ರಾಜಕೀಯ ಹಕ್ಕು ಪಡೆಯುವುದೇ ನಮ್ಮ ಧ್ಯೇಯವಾಗಬೇಕು
ಚುನಾವಣೆಯ ಅಬ್ಬರದ ನಡುವೆಯೇ ಈ ಬಾರಿ ಅಂಬೇಡ್ಕರ್ ಜಯಂತಿಯನ್ನು ಆಚರಿಸುವ ಸಂದರ್ಭ ಬಂದೊದಗಿದೆ. ಎಲ್ಲವೂ ರಾಜಕೀಯಮಯವಾಗಿರುವಾಗ, ಅಂಬೇಡ್ಕರ್ ಅವರ ರಾಜಕೀಯ ಚಿಂತನೆಯನ್ನು ಬಿಂಬಿಸುವ ನೆನಕೆ ಅರ್ಥಪೂರ್ಣವಾಗುತ್ತದೆ. ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ 'ಸುಪ್ರಸಿದ್ಧ ಭಾಷಣಗಳು' ಗುಚ್ಛವನ್ನು ಡಾ. ಸರಜೂ ಕಾಟ್ಕರ್ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. 'ಯಾಜಿ' ಪ್ರಕಾಶನ ಸಂಸ್ಥೆ ಇದನ್ನು ಹೊರತಂದಿದೆ. ದಲಿತರು ಹೊಂದಿರಬೇಕಾದ ರಾಜಕೀಯ ಜಾಗೃತಿಯನ್ನು ವಿವರಿಸುವ ಅಧ್ಯಾಯವೊಂದು ಇಲ್ಲಿದೆ. ಇದು 1933ರ ಮಾರ್ಚ್ 4ರಂದು ಮುಂಬೈಯಲ್ಲಿ ಮಾಡಿದ ಭಾಷಣ.
---
ನನಗಿಂದು ಈ ಕಾರ್ಯಕ್ರಮದಲ್ಲಿ ಮಾನಪತ್ರ ನೀಡಲಾಗಿದೆ. ಅದು ಎಷ್ಟರಮಟ್ಟಿಗೆ ಯೋಗ್ಯವಿದೆಯೆಂದು ನನಗೆ ಗೊತ್ತಿಲ್ಲ. ನೀವು ನಿಮ್ಮ ಪ್ರೀತಿಯಿಂದ ನನ್ನನ್ನು ದೇವರ ಸಮಾನ ಮಾಡಿರುವಿರಿ. ಆದರೆ ಇದು ಸರಿಯಲ್ಲ. ಬೇರೆಯವರನ್ನು ಪ್ರೀತಿಯಿಂದ ದೇವರ ಸಮಾನ ಮಾಡಿ ಅವರ ಮೇಲೆ ಜವಾಬ್ದಾರಿ ಹೊರೆಸಿ ನೀವು ಕರ್ತವ್ಯವಿಮುಖರಾಗುವುದು ಸಾಧ್ಯವಿಲ್ಲ. ಇಂಥ ಪ್ರವೃತ್ತಿಯಿಂದಲೇ ನಮ್ಮ ಸಮಾಜ ನಾಶವಾಗಿದೆ. ಆದ್ದರಿಂದ ಭಾವಮುಕ್ತರಾಗಿ ಒಬ್ಬರ ಮೇಲೆ ಜವಾಬ್ದಾರಿ ಹೊರೆಸಿ ಶಕ್ತಿಹೀನರಾಗುವುದು ಸಮಾಜದ ಪ್ರಗತಿಗೆ ಆತಂಕವಾಗಬಹುದು. ನಮ್ಮ ಶಕ್ತಿ ಕುಂದಲು ಕಾರಣ ಈ ದೇವರುಗಳು.
ಬೇರೆ ದೇಶಗಳಲ್ಲಿ ತಮ್ಮ ಸಮಾಜದ ಮೇಲೆ ಅನ್ಯಾಯವಾದರೆ ಎಲ್ಲರೂ ತಮ್ಮ ಶಕ್ತಿ ಒಂದುಗೂಡಿಸಿ ಅನ್ಯಾಯದ ವಿರುದ್ಧ ಹೋರಾಡಿ ಸಮಾಜದ ಪ್ರಗತಿಗೆ ನಾಂದಿ ಹಾಕುತ್ತಾರೆ. ಆದರೆ ಭಾರತದಲ್ಲಿ ಮಾತ್ರ ಸಮಾಜದ ಮೇಲೆ ಸಂಕಟ ಬಂದಾಗ ಅಥವಾ ಪ್ರಗತಿಗೆ ತೊಂದರೆ ಆದಾಗದೇವರು ನಮ್ಮ ಉದ್ಧಾರಕ್ಕಾಗಿ ಭಾರತದಲ್ಲಿ ಜನ್ಮ ತಾಳುತ್ತಾನೆಂದು ಮತ್ತು ತಮ್ಮ ಸಂಕಟ ದೂರ ಮಾಡುತ್ತಾನೆಂದು ಧರ್ಮ ಹೇಳುತ್ತದೆ.
ಹಿಂದೂ ಧರ್ಮ ಪುರಾತನ ಧರ್ಮ. ಗ್ರೀಕ್, ರೋಮ್ ಮುಂತಾದ ಪ್ರಸಿದ್ಧ ರಾಷ್ಟ್ರಗಳು ಅಸ್ತವಾದರೂ ಹಿಂದೂ ಧರ್ಮ ಈ ಹೊತ್ತಿಗೂ ಜೀವಂತವಾಗಿದೆಯೆಂದು ಹಿಂದೂಗಳು ಜಂಬ ಕೊಚ್ಚಿಕೊಳ್ಳುತ್ತಾರೆ. ಕೇವಲ ಜೀವಂತವಾಗಿರುವುದಕ್ಕೆ ಕವಡೆಯ ಬೆಲೆಯೂ ಇಲ್ಲ ಅಂತ ಅವರಿಗೆ ಗೊತ್ತಿಲ್ಲ. ಜೀವಂತವಾಗಿರುವವನು ಮರ್ಯಾದೆಯಿಂದ ಜೀವಂತವಾಗಿರುತ್ತಾನೋ ಹೇಗೆ ತಿಳಿದುಕೊಳ್ಳಬೇಕು. ಹಾಗಾದರೆ ಹಿಂದೂ ಸಮಾಜ ಜೀವಂತವಾಗಿದ್ದು ಯಾವ ದಿಗ್ವಿಜಯ ಗಳಿಸಿದೆ? ಎರಡನೆಯವರ ದಾಸ್ಯತ್ವದಲ್ಲಿ ತೊಳಲಾಡುವುದನ್ನು ಬಿಟ್ಟು ಅದು ಮಾಡಿದ್ದಾದರೂ ಏನು? ಹೀಗೆ ಜೀವಂತವಾಗಿರುವುದರಲ್ಲಿ ಅರ್ಥವಿದೆಯೇ?
ಈ ಜಗತ್ತಿನಲ್ಲಿ ಈಶ್ವರನಿದ್ದಾನೋ ಇಲ್ಲವೋ ಎಂಬ ಬಗ್ಗೆ ವಿಚಾರ ಮಾಡುವುದು ಅನಾವಶ್ಯಕ. ಆದರೆ ಜಗತ್ತಿನಲ್ಲಿಯ ಪ್ರತಿಕ್ಷಣಕ್ಕೂ ಆಗುವ ಆಗುಹೋಗುಗಳಿಗೆ ಮಾತ್ರ ಮನುಷ್ಯನೇ ಕಾರಣನಾಗಿರುತ್ತಾನೆ. ಸಮಾಜದಲ್ಲಿಯ ಬೆರಳೆಣಿಸುವಷ್ಟು ಶ್ರೀಮಂತರು ಸುಶಿಕ್ಷಿತರೂ, ಸ್ವಾರ್ಥಿಗಳೂ, ಬಹುಜನ ಸಮಾಜವನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡಿರುತ್ತಾರೆ ಮತ್ತು ಅವರ ಶೋಷಣೆ ಮಾಡುತ್ತಾರೆ. ದೇವರೆಂಬ ಹೆಸರಿನಲ್ಲಿ ನಿಮ್ಮನ್ನು ಸುಲಿಯುತ್ತಿದ್ದಾರೆ.ಇದರಿಂದ ಹೊರಬರಬೇಕಾದರೆ ನಿಮ್ಮ ಉದ್ಧಾರ ನೀವೇ ಮಾಡಿಕೊಳ್ಳಬೇಕೇ ಹೊರತು ಬೇರೆ ಯಾರೂ ಅವತರಿಸುವುದಿಲ್ಲ. ನಮ್ಮ ಸಮಾಜದಲ್ಲಿ ಚಳುವಳಿಯು ನಾಲ್ಕು ದಿಕ್ಕಿನಲ್ಲಿ ಸಾಗಿದ್ದು ಕಂಡು ನನಗೆ ಸಂತೋಷವಾಗಿದೆ. ನಿಮ್ಮ ಮುಂದಿನ ಭವಿತವ್ಯ ಕೇವಲ ನಿಮ್ಮ ರಾಜಕೀಯ ಹಕ್ಕು ಪಡೆಯುವುದರ ಮೇಲೆ ಅವಲಂಬಿಸಿರುತ್ತದೆ. ಪಂಡರಪೂರ, ತ್ರಯಂಬಕೇಶ್ವರ, ಹರಿದ್ವಾರ, ಕಾಶಿಗಳ ಯಾತ್ರೆ ಕೈಗೊಳ್ಳುವುದರಿಂದ ನಿಮ್ಮ ಉದ್ಧಾರ ಆಗಲಾರದು. ಸಾವಿರಾರು ವರ್ಷಗಳಿಂದ ನಿಮ್ಮ ಪೂರ್ವಜರು ಇದನ್ನು ಮಾಡುತ್ತ ಬಂದಿದ್ದರೂ ಅವರ ಪರಿಸ್ಥಿತಿ ಸ್ವಲ್ಪವೂ ಬದಲಾಗಲಿಲ್ಲ. ಇಂದಿಗೂ ಅವರು ಹರಕು ಬಟ್ಟೆ ಮತ್ತು ಅನ್ನಕ್ಕಾಗಿ ದನಕರುಗಳಿಗಿಂತಲೂ ದೀನ ಪರಿಸ್ಥಿತಿಯಲ್ಲಿ ಬಾಳುತ್ತಿದ್ದಾರೆ. ಯಾವುದಾದರೊಂದು ಔಷಧದಿಂದ ರೋಗ ಹೋಗದಿದ್ದಲ್ಲಿ ಬೇರೆ ಡಾಕ್ಟರ ಕಡೆಯಿಂದ ಬೇರೆ ಔಷಧ ಪಡೆದುಕೊಳ್ಳುವುದು ಬೇಡವೇ?
ಹಾಗಾದರೆ ಪರಿವರ್ತನೆಯ ಮಾರ್ಗ ಯಾವುದೆಂದರೆ ಅದು ರಾಜಕಾರಣ. ಕಾಯ್ದೆ ರಚಿಸುವ ಸಾಮರ್ಥ್ಯ ನಿಮ್ಮಲ್ಲಿ ಬರಬೇಕು. ನೀವು ತುಂಡು ಬಟ್ಟೆಗಾಗಿ, ತುತ್ತು ಅನ್ನಕ್ಕಾಗಿ ಪರಿತಪಿಸುತ್ತಾ ಇದ್ದೀರಿ. ಇನ್ನು ಮುಂದೆ ರಾಜಕೀಯ ಹಕ್ಕು ಪಡೆದು ಕಾನೂನು ಮಾಡುವ ಶಕ್ತಿ ಪಡೆದು, ಕಾನೂನು ಮೂಲಕ ಶಿಕ್ಷಣ, ಉದ್ಯೋಗ, ಊಟ, ಬಟ್ಟೆಯ ವ್ಯವಸ್ಥೆ ಮಾಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಅದಕ್ಕಾಗಿ ರಾಜಕೀಯ ವ್ಯವಸ್ಥೆ ಮಾಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಅದಕ್ಕಾಗಿ ರಾಜಕೀಯ ಹಕ್ಕು ಪಡೆಯಲು ನೀವು ಸಂಪೂರ್ಣ ಶಕ್ತಿ ಮತ್ತು ವೇಳೆ ವ್ಯಯಿಸಬೇಕಾಗಿದೆ.
