ಕೋಮುವಾದದ ಕೋಟೆಯ ಮೇಲೆ ಫಾರುಖ್‌ರ ಸೆಕ್ಯುಲರಿಸಂ ಭಾಷಣ!
ಕೋಮುವಾದದ ಕೋಟೆಯ ಮೇಲೆ ಫಾರುಖ್‌ರ ಸೆಕ್ಯುಲರಿಸಂ ಭಾಷಣ!
'ಭಾರತ ಕೋಮುವಾದಿ ಆದರೆ ಕಾಶ್ಮೀರ ಈ ದೇಶದೊಂದಿಗೆ ಉಳಿಯಲು ಇಚ್ಛಿಸುವುದಿಲ್ಲ!' ಒಬ್ಬ ಜವಾಬ್ದಾರಿಯುತ ಮಂತ್ರಿ ಆಡಬಹುದಾದ ಮಾತೇ? ಕೇಂದ್ರ ಸಚಿವ ಫಾರುಖ್ ಅಬ್ದುಲ್ಲಾ ಯಾರನ್ನು ಕೋಮುವಾದಿ ಎಂದು ಹೇಳಲು ಹೊರಟಿದ್ದಾರೆ? ಅಷ್ಟಕ್ಕೂ ಕಾಶ್ಮೀರ ತನ್ನದೇ ಸೊತ್ತು ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದು ಅಹಂಕಾರದ ಪರಮಾವದಿ ಅಲ್ಲವೇ? ಭಾರತ ಕೋಮುವಾದಿ ರಾಷ್ಟ್ರವಾಗುತ್ತದೆ ಎಂದು ದುರಾಲೋಚಿಸಿ ಕಾಶ್ಮೀರಿಗರಲ್ಲಿ ಸಲ್ಲದ ಭಯ ಹುಟ್ಟಿಸುತ್ತಿರುವುದು ನ್ಯಾಯವೇ? ಫಾರುಖ್ ಅವರಿಗೆ ಭಾರತದ ಬಗೆಗೆ ಅಗಾಧ ಪ್ರೇಮ, ಭಕ್ತಿ, ವಾತ್ಸಲ್ಯ ಇದ್ದರೆ ಕೋಮುವಾದದ ವಿರುದ್ಧ ಹೋರಾಡುವ ಮಾತನಾಡಬೇಕಿತ್ತು. 'ಭಾರತ ನಮ್ಮ ದೇಶ' ಎಂಬ ಅಭಿಮಾನ ಇದ್ದಿದ್ದರೆ ದೇಶದ ಕೊಂಡಿಯನ್ನೇ ಕಳಚುವ ಮಾತನ್ನು ಫಾರುಖ್ ಆಡುತ್ತಿರಲಿಲ್ಲ. ಕಾಶ್ಮೀರಿಗರನ್ನು ಫಾರುಖ್ ದೇಶದ ವಿರುದ್ಧ ಎತ್ತಿಕಟ್ಟಲು ಮಾಡುತ್ತಿರುವ ಹುನ್ನಾರವಲ್ಲದೆ ಮತ್ತೇನು?
ಅಂದು ಅಲಹಾಬಾದ್ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ 'ಗುಜರಾತ್ ಏನು ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಆಸ್ತಿಯೇ?' ಎಂದು ಕೇಳಿದ್ದರು. ಕಿಶ್ವಾರ್‌ನಲ್ಲಿ ಕೋಮುಹಿಂಸಾಚಾರ ಆದಾಗ ಅರುಣ್ ಜೇಟ್ಲಿ ಪ್ರವೇಶಕ್ಕೆ ನಿಷೇಧ ಹೇರಲಿಲ್ಲವೇ? ಪ್ರಕರಣದ ಕಾವು ಇರುವಾಗ ಮುಖಂಡರು ಪ್ರವೇಶಿಸಿದರೆ ಮತ್ತಷ್ಟು ಹಿಂಸೆ ಭುಗಿಲೇಳಬಹುದು ಎಂಬ ಮುನ್ನಚ್ಚರಿಕೆಯ ಆಧಾರದಿಂದಲೇ ನಿಷೇಧ ಹೇರಿದ್ದರು ಎಂದು ಸಮರ್ಥಿಸುತ್ತಾರೆ. ಅಂದು ಗೋದ್ರಾ ಹಿಂಸಾಚಾರದಲ್ಲೂ ಮೋದಿಯ ನಿಲುವು ಮತ್ತಷ್ಟು ಹಿಂಸೆ ಸಂಭವ ತಡೆಗಟ್ಟುವುದೇ ಆಗಿತ್ತು ಎಂಬುದೇಕೆ ಅರ್ಥವಾಗಲಿಲ್ಲ. ಈಗ ಏಕಾಏಕಿ 'ಕಾಶ್ಮೀರ ಭಾರತದಿಂದ ದೂರವಾಲಿದೆ' ಎಂಬ ಉದ್ದಟತನದ ಹೇಳಿಕೆ ನೀಡುತ್ತಿದ್ದಾರೆ.
ಸನ್ಮಾನ್ಯರ ಮಗ ಓಮರ್ ಅಬ್ದುಲ್ಲಾ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸಬಾರದು ಎಂದು ಅಡ್ಡಗಾಲು ಹಾಕಿದ್ದರು. ಆಗ ಅಂತಹ ನಡೆ ಕೋಮುವಾದ ಎನಿಸಲಿಲ್ಲವೇ? ದೇಶದ್ರೋಹದ ನಡೆ ಎನಿಸಲಿಲ್ಲವೇ? 'ಪ್ರತಿ ಬಾರಿಯೂ ಅಫ್ಜಲ್ ಹೆಸರನ್ನು ಪ್ರಸ್ತಾಪಿಸಿ ಅದನ್ನು ಬೃಹತ್ ವಿಚಾರ ಮಾಡುವುದು ಯಾಕಾಗಿ ಎಂದರೆ ಆತನ ಹೆಸರು ಸಿಕ್ಕಾಪಟ್ಟೆ ಗ್ಲಾಮರಸ್!' ಎಂಬ ಬಾಲಿಷ ಹೇಳಿಕೆಯನ್ನು ಫಾರುಖ್ ಅವರ ಮಗ ನೀಡಿದ್ದರು. ಓಮರ್ ಅವರ ಪ್ರಕಾರ ಸಂಸತ್ತಿನ ಮೇಲೆ ದಾಳಿ ಮಾಡಿದ್ದ ಅಫ್ಜಲ್ ಹೆಸರು ಗ್ಲಾಮರಸ್ ಆಗಿ ಕಂಡಿತ್ತು. ಕಸಬ್‌ನನ್ನು ನೇಣಿಗೇರಿಸುವ ಸಂದರ್ಭದಲ್ಲೂ 'ಕಾಶ್ಮೀರದಲ್ಲಿರುವ ಮುಸ್ಲಿಮರ ಮನಸ್ಥಿತಿ ಕೆಡಬಹುದು, ಇದರಿಂದ ದೇಶಕ್ಕೆ ಅಪಾರ ಹಾನಿಯಾಗಲಿದೆ' ಎಂಬ ರೀತಿಯಲ್ಲಿ ಪುಂಗಿ ಊದಿದ್ದರು. ದೇಶ ದ್ರೋಹಿಗಳಾದ ಅಫ್ಜಲ್, ಕಸಬ್‌ನನ್ನು ಕಾಂಗ್ರೆಸ್ ಸರ್ಕಾರವೇ ಮುಂದೆ ನಿಂತು ನೇಣಿಗೇರಿಸಿತು. ಹಾಗಂತ ಎಲ್ಲೂ ಕಾಶ್ಮೀರಿಗರು ಭಾರತದ ವಿರುದ್ಧ ದುಷ್ಕೃತ್ಯ ಎಸಗಲಿಲ್ಲ. ಹಿಂಸಾಚಾರಕ್ಕೆ ಎಡೆ ಮಾಡಿಕೊಟ್ಟಿದ್ದು ಕೆಲವು ಕಿಡಿಗೇಡಿ ಪ್ರತ್ಯೇಕತಾವಾದಿಗಳಷ್ಟೇ. ಅಫ್ಜಲ್‌ನನ್ನು ನೇಣಿಗೇರಿಸಬಾರದು ಎಂದು ಅಪ್ಪ ಮಗನು ಬೀದಿಗೆ ಬಂದಿದ್ದೇಕೆ? ದುಷ್ಕರ್ಮಿಗಳು ಮುಸಲ್ಮಾನರು ಎಂಬ ಕಾರಣಕ್ಕಾಗಿ ಅಲ್ಲವೇ? ಹಾಗಿದ್ದರೆ ಅವರ ನಡೆ ಕೋಮುವಾದವೇ ಅಲ್ಲವೇ? ವಿಪರ್ಯಾಸ ನೋಡಿ, ಮುಸಲ್ಮಾನರಾದ ಫಾರುಖ್, ಓಮರ್ ಮುಸಲ್ಮಾನರ(ಅಫ್ಜಲ್, ಕಸಬ್) ಪರ ಮಾತನಾಡಿದರೆ ಅದು ಕೋಮುವಾದ ಆಗುವುದಿಲ್ಲ. ಆದರೆ ಹಿಂದು ಆಗಿರುವ ನರೇಂದ್ರ ಮೋದಿ ಹಿಂದು ಪರ ಮಾತನಾಡಿದರೆ ಅದು ಕೋಮುವಾದ ಎಂದೆನಿಸುತ್ತದೆ.
'ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಕಿರುಕುಳದಂತಹ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಯುವತಿಯರ ಜೊತೆ ಮಾತನಾಡಲು ಭಯವಾಗುತ್ತದೆ. ಹಾಗಾಗಿ ಮಹಿಳಾ ಕಾರ್ಯದರ್ಶಿಯನ್ನು ನೇಮಕ ಮಾಡಿಕೊಳ್ಳುವುದಿಲ್ಲ!' ಎಂಬ ಅಸಡ್ಡೆಯ ಹೇಳಿಕೆಯನ್ನೂ ಫಾರುಖ್ ನೀಡಿದ್ದರು. ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ ಎಂಬಂತಿತ್ತು ಫಾರುಖ್ ವರ್ತನೆ. ಹೆಣ್ಣಿನ ಬಗ್ಗೆಯೇ ಗೌರವವಿಲ್ಲ. ಹೀಗಿರುವಾಗ ಹೆಣ್ಣನ್ನು ಅಪಾರವಾಗಿ ಗೌರವಿಸುವ ಭಾರತದ ಮೇಲೆ ಗೌರವವಿದೆ ಎಂಬುದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ.
ಏಷ್ಯಾ ಕಪ್ ಕ್ರಿಕೆಟ್ ಸರಣಿಯಲ್ಲಿ ಭಾರತದ ವಿರುದ್ಧ ಪಾಕ್ ಗೆಲುವು ಸಾಧಿಸಿದಾಗ ಸುಭಾರತಿ ವಿವಿಯ ಕೆಲವು ಕಾಶ್ಮೀರಿ ವಿದ್ಯಾರ್ಥಿಗಳು ಸಂಭ್ರಮಾಚರಣೆ ಮಾಡಿ ದೇಶ ದ್ರೋಹದ ಪ್ರಕರಣಕ್ಕೆ ಒಳಗಾಗಿದ್ದರು. ಓಮರ್ ಅಬ್ದುಲ್ಲಾರಿಗೆ ಭಾರತದ ಮೇಲೆ ಅಪಾರ ಅಭಿಮಾನ ಇದ್ದಿದ್ದರೆ ಸಿಎಂ ಅಖಿಲೇಶ್ ಯಾದವ್ ಮೇಲೆ ಒತ್ತಡ ತಂದು ಪ್ರಕರಣವನ್ನು ಹಿಂತೆಗೆಸಿದ್ದೇಕೆ? ಉ.ಪ್ರ ಸರ್ಕಾರ ಪ್ರಕರಣದ ಕುರಿತು ಚಿಂತನೆ ನಡೆಸುತ್ತಿತ್ತು. ಕಾನೂನು ಅದರ ದಾರಿಯಲ್ಲಿ ನಡೆಯುತ್ತಿತ್ತು. ಓಮರ್ ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳ ಪರ ಲಂಗುಲಾಗಮಿಲ್ಲದೆ ಓಡಿದ್ದು 'ಅವರುಗಳು ಮುಸ್ಲಿಂ ವಿದ್ಯಾರ್ಥಿಗಳು' ಎಂಬ ಕಾರಣಕ್ಕೇ ಅಲ್ಲವೇ? ಆದರೆ ಅಂತಹ ನಡೆ ಫಾರುಖ್ ಅವರಿಗೆ ಕೋಮುವಾದ ಎನಿಸಲಿಲ್ಲ. ವಿದೇಶಾಂಗ ವಕ್ತಾರೆ ತಸ್ಲಿಂ ಅಸ್ಲಾಂ ಅದೇ ವಿದ್ಯಾರ್ಥಿಗಳನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿದಾಗ ಎಲ್ಲಿಹೋಗಿತ್ತು ಫಾರುಖ್‌ರ ದೇಶಭಕ್ತಿ? ಆಗ ಓಮರ್‌ರ ಬಾಯಿ ಕಟ್ಟಿತ್ತೇ? ಅದನ್ನೇಕೆ ವಿರೋಧಿಸಲಿಲ್ಲ?
ಅಷ್ಟಕ್ಕೂ ಕೋಮುವಾದ ಮಾಡುತ್ತಿರುವವರು ಯಾರು? ಒಬ್ಬ ಭಯೋತ್ಪಾದಕ ಮುಸ್ಲಿಮನಾದರೆ ಆತನ ರಕ್ಷಣೆಗೆ ಓಡಿಬರುವವರು ಯಾರು? ಒಬ್ಬ ಮುಸಲ್ಮಾನನಿಗೆ ದೇಶ ದ್ರೋಹ ಮಾಡಿದ್ದಕ್ಕೆ ಶಿಕ್ಷೆಯಾಗುತ್ತದೆ ಎಂದಿದ್ದಾಗ ಕಾಶ್ಮೀರವನ್ನು ಅಡ್ಡ ತರುವ ಪ್ರಯತ್ನವೇಕೆ? ಅಪ್ಪ ಮಕ್ಕಳು ಹಲವಾರು ವರ್ಷಗಳಿಂದ ಆಡಳಿತ ನಡೆಸಿಕೊಂಡು ಬಂದಿದ್ದರೂ ರಾಜ್ಯದಲ್ಲಿ ಸುಭಿಕ್ಷೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದರೆ ಏನರ್ಥ? ಪ್ರತ್ಯೇಕತಾವಾದಿಗಳನ್ನು ಸರಿಯಾಗಿ ಇಟ್ಟುಕೊಳ್ಳಲು ಬಾರದ ದುರ್ಬಲರಲ್ಲವೇ? ಒಂದೆಡೆ ಪಾಕಿಸ್ತಾನ ಬಹಿರಂಗವಾಗಿ ಪ್ರತ್ಯೇಕತಾವಾದಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ಚೀನ ಒಳಗೊಳಗೇ ಪ್ರತ್ಯೇಕತಾವಾದಿಗಳ ಹುರಿದುಂಬಿಸುತ್ತಿದೆ. ಪ್ರತ್ಯೇಕತಾವಾದಿಗಳ ಮನವೊಲಿಸಿ ದೇಶಪ್ರೇಮ ಬೆಳೆಸುವ ಕಾರ್ಯವನ್ನು ಬಿಟ್ಟು ಕಾಶ್ಮೀರ ಬಿಕ್ಕಟ್ಟನ್ನು ಚೀನಾ ಪರಿಹರಿಸಲಿ ಎಂದು ಮಂಡಿಯೂರಿದ್ದಾರೆ ಓಮರ್.
ಆಕ್ರಮಿತ ಕಾಶ್ಮೀರವನ್ನು ಉಳಿಸಿಕೊಳ್ಳುವ ಅವಕಾಶ ಬಂದಿದ್ದರೂ ಕೈ ಚೆಲ್ಲಿದ್ದು ಯಾರು? ಭಾರತದ ಸೈನಿಕರು ಸೆರೆಹಿಡಿದ್ದಿದ್ದ ಸುಮಾರು 90,000 ಪಾಕಿಸ್ತಾನದ ಸೈನಿಕರ ಬಿಡುಗಡೆಗೆ ಆಕ್ರಮಿತ ಕಾಶ್ಮೀರದಿಂದ ಹಿಂದೆ ಸರಿಯುವ ಬೇಡಿಕೆ ಇರಿಸಬಹುದಿತ್ತಲ್ಲವೇ? ಇಂದಿರಾ ಗಾಂಧಿ ಪಾಕ್ ಸೈನಿಕರ ಬಿಡುಗಡೆಯ ಮಹತ್ವದ ನಿಲುವು ತಳೆದಾಗ ಫಾರುಖ್ ಹುಟ್ಟಿರಲಿಲ್ಲವೇ? ಅಂತಹ ಯಾವುದೇ ಅಹಿತಕರ ಘಟನೆಗಳಿಗೂ ಮೂಗು ತೂರಿಸದೆ ಮಗುಮ್ಮಾಗಿದ್ದು ದೇಶ ವಿರೋಧಿ ಚಟುವಟಿಕೆ ಮಾಡುವವರ ಪರ ನಿಲ್ಲುವುದು ಏನನ್ನು ಸೂಚಿಸುತ್ತದೆ?
ನರೇಂದ್ರ ಮೋದಿ ದೇಶ ಭಕ್ತಿಯ ದ್ಯೋತಕವಾಗಿ ಎದ್ದು ನಿಂತಿರುವುದೇ ಫಾರುಖ್ ಅಸಹನೆಗೆ ಕಾರಣ. ಮೋದಿ ಪ್ರಧಾನಿ ಆದರೆ ಪ್ರತ್ಯೇಕತಾವಾದಿಗಳ ಹುಟ್ಟಡಗಿಸುತ್ತಾರೆ ಎಂಬ ಸ್ವಕಲ್ಪಿತ ಭಯ ಆವರಿಸಿದೆ. ಸ್ಥಳಿಯರಿಂದ 'ಆಜಾದ್ ಕಾಶ್ಮೀರ' ಎಂದೇ ಕರೆಸಿಕೊಳ್ಳುತ್ತಿರುವ 'ಪಾಕ್ ಆಕ್ರಮಿತ ಕಾಶ್ಮೀರ'ದ ಮೇಲೆ ಮೋದಿ ಹಿಡಿತ ಸಾಧಿಸುತ್ತಾರೆ ಎಂಬ ಭಯವಿದೆ. ಹಿಂದಿನಿಂದ ಪ್ರತ್ಯೇಕತಾವಾದಿಗಳಿಗೆ ಕಿವಿಚುಚ್ಚುತ್ತ ಮುಂದಿನಿಂದ ಶಾಂತಿಯ ಮಾತನಾಡುತ್ತ ಆರಾಮವಾಗಿ ರಾಜ್ಯವಾಳುತ್ತಿರುವ ತಮ್ಮ ರಾಜಕೀಯ ಭವಿಷ್ಯಕ್ಕೆ ಮುಳುವಾಗಲಿದೆ ಎಂಬ ಭಯ ಕಾಡುತ್ತಿದೆ. ಗೋದ್ರೋತ್ತರ ಹಿಂಸಾಚಾರ ನಡೆದಿದ್ದು ಮೋದಿ ಆಡಳಿತದಲ್ಲಾದ್ದರಿಂದ ಅವರು ಕೋಮುವಾದಿ ಎನ್ನುವ ತರ್ಕ ಇವರದ್ದು. ಹಾಗಾದರೆ ಇದೇ ತರ್ಕವನ್ನು ತಮಗೇಕೆ ಅನ್ವಯಿಸಿಕೊಳ್ಳುವುದಿಲ್ಲ. ಇಸ್ಲಾಂ ತೀವ್ರವಾದಿಗಳ ಕೊಲೆ-ಅತ್ಯಾಚಾರಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಾಶ್ಮೀರಿ ಪಂಡಿತರು ಬಲಿಯಾದರಲ್ಲ. ನಾಲ್ಕು ಲಕ್ಷ ಸಂಖ್ಯೆಯಲ್ಲಿ ನಿರಾಶ್ರಿತರಾದರಲ್ಲ? ಇತಿಹಾಸದ ಅತಿ ಕ್ರೂರ ಅಧ್ಯಾಯಕ್ಕೆ ಇವರೇಕೆ ಹೊಣೆ ಹೊರುವುದಿಲ್ಲ? ಯಾವ ಆ್ಯಂಗಲ್‌ನಲ್ಲಿ ಇವರು ಸೆಕ್ಯುಲರ್ ಎನಿಸುತ್ತಾರೆ?
ಈ ಅಬ್ದುಲ್ಲಾಗಳು, ಮುಫ್ತಿಗಳು ಜಮ್ಮು-ಕಾಶ್ಮೀರವನ್ನು ಜನಪ್ರೀತಿಯ ಆಧಾರದಲ್ಲಿ ಆಳುತ್ತಿದ್ದಾರೆ ಎಂದುಕೊಂಡಿರಾ? ಹಿಂಸಾಗ್ರಸ್ತ ಕಾಶ್ಮೀರದ ನಾಲ್ಕು ಜಿಲ್ಲೆಗಳನ್ನೇ ಜಗತ್ತಿಗೆ ಬಿಂಬಿಸಿ ಎಲ್ಲರಿಗೂ ಭಾರತದೊಂದಿಗೆ ಮುನಿಸಿದೆ ಎಂಬ ಚಿತ್ರಣ ಕೊಟ್ಟಿದ್ದಾರೆ. ವಿಸ್ತಾರ ಮತ್ತು ಜನಸಂಖ್ಯೆ ಎರಡರಲ್ಲೂ ಕಾಶ್ಮೀರಕ್ಕಿಂತ ದೊಡ್ಡದಿರುವ ಜಮ್ಮು-ಲಢಾಕ್ ಪ್ರಾಂತ್ಯಗಳಿಗೆ ವಿಧಾನಸಭೆ- ಲೋಕಸಭೆಗಳಲ್ಲಿ ನ್ಯಾಯಯುತ ಪ್ರಾತಿನಿಧ್ಯವನ್ನೇ ನೀಡಿಲ್ಲ. ಕೇಂದ್ರದ ಹಣಕಾಸಿನ ಸಿಂಹಪಾಲನ್ನು ಕಾಶ್ಮೀರದ ತೀರ ಯಕಃಶ್ಚಿತ ಗುಂಪೊಂದು ತನ್ನದಾಗಿಸಿಕೊಂಡು ಪ್ರತ್ಯೇಕತಾವಾದಕ್ಕೆ ನೀರೆರೆಯುತ್ತಿದೆ. ಹಿಂದೂ-ಬೌದ್ಧ- ಶಿಯಾ ಮುಸ್ಲಿಮರಿಂದ ಆವೃತ್ತವಾಗಿರುವ ಜಮ್ಮು-ಲಢಾಕ್ ಮಂದಿಗೆ ಪ್ರಾತಿನಿಧ್ಯ ಸಿಕ್ಕಿದ್ದೇ ಹೌದಾದರೆ ಈ ಅಬ್ದುಲ್ಲಾಗಳು ಮತ್ತು ಮುಫ್ತಿಗಳು ತಮ್ಮ ಹಿತಾಸಕ್ತಿಗಾಗಿ ಪೊರೆದುಕೊಂಡಿರುವ 'ಕಾಶ್ಮೀರ ಸಮಸ್ಯೆ'ಯ ಮಿಥ್ ಮುರಿದು ರಾಷ್ಟ್ರೀಯತೆ ಮೊಳಗುತ್ತದೆ.
ಈಗಾಗಲೇ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೆ ವಿಧಿಯ ಪ್ರಸ್ತುತತೆ ಪ್ರಶ್ನಿಸಿದ್ದ ಮೋದಿ, ತಮ್ಮ ಕೋಮುವಾದಿ ಕೋಟೆಯನ್ನು ಯಾವಾಗ ಕೆಡವಲಿದ್ದಾರೋ ಎಂಬ ಭಯದಲ್ಲಿ ಭಾರತದಿಂದಲೇ ಬೇರಾಗುವ ಬ್ಲಾಕ್‌ಮೇಲ್‌ಗಿಳಿದಿದ್ದಾರೆ ಫಾರುಖ್.
= ಮಂಜುನಾಥ್ ಎಲ್. ಕೆ.
ಕನ್ನಡಪ್ರಭ