ನಮ್ಮ ಓಟದಲ್ಲಿ ಅವರೂ ಜೊತೆಯಾಗಲಿ
ನಮಗೆಷ್ಟು ಜನ ಅಂಗವಿಕಲ ಗೆಳೆಯರಿದ್ದಾರೆ? ಇದೊಂದು ಸರಳ ಪ್ರಶ್ನೆ. ಆದರೆ ಉತ್ತರಿಸುವುದಕ್ಕೆ ಪರದಾಡಬೇಕಾಗುತ್ತದೆ....
ನಮಗೆಷ್ಟು ಜನ ಅಂಗವಿಕಲ ಗೆಳೆಯರಿದ್ದಾರೆ? ಇದೊಂದು ಸರಳ ಪ್ರಶ್ನೆ. ಆದರೆ ಉತ್ತರಿಸುವುದಕ್ಕೆ ಪರದಾಡಬೇಕಾಗುತ್ತದೆ. ಹೌದಲ್ಲ? ಗೆಳಯರ ಬಳಗವೇನೋ ದೊಡ್ಡದಿದೆ, ಆದರೆ ಅದರಲ್ಲಿ 'ಅವನೊಬ್ಬ' ಮಾತ್ರ ಇರುವುದಿಲ್ಲ!
ನಾವು ಗುಂಪು ಕಟ್ಟಿಕೊಂಡು ಸಿನೆಮಾಕ್ಕೆ ಹೋದಾಗ, ಮೆಕ್ಡಿಯಲ್ಲಿ ಕುಳಿತು ಬರ್ಗರ್ ಮೆಲ್ಲುವಾಗ, ಹೊಸ ವರ್ಷದ ಪಾರ್ಟಿ ಮಾಡುವಾಗ, ಹುಚ್ಚೆದ್ದು ಹೋಲಿ ಆಡುವಾಗ ಆತ ಮಾತ್ರ ಅಲ್ಲಿ ಇರುವುದಿಲ್ಲ. ಎಲ್ಲರೊಡನೆ ಬೆರೆಯುವ ಆಸೆ ಅವನಿಗೂ ಇದೆ. ಆದರೆ ತಾನು ಬಂದರೆ ಉಳಿದವರಿಗೆ ತೊಂದರೆ ಎನ್ನುವ ಕೀಳರಿಮೆ. ಕರೆಯಬೇಕೆಂಬ ಆಸೆ ನಮಗೂ ಇದೆ, ಕರೆದರೆ ಅವನಿಗೇ(ನಮಗೂ) ತೊಂದರೆ ಎನ್ನುವ ಸೇಫ್ ಝೋನ್ನಲ್ಲಿ ನಾವಿರುತ್ತೇವೆ.
ವೇಗದ ಬದುಕಿನಲ್ಲಿ ಓಡುತ್ತಿರುವ ನಮಗೆ, ಅವನು ಜೊತೆಯಾದರೆ ನಮ್ಮ ಓಟ ನಿಧಾನವಾಗುತ್ತದೆ ಎನ್ನುವ ಭಯ. ಹಾಗಾಗೇ ಜೊತೆಗೋಡಲು ಮನಸ್ಸು ಮಾಡದೇ, ಅವನನ್ನು ಅಲ್ಲೇ ಬಿಟ್ಟು ಮುಂದೋಡುತ್ತೇವೆ. ನಾವು ಮುಂದೆ ಹೋದಂತೆಲ್ಲ ಅವನ ಮತ್ತು ನಮ್ಮ ನಡುವಿನ ಅಂತರ ಹೆಚ್ಚುತ್ತಲೇ ಹೋಗುತ್ತದೆ. ಹಿಂದುಳಿದವನು ಅಸ್ಪಷ್ಟ ರೂಪವಾಗಿ ಮನಸ್ಸಿನಲ್ಲಿ ಉಳಿಯುತ್ತಾನೆ. ಗೆಳೆಯನಾಗಿದ್ದವನು ಕೊನೆಗೆ ಕೇವಲ ಕ್ಲಾಸ್ಮೇಟ್ ಆಗುತ್ತಾನೆ! ಆಗಲೇ ನಮಗೆ ಆತನ ಮೇಲಿದ್ದ ಅನುರಾಗ ಕರಗಿ ಅನುಕಂಪವಷ್ಟೇ ಉಳಿಯುತ್ತದೆ. ಆಗಲೇ ಆತ ರೇಜಿಗೆ ಹುಟ್ಟಿ ಕೂಗುತ್ತಾನೆ- "ನನಗೆ ಅನುಕಂಪ ಬೇಕಿಲ್ಲ, ನಿಮ್ಮ ಜೊತೆ ಸಾಗುವ ಸಮಾನ ಅವಕಾಶ ಬೇಕು". ನಾವೂ ಕ್ಷಣಕಾಲ ನಿಂತು ಹೌದೆಂದು ತಲೆಯಾಡಿಸುತ್ತೇವೆ, 'ಅಂಗವೈಕಲ್ಯ ಶಾಪವಲ್ಲ, ಅವರು ಸಮಾಜಕ್ಕೆ ಹೊರೆಯಲ್ಲ' ಎಂದು ಘೋಷಣೆ ಕೂಗುತ್ತಲೇ ಇನ್ನಷ್ಟು ದೂರ ಓಡಿಹೋಗುತ್ತೇವೆ!
ನಾವಷ್ಟೇ ಅಲ್ಲ, ಇಂಥವರ ಸಹಾಯಕ್ಕೆ ಇಲ್ಲಿಯವರೆಗೂ ನಮ್ಮ ಸರ್ಕಾರಗಳೂ ಸಕ್ರಿಯವಾಗಿ ಮುಂದಾಗಿರಲಿಲ್ಲ. ಈ ಕಾರಣಕ್ಕಾಗಿಯೇ ವಿಶಿಷ್ಟ ಚೇತನರ ಹಕ್ಕು, ಸಮಸ್ಯೆಗಳು, ಅವರ ಬಗೆಗಿನ ಸಮಾಜದ ದೃಷ್ಟಿಕೋನ ಬದಲಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಡಿ. 3 ರಂದು ಅಂಗವಿಕಲ ದಿನವನ್ನು ಆಚರಿಸಲಾಗುತ್ತದೆ. ಹಾಗಂತ, 'ಸಾಮರ್ಥ್ಯವನ್ನು ಗುರುತಿಸಿ, ಅಂಗವೈಕಲ್ಯವನ್ನಲ್ಲ' ಎನ್ನುವ ಸ್ವಾಭಿಮಾನಿಗಳ ಸಂಖ್ಯೆಯೇನೂ ನಮ್ಮಲ್ಲಿ ಕಡಿಮೆಯಿಲ್ಲ.
ಇಂಥವರ ಕೂಗಿಗೆ ಕೊನೆಗೂ ಕಿವಿಗೊಟ್ಟ ಭಾರತ ಸರ್ಕಾರ 1995ರಲ್ಲಿ ವಿಶಿಷ್ಟ ಚೇತನ ವ್ಯಕ್ತಿಗಳ ಮಸೂದೆಯನ್ನು ತಯಾರಿಸಿತು. ಒಟ್ಟು 14 ಅಧ್ಯಾಯಗಳನ್ನೊಳಗೊಂಡಿದ್ದ ಈ ಮಸೂದೆಯ ಮುಖ್ಯ ಉದ್ದೇಶ ಅವರು ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯರಾಗುವಂತೆ ಮಾಡುವುದಾಗಿತ್ತು. ಈ ಮಸೂದೆ ಕಾಯ್ದೆಯಾಗಿ ಜಾರಿಯಾದದ್ದು 1996ರಲ್ಲಿ. ಕಡೆಗೆ, ತಮಗೂ ಸಮಾನ ಅವಕಾಶ ದೊರಕಿತು ಎಂದವರು ಹಿಗ್ಗಿದರಾದರೂ, ಆ ಕಾಯ್ದೆ ಹಲ್ಲಿಲ್ಲದ ಹುಲಿ ಎನ್ನುವುದು ಸ್ವಲ್ಪ ದಿನದಲ್ಲೇ ಎಲ್ಲರಿಗೂ ಅರಿವಾಯಿತು.
ಇನ್ನು ಭಾರತದಲ್ಲಿ ಜನಗಣತಿಯ ವೇಳೆ ವಿಶಿಷ್ಟ ಚೇತನರ ಸಂಖ್ಯೆಯನ್ನು ಮೊದಲಿನಿಂದಲೂ ಕಡೆಗಣಿಸುತ್ತಾ ಬರಲಾಗಿದೆ. ನಿಮಗೆ ಆಶ್ಚರ್ಯವಾಗಬಹುದು. ಸ್ವಾತಂತ್ರ್ಯಾನಂತರ ಕೇವಲ 1981 , 2001 ಮತ್ತು 2011ರಲ್ಲಷ್ಟೇ ಅವರ ಸಂಖ್ಯೆಯನ್ನು ಲೆಕ್ಕ ಹಾಕಲಾಗಿದೆ. ಭಾರತ ಸರ್ಕಾರದ 2001ರ ಗಣತಿ ದೇಶದಲ್ಲಿ 21.9 ಮಿಲಿಯನ್ ವಿಶಿಷ್ಟ ಚೇತನರಿದ್ದಾರೆ ಎಂದು ಹೇಳಿತು. ಕರ್ನಾಟಕದಲ್ಲಿ ಆಗ ಜಿಲ್ಲಾವಾರು ಗುರುತಿಸಲಾದ ಅಂಗವಿಕಲರ ಸಂಖ್ಯೆ 94,0643ರಷ್ಟಿತ್ತು(ಪುರುಷರು-537730, ಮಹಿಳೆಯರು-402913), ಇನ್ನು 2011ರ ಗಣತಿ, ದೇಶದಲ್ಲಿ ಕಳೆದ ಹತ್ತು ವರ್ಷದಲ್ಲಿ ಅವರ ಸಂಖ್ಯೆ 26.8 ಮಿಲಿಯನ್ನಷ್ಟಾಗಿದೆ(ಕನಿಷ್ಠ ಏರಿಕೆ) ಎಂದು ಹೇಳುತ್ತದೆ. ಆದರೆ ಈ ಅಂಕಿ ಸಂಖ್ಯೆಯನ್ನು ಅಲ್ಲಗಳೆಯುತ್ತದೆ 2007ರ ವಿಶ್ವಬ್ಯಾಂಕ್ನ ವರದಿ. ಅದರ ಪ್ರಕಾರ ಭಾರತದಲ್ಲಿ(2007ರ ವೇಳೆಗೆ) 40 ಮಿಲಿಯನ್ ವಿಶಿಷ್ಟ ಚೇತನರಿದ್ದರು, ಅಂದರೆ ಅಂದಿನ ನಮ್ಮ ಜನಸಂಖ್ಯೆಯ 4 ಪ್ರತಿಶತದಷ್ಟು! ಇನ್ನು ಸರ್ಕಾರೇತರ ಸಂಸ್ಥೆಗಳು, ಭಾರತದಲ್ಲೀಗ ಸುಮಾರು 5-6 ಪ್ರತಿಶತದಷ್ಟು ಮಂದಿ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ ಅನ್ನುತ್ತವೆ.
ಈ ಅಂಕಿ ಸಂಖ್ಯೆಗಳೇನೇ ಇರಲಿ, ಒಟ್ಟಿನಲ್ಲಿ ಇದರ ತಾತ್ಪರ್ಯವಂತೂ ಇಷ್ಟೆ- ಕಣ್ಣಿಗೆ ಬೀಳದಷ್ಟು ಕಡಿಮೆ ಸಂಖ್ಯೆಯಲ್ಲೇನೂ ಅವರಿಲ್ಲ. ತಮ್ಮ ಹಕ್ಕಿಗಾಗಿ, ಸಮಾನತೆಗಾಗಿ ನಿರಂತರವಾಗಿ ಹೋರಾಡುತ್ತಲೇ ಬಂದಿರುವ ಅವರಿಗೆ ಈಗ ಆಶಾದಾಯಕ ವಿದ್ಯಮಾನವೊಂದು ಎದುರಾಗಿದೆ. ಕಳೆದ ವರ್ಷದ ಡಿಸೆಂಬರ್ನಲ್ಲಿ ಕೇಂದ್ರ ಸಂಪುಟ, 1995ರ ವಿಶಿಷ್ಟ ಚೇತನ ವ್ಯಕ್ತಿಗಳ ಮಸೂದೆಯ ಬದಲಾಗಿ, Rights of Persons with Disabilities Bill ಅನ್ನು ತರಲು ಒಪ್ಪಿಗೆ ನೀಡಿದೆ. ಈ ಮಸೂದೆಯನ್ನು ಈ ತಿಂಗಳ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಇತ್ತೀಚೆಗೆ, ಈ ಹೊಸ ಮಸೂದೆಯ ಕೆಲವು ಮುಖ್ಯಾಂಶಗಳನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ತೆರೆದಿಟ್ಟಿದೆ. ಮೊದಲ ಆವೃತ್ತಿಗೂ ಈಗಿನ ಆವೃತ್ತಿಗೂ ಬಹಳ ಭಿನ್ನತೆಯಿರುವುದಂತೂ ಸತ್ಯ. ಈ ಕಾರಣಕ್ಕಾಗಿಯೇ ಹಲವರು ಅದಾಗಲೇ ಅದರಲ್ಲಿರುವ ಕೆಲವು ಅಂಶಗಳನ್ನು ವಿರೋಧಿಸತೊಡಗಿದ್ದಾರೆ.
ಮೊದಲನೆಯ ಮಸೂದೆ ವಿಶಿಷ್ಟ ಚೇತನರಿಗಾಗಿ ವಿಶೇಷ ಶಾಲೆಗಳನ್ನು ಸ್ಥಾಪಿಸಬೇಕು ಎನ್ನುವ ಅಂಶಕ್ಕೆ ಒತ್ತು ಕೊಟ್ಟಿತ್ತು. ಆದರೆ ಈಗಿನ ಆವೃತ್ತಿ, ಸರ್ಕಾರದ ಮಾನ್ಯತೆ ಅಥವಾ ಅನುದಾನ ಪಡೆದ ಶಾಲೆಗಳಲ್ಲಿ ವಿಶಿಷ್ಟ ಚೇತನ ಮಕ್ಕಳಿಗೆ ಜಾಗ ಕೊಡುವ ವಿಷಯಕ್ಕೆ ಹೆಚ್ಚು ಒತ್ತು ಕೊಟ್ಟಿದೆ. ಸೈದ್ಧಾಂತಿಕವಾಗಿ ನೋಡಿದಾಗ ಇದೊಂದು ಅದ್ಭುತ ಹೆಜ್ಜೆಯೆಂದೇ ಅನ್ನಿಸಬಹುದು. ಆದರೆ ಇದು ತಂದೊಡ್ಡುವ ಕೆಲವು ಸಮಸ್ಯೆಗಳ ಬಗ್ಗೆ ಸರ್ಕಾರ ಯೋಚಿಸಿದಂತಿಲ್ಲ. ಇಂದು ನಮ್ಮಲ್ಲಿನ ಯಾವ ಮುಖ್ಯವಾಹಿನಿ ಶಾಲೆಗಳು ವಿಶಿಷ್ಟ ಚೇತನ ಮಕ್ಕಳಿಗೆ ಶಿಕ್ಷಣ ನೀಡಬಲ್ಲ ಅರ್ಹತೆ ಹೊಂದಿರುವ ಶಿಕ್ಷಕರನ್ನು/ ಸೌಲಭ್ಯಗಳನ್ನು ಹೊಂದಿವೆ ಹೇಳಿ? ಆಟಿಸಂನಿಂದ ಅಥವಾ ಇನ್ನಾವುದೋ ಸಮಸ್ಯೆಯಿಂದ ಬಳಲುತ್ತಿರುವ ಮಗುವೊಂದನ್ನು ಇಂಥ ಅಸ್ಥವ್ಯಸ್ಥ ಪರಿಸರಕ್ಕೆ ತಳ್ಳಿಬಿಟ್ಟರೆ ಅದರ ಅವಸ್ಥೆ ಏನಾಗಬೇಡ? ಕಾಲಿಲ್ಲದ ಮಕ್ಕಳಿಗೆ ಓಡಾಡಲು ವೀಲ್ಚೇರ್ಗಳು ಆ ಶಾಲೆಗಳಲ್ಲಿವೆಯೇ? ಮೆಟ್ಟಿಲುಗಳನ್ನು ಅವರ ಅಗತ್ಯಕ್ಕೆ ರೂಪಿಸಲಾಗಿದೆಯೇ? ಅಂಧ-ಕಿವುಡ ಮಕ್ಕಳಿಗೆ ಅಲ್ಲಿ ಯಾವ ವ್ಯವಸ್ಥೆಯಿದೆ?
ಇನ್ನು ಈ ಆವೃತ್ತಿ, ವಿಶಿಷ್ಟ ಚೇತನರಿಗೆ ಉದ್ಯೋಗದಲ್ಲಿ ಮೀಸಲು ಕಲ್ಪಿಸುವ ಮಾತನಾಡುತ್ತದೆ. ಆದರೆ ಆ ವ್ಯಕ್ತಿ ಮೀಸಲಿಟ್ಟ ಹುದ್ದೆಗಷ್ಟೇ ಸೇರಬೇಕಾಗುತ್ತದೆ. ಅದಕ್ಕಿಂತಲೂ ಉನ್ನತ ಅರ್ಹತೆ ಆತನಲ್ಲಿದ್ದರೆ ಏನು ಮಾಡಬೇಕು? ಇದು ವಿಶಿಷ್ಟಚೇತನರ ಹಕ್ಕನ್ನು ಹತ್ತಿಕ್ಕುವ ಪ್ರಯತ್ನವೆಂದೆನಿಸುವುದಿಲ್ಲವೇ? ಸರ್ಕಾರ ತಯಾರಿಯಿಲ್ಲದೆ ತರಾತುರಿಯಲ್ಲಿ ಇಂಥ ಅಂಶಗಳನ್ನು ಮಸೂದೆಯಲ್ಲಿ ತುರುಕಿದೆ ಎನ್ನುವುದಂತೂ ಸ್ಪಷ್ಟ.
ಇದೇನೇ ಇದ್ದರೂ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮತ್ತು ಅದರ ಅವಿಭಾಜ್ಯ ಅಂಗವಾಗಿಸುವ ಒಂದು ಗುಣಾತ್ಮಕ ಅಂಶವಂತೂ ಅದರಲ್ಲಿದೆ.
20 ಅಥವಾ ಅದಕ್ಕಿಂತಲೂ ಹೆಚ್ಚಿನ ನೌಕರರನ್ನು ಹೊಂದಿರುವ ಉದ್ಯೋಗದಾತನೊಬ್ಬ, ಅದರಲ್ಲಿ 5 ಪ್ರತಿಶತಕ್ಕಿಂತಲೂ ಹೆಚ್ಚಿನ ವಿಶಿಷ್ಟ ಚೇತನ ನೌಕರರನ್ನು ಹೊಂದಿದ್ದರೆ, ಆ 5 ಪ್ರತಿಶತ ವ್ಯಕ್ತಿಗಳ ಸಂಬಳಕ್ಕೆ ಸಮನಾದ ಮೊತ್ತವನ್ನು ಕಡಿತಗೊಳಿಸಿ ಆತ ತೆರಿಗೆ ಇಲಾಖೆಗೆ ತನ್ನ ತೆರಿಗೆ ಕಟ್ಟಬೇಕಾಗುತ್ತದೆ ಎಂದದು ಹೇಳುತ್ತದೆ. ಸರಳವಾಗಿ ಹೇಳಬೇಕೆಂದರೆ, ಒಂದು ಸಂಸ್ಥೆಯಲ್ಲಿ 100 ಮಂದಿ ನೌಕರರಿದ್ದಾರೆ ಎಂದಿಟ್ಟುಕೊಳ್ಳಿ. ಅದರಲ್ಲಿ 5 ಜನ ವಿಶಿಷ್ಟ ಚೇತನ ನೌಕರರಿದ್ದರೆ, ಅವರೆಲ್ಲರ ಒಟ್ಟೂ ಸಂಬಳಕ್ಕೆ ಸಮನಾದ ಮೊತ್ತದ ತೆರಿಗೆಯ ರಿಯಾಯಿತಿ ಆತನಿಗೆ ದೊರಕುತ್ತದೆ. ಆದರೆ ಒಂದು ವೇಳೆ, ಆ ಸಂಸ್ಥೆಯಲ್ಲಿ ಕೇವಲ 3 ಜನ ವಿಶಿಷ್ಟ ಚೇತನ ನೌಕರರಷ್ಟೇ ಇದ್ದರೆ, ಇನ್ನುಳಿದವರ (ನೇಮಕವಾಗದ-ಇಬ್ಬರ) ಸಂಬಳಕ್ಕೆ ಸಮನಾದ ಹೆಚ್ಚುವರಿ ಮೊತ್ತವನ್ನು ಆತ ತೆರಿಗೆ ಕಟ್ಟಬೇಕಾಗುತ್ತದೆ. ಅಂದರೆ ದಂಡವಿದ್ದಂತೆ!
ಒಂದು ಮನೆಯಲ್ಲಿ ವಿಶಿಷ್ಟ ಚೇತನ ಮಗು ಹುಟ್ಟಿತೆಂದರೆ ಅಲ್ಲಿಗೆ ಆ ಕುಟುಂಬದ ಕಥೆ ಮುಗಿದೇ ಹೋಯಿತು ಎನ್ನುವಂಥ ವಾತಾವರಣ ನಮ್ಮಲ್ಲಿದೆ. ಪೂರ್ವಜನ್ಮದ ಪಾಪ, ಪ್ರಾರಬ್ಧ, ಬೇಡದ ಅತಿಥಿಯಾಗಿ ಆ ಕೂಸು ಕಾಣಿಸತೊಡಗುತ್ತದೆ. ನಿಧಾನವಾಗಿ ಆ ಕುಟುಂಬವೂ ಕೀಳರಿಮೆಯಿಂದಾಗಿ ಸಮಾಜದಿಂದ ದೂರ ಉಳಿಯುವ ಅಭ್ಯಾಸಕ್ಕೆ ಅಂಟಿಕೊಂಡುಬಿಡುತ್ತದೆ. ವಿಶಿಷ್ಟ ಚೇತನರು ಕತ್ತಲ ಕೋಣೆಯಲ್ಲಿಯೇ ಕರಗಿಹೋಗುತ್ತಾರೆ. ಆದರೆ ಈಗ ಅಂಥವರಿಗೂ ನಮ್ಮಂಥ ವಿಚಿತ್ರ ಚೇತನಗಳ ಜೊತೆಗೆ ಮುಖ್ಯವಾಹಿನಿಯಲ್ಲಿ ಸಾಗಲು ಒಂದು ಸಾಧ್ಯತೆ ಎದುರಾಗಿದೆ. ಒಂದು ವೇಳೆ ಈ ಮಸೂದೆಯೇನಾದರೂ ಕಾಯಿದೆಯಾದರೆ ಅವರಿಗೂ ನಮ್ಮೊಂದಿಗೆ ಹೆಜ್ಜೆ ಹಾಕುವ ಅವಕಾಶ ಎದುರಾಗುತ್ತದೆ. ಹಾಗೇನಾದರೂ ಆದರೆ ಅವರ ಕೈ ಹಿಡಿದು ಒಟ್ಟಿಗೆ ಮುಂದೆ ಸಾಗೋಣ. ಹಿಂದೆ ಬಿಟ್ಟು ಮುಂದೋಡುವುದು ಬೇಡ. ಅವರೂ ನಮ್ಮ ಗುಂಪಿನಲ್ಲಿ ಒಂದಾಗಲಿ. ಅನುಕಂಪದ ಜೊತೆಗೆ ಅನುರಾಗವೂ ಬೆಳೆಯಲಿ. ಆಗ, ಮೊದಲು ಕೇಳಿದ ಪ್ರಶ್ನೆಗೆ ಪರದಾಡುವ ಪ್ರಮೇಯವೇ ಎದುರಾಗುವುದಿಲ್ಲ!
- ರಾಘವೇಂದ್ರ ಆಚಾರ್ಯ
ಕನ್ನಡಪ್ರಭ
raghu.bioastra@gmail.com