ನಿನ್ನೆ ಒಬ್ಬರು ಕಾಯಿದೆ ಭಂಗ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಸೆರೆಮನೆ ಸೇರಿದ್ದರು. ಅವರು ಗಾಂಧೀಜಿಯ ಕಾಯಿದೆ ಭಂಗ ಚಳವಳಿ ತಪ್ಪು ಎಂದು ಪ್ರತಿಪಾದಿಸಿ ಸರ್ಕಾರದ ಕ್ಷಮೆಕೋರಿ ಸೆರಮನೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನು ಮುಂದೆ ತಾನು ಕಾಯಿದೆ ಭಂಗ ಚಳುವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಶ್ರೀ ರಾಜಗೋಪಾಲಾಚಾರ್ಯರು ಹಾಗೂ ಕೇಸರಿ ಪತ್ರಿಕೆಯ ಶ್ರೀ ಕೇಳಕರ ಇವರು ಪರ್ಯಾಯ ಸೂತ್ರ ಸಮಂಜಸವಿದ್ದರೆ ಸ್ವೀಕರಿಸುವುದಾಗಿ ಹೇಳಿದ್ದಾರೆ.
ಇದನ್ನು ನಾನು ನಿಮಗೆ ಏಕೆ ಹೇಳುತ್ತಿದ್ದೇನೆಂದರೆ, ಅವರು ಈ ಹಿಂದಿನ ತಮ್ಮ ವಿಚಾರ ಬದಲಿಸಿದ್ದಾರೆ. ಇದಕ್ಕೆ ಕಾರಣ ಕಾಂಗ್ರೆಸ್ ಕಾಯಿದೆ ಭಂಗ ಚಳವಳಿ ಮುಂದುವರಿದರೆ ಬೇರೆ ಸಮಾಜದವರು ಅದರಿಂದ ಲಾಭ ಪಡೆಯಬಹುದೆಂಬ ಅವರ ಶಂಕೆ. ಅಂದರೆ ಕಾಂಗ್ರೆಸ್ಸಿಗರ ಕಾಯಿದೆ ಭಂಗ ಚಳವಳಿಯು ಕೇವಲ ಅವರ ಹಿತಕ್ಕಾಗಿ ಇತ್ತೆಂದರೆ ತಪ್ಪಾಗಲಾರದು.
ಇನ್ನು ಮುಂದೆ ಭಾರತದಲ್ಲಿಯ ಯುದ್ಧ ಬ್ರಿಟಿಷರ ಹಾಗೂ ಭಾರತೀಯರಲ್ಲಿ ಅಲ್ಲ. ಈ ಯುದ್ಧ ಮುಂದುವರೆದವರು ಹಾಗೂ ಹಿಂದುಳಿದವರ ಮಧ್ಯದಲ್ಲಿ ಎಂದು ನೀವು ಭಾವಿಸಬೇಕು. ಹಿಂದುಳಿದವರು ಬಹುಸಂಖ್ಯಾಕರಾಗಿರುವುದರಿಂದ ಮುಂದುವರೆದವರಿಂದ ನಮಗೆ ತೊಂದರೆ ಇಲ್ಲ. ಆದರೆ ಹಿಂದುಳಿದವರು ಕೇವಲ ಸಂಖ್ಯೆಯಲ್ಲಿ ಬಹುಜನರು ಇರುವುದರಿಂದ ಉಪಯೋಗವಿಲ್ಲ. ಅವರು ಜಾಗೃತ, ಸುಶಿಕ್ಷಿತ ಮತ್ತು ಸ್ವಾಭಿಮಾನಿಗಳಾಗಿದ್ದರೆ ಮಾತ್ರ ಸಮರ್ಥರಾಗಬಹುದು. ಇಲ್ಲವಾದರೆ ಒಬ್ಬ ಗಿರಣಿ ಅಥವಾ ಶ್ರೀಮಂತ ನಿಮಗೆ ಲಂಚ ಕೊಟ್ಟಾಗ ನೀವು ನಿಮ್ಮ ಮತ ಮಾರಿಕೊಂಡರೆ ನಿಮ್ಮ ಸಮಾಜದ ವೈಶಿಷ್ಟ್ಯ ನಾಶವಾಗುವುದು. ನಮ್ಮ ವರ್ಗದ ಜನರ ಹೊರತು ಬೇರೆ ಯಾರೂ ನಮ್ಮ ಸಮಾಜದ ಉದ್ಧಾರ ಮಾಡಲಾರರು. ಅದಕ್ಕಾಗಿ ಹಿಂದುಳಿದ ವರ್ಗದವರಲ್ಲಿ ಈ ಭಾವನೆ ಜಾಗೃತವಾಗಿಡುವುದು ಅವಶ್ಯ. ನಮ್ಮ ನಮ್ಮೊಳಗಿನ ಭೇದಗಳನ್ನು ಮರೆತು ಎಲ್ಲರೂ ಕೂಡಿ ಯತ್ನಿಸಬೇಕು.