ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅಂಬೇಡ್ಕರ್‌ರ ರಾಷ್ಟ್ರ ನಿರ್ಮಾಣದ ಚಿಂತನೆ ಏನಿತ್ತು?

ಮಹಾತ್ಮಾ ಗಾಂಧಿಯವರು ಜಿನ್ನಾ ಅವರ..

Srinivasa Murthy VN
Updated On : 14 Apr 2014, 1:54 am

ಭಾರತದಲ್ಲಿ ಮಹಾಚುನಾವಣೆ ಎದುರಾಗಿದೆ. ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು, ಕೆಲವು ಜ್ಞಾನಪೀಠಿಗಳು...ಎಲ್ಲರೂ ಆರ್.ಎಸ್.ಎಸ್, ಬಿಜೆಪಿ, ನರೇಂದ್ರ ಮೋದಿಯವರನ್ನು ಮುಸ್ಲಿಮ್ ವಿರೋಧಿಗಳೆಂತಲೂ, ಮೋದಿ ಅಧಿಕಾರಕ್ಕೆ ಬಂದರೆ ಯುದ್ಧವಾಗುತ್ತದೆ, ದೇಶ ವಿಭಜನೆಯಾಗುತ್ತದೆ, ಸರ್ವಾಧಿಕಾರ ಜಾರಿಗೆ ಬರುತ್ತದೆ ಎಂದೆಲ್ಲಾ ಪ್ರಚಾರ ಮಾಡುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್ ಅಲ್ಪಸಂಖ್ಯಾತರ ಸುರಕ್ಷೆಯ ಪ್ರಶ್ನೆಯನ್ನು ಮುಂದಿಡುತ್ತಾ ಹಿಂದೂ ಹಾಗೂ ಹಿಂದುತ್ವದ ಪ್ರತಿಪಾದಕರನ್ನು ಅಪಮಾನದ ನೆಣುಗಂಬಕ್ಕೇರಿಸುತ್ತಿದೆ. ದೇಶ ವಿಭಜನೆಯಾಗುತ್ತದೆ ಎಂದು ಬೊಬ್ಬಿಡುತ್ತಿರುವ ಇದೇ ಕಾಂಗ್ರೆಸ್‌ನಿಂದಾಗಿಯೇ ಅಂದು ದೇಶ ವಿಭಜನೆಯಾಯಿತು ಎನ್ನುವ ಕಟು ಸತ್ಯ ಕಣ್ಣೆದುರಿಗಿದೆ. ಹೇಗೆ ಕಾಂಗ್ರೆಸ್ ಹಿಂದೆ ಅಂಬೇಡ್ಕರ್‌ರಂಥ ಮಾನವತಾವಾದಿಗಳಿಗೂ ಕೈಕೊಟ್ಟಿತ್ತು ಎನ್ನುವುದನ್ನು ಅಂಬೇಡ್ಕರ್ ಅವರ ಕೃತಿ 'ಭಾರತ ವಿಭಜನೆ"ಯನ್ನು ಓದಿದಾಗ ಅರ್ಥವಾಗುತ್ತದೆ. 
ಈ ಕೃತಿಯಲ್ಲಿ 5 ಭಾಗಗಳಿವೆ. 1 ರಲ್ಲಿ ಪಾಕಿಸ್ತಾನದ ಪರವಾಗಿ ಮುಸಲ್ಮಾನರ ವಾದವನ್ನು ವಿವರಿಸಿದ್ದರೆ, ಭಾಗ ಎರಡರಲ್ಲಿ ಪಾಕಿಸ್ತಾನದ ವಿರುದ್ಧ ಹಿಂದೂ ಅಹವಾಲನ್ನು ವಿವರಿಸಿದ್ದಾರೆ. 3 ರಲ್ಲಿ ಪಾಕಿಸ್ತಾನವಲ್ಲದಿದ್ದರೆ ಮತ್ತೇನು ಎಂಬ ಪ್ರಶ್ನೆಗೆ ಪರ್ಯಾಯ ಶೋಧವನ್ನು ನಡೆಸಿದ್ದಾರೆ. ಭಾಗ 4ರಲ್ಲಿ "ಈ ಸಮಸ್ಯೆಗೆ ಪಾಕಿಸ್ತಾನ ಪರಿಹಾರವೇ?" ಎಂಬುದನ್ನು ಪರಿಶೀಲಿಸಿದ್ದಾರೆ. 5ರಲ್ಲಿ "ಪಾಕಿಸ್ತಾನವಿರಬೇಕೇ? ಪಾಕಿಸ್ತಾನದ ಸಮಸ್ಯೆಗಳನ್ನು ನಿರ್ಧರಿಸುವವರು ಯಾರು?" ಎಂಬ ಸಂಗತಿಗಳ ಬಗ್ಗೆ ಚರ್ಚಿಸಿದ್ದಾರೆ.
ಮಹಾತ್ಮಾ ಗಾಂಧೀಜಿಯವರು "ಜನ ಸಂಖ್ಯೆಯನ್ನು ಸೌಹಾರ್ದತೆಯಿಂದ ವಿನಿಮಯ ಮಾಡಿಕೊಳ್ಳಬೇಕು" ಎಂಬ ಅಂಬೇಡ್ಕರ್ ಅವರ ಬೇಡಿಕೆಯ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಿದರು. ಅಂಬೇಡ್ಕರ್ ತಮ್ಮ ಬೇಡಿಕೆಯಿಂದ ಹಿಂದೆ ಸರಿಯುವಂತೆ ಮಾಡಿದರು. ಪೂನಾ ಒಪ್ಪಂದದ ಮೂಲಕ ಇಂದಿಗೂ ಮೇಲ್ಜಾತಿ ಜನರ ತಾಳಕ್ಕೆ ಕುಣಿಯಬಲ್ಲಂಥ, ಕಾಂಗ್ರೆಸ್ ಕುಣಿಸಬಲ್ಲಂಥ ಮೀಸಲಾತಿ ಕ್ಷೇತ್ರಗಳನ್ನು ಜಾರಿಗೆ ತಂದರು. ಇನ್ನು ಅಂಬೇಡ್ಕರ್ ಅವರನ್ನು ದಲಿತರ  ಪ್ರತಿನಿಧಿಯೆಂದು ಒಪ್ಪದ ಕಾಂಗ್ರೆಸ್ ತಾನೇ ನಿಜವಾದ ದಲಿತಪರ ನೇತಾರ ಎಂದು ತನ್ನನ್ನು ಬಿಂಬಿಸಿಕೊಂಡಿತು. ಅದರ ಉದ್ದೇಶ "ನಿಜಕ್ಕೂ ದಲಿತರ ಕಲ್ಯಾಣವಾಗಿತ್ತೇ?" ಎಂಬುದನ್ನು ವಿಶ್ಲೇಷಣೆ ಮಾಡಬೇಕಿದೆ. ಅಂಬೇಡ್ಕರ್ ನೆಹರು ಮಂತ್ರಿಮಂಡಲದಲ್ಲಿ ಕಾನೂನು ಮಂತ್ರಿಯಾಗಿ ಹಿಂದೂಕೋಡ್ ಮಸೂದೆ ಮೇಲೆ ಎರಡು ವರ್ಷ ಸುದೀರ್ಘ ಚರ್ಚೆಮಾಡಿದರೂ ಅಂಗೀಕರಿಸದೇ, ಅಂಬೇಡ್ಕರ್ ರಾಜಿನಾಮೆ ಕೊಡುವುದಕ್ಕೆ ಅಂದಿನ ಮೊಟ್ಟಮೊದಲ ಸಂಸತ್ತು ಕಾರಣವಾಯಿತು. ಅಲ್ಲಿಗೆ ಹಿಂದೂ ಸಮಾಜದ ರೋಗಗಳಿಗೆ ಚಿಕಿತ್ಸೆ ಕೊಡಲಾಗದೇ ಜಾತೀಯತೆ, ಅಸ್ಪೃಶ್ಯತೆ, ಮಹಿಳಾ ಅಸುರಕ್ಷೆ ಮೊದಲಾದ ಪಾಪಗಳನ್ನೆಲ್ಲ ಜೋಪಾನ ಮಾಡಿದವರು ಯಾರು? ಹಿಂದೂಕೋಡ್ ಮಸೂದೆ ಅಂದು ಅಂಗೀಕಾರವಾಗಿದ್ದರೆ ಇಂದಿನ ಹಿಂದೂಸ್ತಾನ ಹೇಗಿರುತ್ತಿತ್ತು? ಅಂಬೇಡ್ಕರ್ ರಾಜಿನಾಮೆ ನೀಡದೇ ತಮ್ಮ ಕನಸುಗಳನ್ನು ನನಸಾಗಿಸುವಲ್ಲಿ ಯಶಸ್ವಿಯಾಗಿದ್ದರೆ ಭಾರತದ ಇಂದಿನ ಸ್ಥಿತಿ ಹೇಗಿರುತ್ತಿತ್ತು?
"ಹತ್ತು ವರ್ಷಗಳಲ್ಲೇ ದೇಶದ ದೀನ ದುರ್ಬಲರಿಗೆಲ್ಲಾ ಮೀಸಲಾತಿ ಸೌಲಭ್ಯಗಳು ದೊರೆತು, ಉಳ್ಳವರು ಇಲ್ಲದವರ ನಡುವಿನ ಅಂತರ ಇಲ್ಲವಾಗಬೇಕು. ಹತ್ತು ವರ್ಷಗಳ ಆನಂತರ ಭಾರತದ ಯಾರೂ ಮೀಸಲಾತಿಯನ್ನು ಕೇಳಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಇರಬಾರದು" ಎಂದ ಅಂಬೇಡ್ಕರ್ ಕನಸನ್ನು ಕಳೆದ 6-7 ದಶಕಗಳಲ್ಲಿ ನುಚ್ಚುನೂರು ಮಾಡಿದವರು ಯಾರು? 400-500 ವರ್ಷಗಳವರೆಗೆ ಮೀಸಲಾತಿ ಇರಬೇಕು ಎಂದು ಭಾಷಣ ಮಾಡುವ ನಾಯಕರು ಈ ಸಮಸ್ಯೆ 400-500 ವರ್ಷಗಳವರೆಗಾದರೂ ಹಾಗೇ ಇರಲಿ ಎಂದು ಬಯಸುತ್ತಿದ್ದಾರಾ? ಕಾಂಗ್ರೆಸ್‌ನ ಅಂದಿನ ತಪ್ಪು ಹೆಜ್ಜೆಯಿಂದಾಗಿಯೇ ಇಂದಿಗೂ ದಲಿತ ರಾಜಕಾರಣಕ್ಕೆ ಮೇಲ್ಜಾತಿಯವರ ಮತ್ತು ಕಾಂಗ್ರೆಸ್‌ನ ನೆರವಿಲ್ಲದೇ ಗೆಲುವಿಲ್ಲ ಎಂಬ ಸ್ಥಿತಿ ಉಂಟಾಗಿರುವುದು. ಬಾಬಾ ಸಾಹೇಬರ ಕನಸುಗಳನ್ನು ಅಂದು ಮುಗಿಸಿದ್ದು ಇದೇ ಕಾಂಗ್ರೆಸ್. ಈಗ ನಮ್ಮ ವಿಚಾರವಾದಿಗಳೂ, ದಲಿತ ಚಿಂತಕರೂ ಇದೇ ಪಕ್ಷವನ್ನು(ಮನಸ್ಥಿತಿಯನ್ನು) ಬೆಂಬಲಿಸಲು ಮುಂದಾಗಿರುವುದು ದೌರ್ಭಾಗ್ಯ.
ಮಹಾತ್ಮಾ ಗಾಂಧಿಯವರು ಜಿನ್ನಾ ಅವರ ಬೇಡಿಕೆಗಳ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಲಿಲ್ಲ. ಇದೇ ಕಾಂಗ್ರೆಸ್ ದೇಶ ವಿಭಜನೆ ಆಗಬಾರದು ಎಂದು ಬಾಯಲ್ಲಿ ಹೇಳಿದರೂ ತಡೆಯಲು ಮುಂದಾಗಲಿಲ್ಲ. ಮುಸ್ಲಿಮ್ ಲೀಗ್ ಹಾಗೂ ಜಿನ್ನಾ ಬೇರೆ ದೇಶ ಕೇಳಲು ಕಾರಣವೇನು? ಅಂದಿನ ಕಾಂಗ್ರೆಸ್, ಮುಸ್ಲಿಮ್ ಲೀಗನ್ನು ಮುಸ್ಲಿಮರ ಪ್ರಾತಿನಿಧಿಕ ಪಕ್ಷವೆಂದು ಒಪ್ಪಿಕೊಳ್ಳಲಿಲ್ಲ. ಇದರಿಂದಾಗಿ ಮುಸ್ಲಿಮ್ ಲೀಗ್ ದ್ವಿರಾಷ್ಟ್ರ ಸಿದ್ಧಾಂತ ಮಂಡನೆಗೆ ಮುಂದಾಯಿತು. ಅದನ್ನು ಅಂಬೇಡ್ಕರ್ ಅವರು ತಮ್ಮ ಕೃತಿಯ 32ನೇ ಪುಟದಲ್ಲಿ ಹೀಗೆ ಹೇಳುತ್ತಾರೆ: "ಹದಿನಾಲ್ಕು ಅಂಶಗಳ ಪಟ್ಟಿಯೊಂದನ್ನು ಮುಸಲ್ಮಾನ ನಾಯಕರು ದುಂಡು ಮೇಜು ಪರಿಷತ್ತಿನಲ್ಲಿ ಮಂಡಿಸಿದ್ದರು. ಆ ಗೋಷ್ಠಿಯಲ್ಲಿ ಭಾಗವಹಿಸಿದ್ದ ಹಿಂದೂ ಪ್ರತಿನಿಧಿಗಳು ಅದಕ್ಕೆ ಸಮ್ಮತಿಸಲಿಲ್ಲ. ಅಲ್ಲಿ ಒಂದು ಬಿಕ್ಕಟ್ಟು ಉಂಟಾಯಿತು. ಆಗ ಬ್ರಿಟಿಷ್ ಸರ್ಕಾರವು ಮಧ್ಯಪ್ರವೇಶಿಸಿ ಮತೀಯ ನಿರ್ಧಾರ ಎಂದು ಹೇಳಲಾದ ಒಂದು ನಿರ್ಣಯ ಕೊಟ್ಟಿತು. ಆ ನಿರ್ಧಾರದಿಂದಾಗಿ ಮುಸಲ್ಮಾನರ ಹದಿನಾಲ್ಕು ಅಂಶಗಳಿಗೂ ಒಪ್ಪಿಗೆ ದೊರೆಯಿತು. ಈ ಮತೀಯ ಕೊಡುಗೆಗೆ ವಿರುದ್ಧವಾಗಿ ಹಿಂದೂಗಳಲ್ಲಿ ಸಾಕಷ್ಟು ಕಹಿ ಭಾವನೆ ಮೂಡಿತು. ಆದರೆ ಹಿಂದೂಗಳು ತೋರಿಸಿದ ವಿರೋಧದಲ್ಲಿ ಕಾಂಗ್ರೆಸ್ ಭಾಗಿಯಾಗಲಿಲ್ಲ, ಆದರೆ ಆ ಮತೀಯ ಕೊಡುಗೆ ರಾಷ್ಟ್ರವಿರೋಧಿಯೆಂದು ವಿವರಿಸುವ ಹಾಗೂ ಮುಸಲ್ಮಾನರ ಸಹಮತದಿಂದ ಅದನ್ನು ಬದಲಾಯಿಸುವ ಹಕ್ಕನ್ನು ತನ್ನದಾಗಿ ಉಳಿಸಿಕೊಂಡಿತು. ಮುಸಲ್ಮಾನರ ಭಾವನೆಗಳಿಗೆ ನೋವುಂಟುಮಾಡದಂತೆ ಕಾಂಗ್ರೆಸ್ ಎಷ್ಟು ಎಚ್ಚರಿಕೆ ವಹಿಸಿತೆಂದರೆ, ಆ ಮತೀಯ ಕೊಡುಗೆಯನ್ನು ಖಂಡಿಸಿ ಕೇಂದ್ರ ಶಾಸನ ಸಭೆಯಲ್ಲಿ ನಿರ್ಣಯ ಮಂಡಿಸಿದಾಗ ಅದಕ್ಕೆ ತನ್ನ ಸಮ್ಮತಿ ಕೊಡದಿದ್ದರೂ ಅತ್ತ ವಿರೋಧಿಸಲೂ ಇಲ್ಲ, ಇತ್ತ ಬೆಂಬಲಿಸಲೂ ಇಲ್ಲ. ಕಾಂಗ್ರೆಸ್ಸಿನ ಈ ಮನೋವೃತ್ತಿಯನ್ನು ಒಂದು ಸ್ನೇಹಪರ ವರ್ತನೆಯೆಂದು ಮುಸಲ್ಮಾನರು ಪರಿಗಣಿಸಿದ್ದು ಸಹಜ.
ಹಿಂದೂಗಳೇ ಬಹುಸಂಖ್ಯೆಯಲ್ಲಿರುವ ಪ್ರಾಂತ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯಶಾಲಿಯಾದಾಗ ಮುಸಲ್ಮಾನರ ನೆಮ್ಮದಿ ಕದಡಲಿಲ್ಲ. ಕಾಂಗ್ರೆಸ್ಸಿನಿಂದ ಭೀತರಾಗುವುದಕ್ಕೆ ಯಾವ ಕಾರಣವೂ ಇಲ್ಲ ಎಂದು ಅವರು ಭಾವಿಸಿದರು. ಇದರಿಂದಾಗಿ ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ಎರಡೂ ಕೂಡಿ ಸಂವಿಧಾನ ರಚಿಸುವ ಸಾಧ್ಯತೆ ಹೆಚ್ಚಾಯಿತು. ಆದರೆ ಕೆಲವು ಪ್ರಾಂತ್ಯಗಳಲ್ಲಿ ಎರಡು ವರ್ಷ ಮೂರು ತಿಂಗಳ ಅವಧಿಯಲ್ಲಿ ನಡೆದ ಆಡಳಿತವು, ಮುಸಲ್ಮಾನರಿಗೆ ಸಂಪೂರ್ಣ ಭ್ರಮನಿರಸನ ಮಾಡಿತಲ್ಲದೇ, ಅವರು ಕಾಂಗ್ರೆಸ್ಸಿನ ಅತ್ಯಂತ ಕಡು ವಿರೋಧಿಗಳಾಗುವಂತೆ ಮಾಡಿತು. 1939ನೆಯ ಡಿಸೆಂಬರ್ 22ರಂದು ಆಚರಿಸಲಾದ 'ವಿಮೋಚನಾ ದಿನ' ಅವರ ಅಸಮಾಧಾನದ ತೀವ್ರತೆಯನ್ನು ತೋರಿಸುತ್ತದೆ. ಇನ್ನು ಹೆಚ್ಚು ಕೆಟ್ಟದ್ದೆಂದರೆ ಅವರ ಕಹಿಭಾವ ಕೇವಲ ಕಾಂಗ್ರೆಸ್ಸಿಗೆ ಸೀಮಿತವಾಗಲಿಲ್ಲವೆಂಬುದು. ಯಾರು 'ಸ್ವರಾಜ್ಯ'ಕ್ಕಾಗಿ ದುಂಡು ಮೇಜಿನ ಸಭೆಯಲ್ಲಿ ಜೊತೆಯಾಗಿದ್ದರೋ ಅಂತಹ ಮುಸಲ್ಮಾನರೇ ಅಂದು ಸ್ವರಾಜ್ಯದ ಕಡು ವಿರೋಧಿಗಳಾದರು. ಮುಸಲ್ಮಾನರಿಗೆ ಅಷ್ಟು ಜುಗುಪ್ಸೆಯಾಗುವಂತೆ ಕಾಂಗ್ರೆಸ್ ಮಾಡಿದ ಕಾರ್ಯವಾದರೂ ಯಾವುದು? ಕಾಂಗ್ರೆಸ್ ಆಡಳಿತದಲ್ಲಿ ವಾಸ್ತವವಾಗಿ ಮುಸಲ್ಮಾನರ ಮೇಲೆ ದಬ್ಬಾಳಿಕೆ ಮತ್ತು ಅವರ ದಮನಕಾರ್ಯ ನಡೆಯಿತೆಂದೂ ಮುಸ್ಲಿಂ ಲೀಗ್ ಆರೋಪಿಸಿತು" ಎಂದು ವಿವರಿಸಿದ್ದಾರೆ. ಇದರಿಂದ ತಿಳಿಯುವ ಸಂಗತಿ ಎಂದರೆ ಕಾಂಗ್ರೆಸ್ ದುಂಡು ಮೇಜಿನ ಸಭೆಯಲ್ಲಿ ಹಿಂದೂಗಳಿಗೆ ಕೈ ಕೊಟ್ಟಿತ್ತು. ಆಧಿಕಾರಕ್ಕೇರಿದ ಕಡೆಗಳಲ್ಲಿ ಮುಸಲ್ಮಾನರಿಗೆ ಕೈ ಕೊಟ್ಟಿತು! ಸತ್ಯ ಹೇಳಬೇಕಾದ ಸಂದರ್ಭದಲ್ಲಿ ಮುಸಲ್ಮಾನರಿಗೆ ನೋವಾಗುತ್ತದೆ ಎಂದು ಅದು ಮತೀಯ ನಿರ್ಧಾರವನ್ನು ವಿರೋಧಿಸಲಿಲ್ಲ. ಅಧಿಕಾರದ ಮದದಲ್ಲಿ ನ್ಯಾಯಯುತವಾಗಿ ನಡೆದುಕೊಳ್ಳದೇ ಸ್ವರಾಜ್ಯ ಬಯಸಿದ ಮುಸಲ್ಮಾನರೇ ವಿರೋಧಿಗಳಾಗುವಂತೆ ಮಾಡಿತು. ಮತ್ತೊಂದೆಡೆ ಅಂಬೇಡ್ಕರ್ ಅವರ ಬೇಡಿಕೆಗೆ ದುಂಡುಮೇಜಿನ ಸಭೆಯಲ್ಲಿ ಬ್ರಿಟಿಷ್ ಸರ್ಕಾರದ ಸಮ್ಮತಿಯನ್ನೂ ಹೋರಾಟದ ಮೂಲಕ ದಮನ ಮಾಡಿತು. ಅದರ ಗುಣ ಇಂದಿಗೂ ಮುಂದುವರಿದಿದೆ. ಇದರಿಂದಾಗಿಯೇ ಮುಸ್ಲಿಂ ಲೀಗ್-1939 ಹಾಗೂ 1940ರಲ್ಲಿ ಸಂವಿಧಾನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಡಿದ ನಿರ್ಣಯವೆಂದರೆ- "ಭಾರತದ ವಾಯುವ್ಯ ಮತ್ತು ಪೂರ್ವ ಭಾಗಗಳನ್ನು ಒಟ್ಟುಗೂಡಿಸಿ ಅವನ್ನು ಸ್ವತಂತ್ರ ರಾಜ್ಯಗಳನ್ನಾಗಿ ರೂಪಿಸಬೇಕು" ಎಂಬುದು.
ಅಂಬೇಡ್ಕರ್ ತಮ್ಮ ವರದಿಯಲ್ಲಿ ಹೇಳಿದ್ದರು- "ಮುಸ್ಲಿಮರದ್ದು ಪ್ರತ್ಯೇಕ ರಾಷ್ಟ್ರೀಯಭಾವ, ಹಿಂದುಗಳದ್ದೂ ಅಷ್ಟೆ. ಹೀಗಾಗಿ ಮುಸಲ್ಮಾನರಿಗೆ ಅವರು ಬೇಡಿದ ಪಾಕಿಸ್ತಾನವನ್ನು ಪ್ರೀತಿಯಿಂದಲೇ ನೀಡಿ ಜನಸಂಖ್ಯೆಯನ್ನೂ ಸೌಹಾರ್ದತೆಯಿಂದ ವಿನಿಮಯ ಮಾಡಿ ಮುಸ್ಲಿಮರ ಪಾಕಿಸ್ತಾನವನ್ನೂ, ಹಿಂದೂಗಳ ಭಾರತವನ್ನು ನಿರ್ಮಾಣ ಮಾಡಬೇಕು" ಎಂದು. ಆದರೆ ವಿಭಜನೆಯ ವೇಳೆ ಆದದ್ದೇನು? ಲಕ್ಷಾಂತರ ಹಿಂದು ಮುಸಲ್ಮಾನರು ಹೊಡೆದಾಡಿ ಸತ್ತರು. ಮನಸ್ಸುಗಳ ನಡುವಿನ ಅಂತರ ಹೆಚ್ಚಾಯಿತು. ಅಂದು ಕಾಂಗ್ರೆಸ್ ಅಂಬೇಡ್ಕರ್ ಅವರ ಮಾತನ್ನು ನಡೆಸಿದ್ದರೆ, ಜನರ ಉನ್ನತಿಗಾಗಿ ಅದು ಶ್ರಮಿಸಿದ್ದರೆ ದೇಶದಲ್ಲಿಂದು ಆರ್.ಎಸ್.ಎಸ್ ಇರುತ್ತಿತ್ತೇ? ಬಿಜೆಪಿ ಬೆಳೆಯುತ್ತಿತ್ತೇ? ನರೇಂದ್ರ ಮೋದಿಯ ನಾಯಕತ್ವಬೇಕು ಎಂದು ಭಾರತದ ಮತದಾರರು ಬಯಸುತ್ತಿದ್ದರೇ? ಬಾಬಾ ಸಾಹೇಬ್ ಅಂಬೇಡ್ಕರ್ ಅವರ ರಾಜಕೀಯ ಜೀವನ ಹಾಗೂ ರಾಷ್ಟ್ರನಿರ್ಮಾಣದ ಪ್ರಬಲ ಚಿಂತನೆಗಳು ಮೂಲೆಗುಂಪಾಗುತ್ತಿದ್ದವೇ? ಇಂದಿನ ಪಾಕಿಸ್ತಾನಕ್ಕೂ, ಕೋಮುವಾದಕ್ಕೂ, ದಲಿತರ ರೋದನಕ್ಕೂ ಕಾಂಗ್ರೆಸ್ಸೇ ಕಾರಣ ಎಂದೆನಿಸುವುದಿಲ್ಲವೇ? ಅದಕ್ಕೇ ನೆಲವನ್ನು, ಬೆಳೆಯನ್ನು ಹಾಳು ಮಾಡುವ ಪಾರ್ಥೇನಿಯಂಗೆ ಜನ 'ಕಾಂಗ್ರೆಸ್‌' ಎಂದು ಕರೆಯುವುದು!
(ಏಪ್ರಿಲ್ 14 ಅಂಬೇಡ್ಕರ್ ಜಯಂತಿ. ತನ್ನಿಮಿತ್ತ ಈ ಲೇಖನ)

-ವಿನಯ್ ಬಿದರೆ,  ಹುಬ್ಬಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement