ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ರಾಜಕಾರಣಿಯಾಗಿ ಪ್ರಿಯಾಂಕ ಎಷ್ಟು ಪ್ರಭಾವಶಾಲಿ?

'ತಮ್ಮ ಸಹೋದರ ರಾಹುಲ್‌ಗಿಂತಲೂ ಜನರೊಂದಿಗೆ ಬೆರೆಯುವ, ಗುಂಪಿನಲ್ಲಿ ಒಂದಾಗುವ ಆಕರ್ಷಕ ಗುಣ ಪ್ರಿಯಾಂಕಾರಲ್ಲಿದೆ'..

Srinivasa Murthy VN
Updated On : 16 Apr 2014, 1:00 am

ಪ್ರಿಯಾಂಕ ಗಾಂಧಿ ರಾಜಕೀಯಕ್ಕೆ ಬರುತ್ತಾರಾ ಎನ್ನುವ ಚರ್ಚೆ ಚಿರಸ್ಥಾಯಿಯಾದದ್ದು. ಪ್ರಿಯಾಂಕ ಕೂಡ ತಮ್ಮ ಸಹೋದರ ರಾಹುಲ್‌ರಂತೆ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಹೇಳುತ್ತಾ ಬಂದಿರುವ ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರು ಕಾಲಕಾಲಕ್ಕೆ ನಿರಾಶೆಗೊಳುತ್ತಲೇ ಬಂದಿದ್ದಾರೆ. ಅವರ ಈ ಆಸೆಗೆ ಧನಾತ್ಮಕ ಮತ್ತು ಋಣಾತ್ಮಕ ಕಾರಣಗಳಿವೆ. ಋಣಾತ್ಮಕ ಕಾರಣವೇನೆಂದರೆ, ಸೋನಿಯಾ ಗಾಂಧಿಯವರ ಕೆಲವು ಆಪ್ತರು ಮತ್ತು ಕಾಂಗ್ರೆಸ್‌ನ ಹಿರಿಯ ತಲೆಗಳಿಗೆ ರಾಹುಲ್‌ರೊಂದಿಗೆ ಸರಿಯಾಗಿ ಏಗಲು ಸಾಧ್ಯವಾಗುತ್ತಿಲ್ಲ. ತಮ್ಮ ಸಲಹೆಗಳನ್ನು ರಾಹುಲ್ ನಿರ್ಲಕ್ಷಿಸುತ್ತಾರೆ ಎಂದೇ ಅವರು ಭಾವಿಸುತ್ತಾರೆ. ಇನ್ನು ಪ್ರಿಯಾಂಕ ರಾಜಕೀಯಕ್ಕೆ ಬರಬೇಕು ಎನ್ನುವುದಕ್ಕೆ ಹಿರಿಯರು ನೀಡುವ ಕಾರಣವೆಂದರೆ, 'ತಮ್ಮ ಸಹೋದರ ರಾಹುಲ್‌ಗಿಂತಲೂ ಜನರೊಂದಿಗೆ ಬೆರೆಯುವ, ಗುಂಪಿನಲ್ಲಿ ಒಂದಾಗುವ ಆಕರ್ಷಕ ಗುಣ ಪ್ರಿಯಾಂಕಾರಲ್ಲಿದೆ' ಎನ್ನುವುದು.
ನಿಜ ಹೇಳಬೇಕೆಂದರೆ, ಈ ಕೊನೆಯ ಅಂಶವನ್ನು ಖಚಿತಪಡಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಮುಖ್ಯವಾಹಿನಿ ರಾಜಕೀಯದಿಂದ ಪ್ರಿಯಾಂಕ ಹೊರಗೇ ಇರುತ್ತಾರಾದ್ದರಿಂದ, ಜನರಿಗೆ ಅವರ ಬಗ್ಗೆ ಅಷ್ಟೊಂದು ಗೊತ್ತಿಲ್ಲ. ಇನ್ನು ಅವರೂ ಅಷ್ಟೇ, ತಮ್ಮ ಗಮನವೇನಿದ್ದರೂ ಅಮ್ಮ ಮತ್ತು ತಮ್ಮನಿಗೆ (ರಾಯ್‌ಬರೇಲಿ ಮತ್ತು ಅಮೇಠಿಯಲ್ಲಿ) ಸಹಾಯ ಮಾಡುವುದಷ್ಟೇ ಎಂದು ಹಲವಾರು ಬಾರಿ ಹೇಳಿದ್ದಾರೆ.
ಒಂದು ವೇಳೆ ಪ್ರಿಯಾಂಕ ರಾಜಕೀಯಕ್ಕೆ ಬಂದರೂ ಒಬ್ಬ ರಾಜಕಾರಣಿಯಾಗಿ ಅವರು ಎಷ್ಟು ಪ್ರಭಾವಶಾಲಿಯಾಗಬಲ್ಲರು? ಈ ಪ್ರಶ್ನೆಗೆ ಉತ್ತರವನ್ನು, ಪ್ರಿಯಾಂಕ ಗಾಂಧಿ 1999ರಲ್ಲಿ ರಾಯ್‌ಬರೇಲಿಯಲ್ಲಿ ನಡೆಸಿದ ಪ್ರಚಾರದ ಹಿನ್ನೆಲೆಯಲ್ಲಿ ಕಂಡುಕೊಳ್ಳಬಹುದೇನೋ? ಆ ಸಮಯದಲ್ಲಿ ಪ್ರಿಯಾಂಕ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಶರ್ಮಾ ಪರವಾಗಿ ಪ್ರಚಾರ ಮಾಡಿದ್ದರು. ಆಗ ಸತೀಶ್‌ಗೆ ಪ್ರಬಲ ಎದುರಾಳಿಯಾಗಿದ್ದವರು, ಗಾಂಧಿ ಕುಟುಂಬದಿಂದ ಎಂದೋ ದೂರಸರಿದ, ಪ್ರಿಯಾಂಕ ಗಾಂಧಿಯ ಅಂಕಲ್, 'ಅರುಣ್ ನೆಹರು'. ಅರುಣ್ ನೆಹರು ಬಿಜೆಪಿಯ ಅಭ್ಯರ್ಥಿಯಾಗಿ ಆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಪ್ರಿಯಾಂಕ ಆಗಮನವಾಗುವವರೆಗೂ, ಅರುಣ್ ನೆಹರು ಅಲೆಯೇ ಜೋರಾಗಿತ್ತು. ಸತೀಶ್ ಶರ್ಮಾ ಹೀನಾಯವಾಗಿ ಸೋತು ನಾಲ್ಕನೇ ಸ್ಥಾನಕ್ಕೆ ದೂಡಲ್ಪಡುತ್ತಾರೆ ಎಂಬುದೇ ಎಲ್ಲರ ಎಣಿಕೆಯಾಗಿತ್ತು. ಆದರೆ ಅತ್ಯಂತ ಉತ್ಸಾಹದಿಂದ ನಡೆದ ಪ್ರಿಯಾಂಕಾರ ಪ್ರಚಾರ, ಬ್ರಾಹ್ಮಣ ಮತದಾರರನ್ನು ಅತೀವವಾಗಿ ಸೆಳೆದುಬಿಟ್ಟಿತು. ಅರುಣ್ ನೆಹರೂ ಅನಿರೀಕ್ಷಿತ ಹೊಡೆತ ತಿಂದು ಹಿಂದೆ ಬಿದ್ದರು.
1999ರ ಆ ಚುನಾವಣೆಯ ಸುದ್ದಿಸಂಗ್ರಹಕ್ಕಾಗಿ ರಾಯ್‌ಬರೇಲಿಗೆ ತೆರಳಿದ್ದ ನಾನು, "ನೆನಪು- ಭಾವುಕತೆಯ" ಸೆಳೆತ ಮತ್ತು ಬಲ ಯಾವ ಮಟ್ಟದಲ್ಲಿ ಕೆಲಸ ಮಾಡಬಲ್ಲದು ಎನ್ನುವ ಪಾಠ ಕಲಿತೆ. ಈ 'ಭಾವತೀವ್ರತೆ' ಎಂಬುದು ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿಬಿಡಬಲ್ಲದು.
ಪ್ರಿಯಾಂಕಾರ ರಾಜಕೀಯ ಸಾಮರ್ಥ್ಯದ ಬಗ್ಗೆ ಅತ್ಯುತ್ಸಾಹದಿಂದ ಮಾತನಾಡುವವರು, ಈಗಲೂ ರಾಯ್‌ಬರೇಲಿಯಲ್ಲಿ ಅಂದು ಪ್ರಿಯಾಂಕ ಮಾಡಿದ ಮ್ಯಾಜಿಕ್ ಅನ್ನೇ ಪುರಾವೆಯಾಗಿ ಮುಂದಿಡುತ್ತಾರೆ. ಆದರೆ ಆಗ ಕಾಂಗ್ರೆಸ್ ಒಂದು ದಶಕದಿಂದ ಆ ಕ್ಷೇತ್ರದಲ್ಲಿ ಅಧಿಕಾರದಿಂದ ಹೊರಗುಳಿದಿತ್ತು. ಅದು ಯಾವಾಗ ಮತ್ತೆ ಅಲ್ಲಿ ಬಂದು ನಿಂತಿತೋ, ಆಗ ಹಿಂದೆ ಅಮೇಠಿ ಮತ್ತು ರಾಯ್‌ಬರೇಲಿಯಲ್ಲಿ ಆ ಕುಟುಂಬದ ಆಡಳಿತದಿಂದ ಲಾಭಮಾಡಿಕೊಂಡಿದ್ದ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ, ಪ್ರಿಯಾಂಕ-ಸೋನಿಯಾ ಮತ್ತು ರಾಹುಲ್ ಹಿಂದಿನ ಸಂತೋಷದ ದಿನಗಳನ್ನು ನೆನಪಿಗೆ ತಂದಿದ್ದರು.
ಈಗ ಹತ್ತು ವರ್ಷಗಳಿಂದ ಆ ಭಾಗಗಳನ್ನು ಆಳುತ್ತಾ, ಅಧಿಕಾರ ವಿರೋಧಿ ಅಲೆಯನ್ನು ಎದುರಿಸುತ್ತಿರುವ ಕಾಂಗ್ರೆಸ್‌ಗೆ ಮತ್ತೆ ಅಂಥ ಭಾವತೀವ್ರತೆಯನ್ನು ಹುಟ್ಟುಹಾಕುವುದಕ್ಕೆ ಸಾಧ್ಯವಿಲ್ಲ. 2014ರಲ್ಲಿ ರಾಹುಲ್‌ಗೆ ತೊಂದರೆಯಾಗಿ ಕುಳಿತಿರುವ ಅಂಶವೂ ಇದೇ ಆಗಿದೆ.
ಒಂದು ವೇಳೆ ಪಕ್ಷದ ನಾಯಕನ ಸ್ಥಾನವನ್ನು ರಾಹುಲ್ ಬದಲಾಗಿ ಪ್ರಿಯಾಂಕಾಗೆ ವಹಿಸಿದ್ದರೆ, 2014ರಲ್ಲಿ ಕಾಂಗ್ರೆಸ್ ಮೇಲ್ಮಟ್ಟಕ್ಕೇರುತ್ತಿತ್ತೇ? ಈ ಪ್ರಶ್ನೆಗೂ ಉತ್ತರಿಸುವುದು ಕಷ್ಟ. ಏಕೆಂದರೆ ಕಳೆದ ಹತ್ತು ವರ್ಷಗಳಲ್ಲಿ ಪ್ರಿಯಾಂಕಾ ಕೂಡ ಕೆಟ್ಟ ಸಮಯವನ್ನೇ ಎದುರಿಸಿದ್ದಾರೆ. 2012ರಲ್ಲಿ ಈ ಸಂಗತಿ ಸ್ಪಷ್ಟವಾಗಿ ಗೋಚರವಾಯಿತು. ಅಮೇಠಿ-ರಾಯ್‌ಬರೇಲಿ ಪ್ರದೇಶಗಳಲ್ಲಿ ಆಗ ಪ್ರಚಾರ ಕೈಗೊಂಡ ಪ್ರಿಯಾಂಕ ಬೆರಳೆಣಿಕೆಯಷ್ಟು ಜನರನ್ನು ಮಾತ್ರ ಸೆಳೆದಿದ್ದರು. ಆ ವರ್ಷ ಉತ್ತರಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿತು.
ರಾಹುಲ್‌ಗೆ ಸಹಾಯ ಮಾಡಲು ಈ ವಾರದಿಂದ ಅಮೇಠಿಯಲ್ಲೇ ಠಿಕಾಣಿ ಹೂಡಲಿದ್ದಾರೆ ಪ್ರಿಯಾಂಕ. ಹಿಂದೆಂದಿಗಿಂತಲೂ ಕಠಿಣ ಸವಾಲು ರಾಹುಲ್‌ಗೆ ಈ ಬಾರಿ ಎದುರಾಗಲಿದೆ ಎಂದು ಅಲ್ಲಿನ ವಾತಾವರಣ ಸೂಚಿಸುತ್ತಿದೆ. ಒಂದು ವೇಳೆ ಅವರು ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದರೂ ಕೂಡ, ಅದು ಹಿನ್ನಡೆ ಎಂದೇ ಅನಿಸಿಕೊಳ್ಳಲಿದೆ. ಈ ಬಾರಿ ಪ್ರಿಯಾಂಕ ತಮ್ಮ ನಿರ್ವಹಣಾ ಕೌಶಲ್ಯವನ್ನು ಬಳಸಲೇಬೇಕಿದೆ. ಏಕೆಂದರೆ "ನೆನಪು ಮತ್ತು ಭಾವನೆಯ" ಅಲೆಯೇನಿದ್ದರೂ ನೆಹರು-ಗಾಂಧಿಗಳ ವಿರುದ್ಧವೇ ಹರಿಯುತ್ತಿದೆ.
ಇನ್ನು ಗಾಂಧಿ ಕುಟುಂಬದ ಇನ್ನೊಂದು ಕುಡಿ ವರುಣ್ ಗಾಂಧಿ ಅಮೇಠಿಗೆ ಹತ್ತಿರದ ಸುಲ್ತಾನ್‌ಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದರಿಂದ ಸನ್ನಿವೇಶ ಇನ್ನಷ್ಟು ಕಠಿಣವಾಗುತ್ತಾ ಸಾಗಿದೆ. ಇವರಿಬ್ಬರೂ ಪರಸ್ಪರ ಕತ್ತಿಮಸೆಯುವುದಿಲ್ಲ, ವಿರುದ್ಧ ಪ್ರಚಾರ ಕೈಗೊಳ್ಳುವುದಿಲ್ಲ ಎನ್ನಲಾಗುತ್ತಿದೆ. ವರುಣ್ ತಮ್ಮದೇ ಕುಟುಂಬದ ಮಹತ್ವವನ್ನು ಸಾರುವಲ್ಲಿ ನಿರತರಾಗಿದ್ದಾರೆ. ನರೇಂದ್ರ ಮೋದಿ ಅಲೆಯ ಮೇಲೆ ಸವಾರಿ ಮಾಡದ ದೇಶದ ಏಕೈಕ ಅಭ್ಯರ್ಥಿಯೆಂದರೆ ಅವರೇ ಇರಬಹುದೇನೋ? ಬಿಜೆಪಿಯ ಮೂಲಗಳ ಪ್ರಕಾರ, ಸುಲ್ತಾನ್‌ಪುರಕ್ಕೆ ಕಳುಹಿಸಲಾದ "ನಮೋ ವ್ಯಾನ್‌"ಗಳನ್ನು ಬಳಸದ ವರುಣ್, ಅವನ್ನೆಲ್ಲ ಬದಿಗೆ ಸರಿಸಿಟ್ಟಿದ್ದಾರಂತೆ.
ಒಂದು ವೇಳೆ ವರುಣ್ ಮತ್ತು ರಾಹುಲ್-ಪ್ರಿಯಾಂಕ ಜೋಡಿ ಒಬ್ಬರ ತಂಟೆಗೆ ಒಬ್ಬರು ಹೋಗುವುದಿಲ್ಲ ಎಂದು ಅಘೋಷಿತ ಒಪ್ಪಂದ ಮಾಡಿಕೊಂಡಿರುವುದು ನಿಜವೇ ಆದರೆ, ಅನೇಕ ಒಳತೊಡಕುಗಳನ್ನದು ಸೃಷ್ಟಿಸಬಲ್ಲದು. ಅಮೇಠಿಯಲ್ಲಿ ಪ್ರಿಯಾಂಕ ಮತ್ತು ರಾಹುಲ್‌ಗೆ ಸಂಜಯ್ ಸಿಂಗ್ ಅವರ ಬೆಂಬಲವಿದೆ. ಇನ್ನೊಂದೆಡೆ ಸುಲ್ತಾನ್‌ಪುರದಲ್ಲಿ ವರುಣ್‌ರ ವಿರುದ್ಧ ನಿಂತಿರುವುದು ಇದೇ ಸಂಜಯ್ ಸಿಂಗ್‌ರ ಪತ್ನಿ ಅಮಿತಾ ಸಿಂಗ್! ಈ ಜಟಿಲತೆಯನ್ನು ಪ್ರಿಯಾಂಕ ಹೇಗೆ ಭೇದಿಸುತ್ತಾರೋ?

-ಅಶೋಕ್ ಮಲಿಕ್, ಅಂಕಣಕಾರರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement