ಯಾರ ಮೇಲೆ ಮಹಾರಾಷ್ಟ್ರದ ಮಮತೆ?
ಇಂದು ಮಹಾರಾಷ್ಟ್ರದಲ್ಲಿ ಕೊನೆಯ ಹಂತದ ಮತದಾನ. ಈಗಾಗಲೇ ಎರಡು ಹಂತಗಳನ್ನು ಪೂರೈಸಿರುವ ರಾಜ್ಯದಲ್ಲಿ ಒಟ್ಟೂ 48 ಸ್ಥಾನಗಳಿರುವುದರಿಂದ ಪ್ರಾಮುಖ್ಯವನ್ನು ಪಡೆದಿದೆ. ಈ ಹಂತದಲ್ಲಿ, ಅಲ್ಲಿನ ರಣಕಣದಲ್ಲಿ ಬೀಸುತ್ತಿರುವ ಗಾಳಿ ಯಾರ ಪರ ಹಾಗೂ ಈ ಚುನಾವಣೆಯಲ್ಲಿ ಬದಲಾವಣೆಯಾಗಿರುವ ಸಮೀಕರಣಗಳೇನು ಎಂದು ಗಮನಿಸುವುದು ಆಸಕ್ತಿದಾಯಕ.
2009ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್- ಎನ್ಸಿಪಿ ಮೈತ್ರಿಕೂಟವೇ ಮುನ್ನಡೆಯನ್ನು ಗಳಿಸಿತ್ತು. ಕಾಂಗ್ರೆಸ್ 17 ಸ್ಥಾನಗಳಲ್ಲಿ ಮತ್ತು ಎನ್ಸಿಪಿ 8 ಸ್ಥಾನಗಳಲ್ಲಿ ಗೆಲವು ದಾಖಲಿಸಿತ್ತು. ಬಿಜೆಪಿ- ಶಿವಸೇನೆ ಮೈತ್ರಿಗೆ 20 ಸ್ಥಾನಗಳು ಸಿಕ್ಕಿದ್ದವು.
ಇತ್ತೀಚೆಗೆ ಎನ್ಡಿಟಿವಿಗಾಗಿ ಹನ್ಸಾ ಅಧ್ಯಯನ ಸಂಸ್ಥೆ ನಡೆಸಿದ ಚುನಾವಣಾ ಪೂರ್ವಸಮೀಕ್ಷೆ, ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಹೋರಾಡುತ್ತಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಒಂದೆಂದು ಹೇಳುತ್ತ, ಎನ್ಡಿಎ ಮೈತ್ರಿಯೇ ಮಹಾರಾಷ್ಟ್ರದಲ್ಲಿ ಮುನ್ನಡೆ ಸಾಧಿಸಬಹುದು ಎಂಬ ಸುಳುಹು ನೀಡಿದೆ.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ ಮತ್ತು ಮಾಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ ಚೌಹಾಣ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿ ಜೋಡಿಯೇ ಎಂದಿನಂತೆ (ಹಿಂದಿನಂತೆ) ಗೆಲ್ಲಲಿದೆ ಎಂದು ಹೇಳುತ್ತಿದ್ದಾರೆ. ಆದರೆ ಈ ಬಾರಿ ಮಹಾರಾಷ್ಟ್ರದ 48 ಸ್ಥಾನಗಳಲ್ಲಿ ಬಿಜೆಪಿ-ಶಿವಸೇನೆ-ಆರ್ಪಿಐ(ಅಠಾವಳೆ ನೇತೃತ್ವದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ) 36 ಸ್ಥಾನಗಳಲ್ಲಿ ಗೆಲ್ಲಲಿದೆ ಎನ್ನುವುದು ಹನ್ಸರಾಜ್ ಸಮೀಕ್ಷೆಯ ಸಾರಾಂಶ.
ಸಮೀಕ್ಷೆಗಳ ಕತೆ ಹಾಗಿರಲಿ. ಅಲ್ಲಿನ ವಿದ್ಯಮಾನಗಳು ಏನೆಲ್ಲ ಕತೆಗಳನ್ನು ಹೇಳುತ್ತಿವೆ ನೋಡೋಣ. ಮುಂಬೈ, ಥಾಣೆ ಮತ್ತು ವಿದರ್ಭ ಕ್ಷೇತ್ರಗಳಲ್ಲಿ ಶಿವಸೇನೆ ತನ್ನ ಪ್ರಾಬಲ್ಯ ಇರುವುದಾಗಿ ಹೇಳುತ್ತಿದೆಯಾದರೂ ಬಾಳ ಠಾಕ್ರೆ ನಿಧನದ ನಂತರ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಕಳೆಯಿಲ್ಲದಿರುವುದು ಸತ್ಯ. ಈ ಕಾರಣಕ್ಕಾಗಿಯೇ ಮೂರನೇ ಹಂತದ ಚುನಾವಣೆಯಲ್ಲಿ ಮುಖ್ಯ ಆಟಗಾರನಾಗಿ ಗೋಚರಿಸುತ್ತಿರುವುದು ಬಿಜೆಪಿಯ ಹೊಸ ಗೆಳೆಯ ಆರ್ಪಿಐನ ಅಠಾವಳೆ. ಈ ಪಕ್ಷ ಅಂಬೇಡ್ಕರ್ ರಾಜಕೀಯ ಯಾನದಲ್ಲಿ ತನ್ನ ಬೇರುಗಳನ್ನು ಹೊಂದಿದೆ. ದಲಿತ ನಾಯಕರಾಗಿರುವ ರಾಮದಾಸ್ ಅಠಾವಳೆ ಮಹಾರಾಷ್ಟ್ರದ 10.5 ಪ್ರತಿಶತ ದಲಿತರ(ಮುಖ್ಯವಾಗಿ ಬೌದ್ಧ ದಲಿತರ) ಬೆಂಬಲವಿದೆ. ಆಶ್ಚರ್ಯವೆಂದರೆ ಆರ್ಪಿಐ ಈ ಬಾರಿ ಕಣಕ್ಕಿಳಿಸಿರುವುದು, ಕೇವಲ ಅಶೋಕ್ ಗಾಯಕ್ವಾಡರನ್ನು ಮಾತ್ರ. ಆದರೆ, ಮಹಾರಾಷ್ಟ್ರದ ಲೋಕಸಭಾ ಚುನಾವಣೆಯ ದಿಕ್ಕನ್ನು ನಿರ್ಧರಿಸಬಲ್ಲ ಸಾಮರ್ಥ್ಯ ಅಠಾವಳೆಗಿದೆ. ಅಠಾವಳೆ ವರ್ಚಸ್ಸು ಸುಮಾರು 18 ಕ್ಷೇತ್ರಗಳಿಗೆ ವ್ಯಾಪಿಸಿದೆ. ಈ ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್ನ 12 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇಲ್ಲೇನಾದರೂ ದಲಿತರು ಅಠಾವಳೆ ಮಾತಿಗೆ ಮಣೆ ಹಾಕಿದರೆಂದರೆ ಕಾಂಗ್ರೆಸ್ ಕಥೆ ಮುಗಿದಂತೆಯೇ. ಕಾಂಗ್ರೆಸ್ನ ಕಥೆ ಮುಗಿಸಬೇಕೆಂದೇ ಅಠಾವಳೆ ಕಾದಿದ್ದಾರೆ. ಇದಕ್ಕೆ ಕಾರಣವೂ ಇದೆ. 2009ರ ಚುನಾವಣೆಗಳಲ್ಲಿ ಕಾಂಗ್ರೆಸ್-ಎನ್ಸಿಪಿ ಜೋಡಿ ಆರ್ಪಿಐ ಅನ್ನು ತಮ್ಮತ್ತ ಸೆಳೆದುಕೊಳ್ಳಲು ಪ್ರಯತ್ನಿಸಿ ವಿಫಲವಾಗಿದ್ದವು. ಅದೇ ವರ್ಷ ಅಠಾವಳೆಯವರು ಶಿರಡಿಯಿಂದ ಸ್ಪರ್ಧಿಸಿ ಸೋತುಬಿಟ್ಟರು. ತಮ್ಮೊಂದಿಗೆ ಕೈ ಜೋಡಿಸಲಿಲ್ಲ ಎನ್ನುವ ಕಾರಣಕ್ಕೆ ಕಾಂಗ್ರೆಸ್ಸೇ ಮುಂದೆನಿಂತು ತಮ್ಮನ್ನು ಸೋಲಿಸಿತು ಎನ್ನುವ ಸಿಟ್ಟು ಅಂದಿನಿಂದಲೂ ಅಠಾವಳೆಯವರಿಗಿದೆ. ಆ ಸಮಯದಲ್ಲಿ ಬಿಜೆಪಿ ಬುದ್ಧಿವಂತಿಕೆ ಮೆರೆದು, ತನ್ನ ಒಂದು ರಾಜ್ಯಸಭಾ ಸ್ಥಾನವನ್ನು ಅಠಾವಳೆಯವರಿಗೆ ಬಿಟ್ಟುಕೊಟ್ಟು ಅವರೊಂದಿಗೆ ದೋಸ್ತಿ ಮಾಡಿಕೊಂಡಿತ್ತು. ಅಂದಿನಿಂದಲೇ ಕಾಂಗ್ರೆಸ್ಗೆ ಭಯ ಶುರುವಾಯಿತು. ಇವರಂತೆಯೇ ಆರ್.ಎಸ್. ಗವಾಯಿ, ಪ್ರಕಾಶ ಅಂಬೇಡ್ಕರ್ (ಅಂಬೇಡ್ಕರ್ ಮೊಮ್ಮಗ), ವಿಜಯ್ ಕಾಂಬ್ಳೆಯಂಥ ಪ್ರಬಲ ದಲಿತ ನಾಯಕರು ಅಲ್ಲಿದ್ದಾರಾದರೂ ಇವರೆಲ್ಲರೂ ಕಾಂಗ್ರೆಸ್ಗೆ ವಿರುದ್ಧವಾಗೇ ಇದ್ದಾರೆ. ಹಾಗಾಗೇ ದಲಿತರ ಬಹುಪಾಲು ಮತಗಳು, ಬಿಜೆಪಿ-ಶಿವಸೇನೆಗೆ ಹೋಗದಿದ್ದರೂ, ಕಾಂಗ್ರೆಸ್ನತ್ತ ಸುಳಿಯುವುದಿಲ್ಲ ಎನ್ನಲಾಗುತ್ತಿದೆ.
'1990ರವರೆಗೆ ದಲಿತರು ಜಾತ್ಯತೀತ-ಕೋಮುವಾದಿ ಚರ್ಚೆಗೆ ತಲೆಕೆಡಿಸಿಕೊಳ್ಳುತ್ತಿದ್ದರು ಎನ್ನುವುದು ನಿಜ. ಆದರೆ ಈಗಂತೂ ಅವರಿಗೆ ಶಿವಸೇನೆ ಮತ್ತು ಬಿಜೆಪಿ ಅಸ್ಪೃಶ್ಯವಾಗಿ ಉಳಿದಿಲ್ಲ' ಎನ್ನುತ್ತಾರೆ ದಲಿತ ಸಾಹಿತಿ ಅರ್ಜುನ್ ದಾಂಗ್ಳೆ. ಇನ್ನು ಪ್ರಕಾಶ ಅಂಬೇಡ್ಕರ್ ಬಿಜೆಪಿಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರಾದರೂ, 'ದಲಿತರು ಕಳೆದ ಹತ್ತು ವರ್ಷಗಳ ಕಾಂಗ್ರೆಸ್ ಅಧಿಕಾರದಲ್ಲಿ ಹೆಚ್ಚು ನೋವನುಭವಿಸಿದ್ದಾರೆ. ಹಾಗಾಗೇ ಕಾಂಗ್ರೆಸ್-ಎನ್ಸಿಪಿ ತೊಲಗಬೇಕು' ಎನ್ನುತ್ತಿದ್ದಾರೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಕಳಪೆ ಆಡಳಿತದಿಂದಾಗಿ, ಮಹಾರಾಷ್ಟ್ರದಲ್ಲಿಂದು ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆ ಭೀಕರವಾಗಿದೆ. ಮರಾಠಿಗರು ಮುಂಬೈಯಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ತಮ್ಮ ಪರವಾಗಿ ಮಾತನಾಡುವವರು ಬೇಕಾಗಿದ್ದಾರೆ. ಕಾಂಗ್ರೆಸ್ನಿಂದಂತೂ ಈ ಕೆಲಸ ಸಾಧ್ಯವಿಲ್ಲ ಎನ್ನುತ್ತಿರುವ ಆ ಜನ, ಈಗ ಶಿವಸೇನೆ ಮತ್ತು ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮೊರೆ ಹೋಗುತ್ತಿದ್ದಾರೆ.
ಸೊಲ್ಲಾಪುರ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸುಲಲಿತವಾಗಿ ಗೆದ್ದಿದ್ದ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂದೆ ಅವರೀಗ ಬಿಜೆಪಿಯ ಹಿಂದುಳಿದ ವರ್ಗದ ಯುವ ನಾಯಕ ಶರದ್ ಬನ್ಸೋಡೆ ಪೈಪೋಟಿ ಎದುರಿಸಬೇಕಾಗಿದೆ. ಮೂರು ಬಾರಿ ಆಯ್ಕೆಯಾದರೂ, ತಮ್ಮ ಕ್ಷೇತ್ರವನ್ನೂ ಮೂಸಿಯೂ ನೋಡದ ಶಿಂದೆಗೆ ಪಾಠ ಕಲಿಸಲು ಮತದಾರರು ಮನಸ್ಸು ಮಾಡಿದ್ದಾರೆ. ಒಂದೊಮ್ಮೆ ಮಾಜಿ ಮುಖ್ಯಮಂತ್ರಿ ವಿಲಾಸ ರಾವ್ ದೇಶಮುಖ ಅವರ ಮೈದಾನವಾಗಿದ್ದ ಲಾತೂರ್ ಕೂಡ ಈಗ ಕಾಂಗ್ರೆಸ್ನ ಕೈ ಬಿಟ್ಟು ಬಿಜೆಪಿಯ ಸುನೀಲ್ ಗಾಯಕ್ವಾಡ್ ಅವರತ್ತ ನೋಡುತ್ತಿದೆ. ಮೊದಲಿನಿಂದಲೂ ನಾಂದೇಡ್ ಕ್ಷೇತ್ರ ಚೌಹಾಣ್ ಕುಟುಂಬದ ಹಿಡಿತದಲ್ಲೇ ಇತ್ತು. ತಮ್ಮ ಸ್ವಚ್ಚ ಹಾಗೂ ಜನಪರ ಆಡಳಿತದಿಂದ ಹೆಸರು ಮಾಡಿದ್ದ ಶಂಕರ್ರಾವ್ ಚೌಹಾಣ್ರನ್ನು ಆ ಕ್ಷೇತ್ರದಲ್ಲಿ ಕೆಣಕುವವರ್ಯಾರೂ ಇರಲಿಲ್ಲ. ಆದರೆ, ಅವರ ಮಗ, ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್, ಹಗರಣಗಳ ಸುಳಿಯಲ್ಲಿ ಸಿಲುಕಿ ನಾಂದೇಡ್ನಲ್ಲಿ ತೀವ್ರ ಪೈಪೋಟಿ ಎದುರಿಸುವಂತಾಗಿದೆ. ಎಳ್ಳುನೀರು ಬಿಡುವ ಎಲ್ಲಾ ಲಕ್ಷಣಗಳೂ ಇವೆ.
ಹೊರಗಿನ ತೊಂದರೆಗಳೇನೇ ಇರಲಿ, ಹತ್ತು ವರ್ಷದ ಕಾಂಗ್ರೆಸ್-ಎನ್ಸಿಪಿ ಮೈತ್ರಿಗೆ ಒಳಗೇ ಸಾವಿರಾರು ಗುಪ್ತ ಸಮಸ್ಯೆಗಳು ಶುರುವಾಗಿವೆ. ಕಾಂಗ್ರೆಸ್ ಮೈತ್ರಿಕೂಟ ಧರ್ಮವನ್ನು ಪಾಲಿಸುತ್ತಿಲ್ಲ, ತನಗೆ ಬೇಕಾದ ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ಕೊಡುತ್ತಿಲ್ಲ ಎಂದು ಹಿಂದೆ ಎನ್ಸಿಪಿ ದುಸುಮುಸು ಮಾಡಿ ಸುಮ್ಮನಾಗಿದ್ದು ಎಲ್ಲರಿಗೂ ತಿಳಿದಿದೆ. ಆದರೆ ಈ ಅಸಮಾಧಾನವೇ ಕೆಲವು ಕ್ಷೇತ್ರಗಳಲ್ಲಿ ಅದಕ್ಕೆ ಕಾಂಗ್ರೆಸ್ನ ವಿರುದ್ಧ ಕೆಲಸ ಮಾಡಲು ಪ್ರೇರೇಪಣೆ ಕೊಟ್ಟಿರುವುದು ಸುಳ್ಳಲ್ಲ. ಕ್ಯಾಬಿನೆಟ್ ಸಚಿವ ನಾರಾಯಣ ರಾಣೆಯವರ ಮಗ ನೀಲೇಶ್ ರಾಣೆ ಈ ಬಾರಿ ಕೊಂಕಣ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ನ ಈ ನಾಯಕನಿಗೆ ಮಾತ್ರ ತಾವು ಬೆಂಬಲ ಕೊಡುವುದಿಲ್ಲ ಎಂದು ಸ್ಥಳೀಯ ಎನ್ಸಿಪಿ ನಾಯಕರು ಮತ್ತು ಕಾರ್ಯಕರ್ತರು ಹೇಳುತ್ತಿದ್ದಾರೆ. ಇದಕ್ಕೆ ಕಾರಣವೇನೆಂದು ತಿಳಿಯದಾದರೂ ಈ ಒಳಜಗಳದಿಂದ, ಅಲ್ಲಿನ ಮತಗಳು ಹಂಚಿ ಹೋಗಬಹುದೆಂಬ ಭಯ ಕಾಂಗ್ರೆಸ್ಗೆ ಶುರುವಾಗಿದೆ.
***
ಚುನಾವಣಾ ಪೂರ್ವ ಸಮೀಕ್ಷೆಗಳ ಭವಿಷ್ಯವಾಣಿಯಂತೂ ಬಿಜೆಪಿಗೇ ಜೈ ಅನ್ನುತ್ತಿದೆ. ಆದರೆ ಇವೆಲ್ಲದರ ನಡುವೆಯೂ ಶಿವಸೇನೆಯ ಸಾಂಪ್ರದಾಯಿಕ ಬೆಂಬಲಿಗರಲ್ಲಿ ಮಾತ್ರ ವಿಷಾದದ ವಾತಾವರಣ ಮಡುಗಟ್ಟಿದೆ. 1966ರಲ್ಲಿ ಅಸ್ತಿತ್ವಕ್ಕೆ ಬಂದ ಶಿವಸೇನೆ ಬಾಳ ಠಾಕ್ರೆಯವರ ವರ್ಚಸ್ಸಿನಿಂದಾಗಿ, ಮರಾಠಿಗರ ಬೆಂಬಲದಿಂದಾಗಿ ಮಹಾರಾಷ್ಟ್ರದ ನಿರ್ಣಾಯಕ ಶಕ್ತಿಯಾಗಿ ಬೆಳೆದಿತ್ತು. ಬಾಳಾ ಸಾಹೇಬರ ಭಾಷಣ ಕಲೆ, ಉಗ್ರ-ಸ್ಪಷ್ಟ ನಿಲುವು..ಜನರನ್ನು ಸೆಳೆಯುವ ಸಾಮರ್ಥ್ಯ ಉದ್ಧವ್ ಠಾಕ್ರೆಯಲ್ಲಂತೂ ಕಾಣುತ್ತಿಲ್ಲ. ಸಹೋದರ ರಾಜ್ ಠಾಕ್ರೆ ಶಿವಸೇನೆಯಿಂದ ಹೊರನಡೆದು ನವ ನಿರ್ಮಾಣ ಸೇನೆಯನ್ನು ಕಟ್ಟಿಕೊಂಡದ್ದು, ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ, ಆನಂದ್ ಪರಾಂಜಪೆ, ಮೋಹನ್ ರಾವ್ಲೆಯಂಥ ನಾಯಕರು ಉದ್ಧವ್ ವಿರುದ್ಧ ಮುನಿಸಿಕೊಂಡು ಬೇರೆಯಾಗಿದ್ದು.. ರಾಜ್ ಠಾಕ್ರೆ ಪರ್ಯಾಯ ಶಕ್ತಿಯಾಗಿ ಬೆಳೆದದ್ದು, ಈ ಎಲ್ಲಾ ಅಂಶಗಳೂ ಶಿವಸೇನೆಯ ಕಳೆಯನ್ನು ಕಳೆದುಬಿಟ್ಟಿವೆ. ಬಿಜೆಪಿಗೂ ಶಿವಸೇನೆ ಹೆಚ್ಚು ದಿನ ಬದುಕಲಾರದು ಎನಿಸಿದೆಯೇನೋ. ಆ ಕಾರಣಕ್ಕಾಗಿಯೇ ಅದು ರಾಜ್ ಠಾಕ್ರೆ ಜತೆಗೂ ತೆರೆಮರೆ ಸಲ್ಲಾಪದಲ್ಲಿದೆ. ಚುನಾವಣೆ ಕಣದಲ್ಲಿ ಮೈತ್ರಿಯ ಹೊರಗಿದ್ದರೂ ಅಗತ್ಯ ಬಿದ್ದರೆ ತಮ್ಮ ಸಂಸದರು ನರೇಂದ್ರ ಮೋದಿಯವರನ್ನು ಬೆಂಬಲಿಸುವುದಾಗಿ ರಾಜ್ ಠಾಕ್ರೆ ಸಾರಿದ್ದಾರೆ. ಮುಂದಿನ ದಿನಗಳಲ್ಲಿ ಶಿವಸೇನೆ ಜಾಗವನ್ನು ಎಂಎನ್ಎಸ್ ಆಕ್ರಮಿಸಬಹುದಾ? ಶಿವಸೇನೆಗೆ ಇದೇ ಕೊನೆಯ ಲೋಕಸಭೆ ಚುನಾವಣೆ ಆದೀತಾ? ಹೀಗೆಲ್ಲ ಚರ್ಚೆಗಳು ಬಿಚ್ಚಿಕೊಂಡಿವೆ.
***
'ದಲಿತರು- ಮುಸ್ಲಿಮರು ನಮ್ಮ ಜತೆಗಿದ್ದಾರೆ. ಈ ಸಾಂಪ್ರದಾಯಿಕ ಕೋಟೆಯೇ ನಮ್ಮನ್ನು ಮುನ್ನಡೆ ಕಾಪಾಡಿಕೊಳ್ಳುವುದಕ್ಕೆ ಸಹಕರಿಸಲಿದೆ' ಅನ್ನೋದು ಕಾಂಗ್ರೆಸ್ ವಾದ. 'ಮೋದಿ ಅಲೆಯಲ್ಲಿ ಜಾತಿ-ವರ್ಣಗಳ ಕಂದಕಗಳು ಇಲ್ಲವಾಗಿವೆ. ಎಲ್ಲ ವರ್ಗಗಳಲ್ಲೂ ಅಭಿವೃದ್ಧಿಯ ಭರವಸೆ ಹುಟ್ಟಿಸಿರುವ ಮೋದಿ ಬಿಜೆಪಿಗೆ ಲಾಭ ಮಾಡಿಕೊಡಲಿದ್ದಾರೆ' ಎಂಬುದು ಬಿಜೆಪಿ ಪ್ರತಿವಾದ. ಇದಕ್ಕೆ ಪೂರಕವೆಂಬಂತೆ ಆಗಿರುವ ಕೆಲವು ಬೆಳವಣಿಗೆಗಳು ಹೀಗಿವೆ. 'ಸ್ವಾಭಿಮಾನಿ ಶೇತ್ಕಾರಿ ಸಂಘಟನ್' ಎಂಬ ಮಹಾರಾಷ್ಟ್ರದ ಬೃಹತ್ ರೈತ ಸಂಘಟನೆ, 'ಗುಜರಾತ್ ಮಾದರಿ ಅಭಿವೃದ್ಧಿ' ಎಂಬ ಮಂತ್ರ ಜಪಿಸುತ್ತ ನರೇಂದ್ರ ಮೋದಿಯವರನ್ನು ಬೆಂಬಲಿಸಿದೆ. ಎನ್ಸಿಪಿಯ ಪ್ರಭಾವಿ ನೇತಾರ ವಿನಾಯಕ ಮೆಟೆ ತಮ್ಮ ಪಕ್ಷ ತೊರೆದು ಬಿಜೆಪಿ ಮೈತ್ರಿ ಜತೆ ಕೈಜೋಡಿಸಿದ್ದಾರೆ. ಮರಾಠಾ ಮತಗಳನ್ನು ಬಾಚಿಕೊಂಡ ಎನ್ಸಿಪಿ, ಶೈಕ್ಷಣಿಕವಾಗಿ ಆ ಸಮುದಾಯಕ್ಕೆ ಸೌಲಭ್ಯಗಳನ್ನೇ ನೀಡಿಲ್ಲ ಎಂಬುದವರ ಆಕ್ರೋಶ. ಹಿಂದುತ್ವವನ್ನು ವಿರೋಧಿಸಿಕೊಂಡಿದ್ದ ರಿಪಬ್ಲಿಕನ್ ಪಾರ್ಟಿ, ಮೋದಿ ನಾಯಕತ್ವ ಒಪ್ಪಿಕೊಂಡಿರುವುದರಿಂದ ದಲಿತ ಮತಗಳನ್ನು ಸೆಳೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಶಿವಸೇನೆಯನ್ನು ವಿರೋಧಿಸುತ್ತಿದ್ದರೂ ಮೋದಿಗೇ ತಮ್ಮ ಬೆಂಬಲ ಎನ್ನುತ್ತಿರುವ ರಾಜ್ ಠಾಕ್ರೆ ನಡೆಯಿಂದ ಬಿಜೆಪಿ ಒಳಗೊಳಗೇ ಖುಷಿಗೊಂಡಿದೆ.
ಇವೆಲ್ಲ ಬಲಗಳ ಹೊರತಾಗಿಯೂ ಶರದ್ ಪವಾರ್ರಂಥ ನಾಯಕರು ಮಹಾರಾಷ್ಟ್ರದ ವಿದರ್ಭದ ಸಕ್ಕರೆ ಬೆಲ್ಟ್ನಲ್ಲಿ ಹೊಂದಿರುವ ಹಿಡಿತವನ್ನು ಸುಲಭಕ್ಕೆ ತಪ್ಪಿಸಲಾಗದು. ಈ ಹಿಂದಿನ ಚುನಾವಣೆಯಲ್ಲಿ ವಿದರ್ಭ ಪ್ರಾಂತ್ಯದಲ್ಲಿ ಬಿಜೆಪಿ ಮೈತ್ರಿಗೆ ಒಂದೇ ಒಂದು ಸ್ಥಾನ ಗೆಲ್ಲುವುದಕ್ಕೂ ಶಕ್ಯವಾಗಿರಲಿಲ್ಲ. ಮೋದಿ ಅಲೆ ಆ ಸಮೀಕರಣವನ್ನೂ ಅಲ್ಲಾಡಿಸಲಿದೆಯಾ? ಎಲ್ಲ ಉತ್ತರಗಳಿಗೆ ಕಾಯುವಿಕೆ ಅನಿವಾರ್ಯ.
-ರಾಘವೇಂದ್ರ ಆಚಾರ್ಯ