ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಡಾ.ಎಸ್.ಎಂ. ಪಂಡಿತ್ ಎಂಬ ಕಲಾ ಮಾಂತ್ರಿಕ

Srinivasa Murthy VN
Updated On : 3 Aug 2014, 10:46 am

ಗುಲ್ಬರ್ಗದ ಹೆಸರು ಬಂದಾಕ್ಷಣ ಅಲ್ಲಿನ 'ಕೊರತೆಗಳ' ಬಗ್ಗೆ ಮಾತ್ರ ನಾವು ಕೇಳುತ್ತಾ ಬಂದಿದ್ದೇವೆ. ಆದರೆ ಈ ಕ್ಷೇತ್ರದ ಶ್ರೀಮಂತಿಕೆಯ ಬಗ್ಗೆ ಬಹುಶಃ ಹೆಚ್ಚಿನ ಜನರಿಗೆ ಪರಿಚಯ ಇರುವುದಿಲ್ಲ. ಈ ಭಾಗದ ಕಲೆ, ಸಂಸ್ಕೃತಿ, ಪರಂಪರೆ, ಇತಿಹಾಸದ ಬಗ್ಗೆ ಎಷ್ಟು ತಿಳಿದುಕೊಂಡರೂ ಕಡಿಮೆಯೇ ಎಂದು ನಾನು ಭಾವಿಸುತ್ತೇನೆ. ಈ ಪೈಕಿ ಅತಿ ಮುಖ್ಯವಾಗಿ ವಿಶ್ವವಿಖ್ಯಾತ ಕಲಾವಿದ ಎಂದು ಗುರುತಿಸಿಕೊಂಡು, ಚಿತ್ರಕಲೆಯಲ್ಲಿ ಜಗತ್ತಿಗೆ ಅನುಕರಣೀಯ ಸಾಧಕರಾಗಿದ್ದ ಡಾ.ಎಸ್.ಎಂ.ಪಂಡಿತರವರ ಬಗ್ಗೆ ತಿಳಿಸಬಯಸುತ್ತೇನೆ.
ಕಲಾಲೋಕದ ವರ್ಣಾವತರಣದ ಅದ್ಭುತ ಮಾಂತ್ರಿಕ ಶಕ್ತಿಯನ್ನು ಪಂಡಿತರ ಕುಂಚದಲ್ಲಿ ಗಮನಿಸುವ ಯುವ ಚಿತ್ರಕಲಾವಿದರಿಗೆ ಪ್ರೇರೇಪಣೆಯಾಗಲೆಂದು ಕಲಾತಪಸ್ವಿ ಪಂಡಿತರ ನೆನಪನ್ನು ಇಲ್ಲಿ ಮಾಡಿಕೊಳ್ಳುತ್ತಿದ್ದೇನೆ.
ಡಾ.ಎಸ್.ಎಂ.ಪಂಡಿತ ಅವರು ಕಲೆಯಲ್ಲಿ ಮಾಡಿರುವ ಸಾಧನೆ, ತಪಸ್ಸು ಅನನ್ಯ. ಪಂಡಿತರ ಕುಂಚದಿಂದ ಮೂಡಿರುವ ಕಲಾಕೃತಿಗಳು ವಿಶ್ವದರ್ಜೆಯವು. ಅದ್ಭುತ ಮಾಂತ್ರಿಕ ಶಕ್ತಿ ಅವರ ಕುಂಚದಲ್ಲಿತ್ತು.
ಸಾಂಬಾನಂದ ಮೋನಪ್ಪ ಪಂಡಿತರು, ಕಲಬುರ್ಗಿಯ ಸುಸಂಸ್ಕೃತ ಪಂಡಿತರ ಮನೆತನದಲ್ಲಿ ಮಾರ್ಚ್ 25, 1916 ರಲ್ಲಿ ಹುಟ್ಟಿದವರು. ಅವರು ತಮ್ಮ ಹತ್ತನೇ ವಯಸ್ಸಿನಲ್ಲಿ ಕಲಬುರ್ಗಿ ಭಾಗದ ಹಿರಿಯ ಚಿತ್ರಕಲಾವಿದರಾಗಿದ್ದ ಶಂಕರರಾವ ಆಳಂದಕರ್ ಮಾರ್ಗದರ್ಶನದಲ್ಲಿ ಕಲಾಶಿಕ್ಷಣ ಆರಂಭಿಸಿದ್ದರು. ಮುಂದೆ ಮದ್ರಾಸ್ ಸ್ಕೂಲ್ ಆಫ್ ರ್‌ಟ್ಸ್‌ನಲ್ಲಿ ಡಿಪ್ಲೋಮಾ ಶಿಕ್ಷಣ ಮುಗಿಸಿ, ನಂತರ ಮುಂಬೈನ ಪ್ರಸಿದ್ಧ ಸರ್ ಜೆ.ಜೆ.ಸ್ಕೂಲ್ ಆಫ್ ಆರ್ಟ್‌ನಲ್ಲಿ ಪ್ರವೇಶ ಪಡೆದು ಚಿತ್ರಕಲೆಯ ಅಧ್ಯಯನ ಮಾಡಿದ್ದರು.
ನಿಮಗೆ ಗೊತ್ತೆ? ಪಂಡಿತರು ಒಂದೂವರೆ ಸಾವಿರಕ್ಕೂ ಮೀರಿ ಕಲಾಕೃತಿಗಳನ್ನು ರಚಿಸಿದ ಮಹಾನ್ ಕಲಾಕಾರರು. ಆದರೆ, ಭಾರತದಲ್ಲಿ ಎಂದೂ ಅವರ ಚಿತ್ರಕಲೆಗಳ ಪ್ರದರ್ಶನವಾದುದಿಲ್ಲ. 1979 ಇಸ್ವಿಯಲ್ಲಿ ಅವರ ಕೃತಿಗಳ ಪ್ರಥಮ ಪ್ರದರ್ಶನ ಲಂಡನ್ನಲ್ಲಿ ಆದದ್ದು.
ರಾಮ-ಸೀತೆ, ರಾಧಾ- ಕೃಷ್ಣ, ವಿಶ್ವಾಮಿತ್ರ- ಮೇನಕೆ, ಶಕುಂತಲಾ- ದುಶ್ಯಂತ, ಹೀಗೆ ಅವರ ಕುಂಚದಿಂದ ಮೂಡಿ ಬಂದಿರುವ ಚಿತ್ರಗಳು ವಿಶ್ವವಿಖ್ಯಾತಿ ಪಡೆದಿವೆ. ಪಂಡಿತರು ಕೇವಲ ಚಿತ್ರಕಾರರಾಗಿರದೆ, ಆಧ್ಯಾತ್ಮದ ಬಗ್ಗೆ ಪಾಂಡಿತ್ಯವನ್ನೂ ಹೊಂದಿದ್ದರು. ಪುರಾಣಗಳನ್ನು ಓದಿ, ಅದರಲ್ಲಿ ವರ್ಣಿಸಿದಂತೆ ಚಿತ್ರಗಳನ್ನು ತಮ್ಮ ಕಲ್ಪನೆಯ ಮೂಲಕ ಹರಿಯಬಿಡುತ್ತಿದ್ದರು. ಕಾಳಿಯ ಆರಾಧಕರಾಗಿದ್ದ ಪಂಡಿತರು, ಪೂಜೆಯನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಮಾಡುತ್ತಿದ್ದರು.
ಪಂಡಿತರ ಕ್ಯಾಲೆಂಡರ್ ಚಿತ್ರಗಳನ್ನು ನೋಡದವರೇ ಇಲ್ಲ ಎನಿಸುತ್ತದೆ. ಕಳೆದ ನಾಲ್ಕು ದಶಕಗಳಲ್ಲಿ ಅವರು ಕ್ಯಾಲೆಂಡರ್ ಮಾಧ್ಯಮದಲ್ಲಿ ಭಾರತದಲ್ಲಿ ತಮ್ಮ ಸ್ಥಾನವನ್ನು ಹಸಿರಾಗಿರಿಸಿಕೊಂಡಿದ್ದವರು. ಇಂಥಹ ಕಲಾವಿದರು ಕನ್ನಡಿಗರು, ಅದರಲ್ಲೂ ಕಲಬುರ್ಗಿಯವರೆಂದು ಹೇಳಿಕೊಳ್ಳುವುದು ಕರ್ನಾಟಕದವರಿಗೆ ಹೆಮ್ಮೆಯ ವಿಷಯ. 1983 ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ, 1984 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1986 ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ ಪದವಿ ಪಂಡಿತರತ್ತ ಬಂದವು.
ಪಂಡಿತರನ್ನು ಭಾರತದ ಮೊಟ್ಟ ಮೊದಲ ಸಿನೆಮಾ ಪೋಸ್ಟರ್ ಜನಕ ಎಂದೂ ಕರೆಯುತ್ತಾರೆ. ಇವರು ಮೊಟ್ಟ ಮೊದಲ ಬಾರಿಗೆ ಜಲವರ್ಣದಲ್ಲಿ ಅತ್ಯಂತ ಆಕರ್ಷಕವಾಗಿ ಸಿನೆಮಾ ಪೋಸ್ಟರಗಳನ್ನು ರಚಿಸುವ ಮೂಲಕ ಕಲಾಜಗತ್ತಿನ ಗಮನ ಸೆಳೆದಿದ್ದರು. ಅಂದು ಮೆಟ್ರೋ ಗೋಲ್ಡ್‌ವಿನ್ ಮೇಯರ (ಎಂಜಿಎಂ) ಚಿತ್ರಗಳ (ಹಾಲಿವುಡ್) ಭಾರತದ ಹಂಚಿಕೆದಾರರು, ಪ್ರಚಾರಕರು ಪಂಡಿತರನ್ನು ಕರೆಸಿ ಭಾರತದಾದ್ಯಂತ ತಮ್ಮ ಸಿನೆಮಾಗಳ ಪೋಸ್ಟರಗಳನ್ನು ಅವರಿಂದಲೇ ರಚಿಸಿದರು. ನಂತರದಲ್ಲಿ ಅವರ ಅಭಿಜ್ಞಾನ ಶಾಕುಂತಲೆ, ವಿಶ್ವಾಮಿತ್ರ, ಮೇನಕೆ, ಊರ್ವಶಿ ಸನ್ನಿವೇಶಗಳ ಚಿತ್ರಗಳು ಲಂಡನ್ನಿನ ಇಂಡಿಯಾ ಹೌಸ್‌ನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಕಲಾಕೃತಿಗಳಾಗಿ ರಾರಾಜಿಸಿದ್ದವು. ಈಗಲೂ ಇವುಗಳನ್ನು ಅಪೂರ್ವ ಕಲಾಕೃತಿಗಳೆಂದು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಪಂಡಿತರ ಕಲೆಯನ್ನು ಲಂಡನ್ ರಾಯಲ್ ಸೊಸೈಟಿ ಆಫ್ ಆರ್ಟ್ಸ್‌ನವರು ಗಮನಿಸಿ, ಗೌರವ ಸದಸ್ಯರನ್ನಾಗಿ ನೇಮಕ ಮಾಡಿಕೊಂಡಿತ್ತು.
ಅಮೆರಿಕ, ಇಂಗ್ಲೆಂಡ್, ಸಿಂಗಾಪುರ, ಇರಾನ್ ಮೊದಲಾದ ದೇಶಗಳಲ್ಲಿ ಪಂಡಿತರ ಕಲಾಕೃತಿಗಳು ವಿಜೃಂಭಿಸುತ್ತಿವೆ. ಕೇವಲ ಪೌರಾಣಿಕ ಸನ್ನಿವೇಶಗಳ ಚಿತ್ರಗಳಿಗೆ ಸೀಮಿತವಾದವರಲ್ಲ ಪಂಡಿತರು. ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕದ ಕಲ್ಪನೆ ಪಂಡಿತರದ್ದು, ನಂತರದಲ್ಲಿ ಅದನ್ನು ಹೆಸರಾಂತ ಶಿಲ್ಪಿ ಸೋನಾವಡೆಕರ್ ಅವರು ಪಂಡಿತರ ಚಿತ್ರದ ಆಧಾರದಿಂದಲೇ ಶಿಲ್ಪವನ್ನು ಕಡೆದು ಬೃಹತ್ ವಿವೇಕಾನಂದ ಸ್ಮಾರಕವನ್ನು ನಿರ್ಮಿಸಿದರು.
"ನನ್ನ ಚಿತ್ರಕಲೆ ಭಾರತೀಯವಾಗಿ ಕಾಣಬೇಕು. ನಾನು ಮಹಾಕಾಳಿಯ ಭಕ್ತ, ಸ್ವಾಮಿ ಮೌನೇಶ್ವರರ ಶಿಷ್ಯ" ಎಂದು ಹೇಳುತ್ತಿದ್ದ ಪಂಡಿತರಲ್ಲಿ "ಎಲ್ಲವೂ ಪರಮಾತ್ಮನ ದಯೆ" ಎನ್ನುವ ಸೌಜನ್ಯವೂ ಇತ್ತು. ಪೌರಾಣಿಕ ಸನ್ನಿವೇಶಗಳೂ ಪಂಡಿತರ ಕುಂಚದಲ್ಲಿ ಸಮೃದ್ಧಿಯ ಸಂಕೇತವಾಗಿ ಮೂಡಿ ಬಂದಿವೆ. ಈಗಲೂ ಕಲಬುರ್ಗಿಯ ಪುಟಾಣಿಗಲ್ಲಿಯಲ್ಲಿರುವ ಸಣ್ಣದಾದ ಆರ್ಟ್ ಗ್ಯಾಲರಿಯಲ್ಲಿ ಪಂಡಿತರ ಕಲಾಕೃತಿಗಳನ್ನು ವೀಕ್ಷಿಸಿ ಸಂಭ್ರಮಿಸಬಹುದಾಗಿದೆ. ಅದಕ್ಕಾಗಿ ಆಸಕ್ತರು ಸಂಚಾಲಕ ಕೃಷ್ಣರಾಜ ಪಂಡಿತ 9886084350 ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ಸರ್ಕಾರದ ವತಿಯಿಂದ ಜಿಲ್ಲೆಗೆ ಒಂದು ರಂಗಮಂದಿರವನ್ನು ಸ್ಥಾಪಿಸಲು, ಹದಿನಾರು ವರ್ಷದಿಂದ ಪ್ರತಿವರ್ಷ ಕ್ರಿಯಾ ಯೋಜನೆಯಲ್ಲಿ ಅಲ್ಪಸ್ವಲ್ಪ ಹಣವನ್ನು ಮೀಸಲಿಡಲಾಗುತ್ತಿತ್ತು. ಆದರೂ ರಂಗಮಂದಿರ ಪೂರ್ಣಗೊಂಡಿರಲಿಲ್ಲ. ಈ ಮಧ್ಯೆ ರಾಷ್ಟ್ರಪತಿಯಾದ ಪ್ರತಿಭಾ ಪಾಟೀಲರು ಗುಲ್ಬರ್ಗಕ್ಕೆ ಒಂದು ಸಾರ್ವಜನಿಕ ಕಾರ್ಯಕ್ರಮದ ಸಲುವಾಗಿ ಆಗಮಿಸುತ್ತಿದ್ದಾರೆಂದು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳು ನನಗೆ ತಿಳಿಸಿದರು. ಆಗ ಸರ್ಕಾರದ ವತಿಯಿಂದ ಯಾವ ಕಾರ್ಯಕ್ರಮವನ್ನು ಮಾಡಬಹುದು? ಎಂದು ಕೇಳಿದರು. ಈ ಹಿಂದೆ ಹೈದರಾಬಾದ್ ಕರ್ನಾಟಕ ಕೇಂದ್ರದ ಕಲೆ ಮತ್ತು ಸಂಸ್ಕೃತಿ ಸಮಿತಿಯಲ್ಲಿ ರಂಗಮಂದಿರವನ್ನು ಪೂರ್ಣಗೊಳಿಸಿ ಅದಕ್ಕೆ ಡಾ.ಎಸ್.ಎಂ.ಪಂಡಿತ್‌ರ ಹೆಸರನ್ನು ಇಡಬೇಕೆಂದು ಕಲಾವಿದರ ವತಿಯಿಂದ ಬೇಡಿಕೆ ಬಂದಿತ್ತು. ಆದುದರಿಂದ ತಕ್ಷಣ ಈ ಬೇಡಿಕೆಯನ್ನು ನಾನು ಅವರ ಮುಂದೆ ಇಟ್ಟೆ. ಇದನ್ನು ಪೂರ್ಣಗೊಳಿಸಲು ಎಷ್ಟು ಹಣ ಬೇಕೆಂದು ಕೇಳಿದಾಗ ಸುಮಾರು ಒಂದು ಕೋಟಿ ಬೇಕಾಗಬಹುದು ಎಂದು ತಿಳಿಸಿದೆ. ರಾಷ್ಟ್ರಪತಿಗಳು ಇನ್ನು ಹದಿನೈದು ದಿವಸದಲ್ಲಿ ಬರುವವರಿದ್ದು, ಅಷ್ಟರೊಳಗೆ ಈ ಕಾರ್ಯವನ್ನು ಪೂರ್ಣಗೊಳಿಸಲು ಸಾಧ್ಯ ಎಂದು ಹೇಳಿ ಈ ಸವಾಲನ್ನು ಧೈರ್ಯದಿಂದ ಸ್ವೀಕರಿಸಿದೆ. ನಂತರ ಅವರು ತಕ್ಷಣ ಹಣ ಬಿಡುಗಡೆ ಮಾಡಿಸುವ ವ್ಯವಸ್ಥೆ ಮಾಡಿ, ರಾಷ್ಟ್ರಪತಿಗಳ ಕಾರ್ಯಾಲಯಕ್ಕೆ "ಈ ಒಂದು ಉದ್ಘಾಟನಾ ಕಾರ್ಯಕ್ರಮವನ್ನೂ ಪಟ್ಟಿಯಲ್ಲಿ ಸೇರಿಸಬೇಕೆಂದು" ಪತ್ರ ಬರೆದಿದ್ದರು. ತಕ್ಷಣ ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಇನ್ನಿತರ ಸಿಬ್ಬಂದಿಗಳನ್ನು ಕರೆದುಕೊಂಡು ರಂಗಮಂದಿರಕ್ಕೆ ಭೇಟಿ ನೀಡಿದೆ. ಅಲ್ಲಿ ರಂಗಮಂದಿರದ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು. ಆದರೆ ರಂಗಮಂದಿರ ಒಳಗೆ ಧ್ವನಿ ವ್ಯವಸ್ಥೆ, ಕುರ್ಚಿಗಳು ಮತ್ತು ಇನ್ನಿತರ ವ್ಯವಸ್ಥೆ ಅಂತಿಮ ರೂಪದಲ್ಲಿರಲಿಲ್ಲ. ಈ ಎಲ್ಲಾ ಕಾಮಗಾರಿಗಳಿಗೆ ತಕ್ಷಣ 10-15 ಸೂಕ್ತ ಸಂಸ್ಥೆಗಳನ್ನು ಆಯ್ಕೆ ಮಾಡಿ ಏಕಕಾಲಕ್ಕೆ ನಿರ್ದೇಶನ ನೀಡಲಾಯಿತು. ಸ್ಥಳೀಯ ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ವಾತಾನುಕೂಲ ವ್ಯವಸ್ಥೆ ಕಲ್ಪಿಸಲು 176 ಟನ್ ಸಾಮರ್ಥ್ಯದ ಹವಾನಿಯಂತ್ರಕ, ಪ್ರತಿಧ್ವನಿ ನಿರೋಧಕ, ವೇದಿಕೆಯ ವಿದ್ಯುದ್ದೀಕರಣ, ಸುತ್ತಲೂ ಆವರಣ ಗೋಡೆ, ಲ್ಯಾಂಡ್ ಸ್ಕೇಪಿಂಗ್, ವಾಹನ ನಿಲುಗಡೆ ಪ್ರದೇಶ, ಜನರೇಟರ್ ಮತ್ತು ಸುರಕ್ಷಾ ಕೋಣೆ ಮತ್ತು ಗೇಟುಗಳನ್ನು ಅಳವಡಿಸಲಾಯಿತು. ರಂಗಮಂದಿರದ ವಿದ್ಯುದ್ದೀಕರಣಕ್ಕಾಗಿ 500 ಕೆವಿಎ ಟ್ರಾನ್ಸ್‌ಫಾರ್ಮರ್ ಒದಗಿಸಲಾಗಿದೆ. ಪವರ್ ಬ್ಯಾಕಿಂಗ್‌ಗಾಗಿ 250 ಕೆವಿಎ ಸೈಲಂಟ್ ಜನರೇಟರ್ ಒದಗಿಸಲಾಗಿದೆ. ನೀರಿಗಾಗಿ ಕೊಳವೆಬಾವಿ ನಿರ್ಮಿಸಿ ಪಂಪ್ ಅಳವಡಿಸಲಾಗಿದೆ. ಇದರ ಅಂದಾಜು ವೆಚ್ಚು 541 ಲಕ್ಷ, ಒಟ್ಟು ವಿಸ್ತೀರ್ಣ 63245 ಚದರ ಅಡಿ, 1000 ಆಸನಗಳ ಸಾಮರ್ಥ್ಯ ಹೊಂದಿದೆ.
ದಿವಂಗತ ಎಸ್.ಎಂ.ಪಂಡಿರ್ ಅವರ ಮಗನನ್ನು ಸಂಪರ್ಕಿಸಿ ಅವರ ಮನೆಗೆ ಭೇಟಿ ನೀಡಿದೆ. ಅಲ್ಲಿ ಪಂಡಿತ್‌ರು ಬಿಡಿಸಿದ ಚಿತ್ರಗಳನ್ನು ನೋಡಿ ಹೆಮ್ಮೆ ಎನಿಸಿತು. ಅವರ ಮಗನ ಅಪ್ಪಣೆಯ ಮೇರೆಗೆ ಸದರಿ ಚಿತ್ರಗಳನ್ನು ರಂಗಮಂದಿರಲ್ಲಿ ಪ್ರದರ್ಶಿಸಲು ಮುಂದಾದೆವು.
"2009 ಜನವರಿ 7ರಂದು ಪ್ರತಿಭಾ ಪಾಟೀಲ್ ಅವರು ಜಿಲ್ಲೆಯ ಎಲ್ಲಾ ನಾಗರಿಕರ ಬಹುದಿನಗಳ ಕನಸಾದ ಡಾ.ಎಸ್.ಎಂ.ಪಂಡಿತ ರಂಗಮಂದಿರವನ್ನು ಲೋಕಾರ್ಪಣೆ ಮಾಡುವರು ಮತ್ತು ಈ ಸಮಾರಂಭದಲ್ಲಿ ರಾಷ್ಟ್ರಪತಿಯವರು ಕೇವಲ ಸಾಂಕೇತಿಕವಾಗಿ ಟೇಪನ್ನು ಕತ್ತರಿಸಿ ಉದ್ಘಾಟಿಸುತ್ತಾರೆ ಹಾಗೂ ಏನೂ ಮಾತನಾಡುವುದಿಲ್ಲ" ಎಂದು ಕಾರ್ಯಕ್ರಮದ ಪಟ್ಟಿಯಲ್ಲಿ ತಿಳಿಸಲಾಗಿತ್ತು. ಆದರೆ ಈ ಸುಂದರ ಸಮಾರಂಭವನ್ನು ನೋಡಿ ಅವರು ಎದ್ದು ಬಂದು ಸುಮಾರು ಹತ್ತು-ಹದಿನೈದು ನಿಮಿಷ ತಮ್ಮ ಭಾವನೆಗಳನ್ನು ತುಂಬಾ ಖುಷಿಯಿಂದ ಹಂಚಿಕೊಂಡರು. ಈ ಭಾಗದಲ್ಲಿ ಕಲೆ, ಸಂಸ್ಕೃತಿ, ಕರಕುಶಲ ವೈಭವ, ಪ್ರತಿಭೆ ಎಲ್ಲಾ ಇದೆ ಎಂದು ಹೇಳಿ, ಇನ್ನು ಹೆಚ್ಚಿನ ಬೆಳವಣಿಗೆಗೆ ಆರ್ಥಿಕ ಬೆಂಬಲ ಕೊಡಬೇಕೆಂದು ಹೇಳುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

-ಶಾಲಿನಿ ರಜನೀಶ್, ಐಎಎಸ್
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement