ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ತ್ವರಿತ ನ್ಯಾಯದಾನಕ್ಕಾಗಿ ಏನೆಲ್ಲ ಮಾಡಬಹುದು?

Srinivasa Murthy VN
Updated On : 1 Aug 2014, 11:57 am

ಈ ದೇಶದಲ್ಲಿ ಕೆಳ ನ್ಯಾಯಾಲಯಗಳಲ್ಲಿ ಸಿವಿಲ್ ಕೇಸಿಗೆ ಸಂಬಂಧಿಸಿದಂತೆ ಕೋಟ್ಯಂತರ ಪ್ರಕರಣಗಳು ಬಾಕಿ ಇದ್ದು, ಇವುಗಳ ತ್ವರಿತ ವಿಚಾರಣೆಗೆ ಈವರೆಗೆ ಮಾಡಿರುವ ಪ್ರಯತ್ನಗಳು ನಿರೀಕ್ಷಿಸಿದ ಫಲ ನೀಡಿರುವುದಿಲ್ಲ. 5ರಿಂದ 10 ವರ್ಷ ಅನುಭವವಿರುವ ಆಯಾ ನ್ಯಾಯಾಲಯದ ವಕೀಲರನ್ನು ಸಾಕ್ಷಿ ವಿಚಾರಣೆ ಮಾಡಲು ಪಾರ್ಟಿಗಳ ಖರ್ಚಿನಲ್ಲಿ ನ್ಯಾಯಾಲಯ ನಿಯೋಗಿಯಾಗಿ ನೇಮಿಸಬೇಕು. ನ್ಯಾಯಾಧೀಶರ ಉಸ್ತುವಾರಿಯಲ್ಲಿ ಉಭಯ ಕಕ್ಷಿದಾರರ ವಕೀಲರ ಸಮಕ್ಷಮದಲ್ಲಿ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಲಯ ಒದಗಿಸುವ ಗಣಕೀಕರಣ ಯಂತ್ರ ಮತ್ತು ಗಣಕೀಕರಣದಾರರ ಮೂಲಕ ಸಾಕ್ಷಿ ವಿಚಾರಣೆ ಏಕಕಾಲದಲ್ಲಿ ಐದಾರು ಕೇಸುಗಳಲ್ಲಿ ಮಾಡಿಸಬೇಕು. ಹೀಗಾದಲ್ಲಿ ಪ್ರತಿದಿನ ಸಂಬಂಧಪಟ್ಟ ನ್ಯಾಯಾಧೀಶರು ದಾಖಲಿಸುವ ಸಾಕ್ಷಿಗಳ 10 ಪಟ್ಟು ಸಾಕ್ಷಿ ಹೇಳಿಕೆಗಳನ್ನು ನ್ಯಾಯಾಲಯ ನಿಯೋಗಿಗಳ ಮೂಲಕ ದಾಖಲಿಸಿಕೊಳ್ಳಬಹುದು. ಇದರಿಂದ ಸಂಬಂಧಪಟ್ಟ ನ್ಯಾಯಾಲಯದವರು ಈಗಿನ ವ್ಯವಸ್ಥೆಯಲ್ಲಿ ಹೊಸ ನ್ಯಾಯಾಲಯಗಳ ಸ್ಥಾಪನೆ ಇಲ್ಲದೇ ತೀರ್ಮಾನ ಮಾಡುವ ಕೇಸುಗಳ ಸಂಖ್ಯೆಯನ್ನು 10 ಪಟ್ಟು ಹೆಚ್ಚಿಸಬಹುದು.
ಕ್ರಿಮಿನಲ್ ಪ್ರಕರಣಗಳಲ್ಲಿ ದೂರುದಾರರ ಹೇಳಿಕೆಗಳಿಗೆ ರುಜು ಪಡೆಯುವುದು ಕಡ್ಡಾಯವಿದ್ದು, ಅದೇ ರೀತಿ ತನಿಖಾಧಿಕಾರಿಗಳು, ದಾಖಲಿಸುವ ಸಾಕ್ಷಿಗಳ ಹೇಳಿಕೆಗಳಿಗೆ ಸಂಬಂಧಪಟ್ಟ ಸಾಕ್ಷಿಗಳ ರುಜುಗಳನ್ನು ಪಡೆಯುವುದು ಕಡ್ಡಾಯ ಮಾಡುವುದು. ಒಂದು ಪಕ್ಷ ಹೇಳಿಕೆ ಕೊಡುವ ಸಾಕ್ಷಿ ಅವಿದ್ಯಾವಂತನಿದ್ದಲ್ಲಿ ಇವನ ಹೇಳಿಕೆಯನ್ನು ಇವನು ಕರೆತರುವ ವಿದ್ಯಾವಂತ ಸ್ನೇಹಿತನ ಸಮಕ್ಷಮ ದಾಖಲಿಸಿಕೊಂಡು ಸದರಿ ಸಾಕ್ಷಿಯ ರುಜುವನ್ನು ಅಥವಾ ಹೆಬ್ಬೆಟ್ಟಿನ ಗುರುತನ್ನು ವಿದ್ಯಾವಂತ ಸ್ನೇಹಿತನಿಂದ ದೃಢೀಕರಿಸುವುದು. ಇದರಿಂದ ತನಿಖಾಧಿಕಾರಿಗಳು ತನಿಖೆಯಲ್ಲಿ ಎಸಗುವ ಅನ್ಯಾಯವನ್ನು ತಡೆಯಲು ಮತ್ತು ಪ್ರಾಮಾಣಿಕ ತನಿಖೆ ಪೂರ್ಣಗೊಳಿಸಲು ಸಾಧ್ಯವಾಗುವುದು. ಇದರಿಂದ ಕ್ರಿಮಿನಲ್ ಮೊಕದ್ದಮೆಗಳ ತನಿಖೆಯಲ್ಲಿ ತನಿಖಾಧಿಕಾರಿಗಳ ಸ್ವೇಚ್ಛಾಚಾರಕ್ಕೆ ಮತ್ತು ಪ್ರತಿಕೂಲ ಸಾಕ್ಷಿಗಳಿಗೆ ಕಡಿವಾಣ ಹಾಕಬಹುದು ಮತ್ತು ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಬಹುದು.
ಜೀವಾವಧಿ ಶಿಕ್ಷೆ ಮತ್ತು ಮರಣದಂಡನೆಗೆ ಒಳಗಾಗುವ ಪ್ರಕರಣಗಳಲ್ಲಿ ಸಂಬಂಧಪಟ್ಟ ತನಿಖಾಧಿಕಾರಿಗಳು ಸದರಿ ಕೇಸನ್ನು 1 ವರ್ಷದ ಒಳಗೆ ಪತ್ತೆ ಹಚ್ಚದಿದ್ದಲ್ಲಿ ಇಂತಹ ಪ್ರಕರಣಗಳನ್ನು ಒಂದು ವರ್ಷದ ನಂತರ ಕೇಂದ್ರ ತನಿಖಾಧಿಕಾರಿಗಳ ಸಂಸ್ಥೆಗೆ ವರ್ಗಾವಣೆಯಾಗುವುದನ್ನು ಕಡ್ಡಾಯಗೊಳಿಸುವುದು. ಇದರಿಂದ ಪ್ರಭಾವಶಾಲಿಗಳಿಂದ, ಭ್ರಷ್ಟ ತನಿಖಾಧಿಕಾರಿಗಳಿಂದ ತನಿಖೆಯನ್ನು ಮುಕ್ತಗೊಳಿಸಬಹುದು ಮತ್ತು ನೊಂದವರಿಗೆ ನ್ಯಾಯ  ಕೊಡಿಸುವುದಕ್ಕೆ ಅನುಕೂಲವಾಗುವುದು. ಸದ್ಯ ಬಲಿಪಶು ಆದವರು ಮಾಧ್ಯಮ ಮತ್ತು ಉಚ್ಚ ನ್ಯಾಯಾಲಯಗಳಿಂದ ಹಾಗೂ ಸರ್ಕಾರದಿಂದ ಮಾತ್ರ ಅನುಕೂಲ ಪಡೆಯುತ್ತಿದ್ದಾರೆ. ಇದನ್ನು ಜನ ಸಾಮಾನ್ಯರಿಗೂ ಒದಗಿಸಲು ಮೇಲಿನ ತಿದ್ದುಪಡಿಗಳು ಅತಿ ಅವಶ್ಯವಿದೆ.
ಸರ್ಕಾರದ ಅನಗತ್ಯ ಆಡಳಿತಾತ್ಮಕ ವಿಳಂಬವನ್ನು ತಪ್ಪಿಸಲು ಸದರಿ ವಿಳಂಬವನ್ನು ಕ್ರಮಾರ್ಹ ಕ್ಲೈಮ್ ಆಗಿ ಪರಿಗಣಿಸಿ ವಿಳಂಬಕ್ಕೆ ಸಂಬಂಧಪಟ್ಟವರನ್ನು ಹೊಣೆಗಾರರನ್ನಾಗಿ ಮಾಡುವುದು.
ದಂಡ ಪ್ರಕ್ರಿಯಾ ಸಂಹಿತೆಯ ವಿಧಿ 197ರಲ್ಲಿ ಅನುಮತಿ ವಿಷಯವನ್ನು ಕಾಲಮಿತಿ ಒಳಗೆ ತೀರ್ಮಾನಿಸುವಂತೆ ತಿದ್ದುಪಡಿ ತರುವುದು ಮತ್ತು ಇದರ ಸಂಬಂಧ ಆಗುವ ಆದೇಶಗಳನ್ನು ಸಂಬಂಧಪಟ್ಟ ಶ್ರೇಷ್ಠ ನ್ಯಾಯಾಲಯಗಳಲ್ಲಿ ಪ್ರಶ್ನಿಸಲು ಅವಕಾಶ ಮಾಡಿಕೊಡುವುದು.
ಕ್ರಿಮಿನಲ್ ಮತ್ತು ಸಿವಿಲ್ ಮೇಲ್ಮನವಿಗಳನ್ನು ತ್ವರಿತವಾಗಿ ಕಡಿಮೆ ಖರ್ಚಿನಲ್ಲಿ ತೀರ್ಮಾನಿಸಲು ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಶ್ರೇಷ್ಠ ನ್ಯಾಯಾಲಯಗಳ ನ್ಯಾಯಮೂರ್ತಿಗಳ ಅಧಿಕಾರ ಹೊಂದಿರುವ 1ಕ್ಕಿಂತ ಹೆಚ್ಚು ನ್ಯಾಯಮೂರ್ತಿಗಳನ್ನು ಒಳಗೊಂಡ ಮೇಲ್ಮನವಿ ಪ್ರಾಧಿಕಾರ ನೇಮಿಸುವುದು. ಅದೇ ರೀತಿ ಎಲ್ಲ ಶ್ರೇಷ್ಠ ನ್ಯಾಯಾಲಯಗಳಲ್ಲಿ ಸರ್ವೋಚ್ಚ ನ್ಯಾಯಾಲಯಗಳ ಅಧಿಕಾರ ಹೊಂದಿರುವ ನ್ಯಾಯಮೂರ್ತಿಗಳನ್ನು ಒಳಗೊಂಡ ಮೇಲ್ಮನವಿ ಪ್ರಾಧಿಕಾರ ನೇಮಿಸುವುದು. ಇದರಿಂದ ಅಗಾಧ ಪ್ರಮಾಣದ ಸಿವಿಲ್ ಮತ್ತು ಕ್ರಿಮಿನಲ್ ಮೇಲ್ಮನವಿಗಳು ಅತಿ ಕಡಿಮೆ ಖರ್ಚಿನಲ್ಲಿ ಮತ್ತು ಶೀಘ್ರವಾಗಿ ಉನ್ನತ ನ್ಯಾಯ ವ್ಯವಸ್ಥೆ ಮೂಲಕ ತೀರ್ಮಾನ ಮಾಡಲು ಅನುಕೂಲವಾಗುತ್ತದೆ.
ಶ್ರೇಷ್ಠ ಮತ್ತು ಸರ್ವೋಚ್ಚ ನ್ಯಾಯಾಲಯಗಳ ಸನ್ಮಾನ್ಯ ನ್ಯಾಯಮೂರ್ತಿಗಳನ್ನು ನೇಮಿಸಲು ರಾಷ್ಟ್ರಪತಿಯವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಸ್ವತಂತ್ರ ನ್ಯಾಯಾಂಗ ಆಯೋಗ ನೇಮಿಸುವುದು. ಅದೇ ರೀತಿ ಕೆಳ ನ್ಯಾಯಾಲಯಗಳ ನ್ಯಾಯಾಧೀಶರುಗಳನ್ನು ನೇಮಿಸಲು ಎಲ್ಲ ರಾಜ್ಯಗಳಲ್ಲಿ ಸ್ವತಂತ್ರ ರಾಜ್ಯ ನ್ಯಾಯಾಂಗ ಆಯೋಗ ನೇಮಿಸುವ ವಿಚಾರವನ್ನು ಆದಷ್ಟು ಜಾಗ್ರತೆ ಕಾನೂನು ಮೂಲಕ ಜಾರಿಗೆ ತರುವುದು.
= ದೋಷಾರೋಪಣೆಗೆ ಒಳಗಾಗುವ ಸರ್ವೋಚ್ಚ ಮತ್ತು ಶ್ರೇಷ್ಠ ನ್ಯಾಯಾಲಯಗಳ ನ್ಯಾಯಮೂರ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಈಗಿರುವ ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡದೇ ಇರುವುದರಿಂದ ಈ ಕೆಲಸವನ್ನು ನೇಮಕ ಅಧಿಕಾರ ಹೊಂದುವ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಗೆ ಒಳಪಡಿಸುವುದು.

-ಈಶ್ವರಪ್ಪ ನಾಯ್ಕ, ವಕೀಲರು, ಸಾಗರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement