ಮೋದಿ ಟೀಮ್ನ ಮುಂದಿನ ಸುಷ್ಮಾ ಆಗಲಿದ್ದಾರೆಯೇ ಸ್ಮೃತಿ?
ಅಮೇಠಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ...
ಅಮೇಠಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಉಮೇದುವಾರಿಕೆಹಲವು ಆಸಕ್ತಿ- ಕುತೂಹಲ ಮತ್ತು ವಿಶ್ಲೇಷಣೆಗಳಿಗೆ ದಾರಿ ಮಾಡಿಕೊಟ್ಟಿದೆ. 'ಸ್ಮೃತಿ ಇರಾನಿಯಲ್ಲಿ ಇನ್ನೊಬ್ಬ ಸುಷ್ಮಾ ಸ್ವರಾಜ್ ತಲೆ ಎತ್ತುತ್ತಿರುವವರೇ' ಹಾಗೆಂದು 'ಇಕನಾಮಿಕ್ ಟೈಮ್ಸ್' ಜಾಲತಾಣದ ಶೀರ್ಷಿಕೆ ಕೇಳುತ್ತಿದೆ.
ವಾಸ್ತವದಲ್ಲಿ, ಸ್ಮೃತಿ ಇರಾನಿಯವರು ಟೀಂ ಮೋದಿಯ ಸುಷ್ಮಾ ಸ್ವರಾಜ್ ಆಗಲಿದ್ದಾರಾ ಎಂಬ ಪ್ರಶ್ನೆಯಲ್ಲಿ ಹಲವು ಕೌತುಗಳಿವೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ನರೇಂದ್ರ ಮೋದಿ 'ತಮ್ಮದೇ ತಂಡ'ವೊಂದನ್ನು ರೂಪಿಸುತ್ತಿರುವುದು ನಿಚ್ಚಳವಾಗುತ್ತಿದೆಯಷ್ಟೆ. ಪಕ್ಷದ ಹಳೆಯ ಮುಖಗಳಾದ ಸುಷ್ಮಾ ಸ್ವರಾಜ್, ಉಮಾ ಭಾರತಿ ಸೇರಿದಂತೆ ಆಡ್ವಾಣಿ ಕ್ಯಾಂಪ್ನ ಬಹುತೇಕರಿಗೆ ನರೇಂದ್ರ ಮೋದಿ ಅವರ ಬಿರುಸಿನ ನಡೆಗಳು ಸರಿ ಬಾರದೇ ಇರುವುದು ರಹಸ್ಯವಾಗಿಯೇನೂ ಉಳಿದಿಲ್ಲ. ಹೀಗಿರುವಾಗ, ನರೇಂದ್ರ ಮೋದಿ ಪಾಳೆಯಕ್ಕೆ ತಮ್ಮ ಪರ ನಿಖರ ಧ್ವನಿ ದಾಖಲಿಸುವುದಕ್ಕೆ ಮಹಿಳಾ ನೇತಾರರ ಅವಶ್ಯ ಇದ್ದೇ ಇತ್ತು. ಸ್ಮೃತಿ ಇರಾನಿ ಬಿಜೆಪಿಯ ವಕ್ತಾರೆಯಾಗಿ ಯುಪಿಎ ನೀತಿಗಳ ವಿರುದ್ಧ ಸ್ಪಷ್ಟವಾಗಿ ಮಾತನಾಡಿ ಅದಾಗಲೇ ಗಮನ ಸೆಳೆದವರು. ರಾಜಕೀಯ ತಿಳಿವಳಿಕೆ ಮತ್ತು ಅದನ್ನು ವ್ಯಕ್ತಗೊಳಿಸಬೇಕಾದಾಗ ಬಳಸುವ ಭಾಷೆ ಇವೆರಡರಲ್ಲೂ ಚಾತುರ್ಯ ಮೆರೆದು ಆಗಲೇ ಗುರುತಿಸಿಕೊಂಡವರು.ಈ ಅರ್ಹತೆಗಳು ಅವರನ್ನು ಅಮೇಠಿಯಂಥ 'ಪ್ರತಿಷ್ಠಿತ' ಕಣದಲ್ಲಿ ನಿಲ್ಲಿಸಿವೆ. ರಾಹುಲ್ ಗಾಂಧಿಯವರನ್ನು ಸ್ಮೃತಿ ಇರಾನಿ ಮಣಿಸಲಿದ್ದಾರಾ ಎಂಬುದು ಇಲ್ಲಿನ ಪ್ರಶ್ನೆಯಲ್ಲ. ಅದಕ್ಕೆ ಮೀರಿದ 'ಪೊಸಿಷನಿಂಗ್' ಇಲ್ಲಿ ಪ್ರಮುಖವಾಗಿದೆ. ಈ ಹಿಂದೆ ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಸುಷ್ಮಾ ಸ್ವರಾಜ್ ಸ್ಪರ್ಧಿಸಿದಾಗ ಸೃಷ್ಟಿಸಿದ ಹವಾವನ್ನು ನೆನಪಿಸಿಕೊಳ್ಳಬಹುದು. ಇಂಥ ಪ್ರಾಶಸ್ತ್ಯ ಸ್ಮೃತಿ ಇರಾನಿ ಅವರಿಗೆ ಸಿಗುತ್ತಿರುವ ಹೊತ್ತಿನಲ್ಲಿ ಹುಬ್ಬೇರಿಸುವಂತೆ ಮಾಡುವ ಹಳೆಕತೆಯೊಂದಿದೆ.
2004. ಕಿರುತೆರೆ ಮೂಲಕ ಗುರುತಿಸಿಕೊಂಡಿದ್ದ ಸ್ಮೃತಿ ಇರಾನಿ ಬಿಜೆಪಿ ಸೇರಿ ಹೆಚ್ಚು ಕಾಲವೇನೂ ಆಗಿರಲಿಲ್ಲ. ಸೂರತ್ನಲ್ಲಿ ನಡೆದ ಸಮಾರಂಭವೊಂದರಲ್ಲಿ ನರೇಂದ್ರ ಮೋದಿಯವರನ್ನು ಟೀಕಿಸಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದರು. ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಮೋದಿಯವರು ನೈತಿಕ ಮೇಲ್ಸ್ತರವನ್ನು ಮೆರೆದು ಮುಖ್ಯಮಂತ್ರಿ ಗಾದಿಯಿಂದ ಕೆಳಕ್ಕಿಳಿಯುವುದು ಒಳ್ಳೆಯದು. ವಾಜಪೇಯಿಯವರು ಪಕ್ಷಕ್ಕೆ ದೊರಕಿಸಿಕೊಟ್ಟಿರುವ ಜಾತ್ಯತೀತ ವರ್ಚಸ್ಸನ್ನು ಕಾಪಾಡಿಕೊಳ್ಳುವುದಕ್ಕೆ ಇದು ನೆರವಾಗುತ್ತದೆ ಎಂದಿದ್ದರು. ಆದರೆ ಮೋದಿಯುಗದಲ್ಲಿ ಇರಾನಿಯವರಿಗೆ ಸಿಗುತ್ತಿರುವ ಪ್ರಾಮುಖ್ಯ, ಖುದ್ದು ಮೋದಿ ಆಘಟನೆಯನ್ನು ಗೌಣವಾಗಿಸಿ ಕಠಿಣ ಪರಿಶ್ರಮಕ್ಕೆ ಮಣೆ ಹಾಕಿದ್ದಾರೆ ಎಂಬ ಸುಳಿವನ್ನು ಬಿಟ್ಟುಕೊಟ್ಟಿದೆ.
ಕೇವಲ ಥಳುಕಿನ ಮಾದರಿಗೆ ಜೋತುಬೀಳದೇ ಸ್ಮೃತಿ ಇರಾನಿ ಬಿಜೆಪಿಯಲ್ಲಿ ತಮ್ಮ ಛಾಪು ಮೂಡಿಸಿರುವ ರೀತಿಯೂ ಗಮನಾರ್ಹವಾದದ್ದೇ. ಗುಜರಾತ್ನಿಂದ ರಾಜ್ಯಸಭೆ ಸಂಸದೆಯಾಗಿರುವ ಇರಾನಿ, ಸಂಸತ್ತಿನಲ್ಲಿ ತಮ್ಮ ಪ್ರಖರ ವಿಚಾರಮಂಡನೆಯ ಮೂಲಕ, ಅದರಲ್ಲೂ ಮಹಿಳೆಯರ ಸುರಕ್ಷತೆ ಇತ್ಯಾದಿ ವಿಷಯಗಳಲ್ಲಿ ಖಡಕ್ ಧ್ವನಿ ಮೊಳಗಿಸುತ್ತ ಎಲ್ಲರ ಗಮನ ಸೆಳೆದವರು. ಕಾಂಗ್ರೆಸ್ನ ಸಂಜಯ್ ನಿರುಪಮ್ ಅವರು ಇವರನ್ನು ಐಟಮ್ ಗರ್ಲ್ ಎಂದು ಸಂಬೋಧಿಸಿದಾಗ ಬೆಂಕಿಯುಂಡೆಯಾಗಿ ಅವರನ್ನು ನ್ಯಾಯಾಲಯಕ್ಕೆ ಎಳೆದರು.
ಗೋವಾ ವಿಧಾನಸಭೆಯಲ್ಲಿ ಬಿಜೆಪಿಯ ಮನೋಹರ ಪಾರಿಕ್ಕರ್ ತಂಡ ವಿಜಯದ ಧ್ವನಿ ಮೊಳಗಿಸಿದಾಗ ಅಲ್ಲಿ ಉಸ್ತುವಾರಿ ಹೊತ್ತಿದ್ದವರು ಇರಾನಿಯವರೇ ಎಂಬುದೊಂದು ಗರಿ.
'ಕ್ಯೊಂಕೀ ಸಾಸ್ ಭಿ ಕಭೀ ಬಹೂ ಥೀ' ಧಾರಾವಾಹಿ ಮೂಲಕ ಭಾರಿ ಹೆಸರು ಮಾಡಿದ ಇರಾನಿ, ಅದಕ್ಕೂ ಮೊದಲು ಮಿಸ್ ಇಂಡಿಯಾ ಸ್ಪರ್ಧೆಯ ಫೈನಲ್ ತಲುಪಿದ್ದವರು. ಆದರೆ ಪ್ರಾರಂಭದಲ್ಲಿಯೇ ತಾರಾಲೋಕ ಅವರನ್ನು ಅಪ್ಪಿಕೊಳ್ಳಲಿಲ್ಲ. ಈ ಎಲ್ಲ ಹೆಸರು- ಪ್ರಸಿದ್ಧಿಗಿಂತ ಮೆಕ್ಡೊನಾಲ್ಡ್ನಲ್ಲಿ ಸಹಾಯಕಿಯಾಗಿ ದುಡಿದಿದ್ದವರು.ಪ್ರಸ್ತುತ, ಬಿಜೆಪಿಗೆ ಚೆಂದವಾಗಿ ಹೊಂದಿಕೊಳ್ಳುವ ಇಮೇಜ್ ಸ್ಮೃತಿ ಇರಾನಿಯವರದ್ದು. ಕಾಳಜಿಯ ತಾಯಿ, ಒಳ್ಳೆಯ ಸೊಸೆ, ಸದ್ಗೃಹಿಣಿ ಹೀಗೆಲ್ಲ ಇರಾನಿಯವರ ಬ್ರಾಂಡ್ ಇಮೇಜ್ ಇದೆ. õ
ಅಮೇಠಿಯ ಫಲಿತಾಂಶ ಏನೇ ಬರಲಿ. ಆದರೆ ಈವರೆಗೆ ರಾಹುಲ್ ಗಾಂಧಿ ವರ್ಸಸ್ ಆಪ್ನ ಕುಮಾರ್ ವಿಶ್ವಾಸ್ ಎಂದಷ್ಟೇ ಚರ್ಚೆಯಾಗುತ್ತಿತ್ತು. ಇರಾನಿ ಆಗಮನದೊಂದಿಗೆ ಎಲ್ಲರ ಗಮನವೇ ಕಾಂಗ್ರೆಸ್ ವರ್ಸಸ್ ಬಿಜೆಪಿ ಆಗುವಂತಾಗಿದೆ. ಇದು ಸ್ಮೃತಿ ಇರಾನಿ ಸಾಧನೆ ಹಾಗೂ ಭವಿಷ್ಯದ ಸೂಚನೆ ಎಂದುಕೊಳ್ಳಬಹುದು.