ಸಂಪನ್ಮೂಲಗಳ ಪ್ರಾಮಾಣಿಕ ಬಳಕೆ, ಸರ್ಕಾರವನ್ನಷ್ಟೇ ದೂರುವುದೇಕೆ?
ಸಂಪನ್ಮೂಲಗಳ ಪ್ರಾಮಾಣಿಕ ಬಳಕೆ, ಸರ್ಕಾರವನ್ನಷ್ಟೇ ದೂರುವುದೇಕೆ?...
ಚುನಾವಣಾ ಸಮಯದಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ಭರಪೂರ ಭರವಸೆಗಳು, ಆಶ್ವಾಸನೆಗಳು. ಅಸ್ತಿತ್ವದಲ್ಲಿರುವ ಸರ್ಕಾರದಿಂದ ವಿವಿಧ ಯೋಜನೆಗಳ ಪ್ರಾರಂಭ. ಪದವಿ ಮುಗಿಸಿದ ನಿರುದ್ಯೋಗಿಗಳಿಗೆ, 40 ವರ್ಷವಾದರೂ ಮದುವೆಯಾಗದ ಹೆಂಗಸರಿಗೆ ಮಾಸಾಶನಗಳು. 1 ರುಪಾಯಿಗೆ ಅಕ್ಕಿ ಮತ್ತು ಹಲವು. ಇದೆಲ್ಲವಕ್ಕೂ ಬೇಕಾಗಿರುವುದು ಹಣ, ಹಣ, ಹಣ. ಇದಕ್ಕೆಲ್ಲಾ ಖರ್ಚು ಮಾಡುವುದು ನಮ್ಮದೇ ಹಣ. ದಿನವಿಡೀ ಬೆವರು ಸುರಿಸಿ ದುಡಿದು ತೆರಿಗೆ ಕಟ್ಟಿದ ಹಣ ಏನೇನಾಗುತ್ತಿದೆ ನೋಡಿ. ಯಾವುದೇ ವಿಚಾರದಲ್ಲಾಗಲೀ ಹಣಕಾಸಿನ ನಿರ್ವಹಣೆ ತುಂಬಾ ಮುಖ್ಯವಾದದ್ದು. ಹೆಚ್ಚು ಆದಾಯ ಎಂದಾಕ್ಷಣ ತೆರಿಗೆಗಳನ್ನು ಹೆಚ್ಚಿಸುವುದಲ್ಲ. ಸರ್ಕಾರಕ್ಕೆ ಬರುವ ಹಣ ಎಲ್ಲೆಲ್ಲಿ ಪೋಲಾಗುತ್ತಿದೆ, ಏಕೆ ಪೋಲಾಗುತ್ತಿದೆ, ಅದರ ಕಡಿವಾಣ ಹೇಗೆ ಹಾಗೂ ಅನಾವಶ್ಯಕ ಖರ್ಚು ಎಲ್ಲಾಗುತ್ತಿದೆ, ಅದರ ಕಡಿವಾಣ ಹೇಗೆ ಎಂಬುದರ ಬಗ್ಗೆ ಯೋಚಿಸುವ ಮತ್ತು ಅದನ್ನು ನಿಯಂತ್ರಿಸುವ ಶಕ್ತಿ ಇರಬೇಕು. ಸಂಸದರ/ಶಾಸಕರ ನಿಧಿಯನ್ನು ಉಪಯೋಗಿಸಲೂ ಬಾರದ ಕೆಲವು ಸಂಸದ-ಶಾಸಕರಿದ್ದಾರೆ. ಇಂಥವರಿಂದ ಉತ್ತಮ ರಾಷ್ಟ್ರ ನಿರ್ಮಾಣ ಹೇಗೆ ಸಾಧ್ಯ? ನನ್ನ ಕಣ್ಮುಂದೆ ನಡೆದ ಕೆಲವು ಘಟನೆಗಳನ್ನು ಬಿಚ್ಚಿಡುತ್ತಿದ್ದೇನೆ ಓದಿ.
ಪಿಯುಸಿ ವಿದ್ಯಾಭ್ಯಾಸದ ನಂತರ ಕೃಷಿಕರ ಕೋಟಾದಡಿ ಬಿ.ಎಸ್ಸಿ (ಕೃಷಿ)ಗೆ ಸೇರಲು ಕೃಷಿಕ ಪ್ರಮಾಣ ಪತ್ರ ಪಡೆಯಲು ನೆಮ್ಮದಿ ಕೇಂದ್ರಕ್ಕೆ ಹೋದಾಗ ವ್ಯವಸಾಯ ಭೂಮಿಯ 30 ವರ್ಷದ ಪಹಣಿಯನ್ನು ತರಲು ಸೂಚಿಸಿದರು. ಅದನ್ನು ಪಡೆಯಲು ಕೆ.ಆರ್.ಪುರಂ ತಾಲೂಕು ಕಚೇರಿಗೆ ಹೊದರೆ, ಅರ್ಜಿ ಸಲ್ಲಿಸಿ 15 ದಿನ ಬಿಟ್ಟು ಬರುವಂತೆ ಸೂಚಿಸಿದರು. ಅನಿವಾರ್ಯ ಕಾರಣಗಳಿಂದಾಗಿ ಮರುದಿನ ನನಗಲ್ಲಿ ಹೋಗಲಾಗಲಿಲ್ಲವಾದ್ದರಿಂದ ದಲ್ಲಾಳಿಯ ಮೂಲಕ 2000 ರುಪಾಯಿ ಕೊಡಿಸಿ ಪಹಣಿ ಪಡೆಯಬೇಕಾಯಿತು. ಹಣ ಕೊಟ್ಟ 3 ಗಂಟೆಯಲ್ಲೇ 30 ವರ್ಷದ ಪಹಣಿ ದೊರಕಿತು. ಇನ್ನು ತಿಂಗಳಿಗೆ 2500-5000 ರುಪಾಯಿ ಸಂಬಳ ಪಡೆಯುವವರ ಪಾಡೇನು? ಮೊದಲನೆಯದಾಗಿ ಯಾವುದೇ ಸರ್ಕಾರಿ ಕಚೇರಿಯ ರೆಕಾರ್ಡ್ ರೂಂ ಬಳಿ ಸಾರ್ವಜನಿಕರು ಹೋಗುವಂತಿಲ್ಲ. ತಮಗೆ ಬೇಕಾದ ದಾಖಲೆಗಳನ್ನು ಅರ್ಜಿ ಸಲ್ಲಿಸಿ ಪಡೆಯಬೇಕು. ಅದಕ್ಕಾಗೇ ಪ್ರತ್ಯೇಕ ಜಾಗವಿರುತ್ತದೆ. ಆದರೆ ಸರ್ಕಾರಿ ಕಚೇರಿಯ ರೆಕಾರ್ಡ್ ರೂಂ ಬಳಿ ಸಾಲು ಸಾಲು ಜನ ನಿಂತಿರುತ್ತಾರೆ.
ಕರ್ನಾಟಕದಲ್ಲಿ 220 ತಾಲೂಕುಗಳಿವೆ. ಪ್ರತಿ ತಾಲೂಕಿನಲ್ಲಿ ಕೇವಲ ರೆಕಾರ್ಡ್ ರೂಂನಲ್ಲಿ ದಿನಕ್ಕೆ 10,000 ರುಪಾಯಿ ಪೋಲಾಗುತ್ತಿದೆ ಎಂದಾದರೆ 220 ತಾಲೂಕುಗಳಲ್ಲಿ ಅಂದಾಜು 5.50 ಕೋಟಿ ಹಣ ಅಧಿಕಾರಿಗಳ ಜೇಬಿಗೆ ಹೋಗುತ್ತಿದೆ ಎಂದಾಯಿತು. ಇದು ಕೇವಲ ರೆಕಾರ್ಡ್ ರೂಂನ ಕಥೆಯಾದರೆ ಉಳಿದ ವಿಭಾಗಗಳಲ್ಲಿ ಸನ್ನಿವೇಶ ಹೇಗಿರಬಹುದು? ಆಯಾ ತಾಲೂಕಿನ ತಹಶೀಲ್ದಾರ್ ತೆಗೆದುಕೊಳ್ಳುವ ಲಂಚ ಲಕ್ಷಗಳಲ್ಲಿರುತ್ತದೆ. ಅದಕ್ಕೇ ಇರಬೇಕು ನಮ್ಮ ಜನ ಸರ್ಕಾರಿ ಉದ್ಯೋಗ ಪಡೆಯಲು ಒದ್ದಾಡುತ್ತಿರುತ್ತಾರೆ. ನಮ್ಮಲ್ಲಿ 30 ಜಿಲ್ಲೆಗಳು. ಒಟ್ಟು 30 ಜಿಲ್ಲಾಧಿಕಾರಿಗಳು ಹಾಗೂ 30 ಸಹಾಯಕ ಆಯುಕ್ತರು. ಎಸಿ ನ್ಯಾಯಾಲಯಗಳಲ್ಲಿರುವ ಕೇಸಿಗೆ ಲಂಚ ನೀರಿನ ರೀತಿ ಹರಿಯುತ್ತಿದೆ. ದಾಖಲೆಗಳನ್ನು ತಿರುಚುವುದರಲ್ಲಿ ಅವರದ್ದು ಎತ್ತಿದ ಕೈ. ದುಡ್ಡಿರುವವರು ಲಕ್ಷಗಟ್ಟಲೇ ಲಂಚ ಕೊಡುತ್ತಾರೆ. ಆದರೆ ವಾರ್ಷಿಕ ಆದಾಯ ಕೇವಲ 10000-25000 ರುಪಾಯಿ ಇರುವ ಬಡವ ಹೇಗೆ ಬದುಕಬಲ್ಲ?
