ಕನ್ನಡಕ್ಕೆ ಸಂಸ್ಕೃತವೇಕೆ ಬೇಕು?
ಎಸ್.ಎಲ್.ಭೈರಪ್ಪ ಅವರು ಇತ್ತೀಚೆಗೆ "ಕನ್ನಡದ ಕಲಿಕೆಗೆ ಸಂಸ್ಕೃತದ ಅರಿವು ಬೇಕು" ಎಂದು ಹೇಳಿದ್ದಾರೆ. ಕನ್ನಡ ಹಾಗೂ ಸಂಸ್ಕೃತ ಬೇರೆ ಬೇರೆ ನುಡಿಗಳು ಹಾಗೂ ಎರಡಕ್ಕೂ ತಮ್ಮದೇ ಆದ ಹಿರಿಮೆ ಮತ್ತು ನೆಲೆ ಇದೆ. ಇವೆರಡೂ ನುಡಿಗಳು ಬೇರೆ ಬೇರೆ ನುಡಿ ಕುಟುಂಬಗಳಿಗೆ, ಅಂದರೆ ಕನ್ನಡ ದ್ರಾವಿಡ ನುಡಿ ಕುಟುಂಬಕ್ಕೆ ಹಾಗೂ ಸಂಸ್ಕೃತ ನುಡಿ ಇಂಡೋ-ಆರ್ಯನ್ ನುಡಿ ಕುಟುಂಬಕ್ಕೆ ಸೇರಿದ್ದಾಗಿವೆ.
ಹೀಗೆ ಎರಡು ನುಡಿಗಳಿಗೆ ದೀರ್ಘ ಹಿನ್ನಡವಳಿ ಇರುವಾಗ ಒಂದು ನುಡಿಯನ್ನು ಕಲಿತರೆ ಇನ್ನೊಂದು ನುಡಿಯ ಕಲಿಕೆಗೆ ನೆರವಾಗುತ್ತದೆ ಎನ್ನಲಾಗುವುದಿಲ್ಲ. ಏಕೆಂದರೆ ಭಾಷೆಯೆಂದರೆ ಬರೀ ಪದಗಳಲ್ಲ, ಅಲ್ಲಿ ಸೊಲ್ಲರಿಮೆ, ಸೊಲ್ಲು ಮುಂತಾದವುಗಳು ಕೂಡ ಇರುತ್ತವೆ. ಭಾಷೆಗಳ ನಡುವೆ ಪದಗಳನ್ನು ಕೊಡುವುದು ಪಡೆಯುವುದು ನಡೆಯುತ್ತದೆ ಎನ್ನುವುದೂ ನಿಜ. ಆದರೆ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ಬೆಳವಣಿಗೆ ಬೇರೆ ಬೇರೆಯೇ.
ಈಗ ಸಂಸ್ಕೃತ ಕಲಿಯುವುದಕ್ಕೆ ಸಂಸ್ಕೃತದ ತಿಳಿವಳಿಕೆಯೇ ಬೇಕು ಹೊರತು ಕನ್ನಡದ್ದಲ್ಲ. ನಾನೂ ಮೂರು ವರ್ಷಗಳು ಸಂಸ್ಕೃತ ಕಲಿತಿದ್ದೇನೆ. ಆದರೆ ಕನ್ನಡ ಕಲಿಕೆಗೆ ಸಂಸ್ಕೃತವನ್ನು ಬಳಸಿಲ್ಲ. ಇದು ಎಲ್ಲಾ ನುಡಿಗಳಿಗೆ ಅನ್ವಯವಾಗುವ ಮಾತು. ಹೀಗಿರುವಾಗ ಹಿರಿಯರಾದ ಭೈರಪ್ಪನವರ ಹೇಳಿಕೆ ಆಶ್ಚರ್ಯ ಹುಟ್ಟಿಸುತ್ತಿದೆ.
-ವಿವೇಕ್ ಶಂಕರ್, ಬೆಂಗಳೂರು