ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಆರೋಪ ಬಂದಾಗ ವಿವರಣೆಗೆ ಅವಕಾಶವೇ ಸಿಗಲಿಲ್ಲ

Srinivasa Murthy VN
Updated On : 3 Aug 2014, 12:54 pm

'ಒನ್ ಲೈಫ್ ಈಸ್ ನಾಟ್ ಇನಫ್‌' ಇದು ನಟವರ್ ಸಿಂಗ್ ಆತ್ಮಕತೆ ಪುಸ್ತಕ. ಒಂದೊಮ್ಮೆ ನೆಹರು-ಗಾಂಧಿ ಕುಟುಂಬದ ನಿಕಟವರ್ತಿಯೇ ಆಗಿದ್ದ ನಟವರ್ ಸಿಂಗ್ ಈಗ ಆ ಕುಟುಂಬವನ್ನು ಟೀಕಿಸುವ ಅಭಿಪ್ರಾಯಗಳನ್ನು ಪುಸ್ತಕದಲ್ಲಿ ಮಂಡಿಸಿರುವುದು ಬಿಸಿ ಬಿಸಿ ವಾಗ್ಯುದ್ಧಗಳಿಗೆ ಕಾರಣವಾಗಿದೆ. ಆಹಾರಕ್ಕಾಗಿ ತೈಲ ಹಗರಣದಲ್ಲಿ ಸಿಲುಕಿಕೊಂಡು ಪದವಿ ಕಳೆದುಕೊಂಡ ನಂತರ ಕಾಂಗ್ರೆಸ್ ಇವರನ್ನು ರಕ್ಷಿಸಲು ಹೋಗಲಿಲ್ಲ ಎಂಬ ಉರಿಗೆ ಹೀಗೆಲ್ಲ ವಿಷ ಕಾರುತ್ತಿದ್ದಾರೆ ಎಂಬುದು ಸೋನಿಯಾ ಬೆಂಬಲಿಗರು ಹೇಳುತ್ತಿರುವ ಮಾತು. ಆದರೆ ಹಳೆಯ ಕಾಂಗ್ರೆಸಿಗ ನಟವರ್ ಮಾತುಗಳನ್ನು ಅಷ್ಟು ಸುಲಭಕ್ಕೆ ಪ್ರಾಮುಖ್ಯವಿಲ್ಲ ಎಂಬಂತೆ ಬಿಂಬಿಸುತ್ತಿರುವುದು ಕಾಂಗ್ರೆಸಿಗೂ ಕಷ್ಟವಾಗುತ್ತಿದೆ. ಪುಸ್ತಕ ಹೊರತಂದಿರುವ ಹುಮ್ಮಸ್ಸಿನಲ್ಲಿ ಪತ್ರಿಕೆ- ಟಿವಿ ಸೇರಿದಂತೆ ನಾನಾ ರಾಷ್ಟ್ರೀಯ ಮಾಧ್ಯಮಗಳಿಗೆ ನೀಡುತ್ತಿರುವ ಸಂದರ್ಶನದಲ್ಲಿ ನಟವರ್ ಸಿಂಗ್ ಪ್ರತಿಪಾದಿಸುತ್ತಿರುವ ಅಂಶಗಳ ಸಾರಸಂಗ್ರಹ ಇಲ್ಲಿದೆ.

ಬದಲಾದ ಕಾಲಕ್ಕೆ ಸರಿಹೊಂದಿಸಿಕೊಳ್ಳುವುದಕ್ಕೆ ನನ್ನ ಆತ್ಮಕತೆಯನ್ನು ಈಗ ಹೊರತಂದಿದ್ದೇನೆ ಎಂಬ ಆರೋಪ ಸರಿಯಲ್ಲ. ಒಂದು ಪುಸ್ತಕ ಬರೆಯುವುದಕ್ಕೆ 2-3 ವರ್ಷಗಳು ತಗಲುತ್ತವೆ. ನಾನು 2011ರಲ್ಲೇ ನನ್ನ ಆತ್ಮಕತೆಯನ್ನು ಬರೆಯಲು ಪ್ರಾರಂಭಿಸಿದೆ. ಇದು ಚುನಾವಣೆಯ ಮೊದಲು ಬರಬೇಕೋ, ನಂತರ ಬರಬೇಕೋ ಎಂದೆಲ್ಲ ನಾನು ಯೋಜನೆ ಮಾಡಲಿಲ್ಲ. ಪುಸ್ತಕ ಸಿದ್ಧವಾದೊಡನೆ ಹೊರತಂದಿದ್ದೇನೆ ಅಷ್ಟೇ.
= ನನಗೆ 80 ವರ್ಷ ಮೀರಿತು. ಈಗೊಂದು ಆತ್ಮಕತೆ ತರುವುದರಲ್ಲಿ ಅರ್ಥವಿಲ್ಲವೇ? ಇದರಲ್ಲಿ ಮತ್ಯಾವ ಉದ್ದೇಶಗಳೂ ಇಲ್ಲ. ಹೀಗೆ ಆತ್ಮಕತೆ ಬರೆದಾಗ ಅದರಲ್ಲಿ ಸೋನಿಯಾ ಗಾಂಧಿಯವರನ್ನು ಪ್ರಸ್ತಾಪ ಮಾಡದೇ ಇರಲಿಕ್ಕಾಗದು. ಏಕೆಂದರೆ ಅವರು ಪ್ರಮುಖ ಸಾರ್ವಜನಿಕ ವ್ಯಕ್ತಿ. 2004ರಲ್ಲಿ ಸೋನಿಯಾ ಗಾಂಧಿಯವರು ಪ್ರಧಾನಿ ಪದವಿಯನ್ನು ಒಪ್ಪಿಕೊಳ್ಳದೇ ಇದ್ದದ್ದಕ್ಕೆ ಮುಖ್ಯ ಕಾರಣ ಮಗ ರಾಹುಲ್ ಗಾಂಧಿಯ ಆತಂಕ. ಪ್ರಧಾನಿ ಹುದ್ದೆಗೆ ಹೋದರೆ ತನ್ನ ತಾಯಿಯ ಜೀವವೂ ರಾಜೀವ್ ಗಾಂಧಿ ಅವರಂತೆಯೇ ಅಪಾಯಕ್ಕೆ ಸಿಲುಕಲಿದೆ ಎಂಬ ಆತಂಕ ಅವರದಾಗಿತ್ತು. ಹೀಗಾಗಿ ಪ್ರಧಾನಿ ಹುದ್ದೆಯನ್ನು ಒಪ್ಪಿಕೊಳ್ಳದಂತೆ ತಾಯಿ ಸೋನಿಯಾ ಗಾಂಧಿ ಮೇಲೆ ಒತ್ತಡ ತಂದರು.
= ಇರಾಕ್‌ನ ತೈಲ ಹಗರಣದ ಸಂಬಂಧದಲ್ಲಿ ವೋಲ್ಕರ್ ವರದಿ ಬಂದಾಗ ಸೋನಿಯಾ ಗಾಂಧಿಯವರು ನನ್ನ ಪರ ನಿಲ್ಲಬೇಕಿತ್ತೆಂದು ನಾನು ನಿರೀಕ್ಷಿಸಿದ್ದೆ. ಸಚಿವಾಲಯಗಳ ಆಂತರಿಕ ಡೀಲಿಂಗ್‌ಗಳ ಬಗ್ಗೆಯೆಲ್ಲ ಅವರಿಗೆ ಮಾಹಿತಿ ಇದ್ದೇ ಇತ್ತು. ಹಾಗಂತ ಅದೇ ಕಹಿಯನ್ನಿಟ್ಟುಕೊಂಡು ಮುಂದುವರಿಯಲಾಗಿದೆ ಎಂದರ್ಥವಲ್ಲ. ನನಗೆ ಶಸ್ತ್ರಚಿಕಿತ್ಸೆ ಆಗಿದ್ದಾಗ ಸೋನಿಯಾ ಗಾಂಧಿ ಸಂದರ್ಶಿಸಿದ್ದರು. ಅಂಥ ಔದಾರ್ಯವನ್ನೆಲ್ಲ ನಾನು ಮರೆತಿಲ್ಲ. ನನ್ನ ಮಗಳು ತೀರಿಕೊಂಡಾಗಲೂ ಅವರು ಬಂದು ದುಃಖ ಹಂಚಿಕೊಂಡರು. ಸೋನಿಯಾ ಅವರ ವ್ಯಕ್ತಿತ್ವಕ್ಕೆ ಹಲವು ಮುಖಗಳಿವೆ.
= ಪ್ರಧಾನಿ ಪದವಿ ಒಪ್ಪಿಕೊಳ್ಳದಿರಲು ರಾಹುಲ್ ಹೆದರಿಕೆ ಕಾರಣವಾಯ್ತು ಎಂದು ಬರೆದಿದ್ದಕ್ಕೆ ಪ್ರತಿಕ್ರಿಯೆಯಾಗಿ ಸೋನಿಯಾ ಗಾಂಧಿಯವರು ತಾವು ಪುಸ್ತಕ ಬರೆದಾಗ ಎಲ್ಲವನ್ನೂ ತೆರೆದಿಡುವುದಾಗಿ ಹೇಳಿದ್ದಾರೆ. ನಾನು ಅವರ ಪುಸ್ತಕ ಓದುವುದಕ್ಕೆ ಕಾತರನಾಗಿದ್ದೇನೆ. ನಿಮ್ಮ ಟೀಕಾಕಾರರಿಗೆ ಉತ್ತರಿಸಲು ಹೋಗಬಾರದು ಎಂಬುದು ಸಾಮಾನ್ಯ ತಿಳಿವಳಿಕೆ. ನಾನೇ ಸೋನಿಯಾ ಜಾಗದಲ್ಲಿದ್ದರೆ ಈ ಪುಸ್ತಕದಲ್ಲಿ ಪ್ರಸ್ತಾಪಿತವಾದ ಸಂಗತಿಗೆ ಪ್ರತಿಕ್ರಿಯಿಸುವುದಕ್ಕೇ ಹೋಗುತ್ತಿರಲಿಲ್ಲ. ಅವರು ಪ್ರತಿಕ್ರಿಯಿಸುವ ಗೋಜಿಗೆ ಹೋಗಿದ್ದಾರೆ ಎಂದರೆ ನಾನು ಹೇಳಿದ್ದರಲ್ಲಿ ಏನೋ ತೂಕ ಇದ್ದಿರಲೇಬೇಕಲ್ಲವೇ?
= ಒಂದಂತೂ ನಿಜ. ವೋಲ್ಕರ್ ವರದಿ ಬರುವ ಸಂದರ್ಭದಲ್ಲಿ ವಿದೇಶ ಸಚಿವನಾಗಿದ್ದ ನನ್ನನ್ನು ಯಾವ ಭಾರತೀಯನೂ ಅಷ್ಟು ಕೆಟ್ಟದಾಗಿ ನಡೆಸಿಕೊಳ್ಳುತ್ತಿರಲಿಲ್ಲ. ನಮ್ಮಲ್ಲೊಂದು ಸಂಪ್ರದಾಯವಿದೆ. ನಮಗಿಂತ ವಯಸ್ಸಿನಲ್ಲಿ ಹಿರಿಯರು ಎಂದಾದಾಗ ಅವರಿಗೆ ಒಂದುಮಟ್ಟದ ಗೌರವವನ್ನು ಕೊಡುತ್ತೇವೆ. ಭಾರತದಲ್ಲೇ ಹುಟ್ಟಿರುವ ಯಾವುದೇ ವ್ಯಕ್ತಿಗಾದರೂ ಈ ಸಂಗತಿ ತಿಳಿದಿರುತ್ತದೆ. ಆಹಾರಕ್ಕಾಗಿ ತೈಲ ಹಗರಣದಲ್ಲಿ ನನ್ನ ವಿರುದ್ಧ ಆರೋಪ ಬಂದಾಗ ಅದಕ್ಕೆ ನನ್ನ ಕಡೆಯಿಂದ ವಿವರಣೆ ನೀಡುವ ಅವಕಾಶವನ್ನು ಕೊಡಬೇಕಾಗಿತ್ತು. ಅದನ್ನೂ ನೀಡದೇ ನಾನು ವಿದೇಶದಲ್ಲಿರುವಾಗಲೇ ನನ್ನನ್ನು ಹುದ್ದೆಯಿಂದ ತೆಗೆಯುವ ನಿರ್ಧಾರ ಕೈಗೊಳ್ಳಲಾಯಿತು. ನಾನು ನೆಹರು-ಗಾಂಧಿ ಕುಟುಂಬಕ್ಕೆ ಹತ್ತಿರದವನಾದ್ದರಿಂದ ಸೋನಿಯಾ ಗಾಂಧಿಯವರು ನಟವರ್ ಸಿಂಗ್ ಅವರನ್ನು ಬಳಸಿಕೊಂಡು ಹಣ ನುಂಗುತ್ತಿದ್ದಾರೆ ಎಂಬ ಆರೋಪ ಬರಬಾರದೆಂಬ ಕಾರಣಕ್ಕೆ ನನ್ನನ್ನು ಬಲಿಪಶುವಾಗಿಸಲಾಯಿತು.
= ಇದನ್ನೆಲ್ಲ ಹಳೆಯ ಕಹಿ ಉಪಶಮನ ಮಾಡಿಕೊಳ್ಳುವುದಕ್ಕೆ ಬರೆದೆ ಎಂಬುದು ಸರಿಯಲ್ಲ. ಅಂಥ ಯಾವ ಕಹಿಭಾವವನ್ನೂ ನಾನು ಇಟ್ಟುಕೊಂಡಿಲ್ಲ. ಇಷ್ಟಕ್ಕೂ ಈ ಪುಸ್ತಕದಲ್ಲಿ ಸೋನಿಯಾ ಗಾಂಧಿ ಕುರಿತು ಇರುವುದು ಒಂದೇ ಅಧ್ಯಾಯ. ಪುಸ್ತಕ ನನ್ನ ಕಾಲದ ಒಂದು ಬಿಂಬವಾಗಿ ನಿರೂಪಿಸಲ್ಪಟ್ಟಿದೆ ಅಷ್ಟೆ. ಬಿಜೆಪಿಯಿಂದ ರಾಜ್ಯಪಾಲ ಆಗುವ ಪ್ರಸ್ತಾವ ಬರುವುದೆಂದು ಹೀಗೆಲ್ಲ ಮಾಡಿದೆ ಎಂಬುದಕ್ಕೆ ಅರ್ಥವಿಲ್ಲ. ಏಕೆಂದರೆ ಬಿಜೆಪಿಯಲ್ಲಿ ಆ ಹುದ್ದೆಗೆ ನನಗಿಂತ ಪ್ರಾಯದ ಹಲವರು ಇದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿ ಶಾಸಕನಾಗಿರುವ ನನ್ನ ಮಗ ಜಗತ್ ಸಿಂಗ್‌ನ ರಾಜಕೀಯ ವೃತ್ತಿ ಬೆಳಗುವುದಕ್ಕೆ ಅನುಕೂಲವಾಗಲೆಂದು ಈ ಪುಸ್ತಕ ಬರೆದಿದ್ದೇನೆ ಎನ್ನುವವರಿದ್ದಾರೆ. ನಾನೇಕೆ ಹಾಗೆ ಮಾಡಲಿ? ಅತಿಕಷ್ಟದ ಮತಕ್ಷೇತ್ರದಿಂದ ಗೆದ್ದಿರುವ ಆತ ತನ್ನ ಭವಿಷ್ಯವನ್ನು ತಾನು ರೂಢಿಸಿಕೊಳ್ಳುವಷ್ಟು ಶಕ್ತನಿದ್ದಾನೆ.
= ಮನಮೋಹನ್ ಸಿಂಗ್ ಅವರು ನನ್ನ ಪುಸ್ತಕ ಮಾರುಕಟ್ಟೆಗೆ ಸೃಷ್ಟಿಸಿದ ಗಿಮಿಕ್ ಎಂದಿದ್ದಾರಂತೆ. ಅವರು ಇದೇ ಪದದಲ್ಲಿ ಮಾತನಾಡಿದ್ದೇ ಹೌದಾದಲ್ಲಿ ನಾನವರನ್ನು ತುಂಬ ಕೆಳಮಟ್ಟದ ವ್ಯಕ್ತಿ ಎಂದು ಹೇಳುತ್ತೇನೆ. ಸೋನಿಯಾ ಗಾಂಧಿ ಅವರ ಎದುರು ಒಮ್ಮೆಯೂ ದೃಢವಾಗಿ ನಿಲ್ಲಲಾಗಲಿಲ್ಲ ಅವರಿಗೆ. ಈ ಸರ್ಕಾರ ಮಾಡಿರುವುದು ಸಂಪೂರ್ಣ ತಪ್ಪಿನಿಂದ ಕೂಡಿದೆ ಅಂತ ರಾಹುಲ್ ಗಾಂಧಿ ಸುಗ್ರೀವಾಜ್ಞೆಯೊಂದನ್ನು ಬಹಿರಂಗವಾಗಿಯೇ ಹರಿದುಹಾಕಿದರು. ಅಂಥ ಅನುಮಾನವಾದ ಗಳಿಗೆಯಲ್ಲೂ ಮನಮೋಹನ ಸಿಂಗ್ ಅವರು ತಮ್ಮ ಸಂಪುಟ ಸಹೋದ್ಯೋಗಿಗಳ ಮಾನ ಕಾಯುವ ಒಂದು ಮಾತನ್ನೂ ಆಡಲಿಲ್ಲ. ಪ್ರಧಾನಿ ಕಾರ್ಯಾಲಯದಿಂದ ಸೋನಿಯಾ ನಿವಾಸವಾದ 10, ಜನಪಥಕ್ಕೆ ಯಾವ ಕಡತವೂ ಹೋಗಿರಲಿಲ್ಲ ಎಂದು ಮನಮೋಹನಸಿಂಗ್ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿಯಾಗಿದ್ದವರು ಇವನ್ನೆಲ್ಲ ಒಪ್ಪಿಕೊಳ್ಳುವುದಾದರೂ ಹೇಗೆ ಸಾಧ್ಯ? ಕಡತಕ್ಕೆ ಒಪ್ಪಿಗೆ ತೆಗೆದುಕೊಳ್ಳುವ ಪ್ರಕ್ರಿಯೆ ಇರಲಿಲ್ಲ ಎಂದಾದರೆ ಪುಲೋಕ್ ಚಟರ್ಜಿ, ಸೋನಿಯಾ ನಿವಾಸಕ್ಕೆ ಹೋಗುತ್ತಿದ್ದದ್ದು ಅವರೊಂದಿಗೆ ಊಟ ಮಾಡಿ ಬರುವುದಕ್ಕಾ?
ಯುಪಿಎ-1ರ ಅವಧಿ ಚೆನ್ನಾಗಿಯೇ ಇತ್ತು. ಯುಪಿಎ-2ರಲ್ಲಿ ಎಲ್ಲವೂ ಕೆಟ್ಟುಹೋಯಿತು. ನಾನು ನನ್ನ ಪುಸ್ತಕದಲ್ಲಿ ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯನ್ನು ವಿವರಿಸುವುದಕ್ಕೆ ನಾನು ಚರ್ಚಿಲ್ ಹೇಳಿಕೆಯನ್ನು ಬಳಸಿಕೊಂಡಿದ್ದೇನೆ. 'ಬೆಳಗು ಬಂಗಾರ, ಮಧ್ಯಾಹ್ನ ಬೆಳ್ಳಿ, ಸಾಯಂಕಾಲವಾಗುವಷ್ಟರಲ್ಲಿ ಸೀಸ'. ಇವರು ಅಮೆರಿಕದ್ಧ್ಯಕ್ಷರ ಬಳಿ ಮಾತನಾಡುತ್ತ ನನ್ನನ್ನು ಭಾರತೀಯರು ಪ್ರೀತಿಸುತ್ತಾರೆ ಅಂದರು. ಇವರು ಯಾವ ಭಾರತೀಯನನ್ನು ಭೇಟಿ ಮಾಡಿ ಈ ಅಭಿಪ್ರಾಯ ಪಡೆದಿದ್ದಾರಂತೆ? ಈಗ ನೋಡಿ, ಪ್ರಧಾನಿ ಮೋದಿ ತಮ್ಮ ದೇಶಕ್ಕೆ ಭೇಟಿ ಕೊಡಲಿ ಅಂತ ಅಮೆರಿಕ ಇನ್ನಿಲ್ಲದಂತೆ ಹಪಾಹಪಿಸುತ್ತಿದೆ. ಆದರೆ ಮನಮೋಹನ ಸಿಂಗ್ ಹಾಗೂ ಒಬಾಮಾ ನಡುವಿನ ಭೇಟಿ ಕೆಲವೇ ನಿಮಿಷಗಳ ಕಾಲದ್ದಾಗಿತ್ತು ಅಷ್ಟೆ.
= ತಾಯಿಯ ಭದ್ರತೆ ಬಗ್ಗೆ ಮಗನಾಗಿ ರಾಹುಲ್ ಗಾಂಧಿ ಅವತ್ತು ಆತಂಕಗೊಂಡಿದ್ದು ಸಹಜವೇ. ಆದರೆ ಭದ್ರತೆಯನ್ನು ಗಟ್ಟಿ ಮಾಡಿಕೊಂಡು ನಾಯಕತ್ವ ಒಪ್ಪಿಕೊಳ್ಳುವಂತೆ ಹೇಳಿದ್ದರೆ ರಾಹುಲ್‌ರಲ್ಲೂ ನೇತಾರ ಅಂಶವಿದೆ ಎಂದಾಗುತ್ತಿತ್ತು. ರಾಹುಲ್ ಒಳ್ಳೆಯ ಮಗ. ಆದರೆ ರಾಜಕಾರಣಕ್ಕೆ ಬರಬೇಕಾದರೆ ಹೊಟ್ಟೆಯಲ್ಲೊಂದು ಬೆಂಕಿ ಇರಬೇಕಾಗುತ್ತದೆ. ಇದು ಅರೆಕಾಲಿಕ ಉದ್ಯೋಗವಲ್ಲ. ಟ್ವೆಂಟಿಫೋರ್ ಇನ್ಟು ಸೆವೆನ್‌ನ ಅಹೋರಾತ್ರಿ ಕೆಲಸ. ರಾಹುಲ್ ಸಂಸತ್ತಿನಲ್ಲಿ ಮಾತನಾಡಿದ್ದೇ ಕಡಿಮೆ. ಆದರೆ ಮಾತನಾಡಿದಾಗಲೆಲ್ಲ ಅವರಿಗೆ ವಿಶೇಷ ಗಮನ ಸಿಕ್ಕಿ, ಹೊಗಳಿಕೆ ಸಂದಾಯವಾಗಿತ್ತು. ನಾವೆಲ್ಲ ಪ್ರಿಯಾಂಕ ಗಾಂಧಿಯವರ ಬಳಿ ರಾಜಕೀಯಕ್ಕೆ ಬರುವಂತೆ ಕೈಮುಗಿದು ಕೇಳಿಕೊಂಡಿದ್ದೆವು. ಆಕೆ ನಿರಾಕರಿಸಿದರು.
ನೆಹರು-ಗಾಂಧಿ ಕುಟುಂಬ ಈಗ ಅತಿಯಾಗಿ ಕಂಪಿಸುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಅವರು ಪ್ರಗತಿ ತೋರದೇ ಇದ್ದಲ್ಲಿ ಪರಿಸ್ಥಿತಿ ಬಹಳ ಕಷ್ಟವಿದೆ. ಕಾಂಗ್ರೆಸ್ ಕಾರ್ಯಕರ್ತರು ಧೈರ್ಯ ಕಳೆದುಕೊಂಡಿದ್ದಾರೆ. ಸದ್ಯಕ್ಕಂತೂ ಸನ್ನಿವೇಶ ಆಶಾದಾಯಕವಾಗಿಲ್ಲ.
=  ಪುಸ್ತಕ ಬಂದಾಗಿನಿಂದ ಎಲ್ಲರೂ ಸೋನಿಯಾ ಗಾಂಧಿ ಕುರಿತ ಉಲ್ಲೇಖವನ್ನೇ ಪ್ರಶ್ನಿಸುತ್ತಿದ್ದಾರೆ. ನಾನು ರಾಜೀವ್ ಗಾಂಧಿಯವರೊಂದಿಗಿನ ಒಡನಾಟವನ್ನೂ ವಿವರವಾಗಿ ಬರೆದಿದ್ದೇನೆ. ತುಂಬ ಉದಾರ ಹೃದಯವನ್ನುಹೊಂದಿದ್ದ ವ್ಯಕ್ತಿಯಾಗಿದ್ದರು ಅವರು. ಶ್ರೀಲಂಕಾ ಕುರಿತ ನೀತಿಯೇ ಅವರ ಜೀವ ತೆಗೆದುಕೊಂಡುಬಿಟ್ಟಿತು. ಕೊಲಂಬೋದಲ್ಲಿದ್ದಾಗಲೇ ಆತುರದ ನಿರ್ಣಯ ತೆಗೆದುಕೊಂಡುಬಿಟ್ಟರು. ಒಂದು ಹಂತದಲ್ಲಿ ಎಲ್‌ಟಿಟಿಇಯ ಪ್ರಭಾಕರನ್ ಮೇಲೆ ಭರವಸೆ ಇರಿಸಿದ್ದೂ ಮುಳುವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement