ಅಂಕಣಗಳು

ಪ್ರಚಾರಕ್ಕಿಂತ ವಿಪರೀತವಾದ ಪಕ್ಷಗಳ ಗೊಂದಲ

ಲೋಕಸಭೆ ಚುನಾವಣೆಯಲ್ಲಿನ ಅತ್ಯಂತ ಅಬ್ಬರದ ಪ್ರಚಾರ ಸಮರ ತನ್ನ ಕೊನೆಯ ಹಂತವನ್ನು ಮುಟ್ಟುವ ವೇಳೆಗೆ, ಕಾಂಗ್ರೆಸ್- ಬಿಜೆಪಿಗಳ ಅಡ್ಡಾದಿಡ್ಡಿ ವರ್ತನೆಯ ಪರಿಣಾಮವಾಗಿ, ಅದರ ನಿಜವಾದ ದಿಕ್ಕು ದೆಸೆಗಳನ್ನೇ ಕಳೆದುಕೊಂಡಿತ್ತು.
ಪ್ರಚಾರದ ಕೊನೆಯ ದಿನಗಳಂತೂ ಪ್ರಧಾನ ಪ್ರಚಾರಕರು ತೀರ ಕೆಳಹಂತಕ್ಕೇ ಇಳಿದು ವ್ಯಕ್ತಿಗತ ಆರೋಪಗಳ ವಿನಿಮಯಕ್ಕೆ ಮುಂದಾಗಿದ್ದು ಚುನಾವಣೆ ಆಯೋಗದ ಗಮನಕ್ಕೂ ಬಂದಿದೆ. ಆದರೆ ಆಯೋಗವೂ ಈಗ ಅಸಹಾಯಕವಾಗಿರುವಂತೆ ಕಂಡು ಬಂದಿದೆ.
ಒಂದು ಹಂತದಲ್ಲಿ ಕಾಂಗ್ರೆಸ್ಸಿನ ಅಘೋಷಿತ ಪ್ರಧಾನಿ ಪೀಠದ ಅಭ್ಯರ್ಥಿ ರಾಹುಲ ಗಾಂಧಿ ಅವರು ಪೇಲವವಾಗಿ ಕಂಡು ಬಂದರು. ಅವರ ಮಾತುಗಳಲ್ಲಿ ಆರಂಭದ ಬಿರುಸಿರಲಿಲ್ಲ. ಎಷ್ಟು ಬಾರಿ ತಾನೇ ಹಳೆಯ ಘೋಷಣೆಗಳನ್ನೇ ಮತ್ತೆ ಮತ್ತೆ ಕೂಗುವುದರಿಂದ ಬರುವ ಭಾಗ್ಯವಾದರೂ ಏನು?
ಸಾಲದ್ದಕ್ಕೆ ಕಾಂಗ್ರೆಸ್ ಉದ್ದೇಶಪೂರ್ವಕವಾಗಿ, ಬಿಜೆಪಿ ಹಾಗೂ ಅದರ ನಾಯಕ ನರೇಂದ್ರ ಮೋದಿ ಅವರನ್ನೇ ತಮ್ಮ ಪ್ರಥಮ ಶತ್ರು ಎಂದು ಗುರ್ತಿಸಿ, ಪ್ರಚಾರ ಸಮರಕ್ಕೆ ವ್ಯಕ್ತಿಗತ ಸ್ವರೂಪವನ್ನೇ ನೀಡಿದ್ದು, ರಾಹುಲ ಗಾಂಧಿ ಅವರಿಗೆ ಪ್ರತಿಕೂಲವಾದ ವಾತಾವರಣವನ್ನು ನಿರ್ಮಿಸಿದಂತೆ ಆಗಿದ್ದೂ ನಿಜ. ಇಡೀ ಒಂದು ವಾರ, ಅನೇಕ ರ್ಯಾಲಿಗಳಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ ಗಾಂಧಿ ಅವರಿಬ್ಬರೂ ಪ್ರತ್ಯೇಕ ಪ್ರತ್ಯೇಕವಾಗಿ ಈ ಚುನಾವಣೆಯನ್ನು ಸಮಾಜವನ್ನು ಕಟ್ಟುವವರು ಹಾಗೂ ಸಮುದಾಯಗಳನ್ನು ಒಡೆಯುವವರ ನಡುವಣ ಸೈದ್ಧಾಂತಿಕ ಸಮರ ಎಂದು ಸಾರಿದ್ದು ನಿರೀಕ್ಷಿಸಿದ ಪರಿಣಾಮವನ್ನು ಬೀರಲಿಲ್ಲ. ನರೇಂದ್ರ ಮೋದಿ, ಸೋನಿಯಾ ಗಾಂಧಿ, ರಾಹುಲ ಗಾಂಧಿ ಅವರು ಬೃಹತ್ ರ್ಯಾಲಿಗಳನ್ನು ದೇಶದ ಎಲ್ಲ ಕಡೆ ಟಿ.ವಿ. ಮಾಧ್ಯಮ ನೇರ ಪ್ರಸಾರ ರೂಪದಲ್ಲೇ ಪ್ರಸಾರ ಮಾಡಿದ್ದರಿಂದ ಒಂದು ಸಭೆಯಲ್ಲಿ ಹೇಳಿದ್ದನ್ನು ದೇಶದ ಜನರೆಲ್ಲರೂ ಕೇಳಿದಂತೆಯೇ ಆಗಿತ್ತು. ನೋಡಿದ್ದೂ ಆಗಿತ್ತು.
ಒಂದೆರಡು ಸಭೆಗಳ ಅನಂತರ ನರೇಂದ್ರ ಮೋದಿ ಅವರು ಅಲ್ಲಿ-ಇಲ್ಲಿ ವಿಷಯ ಸಂಗ್ರಹಿಸಿ, ಹಲವು ಹೊಸ ನೀತಿ- ಘೋಷಣೆಗಳನ್ನು ಪ್ರಕಟಿಸಿದರೆ, ಕಾಂಗ್ರೆಸ್ಸಿಗೆ ಏನು ಮಾಡಲಿಕ್ಕೂ ತೋಚಲಿಲ್ಲ. ಆ ಹಂತದಲ್ಲಿ ಸೋನಿಯಾ ಪುತ್ರಿ ಪ್ರಿಯಾಂಕ ವಾಧ್ರಾ ಅವರ ಪ್ರಚಾರವನ್ನು ರಾಯ್ಬರೇಲಿ- ಅಮೇಠಿ ಕ್ಷೇತ್ರಗಳಿಗೇ ಸೀಮಿತಗೊಳಿಸಿಕೊಂಡರೂ, ಅವರು ವೇದಿಕೆಗೆ ಬಂದಿದ್ದು, ಟಿ.ವಿ.ಯ ಪ್ರಖರ ಬೆಳಕಿನಲ್ಲಿ ಕಾಣಿಸಿಕೊಂಡಿದ್ದು ಅದು ಪ್ರಚಾರ ಸಮರಕ್ಕೆ ಹೊಸ ಆಯಾಮವನ್ನು ಕೊಟ್ಟಿದ್ದು ನಿಜ.
ಮೊದಲ ಬಾರಿಗೆ ಪ್ರಿಯಾಂಕ ತಮ್ಮ ಅಮ್ಮ-ಅಣ್ಣನ ಬೆಂಬಲಕ್ಕೆ ನಿಂತದ್ದು ಒಂದು ನೂತನ ನೋಟ ಎನಿಸಿದರೂ ಅದು ಎರಡನೇ ದಿನದಲ್ಲಿ ತನ್ನ ಹೊಸತನವನ್ನು ಕಳೆದುಕೊಂಡಿತ್ತು. ಮತ್ತೆ ಹಳೆಯ ಮಾತಿನ ಪುನರುಚ್ಚಾರ- ಇದು ಪ್ರಚಾರ ಸಮರದ ಕತೆಯಾದರೆ, ಕಾಂಗ್ರೆಸ್ ನಾಯಕರು ಯಾರದ್ದೋ ಮಾತು ಕೇಳಿಕೊಂಡು ಇದ್ದಕ್ಕಿದ್ದಂತೆ, ದಿಢೀರನೆ ಮೋದಿಯವರನ್ನು ಪ್ರಧಾನಿ ಪೀಠದ ಹೊರಗೆ ಇಡುವ ಏಕಮಾತ್ರ ಉದ್ದೇಶದಿಂದ ತೃತೀಯ ರಂಗದ ಬೆಂಬಲ ಪಡೆಯುವ ಅಥವಾ ರಂಗಕ್ಕೆ ಬೆಂಬಲ ನೀಡುವ ಮಾತನ್ನಾಡಲು ಆರಂಭಿಸಿದ್ದಾರೆ.
ಎಲ್ಲಿದೆ ತೃತೀಯ ರಂಗ?: ತೃತೀಯ ರಂಗ ಇರುವುದಾದರೂ ಎಲ್ಲಿ? ನಿಜ. ಕಾಂಗ್ರೆಸ್- ಬಿಜೆಪಿಗಳನ್ನು ಬೇರೆ ಬೇರೆ ಕಾರಣಗಳಿಂದ ರಾಜಕೀಯವಾಗಿ ವಿರೋಧಿಸುವ ಪ್ರಬಲ ಪ್ರಾದೇಶಿಕ ಪಕ್ಷಗಳ ನಾಯಕರ ಮನಸ್ಸಿನಲ್ಲಿ ಹಿಂದಿನ ಪ್ರಯೋಗವನ್ನು (ದೇವೇಗೌಡರಂತಹವರು ಪ್ರಧಾನಿಯಾಗುವುದು) ಮತ್ತೆ ಜಾರಿಗೊಳಿಸಬಹುದಾದ ಚಿಂತನೆ ಇದ್ದರೂ ಇರಬಹುದು. ಆದರೆ ಇದುವರೆಗೆ ಹೊಸ ತೃತೀಯ ರಂಗದ ಪ್ರಸ್ತಾಪವನ್ನೇ ಸಂಬಂಧಪಟ್ಟವರು ಯಾರೂ ಮಾಡಿಲ್ಲ. ಇನ್ನೂ ಅದರ ನಾಮಕರಣವೂ ಆಗಿಲ್ಲ. ದೇವೇಗೌಡರಂತಹ ಅನುಭವಸ್ಥರು, ಕಮ್ಯುನಿಸ್ಟರು ಹಾಗೂ ಇತರ ಮಹತ್ವಾಕಾಂಕ್ಷಿ ನಾಯಕರು ಪರ್ಯಾಯ ರಂಗದ ಮಾತನ್ನು ಆಡಿರಬಹುದು.  ಆದರೆ ಸದ್ಯಕ್ಕೆ ಅಂತಹ ರಂಗದ ರಾಜಕೀಯ ಸ್ವರೂಪ ಸಿದ್ಧವಾಗಿಲ್ಲ. ತೃತೀಯ ಅಥವಾ ಪರ್ಯಾಯ ರಂಗದ ಸಂಭವನೀಯ ನಾಯಕರೆಂದರೆ ಯಾರು? ಬಂಗಾಳದ ಮಮತಾ ಬ್ಯಾನರ್ಜಿ ಹಾಗೂ ತಮಿಳುನಾಡಿನ ಅಣ್ಣಾ ಡಿಎಂಕೆ ನಾಯಕಿ ಜಯಲಲಿತಾ.
ತೆಲುಗು ದೇಶಂನ ಚಂದ್ರಬಾಬು ನಾಯ್ಡು ಬಿಜೆಪಿ ಕೂಟದ ಜತೆಯಲ್ಲಿದ್ದಾರೆ. ಕಮ್ಯುನಿಸ್ಟರಲ್ಲೇ ಹಿರಿಯ ನಾಯಕರಾದ ಬುದ್ಧದೇವ ಭಟ್ಟಾಚಾರ್ಯ ಅವರಂತಹವರು, ಇನ್ನು ಈ ರಂಗಗಳ ಪ್ರಸ್ತಾಪ ಸಾಕು ಎಂದಿದ್ದಾರೆ. ಆದರೂ ಮಹಾರಾಷ್ಟ್ರದ ಕಾಂಗ್ರೆಸ್ ಮುಖ್ಯಮಂತ್ರಿ ಪೃಥ್ವಿರಾಜ ಚೌಹಾಣ್ ಮೋದಿಯವರನ್ನು ತಡೆಯಲು ತೃತೀಯ ರಂಗಕ್ಕೆ ಬೆಂಬಲ ನೀಡುವ ಮಾತನ್ನಾಡಿದ್ದರ ನಿಜವಾದ ಹಿನ್ನೆಲೆ ಗೊತ್ತಾಗಿಲ್ಲ. ಆ ಮಾತಿಗಾಗಿಯೇ ಕಾಯುತ್ತಿದ್ದವರಂತೆ, ಉತ್ತರ ಪ್ರದೇಶದಲ್ಲಿ, ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅದನ್ನೇ ಹೇಳಿದ್ದಾರೆ. ಈಗ ಇದ್ದಕ್ಕಿದ್ದಂತೆ, ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಸದ್ಯಕ್ಕೆ ಪಕ್ಷದ ಮುಂದೆ ಯಾವ ಹೊಂದಾಣಿಕೆಯ ಪ್ರಸ್ತಾಪವೂ ಇಲ್ಲ ಎಂದಿದ್ದಾರೆ. ಅದೇ ಕೊನೆಯ ಮಾತೇನು? ಗೊತ್ತಿಲ್ಲ.
ಮೋದಿ, ರಾಬರ್ಟ್ ವಾದ್ರಾ: ಪ್ರಿಯಾಂಕ ವಾದ್ರಾ ಪ್ರಚಾರ ಸಮರದ ಕಣಕ್ಕೆ ಧುಮುಕಿದ ಕೂಡಲೇ ಬಿಜೆಪಿ ಪ್ರಚಾರಕರು, ಸೋನಿಯಾ ಅಳಿಯ, ಪ್ರಿಯಾಂಕ ಪತಿ, ರಾಬರ್ಟ್ ವಾದ್ರಾ ಅವರು ರಾಜಸ್ಥಾನದಲ್ಲಿ ನಿರತರಾಗಿದ್ದಾರೆನ್ನಲಾದ ಭೂ ಕಬಳಿಕೆ ಆರೋಪಗಳನ್ನು ಹೊರಗೆ ತೆಗೆದು, ತಪ್ಪಿತಸ್ಥರನ್ನು ಜೈಲಿಗೆ ಕಳಿಸುವ ಮಾತನ್ನು ಆಡಿದರು. ಈ ಮಾತುಗಳ ವಿನಿಮಯದಲ್ಲಿ ನರೇಂದ್ರ ಮೋದಿ ಅವರೇ ಪಾಲುಗೊಂಡಿದ್ದರಿಂದ, ಕಾಂಗ್ರೆಸ್ಸಿಗರು ಈ ಪ್ರಚಾರಕ್ಕೆ ಪ್ರತಿಯಾಗಿ, ನರೇಂದ್ರ ಮೋದಿ ಒಬ್ಬ ಹವಾಲಾ (ವಿದೇಶೀ ಹಣದ ಅವ್ಯವಹಾರ) ವ್ಯಾಪಾರಿ ಫಟ್ಟಾ ಜತೆ ಕಾಣಿಸಿಕೊಂಡಿರುವ ಸಿಡಿಯನ್ನು ಕಾಂಗ್ರೆಸ್ ಪ್ರಚಾರಕರು ಬಿಡುಗಡೆ ಮಾಡಿದ್ದಾರೆ. ಅದೇ ಸಮಯದಲ್ಲಿ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯವೇ ಮೋದಿ ಅವರಿಗೂ ಹವಾಲಾ ಆರೋಪಿ ಫಟ್ಟಾ ಅವರಿಗೂ ಏನೇನೂ ಸಂಬಂಧವಿಲ್ಲ ಎಂದು ಹೇಳಿರುವುದು ಬೇರೆ ಮಾತು. ಈ ಸಮರದಲ್ಲಿ ಕಳೆದ ವಾರದ ವಿಶೇಷ ಎಂದರೆ ಮಮತಾ ಬ್ಯಾನರ್ಜಿ ಹಾಗೂ ಜಯಲಲಿತಾ ಅವರಿಬ್ಬರು ಪ್ರತ್ಯೇಕ- ಪ್ರತ್ಯೇಕವಾಗಿ ನರೇಂದ್ರ ಮೋದಿ ಅವರ ವಿರುದ್ಧ ದಾಳಿ ಮಾಡಿರುವುದು.
ಧರ್ಮ - ಜಾತಿಯ ಮಾತು:  ಇವೆಲ್ಲದರನಡುವೆ ಎಲ್ಲ ಬಗೆಯ ಚುನಾವಣೆ ಸಮೀಕ್ಷೆ, ವರದಿಗಳಲ್ಲೂ ಪ್ರಕಟವಾಗುತ್ತಿರುವುದು ಧರ್ಮ-ಜಾತಿ ಆಧರಿತ ಲೆಕ್ಕಚಾರವೇ. ಅದು ಅನಿವಾರ್ಯ. ಇನ್ನು ಎರಡು ಸುತ್ತಿನ ಪ್ರಚಾರ ಸಮರಕ್ಕೆ ದೇಶದ ಜನ ಸಾಕ್ಷಿಯಾಗಬೇಕಾಗಿದೆ. ಈಗ ಆಗಿರುವುದಕ್ಕಿಂತ ವಿಪರೀತವಾದ ಭಿನ್ನ ಸ್ವರೂಪದ ತಿರುವನ್ನು ನಿರೀಕ್ಷಿಸುವುದು ಕಷ್ಟ.
ಆಮ್ ಆದ್ಮಿ ಪಾರ್ಟಿಯಂತಹ ನೂತನ ಪ್ರಯೋಗದ ಪಕ್ಷಗಳು ಅಲ್ಲಿ-ಇಲ್ಲಿ ಗದ್ದಲ ಮಾಡಬಹುದೇ ವಿನಾ ಅದರಿಂದ ಹೆಚ್ಚಿನ ಬದಲಾವಣೆಯನ್ನೇನೂ ನಿರೀಕ್ಷಿಸುವಂತಿಲ್ಲ.
ಕರ್ನಾಟಕದಲ್ಲೇನು?: ಕರ್ನಾಟಕದ ರಾಜಕೀಯದ ಮೇಲೆ ಈಗಾಗಲೇ ಲೋಕಸಭೆ ಚುನಾವಣೆಯ ಸಂಭವನೀಯ ಫಲಿತಾಂಶ ಊಹಾ-ಪೋಹದ ಆಧಾರದ ಮೇಲೆ ಪರದೆಯ ಹಿಂದಿನ ರಾಜಕೀಯ ಆರಂಭವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಚುನಾವಣೆ ಫಲಿತಾಂಶ ಪ್ರಕಟವಾದ ಅನಂತರವೇ ಮಂತ್ರಿಮಂಡಲದ ವಿಸ್ತರಣೆ ಅಥವಾ ಪುನಾರಚನೆ, ಬೋರ್ಡು, ನಿಗಮ, ಮಂಡಳಿಗಳ ಅಧ್ಯಕ್ಷರು- ನಿರ್ದೇಶಕರ ನೇಮಕದ ಚಿಂತನೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರೂ ಸೇರಿದಂತೆ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಸರಿಯಾಗಿ, ನೆಮ್ಮದಿಯ ನಿದ್ದೆಯನ್ನು ಮಾಡುವುದು ಅಸಾಧ್ಯವಾದ ವಾತಾವರಣ ನಿಧಾನವಾಗಿ, ಆದರೆ ಸ್ಪಷ್ಟವಾಗಿ ನಿರ್ಮಾಣವಾಗುತ್ತಿದೆ.
ಕಾಂಗ್ರೆಸ್ಸಿನಲ್ಲಿ ಈಗ ಸ್ಥಾನಮಾನಗಳನ್ನು ಅಪೇಕ್ಷಿಸಿರುವವರು (ಮಂತ್ರಿಸ್ಥಾನ, ವಿಧಾನ ಪರಿಷತ್ತಿನಲ್ಲಿ ಪ್ರಾತಿನಿಧ್ಯ, ರಾಜ್ಯಸಭೆ) ನಿಜವಾಗಲೂ ಆತಂಕ ಪಡಬೇಕಾದ ಸ್ಥಿತಿ. ಈಗಾಗಲೇ ದೆಹಲಿ ಮೂಲಗಳಿಂದ ಪ್ರಕಟವಾಗುತ್ತಿರುವ ವದಂತಿಗಳಂತೆ, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಪರವಾಗಿ ಮತದಾನದ ಅಭಿಪ್ರಾಯವನ್ನು ರೂಪಿಸುವುದರಲ್ಲಿ ಯಾರ್ಯಾರ ಕಾಣಿಕೆ ಎಷ್ಟೆಷ್ಟು ಎನ್ನುವುದೇ ಸದ್ಯಕ್ಕಂತೂ ಮುಖ್ಯವಾಗುತ್ತದೆ.
ಕಾಂಗ್ರೆಸ್- ಬಿಜೆಪಿ ನಾಯಕರ ಜತೆ, ಅಲ್ಲಿ-ಇಲ್ಲಿ ಮಾತುಕತೆ ನಡೆಸಿದಾಗ, ಅವರಲ್ಲಿ ಯಾರಿಗೂ ಇಡೀ ರಾಜ್ಯದ ಚಿತ್ರದ ಅಂದಾಜು ಸಿಕ್ಕಿದೆ ಎಂದೇನೂ ಅನ್ನಿಸುವುದಿಲ್ಲ. ಹಾಗೂ-ಹೀಗೂ ಅಡ್ಡಗೋಡೆಯ ಮೇಲಿನ ದೀಪ ಇಟ್ಟ ರೀತಿಯಲ್ಲೇ ಅವರ ಅನಿಸಿಕೆ ಪ್ರಕಟವಾಗುವುದು. ರಾಜ್ಯದ ನಾಯಕರಿಗೆ ಧೈರ್ಯವಾಗಿ, ತಮ್ಮ ಮನಸ್ಸಿನ ಅಂತರಾಳದಿಂದ ಹೊಮ್ಮುವ ಅಂಕೆಯನ್ನು ಹೇಳುವ ಧೈರ್ಯ ಇದ್ದಂತಿಲ್ಲ. ಮತ್ತೆ ಮತ್ತೆ ಅದೇ ಮಾತು. ಕಾಂಗ್ರೆಸ್- ಬಿಜೆಪಿಗಳ ನಡುವೆ ಒಂದೆರಡು ಸ್ಥಾನಗಳ ಅಂತರ ಇರಬಹುದಷ್ಟೇ ಎನ್ನುವ ಅನಿಸಿಕೆ. ಆದರೆ ಆ ಅನಿಸಿಕೆಗೆ ಆಧಾರವೇನು? ಆ ಪ್ರಶ್ನೆ ಫಲಿತಾಂಶ ಪ್ರಕಟವಾಗುವವರೆಗೂ ಹಾಗೇ ಉಳಿದುಬಿಡುತ್ತದೆ. ಅದು ಅನಿವಾರ್ಯ.
ಕಿಡಿಗೇಡಿತನ: ಕಾಂಗ್ರೆಸ್- ಬಿಜೆಪಿಗಳ ನಡುವಣ ಪ್ರಚಾರ ಸಮರದಲ್ಲಿ ಪ್ರತ್ಯೇಕ್ಷವಾಗಿ ಪಾಲುಗೊಳ್ಳಲು ಇಷ್ಟವಿಲ್ಲದೇ ಇದ್ದರೂ, ಸುಮ್ಮನೆ ಇರುವುದಕ್ಕೂ ಆಗದೆ ಇರುವ ಅಮೆರಿಕ ವಿಖ್ಯಾತ ಅರ್ಥಶಾಸ್ತ್ರ ಪಂಡಿತರಾದ ಅಮರ್ತ್ಯಸೆನ್ ಕಾಂಗ್ರೆಸ್ ಪರವಾಗಿ, ಜಗದೀಶ್ ಭಗವತಿ ಬಿಜೆಪಿಯ ಪರವಾಗಿ ಮಾತಾಡಿದ್ದಾರೆ. ಇದು ಜನರ ಮೇಲೆ ಪರಿಣಾಮ ಬೀರಬಹುದಾ?

-ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!