ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮುಂದಿನ ಪೀಳಿಗೆಗೆ ಬಿಟ್ಟುಹೋಗೋಣ ವಿಷಮುಕ್ತ ಭೂಮಿ

ಕಳೆದ ಲೇಖನಗಳಲ್ಲಿ ಶೂನ್ಯ ಬಂಡವಾಳದೊಂದಿಗೆ ಕೃಷಿ ಮಾಡು...

Mainashree
Updated On : 7 Apr 2014, 1:03 am

ಕಳೆದ ಲೇಖನಗಳಲ್ಲಿ ಶೂನ್ಯ ಬಂಡವಾಳದೊಂದಿಗೆ ಕೃಷಿ ಮಾಡುವುದರ ಬಗ್ಗೆ(ಸುಭಾಷ್ ಪಾಳೇಕರ್‌ರ ಪದ್ಧತಿಯಂತೆ) ನಿಮಗೆ ಹೇಳುತ್ತಿದ್ದೆ. ಈಗ ಜೀವಸಾರದ ಬಗ್ಗೆ ಮತ್ತು ಹೇಗೆ ಈ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ರೈತರು ಪ್ರಯೋಜನ ಪಡೆದರು ಎನ್ನುವುದನ್ನು ಈಗ ನೋಡೋಣ.
ಟಿ ಜೀವಸಾರದ ಉಪಯೋಗ, ಜೀವಸಾರ ಎಂದರೇನು?: ರೈತರ ಹೊಲದಲ್ಲಿ ಬೆಳೆದ ಗಿಡಗಳ ತಪ್ಪಲು, ಕಳೆ ಇವುಗಳನ್ನೆಲ್ಲಾ ಒಂದು ಸೂಕ್ತವಾದ ಘಟಕದಲ್ಲಿ ಎರಡು ತಿಂಗಳು ನೀರಿನಲ್ಲಿ ಕಲೆಸಿ ಕೂಡಿಟ್ಟು ಇದರಿಂದ ಬರುವ ಸಾರವೇ ಜೀವಸಾರ. ಜೀವಸಾರವನ್ನು ಸೂಕ್ತ ಪ್ರಮಾಣದಲ್ಲಿ ತೋಟಗಾರಿಕೆ ಬೆಳೆಗಳಿಗೆ ಹಾಕುವುದರಿಂದ ಬೆಳೆಗಳಿಗೆ ಬೇಕಾಗುವ ಪೋಷಕಾಂಶಗಳು ಸಿಗುತ್ತವೆ. ಇದಲ್ಲದೆ, ಸೂಕ್ತ ಪ್ರಮಾಣದಲ್ಲಿ ನೀರಿನೊಂದಿಗೆ ಬೆರೆಸಿ ಬೆಳೆಗಳಿಗೆ ಸಿಂಪಡಣೆ ಮಾಡುವುದರಿಂದ ಹಲವು ಕೀಟಗಳು ಹಾಗೂ ರೋಗಗಳು ನಾಶವಾಗುತ್ತವೆ. ಇದು ರೈತರಿಗೆ ನೈಸರ್ಗಿಕ ವರದಾನವಾಗಿದೆ. ಏಕೆಂದರೆ, ಇದರಿಂದ ಭೂಮಿಗೆ ರಾಸಾಯನಿಕ ಗೊಬ್ಬರ ಕೊಡುವುದನ್ನು ಹಾಗೂ ಕ್ರಿಮಿನಾಶಕಗಳನ್ನು ಉಪಯೋಗಿಸಿದಾಗ, ಭೂಮಿಯ ಮೇಲೆ, ವಾತಾವರಣದ ಮೇಲೆ ಮತ್ತು ಮಾನವನ ಶರೀರದ ಮೇಲಾಗುವ ದುಷ್ಪರಿಣಾಮಗಳನ್ನು ತಪ್ಪಿಸಬಹುದಾಗಿದೆ.
ಟಿ ಬೆಳೆಗಳ ಸಾಲುಗಳ ಮಧ್ಯದಲ್ಲಿ ಗುಂಡಿ, ಕಾಲುವೆ ತೆಗೆಯುವುದು: ಸಾಕಷ್ಟು ಅಂತರವಿರುವ ತೋಟಗಾರಿಕೆ ಬೆಳೆಗಳ ಸಾಲುಗಳ ಮಧ್ಯದಲ್ಲಿ ಗುಂಡಿಗಳು ಅಥವಾ ಕಾಲುವೆಗಳನ್ನು ತೋಡುವುದರಿಂದ ಮಳೆನೀರಿನ ಕೋಯ್ಲನ್ನು ತೋಟದಲ್ಲಿಯೇ ಮಾಡಿಕೊಳ್ಳಬಹುದಾಗಿದೆ. ಇದಲ್ಲದೆ ಈ ಗುಂಡಿ/ ಕಾಲುವೆಗಳಲ್ಲಿ, ತೋಟದಲ್ಲಿ ಲಭ್ಯವಿರುವ ಅಥವಾ ನೆಲಕ್ಕೆ ಬಿದ್ದ ಬೆಳೆಗಳ ತ್ಯಾಜ್ಯಗಳನ್ನು ಹಾಕುವುದರಿಂದ ಇವುಗಳು ಭೂಮಿಯ ಹೊದಿಕೆಯಾಗಿ ಕಾರ್ಯನಿರ್ವಹಿಸುವುದಲ್ಲದೆ ಇಂಗಿದ ನೀರನ್ನು ಆವಿಯಾಗದಂತೆ ತಡೆಯುತ್ತವೆ ಮತ್ತು ಕ್ರಮೇಣ ಕೊಳೆತು ಬೆಳೆಗಳಿಗೆ ಗೊಬ್ಬರವಾಗುತ್ತವೆ.
ಟಿ ಸಮಗ್ರ ಕೃಷಿ/ಬಹುಬೆಳೆ ಪದ್ಧತಿ ಅಳವಡಿಕೆ: ಈ ಪದ್ಧತಿಯಲ್ಲಿ ರೈತರು ಒಂದೇ ಕೃಷಿ ಪದ್ಧತಿಯನ್ನು ಅವಲಿಂಬಿಸದೇ ಸಮಗ್ರ ಕೃಷಿಯ ಭಾಗವಾದ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಕುರಿಸಾಕಣೆ, ಹುಲ್ಲುಗಾವಲು ಮತ್ತು ಕೃಷಿ ಅರಣ್ಯ ಪದ್ಧತಿಯನ್ನು ಅಳವಡಿಸಿಕೊಳ್ಳುವುದಾಗಿದೆ. ಇದರಿಂದ ಇವುಗಳು ಒಂದಕ್ಕೊಂದು ಪೂರಕವಾಗಿದ್ದು, ಖರ್ಚಿಲ್ಲದೆ ರೈತನು ವ್ಯವಸಾಯ ಮಾಡಿ ಹೆಚ್ಚಿನ ಲಾಭ ಗಳಿಸಬಹುದಾಗಿದೆ. ಯಾವುದೇ ಸಂದರ್ಭದಲ್ಲಾಗಲಿ ಅಂದರೆ, ನೈಸರ್ಗಿಕ ಅವಘಡ, ಬೆಲೆ ಕುಸಿತ ಇತ್ಯಾದಿಗಳಿಂದ ಒಂದು ಬೆಳೆ ಅಥವಾ ಒಂದು ಭಾಗಕ್ಕೆ ನಷ್ಟವಾದರೆ ಇನ್ನುಳಿದ ಕೃಷಿ ಮೂಲಗಳಿಂದ ಅವನು ತನ್ನ ಜೀವನವನ್ನು ಸರಾಗವಾಗಿ ನಡೆಸಬಹುದಾಗಿದೆ ಮತ್ತು ಸಮಗ್ರ ಕೃಷಿಯಿಂದ ರೈತನಿಗೆ ಮತ್ತು ರೈತನ ಕುಟುಂಬದವರಿಗೆ ಇಡೀ ವರ್ಷ ಹೊಲದಲ್ಲಿಯೇ ಕೆಲಸ ಸಿಕ್ಕಂತಾಗುತ್ತದೆ. ಇದೊಂದು ಸುಸ್ಥಿರ ಕೃಷಿಯ ಮಂತ್ರವಾಗಿದೆ.
ಟಿ ಜಲಾನಯನ ಪದ್ಧತಿ ಅಳವಡಿಕೆ: ಜಲಾನಯನ ಪದ್ಧತಿಯಲ್ಲಿ ರೈತನು ತನ್ನ ಹೊಲದ ಸ್ಥಿತಿಗತಿಗಳಿಗೆ ಅನುಕೂಲವಾಗಿ ಅನುಸರಿಸಬೇಕಾದ ಕ್ರಮಗಳು:
-ಇಳಿಜಾರಿಗೆ ಅಡ್ಡಲಾಗಿ ಬದುಗಳನ್ನು ನಿರ್ಮಿಸುವುದು. ಇದರಿಂದ ತನ್ನ ಹೊಲದಲ್ಲಿ ಬಿದ್ದ ನೀರು ಅಲ್ಲಿಯೇ ಇಂಗಿ ಮಣ್ಣಿನ ತೇವಾಂಶ ಹೆಚ್ಚಿನ ದಿನಗಳವರೆಗೆ ಇದ್ದು ಬೆಳೆಗಳಿಗೆ ಅನುಕೂಲವಾಗುತ್ತದೆ.
ಭೂಮಿಯ ಗುಣಧರ್ಮಕ್ಕನುಗುಣವಾಗಿ ಅಂದರೆ, ಗಟ್ಟಿಯಾದ ಬಂಜರು ಭೂಮಿಯಲ್ಲಿ ಅರಣ್ಯ ಗಿಡಗಳನ್ನು ಬೆಳೆಸುವುದು, ಸುಮಾರು ಭೂಮಿಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಸುವುದು, ಫಲವತ್ತಾದ ಭೂಮಿಯಲ್ಲಿ ಕೃಷಿ ಬೆಳೆಗಳನ್ನು ಬೆಳೆಸುವುದು, ಇದರೊಂದಿಗೆ ಸಮಗ್ರ ಕೃಷಿಯ ಅಂಗಗಳನ್ನು ಅಳವಡಿಸಿಕೊಳ್ಳುವುದು. ಸೂಕ್ತ ಸ್ಥಳದಲ್ಲಿ ಕೃಷಿ ಹೊಂಡವನ್ನು ನಿರ್ಮಿಸಿ ತಮ್ಮ ಭೂಮಿಯಲ್ಲಿನ ಹೆಚ್ಚಾದ ನೀರನ್ನು ಪೋಲಾಗದಂತೆ ಅದರಲ್ಲಿ ಇಂಗಿಸುವುದರಿಂದ ಅಂತರ್ಜಲಮಟ್ಟ ಹೆಚ್ಚಾಗುತ್ತದೆ. ಈ ಪದ್ಧತಿಯಿಂದ ಸಮಗ್ರವಾಗಿ ಭೂ ಸವಕಳಿಯನ್ನು ತಡೆಯಬಹುದಾಗಿದೆ.  ಮತ್ತು ಕೃಷಿ, ತೋಟಗಾರಿಕೆ ಬೆಳೆಗಳ ತ್ಯಾಜ್ಯ ಭೂಮಿಯಲ್ಲಿ ಬಿದ್ದು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಪಾಳೇಕರ್‌ರ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಸುಸ್ಥಿರ ಕೃಷಿ ಸಾಧ್ಯವಾಗುತ್ತದೆ. ಇದರಿಂದ ರೈತನು ತನ್ನ ಹೊಲ ರಾಸಾಯನಿಕ ಗೊಬ್ಬರಗಳಿಂದ ಕಲುಷಿತವಾಗದಂತೆ ಭೂಮಿಯ ನೈಸರ್ಗಿಕ ಸ್ಥಿತಿ ಕೆಡದಂತೆ ಅಂತರ್ಜಲ ಕಲುಷಿತವಾಗುವುದನ್ನು ತಪ್ಪಿಸಬಹುದಾಗಿದೆ. ಮತ್ತು ತನ್ನ ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿ, ಸ್ವಚ್ಛ ಅಂತರ್ಜಲ, ಪರಿಶುದ್ಧ ವಾತಾವರಣ ಬಿಟ್ಟು ಹೋಗಬಹುದಾಗಿದೆ.
ಬೆಂಗಳೂರು, ಹೈದ್ರಬಾದ್, ಮುಂಬಯಿ, ಪುಣೆ ಮತ್ತು ದೆಹಲಿಯಂಥ ದೊಡ್ಡ ನಗರಗಳಲ್ಲಿ ಗ್ರಾಹಕರು ನೈಸರ್ಗಿಕ ಕೃಷಿಯ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಪ್ರೋತ್ಸಾಹಿಸುತ್ತಿದ್ದಾರೆ. 10-20 ಪ್ರತಿಶತ ಹೆಚ್ಚು ದರವನ್ನು ಕೊಟ್ಟು ಖರೀದಿಸುತ್ತಿದ್ದಾರೆ. ನೈಸರ್ಗಿಕ ಕೃಷಿ ಬೆಳೆಗೆ ರಪ್ತು ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇರುತ್ತದೆ. ಹೊರ ರಾಷ್ಟ್ರಗಳಲ್ಲಿ ವಿಷಮುಕ್ತ ಆಹಾರದ ಬಗ್ಗೆ ಬಹಳ ಅರಿವಿದೆ.
ಈ ಕಾರಣಕ್ಕಾಗಿ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ, ತರಬೇತಿಯಲ್ಲಿ ಹಾಜರಾದ ಸುಮಾರು ಒಂದು ಸಾವಿರ ರೈತರನ್ನು ಸಂಘಟಿಸಿ ಒಂದು ಸಂಘವನ್ನು ರಚಿಸಿರುತ್ತೇವೆ. ರೈತರು ನಮಗೆ ಒಂದು ಬಾಂಡ್ ಪೇಪರಿನಲ್ಲಿ "ನಾನು ನೈಸರ್ಗಿಕ ಕೃಷಿಯನ್ನು ಪ್ರಾರಂಭ ಮಾಡಿ, ಇನ್ನೂ ಹತ್ತು ರೈತರನ್ನು ಸಂಘದಲ್ಲಿ ಸೇರಿಸುತ್ತೇನೆ" ಎಂದು ಸಹಿ ಮಾಡಿ ಕೊಟ್ಟರು. ಇನ್ನು ವಿಷಮುಕ್ತ ಆಹಾರವನ್ನು ಉತ್ಪಾದಿಸಲು ರೈತ ಸಂಘಗಳ ಚಟುವಟಿಕೆಗಳು ಈ ಕೆಳಗಿನಂತಿವೆ:
1. ರೈತರಲ್ಲಿ ನೈಸರ್ಗಿಕ ಕೃಷಿ ಪದ್ಧತಿಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ಜಾತೃತಿಮೂಡಿಸುವುದು. 2. ಒಬ್ಬ ರೈತನಿಂದ ಉಳಿದ ರೈತರಿಗೆ ತಿಳಿವಳಿಕೆ ಉಂಟು ಮಾಡುವುದು. 3.ಬೆಳೆಯಲ್ಲಿ ಕೀಟ ಮತ್ತು ರೋಗ ಬಾಧೆಗಳ ನಿಯಂತ್ರಣದ ಬಗ್ಗೆ ಚರ್ಚೆ ಮಾಡುವುದು. 4. ತೋಟಗಾರಿಕೆ ಸಮಗ್ರ ಪದ್ಧತಿಯ ಬಗ್ಗೆ ಚರ್ಚೆ. 5. ನೈಸರ್ಗಿಕ ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ವಿಚಾರಿಸಿಕೊಳ್ಳುವುದು.
ಅಲ್ಲದೆ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನೂ ಅವರು ಮಾಡುತ್ತಿದ್ದಾರೆ. ಒಟ್ಟಾರೆ ಪ್ರತಿ ಹಳ್ಳಿಯಲ್ಲಿ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನಗಳು ಕುರಿತು ಚರ್ಚಿಸಿ. ವಿಷಮುಕ್ತ ಆಹಾರವನ್ನು ಉತ್ಪಾದಿಸುವ ಗುರಿಯನ್ನು ರೈತರು ಹೊಂದಿದ್ದಾರೆ. ಇನ್ನು ಮಾನವ ಶ್ರಮವನ್ನು ಗೌರವಿಸುವಂತೆ ಮಾಡುವುದು, ಕಡಿಮೆ ಬಂಡವಾಳದಿಂದ ನಿರ್ವಹಣೆ ಮಾಡುವುದು, ಗ್ರಾಮೀಣ ಪ್ರದೇಶದಿಂದ ನಗರ/ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟುವುದು,  ನೈಸರ್ಗಿಕ ಕೃಷಿ ಚಟುವಟಿಕೆಗಳಲ್ಲಿ ಮಹಿಳೆಯರು ಭಾಗವಹಿಸುವಂತೆ ಮಾಡುವುದು, ಸಮಗ್ರ ಅಭಿವೃದ್ಧಿಗೆ ಪೂರಕವಾದ ಉದ್ಯೋಗಗಳನ್ನು ಪ್ರೋತ್ಸಾಹಿಸಿ ಗ್ರಾಮೀಣ ಜನತೆಯ ಜೀವನ ಮೌಲ್ಯ ಸುಧಾರಿಸುವುದು ಈ ಚಟುವಟಿಕೆಗಳ ಮುಖ್ಯಾಂಶಗಳಾಗಿವೆ.
ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ದೋರನಹಳ್ಳಿ ಗ್ರಾಮದ ರೈತ ಸುಭಾಶ್ ಮಹಾದೇವಪ್ಪ ಕಡಗೂಡ ನೈಸರ್ಗಿಕ ಕೃಷಿ ಕುರಿತು ಗುಂಡಗುರ್ತಿಯ ತರಬೇತಿಯಲ್ಲಿ ಹಾಜರಾದರು. ಅವರು ತಮ್ಮ ತೋಟದಲ್ಲಿ ವಿಷಮುಕ್ತ ಆಹಾರವನ್ನು ಉತ್ಪಾದಿಸಲೂ ಪ್ರಾರಂಭ ಮಾಡಿದ್ದಾರೆ. ಈ ಪದ್ಧತಿಯ ಮೂಲಕ ರೈತರು ತಮ್ಮ ಹೋಲದಲ್ಲಿ ತೊಗರಿ, ಜೋಳ, ಗೋದಿ, ಕಡಲೆ ಮತ್ತು ತರಕಾರಿಯನ್ನು ಬೆಳೆಯುತ್ತಿದ್ದಾರೆ ಹಾಗೂ ಒಳ್ಳೆಯ ಇಳುವರಿಯನ್ನು ಪಡೆದಿದ್ದಾರೆ.
ಪರಮಾನಂದ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ನಿರ್ದೇಶಕರಾದ ಮಹದೇವ್ ಎಸ್. ಅಂಬಲಿಯವರ ಮಾತುಗಳಲ್ಲೇ ಅವರ ಅನುಭವವನ್ನು ಕೇಳಿ: "ನಾನು ಮೊಟ್ಟಮೊದಲು ರಾಸಾಯನಿಕ ಕೃಷಿಯಲ್ಲಿ ಕಬ್ಬು, ಹತ್ತಿ, ತೋಗರಿ ಬೆಳೆಯನ್ನು ಪ್ರಾರಂಭಿಸಿದೆ. ಬೆಳೆದ ಕಬ್ಬು ಒಣಗಿದ್ದಲ್ಲದೇ, ರೋಗ ಪೀಡಿತವಾಗಿ ಸಂಪೂರ್ಣ ಬೆಳೆ ಹಾಳಾಗಿ ಹೋಯಿತು. ಆಗ ನೀರನ್ನು ಹಾಗೂ ಮಣ್ಣನ್ನು ಪರೀಕ್ಷಿಸಲಾಗಿ ಮಣ್ಣು ಕೃಷಿಗೆ ಯೋಗ್ಯವಿಲ್ಲವೆಂದು ತಿಳಿದು ಬಂದಿತು. ಅನಿವಾರ್ಯವಾಗಿ ಇದೇ ಮಣ್ಣನ್ನು ಕೃಷಿಗೆ ಉಪಯೋಗಿಸುವುದಾದರೆ ರಾಸಾಯನಿಕ ಗೊಬ್ಬರ ಹೊರತು ಪಡಿಸಿ ತಿಪ್ಪೆ ಗೊಬ್ಬರ, ಕಾಂಪೋಸ್ಟ್ ಗೊಬ್ಬರವನ್ನು ಮಾತ್ರ ಉಪಯೋಗಿಸಿ ಎಂದು ಕೃಷಿ ತಜ್ಞರು ಸಲಹೆ ನೀಡಿದರು. ಅದೇ ವೇಳೆಯಲ್ಲಿ ಗುಂಡಗುರ್ತಿಯ ತರಬೇತಿಯಲ್ಲಿ ಪಾಳೇಕರ್‌ರ ನೈಸರ್ಗಿಕ ಕೃಷಿ ಕಾರ್ಯಗಾರ ನಡೆದಿತ್ತು. ಕಾರ್ಯಗಾರದಲ್ಲಿ ಪಾಲ್ಗೊಂಡ ಅಂದಿನಿಂದ ಇಂದಿನವರೆಗೂ ನೈಸರ್ಗಿಕ ಕೃಷಿಯಿಂದಲೇ ರೇಷ್ಮೆ, ಕಬ್ಬು, ತೋಗರಿ, ಹತ್ತಿ ಬೆಳೆ ಬೆಳೆಯುತ್ತಿದ್ದೇನೆ. ಇಲ್ಲಿಯವರೆಗೆ ಬೆಳೆಗೆ ರೋಗದ ಬಾಧೆ ಇಲ್ಲದೆ ಇಳುವರಿ ತೃಪ್ತಿದಾಯಕವಾಗಿದೆ. ತೋಟದಲ್ಲಿ ಎಲ್ಲಿ ಕೈ ಹಾಕಿ ತೆಗೆದರೂ ಅಲ್ಲಿ ಎರೆಹುಳುಗಳು ಹೇರಳವಾಗಿ ಸಿಗುತ್ತವೆ. ಒಟ್ಟಿನಲ್ಲಿ ಕಡಿಮೆ ಖರ್ಚಿನಲ್ಲಿ ಖಡಕ್ಕಾಗಿ ಜೀವನ ಸಾಗಿಸುತ್ತಿದ್ದೇನೆ."
ವಿಜಾಪೂರ ಜಿಲ್ಲೆಯ ಸಿಂದಗಿ ತಾಲೂಕಿನ ಹರನಾಳ ಗ್ರಾಮದ ರೈತ ಶಿವಶಂಕ್ರಪ್ಪ ಗೋಲ್ಲಾಳಪ್ಪ ಅಂಬಲಿಯವರು ತಮ್ಮ  10 ಎಕರೆ ತೋಟದಲ್ಲಿ ಕಬ್ಬು, ಜೋಳ, ಗೋದಿ, ತೋಗರಿ, ಕಡಲೆ ಬೆಳೆಯುತ್ತಾರೆ ಹಾಗೂ ಜೀವಸಾರ ಘಟಕ, ಜೀವಾಮೃತ, ಬೀಜಾಮೃತ, ಅಗ್ನಿ ಅಸ್ತ್ರ ತಯಾರು ಮಾಡುತ್ತಾರೆ. ಅಲ್ಲದೆ ವಿಜಾಪೂರ ಜಿಲ್ಲೆಯಲ್ಲಿ ಮತ್ತು ಬೆಂಗಳೂರಿನ ನೈಸರ್ಗಿಕ ಕೃಷಿ ಅಂಗಡಿಗಳಲ್ಲಿ, ಜೈವಿಕ ಸೊಸೈಟಿ (ರಿ) ಮೂಲಕ ಬೆಂಗಳೂರಿನಲ್ಲಿ ನೈಸರ್ಗಿಕ ವಸ್ತುಗಳನ್ನು ಮಾರಾಟ ಮಾಡುತ್ತಾರೆ.
ಈ ದಿಸೆಯಲ್ಲಿ ನಮ್ಮ ರೈತರು ಒಟ್ಟುಗೂಡಿ, ಮಹಿಳಾ ಸ್ವಸಹಾಯ ಸಂಘಗಳ ಮಾದರಿಯಲ್ಲಿ ನೈಸರ್ಗಿಕ ಶೂನ್ಯ ಬಂಡವಾಳ ಸಂಘಗಳನ್ನು ಕಟ್ಟಿದರೆ, ಯಾವ ರೈತನೂ ಬಡವನಾಗಿ, ಸಾಲ ಪೀಡಿತನಾಗಿ ಉಳಿಯುವ ಅನಿವಾರ್ಯ ಎದುರಾಗುವುದಿಲ್ಲ. ಮಾತ್ರವಲ್ಲ ನಾವೆಲ್ಲರೂ ಆರೋಗ್ಯವಂತರಾಗಲು ಹಾಗೂ ನಮ್ಮ ಮತ್ತು ರಾಷ್ಟ್ರದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವತ್ತ ಸಾಗಲು ಸಾಧ್ಯವಿದೆ.

-ಶಾಲಿನಿ ರಜನೀಶ್, ಐಎಎಸ್
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement