ಭೈರಪ್ಪನವರ ಹೇಳಿಕೆಯಲ್ಲಿ ತಪ್ಪೇನಿದೆ?
ಭೈರಪ್ಪನವರ "ಕನ್ನಡ ಅಧ್ಯಯನಶೀಲರು ಸಂಸ್ಕೃತದ ಜ್ಞಾನ ಹೊಂದುವುದು ಅಗತ್ಯ" ಎಂಬ ಹೇಳಿಕೆಗೆ ನನ್ನದೊಂದಿಷ್ಟು. ಕನ್ನಡ ಸಂಸ್ಕೃತಜನ್ಯವಿರದೇ ಇರಬಹುದು ಆದರೆ ಇದರಲ್ಲಿ ಬಹುಪಾಲು ಪದಗಳು ಸಂಸ್ಕೃತವೇ ಆಗಿವೆ.ಅಷ್ಟೇ ಅಲ್ಲ ಸಂಸ್ಕೃತ ಪದಗಳು, ವಾಕ್ಯರಚನೆಯ ಪ್ರಭಾವಗಳಿಂದ ಪ್ರತ್ಯಕ್ಷ ಹಾಗೂ ಪರೋಕ್ಷ ರೀತಿಯಲ್ಲಿ ಸಂಸ್ಕೃತ ವ್ಯಾಕರಣವನ್ನು ಅವಲಂಬಿಸಿವೆ. ಕನ್ನಡದಲ್ಲಿ ಸ್ಪಷ್ಟವಾದ ವ್ಯಾಕರಣ ಇದೆಯಾದರೂ ಅದು ಬಹುತೇಕ ಸಂಸ್ಕೃತ ವ್ಯಾಕರಣದ ಸ್ವೀಕೃತವಷ್ಟೆ. ಹಿಂದೆ ಕನ್ನಡದಲ್ಲಿ ಕಾವ್ಯವನ್ನೂ ಮಹಾಕಾವ್ಯಗಳನ್ನು ಬರೆದ ಕವಿಗಳೂ ಸಂಸ್ಕೃತವನ್ನು ಆಳವಾಗಿ ಬಲ್ಲವರಾಗಿದ್ದರು. ಇದಕ್ಕೆ ಆಧುನಿಕ ಕವಿಗಳೂ ಹೊರತಲ್ಲ. ಕುವೆಂಪು, ಕಾರಂತ, ಡಿ.ವಿ.ಜಿ, ಗೋಕಾಕ್, ಮಾಸ್ತಿ, ಅಡಿಗ, ಇವರೆಲ್ಲರ ಸಾಹಿತ್ಯದಲ್ಲೂ ಸಂಸ್ಕೃತ ಭೂಯಿಷ್ಟ ಪದಗಳು, ವಾಕ್ಯರಚನೆಗಳೂ ಕಂಡು ಬರುವವು. ಅಷ್ಟೇ ಏಕೆ ಕನ್ನಡದ್ದೇ ವ್ಯಾಕರಣದ ಕರ್ತೃಕೂಡ ಸಂಸ್ಕೃತವನ್ನು ಚೆನ್ನಾಗಿ ಬಲ್ಲವರೇ ಆಗಿದ್ದಾರೆ. ನಾಗವರ್ಮ ಕೇಶೀರಾಜರೇ ಮೊದಲಾದ ಹಳೆಗನ್ನಡ ವೈಯಾಕರಣಿಗಳೂ ಸಹ ಸಂಸ್ಕೃತವನ್ನು ದೂರವಿಟ್ಟು ಕನ್ನಡವನ್ನು ಪ್ರತ್ಯೇಕಿಸುವ ಸಾಹಸ ಮಾಡಲಿಲ್ಲ. ಕನ್ನಡ ದ್ರಾವಿಡ ಭಾಷಾ ಗುಂಪಿಗೆ ಸೇರಿದ ಹಾಗೂ ಸಂಸ್ಕೃತ ಜನ್ಯ ಭಾಷೆ ಅಲ್ಲ ಎಂದು ಭಾಷಾ ವಿಜ್ಞಾನಿಗಳು ಹೇಳಿದ್ದರೂ ಸಂಸ್ಕೃತದ ಬಾಹುಳ್ಯ ಹಾಗೂ ಪ್ರಭಾವವನ್ನು ನಿರಾಕರಿಸಲು ಸಾಧ್ಯವಾಗಿಲ್ಲ. ಸ್ವರಗಳು, ವ್ಯಂಜನಗಳು ಎಂಬ ಮೊದಲ ಹಂತದ ಶಬ್ದಗಳಿಂದಾದಿಯಾಗಿ ಹೃಸ್ವ, ದೀರ್ಘ, ಅಲ್ಪಪ್ರಾಣ, ಮಹಾಪ್ರಾಣ, ಶಬ್ದ, ಪ್ರಕೃತಿ, ಪ್ರತ್ಯಯ, ನಾಮಪದ, ಸರ್ವನಾಮ, ಧಾತು, ಕ್ರಿಯಾಪದ, ವಾಕ್ಯ, ಸಂಧಿ, ಸಮಾಸ, ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ, ಕರ್ತೃ, ಕ್ರಿಯಾ, ವಿಭಕ್ತಿ, ವೃತ್ತ, ಛಂದಸ್, ಮಾತ್ರೆ, ಗಣ ಇಂತಹ ಎಲ್ಲ ಪ್ರಾಥಮಿಕ ಅಂಶಗಳಿಗೂ ನಾವು ಸಂಸ್ಕೃತ ವ್ಯಾಕರಣವನ್ನೇ ಅವಲಂಬಿಸಿರುವಾಗ ಸಂಸ್ಕೃತಕ್ಕೇ ಶರಣು ಹೋಗುವುದು ಅನಿವಾರ್ಯವಲ್ಲವೇ? ಹೀಗಿರುವಾಗ ಕನ್ನಡವನ್ನು ಸರಿಯಾಗಿ ಕಲಿಯುವವರು ಸಂಸ್ಕೃತದ ಜ್ಞಾನ ಹೊಂದಿರಬೇಕು ಎಂಬ ಡಾ. ಎಸ್.ಎಲ್.ಭೈರಪ್ಪನವರ ಹೇಳಿಕೆಯಲ್ಲಿ ನಮ್ಮವರಿಗೆ ಗೊಂದಲವೇಕೆ ಕಾಣುತ್ತದೋ ತಿಳಿಯದು. ಕನ್ನಡ ಭಾಷೆಗೆ ಸಂಸ್ಕೃತ ಅಷ್ಟೊಂದು ಅಪಥ್ಯವೇ? ಕನ್ನಡವೊಂದೇ ಅಲ್ಲ ತೆಲಗು, ಮಲಯಾಳ ಭಾಷೆಗಳಲ್ಲೂ ಸಂಸ್ಕೃತ ಪ್ರಭಾವ ಹೇರಳವಾಗೇ ಇದೆ. ಅಷ್ಟೇ ಅಲ್ಲ ವಿದೇಶಿಗರು ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡಿರುವಷ್ಟು ಭರತೀಯರಾದ ನಾವೂ ಅಧ್ಯಯನ ಮಾಡಿಲ್ಲ ಎಂದೇ ಹೇಳಬಹುದು. ನಮ್ಮ ಬಹುತೇಕ ಕನ್ನಡ ಅಧ್ಯಾಪಕರು ಸಂಸ್ಕೃತ ಜ್ಞಾನದ ಹಿನ್ನೆಲೆ ಇಲ್ಲದೇ ಗೊಂದಲಕ್ಕೊಳಗಾಗಿ ಕೊನೆಗೆ ಕಷ್ಟಪಟ್ಟು ಸಂಸ್ಕೃತ ತಿಳಿದವರ ಮೊರೆ ಹೋಗುತ್ತಿದ್ದಾರೆ.
-ರಾಘವೇಂದ್ರ ಭಟ್, ಬೆಂಗಳೂರು