ಅಂಕಣಗಳು

ದಾಖಲೆಗಳಿವೆ ಸ್ವಾಮಿ, ದಾಖಲೆಗಳಿವೆ...!

ಜಾತ್ಯತೀತ ಜನತಾದಳದ ನಾಯಕರು ಈಗ ಹೊಸದಾಗಿ ಒಂದು ಬ್ರಹ್ಮಾಸ್ತ್ರವನ್ನೇ ಕಂಡುಕೊಂಡಿದ್ದಾರೆ. ಆ ಅಸ್ತ್ರವನ್ನು ಇನ್ನೂ ಪ್ರಯೋಗಿಸಿಲ್ಲ. ಆದರೆ ಆಗಿಂದ್ದಾಗ್ಗೆ ಅದನ್ನು ಪ್ರದರ್ಶಿಸಿ ಎದುರಾಳಿಯನ್ನು ಬೆತ್ತಲೆ ಮಾಡುವ ಅಸ್ತ್ರದ ಪ್ರಯೋಗದ ಮಾತನ್ನು ಕೇಳಿಸುತ್ತಿದ್ದಾರೆ.
ಈ ಸರಣಿಯಲ್ಲಿ ಇತ್ತೀಚಿನ ಬೆದರಿಕೆ ಬಂದಿರುವುದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಂದ. ಹಿಂದೆ ಅವರಿಗೆ ಸರ್ಕಾರದಲ್ಲಿರುವ ಯಾವ ದಾಖಲೆಯನ್ನಾದರೂ ತರಿಸಿಕೊಂಡು ನೋಡುವ ಅಧಿಕಾರವಿತ್ತು. ಅದರ ಪ್ರತಿಗಳನ್ನು (ಬೇಕಾದ ದಾಖಲೆಗಳನ್ನು ಮಾತ್ರ) ಜೋಪಾನವಾಗಿಟ್ಟುಕೊಂಡಿರಬಹುದು.
ಅವರು ಹಿಂದೆ ಯಡಿಯೂರಪ್ಪ ಮಂತ್ರಿಮಂಡಲದ ಕಾಲದಲ್ಲೂ ಈ ಬೆದರಿಕೆ ಹಾಕಿದ್ದರು. ಆದರೆ ಕುಮಾರ ಸ್ವಾಮಿ, ಲೋಕಾಯುಕ್ತರು ಗಣಿಗಾರಿಕೆಗೆ ಸಂಬಂಧಿಸಿದಂತೆ ನಡೆಸಿದ ತನಿಖೆಯ ಕಾಲದಲ್ಲಿ ಒಂದು ದಾಖಲಾತಿಯನ್ನೂ ಕೊಡಲಿಲ್ಲ. ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ, ಅವರ ತನಿಖಾಧಿಕಾರಿ ಯು.ವಿ.ಸಿಂಗ್ ಬೇರೆ ಕಡೆಗಳಿಂದ ದಾಖಲೆಗಳನ್ನು ಸಂಪಾದಿಸಿದ್ದರು. ಆ ಮಾತು ಬೇರೆ. ಮೈಸೂರು ಮಿನರಲ್ಸ್ ಸಂಸ್ಥೆಗೆ ಸಂಬಂಧಿಸಿದ ಹಗರಣಗಳ ವಿಚಾರದಲ್ಲಿ ಕುಮಾರ ಸ್ವಾಮಿ ಅವರು ಆರೋಪಗಳನ್ನು ಸರ್ಕಾರದ ವಿರುದ್ಧ ಹೊರಿಸಿದ್ದು ಕಡಿಮೆ. ದಾಖಲೆಗಳ ಪ್ರಸ್ತಾಪವನ್ನೂ ಮಾಡಲಿಲ್ಲ.
ಈಗ ಕುಮಾರ ಸ್ವಾಮಿ ಅವರು ಸೂಕ್ತ ಕಾಲದಲ್ಲಿ "ದಾಖಲೆಗಳನ್ನು" ಪ್ರಕಟಿಸುವುದಾಗಿ ಬೆದರಿಸಿದ್ದಾರೆ. ಅದು ಪತ್ರಿಕೆಗಳ ಶೀರ್ಷಿಕೆಗೆ (ವರದಿಗಳಿಗಲ್ಲ) ಟಿ.ವಿ. ವಾಹಿನಿಗಳ ರೋಚಕ ಪ್ರಸಾರಕ್ಕೆ ನೆರವಾಗಬಹುದು. ಅಷ್ಟೇ. ಯಾವಗ ದಾಖಲೆಗಳನ್ನು ಪ್ರಕಟಿಸುತ್ತಾರೋ ಅದೂ ಗೊತ್ತಿಲ್ಲ.
"ಸೂಕ್ತ ಕಾಲದಲ್ಲಿ ಪ್ರದರ್ಶಿಸುತ್ತೀನಿ" ಎಂದರೇನರ್ಥ? ಇಡೀ ದೇಶದಲ್ಲಿ, ರಾಜ್ಯದಲ್ಲಿ ಮುಕ್ತವಾಗಿ ಚುನಾವಣೆ ನಡೆಯುತ್ತಿರುವ ಕಾಲ ಇದು. ಅಧಿಕಾರಸ್ಥರ (ಹಾಲಿ-ಮಾಜಿ) ವಿರುದ್ಧ ಆರೋಪ ಹೊರಿಸುವವರಿಗೆ, ಆರೋಪಗಳನ್ನು ಹೊರುವವರಿಗೆ ನೇರವಾಗಿ ಜನತಾ ನ್ಯಾಯಾಲಯದ ಮುಂದೆ ಪ್ರತ್ಯಕ್ಷವಾಗಿ ನಿಂತು ತಮ್ಮಲ್ಲಿರುವ ದಾಖಲೆಗಳನ್ನು ಪ್ರದರ್ಶಿಸಿದರೆ, ಜನತಾ ನ್ಯಾಯದ ತೀರ್ಪು ತತ್‌ಕ್ಷಣವೇ ಪ್ರಕಟವಾಗುವುದು ಈಗ ಮಾತ್ರ ಸಾಧ್ಯ. ಇದಕ್ಕಿಂತ ಹೆಚ್ಚು ಸೂಕ್ತವಾದ ಅವಕಾಶ ಕುಮಾರ ಸ್ವಾಮಿ ಅವರಿಗೆ ಸಿಗುವುದಿಲ್ಲ.
ಬೇರೆ ಕಡೆಗಳಲ್ಲಿ ಈಗಾಗಲೇ ಅನೇಕರು ದಾಖಲೆಗಳನ್ನು ಪ್ರದರ್ಶಿಸಿ, ಅದನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಅಲ್ಲಿ ಸವಾಲು ಸ್ವೀಕರಿಸಲು ಯಾರೂ ಇರಲಿಲ್ಲ. ಆದರೆ ಇಲ್ಲಿ ಆರೋಪಿಗಳಲ್ಲಿ ಕೆಲವರಾದರೂ ಸವಾಲು ಸ್ವೀಕರಿಸಲು ತಯಾರಾಗಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್ ಈಗಾಗಲೇ ಅವರ ವಿರುದ್ಧ ಆರೋಪ ಹೊಸಿದ್ದ ಹಿರೇಮಠ ಅವರಿಗೆ ಮುಖಾಮುಖಿಯಾಗಿದ್ದಾರೆ.
ಈಗಿನ ದಾಖಲೆ ಬೆದರಿಕೆ ಸಮರದ ಒಂದು ವಿಚಿತ್ರ ವಿಶೇಷವೇನೆಂದರೆ ಆರೋಪ ಹೊರಿಸುತ್ತಿರುವವರು, ಆರೋಪಿಗಳು ಎಲ್ಲರೂ ಒಂದಲ್ಲ ಒಂದು ಕಾಲದಲ್ಲಿ ಅಧಿಕಾರದ ಸ್ಥಾನಗಳಲ್ಲಿದ್ದವರೇ. ಎಲ್ಲರಿಗೂ ಎಲ್ಲ ದಾಖಲೆಗಳ ಪರಿಚಯವಿದೆ.  ಈಗ ಬನ್ನಿ ಮೈದಾನಕ್ಕೆ - ದಾಖಲೆಗಳನ್ನು ಪ್ರದರ್ಶಿಸಿ. ಅದನ್ನು ಮುಕ್ತವಾಗಿ ಹಂಚಿಬಿಡಿ. ಅದಕ್ಕೆ ಪ್ರಚಾರ ಕೊಡುವ ಕಾರ್ಯಕ್ರಮವನ್ನು ಪತ್ರಿಕೆಗಳು, ಟಿ.ವಿ ಮಾಧ್ಯಮ, ಇಂಟರ್‌ನೆಟ್, ಯೂಟ್ಯೂಬ್‌ಗಳು ಧಾರಳವಾಗಿ ಉಚಿತವಾಗಿ ನೆರವೇರಿಸುತ್ತವೆ.
 ಆಗ ಪ್ರಕಟಿತ ಆರೋಪಗಳಲ್ಲಿ ಮೊದಲ ನೋಟಕ್ಕೇ ಸತ್ಯವಿದೆ ಅಥವಾ ಇರಬಹುದು ಎನ್ನುವ ಅನುಮಾನ ಬಂದರೆ, ಮುಂದಿನ ಕೆಲಸಕ್ಕೆ ಪೊಲೀಸರಿದ್ದಾರೆ. ತನಿಖೆ ಮಾಡ್ತಾರೆ, ಈಗಲೂ ದೇಶದ ನಾನಾ ಭಾಗಗಳಲ್ಲಿ ತನಿಖಾ ದಳಗಳು ಹಲವಾರು ಪ್ರಕರಣಗಳ ತನಿಖೆ ನಡೆಸುತ್ತಿವೆ. ಹೊಸ ಪ್ರಕರಣಗಳಾದರೆ ಬಿಸಿಬಿಸಿ ಸುದ್ದಿ ಸಿಗಲೂ ಬಹುದು. ರಾಜ್ಯದಲ್ಲಿ ಈಗ ಭೂಸ್ವಾಧೀನ ಪ್ರಕರಣಗಳಲ್ಲಿ ನಡೆದ "ನೋಟಿಫೈ - ಡಿ ನೋಟಿಫೈ" ವ್ಯವಹಾರ ಕುರಿತ ಸವಾಲು - ಪ್ರತಿ ಸವಾಲು, ತನಿಖೆ, ಜಿದ್ದಾಜಿದ್ದಿನ ಕುಸ್ತಿ ನಡೆದಿದೆ. ಅದು ಚುನಾವಣೆಯ ಪ್ರಚಾರ ಸಮರದ ಕಣವನ್ನು ಪ್ರವೇಶಿದರೆ ಚುನಾವಣೆಗೂ ಮೆರುಗು ಬಂದರೂ ಬಂದೀತು. ಸಂಬಂಧಪಟ್ಟವರು ಯಾಕೆ ತಡಮಾಡುತ್ತಿದ್ದಾರೋ ಗೊತ್ತಿಲ್ಲ.
ದಾಖಲೆ ಪ್ರದರ್ಶನ ಇತಿಹಾಸ: ಕರ್ನಾಟಕದಲ್ಲಿ ದಾಖಲೆಗಳ ಪ್ರದರ್ಶನದ "ಖುಲ್ಲಮ್ ಖುಲ್ಲಾ" ಹೋರಾಟಕ್ಕೆ ಒಂದು ಇತಿಹಾಸವೇ ಇದೆ. 1965 ರ ಅಜೂಬಾಜು ಸಮಯ, ಸಿದ್ದವನಹಳ್ಳಿ ನಿಜಲಿಂಗಪ್ಪ ಅವರು ಮುಖ್ಯಮಂತ್ರಿ. ಆಗ ಸಚಿವ ಸಂಪುಟದ ಮುಂದೆ ಒಂದು ವಿಷಯದ ಪ್ರಸ್ತಾಪ ಬಂದಿತ್ತು.
ಈಗಿನ ಸದಾಶಿವನಗರದ ಪ್ರದೇಶದಲ್ಲಿ (ರಮಣ ಮಹರ್ಷಿ ಸಂಸ್ಥೆ ಜಾಗ) ವಿಶಾಲವಾದ ಆವರಣ, ಭದ್ರವಾದ ಕಟ್ಟಡ ಮಾರಾಟಕ್ಕಿತ್ತು. ಅದನ್ನು ಸರ್ಕಾರಕ್ಕೇ ನ್ಯಾಯವಾದ ಬೆಲೆಗೆ ಮಾರಲು ಆಸ್ತಿಯ ಮಾಲೀಕರು, ತಿರುವಾಂಕೂರು ರಾಜ ಮನೆತನದ ಕುಡಿಯಂತಿದ್ದವರು, ಒಪ್ಪಿದ್ದರು. ದಾಖಲೆಗಳನ್ನು ಪರಿಶೀಲಿಸಿದ ವಕೀಲರೂ ಎಲ್ಲ ಸರಿಯಾಗಿದೆ ಎಂದಿದ್ದರು. ಆಗ ಸೂಚಿಸಿದ್ದ ಮೊತ್ತ ಸುಮಾರು ಹದಿನೈದು ಲಕ್ಷರುಪಾಯಿ (ನೆನಪಿನಲ್ಲಿರುವಂತೆ). ಈ  ವಿಷಯ ಗೊತ್ತಾದ ಕೂಡಲೇ ಆಗಿನ ವಿರೋಧ ಪಕ್ಷದ ನಾಯಕ ಎಸ್.ಶಿವಪ್ಪ ಹಾಗೂ ಅವರ ಸಂಗಾತಿಗಳು "ಭ್ರಷ್ಟ ವ್ಯಾಪಾರ ಇದು. ಇಲ್ಲಿ ಲಂಚದ ವ್ಯವಹಾರವಿದೆ" ಎಂದು ವಿಧಾನಸಭೆ ಅಧಿವೇಶನದಲ್ಲೇ ಗುಡುಗಿದರು.
ಪರಿಣಾಮ: ತತ್‌ಕ್ಷಣದಲ್ಲೇ ಸಚಿವ ಸಂಪುಟದ ಸಭೆಯನ್ನೇ ಕರೆದು, ನಿಜಲಿಂಗಪ್ಪ ಅವರು ಸರ್ಕಾರ ಆ ಬಂಗಲೆಯನ್ನು ಕೊಳ್ಳುವುದಿಲ್ಲ ಎನ್ನುವ ನಿರ್ಣಯವನ್ನು ಅಂಗೀಕರಿಸಿದರು. ಈಗ ಆ ಭವ್ಯ ಕಟ್ಟಡ ಇದ್ದ ಜಾಗದ ಬೆಲೆ ನಿಜಕ್ಕೂ ಅಮೂಲ್ಯ.   ಹೆಚ್ಚು ಕಡಿಮೆ ಈ ಪ್ರಕರಣ ನಡೆದ ಕೆಲವೇ ವಾರಗಳ ಅನಂತರ ಶಿವಪ್ಪ ಮತ್ತು ಅವರ ಸಂಗಾತಿಗಳು ನಿಜಲಿಂಗಪ್ಪ ಮಂತ್ರಿ ಮಂಡಲದ ಮೇಲೆ, ಕೆಲವು ಸಚಿವರ ಮೇಲೆ ಆರೋಪಗಳನ್ನು ಹೊರಿಸಿ, ಅದಕ್ಕೆ ಬೆಂಬಲವಾಗಿ ದಾಖಖಲೆಗಳನ್ನು ಫೈಲುಗಳಲ್ಲಿಟ್ಟುಕೊಂಡು ದೆಹಲಿಯ ವಿಮಾನವನ್ನೇರಿದ್ದರು.
ಬೆಂಗಳೂರಿನಲ್ಲಿ ಕೆಲವು ಪತ್ರಕರ್ತರಿಗೆ ಆ ಫೈಲುಗಳನ್ನು ತೋರಿಸಲಾಗಿತ್ತು ಎನ್ನುವ ಗುಮಾನಿ ಇತ್ತು. ಅಂತಹ ಪ್ರಭಾವಿ ಪತ್ರಕರ್ತರನ್ನು ಈ ವಿಚಾರದಲ್ಲಿ ಪ್ರಶ್ನಿಸಿದಾಗ ಅವರು ನೀಡಿದ ಉತ್ತರ; ಅಯ್ಯೋ ಫೈಲು ತೋರಿಸಿದ್ದು, ನಿಜ. ಅದರಲ್ಲಿದ್ದ ಕಾಗದ ಪತ್ರಗಳನ್ನಲ್ಲ.
ಮುಂದೆ ತಿಳಿದು ಬಂದ ವಿಚಾರ: ದೆಹಲಿಯಲ್ಲಿ ಯಾರೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಪ್ರತಿಷ್ಠಿತ ಪತ್ರಿಕೆಗಳಿಗೂ ಇದೊಂದು ಸಣ್ಣ ಸುದ್ದಿ ಅಷ್ಟೇ.
ಆರೋಪಗಳಲ್ಲಿ ಒಂದು ಸ್ಯಾಂಪಲ್ ಗಮನಿಸಿ: ಉತ್ತರ ಕರ್ನಾಟಕದ ಒಂದು ವಾರಪತ್ರಿಕೆಗೆ ವಿಪರೀತವೆನ್ನುವ ಪ್ರಮಾಣದಲ್ಲಿ ಜಾಹೀರಾತು ನೀಡಿ ಪಕ್ಷಪಾತವನ್ನು ತೋರಿಸಲಾಗಿದೆ.  ಒಂದು ರಾಜ್ಯ ಸರ್ಕಾರವನ್ನು ವಜಾ ಮಾಡಲು ಇಷ್ಟೇ ಆರೋಪ ಸಾಕೇನು? ಇನ್ನೂ ಬೇಕಾದಷ್ಟು ಆರೋಪಗಳಿವೆ ಎಂದು ಬಾಯಲ್ಲಿ ಹೇಳಿದ್ದರಷ್ಟೇ. ಅನಂತರದ ದಿನಗಳಲ್ಲಿ ಆರೋಪಗಳನ್ನು ಹೊರಿಸಿದ್ದ ನಾಯಕರೇ  ನಿಜಲಿಂಗಪ್ಪ ಅವರ ಬಳಿಗೆ ಬಂದು ಚುನಾವಣಾ ಟಿಕೆಟ್ ಕೇಳಿದ್ದೂ ನಿಜ. ಅವರಲ್ಲಿ ಒಬ್ಬರು ಸ್ಪರ್ಧಿಸಿ, ಮುಂದೆ ಮಂತ್ರಿಯಾಗಿದ್ದೂ ನಿಜ.
ದೇವರಾಜ ಅರಸು ಕಾಲ: ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಪ್ರತಿಪಕ್ಷಗಳ ನಾಯಕರು, ಆಂತರಿಕವಾಗಿ ಪಕ್ಷದ ಒಳಗೇ ಇದ್ದ ಭಿನ್ನಮತೀಯರು ಪ್ರಕಟಿಸಿದ ಆರೋಪಗಳಿಗೆ ಲೆಕ್ಕವೇ ಇರಲಿಲ್ಲ. ಯಾವಾಗ ಕೇಳಿದರೂ ನಮ್ಮಲ್ಲಿ ದಾಖಲೆಗಳಿವೆ. ಸೂಕ್ತಕಾಲದಲ್ಲಿ ಬಾಂಬ್ ಸಿಡಿಸ್ತೀವಿ ಎನ್ನುತ್ತಿದ್ದರು.
ಮುಂದೆ ಎಂದೋ ಒಂದು ದಿನ ದೇವರಾಜ ಅರಸು ಕಾಂಗ್ರೆಸ್ಸಿನಿಂದ ಹೊರಬಂದಿದ್ದಾಗ, ಹಳೆಯ ಆರೋಪಗಳ ಪ್ರಸ್ತಾಪ ಮಾಡಿದಾಗ ಅವರು ಹೇಳಿದ್ದು: ಈಗ ಅವರೇ ಅಧಿಕಾರದಲ್ಲಿದ್ದಾರಲ್ಲ ತನಿಖೆ ನಡೆಸಲಿ ಎಂದಿದ್ದರು. ತನಿಖೆ ನಡೆಯಲಿಲ್ಲ.
ರೇವಣ್ಣ ಸೂಟ್ ಕೇಸ್: ಕೆಲವೇ ವರ್ಷಗಳ ಹಿಂದೆ, ಒಂದು ದಿನ ಜನತಾ ಪರಿವಾರದ ರೇವಣ್ಣ ಅವರು ವಿಧಾನಸಭೆ ಅಧಿವೇಶನ ನಡೆಯುತ್ತಿದ್ದಾಗಲೇ ಎಂಟು ಸೂಟ್ ಕೇಸ್‌ಗಳ ತುಂಬಾ ದಾಖಲೆಗಳನ್ನು (ಸೂಟ್ ಕೇಸ್‌ಗಳು ಮುಚ್ಚಿದ್ದವು) ಸಭೆಯ ಆವರಣದ ಒಳಗೇ ತಂದಿದ್ದರು. ಅದು ಸಲ್ಲದೆಂದು ಮನವರಿಕೆಯಾದಾಗ ಅದನ್ನೆಲ್ಲ ತೆಗೆದುಕೊಂಡು ಹೊರಗೆ ಹೋದರು.
ಆದಾದ ಮೇಲೆ ರೇವಣ್ಣ ಅವರೇ ಸಂಬಂಧಪಟ್ಟ ಇಲಾಖೆಯ ಮಂತ್ರಿಯೂ ಆಗಿದ್ದರು. ಆದರೂ ಆ ಸೂಟ್‌ಕೇಸ್‌ಗಳಲ್ಲಿದ್ದ ದಾಖಲೆಗಳ ಪ್ರಸ್ತಾಪ ಅನಂತರ ಆಗಲೇ ಇಲ್ಲ. ವೀರಪ್ಪ ಮೊಯಿಲಿ ಅವರು ಮುಖ್ಯ ಮಂತ್ರಿಯಾಗಿದ್ದಾಗ, ಆಗಿನ ಕೇಂದ್ರ ಸಚಿವ ಸಿ.ಕೆ. ಜಾಫರ್ ಷರೀಫ್ ಬೆಂಗಳೂರಿನ ಸುತ್ತಮುತ್ತ ಕೆಲವು ಕಡೆ ಭೂ ಸುಧಾರಣೆಯ ವಿಧಿನಿಯಮಗಳನ್ನು ಉಲ್ಲಂಘಿಸಿ, ತಮ್ಮ ಕುಟುಂಬಕ್ಕೆ ಸೇರಿದವರ ಹೆಸರಿನಲ್ಲಿ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆನ್ನುವ ದೂರು ಬಂದಿತ್ತು. ಆ ದೂರಿನ ವಿಚಾರಣೆಗೆ ಆಗಿನ ರೆವಿನ್ಯೂ ಸಚಿವ ರಾಜಶೇಖರ ಮೂರ್ತಿ ಅವರು ಆದೇಶ ನೀಡಿದ್ದರು. ವಿಚಾರಣೆ ನಡೆಸಿದ್ದು, ಡಿವಿಷನಲ್ ಕಮಿಷನರ್ ಅವರ ವರದಿಯೂ ಸರ್ಕಾರವನ್ನು ತಲುಪಿ, ಮಂತ್ರಿಮಂಡಲದ ಪರಿಶೀಲನೆಯ ಹಂತವನ್ನೂ ಮುಟ್ಟಿತ್ತು.   ಆ ದಿನಗಳಲ್ಲಿ ರಾಜಶೇಖರ ಮೂರ್ತಿ ಅವರೇ "ಪರೋಕ್ಷವಾಗಿ" ಎಲ್ಲ ದಾಖಲೆಗಳನ್ನೂ ಒಳಗೊಂಡ ಫೈಲುಗಳನ್ನು ತಯಾರಿಸಿದ್ದರು. ಅದರ ಪ್ರತಿಗಳು ಈಗಲೂ ಅನೇಕ ಪತ್ರಕರ್ತರ ಬಳಿ ಇರಬಹುದು. ಅದರ ಪರಿಣಾಮ ಏನಾಯಿತು ಗೊತ್ತೆ?
  ರಾಜಶೇಖರಮೂರ್ತಿ ಅವರ ರೆವಿನ್ಯೂ ಖಾತೆಯನ್ನು ಬದಲಾಯಿಸಲಾಯಿತು. ಮುಂದೆ ಚುನಾವಣೆ. ಚುನಾವಣೆಯ ಅನಂತರ ನ್ಯಾಯಾಲಯಗಳಲ್ಲಿ ಜಾಫರ್ ಷರೀಫ್ ಕುಟುಂಬದವರ ಮೇಲಿದ್ದ ಎಲ್ಲ ಆರೋಪಗಳೂ ಸಾಕ್ಷ್ಯ-ಆಧಾರವಿಲ್ಲದೇ ಖುಲಾಸೆಯಾದ ಸುದ್ದಿ ಪ್ರಕಟವಾಯಿತು. ನಿಜ. ಇದಕ್ಕೆಲ್ಲ ಈಗ ದಾಖಲೆಗಳು ಎಲ್ಲೂ ಇಲ್ಲ. ಆದ್ದರಿಂದ, ಈ ಪ್ರಕರಣಗಳಿಂದ ಕಲಿಯಬೇಕಾದ ಪಾಠ: ದಾಖಲೆಗಳು ಸಿಕ್ಕಿದ ಕೂಡಲೇ ಅದನ್ನು ಪ್ರಕಟಿಸಬೇಕು. ಸೂಕ್ತ ಕಾಲಕ್ಕೆ ಕಾಯಬಾರದು. ಆ ಸೂಕ್ತ ಕಾಲ ಒದಗಿ ಬರುವುದೇ ಇಲ್ಲ.
ಕಿಡಿಗೇಡಿತನ: ಈಗ ಕುಮಾರಸ್ವಾಮಿ ದಾಖಲೆಗಳನ್ನಿಟ್ಟುಕೊಂಡು ಕಣ್ಣೀರು ಸುರಿಸುತ್ತಿದ್ದಾರೆ. ಸಿ.ಕೆ. ಜಾಫರ್ ಷರೀಫ್ ಅವರು "ದೇವರ ಮನೆಗೆ" ಹೋಗಿ ಬಂದ ಅನಂತರ ಕಾಂಗ್ರೆಸ್ಸಿಗೆ ರಾಜೀನಾಮೆ ಕೊಟ್ಟಿದ್ದಾರೆ. ಚುನಾವಣೆಯಲ್ಲಿ ಜಾತ್ಯತೀತ ಜನತಾದಳದ ಅಭ್ಯರ್ಥಿಗಳಿಗೆ ಬೆಂಬಲವನ್ನು ನೀಡಲಿದ್ದಾರಂತೆ. ಆ ನಿರ್ಧಾರಕ್ಕೆ ಷರೀಫ್ ದೇವರಮನೆಗೆ ಹೋಗಬೇಕಾಗಿತ್ತಾ?

- ಸತ್ಯ
anisikeprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!