ಭಾರತದಲ್ಲಿ ಸೆಕ್ಯುಲರಿಸಂ ಕಥನದ ಸಮಸ್ಯೆ ಏನು?
ಅಲ್ಪಸಂಖ್ಯಾತತ್ವವನ್ನು ನಿರ್ಣಯಿಸಲು ಜನಸಂಖ್ಯೆಯನ್ನು ಪರಿಗಣಿಸಬೇಕಾದ ಭೌಗೋಳಿಕ ವ್ಯಾಪ್ತಿ ಏನು, ಎಷ್ಟು ಎಂಬ ಪ್ರಶ್ನೆಯೂ ಇದೆ. ಒಂದು ಪಟ್ಟಣವೇ, ಜಿಲ್ಲೆಯೇ, ರಾಜ್ಯವೇ, ದೇಶವೇ ಅಥವಾ ಕಾಳಜಿ, ಸಂಸ್ಕೃತಿ ಮತ್ತು ಸಂಘರ್ಷಗಳು ಜಾಗತೀಕರಣಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಇಡೀ ಜಗತ್ತೇ? ಇಲ್ಲಿ ಯಾವುದನ್ನು ಪರಿಗಣಿಸಬೇಕು? ಹಿಂದುಗಳು ಎನ್ನಲಾಗುವ ಜಾತಿಗಳೊಳಗೆ ಸಾಂಸ್ಕೃತಿಕವಾಗಿ ಅಗಾಧ ಅಂತರಗಳಿವೆ.
'ಸೆಕ್ಯುಲರಿಸಂ" ಎಂಬ ಪರಿಕಲ್ಪನೆಯು ಮೂಲತಃ ಯುರೋಪಿನದ್ದು. ಅದು ಭಾರತದಲ್ಲಿ ಅನುಷ್ಠಾನಗೊಂಡ ಬಗೆ ಬೇರೆಯೇ ಆಗಿದೆ. ವಸಾಹತು ಆಡಳಿತಕ್ಕಿಂತ ಪೂರ್ವದಲ್ಲಿ ಅಥವಾ ಸ್ವಾತಂತ್ರ್ಯ ಸಿಗುವವರೆಗೂ ಭಾರತದಲ್ಲಿ ಒಂದು ಮಟ್ಟದ ಸಹಬಾಳ್ವೆ ಇತ್ತಾದರೂ ಆಗ ಪ್ರಭುತ್ವ ನಿರ್ದೇಶಿತ ಸೆಕ್ಯುಲರಿಸಂ ಇರಲಿಲ್ಲ. ನೆಹರೂ ಕಾಲದಿಂದಲೇ ಸೆಕ್ಯುಲರಿಸಂ ಎಂಬುದನ್ನು ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಜೊತೆಗೆ ತಳಕು ಹಾಕಲಾಯಿತು. ಆ ಮೂಲಕ ಎಲ್ಲ ಮತಧರ್ಮಗಳನ್ನು ಸಮಾನವಾಗಿ ಕಾಣುವುದು ಅಥವಾ ಸಮಾನ ದೂರವನ್ನು ಕಾಯ್ದುಕೊಳ್ಳುವುದು ಎಂಬಂಥ ಮೇಲು ಸ್ತರದ ಕಲ್ಪನೆಯ ಜೊತೆಗೇ ವಿವಿಧ ಧರ್ಮಗಳಿಗೆ ಸರ್ಕಾರದ ನೀತಿ ನಿರೂಪಣೆಗೆ ಸಂಬಂಧಿಸಿದಂತೆ, ಪ್ರತ್ಯೇಕ ರೀತಿಯ ಅವಕಾಶ ಹಾಗೂ ಸ್ಥಾನಮಾನಗಳನ್ನು ನೀಡಲಾಯಿತು. ಸೆಕ್ಯುಲರ್ ಎಂಬ ಪದವನ್ನು ಸಂವಿಧಾನದಲ್ಲಿ ಆನಂತರ ಸೇರಿಸಲಾಯಿತಾದರೂ ಹಾಗೆ ಸೇರಿಸುವುದಕ್ಕೆ ಮೊದಲು ಇಲ್ಲಿ ಇದ್ದುದು ಕೂಡ ಈಗಿರುವಂಥದ್ದೇ ಜಾತ್ಯತೀತ ಪ್ರಜಾಪ್ರಭುತ್ವ. ಒಟ್ಟಿನಲ್ಲಿ ಕಳೆದ ಆರು ದಶಕಗಳಿಂದಲೂ ಪ್ರಜಾಪ್ರಭುತ್ವವು ಭಾರತದಲ್ಲಿ ಯಶಸ್ವಿಯಾಗಿ ಅಸ್ತಿತ್ವದಲ್ಲಿದ್ದರೂ ಸೆಕ್ಯುಲರ್ ಅನ್ನುವ ನೆಲೆಯಲ್ಲಿ ಅದು ನಿರೀಕ್ಷಿತ ಮಟ್ಟದ ಯಶಸ್ಸನ್ನು ಪಡೆದಿಲ್ಲ ಎನ್ನುವುದು ಸ್ಪಷ್ಟ. ಯಾಕೆಂದರೆ ನಮ್ಮ ದೇಶದಲ್ಲಿ ಕೋಮುವಾದ, ಕೋಮುಗಲಭೆಗಳು, ಕೋಮುವಾದೀ ರಾಜಕರಣ ಇವೆಲ್ಲ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದನ್ನು ಕಾಣುತ್ತೇವೆ. ಕೋಮುವಾದಿ ಎನ್ನಲಾಗುವ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲುತ್ತವೆ. ನಮ್ಮ ಪ್ರಜಾಪ್ರಭುತ್ವದಲ್ಲಿ ಹೀಗೆ ಜಾತ್ಯತೀತತೆ ಸೋಲುತ್ತಿರುವುದು ಯಾಕೆ ಎಂದು ಚಿಂತಿಸುವುದು ಅಗತ್ಯ. "ಸೆಕ್ಯಲರಿಸಮ್ಮಿನ ಅಸ್ತಿತ್ವದ ಹೊರತಾಗಿಯೂ ಕೋಮುವಾದ ಹೆಚ್ಚುತ್ತಿದೆಯೇ ಅಥವಾ ನಮ್ಮಲ್ಲಿರುವ ವಿಶಿಷ್ಟ ಸೆಕ್ಯಲರಿಸಮ್ಮೇ ಕೋಮುವಾದವನ್ನು ಸೃಷ್ಟಿಸುತ್ತದೆಯೇ?" ಎಂಬ ಪ್ರಶ್ನೆಗಳನ್ನು ಈಗ ಕೇಳಿಕೊಳ್ಳಬೇಕಾಗಿದೆ.
ನಮ್ಮ ದೇಶಕ್ಕೇ ವಿಶಿಷ್ಟವಾದ ಜಾತ್ಯತೀತತೆಯಲ್ಲಿ ಮುಖ್ಯವಾಗಿ ಎರಡು ಚರ್ಚಾರ್ಹ ಸಂಗತಿಗಳಿವೆ. ಮೊದಲನೆಯದಾಗಿ, ಈ ದೇಶದಲ್ಲಿ ಪ್ರಭುತ್ವವು ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣಲು ಸಾಧ್ಯವಿಲ್ಲದ ಸ್ಥಿತಿಯಿದೆ. ಯಾಕೆಂದರೆ ಹಿಂದುಗಳನ್ನು ಒಟ್ಟಾಗಿ ಒಂದು ಧರ್ಮವಾಗಿ ಪರಿಗಣಿಸಿದರೆ, ಹಿಂದುಗಳ ಮತ್ತು ಇತರ ಧರ್ಮಗಳ ಜನಸಂಖ್ಯೆಯಲ್ಲಿರುವ ಅಗಾಧ ವ್ಯತ್ಯಾಸದಿಂದಾಗಿ ಸಾರ್ವಜನಿಕ ಅವಕಾಶಗಳಲ್ಲಿ ಹಿಂದುಗಳೇ ಹೆಚ್ಚಿನ ಸಂಖ್ಯೆಯಲ್ಲಿ ತುಂಬಿರುವುದು ಸಹಜ. ಅಷ್ಟೇ ಅಲ್ಲದೆ, ವಿವಿಧ ಧರ್ಮಗಳ ಮೂಲಭೂತ ನಂಬಿಕೆಗಳು ಭಿನ್ನವಷ್ಟೇ ಅಲ್ಲ, ಪರಸ್ಪರ ವಿರುದ್ಧವೂ ಇವೆ. ಉದಾಹರಣೆಗೆ ಹಿಂದುಗಳನ್ನು ಮತ್ತು ಮುಸ್ಲಿಮರನ್ನು ಪರಿಗಣಿಸಿದರೆ ಹಿಂದುಗಳು ಸೃಷ್ಟಿಯ ಎಲ್ಲವನ್ನೂ ಪವಿತ್ರವೆಂದು ಪರಿಗಣಿಸಿ ಪೂಜಿಸಬಲ್ಲರು. ಮುಸ್ಲಿಮರು ಸೃಷ್ಟಿಕರ್ತನನ್ನು ಮಾತ್ರ ಪ್ರಾರ್ಥಿಸುತ್ತಾರೆ. ಮುಸ್ಲಿಮರಲ್ಲಿ ಮೂರ್ತಿಪೂಜೆ ಸಂಪೂರ್ಣ ನಿಷಿದ್ಧ. ಹಿಂದುಗಳಲ್ಲಿ ಆಚರಣೆಗಳು ತುಂಬಾ ಹೆಚ್ಚು. ಅವುಗಳನ್ನು ಸಾರ್ವಜನಿಕ ಅವಕಾಶಗಳಿಗೆ ಹಾಗೂ ಸ್ಥಳಗಳಿಗೆ ತರುವ ಪ್ರವೃತ್ತಿಯೂ ಹೆಚ್ಚು. ಇದರಿಂದಾಗಿಯೇ ಕೆಲವೊಮ್ಮೆ ಕಿರಿಕಿರಿಗಳು ಉಂಟಾಗುವುದಿದೆ. ಹಿಂದುಗಳ ಎಷ್ಟೋ ಆಚರಣೆ, ನಂಬಿಕೆಗಳನ್ನು ವೈಯಕ್ತಿಕ, ಸಾಮಾಜಿಕ, ಧಾರ್ಮಿಕ, ರಾಷ್ಟ್ರೀಯ ಎಂದು ವಿಭಾಗಿಸಲು ಸಾಧ್ಯವಾಗದ ಸ್ಥಿತಿಯಿದೆ.
ಯಾವುದೇ ನಿರ್ದಿಷ್ಟ ಧರ್ಮಗ್ರಂಥ ಹಿಂದುಗಳ ದೈನಂದಿನ ವ್ಯಾವಹಾರಿಕ ಬದುಕನ್ನು ನಿಯಂತ್ರಿಸುವುದಿಲ್ಲ. ನಂಬಿಕೆ, ಆಚರಣೆಗಳಲ್ಲಿ ಕಾಲಕಾಲಕ್ಕೆ ಬದಲಾವಣೆ ಹಿಂದುಗಳಿಗೆ ಸಹಜ. ಸಾಂಸ್ಕೃತಿಕ ಅನನ್ಯತೆಯ ಅತಿಮುಖ್ಯ ಅಂಶವಾದ ಆಹಾರ ಪದ್ಧತಿಯನ್ನೇ ಬ್ರಾಹ್ಮಣರು ಚರಿತ್ರೆಯ ಯಾವುದೋ ಕಾಲಘಟ್ಟದಲ್ಲಿ ಬದಲಾಯಿಸಿ ಮಾಂಸಹಾರ ತ್ಯಜಿಸಿದ್ದನ್ನು ಉದಾಹರಣೆಯಾಗಿ ಪರಿಗಣಿಸಬಹುದು. ಅದೇ ರೀತಿ ಆಧುನಿಕ ಬ್ರಾಹ್ಮಣರನೇಕರು ಮದ್ಯ-ಮಾಂಸ ಸೇವಿಸುವ ಬಗ್ಗೆ ಮುಜುಗರವಿಲ್ಲದೇ ಹೇಳಿಕೊಳ್ಳುವುದು ಅಥವಾ ಸಮಾಜಶಾಸ್ತ್ರಜ್ಞರು ಸಂಸ್ಕೃತೀಕರಣ ಎಂದು ಕರೆಯುವ ಪ್ರಕ್ರಿಯೆ (ಈ ಸಂಸ್ಕೃತೀಕರಣ ಪರಿಕಲ್ಪನೆ ಇಂದು ಚರ್ಚಾರ್ಹವೆನಿಸಿದೆ) ಕೂಡ ಹಿಂದುಗಳು ಬದಲಾವಣೆಗೆ ಒಳಗಾಗುತ್ತಿರುವುದಕ್ಕೆ ಬೇರೊಂದು ಬಗೆಯಲ್ಲಿ ಉದಾಹರಣೆಯಾದೀತು. ಅಲ್ಲದೆ ಸರ್ಕಾರವು ಕಾಲದಿಂದ ಕಾಲಕ್ಕೆ ತರುವ ಪ್ರಗತಿಪರ ಕಾನೂನುಗಳು, ಬದಲಾಗಲು ಸಿದ್ಧರಿಲ್ಲದ ಹಿಂದುಗಳ ಬದುಕಿನ ರೀತಿ ನೀತಿಗಳನ್ನು ಬದಲಾಯಿಸುತ್ತಾ ಬಂದಿವೆ. ಉದಾಹರಣೆಗೆ ಅಸ್ಪೃಶ್ಯತೆಯು ನಿವಾರಣೆಯಾಗಿಲ್ಲದಿದ್ದರೂ ಹಿಂದೆ ಇದ್ದುದಕ್ಕಿಂತ ಗಣನೀಯವಾಗಿ ಕಡಿಮೆಯಾಗಿದೆ.
ಮೇಲಿನ ಅಂಶಗಳಿಗೆ ಹೋಲಿಸಿದರೆ ಮುಸ್ಲಿಮರ ವೈಯಕ್ತಿಕ ಕಾನೂನುಗಳು ಅಬಾಧಿತವಾಗಿವೆ. ಹಿಂದುಗಳಲ್ಲಿ ಬೇಕಾದಷ್ಟು ಒಳವಿಮರ್ಶಕರಿದ್ದರೆ ಮುಸ್ಲಿಮರಲ್ಲಿ ಅಂಥವರ ಪ್ರಮಾಣ ತೀರಾ ಕಡಿಮೆ. ಆಧುನಿಕತೆಯನ್ನು ಸ್ವೀಕರಿಸುವ ವೇಗವನ್ನು ನೋಡಿದರೆ ಹಿಂದುಗಳು ಮುಂದಿದ್ದರೆ ಮುಸ್ಲಿಮರು ನಿಧಾನವಾಗಿದ್ದಾರೆ. ಗ್ರಹಣದ ಅವಧಿಯಲ್ಲಿ ತೆರೆದ ಹೋಟೆಲುಗಳನ್ನು ಮತ್ತು ಅಲ್ಲಿ ಆಹಾರ ಸೇವಿಸುವ ಹಿಂದುಗಳನ್ನು ಯಥೇಚ್ಛವಾಗಿ ಕಾಣಬಹುದು. ಆದರೆ ಉಪವಾಸದ ಮಾಸದಲ್ಲಿ ಬಹಿರಂಗವಾಗಿ ಆಹಾರ ಸೇವಿಸುವ ಮುಸ್ಲಿಮರನ್ನು ಕಾಣುವುದು ಕಷ್ಟ. ಸಾಚಾರ್ ವರದಿಯು ಮುಸ್ಲಿಮರಿಗೆ ಆಧುನಿಕ ಶಿಕ್ಷಣದ ಅವಕಾಶವನ್ನು ನಿರಾಕರಿಸಲಾಗುತ್ತದೆ ಎಂಬ ಕಡೆಗೆ ಒತ್ತು ನೀಡುತ್ತದೆಯೇ ಹೊರತು ಮುಸ್ಲಿಮರು ಆಧುನಿಕ ಅವಕಾಶಗಳನ್ನು ಧಾರ್ಮಿಕ ಕಾರಣಗಳಿಂದಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಕಡೆಗೆ ವಿಶೇಷ ಗಮನ ನೀಡುವುದಿಲ್ಲ. ಈ ಇಪ್ಪತ್ತೊಂದನೇ ಶತಮಾನದಲ್ಲಿ ಕೂಡ ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ಮಹಿಳಾ ಕಾಲೇಜುಗಳನ್ನು ತೆರೆಯಬೇಕಾದ ಸ್ಥಿತಿಯಿದೆ. ಅಂಗಡಿಗಳಲ್ಲಿ ಅಥವಾ ಕಚೇರಿಗಳಲ್ಲಿ ದುಡಿಯಲು ಬಡ ಹಿಂದು ಯುವತಿಯರಿಗೆ ಇರುವಷ್ಟು ಅವಕಾಶವನ್ನು ಮುಸ್ಲಿಂ ಹುಡುಗಿಯರಿಗೆ ಆ ಸಮಾಜವೇ ನೀಡುತ್ತಿಲ್ಲ. ಅರ್ಧದಷ್ಟಿರುವ ಮಹಿಳೆಯರಿಗೆ ಒಂದು ಸಮುದಾಯವು ಹೊರಗಡೆ ದುಡಿಯುವ ಅವಕಾಶಗಳನ್ನು ನಿರಾಕರಿಸಿದರೆ, ಅಂಥ ಸಮುದಾಯದ ಬಡತನಕ್ಕೆ ಇತರ ಸಮುದಾಯಗಳನ್ನು ಹೊಣೆಗಾರರನ್ನಾಗಿ ಮಾಡಿ ದಂಡ ತೆರುವಂತೆ ಹೇಳುವ ರೀತಿಯಲ್ಲಿ ಸಾಚಾರ್ ಸಮಿತಿ ಶಿಫಾರಸು ಮಾಡುತ್ತದೆ.
ಕರಾವಳಿಯಲ್ಲಿ ಹಿಂದು ಹುಡುಗಿ ಮತ್ತು ಮುಸ್ಲಿಂ ಹುಡುಗರ ಸ್ನೇಹದ ಬಗ್ಗೆ ನೈತಿಕ ಪೋಲಿಸ್ಗಿರಿಯ ಆಳಕ್ಕೆ ಹೋದರೆ ಈ ರೀತಿಯ ಆಧುನಿಕತೆಯ ಸ್ವೀಕರಣೆಯಲ್ಲಿ ಇರುವ ಅಸಮತೋಲನವೇ ಒಂದು ಕಾರಣವಾಗಿ ಕಂಡೀತು.
ನಮ್ಮ ಸೆಕ್ಯುಲರಿಸಂ ಕಥನದ ಇನ್ನೊಂದು ಸಮಸ್ಯೆಯೆಂದರೆ, ಅಲ್ಪಸಂಖ್ಯಾತ ಬಹುಸಂಖ್ಯಾತ ಎಂಬ ವರ್ಗೀಕರಣ. ಅಲ್ಪಸಂಖ್ಯಾತತ್ವವನ್ನು ನಿರ್ಣಯಿಸಲು ಜನಸಂಖ್ಯೆಯನ್ನು ಪರಿಗಣಿಸಬೇಕಾದ ಭೌಗೋಳಿಕ ವ್ಯಾಪ್ತಿ ಏನು, ಎಷ್ಟು ಎಂಬ ಪ್ರಶ್ನೆಯೂ ಇದೆ. ಒಂದು ಪಟ್ಟಣವೇ, ಜಿಲ್ಲೆಯೇ, ರಾಜ್ಯವೇ, ದೇಶವೇ ಅಥವಾ, ಕಾಳಜಿ, ಸಂಸ್ಕೃತಿ ಮತ್ತು ಸಂಘರ್ಷಗಳು ಜಾಗತೀಕರಣಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಇಡೀ ಜಗತ್ತೇ? ಇಲ್ಲಿ ಯಾವುದನ್ನು ಪರಿಗಣಿಸಬೇಕು? ಹಿಂದುಗಳು ಎನ್ನಲಾಗುವ ಜಾತಿಗಳೊಳಗೆ ಸಾಂಸ್ಕೃತಿಕವಾಗಿ ಅಗಾಧ ಅಂತರಗಳಿವೆ. ಹಿಂದುಗಳನ್ನು ಏಕರೂಪ ಘಟಕವಾಗಿ ಪರಿಗಣಿಸಬಾರದೆಂದು ಎಲ್ಲ ಪ್ರಗತಿಪರರೂ ಹೇಳುತ್ತಾರೆ. ವಾಸ್ತವವಾಗಿ ಹಿಂದುಗಳು ಒಂದು ಎಂದು ಹೇಳುವುದಕ್ಕಾಗಿಯೇ ಸಂಘ ಪರಿವಾರವು ಎಡಪಂಥೀಯರ ಕಟು ಟೀಕೆಗೆ ಗುರಿಯಾಗುತ್ತಿದೆ. ಹಿಂದುಗಳಲ್ಲಿ ಮೂರನೇ ಒಂದಂಶಕ್ಕಿಂತಲೂ ಕಡಿಮೆ ಜನರು ತಥಾಕಥಿತ ಹಿಂದುತ್ವವಾದೀ ಪಕ್ಷಗಳನ್ನು ಬೆಂಬಲಿಸಬಹುದು ಅಷ್ಟೇ. ಹಾಗಿರುವಾಗ ಹಿಂದುಗಳನ್ನು ಒಂದು ಬಹುಸಂಖ್ಯಾತ ಗುಂಪು ಎಂದು ಪರಿಗಣಿಸಲು ಹೇಗೆ ಸಾಧ್ಯ? ಒಂದು ಬಹುಸಂಖ್ಯಾತ ಗುಂಪು ಇಲ್ಲದಿದ್ದಲ್ಲಿ ಅಲ್ಪಸಂಖ್ಯಾತ ಎಂಬ ಪರಿಕಲ್ಪನೆಗೆ ಅವಕಾಶವೆಲ್ಲಿ? ಭಾರತದಲ್ಲಿ ಎಲ್ಲರೂ ಅಲ್ಪಸಂಖ್ಯಾತರೇ. ಹೀಗಾಗಿ ಅಸಂಖ್ಯ ಅಸ್ಮಿತೆಗಳಿರುವ ನಮ್ಮಲ್ಲಿ ಅಲ್ಪಸಂಖ್ಯಾತ-ಬಹುಸಂಖ್ಯಾತ ಎಂಬ ವಿಭಾಗವು ತೀರಾ ಕೃತಕ ಮತ್ತು ಅವೈಚಾರಿಕವಾದುದು. ಈ ವಿಭಾಗಕ್ರಮವೇ ಹಿಂದುಗಳ ನಡುವೆ ಒಂದು ಎಂಬ ಭಾವನೆಯನ್ನೂ ಮುಸ್ಲಿಮರ ಬಗ್ಗೆ ಅನ್ಯತೆಯ ಭಾವನೆಯನ್ನೂ ಸೃಷ್ಟಿಸುತ್ತದೆ. ಆದರೆ ಕೋಮುವಾದದ ಬಗ್ಗೆ ಬರೆಯುವ ಯಾವ ಲೇಖಕರೂ ಈ ರೀತಿಯ ವಿಭಾಗವನ್ನು ಮಾಡದೆ ಬಿಡುವುದಿಲ್ಲ.
ಈ ಹಿನ್ನೆಲೆಯಲ್ಲಿ ನೋಡಿದಾಗ, ಜಾತ್ಯತೀತರು ನಿಂತ ನೆಲೆ ಗಟ್ಟಿಯಾಗಿಲ್ಲದಿರುವುದೇ ಬಲಪಂಥೀಯ ಒಗ್ಗಟ್ಟಿನ ಎದುರು ಅಂಥ ಸೆಕ್ಯುಲರಿಸ್ಟ್ ಎಡಪಂಥೀಯರು ಒಂದಾಗಿ ನಿಲ್ಲಲು ಸಾಧ್ಯವಾಗದೆ ಇರಲು ಕಾರಣವಾಯಿತೇ ಎಂಬುದು ಚಿಂತನಾರ್ಹ ವಿಚಾರ. ಯಾಕೆಂದರೆ ಒಂದಂಕದ ಒಂದು ಪ್ರಶ್ನೆಗೆ ಸರಿಯುತ್ತರ ಒಂದೇ ಇರುತ್ತದೆ. ಆದರೆ ಸಾವಿರ ತಪ್ಪು ಉತ್ತರಗಳು ಇರಬಹುದು!
= ಡಾ. ಅಜಕ್ಕಳ ಗಿರೀಶ ಭಟ್
giriajakkala@yahoo.co.in