ಅಂಕಣಗಳು

ವ್ಯಕ್ತಿ ಕೇಂದ್ರಿತ ರಾಜಕೀಯ, ಪಕ್ಷ ನಿಷ್ಠೆಯ ಮಾತು

ವ್ಯಕ್ತಿ ಕೇಂದ್ರಿತ ರಾಜಕೀಯ, ಪಕ್ಷ ನಿಷ್ಠೆಯ ಮಾತು

ಕೇಂದ್ರ ಸಚಿವ ಆನಂದಶರ್ಮಾ, ಕಾಂಗ್ರೆಸ್ಸಿನಲ್ಲಿರುವ ಸೋನಿಯಾ ಗಾಂಧಿ ನಿಷ್ಠರಲ್ಲಿ ಅಗ್ರಗಣ್ಯರ ಸಾಲಿನಲ್ಲೇ ನಿಲ್ಲಬಹುದಾದವರು. ಬುದ್ಧಿವಂತರು. ರಾಜಕೀಯದ ಹೊರನೋಟ- ಒಳನೋಟಗಳನ್ನೆಲ್ಲಾ ತಿಳಿದವರು. ಭಾರತೀಯ ರಾಜಕಾರಣದಲ್ಲಿನ ಪ್ರಚಲಿತ ನಾಯಕರಲ್ಲಿ ಹೆಚ್ಚು ಕಡಿಮೆ ಎಲ್ಲರ ಜಾತಕವನ್ನೂ ತಿಳಿದಿರುವ ವ್ಯಕ್ತಿ. ಆದರೂ ಕಾಂಗ್ರೆಸ್ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಕೊಟ್ಟಿಲ್ಲ. ಪ್ರಾಯಶಃ ಅವರಿಗೆ ಅನುಕೂಲವಾಗುವಂತಹ ಕ್ಷೇತ್ರ ಇರಲಿಕ್ಕಿಲ್ಲ.
ಆದರೆ ಮೈದಾನದ ರಾಜಕೀಯದಲ್ಲಿ ಪಳಗಿದ ವ್ಯಕ್ತಿಯಾಗಿ ಆನಂದ ಶರ್ಮಾ ಆಯಾ ಕಾಲಕ್ಕೆ ತಕ್ಕ ವಿಷಯವನ್ನೇ ಪರಿಣಾಮಕಾರಿಯಾಗಿ ಜನರ ಮುಂದೆ ಇಡುವ ಜಾಣ್ಮೆಯನ್ನು ಪ್ರದರ್ಶಿಸಿರುವವರು. ಅವರು ಈಗ ಕಾಂಗ್ರೆಸ್- ಬಿಜೆಪಿ ಸಮರದಲ್ಲಿ ಮುಗ್ಗರಿಸಿದ್ದಾರೆ. ಇದ್ದಕ್ಕಿದ್ದಂತೆ ಶರ್ಮಾ ಅವರು ಒಂದು ಕೂಟದಲ್ಲಿ ಭಾರತೀಯ ಜನತಾ ಪಾರ್ಟಿ, ಈಗಿನ ಪ್ರಚಾರ ಸಮರದಲ್ಲಿ ನರೇಂದ್ರ ಮೋದಿ ಅವರನ್ನು ವಿಪರೀತವಾಗಿ ವೈಭವೀಕರಿಸಿ, ವ್ಯಕ್ತಿ ಆಧರಿತ ರಾಜಕೀಯ ವ್ಯವಸ್ಥೆಯನ್ನು ಪ್ರತಿಪಾದಿಸುತ್ತಿರುವುದು ದೇಶದ ಜನತಾಂತ್ರಿಕ ಗಣತಂತ್ರ ವ್ಯವಸ್ಥೆಗೇ ಎಸೆದ ಸವಾಲು ಎನ್ನುವ ಅರ್ಥ ಬರುವ ಮಾತನ್ನಾಡಿದ್ದಾರೆ. ಈಗ ಅವರಿಗೆ ಅದು ಬೇಡವಾಗಿತ್ತು.
 ನಿಜ. ಜನತಂತ್ರ ವ್ಯವಸ್ಥೆಯಲ್ಲಿ ವ್ಯಕ್ತಿನಿಷ್ಠೆ, ವ್ಯಕ್ತಿ ಪೂಜೆಗೆ ಸ್ಥಾನವಿಲ್ಲ. ಪಕ್ಷ ನಿಷ್ಠೆಯನ್ನು ಒಪ್ಪಬಹುದು. ನರೇಂದ್ರ ಮೋದಿ ಅವರನ್ನೇನೂ ಬಿಜೆಪಿ ಪಕ್ಷದ ನಾಯಕರಾಗಿ ಪ್ರತಿಷ್ಠಾಪಿಸಿಲ್ಲ. ಈಗಿನ ಸ್ಥಿತಿಯಲ್ಲಿ ಅವರೇ ಪಕ್ಷದ ಪರವಾಗಿ ಪ್ರಧಾನಿ ಪೀಠಕ್ಕೆ ಅರ್ಹ ವ್ಯಕ್ತಿ ಎಂದು ಮಾತ್ರ ಘೋಷಿಸಿದೆ. ಆಶ್ಚರ್ಯದ ವಿಷಯ ಎಂದರೆ, ಆನಂದ ಶರ್ಮಾ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕರೂ ಪ್ರತಿಕ್ರಿಯೆ ನೀಡಿಲ್ಲ, ಕಾಂಗ್ರೆಸ್ ವಿರೋಧಿಗಳೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅಣ್ಣಾ ಡಿಎಂಕೆ ನಾಯಕಿ ಜಯಲಲಿತಾ ಆನಂದ ಶರ್ಮ ಅವರ ಹೆಸರನ್ನು ಹೇಳದೇ, ಪ್ರತ್ಯೇಕ ಹೇಳಿಕೆಯಲ್ಲಿ ಜನತಂತ್ರ ವ್ಯವಸ್ಥೆಯಲ್ಲಿ ಪ್ರಧಾನಿ ಪೀಠದ ಅಭ್ಯರ್ಥಿಯ ಹೆಸರನ್ನು ಪ್ರಕಟಿಸುವುದು ಸರಿಯಲ್ಲ ಎಂದಿದ್ದಾರೆ. ಜಯಲಲಿತಾ, ಇತರ ನಾಯಕರೆಲ್ಲ ಮೋದಿ ಅವರಿಂದ ದೂರವಾದಾಗಲೂ ಮೋದಿಯವರನ್ನು ಹೊಗಳಿದ್ದರು. ಆದ್ದರಿಂದ ಅವರನ್ನು ಮೋದಿ ವಿರೋಧಿ ಎನ್ನುವಂತಿಲ್ಲ.
ಆದರೆ ಜಯಲಲಿತಾ ನೇತೃತ್ವದ ಆಲ್ ಇಂಡಿಯಾ ಅಣ್ಣಾ ಡಿಎಂಕೆ ಪಕ್ಷದಲ್ಲಿ ಎರಡನೇ ನಾಯಕರೇ ಇಲ್ಲವೆನ್ನುವುದನ್ನು ಅವರು ಮರೆತಿದ್ದಾರೆ. ಪಕ್ಷದಲ್ಲಿ ಅವರನ್ನು ಟೀಕಿಸಿದವರು ಯಾರೂ ಈಗ ಅಲ್ಲಿ ಉಳಿದಿಲ್ಲ.
ವಾಸ್ತವದಲ್ಲಿ, ಲಾಗಾಯ್ತಿನಿಂದಲೂ ಕಾಂಗ್ರೆಸ್ಸೇ ರಾಜಕೀಯದಲ್ಲಿ ವ್ಯಕ್ತಿಪೂಜೆ, ಕೌಟುಂಬಿಕ ಆಡಳಿತದ ಪರಂಪರೆಯನ್ನು ಆರಂಭಿಸಿ, ಅದನ್ನು ಬಗೆಬಗೆಯ ರೂಪದಲ್ಲಿ ಸಮರ್ಥಿಸಿದ್ದು. ಜವಾಹರಲಾಲ ನೆಹರೂ, ಇಂದಿರಾ ಗಾಂಧಿ, ರಾಜೀವ ಗಾಂಧಿ, ಸೋನಿಯಾ ಗಾಂಧಿ, ಈಗ ರಾಹುಲ ಗಾಂಧಿ ಅವರ ಹೆಸರುಗಳನ್ನು ಜಪಿಸುವುದನ್ನು ಆರಂಭಿಸಿ, ಮುಂದುವರಿಸಿಕೊಂಡು ಬಂದ ಪಕ್ಷ ಅದು.
 ನಿಜ. ಕಾಂಗ್ರೆಸ್ ಈಗ ರಾಹುಲ ಗಾಂಧಿ ಅವರನ್ನು ಪ್ರಧಾನಿ ಪೀಠದ ಅಭ್ಯರ್ಥಿ ಎಂದೇನೂ ಪ್ರಕಟಿಸಿಲ್ಲ. ಆದರೆ ಪಕ್ಷದ ಸೂತ್ರಗಳನ್ನೆಲ್ಲ ಅದು ಅವರ ಕೈಗೇ ನೀಡಿದೆ. ಆ ತಂತ್ರ ಸ್ವಲ್ಪ ಕೈ ಕೊಟ್ಟಾಗ, ದೇಶದ ಕೆಲವು ಕಡೆಗಳಲ್ಲಿ ರಾಹುಲ ಗಾಂಧಿಯ "ಅರ್ಹತೆಯನ್ನು" ಕೆಲವರು ಪ್ರಶ್ನಿಸಲು ಆರಂಭಿಸಿದಾಗ, ಚುನಾವಣೆ ಪ್ರಚಾರ ಸಮರದ ಮೂರು- ನಾಲ್ಕನೇ ಹಂತಗಳಲ್ಲಿ ಸೋನಿಯಾ ಗಾಂಧಿ ಅವರೇ ಮತ್ತೆ ಕಾಣಿಸಿಕೊಂಡಿದ್ದಾರೆ. ಆನಂತರ ಪ್ರಿಯಾಂಕ.
ಕಾಂಗ್ರೆಸ್‌ನ ನಾಯಕರ ಪಟ್ಟಿಯಲ್ಲಿ ಐದು ವರ್ಷ ಸರ್ಕಾರವನ್ನು ನಡೆಸಿದ ನರಸಿಂಹರಾಯರ ಹೆಸರು ಮಾಯವಾಗಿದೆ. ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ, ಹತ್ತು ವರ್ಷಗಳ ಕಾಲ ಪ್ರಧಾನಿ ಪೀಠದಲ್ಲಿದ್ದ ಮನಮೋಹನ ಸಿಂಗ್ ಅವರ ಹೆಸರನ್ನೂ ಕಾಂಗ್ರೆಸ್ ಮರೆಯಬಹುದು. ಕೆಲವು ಕಾಂಗ್ರೆಸ್ಸಿಗರು ಇದ್ದಕ್ಕಿದ್ದಂತೆ ಪ್ರಿಯಾಂಕ ಅವರ ಆಕ್ರಮಣಶೀಲತೆಯನ್ನು ಪ್ರಶಂಸಿಸಲು ಆರಂಭಿಸಿದ್ದಾರೆ.
ಹೀಗೆ ನಾಯಕ ನಿಷ್ಠೆಯ ಪ್ರದರ್ಶನಕ್ಕೆ ಅರ್ಹರಾದ ವ್ಯಕ್ತಿಯನ್ನು ಹುಡುಕುತ್ತಿರುವ ಕಾಂಗ್ರೆಸ್‌ಗೆ ಬಿಜೆಪಿ, ಮೋದಿ ಅವರಿಗೆ ಕೊಟ್ಟಿರುವ ಸ್ಥಾನ-ಮಾನದ ವಿಚಾರದಲ್ಲಿ ತಕರಾರೇಕೆ?
ಕುಟುಂಬ ಆಧರಿತ ಪಕ್ಷ: ವಂಶಪಾರಂಪರ್ಯ ಅಧಿಕಾರದ ರಾಜಕೀಯ ದೆಹಲಿಯಲ್ಲಿ ಕಾಂಗ್ರೆಸ್ಸಿನ ವಿಶೇಷ. ಆದರೆ ಜಮ್ಮ- ಕಾಶ್ಮೀರದಲ್ಲಿ ಅಬ್ದುಲ್ಲಾ ಕುಟುಂಬ, ಪಂಜಾಬಿನಲ್ಲಿ, ಬಾದಲ್, ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್, ಚರಣ್‌ಸಿಂಗ್ ಪುತ್ರ ಅಜಿತ್ ಸಿಂಗ್, ಒಡಿಶಾದಲ್ಲಿ ಬಿಜೂ ಜನತಾ ದಳದ ನವೀನ ಪಟ್ಟನಾಯಕ, ಮಹಾರಾಷ್ಟ್ರದಲ್ಲಿ ಶಿವಸೇನೆಯ ಠಾಕ್ರೆ ಕುಟುಂಬ, ಶರದ್‌ಪವಾರ್, ಸುಪ್ರಿಯಾ ಸುಲೆ, ತಮಿಳುನಾಡಿನಲ್ಲಿ ಕರುಣಾನಿಧಿ ಕುಟುಂಬ, ಕರ್ನಾಟಕದಲ್ಲಿ ನಮ್ಮವರೇ ಆದ ದೇವೇಗೌಡರ ಕುಟುಂಬಗಳ ವಿಶೇಷವನ್ನು ಆಯಾ ರಾಜ್ಯಗಳಲ್ಲಿ ಕಡೆಗಣಿಸುವಂತಿಲ್ಲ.
ಈ ಪ್ರವೃತ್ತಿಯನ್ನು ದೇಶಕ್ಕೆ ದೇಶವೇ ಒಪ್ಪಿರುವಂತಿದೆ. ಈಗಿನ ಚುನಾವಣೆ ಪ್ರಚಾರ ಸಮರದಲ್ಲಿ ಪಕ್ಷಗಳ ವ್ಯಕ್ತಿನಿಷ್ಠೆ, ಅವು ಆರಿಸಿರುವ ಅಭ್ಯರ್ಥಿಗಳಲ್ಲಿ ಬಹುತೇಕ ವ್ಯಕ್ತಿಗಳ ಜಾತಕವನ್ನು ಪರಿಶೀಲಿಸಿದಾಗ ಸ್ಪಷ್ಟವಾಗಿ ಗೋಚರವಾಗುತ್ತದೆ. ವಾಸ್ತವದಲ್ಲಿ ಭಾರತೀಯ ಸಮಾಜದ ಬುನಾದಿಯೇ ಕುಟುಂಬ ವ್ಯವಸ್ಥೆ ಎನ್ನುವವರಿದ್ದಾರೆ. ವಿಶಾಲವಾದ ಅರ್ಥದ ಜನತಾಂತ್ರಿಕ, ಜನಪ್ರಾತಿನಿಧಿಕ ನಾಯಕತ್ವದ ವ್ಯವಸ್ಥೆ ಇನ್ನೂ ಸಮಾಜದಲ್ಲಿ ಭದ್ರವಾದ ಬೇರುಗಳನ್ನು ಬಿಟ್ಟಿಲ್ಲ. ಆನಂದ ಶರ್ಮಾ ಅವರು ಉದ್ದೇಶಪೂರ್ವಕವಾಗಿಯೋ ಅಥವಾ ಬೇರೆ ಯಾವುದೇ ಕಾರಣಕ್ಕಾಗಿಯೋ, ವ್ಯಕ್ತಿನಿಷ್ಠೆ- ವಂಶಪಾರಂಪರ್ಯ ಅಧಿಪತ್ಯದಂತಹ ಗಂಭೀರವಾದ ವಿಚಾರವನ್ನು ಚುನಾವಣೆಯ ಪ್ರಚಾರ ಸಮರದ ಕಾಲದಲ್ಲಿ ಎತ್ತಿರುವುದು ಸರಿಯಾಗಿಯೇ ಕಂಡುಬರಬಹುದು. ಆದರೆ ಆ ವಿಚಾರವನ್ನೇ ಪ್ರಮುಖ ವಸ್ತುವಾಗಿಟ್ಟುಕೊಂಡು ರಾಷ್ಟ್ರೀಯ ಚರ್ಚೆಯಾಗುವ ಸಂಭವವಿಲ್ಲ.
ಕಟ್ಟುವವರು- ಒಡೆಯುವವರು: ಈಗಾಗಲೇ ಈ ಚುನಾವಣೆಯ ಪ್ರಮುಖ ವಿಷಯಗಳನ್ನು ಕುರಿತು ಹಿಂದೆ ಪ್ರಸ್ತಾಪಿಸಲಾಗಿತ್ತು. ಈಗಲೂ ಅದೇ ಪರಿಸ್ಥಿತಿ. ಪ್ರಚಾರ ಸಮರದ ಎರಡನೇ ಹಂತದಲ್ಲಿ ಸೋನಿಯಾ ಗಾಂಧಿ ಅವರು "ಅವರು (ಬಿಜೆಪಿ) ಒಡೆಯುತ್ತಾರೆ. ನಾವು (ಕಾಂಗ್ರೆಸ್) ಜೋಡಿಸುತ್ತೇವೆ" ಎನ್ನುವ ಘೋಷಣೆಯನ್ನು ಮುಂದಿಟ್ಟು ಅದನ್ನೇ ದೊಡ್ಡ ವಿಷಯವನ್ನಾಗಿ ಮಾಡಲು ಪ್ರಯತ್ನಿಸಿದರು.
 ಆದರೆ ಆ ವಿಷಯವನ್ನು ಚುನಾವಣೆ ಪ್ರಣಾಳಿಕೆಗಳಲ್ಲೂ ಪ್ರಾಮುಖ್ಯವಾಗಿ ಪ್ರಸ್ತಾಪಿಸಿಲ್ಲ, ಇತರ ನಾಯಕರಂತೂ ಆ ವಿಷಯಕ್ಕೇ ಗಮನ ಕೊಟ್ಟಿಲ್ಲ. ಅಲ್ಲಿಗೆ ಸೋನಿಯಾ ಗಾಂಧಿ ಅವರು ಎತ್ತಿದ್ದ ವಿಷಯದಲ್ಲಿ ಅವರ ಪಕ್ಷಕ್ಕೇ ಹೆಚ್ಚಿನ ವಿಶ್ವಾಸ ಇಲ್ಲ ಎಂದಾಯಿತು. ರಾಜಕೀಯ ಅಧಿಕಾರದ ಹಂಚಿಕೆಯಲ್ಲಿ ಯಾವ ಪಕ್ಷವೂ ಎಲ್ಲರನ್ನೂ ಬಲಗೊಳಿಸುವ ಸೂತ್ರವನ್ನು ಅನುಸರಿಸಿಲ್ಲ. ಅಭ್ಯರ್ಥಿಗಳ ಆಯ್ಕೆಯಲ್ಲಿ ಆ "ಸಿದ್ಧಾಂತ" ಕಂಡುಬರುತ್ತಿಲ್ಲ.
 ಈಗ ವಾಸ್ತವದಲ್ಲಿ ಚರ್ಚೆ ನಡೆದಿರುವುದು ಚುನಾವಣೆಯಲ್ಲಿ ಗೆದ್ದು ಲೋಕಸಭೆಯ ಸದಸ್ಯರಾಗುವ ಹಕ್ಕನ್ನು ಪಡೆಯುವವರ ಸಂಖ್ಯೆಯ ವಿಚಾರವಷ್ಟೇ. ಅದೇ ಅತಿ ಮುಖ್ಯವಾದ ವಿಚಾರ. ಯಾವ ಪಕ್ಷಕ್ಕೆ ಅಥವಾ ಯಾವ ಕೂಟಕ್ಕೆ ಲೋಕಸಭೆಯ ಬಹುಮತದ ನಿರ್ಣಾಯಕ ಗೆರೆಯಂತಿರುವ 272 ಸ್ಥಾನಗಳು ಸಿಕ್ಕೀತು ಎನ್ನುವುದೇ ಎಲ್ಲರ ಬಾಯಲ್ಲೂ ಕೇಳಿಬರುತ್ತಿರುವುದು.
1967ರ ಚುನಾವಣೆಯವರೆಗೂ ದೇಶದಲ್ಲಿ ಇದ್ದ ರಾಜಕೀಯ ಸ್ಥಿತಿಯಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ಸಿಗೆ ಬಹುಮತದ ಸಮಸ್ಯೆಯೇ ಇರಲಿಲ್ಲ. ಅಲ್ಲಿಯವರೆಗೆ ಲೋಕಸಭೆಯಲ್ಲಿ 50ಕ್ಕಿಂತ ಹೆಚ್ಚು ಸ್ಥಾನ ಪಡೆದ ಅಧಿಕೃತ ವಿರೋಧ ಪಕ್ಷವೇ ಇರಲಿಲ್ಲ. ಆ ಕೊರತೆಯನ್ನು ಮೊದಲು ತುಂಬಿದ್ದು ಸ್ವತಂತ್ರ ಪಾರ್ಟಿಯ ಮಿನೂ ಮಸಾನಿ.
ಲೋಕಸಭೆಯಲ್ಲಿ ಬಹುಮತ ಪಕ್ಷಗಳಿಗೇಕೆ ಬೇಕು? ಸರ್ಕಾರ ನಡೆಸುವುದಕ್ಕೆ, ಶಾಸನಗಳ ರಚನೆಗೆ ಅದು ಅಗತ್ಯ. ಆದರೆ ಎರಡು ದಶಕಗಳ ಕಾಲ ಪ್ರಶ್ನಾತೀತವಾದ ರೀತಿಯ ಬಹುಮತವಿದ್ದರೂ ಆಗಿನ ಆಳುವ ಪಕ್ಷ ಕಡಿದು ಕಟ್ಟೆ ಹಾಕಿದ್ದೇನು? ಅದರಿಂದ ಉತ್ತಮವಾದ ಬಿಗಿಯಾದ ಆಡಳಿತ ವ್ಯವಸ್ಥೆ ರೂಪುಗೊಂಡಿತ್ತಾ? ತಜ್ಞರ ಸಮಿತಿಗಳು ಶಿಫಾರ್ಸು ಮಾಡಿದ್ದ ಸುಧಾರಣೆಗಳನ್ನು ಜಾರಿಗೆ ತರಲು ಆ ಬಹುಮತವನ್ನು ಬಳಸಲಾಯಿತಾ? ಈಗೇನೋ ಭಾರತೀಯ ಜನತಾ ಪಾರ್ಟಿ ತನ್ನ ಪ್ರಣಾಳಿಕೆಯಲ್ಲಿ, ಜಾಹೀರಾತುಗಳಲ್ಲಿ, ನಾಯಕರ ಭಾಷಣಗಳಲ್ಲಿ ಕಟ್ಟುನಿಟ್ಟಿನ ಬಿಗಿಯಾದ ಆಡಳಿತ ವ್ಯವಸ್ಥೆಯನ್ನು ಕುರಿತ ಭರವಸೆಗಳನ್ನು ನೀಡಿದೆ. ನಿಜ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಗುಜರಾತ್‌ನಲ್ಲಿ ಒಂದು ದಶಕದಲ್ಲಿ ಆರ್ಥಿಕ ಪವಾಡವನ್ನೇ ಸಾಧಿಸಲಾಗಿದೆ ಎನ್ನುವ ಹೇಳಿಕೆ ಸರ್ವಮಾನ್ಯವಲ್ಲ. ಅನೇಕ ಅಧ್ಯಯನ ಕೇಂದ್ರಗಳು, ಯೋಜನಾ ತಜ್ಞರು ಆ ಆರ್ಥಿಕ ಪವಾಡ ಮರೀಚಿಕೆ ಎಂದು ಹೇಳುತ್ತಿದ್ದಾರೆ. ಯೋಜನಾ ಆಯೋಗದ ಅಂಕಿ-ಅಂಶಗಳ ಪ್ರಕಾರವೂ ಭಾರತದ ರಾಜ್ಯಗಳಲ್ಲಿ ಗುಜರಾತ್ ನಂಬರ್ ಒನ್ ರಾಜ್ಯವೇನೂ ಅಲ್ಲ. ಆದರೆ ಶುದ್ಧ, ಕಟ್ಟುನಿಟ್ಟಾದ ಆಡಳಿತ ವ್ಯವಸ್ಥೆಯನ್ನು ರೂಪಿಸುವುದರಲ್ಲಿ ಗುಜರಾತ್ ಒಳ್ಳೆಯ ಹೆಸರನ್ನು ಗಳಿಸಿದೆ ಎನ್ನುವುದು ಹಲವು ಪ್ರತಿಷ್ಠಿತ ಆರ್ಥಿಕ ತಜ್ಞರ ಅಭಿಮತ. ದೇಶದ ಇತರ ಕಡೆಗಳಿಗಿಂತ ಗುಜರಾತಿನಲ್ಲಿ ಭ್ರಷ್ಟಾಚಾರ, ಜಾತೀಯತೆ, ಸ್ವಜನ ಪಕ್ಷಪಾತದ ಪಿಡುಗಿನ ಹಾವಳಿ ಕಡಿಮೆ. ಗುಜರಾತ್‌ನಲ್ಲಿ ಸಾಧ್ಯವಾಗಿದ್ದು ದೆಹಲಿಯಲ್ಲೇಕೆ ಸಾಧ್ಯವಾಗುತ್ತಿಲ್ಲ? ದೆಹಲಿಯೇ ಭ್ರಷ್ಟಾಚಾರದ ಗಂಗೋತ್ರಿಯಂತಾಗಿದೆ ಯಾಕೆ?
ಶಾಸನ ರಚನೆ ಆಗಿಲ್ಲ: ಇಂತಹ ಪ್ರಶ್ನೆಗಳಿಗೆ ಲೋಕಸಭೆಯಲ್ಲಿ ಪಕ್ಷಗಳ ಬಲಾಬಲಗಳ ಆಧಾರದ ಮೇಲೆ ಉತ್ತರಗಳನ್ನು ಕಂಡುಹಿಡಿಯುವ ಪ್ರಯತ್ನ ವ್ಯರ್ಥ. ಉತ್ತಮ ಶಾಸನಗಳ ರಚನೆಯೇ ಆ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲದು. ಅದನ್ನು ಸರಿಯಾಗಿ ತಿಳಿದುಕೊಂಡು, ಒಳ್ಳೆಯದನ್ನು ಪುರಸ್ಕರಿಸಿ, ಕೆಟ್ಟದ್ದನ್ನು ತಿರಸ್ಕರಿಸುವ ಸದಸ್ಯರು ಸದನಕ್ಕೆ ಹೆಚ್ಚಾಗಿ ಆರಿಸಿ ಬರಬೇಕು. ಹಾಗಾಗುವಂತೆ ನೋಡಿಕೊಳ್ಳುವುದು ಮತದಾರರ ಪ್ರತಿಜ್ಞೆಯಾಗಬೇಕು.
ಕಿಡಿಗೇಡಿತನ- ಒಂದು ಪಕ್ಷದ ಅಭ್ಯರ್ಥಿಯಾಗಿ, ಟಿಕೆಟ್ ಪಡೆದು, ಕೊನೆಯ ನಿಮಿಷದಲ್ಲಿ ಆ ಪಕ್ಷಕ್ಕೆ ಕೈಕೊಟ್ಟು ಅದರ ವಿರೋಧಿ ಶಿಬಿರವನ್ನು ಸೇರುವ ಪ್ರವೃತ್ತಿ ಈ ಚುನಾವಣೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಕರ್ನಾಟಕದಲ್ಲೂ ಇಂತಹ ಒಂದೆರಡು ಪ್ರಕರಣಗಳಿವೆ. ಬಿಹಾರದಲ್ಲಿ ಈಗಾಗಲೇ ಎರಡು ಪ್ರಕರಣಗಳು ವರದಿಯಾಗಿ ಇನ್ನೂ ಹಲವು ಪ್ರಕರಣಗಳು ನಡೆಯುವ ಸಂಭವವಿದ್ದಂತಿದೆ. ಕರ್ನಾಟಕದಲ್ಲಿ ದೇವೇಗೌಡರ ನಾಯಕತ್ವದ ಜಾತ್ಯತೀತ ಜನತಾದಳವೇ ಇಂತಹ ಕೆಟ್ಟ ಆಟಕ್ಕೆ ಬಲಿಯಾಗಿರುವುದು.  ಆದರೂ ಅವರ ಹೋರಾಟದ ಮನೋಧರ್ಮ ಸೋತಿಲ್ಲ. ಅವರ ಅಂತರಂಗದ ಕೂಟಗಳಲ್ಲಿನ ಮಾತುಕತೆಗಳಲ್ಲಿ ಈಗ ಪ್ರಧಾನವಾಗಿ ಕೇಳಿಬರುತ್ತಿರುವ ಮಾತು ಎಂದರೆ ಸೋಲಿನ ದವಡೆಯಿಂದಲೇ ವಿಜಯವನ್ನು ಹೊರಗೆ ತೆಗೆಯುವ ತಂತ್ರಗಳ ಪ್ರಯೋಗ. ಆ ಪ್ರಯೋಗದ ನಿಜವಾದ ಉಪಯುಕ್ತತೆ ಇರುವುದು ಜಾತ್ಯತೀತ ಜನತಾದಳದ ಅಭ್ಯರ್ಥಿಗಳ ಗೆಲುವಿನಲ್ಲಿ ಅಲ್ಲ. ಅವರ ಪ್ರಧಾನ ವಿರೋಧಿಗಳ ಸೋಲಿನಲ್ಲಿ.  ಇದರ ಪರಿಣಾಮ ಯಾವ ಪಕ್ಷವನ್ನು ಬಡಿಯಲಿದೆ? ಕಾಂಗ್ರೆಸ್ಸನ್ನೋ, ಬಿಜೆಪಿಯನ್ನೋ? ಅದು ದೇವೇಗೌಡರಿಗೂ ಗೊತ್ತಿಲ್ಲವಂತೆ.

-ಸತ್ಯ
anisikeprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