ಗೊತ್ತೇ ನಿಮಗೆ ಪಶ್ಚಿಮಘಟ್ಟ ಅಳಿಸಿ ಎಂಬ ಅಭಿಯಾನ!
'ಅತ್ಯಾಚಾರದ ಮೇಲೆ ಬಿಸಿಬಿಸಿ ಚರ್ಚೆಯಾಗುತ್ತಿದ್ದಾಗ ಮುಖ್ಯಮಂತ್ರಿಗಳು ನಿದ್ದೆ ಮಾಡಿದರು' ಎಂದು ಕೂಗೆದ್ದ ಬೆನ್ನಲ್ಲೇ ಈಗ ಪಶ್ಚಿಮಘಟ್ಟದ ವ್ಯಾಪ್ತಿ ಇಳಿಸಿದ ಸರ್ಕಾರದ ಕ್ರಮದ ವಿರುದ್ಧ ಪ್ರತಿಭಟನೆಗಿಳಿಯಲು ಪಕ್ಷವಿರೋಧಿಗಳು ಚಿಂತನೆ ನಡೆಸುತ್ತಿದ್ದಾರೆ. ಸರ್ಕಾರವನ್ನು ಸದಾ ಇಕ್ಕಟ್ಟಿಗೆ ಸಿಕ್ಕಿಸುತ್ತಲೇ ಇರಬೇಕು ಎಂದು ಷಡ್ಯಂತ್ರದ ಬಲೆ ನೇಯುತ್ತಿರುವವರ ಪಿತೂರಿ ಇದು ಎನ್ನಬಹುದು. ಅಲ್ಲ, ಇಷ್ಟಕ್ಕೂ ಸರ್ಕಾರ ಹೇಳಿದ್ದೇನು? ಕಾಡಿನ ವ್ಯಾಪ್ತಿ ಇಳಿಸುತ್ತೇವೆ ಅಂತ. ಅಷ್ಟೇ ತಾನೆ? ಕೇರಳ ಸರ್ಕಾರ ಈಗಾಗಲೇ 'ನಮ್ಮಲ್ಲಿರುವ ಪಶ್ಚಿಮಘಟ್ಟ 13,000 ಚದರ ಕಿಮೀ ಏನೂ ಇಲ್ಲ ನಿಜವಾಗಿ ಕಾಡು ಅಂತ ಹೇಳಬಹುದಾದ್ದು 9000 ಚಕಿಮೀ ಮಾತ್ರ' ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಅದೇ ಪ್ರಕಾರ ಕರ್ನಾಟಕವೂ ತನ್ನ ಕಾಡಿನ ವ್ಯಾಪ್ತಿಯನ್ನು 20 ಸಾವಿರದಿಂದ 13 ಸಾವಿರ ಚಕಿಮೀಗೆ ಇಳಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಅದರರ್ಥ, ಉಳಿದ 7000 ಚಕಿಮೀ ಕಾಡನ್ನು ಸವರಿ ತೆಗೆಯುತ್ತೇವೆಂದಲ್ಲ! ಅದನ್ನು 'ಕಾಡು' ಎಂದು ಕರೆಯುವುದರಿಂದ ರಿಯಾಯಿತಿ ಕೊಡಬೇಕು ಅನ್ನುವುದಷ್ಟೇ ನಮ್ಮ ಮನವಿ.
ಹಾಗಾದರೆ, ಆ ಉಳಿದ ಹೆಚ್ಚುವರಿ ಜಾಗವನ್ನು ಏನೆಂದು ಕರೆಯಬೇಕು ಎನ್ನುವ ಜಿಜ್ಞಾಸೆ ಬರಬಹುದು. ಅದನ್ನು ಜಮೀನು ಅನ್ನಬಹುದು, ಬಯಲು ಅನ್ನಬಹುದು! ಕುಷ್ಕಿ, ತೋಟ, ಗದ್ದೆ, ಮನೆ ಇರುವ ಜಾಗ, ಹುಲ್ಲುಗಾವಲು, ಬಂಜರುಪ್ರದೇಶ, ಪಾಳುಭೂಮಿ, ಸ್ಮಶಾನ - ಹೀಗೆ ಬೇರೆ ಏನಾದರೂ ಹಣೆಪಟ್ಟಿ ಕಟ್ಟಬಹುದು. ಆಗ, ಅಂತಹ ಜಾಗವನ್ನು ಕನ್ವರ್ಷನ್ ಮಾಡಿ ಕೈಗಾರಿಕೆ ಎಬ್ಬಿಸಲು ಅನುಕೂಲ. ನೂರಾರು ಕಂಪೆನಿ, ಫ್ಯಾಕ್ಟರಿಗಳನ್ನು ತೆರೆಯಬಹುದು! ಸಾವಿರಾರು ಜನರಿಗೆ ಉದ್ಯೋಗ ಕೊಡಬಹುದು. ಅಭಿವೃದ್ಧಿಯ ಓಟದಲ್ಲಿ ಕರ್ನಾಟಕವನ್ನು ನಂಬರ್ ವನ್ ಮಾಡಬಹುದು. ಇದೆಲ್ಲ ಪ್ರಗತಿವಿರೋಧಿ ಪರಿಸರಹೋರಾಟಗಾರರಿಗೆ ಅರ್ಥ್ಥವಾಗುವುದು ಅನುಮಾನ.
ಪಶ್ಚಿಮಘಟ್ಟ ತಮಿಳುನಾಡಿನ ಕನ್ಯಾಕುಮಾರಿಯಿಂದ ಹಿಡಿದು, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ವರೆಗೆ, ಅಲ್ಲಿನ ಅರಾವಳಿ ಬೆಟ್ಟದವರೆಗೆ ಹರಡಿದೆ. ಸುಮಾರು 290 ಕೋಟಿ ವರ್ಷದ ಹಿಂದೆ ಆಸ್ಟ್ರೇಲಿಯ ಖಂಡವೂ ತಮ್ಮ ಕರ್ನಾಟಕಕ್ಕೆ ಅಂಟಿಕೊಂಡಿತ್ತಂತೆ. ಆಗ ಎದ್ದ ಒಂದು ದೊಡ್ಡ ಜ್ವಾಲಾಮುಖಿಯಲ್ಲಿ ಚೆಲ್ಲಿದ ಲಾವಾರಸವೇ ಗಟ್ಟಿಯಾಗಿ ಈ ಘಟ್ಟದ ಪಂಚಾಂಗವಾಗಿದೆ ಅನ್ನುವುದು ಪರಿಸರ ವಿಜ್ಞಾನಿಗಳ ವಾದ. ಪ್ರಪಂಚದ ಎಂಟು ಅತ್ಯದ್ಭುತ ಅರಣ್ಯಪ್ರದೇಶಗಳಲ್ಲಿ ನಮ್ಮ ಪಶ್ಚಿಮಘಟ್ಟವೂ ಒಂದು ಎಂದು ಇವರು ಹೇಳುತ್ತಿದ್ದಾರೆ. ಈ ಕಾಡಿಗೆ ಕೊಡಲಿ ಹಾಕಿದರೆ, ಇಲ್ಲಿರುವ ಸಾವಿರಾರು ಜೀವರಾಶಿಗೆ (ಅದರಲ್ಲೂ ಜಾಗತಿಕಮಟ್ಟದಲ್ಲಿ ಗುರುತಿಸಿದ 325 ವಿಶೇಷ ಜೀವಿಗಳು ಬೇರೆ) ಬಲವಾದ ಪೆಟ್ಟು ಬೀಳುತ್ತದೆ ಅನ್ನುವುದು ಇವರ ವಾದ. ಈ ಬುರುಡೆ ಕತೆಗಳನ್ನು ಈಗಲಾದರೂ ಇವರು ನಿಲ್ಲಿಸಬೇಕಾಗಿದೆ. ಈ ಕಾಡಿನ ನೆಲ ಇನ್ನೂರ ತೊಂಬತ್ತೋ ಐನೂರ ತೊಂಬತ್ತೋ ಕೋಟಿವರ್ಷ ಹಳೆಯದಾದರೆ ಅದರಿಂದ ಏನು ಲಾಭ, ಏನು ನಷ್ಟ? ಇನ್ನು ಜೀವರಾಶಿಗಳು ಇದ್ದರೆಷ್ಟು ಬಿದ್ದರೆಷ್ಟು? ಒಂದಾನೊಂದು ಕಾಲದಲ್ಲಿ ಡೈನೋಸಾರುಗಳು ಇದ್ದವು ಅನ್ನುತ್ತಾರೆ. ಅವಿಲ್ಲ ಅಂತ ಅಳುವವರು ಯಾರಾದರೂ ಇದ್ದಾರೆಯೇ ಅಥವಾ ಅವಿಲ್ಲದೆ ನಮ್ಮ ಜೀವನದಲ್ಲೇನಾದರೂ ಏರುಪೇರಾಗಿದೆಯೇ? ದೂರದ ಕಾಡಲ್ಲಿ ತಿರುಗಾಡುವ ಹುಲಿ ಇಲ್ಲದೆ ಹೋದೊಡನೆ ಈ ನಗರದಲ್ಲಿ ಬದುಕುವ ಜನಕ್ಕೆ ಏನು ತೊಂದರೆ ಎನ್ನುವುದೇ ಅರ್ಥವಾಗುತ್ತಿಲ್ಲ. 1600 ಕಿಮೀ ಉದ್ದದ ಈ ಘಟ್ಟಸಾಲಿನಲ್ಲಿ ಒಂದಷ್ಟು ಸವರಿ ತೆಗೆದರೆ ಯಾರಿಗೆ ಏನು ಹೋಯ್ತು?
ಪಶ್ಚಿಮಘಟ್ಟದ ಜೈವಿಕವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಿದರೆ ಗಂಡಾಂತರಗಳು ಎದುರಾಗುತ್ತವೆ ಎಂದು ಅನಗತ್ಯ ಭಯ ಹುಟ್ಟಿಸಲಾಗಿದೆ. ಒಂದುವೇಳೆ ಹಾಗಾದರೂ, ಅದರಿಂದ ಒಂದೆರಡು ನದಿಗಳು ಬತ್ತಿಹೋದಾವಷ್ಟೇ. ಈಗಾಗಲೇ ಕಾವೇರಿ, ಕಾಳಿ, ತುಂಗಭದ್ರೆ, ಕೃಷ್ಣಾ, ಗೋದಾವರಿ, ಶರಾವತಿ ಎನ್ನುತ್ತ ನೂರಲ್ಲ ಸಾವಿರಾರು ನದಿಗಳು ಘಟ್ಟದಲ್ಲಿ ಹುಟ್ಟಿ ಹರಿಯುತ್ತಿರುವುದರಿಂದ, ಈ ಒಂದೆರಡು ನದಿಗಳ ನಷ್ಟ ದೊಡ್ಡ ಬಾಬ್ತಲ್ಲ. ಹಾಗೇನಾದರೂ ಆದರೆ, ಉಳಿದ ನದಿಗಳನ್ನು ಕಾಲುವೆ ಮಾಡಿ ತಿರುಗಿಸಿದರಾಯಿತು. ಈಗಾಗಲೇ ಎತ್ತಿನಹೊಳೆಯಿಂದ ನೇತ್ರಾವತಿಯನ್ನು ಬೆಂಗಳೂರಿಗೆ ತಿರುಗಿಸಲು ಯತ್ನಿಸುತ್ತಿರುವ ನಮ್ಮ ಇಂಜಿನಿಯರುಗಳಿಗೆ ಅದೆಲ್ಲ ದೊಡ್ಡ ಮಾತಲ್ಲ. ಆಗ ಮತ್ತೊಂದಿಷ್ಟು ಕಾಡು ಕಡಿದು ಸಮತಟ್ಟು ಮಾಡಬೇಕಾಗಬಹುದು. ಇದರಿಂದ ಮತ್ತಷ್ಟು ಗಿಡಮರಹಕ್ಕಿಗಳು ನಾಶವಾಗಬಹುದು. ಆದರೆ, ಗುಂಡಿ ತೋಡುವ ಸಾವಿರಾರು ಜನಕ್ಕೆ ಉದ್ಯೋಗ ಸಿಗುತ್ತದೆ ಅನ್ನುವುದು ಮುಖ್ಯ.
ಪಶ್ಚಿಮಘಟ್ಟದಿಂದ ಉಪಯೋಗವಾಗಿದೆ ಎಂದು ಹೇಳುವವರಿಗೆ ಪರಿಸರ ರಕ್ಷಣೆ ಅನ್ನುವ ವಿಷಯ ಬಿಟ್ಟರೆ ಬೇರೇನೂ ಗೊತ್ತಿರುವಂತಿಲ್ಲ. ಮೊದಲನೆಯದಾಗಿ, ಈ ಘಟ್ಟಗಳು ಇಡೀ ಕರ್ನಾಟಕವನ್ನೇ ಎರಡು ತುಂಡು ಮಾಡಿದೆ. ಈ ಘಟ್ಟದ ಕಾರಣದಿಂದಾಗಿಯೇ ಅತ್ತಕಡೆಯವರು ಕರ್ನಾಟಕದ ಜೊತೆ ಭಾವನಾತ್ಮಕವಾಗಿ ಬೆರೆಯುತ್ತಿಲ್ಲ ಎಂದು ಹೇಳಬಹುದು. ತುಳುವರು ಮತ್ತು ಕೊಡವರು ತಮಗೆ ಬೇರೆಯೇ ರಾಜ್ಯ ಬೇಕು ಅಂತ ಪ್ರತ್ಯೇಕತಾವಾದ ಮಾಡುವುದಕ್ಕೂ ಇದೇ ಕಾರಣ ಅಂತ ಸಮಾಜಶಾಸ್ತ್ರಜ್ಞರು ಹೇಳುತ್ತಾರೆ. ಅಲ್ಲದೆ, ಈ ಘಟ್ಟಗಳ ದೆಸೆಯಿಂದಾಗಿ ಶಿರಾಡಿ-ಚಾರ್ಮಾಡಿ ಘಾಟಿಗಳಿಗೆ ಪ್ರತಿವರ್ಷವೂ ಡಾಂಬರು ಹಾಕಬೇಕಾಗಿದೆ. ಪೆಟ್ರೋಲು ತುಂಬಿಸಿಕೊಂಡ ಲಾರಿಗಳು ಈ ಘಟ್ಟದ ಹಾವೇಣಿಗಳಲ್ಲಿ ಉಬ್ಬಸಪಡುತ್ತ ಬರುವುದೇ ಒಂದು ದೊಡ್ಡ ಸಮಸ್ಯೆ. ಇಡೀ ಕಾಡನ್ನು ಕಡಿದು ಸಮತಟ್ಟು ಮಾಡಿದರೆ ರಾಜಕೀಯ ಮಾತ್ರವಲ್ಲ ಆರ್ಥಿಕವಾಗಿಯೂ ಹಲವಾರು ಪ್ರಯೋಜನಗಳುಂಟು. ಮಂಗಳೂರು-ಬೆಂಗಳೂರುಗಳ ಮಧ್ಯೆ ನೇರವಾದ ರಸ್ತೆ, ರೈಲುಕಂಬಿ ಹಾಕಬಹುದು. ಬೆಂಗಳೂರಿನ ಅರ್ಧಕ್ಕರ್ಧ ಕೈಗಾರಿಕೆ ಮತ್ತವುಗಳ ಸಮಸ್ಯೆಗಳನ್ನು ಕರಾವಳಿ ಜಿಲ್ಲೆಗಳಿಗೆ ಶಿಫ್ಟ್ ಮಾಡಬಹುದು. ಅರಣ್ಯದಲ್ಲಿ ಅಡ್ಡಾಡುತ್ತಿದ್ದ ಪ್ರಾಣಿಪಕ್ಷಿಗಳನ್ನು ಹಿಡಿದು ವನ್ಯಜೀವಿಧಾಮಗಳನ್ನು, ಪ್ರಾಣಿ ಸಂಗ್ರಹಾಲಯಗಳನ್ನು ಮಾಡಬಹುದು. ಕರ್ನಾಟಕದ ತುಂಬ ಕಾಲುವೆ ಹಾಕಿ ಬೇಕು ಬೇಕಾದಲ್ಲಿ ನೀರು ಹಾಯಿಸಬಹುದು. ಅಳಿದುಳಿದ ನದಿಗಳಿಗೆ 70ಕ್ಕೂ ಮಿಕ್ಕಿ ಜಲವಿದ್ಯುದಾಗಾರಗಳನ್ನು ಕಟ್ಟಿ ಕರೆಂಟು ಉತ್ಪಾದಿಸಿ ಹೊರರಾಜ್ಯಗಳಿಗೆ ಮಾರಬಹುದು. ಬೇಕಾದರೆ, ಚೀನಾದ ಮಹಾಗೋಡೆಯನ್ನು ಮೀರಿಸುವ ಕಾಂಕ್ರೀಟ್ ಗೋಡೆ ಕಟ್ಟಿ ಮಳೆಮಾರುತಗಳನ್ನು ತಡೆದು ಮಳೆ ಬರಿಸಿಕೊಳ್ಳಬಹುದು. ಆ ಗೋಡೆ ಕಟ್ಟಲು ಬೇಕಾದ ಕಬ್ಬಿಣ, ಉಕ್ಕು, ನಿಕ್ಕಲ್, ಮ್ಯಾಂಗನೀಸ್, ಅಲ್ಯುಮೀನಿಯಂನಂತಹ ಎಲ್ಲಾ ಖನಿಜ-ಅದಿರುಗಳನ್ನೂ ಇದೇ ಘಟ್ಟದ ಒಡಲಿನಿಂದ ಗೋರಿ ತೆಗೆಯಬಹುದು. ಇನ್ನು ಸಿಮೆಂಟಂತೂ ಇಲ್ಲೇ ಉತ್ಪಾದಿಸಬಹುದು. ರಿಯಲ್ ಎಸ್ಟೇಟ್ ಉದ್ಯಮವನ್ನು ರಾಷ್ಟ್ರೀಕರಣ ಮಾಡಿ ಅದರ ವ್ಯವಹಾರವೆಲ್ಲ ಸರಕಾರದ ಮೂಗಿನಡಿಯೇ ನಡೆಯುವಂತೆ ಕಾಯಿದೆ ತರಬಹುದು. ಘಟ್ಟ ಇದ್ದ ಜಾಗದಲ್ಲಿ ಸಪಾಟ ಮಾಡಿ 'ಫಾರೆಸ್ಟ್ ವ್ಯೂ' ಹೆಸರಲ್ಲಿ ಅಪಾರ್ಟ್ಮೆಂಟ್ ಎಬ್ಬಿಸಿದರೆ ಏನು ಬೆಲೆ ಅಂತೀರಿ?
ವಿಶ್ವಸಂಸ್ಥೆ ಭಾರತದ 39 ಜಾಗಗಳನ್ನು ಪಟ್ಟಿ ಮಾಡಿ 'ಇವೆಲ್ಲ ವಿಶ್ವಪಾರಂಪರಿಕ ವಿಶೇಷವಿರುವ ಸ್ಥಳಗಳು' ಅಂತ ಹೇಳಿದೆ. ಅದರಲ್ಲಿ ಬರೋಬ್ಬರಿ ಹತ್ತು ಕರ್ನಾಟಕದಲ್ಲೇ ಇವೆ. ಕೊಡಗಿನ ಪುಷ್ಪಗಿರಿ, ಬ್ರಹ್ಮಗಿರಿ, ತಲಕಾವೇರಿ ವನ್ಯಧಾಮ, ಕುದುರೆಮುಖ ವನ್ಯಧಾಮದ ರಾಷ್ಟ್ರೀಯ ಉದ್ಯಾನ, ಸೋಮೇಶ್ವರ ಅಭಯಾರಣ್ಯ, ಸೋಮೇಶ್ವರ ಮೀಸಲು ಅರಣ್ಯ, ಆಗುಂಬೆ, ಬಾಲಹಳ್ಳಿಯ ಮೀಸಲು ಅರಣ್ಯ - ಹೀಗೆ ಪಶ್ಚಿಮಘಟ್ಟದ ಆಚೀಚೆ ಇರುವ ಜಾಗಗಳನ್ನೇ ಈ ಪಟ್ಟಿಯಲ್ಲಿ ಹೆಸರಿಸಲಾಗಿದೆ. ನಮ್ಮವರು ಯಾವುದೇ ಕೈಗಾರಿಕೆ ಮಾಡಬಾರದು, ವಿದೇಶಗಳ ಗುಲಾಮರಾಗಿಯೇ ಇರಬೇಕು ಎನ್ನುವ ಹುನ್ನಾರ ಇದರ ಹಿಂದೆ ಇರುವುದು ಸ್ಪಷ್ಟ. ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಪ್ರಾಕೃತಿಕ ಸಂಪನ್ಮೂಲಗಳನ್ನಂತೂ ಮುಟ್ಟುವುದಿಲ್ಲ. ಬೇರೆಯವರು ನೆಲ ಬಗೆಯಲು ಕೈಹಾಕಿದರೆ ಇವರಿಗೇನು ನಷ್ಟ? ನಮಗೆಲ್ಲ ಪ್ರಗತಿಯಷ್ಟೇ ಬೇಕಾಗಿದೆ ಎನ್ನುವುದನ್ನು ಪ್ರತಿಯೊಬ್ಬ ಅರಿಯಬೇಕು. ಬ್ರೆಜಿಲ್ನಲ್ಲಿ ಇಂದು ಫಿಫಾ ನಡೆಸುವ ತಾಕತ್ತಿದೆ ಎಂದು ಕೊಂಡಾಡುತ್ತೇವೆಯೇ ವಿನಃ ಅವರು ಅಮೆಜಾನ್ ಕಾಡನ್ನು ನಾಶ ಮಾಡಿದರು ಎಂಬ ಸುದ್ದಿ ಜಗತ್ತಿಗೆ ಮುಖ್ಯವಾಗುವುದಿಲ್ಲ. ಚೀನಾ ಒಲಿಂಪಿಕ್ ನಡೆಸಿದಾಗ, ಅದರ ಸ್ಟೇಡಿಯಮ್ಗಳಿಗೆ ಬಳಸಿದ್ದು ಬಳ್ಳಾರಿಯ ಕಬ್ಬಿಣ ಎನ್ನುವುದು ಎಂತಹ ಹೆಮ್ಮೆಯ ವಿಚಾರ! ನಾವು ಈಗ ಪಶ್ಚಿಮಘಟ್ಟದ ಒಡಲಲ್ಲಿ ಇರುವ ಅಗಾಧ ಪ್ರಮಾಣದ ಸಂಪತ್ತನ್ನು ತೆಗೆಯದೆ ಹೋದರೆ, ಜೀವಮಾನವಿಡೀ ಚಿನ್ನದ ನಿಕ್ಷೇಪದ ಮೇಲೆ ಕೂತು ಭಿಕ್ಷೆ ಬೇಡಿದ ಭಿಕ್ಷುಕನಂತಾಗಬಹುದು. ಕಾಡಿನ ಹಸಿರು ದೇಶದ ಜಿಡಿಪಿ ಸೂಚ್ಯಂಕಕ್ಕೆ ನಯಾಪೈಸೆಯಷ್ಟಾದರೂ ಸಹಾಯವಾಗುತ್ತದೆಯೇ? ಬಲ್ಲವರು ಹೇಳಬೇಕು.
ಪಶ್ಚಿಮಘಟ್ಟ ನಾಶವಾದರೆ ಬರಗಾಲ ಬಂದೀತು ಎಂದು ಕೆಲವರು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ, ಅಂತಹ ಬರಗಾಲ ಎದುರಾದರೆ, ಬೇಕಾದ್ದನ್ನು ಆಮದು ಮಾಡಿ ತಿನ್ನುವ ಸಾಮರ್ಥ್ಯ ನಮಗಿರುತ್ತದೆ ಎನ್ನುವುದನ್ನು ಮರೆಯುತ್ತಾರೆ. ಆಕ್ಸಿಜನ್ ಕಮ್ಮಿಯಾದರೆ, ಆಕ್ಸಿಜನ್ ಬಾರ್ ತೆಗೆಯಬಹುದು. ಪ್ರಾಣಿಪಕ್ಷಿಗಳು ಅಳಿದರೆ, ಸಮೋಸಕ್ಕೆ ಆಲೂಗಡ್ಡೆ ತುಂಬಿಸಿದಂತೆ ಅವುಗಳ ದೇಹಕ್ಕೆ ಅರಳೆ ತುಂಬಿಸಿ ಮುಂದಿನ ಜನಾಂಗಕ್ಕೆ ತೋರಿಸಬಹುದು. ಅಕಾಲಿಕ ಮಳೆಯಾದರೆ, ವರ್ಷಪೂರ್ತಿ ನೆರೆಪರಿಹಾರ ಬಿಡುಗಡೆ ಮಾಡಬಹುದು. ತಾಪಮಾನ ಹೆಚ್ಚಾದರೆ, ಸಬ್ಸಿಡಿ ಜಾಸ್ತಿ ಮಾಡಿ ಕಾರುಸಾಲದ ಹಾಗೆ ಏಸಿಸಾಲಮೇಳ ಮಾಡಬಹುದು. ಕಾಡು ಕಡಿದರೆ ಜಲ, ವಾಯು, ಶಬ್ದಮಾಲಿನ್ಯ ವಿಪರೀತವಾಗುತ್ತದೆ. ಕರ್ನಾಟಕವೇ ಸುಡುಗಾಡಾಗುತ್ತದೆ. ಹಬ್ಬುವ ವಿಷ ನಮ್ಮನ್ನೆಲ್ಲ ನಿಧಾನವಾಗಿ ಕೊಲ್ಲಲಿದೆ ಎಂದು ಇವರು ಹೆದರಿಸುತ್ತಿದ್ದಾರೆ. ನಿಧಾನವಾಗಿ ಕೊಂದರೂ ಓಕೆ, ಬೇಗನೆ ಸಾಯುವುದು ಯಾರಿಗೆ ಬೇಕಾಗಿದೆ?
-ರೋಹಿತ ಚಕ್ರತೀರ್ಥ