ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಶ್ವಾನಮುಕ್ತಿ, ಸ್ವಚ್ಛತೆ ವಿಧಾನಸೌಧಕ್ಕಷ್ಟೇ ಸೀಮಿತವೇ?

ಶ್ವಾನಮುಕ್ತಿ, ಸ್ವಚ್ಛತೆ ವಿಧಾನಸೌಧಕ್ಕಷ್ಟೇ ಸೀಮಿತವೇ? ಸಚಿವ ಬೇಗ್ ಮೊನ್ನೆ...

Vishwanath S
Updated On : 26 Apr 2014, 10:21 am

ಸಚಿವ ಬೇಗ್ ಮೊನ್ನೆ ಮಾಧ್ಯಮದ ಎದುರು ಶಕ್ತಿಸೌಧವನ್ನು ಕಾಡುತ್ತಿರುವ ಶ್ವಾನ ಮತ್ತು ಸ್ವಚ್ಛತೆ ಬಗ್ಗೆ ಅಲವತ್ತುಕೊಂಡಿದ್ದಾರೆ. ಅವರ ಕಳಕಳಿ ಮೆಚ್ಚಬೇಕಾದದ್ದೇ! ಆದರೆ ಬೇಗ್ ಸಾಹೇಬರು ಬೆಂಗಳೂರಿನ ಜನ ನಾಯಿ ಕಾಟದಿಂದ ತತ್ತರಿಸಿ ಹೋಗಿದ್ದಾಗ ಎಲ್ಲಿದ್ದರು? ಜನರ ಕಷ್ಟದ ಬಗ್ಗೆ ಮೂಡದ ಕಾಳಜಿ ವಿಧಾನಸೌಧದಲ್ಲಿ ನಾಯಿ ಕಾಣುತ್ತಿದ್ದಂತೆ ಮೂಡಿದ್ದು ಹೇಗೆ? ವಿಧಾನಸೌಧಕ್ಕೆ ಬಂದವರ 'ಜಲಬಾಧೆ' ಬಗ್ಗೆ ಮಾತನಾಡಿದ್ದಾರೆ. ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಬಗ್ಗೆ ಮಾತನಾಡುವ ಅಗತ್ಯವಿಲ್ಲವೇ?

ಹೈಕಮಾಂಡ್ ಹಿಂದೆ-ಮುಂದೆ ನಿಷ್ಠೆಯಿಂದ ಅಲೆದಾಡಿ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಜಾಗ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಸಚಿವ ರೋಷನ್ ಬೇಗ್, ರಾಜ್ಯದ ಮೂಲಸೌಕರ್ಯ ಕ್ಷೇತ್ರದಲ್ಲೇ ಭಾರಿ ಸಾಧನೆಗೆ ಮುಂದಾಗಿದ್ದಾರೆ...!

ಮೂಲಸೌಕರ್ಯ ಖಾತೆ ಕೆಲಸವೇ ಹಾಗಲ್ಲವೇ? ಅಭಿವೃದ್ಧಿ, ನಿರ್ಮಾಣ, ಸೌಂದರೀಕರಣವೆಂಬ ಮೂರು ಆಯಾಮ ಹೊಂದಿರುವ ಈ ಇಲಾಖೆ ಕೆಲಸ ಆರಂಭವಾಗುವುದೇ ತೆರವು ಕಾರ್ಯಾಚರಣೆಯೊಂದಿಗೆ. ಹೀಗಾಗಿ ಕಷ್ಟಪಟ್ಟು ವಿಧಾನಸೌಧದ ಮೆಟ್ಟಿಲೇರಿರುವ ಬೇಗ್ ಸಾಹೇಬ್ರಿಗೆ ವಿಧಾನಸೌಧದಲ್ಲಿ ಓಡಾಡುತ್ತಿರುವ ನಾಯಿಗಳು, ಪಾಳು ಬಿದ್ದ ಶೌಚಾಲಯಗಳನ್ನು ನೋಡಿ ಅಂತರಂಗ ಒಂದೇ ಸಮನೆ ಚೀರಲಾರಂಭಿಸಿದೆ. ಶಕ್ತಿಸೌಧದ ಸೌಂದರ್ಯದ ಮೆರುಗು ಹೆಚ್ಚಿಸುವುದಕ್ಕಾಗಿ ನಾಯಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ.
'ರೀ ವಿಧಾನಸೌಧಕ್ಕೆ ನಾಯಿಗಳು ಬರ್ತಾ ಇವೆ. ಬ್ಯಾಂಕ್ವೆಟ್ ಹಾಲ್ ಗೋಡೆ ಮೇಲೆ ಸೂಸು ಮಾಡ್ತಾ ಇವೆ. ನೀವೆಲ್ಲ ಏನ್ಮಾಡ್ತಾ ಇದ್ದೀರಾ?' ಎಂದು ಅಧಿಕಾರಿಗಳಿಗೆ 'ಶಿವಾಜಿನಗರ' ಶೈಲಿಯಲ್ಲಿ ರೋಪ್ ಹಾಕಿದ್ದರೂ ಯಾರೂ 'ಕ್ಯಾರೆ' ಎನ್ನದೇ ಇದ್ದಾಗ, ರಾಜ್ಯದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆ ಪತ್ರ ಬರೆದು 'ಶ್ವಾನೋಪಶಮನ'ದ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಆದರೂ ವಿಧಾನಸೌಧ-ವಿಕಾಸಸೌಧ ಸುತ್ತಮುತ್ತ ಸಚಿವರ ಕಾರು ಓಡಾಡುವಾಗಲೇ 'ಡೊಂಕು ಬಾಲ'ದ ನಾಯಕರು ಅಲೆದಾಡುತ್ತಾ, ಕುಂಯ್ಯ್ ಕುಂಯ್ಯ್ ರಾಗ ಹಾಡುತ್ತಿರುವುದನ್ನು ಸಹಿಸದ ಸಚಿವ ಬೇಗ್ ಮೊನ್ನೆ ಮಾಧ್ಯಮದ ಎದುರು ಶಕ್ತಿಸೌಧವನ್ನು ಕಾಡುತ್ತಿರುವ ಶ್ವಾನ ಮತ್ತು ಸ್ವಚ್ಛತೆ ಬಗ್ಗೆ ಅಲವತ್ತುಕೊಂಡಿದ್ದಾರೆ. ನಾನು ಪತ್ರ ಬರೆದರೂ ಯಾರೂ ನಾಯಿ ಓಡಿಸುತ್ತಿಲ್ಲ. ಹೀಗಾದರೆ ವಿಧಾನಸೌಧದ ಗತಿಯೇನು? ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಅವರ ಕಳಕಳಿ ಮೆಚ್ಚಬೇಕಾದದ್ದೇ! ಆದರೆ ಬೇಗ್ ಸಾಹೇಬರು ಬೆಂಗಳೂರಿನ ಜನ ನಾಯಿ ಕಾಟದಿಂದ ತತ್ತರಿಸಿ ಹೋಗಿದ್ದಾಗ ಎಲ್ಲಿದ್ದರು? ಜನರ ಕಷ್ಟದ ಬಗ್ಗೆ ಮೂಡದ ಕಾಳಜಿ ವಿಧಾನಸೌಧದಲ್ಲಿ ನಾಯಿ ಕಾಣುತ್ತಿದ್ದಂತೆ ಮೂಡಿದ್ದು ಹೇಗೆ? ಜನ ಹೇಗಾದರೂ ಇರಲಿ. ವಿಧಾನಸೌಧದಲ್ಲಿ ಮಾತ್ರ ನಾಯಿ ಬೇಡ ಎಂದರ್ಥವೇ?
ಬೆಂಗಳೂರಿನಲ್ಲಿ ನಾಯಿ ಸಮಸ್ಯೆ ಅಷ್ಟು ಸುಲಭವಾಗಿ ಪರಿಹರಿಸುವಂತದ್ದಲ್ಲ. (ವಿಧಾನಸೌಧ-ವಿಕಾಸಸೌಧವೂ ಬೆಂಗಳೂರಿನಲ್ಲೇ ಇದೆ) ವಿಧಾನಸೌಧ ಸುತ್ತಮುತ್ತ ಪಕ್ಕಾ ಲೆಕ್ಕ ಹಾಕಿದರೆ 15ರಿಂದ 25 ನಾಯಿಗಳು ವಾಸ ಇದ್ದಿರಬಹುದು. ಈ ಪೈಕಿ ಹಲವು ಸೌಧವನ್ನು ಕಾಯುವ ಪೊಲೀಸ್ ಸಿಬ್ಬಂದಿಗಳ ಜತೆ ನಿಕಟ ಗೆಳೆತನವನ್ನೂ ಹೊಂದಿದೆ. ಅವು ಸೌಧಕ್ಕೆ ಬಂದವರಿಗೆ ಇದುವರೆಗೆ ಕಚ್ಚಿಲ್ಲ. ಬೊಗಳಿಲ್ಲ. ಅಷ್ಟರಮಟ್ಟಿಗೆ ಅವು ಸಭ್ಯ.
ಮನಸ್ಸು ಮಾಡಿದರೆ ಸೌಧದ ಸುತ್ತ ಇರುವ ಈ ನಾಯಿಗಳನ್ನು ಲೆಕ್ಕ ಹಾಕಿ ಹಿಡಿದು ಓಡಿಸಬಹುದು. ಆದರೆ ಬೆಂಗಳೂರಿನಲ್ಲಿ ಇರುವ ಬೀದಿನಾಯಿಗಳ ಸಂಖ್ಯೆ ಎಷ್ಟು ಗೊತ್ತೇ? 2007ರಲ್ಲಿ ಬಿಬಿಎಂಪಿ ಅಧಿಕಾರಿಗಳು ಬೀದಿ ಬೀದಿ ಸುತ್ತಿ ಲೆಕ್ಕ ಹಾಕಿದ ಮಾಹಿತಿ ಪ್ರಕಾರ ನಗರದಲ್ಲಿ ಆಗ 3,27,218 ಬೀದಿ ನಾಯಿಗಳಿದ್ದವು. ದೇಶದ ಇತರೆಲ್ಲ ಮಹಾನಗರಗಳ ರೀತಿ ಬೆಂಗಳೂರಿನಲ್ಲೂ ಜನಸಂಖ್ಯೆ ವೃದ್ಧಿಯಾಗಿದೆ. ಆದರೆ ಶ್ವಾನ ಸಂತತಿ ವೃದ್ಧಿಯಲ್ಲಿ ದೇಶದ ಎಲ್ಲ ಮಹಾನಗರಗಳಿಗಿಂತ ಬೆಂಗಳೂರೇ ಮುಂದಿದೆ. 2007ರ ನಂತರ ಬೆಂಗಳೂರಿನ ಬೀದಿ ನಾಯಿಗಳ ವೈಜ್ಞಾನಿಕ ಲೆಕ್ಕಾಚಾರ ನಡೆದಿಲ್ಲವಾದರೂ ಐದಾರು ಲಕ್ಷಕ್ಕೇನು ಕಡಿಮೆ ಇಲ್ಲ ಎನ್ನಬಹುದು.
ಬೆಂಗಳೂರಿನಲ್ಲಿ ಬೀದಿ ನಾಯಿ ಹಾವಳಿ ಯಾವ ಮಟ್ಟಕ್ಕಿದೆ ಎಂದು ನೀವು ಅರಿಯಬೇಕಿದ್ದರೆ ಬೆಂಗಳೂರಿನ ಖಾಲಿ ಸೈಟ್‌ಗಳತ್ತ ದೃಷ್ಟಿ ಹಾಕಬೇಕಿಲ್ಲ. ಅಂತರ್ಜಾಲ ತಾಣದಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ಅಲವತ್ತುಕೊಳ್ಳುವುದಕ್ಕಾಗಿ ನಾಗರಿಕರು ನೂರಾರು ವೆಬ್‌ಸೈಟ್‌ಗಳನ್ನು ಮಾಡಿಕೊಂಡಿದ್ದಾರೆ. ರೋಷನ್ ಬೇಗ್ ಸಾಹೇಬರು ಈ ವೆಬ್‌'ಸೈಟ್‌' ಮೇಲೆ ಕಣ್ಣಾಡಿಸಿದ್ದರೆ ಬೀದಿ ನಾಯಿ ಸಮಸ್ಯೆಗೆ ಸಮಗ್ರ ಪರಿಹಾರ ಹುಡಕಬಹುದಿತ್ತು.
ಯಾವುದೇ ಬೃಹತ್ ಕಾಮಗಾರಿ ಆರಂಭಿಸುವಾಗ ಮೊದಲು ಅದರ ಕಾರ್ಯಸಾಧ್ಯತೆ ವರದಿ ತಯಾರಿಸಬೇಕು. ಬೆಂಗಳೂರಿನ ಮಟ್ಟಿಗೆ ನಾಯಿ ತೆರವು ಕಾಮಗಾರಿ ಸಣ್ಣ ವಿಚಾರವಲ್ಲ. ವಿಧಾನಸೌಧ ಸುತ್ತಮುತ್ತಲಿನ ಪ್ರದೇಶ ಬಿಟ್ಟು ಇಡೀ ನಗರದ ಸೌಂದರ್ಯ-ಶುಚಿತ್ವ ಕಾಪಾಡುವ ಉದ್ದೇಶದಿಂದ ಬೇಗ್ ಸಾಹೇಬರು ಈ ಯೋಜನೆ ವಿಸ್ತರಿಸುವಂತಿದ್ದರೆ ಒಮ್ಮೆ ಜನಾಗ್ರಹ- ಸೆಂಟರ್ ಫಾರ್ ಸಿಟಿಜನ್ ಆಂಡ್ ಡೆಮಾಕ್ರಸಿ ಎಂಬ ಸಂಸ್ಥೆಯನ್ನು ಸಂಪರ್ಕಿಸಿದರೆ ಇನ್ನೂ ಒಳಿತು. ಈ ಸಂಘಟನೆ ಕಾರ್ಯಕರ್ತರು ಅಲೆದಾಡಿ ಕಲೆ ಹಾಕಿರುವ ಮಾಹಿತಿ ಪ್ರಕಾರ ಬೆಂಗಳೂರು ಮಹಾನಗರದ ಪ್ರತಿ 37 ಜನರಿಗೆ ಒಂದು ಬೀದಿ ನಾಯಿ ಇದೆಯಂತೆ! ಇದು ಇಷ್ಟೇ ಆದರೆ ತೊಂದರೆ ಇಲ್ಲ, ಕೆಲ ನಾಗರಿಕ ಸಂಘಟನೆ ಸದಸ್ಯರು ಭವಿಷ್ಯದಲ್ಲಿ ಬೆಂಗಳೂರಿನಲ್ಲಿ ಶ್ವಾನ ಸಂತತಿ ಬೆಳೆಯುವ ಪರಿಯ ವಿವರಣೆ ಕೇಳಿದರೆ ಕಂಗಾಲಾಗುತ್ತೀರಿ. ಇದು ಚುನಾವಣೆ ಸಂದರ್ಭದಲ್ಲಿ ಯಾವ ವಯೋವಾನದವರು ಯಾವ ಪಕ್ಷಕ್ಕೆ ಮತ ಹಾಕುತ್ತಾರೆ ಎಂದು ರಾಜಕಾರಣಿಗಳು ಹಾಕುವ ಲೆಕ್ಕಾಚಾರಕ್ಕಿಂತ ರೋಚಕವಾಗಿದೆ. ಈ ಶ್ವಾನ ತಜ್ಞರ ಪ್ರಕಾರ, ಒಂದು ಹೆಣ್ಣುನಾಯಿ 4 ರಿಂದ 16 ವರ್ಷ ಬದುಕಬಲ್ಲದು. ಅವು ಒಮ್ಮೊಮ್ಮೆ 3ರಿಂದ 9 ಮರಿ ಹಾಕುತ್ತದೆ. ಹಾಗಾದರೆ ಬೆಂಗಳೂರಿನಲ್ಲಿರುವ ಹೆಣ್ಣು ನಾಯಿಗಳು ಎಷ್ಟು?  ಅವುಗಳ ಜೀವಿತಾವಧಿ ಹಾಗೂ ಹಾಕುವ ಮರಿ, ಮುಂದೆ ಅವು ನಾಗರಿಕರಿಗೆ ಕೊಡಬಹುದಾದ ತೊಂದರೆಯನ್ನು ಲೆಕ್ಕ ಹಾಕಿ!
ಅಷ್ಟಕ್ಕೂ ಬೆಂಗಳೂರಿನಲ್ಲಿ ಬೀದಿ ನಾಯಿ ಹಾವಳಿ ವಿರುದ್ಧ ನಾಗರಿಕರು ಬೊಬ್ಬೆ ಹಾಕಲು ತೊಡಗಿ ಐದಾರು ವರ್ಷವಾಯ್ತು. ಚಂದ್ರಾ ಲೇಔಟ್, ಯಲಹಂಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳು ಹಲ್ಲು ಮಸೆಯುತ್ತಾ, ಆಡುವ ಮಕ್ಕಳ ಮೇಲೆ ದಾಳಿ ನಡೆಸಿ ತಿಂದು ಹಾಕಿದ್ದವು. ಆಗ ನಾಯಿ ಕೊಲ್ಲಿ ಅಭಿಯಾನಕ್ಕೆ ಆಗ್ರಹಿಸಿ ನಾಗರಿಕರು ಪ್ರತಿಭಟನೆ ಆರಂಭಿಸಿದ್ದರು. ಆದರೆ ಫಲಿತಾಂಶ ಮಾತ್ರ ಶೂನ್ಯ. ಜನರ ಪರಿಸ್ಥಿತಿ ಹೀಗಿರುವಾಗ ಬೇಗ್ ಸಾಹೇಬರು ವಿಧಾನಸೌಧದಲ್ಲಿರುವ 10-15 ನಾಯಿಗೇ ಕಂಗಾಲಾದರೆ ಹೇಗೆ?
ಬೀದಿ ನಾಯಿ ಸಂಹಾರ ವಿಚಾರವೊಂದು ರಾಜ್ಯ ಹೈಕೋರ್ಟ್‌ನಲ್ಲಿ ಇನ್ನೂ ವಿಚಾರಣೆ  ಹಂತದಲ್ಲಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅನಿಮಲ್ ಬರ್ತ್ ಕಂಟ್ರೋಲ್ (ಡಾಗ್ಸ್) ರೂಲ್ಸ್ ಪ್ರಕಾರ, ಯಾವುದೇ ಬೀದಿ ನಾಯಿಯನ್ನು ಕೊಲ್ಲುವಂತಿಲ್ಲ. ಅವುಗಳಿಗೆ ಕೇವಲ ಸಂತಾನ ಹರಣ ಚಿಕಿತ್ಸೆ ಮಾತ್ರ ಮಾಡಬೇಕು. ಯಾವುದಾದರೂ ಪ್ರದೇಶದಲ್ಲಿ ಬೀದಿ ನಾಯಿ ಹಾವಳಿ ಇದ್ದರೆ ಬಿಬಿಎಂಪಿಗೆ ಮಾಹಿತಿ ನೀಡಿದರೆ ಅಧಿಕಾರಿಗಳು ಅಂಥ ನಾಯಿಯನ್ನು ಹಿಡಿದು ಶಸ್ತ್ರಚಿಕಿತ್ಸೆ ನಡೆಸಿ ಮತ್ತೆ ಅದೇ ಪ್ರದೇಶಕ್ಕೆ ತಂದು ಬಿಡಬೇಕು ಎಂಬಿತ್ಯಾದಿ ನಿಯಮಗಳನ್ನು ಹೇರಲಾಗಿದೆ. ಈ ನಿಯಮದ ಪ್ರಕಾರವೇ ನಡೆದುಕೊಂಡರೆ ವಿಧಾನಸೌಧ ಸಮೀಪದ ನಾಯಿಗಳನ್ನು ಸ್ಥಳಾಂತರಿಸುವುದಕ್ಕೆ ಸಾಧ್ಯವಿಲ್ಲ!
ಕರ್ನಾಟಕ ಸರ್ಕಾರದ ನಗರ ಸ್ಥಳೀಯ ಸಂಸ್ಥೆಗಳ ಕಾಯ್ದೆ ಪ್ರಕಾರ ಬೀದಿ ನಾಯಿಗಳನ್ನು ಕೊಲ್ಲುವುದಕ್ಕೆ ಅವಕಾಶವಿದೆ. ಆದರೆ ಈ ನಿಯಮದ ವಿರುದ್ಧ ಪ್ರಾಣಿಪ್ರಿಯರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಏಳು ವರ್ಷಗಳಿಂದ ಈ ಅರ್ಜಿ ತೆರವಿಗೆ ರಾಜ್ಯ ಸರ್ಕಾರ ಮನವಿಯನ್ನೇ ಸಲ್ಲಿಸಿಲ್ಲ. ನಾಗರಿಕರು ಈ ಬಗ್ಗೆ ಆಗಾಗ ಪ್ರತಿಭಟನೆ ನಡೆಸಿದ್ದರೂ ಇದೊಂದು ಸ್ಪಂದನೆಗೆ ಅರ್ಹವಾದ ವಿಚಾರ ಎಂದು ಯಾರಿಗೂ ಅರ್ಥವಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ತಮ್ಮ ಕೊಠಡಿ ಸುತ್ತಮುತ್ತ ನಾಯಿ ಓಡಾಡುವುದನ್ನು ಕಂಡು ಸಚಿವರು ಬೊಬ್ಬೆಹಾಕುವ ಬದಲು ಇಡಿ ನಗರದ ಸಮಸ್ಯೆ ಪರಿಹಾರಕ್ಕಾಗಿ ಏಕೆ ತುಡಿಯಬಾರದು? ಸೌಧದ ಅಕ್ಕಪಕ್ಕ ಸೇರಿಕೊಂಡಿರುವ ನಾಯಿಗಳನ್ನು ಓಡಿಸುವ ಮುನ್ನ ನಿಮ್ಮದೇ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಗಲ್ಲಿಯಲ್ಲಿ ರಾತ್ರಿ ನೀವೊಬ್ಬರೇ ಓಡಾಡಿ ಏಕೆ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ತೀವ್ರತೆ ಅರಿಯಬಾರದು?
ಅಷ್ಟು ಮಾತ್ರವಲ್ಲ ಸಚಿವರು ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ವಿಧಾನಸೌಧದ ಶೌಚಾಲಯ ದುರವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇಡಿ ರಾಜ್ಯವನ್ನೇ ಬಯಲು ಶೌಚಾಲಯ ಮುಕ್ತಗೊಳಿಸುವುದಾಗಿ ಸರ್ಕಾರ ಘೋಷಿಸಿರುವಾಗ ವಿಧಾನಸೌಧದಲ್ಲಿ ಮೂತ್ರಾಲಯ, ಕಕ್ಕಸು ಮಾಡುವುದಕ್ಕೆ ಸೂಕ್ತ ವ್ಯವಸ್ಥೆ ಇಲ್ಲ ಎಂಬುದು ನಿಜಕ್ಕೂ ನಾಚಿಕೆಗೇಡಿನ ವಿಚಾರವೇ ಸರಿ.
ಸಚಿವರೇನೋ ವಿಧಾನಸೌಧಕ್ಕೆ ಬಂದವರ 'ಜಲಬಾಧೆ' ಬಗ್ಗೆ ಮಾತನಾಡಿದ್ದಾರೆ. ಆದರೆ ಕಬ್ಬನ್‌ಪಾರ್ಕ್, ಮೆಜೆಸ್ಟಿಕ್, ಶಿವಾಜಿನಗರ ಬಸ್ ಸ್ಟ್ಯಾಂಡ್ ಸೇರಿದಂತೆ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಬಗ್ಗೆ ಮಾತನಾಡುವ ಅಗತ್ಯವಿಲ್ಲವೇ? ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಗರದಲ್ಲಿ ಅಲ್ಲಲ್ಲಿ ಸುಲಭ ಶೌಚಾಲಯಗಳನ್ನು ನಿರ್ಮಿಸಿದ್ದರು. ಆದರೆ ಈಗ ಅವುಗಳ ಸ್ಥಿತಿ ಏನಾಗಿದೆ? ಎಷ್ಟೇ 'ಅರ್ಜೆಂಟ್‌' ಇದ್ದರೂ ಅಲ್ಲಿ ಮೂತ್ರ ವಿಸರ್ಜಿಸುವುದು ಕಷ್ಟ. ವಿಧಾನಸೌಧ ಸುತ್ತಮುತ್ತ ಶ್ವಾನ-ಸ್ವಚ್ಚತೆ ಬಗ್ಗೆ ಮಾತನಾಡಿರುವ ಸಚಿವರು ಅವರ ಅಧಿಕಾರಾವಧಿಯಲ್ಲಿ' ಸೂಸುಭಾಗ್ಯ'ಕ್ಕೆ ಮೂಲ ಸೌಕರ್ಯ ಕಲ್ಪಿಸಿದರೆ ನಮ್ಮ ಬೆಂಗಳೂರು ಧನ್ಯ. ಯಾಕೆಂದರೆ ವಿಧಾನಸೌಧದ ಹೊರಗಿನ ಆಸುಪಾಸಿನ ಪ್ರದೇಶದಲ್ಲಿ ಒಂದೇ ಒಂದು ಸಾರ್ವಜನಿಕ ಶೌಚಾಲಯವೂ ಇಲ್ಲ!


-  ರಾಘವೇಂದ್ರ ಭಟ್ , ಕನ್ನಡಪ್ರಭ
rythmraghu@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement