ಪ್ರಿಯಾಂಕ ವಾದ್ರಾ: ಕಾಂಗ್ರೆಸ್ ವಂಶಾಡಳಿತದ ಕೊನೆಯ ಕಾರ್ಡ್?
ಪ್ರಿಯಾಂಕ ವಾದ್ರಾ: ಕಾಂಗ್ರೆಸ್ ವಂಶಾಡಳಿತದ ಕೊನೆಯ ಕಾರ್ಡ್?...
ಏಷ್ಯಾದ ಇತಿಹಾಸದಲ್ಲೇ ಅತಿದೊಡ್ಡ ಸಾಮ್ರಾಜ್ಯವನ್ನು ಸ್ಥಾಪಿಸಿದ ವ್ಯಕ್ತಿ ಬಹುಶಃ ಚಂಗೀಸ್ ಖಾನ್‌ನೇ ಇರಬೇಕು. ಇನ್ನು ಪ್ರಪಂಚದ ಇತಿಹಾಸದಲ್ಲೂ, ಒಂದಕ್ಕೊಂದು ಹೊಂದಿಕೊಂಡ ವಿಸ್ತಾರವಾದ ಸಾಮ್ರಾಜ್ಯವೂ ಮಂಗೋಲ್ ಚಕ್ರಾಧಿಪತ್ಯದ ಅಡಿಯಲ್ಲೇ ಇತ್ತು. ಒಂದೆಡೆ ಅತಿ ಕ್ರೂರ ಜಯಶಾಲಿಯಾಗಿದ್ದ ಚಂಗೀಸ್ ಖಾನ್ (ಆತ ಇಡೀ ಸಮರಖಂಡವನ್ನು ನಾಶ ಮಾಡಿ, ಅಲ್ಲಿನ ಜನರ ತಲೆಬುರುಡೆಗಳಿಂದ ಗೋಪುರಗಳನ್ನು ನಿರ್ಮಿಸಿದ್ದ!), ಇನ್ನೊಂದೆಡೆ, ಅಪಾರ ತಿಳಿವಳಿಕೆಯುಳ್ಳವನೂ ಆಗಿದ್ದ. 1206ರಲ್ಲಿ ಆತ ಹೀಗೊಂದು ಸಂದೇಶ ಹೊರಡಿಸಿದ: "ನಮ್ಮ ಸ್ತ್ರೀ ಸಂತತಿಯನ್ನು ಪುರಸ್ಕರಿಸೋಣ"!
ಮಂಗೋಲಿಯನ್ನರ ಚಿಕ್ಕ ಕಣ್ಣುಗಳು ರೆಪ್ಪೆ ಮುಚ್ಚಿ ತೆಗೆಯುವಷ್ಟರಲ್ಲೇ ಮಹಿಳಾ ಪ್ರತಿನಿಧಿ ಮಸೂದೆ ಪಾಸಾಗಿಬಿಟ್ಟಿತು. ಈ ರೀತಿ ಚಂಗೀಸ್ ಖಾನ್‌ನಿಂದ ಪುರಸ್ಕೃತರಾದ ಅನೇಕ ಮಹಿಳೆಯರಲ್ಲಿ ಆತನ ಮಗಳು ಅಲ್ತಾನಿ ಕೂಡ ಒಬ್ಬಳು. ಅಂದಿನ ಮಹಾನ್ ಯೋಧರಿಗೆ ಮತ್ತು ರಾಜಕಾರಣಿಗಳಿಗೆ ಕೊಡಲಾಗುತ್ತಿದ್ದ 'ಹೀರೋ' ಪಟ್ಟ ಅಲ್ತಾನಿಗೂ ಸಿಕ್ಕಿತು. ಆಕೆ ತನ್ನ ಸಹೋದರ 'ತೌಲಿಯ' ಜೀವ ಉಳಿಸಿದ ಕಾರಣಕ್ಕಾಗಿ ಈ ಪುರಸ್ಕಾರಕ್ಕೆ ಪಾತ್ರಳಾಗಿದ್ದಳು.
ಶತ ಶತಮಾನಗಳ ನಂತರ, ಭಾರತದ ಅಲ್ತಾನಿಯೊಬ್ಬಳು ತನ್ನ ಸಹೋದರನ ರಾಜಕೀಯ ಅಸ್ತಿತ್ವವನ್ನು ಉಳಿಸಲು ಅಖಾಡಕ್ಕಿಳಿದಿದ್ದಾಳೆ. ಉತ್ತರಪ್ರದೇಶದಲ್ಲಿ ಬೆವರು ಹರಿಯುವಂತೆ ಪ್ರಚಾರ ಕೈಗೊಳ್ಳುತ್ತಿರುವ ನರೇಂದ್ರ ಮೋದಿಯವರನ್ನು ಅಲುಗಾಡಿಸಲು ಪ್ರಿಯಾಂಕ ಗಾಂಧಿಯೊಬ್ಬರಿಂದಲೇ ಸಾಧ್ಯ ಎಂದು ಕಾಂಗ್ರೆಸ್‌ನ ಕೆಲವರು ಭಾವಿಸುತ್ತಿದ್ದಾರೆ. ತಮ್ಮ ಪ್ರಭಾವವೊಂದರಿಂದಲೇ ಪ್ರಿಯಾಂಕ ಉತ್ತರಪ್ರದೇಶವನ್ನು ಬಾಚಿಕೊಳ್ಳಬಲ್ಲರು, ಹಾಗಾಗಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬುದು ಅವರ ಆಸೆಯಾಗಿದೆ. ಪ್ರಿಯಾಂಕ ಗಾಂಧಿ, ಗಾಂಧಿ ಕುಟುಂಬದ ಸಮಕಾಲೀನ ನಕ್ಷೆಗಾರರಾಗಲಿದ್ದಾರೆಯೇ? ಕಾಂಗ್ರೆಸ್ ಭೂಪಟವನ್ನು ಅವರೇ ರಚಿಸಲಿದ್ದಾರೆಯೇ?
ಚುನಾವಣೆಯೆನ್ನುವುದು ಸಿದ್ಧಾಂತಗಳ ಯುದ್ಧವೇ ಹೊರತು, ಕುಟುಂಬದ ಚಹಾ ಪಾರ್ಟಿಯಲ್ಲ ಎಂದು ತಮ್ಮ ಮತ್ತೊಬ್ಬ ಸಹೋದರ ವರುಣ್ ಗಾಂಧಿಗೆ ಎಚ್ಚರಿಸಿದ್ದಾರೆ ಪ್ರಿಯಾಂಕ. ಒಟ್ಟಿನಲ್ಲಿ ಈ ಕುಟುಂಬದ ಕಥೆ ಪುರಾತನ ಕಥೆಗಳ ಧರ್ಮ-ಕರ್ಮ ಮಿಶ್ರಣದಂತಿದೆ. ವರುಣ್ ಗಾಂಧಿಯವರು ಮಹಾಭಾರತದ ಕರ್ಣನಂತೆ; ಪ್ರಿಯಾಂಕ ಗಾಂಧಿ ಅಮೇಠಿಯಲ್ಲಿನ ಅಲ್ತಾನಿಯಂತೆ; ಸೋನಿಯಾ ಗಾಂಧಿಯವರು ಅಲೆಕ್ಸಾಂಡರ್‌ನ ತಾಯಿ ಮೆಸಿಡೋನಿಯಾದ ಒಲಿಂಪಿಯಾರಂತೆ! ಒಲಿಂಪಿಯಾ, ತನ್ನ ಪುತ್ರ ಅಲೆಕ್ಸಾಂಡರ್‌ಗೆ ತನ್ನ ಸಾಮ್ರಾಜ್ಯವನ್ನು ಇಲೀರಿಯಾದಿಂದ ಇಜಿಪ್ತ್‌ನವರೆಗೆ ಮತ್ತು ಇಂಡಿಯಾದಿಂದ ಕಝಕಿಸ್ತಾನದವರೆಗೆ ವಿಸ್ತರಿಸಲು ಮಾನಸಿಕವಾಗಿ ಶಕ್ತಿ ತುಂಬಿದ ಮಹಿಳೆ. ಆದರೆ ರಾಹುಲ್ ಗಾಂಧಿ ಮಾತ್ರ ಅಲೆಕ್ಸಾಂಡರ್ ಅಲ್ಲವೇ ಅಲ್ಲ. ಅವರು ಕಿರಿಯ ರಾಜಕುಮಾರನಿದ್ದಂತೆ! ಕಿರಿಯ ರಾಜಕುಮಾರನಿಗೆ, ರಾಜ ದರ್ಬಾರಿನ 'ಬೆನ್ನಿಗೆ ಚೂರಿ ಚುಚ್ಚುವ ಕುತಂತ್ರ ರಾಜಕೀಯದ' ಜವಾಬ್ದಾರಿ ಹೊರುವ ಚಿಂತೆ ಇರುವುದಿಲ್ಲ. ಹಾಗಾಗೇ ಈಗ ರಣತಂತ್ರವನ್ನು ಬದಲಿಸುವ ಮತ್ತು ಕಾಂಗ್ರೆಸ್ ಅನ್ನು ಪುನರುತ್ಥಾನ ಮಾಡುವ ಜವಾಬ್ದಾರಿ ಸಹೋದರಿ ಪ್ರಿಯಾಂಕಾರ ಭುಜದ ಮೇಲೆ ಬಂದು ಕುಳಿತಿದೆ.
'ರಾಬರ್ಟ್ ವಾದ್ರಾ ಹೊರೆಯಾಗಲಿದ್ದಾರೆ(ಬಾಧ್ಯಸ್ಥರಾಗಲಿದ್ದಾರೆ)' ಎಂದು ಕೆಲವು ನಾಯಕರು ಪಿಸುಗುಟ್ಟಿದ್ದಾರೆ. ಆದರೆ ಇನ್ನೊಂದೆಡೆ ಮೋದಿಯವರು ತಾವು ಮೊರಾದಾಬಾದ್‌ನ ಮೊಘಲರ ಮೇಲೆ ವಿಚ್‌ಹಂಟ್ ನಡೆಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. "ಪ್ರಿಯಾಂಕಾ ಅಭ್ಯರ್ಥಿಯಾದರೆ ಮೋದಿಯವರಿಗೆ ಇನ್ನಷ್ಟು ಪ್ರಾಮುಖ್ಯ ಸಿಗುತ್ತದೆ. ಆಗ ಕಾಶಿಯಲ್ಲಿನ ಸಂಘರ್ಷವೇ, ಇಡೀ ದೇಶದ ಚುನಾವಣೆಯ ಮಾನದಂಡವಾಗಿಬಿಡುತ್ತದೆ" ಎಂದು ಇನ್ನೂ ಕೆಲವರು ಗೊಣಗು.
ಪ್ರಿಯಾಂಕ ಪ್ರಭಾವಳಿಯ ಮುಂದೆ ರಾಹುಲ್ ಮಂಕಾಗಿ ಬಿಡುತ್ತಾರೆ ಎಂದೂ, ರಾಹುಲ್ ಬಂದು ಭಾಷಣ ಮಾಡಿದರೆ ತಾವು ಗೆಲ್ಲುವ ಸಾಧ್ಯತೆಗಳು ಕಡಿಮೆಯಾಗಿ ಬಿಡುತ್ತವೆ ಎಂದು ಕೆಲವು ಅಭ್ಯರ್ಥಿಗಳು ಖಾಸಗಿಯಾಗಿ ಗುಸುಗುಸು ಮಾಡುತ್ತಾರಾದರೂ ನಿಜಕ್ಕೂ ಕಾಂಗ್ರೆಸ್ ಪ್ರಿಯಾಂಕಾರನ್ನು ಅಭ್ಯರ್ಥಿಯನ್ನಾಗಿಸಲು ಬಯಸಿತ್ತೇ ಎನ್ನುವುದನ್ನು ನಾವು ಮೊದಲು ನೋಡೋಣ.
ಬಾಯಿಬಿಟ್ಟು ಹೇಳಲಾಗದ ಭಯವೊಂದು, ಪ್ರಶ್ನೆಯೊಂದು, ಕಾಂಗ್ರೆಸ್‌ಗೆ ಎದುರಾಯಿತು: "ಒಂದು ವೇಳೆ ಪ್ರಿಯಾಂಕ ಗಾಂಧಿ ಹಿಂದು ರಾಷ್ಟ್ರೀಯವಾದಿ ಮೋದಿಯ ವಿರುದ್ಧ ಸೋತರೆ ಏನು ಮಾಡುವುದು?" ಎನ್ನುವ ಭಯವದು. ಈ ಶತಮಾನದ ಇಂದಿರಾಗಾಂಧಿ ಎಂದು ಬಿಂಬಿತವಾಗಿರುವ ಹುಡುಗಿಯನ್ನು ಮೋದಿ ಸೋಲಿಸಿದರೆ ಏನು ಮಾಡುವುದು? ಕಾಂಗ್ರೆಸ್ ಸಾಮ್ರಾಜ್ಯದ ಸ್ವಾಭಾವಿಕ ಉತ್ತರಾಧಿಕಾರಿ, ಮೋದಿ ಅಲೆಯಲ್ಲಿ ಮುಳುಗಿಹೋದರೆ ಏನು ಮಾಡುವುದು? ಎನ್ನುವ ಪ್ರಶ್ನೆ(ಭಯ) ಕಾಂಗ್ರೆಸ್ ಅನ್ನು ಕಾಡಿದ್ದು ಸುಳ್ಳಲ್ಲ. ಆದರೂ ಪ್ರಿಯಾಂಕಾರನ್ನು ಅದು ತಯಾರು ಮಾಡುತ್ತಿದೆ. 2014ರ ಚುನಾವಣೆಗಳಿಗಲ್ಲ, ಬದಲಾಗಿ 2019ರ ಮಹಾಯುದ್ಧಕ್ಕೆ!
ಪ್ರಿಯಾಂಕಾ ಗಾಂಧಿ ಸೋನಿಯಾರ ಸಮಸ್ಯಾ ನಿವಾರಕಿಯಾಗಿ ಅಷ್ಟೇ ಅಲ್ಲದೆ, ರಾಹುಲ್ ಗಾಂಧಿಯವರ ಪ್ರಚಾರ ವ್ಯವಸ್ಥಾಪಕಿಯಾಗಿ, ಅಮೇಠಿ ಕ್ಷೇತ್ರದಲ್ಲಿ ಜನರೊಂದಿಗೆ ಬೆರೆಯುತ್ತಾ, ಸಹೋದರನನ್ನು ಬಲಿಷ್ಠಗೊಳಿಸಲು ಪ್ರಯತ್ನಿಸುತ್ತಿದ್ದಾರೆ. 2009ರಲ್ಲಿ ರಾಹುಲ್ ಗಾಂಧಿ ನೇತೃತ್ವದಡಿಯಲ್ಲಿ ಕಾಂಗ್ರೆಸ್ ಉತ್ತರಪ್ರದೇಶದಲ್ಲಿ 21 ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದು ಬೀಗಿತ್ತು. ಆಗ ಅವರಿಗೆ ಕಾಂಗ್ರೆಸ್‌ನ ಪುನರುಜ್ಜೀವಕ ಎಂಬ ಕಿರೀಟ ತೊಡಿಸಲಾಯಿತು. 2002ರ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕ ತಮ್ಮ ಕುಟುಂಬದ ಹಿಡಿತದಲ್ಲಿರುವ ನಗರಗಳಲ್ಲಿ ಪ್ರಚಾರ ಕೈಗೊಂಡಿದ್ದರಿಂದ ಆ ವರ್ಷ ಕಾಂಗ್ರೆಸ್ 7 ಸ್ಥಾಗಳನ್ನು ಆ ಭಾಗದಲ್ಲಿ ಗೆದ್ದಿತು. (ಅದಕ್ಕೂ ಹಿಂದೆ ಕೇವಲ ಎರಡು ಸ್ಥಾನಗಳಲ್ಲಿ ಗೆದ್ದಿತ್ತು). ಆದರೆ 2013 ರಲ್ಲಿ ಪ್ರಿಯಾಂಕಾರಿಗೆ ಕೇವಲ 5 ಸ್ಥಾನಗಳನ್ನು ಗೆಲ್ಲಿಸಿಕೊಡಲಷ್ಟೇ ಸಾಧ್ಯವಾಯಿತು.
ಒಟ್ಟಿನಲ್ಲಿ ಸದ್ಯಕ್ಕೆ ಕಾಂಗ್ರೆಸ್ ಮತ್ತು ರಾಹುಲ್‌ರ ಭವಿಷ್ಯ ಮಸುಕು ಮಸುಕಾಗಿ ಕಾಣಿಸುತ್ತಿದೆ. ಒಂದು ವೇಳೆ ಮೋದಿಯವರೇನಾದರೂ ಗೆದ್ದು ತಮ್ಮ ಅಭಿವೃದ್ಧಿಯ ಭರವಸೆಯನ್ನು ಈಡೇರಿಸುವಲ್ಲಿ ಸಫಲರಾದರೆಂದರೆ ರಾಹುಲ್ ನಿಧಾನವಾಗಿ ರಾಜಕೀಯ ವಾನಪ್ರಸ್ಥಕ್ಕೆ ಜಾರಿಬಿಡುತ್ತಾರೆ. ಆದರೂ ನೆಹರು-ಗಾಂಧಿ ಕುಟುಂಬದ ಶಕ್ತಿಯನ್ನು ಅಷ್ಟು ಸುಲಭವಾಗಿ ಅಳೆದು ತೂಗುವುದಕ್ಕೆ, ಹಂಗಿಸುವುದಕ್ಕೆ ಸಾಧ್ಯವೇ ಇಲ್ಲ.
2003ರ ಸಂಶೋಧನೆಯೊಂದು ಪ್ರತೀ 200 ಜನರಲ್ಲಿ ಒಬ್ಬ ವ್ಯಕ್ತಿ ಚಂಗೀಸ್ ಖಾನ್‌ನ ವಂಶದವನಿರುತ್ತಾನೆ' ಎಂಬ ಭಯಂಕರ ಮಾಹಿತಿಯನ್ನು ಹೊರಹಾಕಿತು! ಭಾರತದಲ್ಲಿ ಕೇವಲ ಒಂದೇ ದಶಕದಲ್ಲಿ, ಅಂದರೆ 1999-2009ರ ರಾಜಕುಟುಂಬದ ವಂಶವಾಹಿ ಹೊತ್ತ ರಾಜಕೀಯ ವಂಶಜರ ಸಂಖ್ಯೆ ತಲೆ ತಿರುಗಿಸುವಷ್ಟು ಹೆಚ್ಚಾಗಿದೆ. ಕಾಂಗ್ರೆಸ್‌ನ ಮತದ ಪಾಲು ಕಳೆದೊಂದು ದಶಕದಲ್ಲಿ 28.6 ಪ್ರತಿಶತದಷ್ಟು ಹೆಚ್ಚಾಗಿದೆ. ಅದು ಈಗ ಉಸಿರಾಡಲು ಕಷ್ಟಪಡುತ್ತಿರಬಹುದು. ಆದರೆ ಆ ಸಾಮ್ರಾಜ್ಯ ಇಂದಿಗೂ ಜೀವಂತವಾಗಿದೆ, ಗಟ್ಟಿಯಾಗಿದೆ. 2019 ರಾಹುಲ್ ಗಾಂಧಿಯವರದ್ದಲ್ಲ, ಬದಲಾಗಿ ಪ್ರಿಯಾಂಕಾ ವಾದ್ರಾರ ಪರ್ವವಾಗಿರಬಹುದು.
-ರವಿ ಶಂಕರ್
ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್