ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ದುರುಳರಿಗೆ ಬುದ್ಧಿ ಕಲಿಸುವ ಶಕ್ತಿ ನಮಗಿಲ್ಲವೇ?

ಏಷ್ಯಾದ ಪ್ರಬಲ ಶಕ್ತಿಯಾಗಿ ಭಾರತ ಬೆಳೆಯುವುದು ಚೀನಾಕ್ಕೆ ಬೇಕಿಲ್ಲ. ಭಾರತ..

Srinivasa Murthy VN
Updated On : 28 Sept 2013, 10:53 am

ಏಷ್ಯಾದಲ್ಲಿ ಪ್ರಬಲ ಶಕ್ತಿಯಾಗಿ ಭಾರತ ಬೆಳೆಯುವುದು ಚೀನಾಕ್ಕೆ ಬೇಕಿಲ್ಲ. ಭಾರತವನ್ನು ದುರ್ಬಲಗೊಳಿಸಲು ಅದು ನಿರಂತರವಾಗಿ ಪ್ರಯತ್ನಿಸುತ್ತಲೇ ಇದೆ
ಅಧಿಕಾರವನ್ನು ಉಳಿಸಿಕೊಳ್ಳುವ ಚಿಂತೆ ಒಬ್ಬರಿಗೆ, ಅಧಿಕಾರವನ್ನು ಗಳಿಸುವ ಚಿಂತೆ ಇನ್ನಿತರರಿಗೆ. ಭಾರತವನ್ನು, ನಮ್ಮ ಸೈನಿಕರ ಪ್ರಾಣವನ್ನು ಉಳಿಸುವ ಚಿಂತೆ ಯಾರಿಗಿದೆ? ನಮ್ಮ ಸೈನಿಕರ ಸಲುವಾಗಿ ನಾಗರೀಕರು ಎಷ್ಟೇ ಮಮ್ಮುಲ ಮರಗಿದರೂ, ಕೂಗಿಕೊಂಡರೂ ಯಾರಿಗೆ ಕೇಳಿಸುತ್ತದೆ? ಸ್ನೇಹದ ಹಸ್ತ ಚಾಚಿ ಪಾಕಿಸ್ತಾನದ ಜೊತೆ ಮಾತುಕತೆಗೆ ಸಿದ್ಧವಾಗುತ್ತಿರುವಾಗಲೇ ಪಾಕ್ ಬಂದೂಕಿನಲ್ಲಿ ಉತ್ತರ ಕೊಡುತ್ತಿದೆ. ದುಷ್ಟ ಭಯೋತ್ಪಾದಕರು ನಮ್ಮ ಸೈನಿಕರ ವೇಷದಲ್ಲಿ ರಾಜಾ-ರೋಷವಾಗಿ ಕಾಶ್ಮೀರದಲ್ಲಿ ತಿರುಗಾಡುತ್ತಾರೆ, ಸೇನಾ ಅಧಿಕಾರಿಗಳು, ಸೈನಿಕರು ಸೇರಿದಂತೆ ಪ್ರತಿ ವರ್ಷ ಸಾವಿರಾರು ಜನರು ಪಾಕ್‌ನ ಅಘೋಷಿತ ಸಮರಕ್ಕೆ ಬಲಿಯಾಗುತ್ತಿದ್ದಾರೆ. ಸಿಯಾಚಿನ್‌ನಂತಹ ಹಿಮಾಚ್ಛಾದಿತ ಪ್ರದೇಶಗಳಲ್ಲಿ ಪ್ರಾಣದ ಹಂಗು ತೊರೆದು ಮೈ ಮರಗಟ್ಟಿಸುವ ಚಳಿಯಲ್ಲಿ ನಮ್ಮ ಸೈನಿಕರು ದೇಶದ ಗಡಿಯನ್ನು ವರ್ಷವಿಡೀ ಕಾಯುತ್ತಿದ್ದಾರೆ. ನಡೆದಾಡುವುದೇ ಕಷ್ಟ ಅನ್ನುವಂತಹ ಹಿಮಾಲಯದ ಬೆಟ್ಟ ಪ್ರದೇಶಗಳಲ್ಲಿ ಬಂದೂಕುಗಳನ್ನು ಹೊತ್ತುಕೊಂಡು ಹೋಗಿ, ಆಹಾರದ ಪೊಟ್ಟಣವನ್ನು ಬೆನ್ನಿಗೆ ಕಟ್ಟಿಕೊಂಡು ಯುದ್ಧಭೂಮಿಯಲ್ಲಿರುವ ಸ್ಥಿತಿಯಲ್ಲಿದ್ದರೂ ನಮ್ಮ ಸೈನಿಕರು ಎದೆಗುಂದಿಲ್ಲ. ಮೂರು ತಿಂಗಳ ಹಿಂದೆ ನಾನು ಸಿಯಾಚಿನ್ ಗಡಿ ಪ್ರದೇಶಕ್ಕೆ ಹೋದಾಗ ಆ ಸೈನಿಕರನ್ನು ಭೇಟಿಯಾಗುವ, ಮಾತನಾಡುವ ಅವಕಾಶ ಸಿಕ್ಕಿತು. ಅವರಿಗೆ ನೋವಿರುವುದು ಅಲ್ಲಿಯ ಪರಿಸ್ಥಿತಿಗಲ್ಲ, ದೆಹಲಿಯಲ್ಲಿರುವ ಪರಿಸ್ಥಿತಿಗೆ. ಪಾಕ್ ಜೊತೆ ಮಾತುಕತೆ ಅಂದಾಗ ಅವರ ಕಣ್ಣಂಚಲ್ಲಿ ನೀರೂರುತ್ತದೆ. ನಮ್ಮಂತಹ ಸಾವಿರಾರು ಸೈನಿಕರನ್ನು ಪಾಕ್ ಸೈನಿಕರು ಕೊಂದು ಹಾಕಿದ್ದಾರೆ. ನಾಳೆ ನಮ್ಮ ಸ್ಥಿತಿಯೂ ಅದೇ. ಪಾಕ್ ಜೊತೆ ಯುದ್ಧ ಮಾಡಲು ನಾವು ಸಿದ್ಧ. ಆದರೆ ನಮ್ಮ ಮನಸ್ಥೈರ್ಯವನ್ನು ದೆಹಲಿಯವರು ಕುಗ್ಗಿಸುತ್ತಿದ್ದಾರೆ ಎಂದು ಬಿಕ್ಕಳಿಸುತ್ತಾರೆ.
ಪಾಕಿಸ್ತಾನದ ಜೊತೆ ಮಾತೆತ್ತಿದಾಗ ಬಂದೂಕಿನಲ್ಲಿ ಉತ್ತರ ಸಿಗುತ್ತದೆ. ಚೀನಾದ ಜೊತೆ ಮಾತುಕತೆಗೆ ನಮ್ಮ ರಕ್ಷಣಾ ಸಚಿವರು ಹೋದರೆ ಗಡಿಪ್ರದೇಶ ಆಕ್ರಮಣದ ಉತ್ತರ. ಹೀಗೆ ಭಾರತ ಎಷ್ಟು ದಿನ ಅವಮಾನವನ್ನು ಸಹಿಸಿಕೊಳ್ಳಬೇಕು? ನಮ್ಮ ಬದ್ಧವೈರಿ ಪಾಕಿಸ್ತಾನದ ಜೊತೆ ಚೀನಾ ಕೈ ಜೋಡಿಸಿದೆ. ನಮ್ಮ ದೌರ್ಬಲ್ಯವನ್ನು ಪಾಕಿಸ್ತಾನ, ಚೀನಾ ದುರುಪಯೋಗಪಡಿಸಿಕೊಳ್ಳುತ್ತಿವೆ. ಕಿತ್ತು ತಿನ್ನುತ್ತಿರುವ ಬಡತನ, ಸುತ್ತಲೂ ಭಯೋತ್ಪಾದಕರೇ ತುಂಬಿರುವ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಹೆಸರಿಗೆ ಮಾತ್ರ. ಅಲ್ಲಿ ನಿಜವಾದ ಆಡಳಿತವಿರುವುದೇ ಸೇನೆ ಮತ್ತು ಐಎಸ್‌ಐ ಕೈಯಲ್ಲಿ. ಇಂಥ ದೇಶದ ಜೊತೆ ಮಾತುಕತೆ ಯಾವ ಪುರುಷಾರ್ಥಕ್ಕೆ?
ರುಪಾಯಿ ಅಪಮೌಲ್ಯ, ಭಯೋತ್ಪಾದನೆ, ನಕ್ಸಲಿಸಂ, ಅಭಿವೃದ್ಧಿಯ ಕೊರತೆಯನ್ನು ಎದುರಿಸುತ್ತಿರುವ ಭಾರತಕ್ಕೆ ಬಾಹ್ಯವಾಗಿ ಆಘಾತ ತರಬಲ್ಲ ಒಂದೇ ಒಂದು ಶಕ್ತಿಯೆಂದರೆ ಅದು ಚೀನಾ. ಚೀನಾ ಕೇವಲ ಭಾರತಕ್ಕೆ ಮಾತ್ರವಲ್ಲ ಪ್ರಪಂಚಕ್ಕೆ ಸವಾಲೊಡ್ಡುವ ದೇಶವಾಗಿ ಬೆಳೆದು ನಿಂತಿದೆ. ಪಾಕ್ ಆಕ್ರಮಿತ ಕಾಶ್ಮೀರ ಇಂದು ಚೀನಾ ಆಕ್ರಮಿತ ಕಾಶ್ಮೀರವಾಗಿದೆ. ಈ ಭಾಗದಲ್ಲಿ ಹೆದ್ದಾರಿಗಳ ನಿರ್ಮಾಣ, ಶಸ್ತ್ರಾಸ್ತ್ರಗಳ ಸಾಗಾಣಿಕೆ, ಪಾಕ್ ಭಯೋತ್ಪಾದಕರಿಗೆ ಕುಮ್ಮಕ್ಕು, ತನ್ನ ಸೇನಾ ನೆಲೆಗಳ ಸ್ಥಾಪನೆಯನ್ನು ಯಾವುದೇ ಅಡೆ-ತಡೆಯಿಲ್ಲದೆ ಪಾಕಿಸ್ತಾನದ ಜೊತೆ ಸೇರಿಯೇ ಚೀನಾ ಮಾಡುತ್ತಿದೆ. ಹಿಮಾಚಲ ಪ್ರದೇಶದ ಗಡಿ ಪ್ರದೇಶದಲ್ಲಿ ಹಲವಾರು ಕಿಲೋಮೀಟರ್‌ನಷ್ಟು ಒಳಗೆ ಚೀನಾ ನುಗ್ಗಿದೆ. ಸಿಕ್ಕಿಂನಲ್ಲಿ ತನ್ನ ಸೇನಾ ನೆಲೆಯನ್ನು ಗುಪ್ತವಾಗಿ ಮಾಡಿಕೊಂಡಿದೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಆದರೆ ಇಲ್ಲಿಗೆ ನಮ್ಮ ಪ್ರಧಾನಿ ಮನಮೋಹನಸಿಂಗ್ ಭೇಟಿ ನೀಡಲು ಮುಂದಾದರೆ ಚೀನಾ ಎಚ್ಚರಿಕೆ ನೀಡುತ್ತದೆ!
ಇತ್ತೀಚೆಗೆ ನಾನು ಭಾರತ ಚೀನಾ ಗಡಿ ಪ್ರದೇಶಗಳಿಗೆ, ಮುಖ್ಯವಾಗಿ ಲದಾಖ್‌ನ ಪೆಂಗಾಂಗ್ ಲೇಕ್‌ಗೆ ಭೇಟಿ ನೀಡಿದಾಗ ನಮ್ಮ ಸೈನಿಕರ ಮನದಾಳದ ನೋವನ್ನು ತೋಡಿಕೊಂಡರು. "ಚೀನಿ ಸೈನಿಕರು ದಿನ ನಿತ್ಯ ನಮ್ಮ ಭೂಪ್ರದೇಶದೊಳಗೆ ನುಗ್ಗಲು ಯತ್ನಿಸುತ್ತಾರೆ, ಹಾಕಿದ ಸಿಸಿ ಕ್ಯಾಮೆರಾಗಳನ್ನು ಕಿತ್ತು ಹಾಕಿದ್ದಾರೆ, ಗಡಿ ಪ್ರದೇಶದ ಭೂಮಿಯೊಳಗಿನ ಹಲವಾರು ಭಾಗಗಳಲ್ಲಿ ತನ್ನ ಭಾಷೆಯಲ್ಲಿ ಎಚ್ಚರಿಕೆಯನ್ನು ಬರೆದು ಕೆಂಪು ಧ್ವಜ ನೆಟ್ಟು ಹೋಗಿದ್ದಾರೆ, ಇಷ್ಟಾದರೂ ದೆಹಲಿಯಲ್ಲಿ ಗದ್ದುಗೆಯಲ್ಲಿದ್ದವರಿಗೆ ಏನೂ ಅನಿಸಿಲ್ಲ." ಎನ್ನುತ್ತಾರೆ.
ದೇಶದ ರಕ್ಷಣೆಯ ಬಗ್ಗೆ ಲೋಕಸಭೆಯಲ್ಲಿ ಕನಿಷ್ಠ ಒಂದು ದಿನ ಪೂರ್ಣವಾಗಿ ಚರ್ಚೆ ಮಾಡಿಲ್ಲ. ಚರ್ಚೆ ಮಾಡಲು ಆಡಳಿತ ಪಕ್ಷಕ್ಕೆ ಮನಸ್ಸಿಲ್ಲ. ವಿರೋಧ ಪಕ್ಷಗಳಿಗೆ ಗಂಭೀರತೆಯ ಅರಿವಿಲ್ಲ. ಕಳೆದ 10 ವರ್ಷಗಳ ದೆಹಲಿ ಸರ್ಕಾರದಲ್ಲಿ ಲೋಕಸಭೆಯ ಹೆಚ್ಚಿನ ಅವಧಿ ಗಲಾಟೆ, ಗೊಂದಲ, ಧರಣಿಯಲ್ಲೇ ಕಾಲಹರಣ ಆಯಿತು. ದೇಶದ ಗಡಿಗಳ ರಕ್ಷಣೆ, ಚೀನಾದ ದರ್ಪ ಪ್ರದರ್ಶನ, ಇದಕ್ಕೆ ನಾವು ತೆಗೆದುಕೊಳ್ಳಬೇಕಾದ ನಿರ್ಧಾರ, ಕೊಡಬೇಕಾದ ಉತ್ತರಗಳ ಬಗ್ಗೆ ಇಡೀ ಸಂಸತ್ತಿಗೆ ಒಟ್ಟಾಗಿ ನಿರ್ಣಯ ಮಾಡಲಾಗಿಲ್ಲ. ಕಳೆದ ಲೋಕಸಭೆಯಲ್ಲಿ ಮುಲಾಯಂಸಿಂಗ್ ಒಬ್ಬರು ಚೀನಾ ಆಕ್ರಮಣದ ಬಗ್ಗೆ ಪ್ರಶ್ನೆ ಮಾಡಿದ್ದು ಬಿಟ್ಟರೆ, ಉಳಿದವರ ಸ್ಪಂದನೆ ಶೂನ್ಯಕ್ಕೆ ಸಮಾನ.
ನಮ್ಮ ಆತಂಕ ಕೇವಲ ಇಲ್ಲಿಗೆ ಮುಗಿಯುತ್ತಿಲ್ಲ. ನಮ್ಮ ಪಾರಂಪರಿಕ ವೈರಿ ಪಾಕಿಸ್ತಾನದ ಸ್ನೇಹಗಳಿಸಲು ಯಶಸ್ವಿಯಾದ ಚೀನಾ ಈಗ ನಮ್ಮ ಜೊತೆ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಮಾನಸಿಕವಾಗಿ ಸದಾ ಜೊತೆಯಲ್ಲಿದ್ದ ಭೂತಾನ್, ನೇಪಾಳ, ಬರ್ಮಾ, ಬಾಂಗ್ಲಾ, ಮಯನ್ಮಾರ್, ಶ್ರೀಲಂಕಾಗಳ ಸ್ನೇಹ ಗಳಿಸಲು ಯೋಜನೆ ರೂಪಿಸಿದೆ. ಬಹಳಷ್ಟು ಕಡೆ ಯಶಸ್ವಿಯೂ ಆಗಿದೆ. ಅದಕ್ಕಾಗಿಯೇ ಮಯನ್ಮಾರ್‌ನಂತಹ ಪುಟ್ಟ ರಾಷ್ಟ್ರವೊಂದು ಭಾರತದ ಗಡಿರೇಖೆಯ ಒಳಗೆ ಬಂದಿದ್ದು ಮತ್ತು ತನ್ನ ಸೈನಿಕರ ನೆಲೆ ಸ್ಥಾಪಿಸಲು ಯಶಸ್ವಿಯಾಗಿದ್ದು.
ಹಿಂದಿನ ಎಲ್ಲಾ ಪ್ರಧಾನಿಗಳು ಈ ಚಿಕ್ಕ ರಾಷ್ಟ್ರಗಳ ಸಂಕಷ್ಟಕ್ಕೆ ನೆರವಿನ ಹಸ್ತ ಚಾಚಿದ್ದರು. ಭಾರತ ನಮ್ಮ ಜೊತೆಗಿದೆ ಎಂಬ ಧೈರ್ಯ ಕೊಡುವವರು ಆ ದೇಶಗಳಿಗೂ ಬೇಕಿತ್ತು. ಕಳೆದೊಂದು ದಶಕದಲ್ಲಿ ನಮ್ಮ ದೇಶದ ನಾಯಕತ್ವವು ನೆರೆ ರಾಷ್ಟ್ರಗಳ ವಿಶ್ವಾಸ ಗಳಿಸುವಲ್ಲಿ, ಧೈರ್ಯ ತುಂಬುವಲ್ಲಿ ವಿಫಲವಾಯಿತು. ಆ ಕಾರಣಕ್ಕೆ ಅವರು ಚೀನಾದ ಕಡೆಗೆ ನೋಡಿದರು. ಇದೇ ಅವಕಾಶಕ್ಕೆ ಕಾಯುತ್ತಿದ್ದ ಚೀನಾ ತಕ್ಷಣ ಅವರ ನೆರವಿಗೆ ಧಾವಿಸಿದೆ. ಮಾತ್ರವಲ್ಲ, ಇವತ್ತು ಆ ದೇಶದಲ್ಲಿ ನಡೆಯುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳ ಎಲ್ಲ ಟೆಂಡರ್‌ಗಳು ಚೀನಾ ಕಂಪನಿಗಳ ಪಾಲಾಗಿವೆ. ಈ ಬೆಳವಣಿಗೆ ಭಾರತಕ್ಕೆ ಆತಂಕಕಾರಿಯಾಗಿದೆ.
ಏಷ್ಯಾದಲ್ಲಿ ಪ್ರಬಲ ಶಕ್ತಿಯಾಗಿ ಭಾರತ ಬೆಳೆಯುವುದು ಚೀನಾಕ್ಕೆ ಬೇಕಿಲ್ಲ. ಭಾರತವನ್ನು ದುರ್ಬಲಗೊಳಿಸಲು ಅದು ಪ್ರಯತ್ನಿಸುತ್ತಿದೆ. ಇನ್ನೂ ಗಂಭೀರ ವಿಚಾರವೆಂದರೆ ಭಯೋತ್ಪಾದಕರಿಗೆ ಮತ್ತು ನಕ್ಸಲರಿಗೆ ಚೀನಾ ಕುಮ್ಮಕ್ಕು ಕೊಡುತ್ತಿರುವುದು. ಇತ್ತೀಚೆಗೆ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ನಕ್ಸಲರು ದಾಳಿ ಮಾಡಿದರು. ನವೆಂಬರ್‌ನಲ್ಲಿ ಚುನಾವಣೆಗೆ ಹೋಗುತ್ತಿರುವ ರಾಜ್ಯದ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಅಭ್ಯರ್ಥಿಯೂ ಆ ದಾಳಿಯಲ್ಲಿ ದಾರುಣವಾಗಿ ಸತ್ತರು. ತನಿಖೆಯ ನಂತರ ಈ ನಕ್ಸಲರಿಗೆ ಚೀನಾ ಹಣಕಾಸಿನ ನೆರವನ್ನು ಒದಗಿಸಿದೆ ಎಂಬ ಸತ್ಯ ಹೊರಬಿದ್ದಿದೆ!
ಇವತ್ತು ನಮ್ಮ ದೇಶದ ಮಾರುಕಟ್ಟೆಯ ಬಹು ಭಾಗವನ್ನು ಚೀನಾದ ವಸ್ತುಗಳು ಆಕ್ರಮಿಸಿವೆ. ದುರಂತವೆಂದರೆ ನಮ್ಮ ದೇಶದ ಕಚ್ಚಾ ವಸ್ತುಗಳನ್ನೇ ಒಯ್ದು, ನಮಗೇ ಹೆಚ್ಚಿನ ಬೆಲೆಯಲ್ಲಿ ಅವರು ಮಾರುತ್ತಿದ್ದಾರೆ. ಹತ್ತಿ ಬೆಳೆಯುವ ನಮ್ಮ ದೇಶಕ್ಕೆ ಹತ್ತಿಯ ಬಟ್ಟೆಗಳು ಚೀನಾದಿಂದ ಬರುತ್ತಿವೆ. ರಬ್ಬರ್ ಬೆಳೆಯುವ ನಮ್ಮ ದೇಶದಲ್ಲಿ ರಬ್ಬರ್ ರಫ್ತಾಗುತ್ತಿದೆ. ತಯಾರಿಕಾ ವಸ್ತುಗಳು ನಮ್ಮ ದೇಶದ ಮಾರುಕಟ್ಟೆ ಸೇರುತ್ತಿವೆ. ಎಲೆಕ್ಟ್ರಾನಿಕ್ ವಸ್ತುಗಳು, ಮಕ್ಕಳ ಆಟಿಕೆಗಳು ಮತ್ತು ಔಷಧ ಮಾರುಕಟ್ಟೆಯಲ್ಲಿ ಚೀನಾ ಮುಂಚೂಣಿಯಲ್ಲಿದೆ. ಇವತ್ತು ಕೇವಲ ಭಾರತ ಅಲ್ಲ ಚೀನಾದ ಬಗ್ಗೆ ಅಮೆರಿಕದಂತಹ ದೇಶಗಳೂ ತಲೆಕೆಡಿಸಿಕೊಳ್ಳಬೇಕು. ಸ್ವದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಬಲ್ಲ ಶಕ್ತಿ ಇವತ್ತು ಚೀನಾದಿಂದ ಆಮದಾಗುತ್ತಿರುವ ವಸ್ತುಗಳಿವೆ.
      ದುರ್ದೈವವೆಂದರೆ ನಮ್ಮ ದೇಶದ ಖನಿಜ ಸಂಪತ್ತು ಅದರಲ್ಲೂ ಕಬ್ಬಿಣದ ಅದಿರು ಮ್ಯಾಂಗನೀಸನ್ನು ಚೀನಾ ಆಮದು ಮಾಡಿಕೊಂಡು ರಾಶಿ ಹಾಕುತ್ತಿದೆ. ತನ್ನ ದೇಶದಲ್ಲಿ ಖನಿಜ ಸಂಪತ್ತಿದ್ದರೂ ಅದನ್ನು ಗಣಿಗಾರಿಕೆ ಮಾಡದೇ ಕಾಯ್ದಿರಿಸಿಕೊಂಡು ಭಾರತದ ಗಣಿಯನ್ನು ಖಾಲಿ ಮಾಡುತ್ತಿದೆ. ಬಹಳ ಆತಂಕದ ವಿಚಾರವೆಂದರೆ ಭಾರತದ ಪ್ರಮುಖ ಕ್ಷೇತ್ರಗಳಾದ ವಿದ್ಯುಚ್ಛಕ್ತಿ ಉತ್ಪಾದನೆ ಮತ್ತು ಕಮ್ಯುನಿಕೇಷನ್ ವ್ಯವಸ್ಥೆ ಮೇಲೆ ಚೀನಾ ಹಿಡಿತ ಸಾಧಿಸುತ್ತಿದೆ. ಚೀನಾ ಜೊತೆಗಿನ ಮುಕ್ತ ವ್ಯಾಪಾರದ ಹೆಸರಲ್ಲಿ ವಿದ್ಯುಚ್ಛಕ್ತಿ ಉತ್ಪಾದನೆಗಳಿಗೆ ಮತ್ತು ಕಮ್ಯುನಿಕೇಷನ್ ಜಾಲಕ್ಕೆ ದೇಶಕ್ಕೆ ಬೇಕಾದ ಎಲ್ಲಾ ಮಷಿನರಿಗಳನ್ನು ಚೀನಾದಿಂದ ತರಿಸಿಕೊಳ್ಳುತ್ತಿದ್ದೇವೆ. ಇದರಲ್ಲಿ ಎರಡು ಬಗೆಯ ತೊಂದರೆಗಳಿವೆ. ಒಂದನೆಯದು ಸೀಮನ್ಸ್, ಬಿಎಚ್‌ಇಎಲ್ ಯಂತ್ರೋಪಕರಣಕ್ಕೆ ಹೋಲಿಸಿದರೆ ಚೀನಾ ಮಷೀನ್ಸ್ ಅತ್ಯಂತ ಕಳಪೆ ಗುಣಮಟ್ಟದ್ದು ಎಂಬುದು. ಎರಡನೆಯದು, ನಮ್ಮ ಇಡೀ ವಿದ್ಯುತ್ ಜಾಲ ಮತ್ತು ಕಮ್ಯೂನಿಕೇಷನ್ ಜಾಲ ಚೀನಾದ ಕೈಯಲ್ಲಿರುತ್ತದೆ. ಯಾವುದೋ ತುರ್ತು ಸಂದರ್ಭದಲ್ಲಿ ಈ ಇಡೀ ವ್ಯವಸ್ಥೆಯನ್ನು ಚೀನಾ ಕೆಡಿಸಿದರೆ ದೇಶದ ಪರಿಸ್ಥಿತಿ ಏನಾಗಬಹುದು? ವೈಯಕ್ತಿಕ ಲಾಭ, ಕಮಿಷನ್ ಆಸೆಗಾಗಿ ನಮ್ಮ ರಾಜಕಾರಣಿಗಳು ನಮ್ಮ ಅಧಿಕಾರಿಗಳು ದೇಶಕ್ಕೆ ಗಂಡಾಂತರ ತರುವ ಕೆಲಸ ಮಾಡುತ್ತಿದ್ದಾರೆ.
ಚೀನಾದ ಯಂತ್ರೋಪಕರಣಗಳ ಜೊತೆಗೆ ಅಲ್ಲಿಯ ಇಂಜಿನೀಯರ್‌ಗಳು ಬರುತ್ತಾರೆ. ಅವರುಗಳ ಜೊತೆ ಗೂಢಾಚಾರರನ್ನು, ಸೇನಾ ಪ್ರಮುಖರನ್ನು ನಮ್ಮ ದೇಶದ ಆಯಕಟ್ಟಿನ ಕೈಗಾರಿಕೆಗಳಿಗೆ ಕಳುಹಿಸುವುದಿಲ್ಲ ಅನ್ನುವುದಕ್ಕೆ ಗ್ಯಾರಂಟಿ ಏನು? ನಾನು ಇಂಧನ ಮಂತ್ರಿಯಾಗಿ ದೇಶದ ಹಲವಾರು ವಿದ್ಯುತ್ ಯೋಜನೆಗಳಿಗೆ ಭೇಟಿ ಕೊಟ್ಟಾಗ, ಆ ಬಗ್ಗೆ ಅಭ್ಯಾಸ ಮಾಡಿದಾಗ ಅಲ್ಲಿರುವ ಯಂತ್ರೋಪಕರಣ ಮತ್ತು ಚೀನಾ ಇಂಜಿನೀಯರ್‌ಗಳನ್ನು ನೋಡಿ ನನಗೆ ಆತಂಕವಾಗಿತ್ತು. ಇದರ ಗಂಭೀರತೆ ದೆಹಲಿ ನಾಯಕರಿಗೆ, ದೇಶದ ಚಿಂತಕರಿಗೆ ಅರ್ಥವಾಗಬೇಕಿದೆ.
ನಮ್ಮ ದೇಶವನ್ನು ಚೀನಾ ಎಷ್ಟು ವಿರೋಧ ಮಾಡುತ್ತಿದೆ ಎಂದು ಶ್ರೀ ರವಿಶಂಕರ್ ಗುರೂಜಿ ಮೊನ್ನೆ ವಿವರಿಸುತ್ತಿದ್ದರು. ಚೀನಾದಲ್ಲಿ ನಡೆದ ವಿಶ್ವಪ್ರತಿನಿಧಿಗಳ ಒಂದು ಸಮ್ಮೇಳನಕ್ಕೆ ಭಾರತದಿಂದ ಗುರೂಜಿಯವರನ್ನು ಆಹ್ವಾನಿಸಿದ್ದರಂತೆ. ಆಮಂತ್ರಣ ಪತ್ರಿಕೆಯಲ್ಲಿ ಬೇರೆ ಎಲ್ಲ ದೇಶದ ಗಣ್ಯರ ಹೆಸರಿನ ಕೆಳಗೆ ಆಯಾ ದೇಶದ ಹೆಸರನ್ನು ಹಾಕಿದ್ದರು. ಆದರೆ, ಗುರೂಜಿಯವರ ಹೆಸರಿನ ಕೆಳಗೆ ನಮ್ಮ ದೇಶದ ಹೆಸರೇ ಬರೆದಿರಲಿಲ್ಲ!
ಚೀನಾ ಅತ್ಯಂತ ಧೂರ್ತ ದೇಶ. ಅವರ ಸೈನಿಕರು ಪ್ರಪಂಚದಲ್ಲೇ ಅತ್ಯಂತ ಕ್ರೂರಿಗಳು. ಬಗಲಲ್ಲಿ ಇಂತಹ ಬಲಿಷ್ಠ ದುಷ್ಟರನ್ನು ಇಟ್ಟುಕೊಂಡು ದೆಹಲಿ ಸರ್ಕಾರಕ್ಕೆ ನೆಮ್ಮದಿಯಿಂದಿರಲು ಹೇಗೆ ಸಾಧ್ಯ? ಮಾತ್ರವಲ್ಲ ಮುಕ್ತ ಮಾರುಕಟ್ಟೆಯ ಹೆಸರಲ್ಲಿ ಚೀನಾದ ಎಲ್ಲಾ ವಸ್ತುಗಳಿಗೆ ಭಾರತದ ಬಾಗಿಲು ತೆರೆಯುವುದು ಎಷ್ಟು ಸರಿ? ಭಾರತದ ಬಾಹ್ಯ ಮತ್ತು ಆಂತರಿಕ ಭದ್ರತೆ ಬಗ್ಗೆ, ಆರ್ಥಿಕ ಸವಾಲಿನ ಬಗ್ಗೆ ಗಂಭೀರ ಚಿಂತನೆಯ ಅಗತ್ಯವಿದೆ. ಮಾತ್ರವಲ್ಲ ಪ್ರಪಂಚದ ಮುಂದೆ ಚೀನಾದಿಂದ ಎದುರಾಗುವ ಸವಾಲುಗಳನ್ನು ಮನವರಿಕೆ ಮಾಡಬೇಕಾಗಿದೆ. ಪಾಕಿಸ್ತಾನ, ಚೀನಾಕ್ಕೆ ಬುದ್ಧಿ ಕಲಿಸುವ ಶಕ್ತಿ ದೆಹಲಿ ಗದ್ದುಗೆಗೆ ಬರಬೇಕಾಗಿದೆ. ಸ್ವಾಭಿಮಾನ ಬಿಟ್ಟು ಬದುಕುವುದಕ್ಕೆ ತಿಲಾಂಜಲಿ ಹಾಡಲೇಬೇಕಿದೆ.

- ಶೋಭಾ ಕರಂದ್ಲಾಜೆ, ಮಾಜಿ ಸಚಿವೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement