ನರೇಂದ್ರ ಮೋದಿಗೇಕಿಲ್ಲ ದೀದಿಯ ಮಮತೆ?
ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಕಾವು ಶುರುವಾದಾಗ ಮತ್ತು ಆನಂತರದಲ್ಲಿ ನರೇಂದ್ರ ಮೋದಿಯವರ ಹೇಳಿಕೆಗಳು ಸಾಗಿದ ರೀತಿ ತುಂಬ ಆಸಕ್ತಿಕರವಾಗಿದೆ. ಪ್ರಾರಂಭದಲ್ಲಿ ದೀದಿ ಮೇಲೆ ಒಂಥರದ ಮಮತೆ. 'ರಾಷ್ಟ್ರಪತಿಯಾಗಿ ಪ್ರಣಬ್ ದಾ ಇದ್ದಾರೆ. ಇಲ್ಲಿ ದೀದಿ. ಕೇಂದ್ರದಲ್ಲಿ ನಾನೂ ನಿಮ್ಮ ನೆರವಿಗಿರುತ್ತೇನೆ, ಹಾರೈಸಿ' ಅಂತ ಮಾತನಾಡಿದ್ದರು. ಆದರೆ ಮಮತಾ ಮನಕರಗಲಿಲ್ಲ. ಮೋದಿಯವರನ್ನು ಟೀಕಿಸುವುದರಿಂದ ದೂರ ಉಳಿಯಲಿಲ್ಲ. ಇತ್ತೀಚೆಗೆ ಮೋದಿ- 'ಕೇಂದ್ರದಲ್ಲಿ ಹತ್ತು ವರ್ಷ ದುರಾಡಳಿತ ನಡೆಸಿದ ಕಾಂಗ್ರೆಸ್ ವಿರುದ್ಧ, ಇಲ್ಲಿ ಹಲವು ದಶಕ ಕೆಟ್ಟ ಆಡಳಿತ ನಡೆಸಿದ ಎಡಪಕ್ಷಗಳ ವಿರುದ್ಧ ಮಮತಾ ಮಾತನಾಡುತ್ತಾರೆ ಎಂದುಕೊಂಡಿದ್ದೆ. ಆದರೆ ನನ್ನ ವಿರುದ್ಧ ದಿನಕ್ಕೊಂದು ಟೀಕೆ ಮಾಡದಿದ್ದರೆ ದೀದಿಗೆ ತಿಂದ ಅನ್ನವೇ ಅರಗುವುದಿಲ್ಲ' ಅಂತ ಕಿಡಿಕಾರಿದರು.
ಏನೇ ಪುಸಲಾಯಿಸಿದರೂ ಮೋದಿಗೆ ದೀದಿ ಮಮತೆ ಸಿಗದಿರುವುದಕ್ಕೆ ಕಾರಣಗಳಿವೆ.
ಪಶ್ಚಿಮ ಬಂಗಾಳದಲ್ಲಿ ಮೊದಲಿನಿಂದಲೂ ಬಲಿಷ್ಠವಾಗಿದ್ದದ್ದು ಎಡಪಕ್ಷಗಳು. ನಿರಂತರವಾಗಿ 32 ವರ್ಷಗಳವರೆಗೆ ಆ ರಾಜ್ಯದಲ್ಲಿ ತನ್ನ ಬಲವನ್ನು ತೋರಿದ್ದು ಸಿಪಿಐ-ಎಮ್ ನೇತೃತ್ವದ ಎಡರಂಗವೇ. ಕಮ್ಯುನಿಸ್ಟ್ ನಾಯಕರ ಈ ಪಾರಮ್ಯವನ್ನು ಕೊನೆಗೆ ಅಂತ್ಯಗೊಳಿಸಿ ಅಧಿಕಾರಕ್ಕೇರಿದವರು, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ. 1998ರಲ್ಲಿ ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ ಸ್ಥಾಪಿಸುವವರೆಗೂ ಪಶ್ಚಿಮ ಬಂಗಾಳದಲ್ಲಿ ಎಡರಂಗಕ್ಕೆ ಅಡ್ಡಗಾಲು ಹಾಕುವವರು ಯಾರೂ ಇರಲಿಲ್ಲ. ಅಂದಿನಿಂದ ಇಂದಿನವರೆಗೂ ಆ ರಾಜ್ಯದಲ್ಲಿ ಎದುರುಬದುರು ಹೋರಾಟ ನಡೆದಿರುವುದು ತೃಣಮೂಲ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರ ಮಧ್ಯೆಯಷ್ಟೇ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಇಂದಿಗೂ ಒಂದು ಸಾಂಘಿಕ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗಿಲ್ಲ. ಒಟ್ಟು 42 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಆ ರಾಜ್ಯದಲ್ಲಿ 2009ರ ಲೋಕಸಭಾ ಚುನಾವಣೆಗಳಲ್ಲಿ ತೃಣಮೂಲ ಕಾಂಗ್ರೆಸ್ 19, ಎಡರಂಗ 15, ಕಾಂಗ್ರೆಸ್ 6, ಎಸ್ಯುಸಿಐ 6 ಸ್ಥಾನಗಳನ್ನು ಗೆದ್ದುಕೊಂಡರೆ, ಬಿಜೆಪಿ ಮಾತ್ರ 1 ಸ್ಥಾನ ಗೆದ್ದು ಮೂಲೆಗೆ ಸರಿದಿತ್ತು. ಅಂದು ಬಿಜೆಪಿಯ ಬಹುತೇಕ ಅಭ್ಯರ್ಥಿಗಳು 3-5 ಪ್ರತಿಶತ ಮತ ಗಳಿಸಲು ಮಾತ್ರ ಶಕ್ತರಾದರು. ಆಗ ಪಶ್ಚಿಮ ಬಂಗಾಳದಿಂದ ಗೆದ್ದಿದ್ದ ಬಿಜೆಪಿಯ ಏಕೈಕ ಅಭ್ಯರ್ಥಿಯೆಂದರೆ ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್. ಆದರೆ ಆ ಗೆಲುವಿನ ಹಿಂದೆ ಗೋರ್ಖಾ ಜನಮುಕ್ತಿ ಮೋರ್ಚಾದ ಬೆಂಬಲವಿದ್ದದ್ದೇ ಕಾರಣ. ಈ ಬಾರಿ ಜಸ್ವಂತ್ ಸಿಂಗ್ ಅವರು ಬಿಜೆಪಿಯಿಂದ ಹೊರಬಿದ್ದು ಬಾರ್ಮರ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. 2011ರ ವಿಧಾನಸಭಾ ಚುನಾವಣೆಗಳಲ್ಲಂತೂ ಆ ಪಕ್ಷಕ್ಕೆ ಒಟ್ಟು 294 ಸ್ಥಾನಗಳಲ್ಲಿ ಒಂದರಲ್ಲೂ ಗೆಲ್ಲಲು ಸಾಧ್ಯವಾಗಲಿಲ್ಲ.
ಆ ರಾಜ್ಯದಲ್ಲಿ ಬಿಜೆಪಿಗೆಂತಲೇ ಕೆಲವು ಸಾಂಪ್ರದಾಯಿಕ ಮತಗಳು ಮೊದಲಿನಿಂದಲೂ ಮೀಸಲಾಗಿದ್ದವು. ಆದರೆ 2009ರ ಅದರ ಕಳಪೆ ಪ್ರದರ್ಶನದ ನಂತರ, ಅವೆಲ್ಲವೂ ಮೊದಲು ಕಾಂಗ್ರೆಸ್ಗೆ, ನಂತರ ತೃಣಮೂಲ ಕಾಂಗ್ರೆಸ್ಗೆ ಹಂಚಿಹೋದವು. ಈ ಬಾರಿ ಮೋದಿ ಅಲೆ ದೇಶಾದ್ಯಂತ ಜೋರಾಗೇ ಬೀಸುತ್ತಿದೆ. ಆದರೆ ಅದು ಬಂಗಾಳದಲ್ಲಿ ಎಷ್ಟು ಪ್ರಭಾವ ಬೀರಬಲ್ಲದು ಎನ್ನುವ ಪ್ರಶ್ನೆ ರಾಜಕೀಯ ಚಾವಡಿಯಲ್ಲಿ ಮತ್ತು ಮಾಧ್ಯಮಗಳಲ್ಲಿ ಮಾರ್ದನಿಸುವಾಗ, ಬಿಜೆಪಿಗೆ ಬಂಗಾಳದಲ್ಲಿ ನೆಲೆಯಿಲ್ಲ ಎನ್ನುವ ಉತ್ತರವೇ ಎದುರಾಗುತ್ತದೆ.
ಏಕೆಂದರೆ ಬಿಜೆಪಿ ಆ ರಾಜ್ಯದಲ್ಲಿ ಮತ್ತು ಅಲ್ಲಿಂದ ಕೇಂದ್ರದಲ್ಲಿ ಮಿಂಚಬೇಕೆಂದರೆ ಅದಕ್ಕೆ ಪ್ರಬಲ ಪಕ್ಷವೊಂದರ ಬೆಂಬಲ ಬೇಕೇ ಬೇಕು. ವರ್ಷದ ಹಿಂದೆ ನರೇಂದ್ರ ಮೋದಿಯವರು ಮಮತಾ ಬ್ಯಾನರ್ಜಿಯವರನ್ನು ಹೊಗಳುತ್ತಾ- "ಕಳೆದ 32 ವರ್ಷಗಳಿಂದ ಕಮ್ಯುನಿಸ್ಟರು ಕೆದರಿ ಹೋದ ತಗ್ಗುಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಿದ್ದಾರೆ ಮಮತಾ" ಎಂದಾಗಲೇ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಹತ್ತಿರವಾಗಬಹುದು ಎನ್ನುವ ಅನುಮಾನ ಹುಟ್ಟಿಕೊಂಡಿತ್ತು. ಮಮತಾ ಕೂಡ ಮೋದಿಯವರ ಮೆಚ್ಚುಗೆಗೆ ಒಳಗೊಳಗೇ ಖುಷಿಪಟ್ಟಿದ್ದರು.
ಎಡರಂಗವಂತೂ ಬಿಜೆಪಿಯ ಸನಿಹ ಹೋಗುವುದಿಲ್ಲ, ತೃಣಮೂಲ ಕಾಂಗ್ರೆಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಅಂದು ಮೋದಿಯವರು ಮಮತಾರನ್ನು ಹೊಗಳಿದಾಗ ಕಾಣಿಸಿತ್ತಾದರೂ ಈಗ ಆ ಸಾಧ್ಯತೆ ಕ್ಷೀಣವಾಗುತ್ತಿರುವುದು ಗೋಚರಿಸುತ್ತಿದೆ. ಇತ್ತೀಚೆಗೆ ನರೇಂದ್ರ ಮೋದಿ ಮಮತಾ ಬ್ಯಾನರ್ಜಿಯದ್ದು "ಹುಸಿ ಪರಿವರ್ತನೆ" ಎಂದು ಕುಟುಕಿದ್ದಾರೆ. ಮಮತಾ ಕೂಡ "ಅಮಾಯಕರ ರಕ್ತದ ಕಲೆಗಳನ್ನು ಹೊತ್ತ ವ್ಯಕ್ತಿಯೊಬ್ಬ ಬಿಜೆಪಿಯಲ್ಲಿದ್ದಾನೆ, ಪ್ರಧಾನಿಯಾಗಲು ಬಯಸುತ್ತಿದ್ದಾನೆ" ಎಂದು ಎದುರುತ್ತರ ನೀಡಿದ್ದಾರೆ. ಆದರೆ ಮಮತಾ ಮನಸ್ಸಿನಲ್ಲಿ ಎಂಥ ಮಂಥನ ನಡೆದಿದೆ ಎನ್ನುವುದು ಸುಲಭವಾಗೇ ಅರ್ಥವಾಗುತ್ತದೆ.
ಈ ಬಾರಿ ಪಶ್ಚಿಮ ಬಂಗಾಳದ ಎಲ್ಲಾ 42 ಸ್ಥಾನಗಳಲ್ಲೂ ಬಿಜೆಪಿ ಸ್ಪರ್ಧಿಸುತ್ತಿದೆ. ಗೋರ್ಖಾ ಸಮುದಾಯದ ಬೆಂಬಲವಿರುವ ಡಾರ್ಜಲಿಂಗ್ನಲ್ಲಿ ಮಾತ್ರ ಅದು ಗೆಲ್ಲಬಹುದು. ಆದರೆ ಒಂದಂತೂ ನಿಶ್ಚಿತ, ಗೆಲ್ಲಲಾಗದಿದ್ದರೂ ಪಶ್ಚಿಮ ಬಂಗಾಳದ ಬಹಳಷ್ಟು ಕ್ಷೇತ್ರಗಳ ಹಣೆಬರಹವನ್ನು ನಿರ್ಧರಿಸುವಲ್ಲಂತೂ ಅದು ಯಶಸ್ವಿಯಾಗಲಿದೆ. ಇತ್ತೀಚಿನ ಕೆಲವು ಬೆಳವಣಿಗೆಗಳು ಬಿಜೆಪಿ ಬಂಗಾಳದಲ್ಲಿ ಬೆಳೆಯುತ್ತಿದೆ ಎನ್ನುವುದನ್ನು ಸ್ಪಷ್ಟವಾಗಿ ಸೂಚಿಸುತ್ತಿವೆ. ಬಂಗಾಳದ ಉತ್ತರ ಭಾಗಗಳ ನಗರಗಳಲ್ಲಿ ಮತ್ತು ಕೋಲ್ಕತ್ತಾದಲ್ಲಿ, ಬಿಜೆಪಿಗೆ ಬೆಂಬಲ ಹೆಚ್ಚಾಗುತ್ತಿರುವುದಂತೂ ಸ್ಪಷ್ಟ. ಇನ್ನು ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಂತಿರುವ ನಗರಗಳ, ಅತ್ತ ಬಾಂಗ್ಲಾದೇಶಿಯರ ನುಸುಳುವಿಕೆ- ದೌರ್ಜನ್ಯ, ಇತ್ತ ಎಡಪಕ್ಷಗಳು ಮತ್ತು ತೃಣಮೂಲ ಕಾಂಗ್ರೆಸ್ನ ಕಡೆಗಣನೆಯಿಂದಾಗಿ ಬೇಸತ್ತಿರುವ ಬಂಗಾಲಿ ಹಿಂದುಗಳೆಲ್ಲ ಬಿಜೆಪಿಗೆ ಮತ ನೀಡಲು ಯೋಚಿಸುತ್ತಿದ್ದಾರೆ. ಇದಕ್ಕೆ ಮಮತಾ ಬ್ಯಾನರ್ಜಿಯವರ 'ಓಲೈಕೆ ರಾಜಕಾರಣ' ಮತ್ತು ಇನ್ನೊಂದೆಡೆ ಮೋದಿ ಅಲೆಯೇ ಕಾರಣ ಎನ್ನಲಾಗುತ್ತಿದೆ.
ಈ ಧೋರಣೆ ಬಿಜೆಪಿಗೆ ಸ್ಥಾನಗಳನ್ನೇನೂ ಗೆಲ್ಲಿಸದಿದ್ದರೂ ತೃಣಮೂಲಕ್ಕೆ ಹಾನಿ ಮಾಡಲಿದೆ. ಕಟ್ಟರ್ ಕಮ್ಯುನಿಸ್ಟ್ ಚಿಂತನೆಯವರು ಎಂದಿಗೂ ಬಿಜೆಪಿಗೆ ಮತ ಹಾಕುವ ಬಗ್ಗೆ ಯೋಚಿಸರು. ಉಳಿದವರು ಕಾಂಗ್ರೆಸ್ ಇಲ್ಲವೇ ತೃಣಮೂಲ ಕಾಂಗ್ರೆಸ್ ಅನ್ನು ಆರಿಸಿಕೊಳ್ಳುತ್ತಿದ್ದರು. ಅವರಿಗೆಲ್ಲ ಈಗ ಬಿಜೆಪಿಯೂ ಪರ್ಯಾಯ ಎನಿಸಿದೆ. ಹೀಗಾಗಿ ಬಿಜೆಪಿ ಸೆಳೆಯುವ ಮತಗಳು ತೃಣಮೂಲಕ್ಕೆ ಸಲ್ಲಬಹುದಾಗಿದ್ದ ಕಮ್ಯುನಿಸ್ಟೇತರ ಮತಗಳೇ ಆಗಿವೆ.
ಕೋಲ್ಕತಾದಲ್ಲಿ ಇಷ್ಟು ವರ್ಷಗಳಿಂದ ಇದ್ದೂ ಇಲ್ಲದಂತಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮೋದಿ ಮಳೆಯಿಂದಾಗಿ ಮತ್ತೆ ಚಿಗುರತೊಡಗಿದೆ. ಪಟುಲಿ ಪ್ರದೇಶದಲ್ಲಿ ಆರ್ಎಸ್ಎಸ್ ಶಾಖೆ ನಡೆಸುತ್ತಿರುವ ಪ್ರದೀಪ್ ಮುಖರ್ಜಿ-"ನಮ್ಮ ಶಾಖೆಗಳಿಗೆ ಸುಮಾರು 8-10 ಜನ ಬರುತ್ತಿರಬಹುದಷ್ಟೇ, ಆದರೆ ವರ್ಷಗಳ ಹಿಂದೆ ಇಷ್ಟು ಜನರು ಬರುತ್ತಾರೆ ಎಂದರೆ ನಾವು ನಂಬುವುದಕ್ಕೂ ಸಿದ್ಧರಿರಲಿಲ್ಲ" ಎನ್ನುತ್ತಾರೆ. ಪಟುಲಿಯಂತೆಯೇ ಹಿಂದಿನಿಂದಲೂ ಕಮ್ಯುನಿಸ್ಟ್ಗಳ ನೆಲೆಯಾಗಿದ್ದ ಕಸ್ಬಾ, ಸಂತೋಷಪುರ್ ಅಥವಾ ಸಲೀಂಪುರದಲ್ಲೀಗ ಆರ್ಎಸ್ಎಸ್ ಶಾಖೆಗಳು ಶುರುವಾಗಿರುವುದನ್ನು ನೋಡಿ ತೃಣಮೂಲ ಕಾಂಗ್ರೆಸ್ ಮತ್ತು ಎಡಪಕ್ಷಗಳು ಬೆಚ್ಚಿಬಿದ್ದಿವೆ. ಆದರೆ ಈ ಬೆಳವಣಿಗೆ ಮತಗಳಾಗಿ ಪರಿವರ್ತನೆಯಾಗಬಲ್ಲದೇ ಎನ್ನುವುದೇ ಪ್ರಶ್ನೆ. 1991ರ ರಾಮಜನ್ಮಭೂಮಿ ಹವೆಯಲ್ಲಿ ಬಿಜೆಪಿ ಅಂದು 12 ಪ್ರತಿಶತ ಮತಗಳನ್ನು ಪಡೆದಿತ್ತು. ಅದಾದ ನಂತರ ಹೇಳಹೆಸರಿಲ್ಲದಂತಾಗಿತ್ತು. ಆದರೆ ಈ ಬಾರಿ ಅದು 1991ರ ತನ್ನ ರೆಕಾರ್ಡ್ ಮುರಿಯಲಿದೆ ಎಂದು ತೃಣಮೂಲ ಕಾಂಗ್ರೆಸ್ನವರೇ ಹೇಳುತ್ತಿದ್ದಾರೆ. ಈ ಹತ್ತು ಹದಿನೈದು ಪ್ರತಿಶತ ಮತಗಳು ಬಿಜೆಪಿಗೆ ಗೆಲುವು ತಂದುಕೊಡಲಾರವಾದರೂ, ತೃಣಮೂಲ ಕಾಂಗ್ರೆಸ್ನ ಮತಗಳನ್ನು ಒಡೆದು ಎಡಪಕ್ಷಗಳಿಗೆ ಲಾಭ ತಂದುಕೊಡುವುದು ಮಾತ್ರ ಪಕ್ಕಾ. ಇದೇ ವಿಷಯ ಮಮತಾ ಬ್ಯಾನರ್ಜಿ ನಿದ್ದೆಗೆಡಿಸಿರುವುದು. ಕಳೆದ ಚುನಾವಣೆಯಲ್ಲಿ ಎಡರಂಗದಿಂದ ದೂರವಾದ ಹಿಂದುಗಳ ಮತಗಳು, ದೀದಿಯ ಬುಟ್ಟಿಯಲ್ಲಿ ಬಂದು ಬಿದ್ದಿದ್ದವು. ಇನ್ನು ಕಮ್ಯುನಿಸ್ಟರಿಂದಾಗಿ ನೆಲೆ ಕಳೆದುಕೊಂಡು ಕ್ರುದ್ಧರಾಗಿರುವ ಮುಸಲ್ಮಾನರೂ ಮಮತಾರನ್ನು ಬೆಂಬಲಿಸುತ್ತಾರೆ. ಬಿಜೆಪಿ ಬಂಗಾಳದಲ್ಲಿ ಬೆಳೆದರೆ ಎಲ್ಲಿ ಹಿಂದುಮತಗಳು ಹಾರಿಹೋಗಲಿವೆಯೋ ಎನ್ನುವ ಭಯ ಒಂದೆಡೆ, ಒಂದು ವೇಳೆ ಬಿಜೆಪಿಯೊಂದಿಗೆ ಕೈಜೋಡಿಸಿದರೆ ಮುಸಲ್ಮಾನರ ಮತಗಳೆಲ್ಲಿ ಕೈಜಾರುತ್ತವೋ ಎನ್ನುವ ಕಳವಳ ಇನ್ನೊಂದೆಡೆ. ವ್ಯಂಗ್ಯವೆಂದರೆ ಬಿಜೆಪಿ ಮತಗಳಿಸಿದಷ್ಟೂ ಕಮ್ಯುನಿಸ್ಟ್ ಪಕ್ಷಗಳಿಗೆ ಖುಷಿ. ಈ ಬಾರಿ ಎಡಕ್ಕೆ, ಬಲದಿಂದ(ಬಿಜೆಪಿ) ತುಸು ಬಲ ಬಂದಿದೆ. ಏಕೆಂದರೆ ಅದರ ಸಾಂಪ್ರದಾಯಿಕ ಮತಗಳು ಯಾವುದೇ ಕಾರಣಕ್ಕೂ ಬಿಜೆಪಿಯತ್ತ ಹೋಗವು. ಲುಕ್ಸಾನು ಆದರೆ ಅದು ಕಾಂಗ್ರೆಸ್ ಮತ್ತು ತೃಣಮೂಲಕ್ಕೇ ಆಗುತ್ತದೆ. ಒಟ್ಟಿನಲ್ಲಿ ಸದ್ಯಕ್ಕೆ ತಮ್ಮ ಮತಬ್ಯಾಂಕನ್ನು ರೊಚ್ಚಿಗೆಬ್ಬಿಸುವ ಧೈರ್ಯ ತೊರದೇ ಮಮತಾ ಸೇಫ್ ಆಗಿ ಆಟವಾಡುತ್ತಿದ್ದಾರೆ. ಆದರೆ ಚುನಾವಣೆಗಳು ಮುಗಿದು, ಒಂದು ವೇಳೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಅಧಿಕಾರಕ್ಕೆ ಬಂದರೆ, ಆಗ ಮಮತಾ ಆ ಒಕ್ಕೂಟದಲ್ಲಿ ಒಂದಾಗುತ್ತಾರಾ? ರಾಜಕೀಯದಲ್ಲಿ ಎಲ್ಲವೂ ಸಾಧ್ಯ!
-ರಾಘವೇಂದ್ರ ಆಚಾರ್ಯ