ಬೆಂಗಳೂರಿನಲ್ಲಿ 42 ಟ್ರಾಫಿಕ್ ಪೊಲೀಸ್ ಠಾಣೆಗಳನ್ನೊಳಗೊಂಡ 7 ಉಪ ವಿಭಾಗಗಳಿವೆ. ಟ್ರಾಫಿಕ್ ಪೊಲೀಸರು ವಿವಿಧ ಕಾರಣಗಳಿಗಾಗಿ ವಾಹನಗಳ ಮೇಲೆ ಹಾಕುವ ಬಹುತೇಕ ದಂಡಕ್ಕೆ ರಸೀದಿ ಕೊಡುವುದಿಲ್ಲ. ನಮ್ಮ ಜನ ಕೇಳುವುದೂ ಇಲ್ಲ. ಏಕೆಂದರೆ 100 ರುಪಾಯಿ ಕೊಡುವ ಜಾಗದಲ್ಲಿ 50 ರುಪಾಯಿ ಕೊಡಬಹುದಲ್ಲವೇ?! ಇಂತಹ ವಿಚಾರಗಳಲ್ಲಿ ಸರ್ಕಾರವನ್ನು ಬೈಯ್ಯುವ ಬದಲು ಮೊದಲು ನಮ್ಮ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. 42 ಜಾಗಗಳಲ್ಲಿ ದಿನಕ್ಕೆ ಟ್ರಾಫಿಕ್ ಪೊಲೀಸೊಬ್ಬರಿಗೆ ತಲಾ 2000 ರುಪಾಯಿಯಂತೆ ಹಣ ಜೇಬಿಗೆ ಹೋಗುತ್ತಿದೆ. ಅಂದರೆ ದಿನಕ್ಕೆ ಒಟ್ಟು 84000, ತಿಂಗಳಿಗೆ 2520000 ರುಪಾಯಿ! ಈ ಪ್ರಕಾರ ತಿಂಗಳಿಗೆ ಬೆಂಗಳೂರು ಒಂದರಿಂದಲೇ ಸರ್ಕಾರಕ್ಕೆ ನಷ್ಟವಾಗುತ್ತಿರುವ ಹಣ ಬರೋಬ್ಬರಿ 50 ಲಕ್ಷ. ಇದು ಸರ್ಕಾರಕ್ಕೆ ಬರಬೇಕಾಗಿದ್ದ ಆದಾಯದಲ್ಲಿ ಪೋಲಾಗುತ್ತಿರುವ ಮೊತ್ತ. ಈ ಪೋಲಾಗುತ್ತಿರುವ ಹಣ ಸರ್ಕಾರಕ್ಕೇ ಬಂದರೆ ಬಿಪಿಎಲ್ ಕಾರ್ಡುದಾರರಿಗೆ ಕೊಡುವ ಅಕ್ಕಿಯನ್ನು ರುಪಾಯಿ 23ರಂತೆ, ತಿಂಗಳಿಗೆ 2,15,000 ಕೆಜಿ ಅಕ್ಕಿಯನ್ನು ಖರೀದಿಸಬಹುದು. ಇಂತಹ ಆಲೋಚನೆಗಳನ್ನು ಹಣಕಾಸು ಸಚಿವರು ಮಾಡುತ್ತಲೇ ಇಲ್ಲ. ಹತ್ತು-ಹದಿನೈದು ಸಲ ಬಜೆಟ್ ಮಂಡಿಸಿದರೆ ಏನು ಬಂತು? ಬಂಡವಾಳ ಹೂಡಿಕೆದಾರರಿಂದ ಉದ್ಯೋಗ ಸೃಷ್ಟಿಸಿ ನಿರುದ್ಯೋಗವನ್ನು ನಿವಾರಿಸಬಹುದೇ ವಿನಹ ಅದರಿಂದ ಸರ್ಕಾರಕ್ಕೆ ಹೆಚ್ಚಿನ ರೀತಿಯಲ್ಲಿ ಆದಾಯ ಗಳಿಸುವುದಕ್ಕಾಗುವುದಿಲ್ಲ. ಕುಳಿತು ತಿನ್ನುವವನಿಗೆ ಕೊಪ್ಪರಿಗೆ ಹೊನ್ನಿದ್ದರೂ ಸಾಕಾಗುವುದಿಲ್ಲ. 100 ರುಪಾಯಿ ಆದಾಯ ಬರುವವನ ಬಳಿ 200 ರುಪಾಯಿ ಖರ್ಚು ಮಾಡಿಸುವುದರಿಂದ ಮುಂದಿನ ಪೀಳಿಗೆಗೆ ಬರೀ ಸಾಲವನ್ನೇ ಬಿಟ್ಟು ಹೋಗಬೇಕಾಗುತ್ತದೆ.
ನಮ್ಮ ಮತ ಪಡೆದು ಸಂಸದರಾಗುವವರಿಗೆ ಸರ್ಕಾರದಿಂದ ಸಿಗುವ ಸವಲತ್ತು ಅಷ್ಟಿಷ್ಟಲ್ಲ. ನನಗೇನೂ ಬೇಡ, ನಾನು ಸಾಮಾನ್ಯನಂತೆ ಇರುತ್ತೇನೆ ಎಂದು ಆಯ್ಕೆಯಾಗುವವರು ನಂತರ ಎಲ್ಲಾ ಸೌಲಭ್ಯ ಪಡೆಯುತ್ತಾರೆ. ಉದಾಹರಣೆಗೆ ಅರವಿಂದ್ ಕೇಜ್ರಿವಾಲ್. ನಮ್ಮ ಸಂಸದರಿಗೆ ಸರ್ಕಾರ ಮಾಡುವ ಖರ್ಚು ವರ್ಷಕ್ಕೆ ಅಂದಾಜು 70 ಲಕ್ಷ ರುಪಾಯಿ. ಅಂದರೆ 543 ಸಂಸದರಿಗೆ 5 ವರ್ಷಕ್ಕೆ ಬರೋಬ್ಬರಿ 1700 ಕೋಟಿ ರುಪಾಯಿ ವ್ಯರ್ಥವಾಗುತ್ತಿದೆ. ನಿಜವಾಗಲೂ ಇಷ್ಟೊಂದು ಸವಲತ್ತು ಸಂಸದರಿಗೆ ಬೇಕಾ? ಭಾರತದಲ್ಲಿ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಆದರೆ ಬಡವರು ಅದೇ ಗುಡಿಸಲು, ಅದೇ ಚಾಪೆಯ ಮೇಲೆ ಮಲಗುವ ಸ್ಥಿತಿಯಲ್ಲಿದ್ದಾರೆ.
ಚುನಾವಣಾ ಆಯೋಗ ಈ ಬಾರಿಯ ಲೋಕಸಭಾ ಚುನಾವಣೆಗೆ ಅಂದಾಜು ಮಾಡಿರುವ ಖರ್ಚು 3500 ಕೋಟಿ. ಪ್ರತೀ ಕ್ಷೇತ್ರಕ್ಕೆ ಅಂದಾಜು 6.5ಕೋಟಿ. ಇದಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಚುನಾವಣೆ ಐದು ವರ್ಷಕ್ಕೊಮ್ಮೆ ನಡೆಯಲೇಬೇಕು. ಆದರೆ ಇಂದು ಉಪಚುನಾವಣೆಗಳಿಗೇ ಕೋಟಿಗಟ್ಟಲೆ ಹಣ ವ್ಯರ್ಥವಾಗುತ್ತಿದೆ. ಕರ್ನಾಟಕದಲ್ಲಿ ಪ್ರಸ್ತುತ 7 ಜನ ಹಾಲಿ ಶಾಸಕರು ಲೋಕಸಭಾ ಕಣದಲ್ಲಿದ್ದಾರೆ. ಆ 7 ಜನ ಗೆದ್ದರೆ 7 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ. 2013ರ ಕರ್ನಾಟಕ ವಿಧಾನಸಭಾ ಚುನಾವಣೆಗೆ 200 ಕೋಟಿ ಖರ್ಚಾಗಿತ್ತು. ಈ ಬಾರಿ ಈ ಏಳೂ ಅಭ್ಯರ್ಥಿಗಳು ಗೆದ್ದರೆ ಉಪ ಚುನಾವಣೆಗೆ ಅಂದಾಜು 6.5 ಕೋಟಿ ಖರ್ಚಾಗುತ್ತದೆ. ಈ ಉಪಚುನಾವಣೆ ಪದ್ಧತಿಯಿಂದ ಯಾವ ಪಕ್ಷವೂ ದೂರವಿಲ್ಲ. 2009ರಲ್ಲಿ ಸಂಸದರಾದ ಎಚ್.ಡಿ.ಕುಮಾರಸ್ವಾಮಿಯವರು 2013ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದರು. ಈಗ ಮತ್ತೆ 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಇನ್ನು ಒಂದು ವರ್ಷವೂ ಆಗಿಲ್ಲ. ಉಪಚುನಾವಣೆಗಳ ಖರ್ಚೆಷ್ಟು ಹಾಗೂ ಆ ಕ್ಷೇತ್ರದ ಜನರ ಪಾಡೇನು?
2020ಕ್ಕೆ ವಿಶ್ವಗುರುವಾಗಿ ಮಿಂಚಬೇಕೆಂದರೆ ಸಕಲ ಶ್ರಮ ಅಗತ್ಯ. ಮಾಡಿದ್ದನ್ನೇ ಮಾಡುವ ಬದಲು ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸುವಂತಹ ಏನಾದರೂ ಹೊಸ ಚಿಂತನೆ, ಆವಿಷ್ಕಾರ ಮಾಡುವ ಕೆಲಸಕ್ಕೆ ಸರ್ಕಾರ ಕೈ ಹಾಕಬೇಕಿದೆ. ಯಾವುದೇ ಮಸೂದೆ ಬಂದರೂ ಭ್ರಷ್ಟಾಚಾರ ನಿಲ್ಲುವುದಿಲ್ಲ. ಅದು ಜನರ ಮತ್ತು ಅಧಿಕಾರಿಗಳಿಗೆ ಅರ್ಥವಾಗಬೇಕು. ಒಮ್ಮೆ ಪ್ರಾಯೋಗಿಕವಾಗಿ ಚಿಂತಿಸಿ ನೋಡಿ, ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿನ ಯಾವ ಅಂಶಗಳನ್ನು ಅನುಷ್ಠಾನಕ್ಕೆ ತರುವುದಕ್ಕೆ ಸಾಧ್ಯ ಹಾಗೂ ಯಾವುದು ಸಾಧ್ಯವಿಲ್ಲವೆಂದು. ಕೇವಲ ಓಟಿಗಾಗಿ ಪ್ರಣಾಳಿಕೆಯನ್ನು ತಯಾರು ಮಾಡಿರುವ ಕೊಡುವ ಪಕ್ಷಗಳೇ ಎಲ್ಲ. ಹೊಸ ಚಿಂತನೆಯನ್ನೊಳಗೊಂಡ ಪ್ರಣಾಳಿಕೆಗಳು ತೀರಾ ಅಪರೂಪ. ನಮಗೆ ಮಾತ್ರವಲ್ಲದೇ ನಮ್ಮ ಮುಂದಿನ ಪೀಳಿಗೆಗೂ ಉಪಯೋಗವಾಗುವಂತಹ ಯೋಜನೆಗಳು ಜಾರಿಯಾಗಬೇಕಿದೆ. 100 ರುಪಾಯಿ ಬಂಡವಾಳ ಹಾಕಿ 1000 ರುಪಾಯಿ ತೆಗೆಯುವ ಯೋಜನೆಗಳನ್ನು ತರುವಂತಹ ಪ್ರಯತ್ನಕ್ಕೆ ಕೈಜೋಡಿಸಬೇಕಾಗಿದೆ. ಮನಸ್ಸಿನಲ್ಲಿ ಆಸೆಗಳನ್ನು ಬಿತ್ತುವಂತಹ ಪ್ರಣಾಳಿಕೆಗಳಿಗೆ ಜನರು ಮಾರುಹೋಗುತ್ತಾರೆ. ಅವು ಕ್ಷಣ ಮಾತ್ರ. ಇನ್ನಾದರೂ ಸರ್ಕಾರಗಳು ನೂತನ ಯೋಜನೆಗಳಿಗೆ ಕೈ ಹಾಕುತ್ತವಾ ನೋಡಬೇಕು.
-ರೂಪೇಶ್ ಆರ್.
rrupesh@ced.alliance.edu.in