ್ತೀಚೆಗಿನ ಹೇಳಿಕೆ ಹಲವರ ಆಕ್ರೋಶಕ್ಕೆ ಗುರಿಯಾಯಿತು. ಸೆಪ್ಟೆಂಬರ್ 24 ರಂದು ಅದಕ್ಕೊಂದು ತೆರೆ ಎಳೆದರು ಅನಂತಮೂರ್ತಿಯವರು. ಕಾಂಗ್ರೆಸ್ ಅನ್ನು ಪಾವನ ಗಂಗೆಗೆ ಹೋಲಿಸಿದರು. ನನ್ನ ಆಕ್ಷೇಪ ಅವರು ಕಾಂಗ್ರೆಸ್ ಹೊಗಳಿದ್ದಕ್ಕಲ್ಲ. ಒಬ್ಬರು ಮೋದಿಯವರನ್ನು ಹೊಗಳುತ್ತಾರೆ. ಮತ್ತೊಬ್ಬರು ತೆಗಳುತ್ತಾರೆ. ಕಾಂಗ್ರೆಸ್ನ ಹೊಗಳುವವರು, ಮೋದಿಯನ್ನು ತೆಗಳುವವರು ಇಬ್ಬರೂ ಸತ್ಯವನ್ನು ಮರೆಮಾಚಿ ಮಾತನಾಡುತ್ತಾರೆ. ಆ ನೋವು ಅಪಾರ. ಈ ಗುಂಪಿನವರು ತರ್ಕಕ್ಕೆ ಇಳಿಯುವುದಿಲ್ಲ. ಪೂರ್ವಾಗ್ರಹದಿಂದ ದೂರವಾಗುವುದಿಲ್ಲ. ರಾಡಿ ಎರಚುವುದನ್ನು ಮರೆಯುವುದಿಲ್ಲ. ಅನಂತಮೂರ್ತಿಯವರು ಕಾಂಗ್ರೆಸ್ ಪರವಾದ ಹೇಳಿಕೆಯನ್ನು ಮೊದಲು ನೀಡಿ, ಮೋದಿ ಬಗೆಗಿನ ತಮ್ಮ ಆಕ್ರೋಶ ಭರಿತ ಮಾತುಗಳನ್ನು ಆಡಿದ್ದರೆ ಬಹಳ ಕಡಿಮೆ ಜನ ತಲೆ ಕೆಡಿಸಿಕೊಳ್ಳುತ್ತಿದ್ದರು- 'ಈ ಮನುಷ್ಯ ಕಾಂಗ್ರೆಸ್ನ ವಕ್ತಾರ, ಅನುಯಾಯಿ. ಸಹಜವಾಗಿಯೇ ಮೋದಿಯನ್ನು ಟೀಕಿಸುತ್ತಾರೆ' ಎಂದು ಸುಮ್ಮನಾಗಿ ಬಿಡುತ್ತಿದ್ದರೇನೋ. ಆದರೆ ಹಾಗೆ ಮಾಡದೆ ತಪ್ಪು ದಾರಿ ಹಿಡಿದರೆಂದು ನಾನು ಭಾವಿಸುತ್ತೇನೆ. ದಿನವೂ ಒಂದಲ್ಲ ಒಂದು ಟೀಕೆಯನ್ನು ಮೋದಿಯನ್ನು ವಿರೋಧಿಸುವವರು (ಸಾಮಾನ್ಯವಾಗಿ ಇತರೆ ಪಕ್ಷದ ವಕ್ತಾರರು) ಮಾಡುತ್ತಲೇ ಇರುತ್ತಾರೆ. ಮೋದಿ ಅಭಿಮಾನಿಗಳು ಎಲ್ಲ ಟೀಕೆಗಳಿಗೂ ಉತ್ತರಿಸುವುದಿಲ್ಲ. ಕಾರಣ ಅದರ ಅಗತ್ಯವಿಲ್ಲ. ಸಮಾಜದಲ್ಲಿ ಗಣ್ಯವ್ಯಕ್ತಿಯೊಬ್ಬ ಪೂರ್ವಗ್ರಹಪೀಡಿತನಾಗಿ ಮಾತನಾಡಿದಾಗ, 'ಇಂತಹ ತಿಕ್ಕಲು ಹೇಳಿಕೆ ಬೇಕಿತ್ತೆ' ಎಂದು ಗೊಣಗುತ್ತಾರೆ. ವಾರದ ಹಿಂದಿನಿಂದ Facebook, Twitte ಜಾಲತಾಣದಲ್ಲಿ ಅನಂತಮೂರ್ತಿಯವರಿಗೆ ಎಷ್ಟೆಲ್ಲಾ ಮರ್ಯಾದೆ(?) ಸಿಕ್ಕಿದೆ ಎಂಬುದನ್ನು ಅವರು ಕಂಡಿರಲಿಕ್ಕೆ ಇಲ್ಲ. ಕೆಲವು ಟ್ವಿಟ್ಟರ್ ಸಂದೇಶಗಳನ್ನು 'ಕನ್ನಡ ಪ್ರಭ'ವೂ ಪ್ರಕಟಿಸಿತ್ತು.
ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಅಥವಾ ಬದುಕಿರುವುದಿಲ್ಲ ಎಂಬರ್ಥದಲ್ಲಿ ಹೇಳಿದ ಅನಂತಮೂರ್ತಿಯವರು, ಆ ಮಾತುಗಳಿಗೆ ಪತ್ರಿಕೆಗಳಲ್ಲಿ ಬಂದ ಪ್ರತಿಕ್ರಿಯೆಗಳನ್ನು ಗಮನಿಸಿದರೋ ಏನೋ ವಿವಿಧ ಪತ್ರಿಕೆಗಳಿಗೆ, ಸುದ್ಧಿ ವಾಹಿನಿಗಳಿಗೆ ಸಂದರ್ಶನ ನೀಡಿದರು. ಒಂದರಲ್ಲಿ 'ನನಗೆ ವಯಸ್ಸಾಗಿದೆ. ಏನು ಹೇಳಿದೆನೋ ನೆನಪಿಲ್ಲ. ಆದರೆ ನನಗೆ ವಯಕ್ತಿಕವಾಗಿ ಮೋದಿ ಇಷ್ಟವಾಗುವುದಿಲ್ಲವೆಂದು' ಹೇಳಿದರು. ಅವರ ಅಭಿಮಾನಿ ವರ್ಗವೂ ಇವರ ಹೊಸ ಹೇಳಿಕೆಯನ್ನು ಸಮರ್ಥಿಸುತ್ತಾ ಬಂತು. ಹಳೆಯ ಹೇಳಿಕೆಗೆ ಬೆಲೆಯಿಲ್ಲ ಎಂದು ಕೂಗತೊಡಗಿದರು. ಒಂದು ವೇಳೆ ಇವರ ಹೇಳಿಕೆಗೆ ಯಾರೂ ಪ್ರತಿಕ್ರಿಯಿಸದಿದ್ದರೆ ಮತ್ತಷ್ಟು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದರು ಎಂಬುದು ಸಾಮಾನ್ಯರಿಗೂ ತಿಳಿದಿರುವ ಸಂಗತಿ.
ಸ್ವಾತಂತ್ರ್ಯಾನಂತರ ದೀರ್ಘಾವಧಿಗೆ ಆಳ್ವಿಕೆ ಮಾಡಿರುವ ಕಾಂಗ್ರೆಸ್ ನಮ್ಮನ್ನು ಬಡತನದಲ್ಲೇ ಇಟ್ಟು, ಬಡವರಿಗೆ ಯೋಜನೆಗಳನ್ನು ರೂಪಿಸುತ್ತಿರುವುದು ಅನಂತಮೂರ್ತಿಯವರಿಗೆ ಹಾಗೂಅವರ ವರ್ಗಕ್ಕೆ ಒಂದು ತರಹದ ಖುಷಿ ಸಂತೃಪ್ತಿ ನೀಡುತ್ತಿದೆ ಎಂದು ತಿಳಿದುಕೊಳ್ಳಬಹುದಾಗಿದೆ. ಕಾಂಗ್ರೆಸ್ ಬಗ್ಗೆ ಹೇಳುವುದಾದರೆ ಹಿಂದೆ ಮಾಡಿದ್ದನ್ನು ಮರೆಯಬೇಕು. ಮುಂದೆ ಒಳ್ಳೆಯದನ್ನು ಮಾಡುತ್ತಾರೆ ಎಂದು ನಂಬಿಕೊಳ್ಳಬೇಕು. ಆದರೆ ಮೋದಿ ಹಿಂದೆ ಮಾಡಿರುವ ಸಾಧನೆಯನ್ನು ಮರೆಯಬೇಕು. ಅವರು ಭಾರತದ ಭರವಸೆಯ ನಾಯಕ ಅನ್ನುವುದನ್ನು ಮರೆತು, 2002 ರ ಕೋಮು ಗಲಭೆಯ ಬಗ್ಗೆಯೇ ಜನರಿಗೆ ತಿದಿಯೂದಬೇಕು ಎಂಬುದು ಪ್ರಗತಿಯ, ಜಾತ್ಯತೀತತೆಯ, ಸುಭಿಕ್ಷ ಭಾರತದ ವಾದ. ಹಲವಾರು ಬುದ್ಧಿಜೀವಿಗಳು, ಕವಿಗಳು ಇದನ್ನೇ ಹೇಳುತ್ತಿದ್ದಾರೆ, ಪ್ರತಿಪಾದಿಸುತ್ತಿದ್ದಾರೆ. ಯಾವುದೇ ಸಭೆಯಲ್ಲೂ ರಾಜಕೀಯ ಮಾತನಾಡಬಹುದೆಂದು ನಿರೂಪಿಸುತ್ತಾರೆ. ಅದೇ line of thought ನಲ್ಲೇ ಅನಂತಮೂರ್ತಿಯವರೂ ಇದ್ದಾರೆ.
ಇನ್ನು ಅವರ ನಿನ್ನೆಯ ಹೇಳಿಕೆಗಳಲ್ಲಿ ದ್ವಂದ್ವಗಳು. ಕಾಂಗ್ರೆಸ್ನ ಹಗರಣಗಳನ್ನು ಸಮರ್ಥಿಸುವುದಿಲ್ಲ ಎಂಬ ಉದಾರ ಮನೋಭಾವ. ಭಾನುವಾರದ ಟಿ.ವಿ ಸಂದರ್ಶನದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ (!) ಪ್ರಧಾನಿಯಾಗಲು ಲಾಯಕ್ಕು ಎಂಬ ಉತ್ತರ. ನಿನ್ನೆಯ ಪತ್ರಿಕಾ ಗೋಷ್ಠಿಯಲ್ಲಿ ರಾಹುಲ್ ಗಾಂಧಿ ಸಮರ್ಥನಲ್ಲ ಎಂಬ ದ್ವಂದ್ವ. ಮೊನ್ನೆಯ ಸಂದರ್ಶನದಲ್ಲಿ ಎಲ್.ಕೆ ಆಡ್ವಾಣಿಯವರು ಪ್ರಧಾನಿಯಾಗಬಹುದು, ಅವರಿಗೆ ರಾಮ ಮಂದಿರದ ಕನಸಾದರೂ ಇತ್ತು ಎಂಬ ಧೋರಣೆ. (ಆಡ್ವಾಣಿಯವರು ಪ್ರಧಾನಿಯಾಗುವುದಿಲ್ಲವೆಂಬುದನ್ನು ಅರಿತು ಈ ಮಾತು) ಆದರೆ ಮೋದಿಯವರಿಗೆ ರಾಮ ಮಂದಿರದ ಚಿಂತೆಯೂ ಇಲ್ಲ ಎಂದು ಹೇಳುತ್ತೀರಿ. ಒಂದು ವೇಳೆ ರಾಮ ಮಂದಿರ ನಿರ್ಮಾಣದ ಬಗ್ಗೆ ಮೋದಿ ಮಾತನಾಡಿದ್ದರೆ 2002 ರ ಗೋಧ್ರಾ ಹತ್ಯಾಕಾಂಡ ದ ಜೊತೆಗೆ ರಾಮ ಮಂದಿರವನ್ನು ಕಟ್ಟಿಸಲು 'ಮೋದಿ ಹವಣಿಸುತ್ತಿದ್ದಾನೆ' ಎನ್ನುತ್ತಿದ್ದಿರಿ ಅಲ್ಲವೇ? ಬಿ.ಜೆ.ಪಿ ಗೆ ಇತಿಹಾಸವೇ ಇಲ್ಲ ಎಂದು ಗೋಷ್ಠಿಯಲ್ಲಿ ಮಾತು. ವಾಜಪೇಯಿಯವರು ಅತ್ಯುತ್ತಮ ಪ್ರಧಾನಿ ಎಂಬುದು ಸಂದರ್ಶನದಲ್ಲಿನ ಮಾತು. ನಿಮಗೆ ಬೇಕಿರುವುದು ಅಭಿವೃದ್ಧಿಯಲ್ಲ. ಸರ್ವೋದಯ ಅಂತೀರ. ಅಭಿವೃದ್ಧಿ ಹತಾಶೆಯನ್ನು ಮೂಡಿಸಿ ಮನುಷ್ಯತ್ವವನ್ನು ಕೊಲ್ಲುತ್ತೆ ಅನ್ನುತ್ತೀರ. ಬೆಂಗಳೂರು ಹಾಳಾಗಿರುವುದು ಐ.ಟಿ.ಯಿಂದ ಅನ್ನುತ್ತೀರ. ಈ ಐ.ಟಿ. ತಕ್ಕ ಮಟ್ಟಿಗೆ ಬೆಳೆದದ್ದು ಎಸ್. ಎಮ್. ಕೃಷ್ಣ ರವರು ಮುಖ್ಯಮಂತ್ರಿಯಾಗಿದ್ದಾಗ ಅಂತ ಮರೆಯುತ್ತೀರ. ನೆಹರು ಸಹ ಒಳ್ಳೆಯ ಪ್ರಧಾನಿ ಎನ್ನುತೀರ. ಉದ್ಯಮ, ಕಾರ್ಖಾನೆಗಳ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತೀರ. ನಮ್ಮ ದೇಶದ ಮೊದಲ ಪ್ರಧಾನಿಯಾದ ನೆಹರೂರವರು ಕೈಗಾರಿಕಾ ಉದ್ಯಮದ ಬಗ್ಗೆ ಮಾತನಾಡುತ್ತಿದ್ದನ್ನು ಜಾಣ್ಮೆಯಿಂದ ಉಪೇಕ್ಷಿಸುತ್ತೀರ.
ಅನಂತಮೂರ್ತಿಯವರೇ ಮಾತು ಮನೆ ಕೆಡಿಸಿತು. ತೂತು ಒಲೆ ಕೆಡಿಸಿತು. ಆದರೆ ನಿಮ್ಮ ಮಾತು ನಿಮ್ಮ ವ್ಯಕ್ತಿತ್ವವನ್ನು ಕೆಡಿಸುತ್ತಿದೆ. ಒಂದು ನಿಲುವಿಗೆ ಬದ್ಧರಾಗಿರಿ. ಜಗ್ಗಬೇಡಿ. 'ನನಗೆ ವಯಸ್ಸಾಗಿದೆ. ನಾನು ಕೊಡುವ ಹೇಳಿಕೆ ದಿನದಿಂದ ದಿನಕ್ಕೆ ಬದಲಾಗಬಹುದು. ನಿರೀಕ್ಷಿಸುತ್ತಿರಿ' ಎಂಬರ್ಥದ ಹೇಳಿಕೆ ಹೇಗಾಗಬಹುದು ಎಂದರೆ, ಮುಂದೆ ಪತ್ರಿಕೆಗಳಲ್ಲಿ ನಿಮ್ಮ ಹೇಳಿಕೆ ಪ್ರಕಟಿಸಿ, ಕೆಳಗೆ, 'ಅನಂತಮೂರ್ತಿಯವರಿಗೆ ವಯಸ್ಸಾಗಿದೆ' ಎಂದು ಇಲ್ಲಿ ಸ್ಮರಿಸಬಹುದು- ಎಂಬ ಅಡಿಬರಹದ disclaime ಬರಬಹುದು. ಆ ಮಟ್ಟಕ್ಕೆ ನಿಮ್ಮ ನಿಲುವುಗಳು, ಮಾತುಗಳು ನಿರಾಧಾರವಾಗದಿರಲಿ. ನಿಮ್ಮ ಸಿದ್ಧಾಂತ ನಿಮಗೆ ಸರ್ವ ಶ್ರೇಷ್ಠ. ಮತ್ತೊಬ್ಬರಿಗೆ ಅವರ ಸಿದ್ಧಾಂತ. ಆದರೆ ನೀವು ವಾರದಿಂದೀಚೆಗೆ ಕೊಡುತ್ತಿರುವ ಹೇಳಿಕೆಗಳು ಅಪಸಿದ್ಧಾಂತವಷ್ಟೇ. ನೀವು ನಿಮ್ಮ ವಿರುದ್ಧದ ಸಿದ್ಧಾಂತದವರನ್ನು ಹುಚ್ಚು ನಾಯಿ ಅಂತೆಲ್ಲಾ ಅಂದಾಗ, ಅವರು ನಿಮ್ಮ ವಿಚಾರಧಾರೆಯನ್ನು ತೆಗಳಬಾರದು ಅಂತ ಹಠ ಹಿಡಿಯಬೇಡಿ.
ಅಂಕಣ ಬರಹಗಾರರು ಸಾಮಾನ್ಯವಾಗಿ ತಮ್ಮ ಲೇಖನಗಳನ್ನು ಕ್ರೋಡೀಕರಿಸಿ ಪುಸ್ತಕವನ್ನು ಹೊರತರುತ್ತಾರೆ. ಅದೇ ತರಹ ಇತ್ತೀಚೆಗಿನ ದಿನಗಳಲ್ಲಿ ಬುದ್ಧಿಜೀವಿಗಳ ಬಗ್ಗೆ ಬಂದಿರುವ ಲೇಖನಗಳನ್ನು ಒಂದು ಪುಸ್ತಕ ಮಾಡಿದರೆ ಅದು ಒಂದೊಳ್ಳೆಯ reference material ಆಗುತ್ತೆ ಎಂದು ನನಗಂತೂ ಅನಿಸುತ್ತೆ. ಆದರೆ ಹಾಗಾಗದಿರಲಿ. ಎಲ್ಲರಿಗೂ ದೇಶದ ಪ್ರಗತಿಯ ಚಿಂತೆ, ಚಿಂತನೆಯಾಗಲಿ. ಹುಸಿ ವಾಕ್ಸಮರಗಳು ಯಾರನ್ನೂ ಶ್ರೇಷ್ಠರನ್ನಾಗಿಸುವುದಿಲ್ಲ.
- ಪ್ರವೀಣ್ ಪಟವರ್ಧನ್, ಹವ್ಯಾಸಿ ಲೇಖಕ
praveen.patavardhan@gmail.com