ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅಧಿವೇಶನ ನುಂಗುತ್ತಿರುವ ತೆಲಂಗಾಣ, ಈ ಗೊಂದಲಕ್ಕೆ ಯಾರು ಕಾರಣ?

Vishwanath S
Updated On : 6 Feb 2014, 12:23 pm

'ತೆಲಂಗಾಣ ರಚನೆಗೆ ನಮ್ಮ ಯಾವುದೇ ವಿರೋಧವಿಲ್ಲ, ಖಾಲಿ ಕಾಗದದ ಮೇಲೆ ಸಹಿ ಮಾಡಿ ಕೊಡುತ್ತೇವೆ ನಿಮಗೆ ಬೇಕಾದ ರೀತಿಯಲ್ಲಿ ಬರೆದುಕೊಳ್ಳಿ' ಹೀಗಂತ ಭರವಸೆ ಕೊಟ್ಟಿದ್ದು ಮಾಜಿ ಮುಖ್ಯಮಂತ್ರಿ, ತೆಲುಗುದೇಶಂ ಪಕ್ಷದ ನಾಯಕ ನಾ.ರಾ. ಚಂದ್ರಬಾಬು ನಾಯ್ಡು. ಕೇಂದ್ರ ಸರ್ಕಾರ ತೆಲಂಗಾಣ ರಾಜ್ಯ ರಚನೆ ಘೋಷಣೆಗೂ ಮೊದಲು ಅವರು ಈ ಹೇಳಿಕೆ ನೀಡುವುದರ ಜೊತೆಗೆ ತೆಲಂಗಾಣ ರಾಜ್ಯ ರಚನೆಗೆ ಸಂಪೂರ್ಣ ಬೆಂಬಲಿಸುವ ಲಿಖಿತ ಪತ್ರವನ್ನೂ ನೀಡಿದ್ದರು.
ಬಿಜೆಪಿ ರಾಜ್ಯ ರಚನೆಗೆ ವಿರೋಧ ವ್ಯಕ್ತಪಡಿಸದಿದ್ದರೂ ಉಭಯ ಪ್ರದೇಶಗಳ ಜನರಿಗೆ ನ್ಯಾಯ ದೊರೆಯುವ ಯಾವುದೇ ತೀರ್ಮಾನಕ್ಕೆ ಬದ್ಧವಿರುವುದಾಗಿ ಘೋಷಿಸಿತು. ಸಿಪಿಐ ಕೂಡಾ ಸಂಪೂರ್ಣ ಬೆಂಬಲ ಸೂಚಿಸಿ ಲಿಖಿತ ಹೇಳಿಕೆ ನೀಡಿತು. ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಮೌಖಿಕವಾಗಿ ವಿಭಜನೆ ಬಗ್ಗೆ ವಿರೋಧ ವ್ಯಕ್ತಪಡಿಸಲಿಲ್ಲ. ಆದರೆ ಸಿಪಿಎಂ ಪಕ್ಷ ರಾಜ್ಯ ವಿಭಜನೆಯನ್ನು ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ. ಈಗಲೂ ವಿರೋಧಿಸುತ್ತಲೇ ಇದೆ.
ರಾಜ್ಯ ವಿಭಜನೆಗೂ ಮೊದಲು ಬೆಂಬಲ ವ್ಯಕ್ತಪಡಿಸಿದ ರಾಜಕೀಯ ಪಕ್ಷಗಳು(ಕಾಂಗ್ರೆಸ್ ಸೇರಿದಂತೆ) ಈಗ  ಯೂ ಟರ್ನ್ ತೆಗೆದುಕೊಂಡು ವಿಭಜನೆಯನ್ನು ವಿರೋಧಿಸುತ್ತಿವೆ. ಇದಕ್ಕೆ ಕಾರಣಗಳು ಹಲವು...
1969ರಲ್ಲಿ ಮೊದಲ ಬಾರಿಗೆ ತೆಲಂಗಾಣ ಹೋರಾಟ ನಡೆದಾಗ ತೆಲಂಗಾಣ ಪ್ರದೇಶದಲ್ಲಿ ಸರ್ಕಾರಿ ನೌಕರಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಸ್ಥಳೀಯರಲ್ಲವೆಂದು ಅವರನ್ನು ವಾಪಸ್ ಕಳುಹಿಸಬೇಕೆಂದು ಜಿಒ ನಂ 36ನ್ನು ಜಾರಿ ಮಾಡಲಾಗಿತ್ತು. 1985ರಲ್ಲಿ ಜಿಒ ನಂ 610 ಜಾರಿ ಮಾಡಿ ಸ್ಥಳೀಯರಲ್ಲಿ 58,972 ಮಂದಿಯನ್ನು ವಾಪಸ್ ಕಳುಹಿಸಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಸೂಚಿಸಲಾಗಿತ್ತು. ಆದರೆ ಅದು ಇಂದಿಗೂ ಜಾರಿಯಾಗಿಲ್ಲ. ಒಂದು ವೇಳೆ ಇಷ್ಟೂ ಜನ ನೌಕರರನ್ನು ವಾಪಸ್ ಕರೆಸಿದ್ದೇ ಆದಲ್ಲಿ ಅವರಿಗೆ ನೌಕರಿ ಮತ್ತು ಸಂಬಳದ ಹೊರೆ ಸೀಮಾಂಧ್ರ ಪ್ರದೇಶದ ಸರ್ಕಾರದ ಮೇಲೆ ಬೀಳಲಿದೆ. ಇದಕ್ಕೆ ಪರಿಹಾರ ಏನು ಎಂಬುದನ್ನು ಯಾವುದೇ ಪಕ್ಷ ಸೂಚಿಸುವ ಗೋಜಿಗೇ ಈ ವರೆಗೆ ಹೋಗಿಲ್ಲ.
ಇನ್ನು ನದಿ ನೀರು ಹಂಚಿಕೆ ವಿಚಾರಕ್ಕೆ ಬಂದರೆ ಶ್ರೀಶೈಲಂ, ಪುಲಿಚಿಂತಲ, ನಾಗಾರ್ಜುನ ಮತ್ತು ಪೂಲವರಂ ಯೋಜನೆಗಳು ತೆಲಂಗಾಣ ಪ್ರದೇಶಕ್ಕೆ ಸೇರಲಿವೆ. ಇವುಗಳ ನೀರು ಹಂಚಿಕೆ ವಿಚಾರವಾಗಿ ಉಭಯ ರಾಜ್ಯಗಳೇ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ಷರತ್ತು ವಿಧಿಸಲಾಗಿದೆ. ಬುಧವಾರ ದೆಹಲಿಯ ಎಪಿ ಭವನದ ಮುಂದೆ ಉಭಯ ರಾಜ್ಯಗಳ ಜನತೆ ಕೈ ಕೈ ಮಿಲಾಯಿಸಿರುವುದನ್ನು ಗಮನಿಸಿದರೆ ಭವಿಷ್ಯದಲ್ಲಿ ನೀರಿನ ಹಂಚಿಕೆಗೆ ಸೌಹಾರ್ದ ಕಾಪಾಡುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ ಇದಕ್ಕೆ ಪರಿಹಾರ ನೀಡದೆ ವಿಭಜನೆ ಅಸಾಧ್ಯ ಎಂಬುದು ಪಕ್ಷಗಳ ವಾದ.
ಇನ್ನು ವಿದ್ಯುತ್ ವಿಚಾರಕ್ಕೆ ಬಂದರೆ ಪ್ರಸ್ತುತ ಇರುವ ಎಲ್ಲ ವಿದ್ಯುತ್ ನಿಗಮಗಳನ್ನು ರದ್ದುಗೊಳಿಸಿ ವಿಭಜನೆಯ ನಂತರ ಏರ್ಪಡುವ ಎರಡೂ ರಾಜ್ಯಗಳಿಗೆ ಪ್ರತ್ಯೇಕವಾಗಿ ವಿದ್ಯುತ್ ನಿಗಮಗಳನ್ನು ಸ್ಥಾಪಿಸಬೇಕು ಎಂಬುದು ತೆಲಂಗಾಣ ಪ್ರದೇಶದ ನಾಯಕರ ಬೇಡಿಕೆ. ಮಧ್ಯಪ್ರದೇಶ್, ಉತ್ತರಪ್ರದೇಶ್, ಬಿಹಾರ್ ಸೇರಿದಂತೆ ಯಾವುದೇ ರಾಜ್ಯ ಪುನರ್‌ರಚನೆ ಕಾಯ್ದೆಯಲ್ಲಿಯೂ ಇದೇ ನಿಬಂದನೆಗಳಿವೆ ಎಂಬುದು ಅವರ ವಾದ. ಆದರೆ ಅದು ಜಾರಿಯಾದಲ್ಲಿ ಸೀಮಾಂಧ್ರ ಪ್ರದೇಶಕ್ಕೆ ವಿದ್ಯುತ್ ಕ್ಷಾಮ ಕಟ್ಟಿಟ್ಟ ಬುತ್ತಿ. ಮೊದಲೇ ರಾಜಧಾನಿಯೂ ಇಲ್ಲದ ನೂತನ ರಾಜ್ಯವೊಂದು ವಿದ್ಯುತ್ ಖರೀದಿಸಿ ಕೃಷಿ,  ಗೃಹ, ಕೈಗಾರಿಕೆಗಳಿಗೆ ನೀಡಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸುವ ನಾಯಕರು ಇಲ್ಲವಾಗಿದ್ದಾರೆ.
ಮಸೂದೆಯಲ್ಲಿನ ಸೆಕ್ಷನ್ 95ರ ಪ್ರಕಾರ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವೈದ್ಯ, ಎಂಜಿನಿಯರಿಂಗ್ ಸೇರಿದಂತೆ ಉನ್ನತ ವ್ಯಾಸಂಗದಲ್ಲಿ 10 ವರ್ಷಗಳ ಕಾಲ ಉಭಯ ರಾಜ್ಯಗಳೂ ಮುಂದುವರಿಯಬೇಕು ಎಂದು ಹೇಳಲಾಗಿದೆ. ಇದರಿಂದ ತೆಲಂಗಾಣ ಪ್ರದೇಶಕ್ಕೆ ಅನಾನುಕೂಲವಾಗಿದ್ದು ಕೂಡಲೇ ಇದನ್ನು ರದ್ದು ಪಡಿಸಬೇಕೆಂದು ಈಗಾಗಲೇ ಪ್ರಧಾನಮಂತ್ರಿಯವರನ್ನು ಭೇಟಿಯಾಗಿರುವ ಟಿಆರ್‌ಎಸ್ ಮುಖ್ಯಸ್ಥ ಕೆ. ಚಂದ್ರಶೇಖರರಾವ್ ಒತ್ತಾಯಿಸಿದ್ದಾರೆ. ವಿಭಜನೆ ಪೂರ್ತಿಯಾಗುವ ಮೊದಲೇ ಭಿನ್ನಾಭಿಪ್ರಾಯಗಳು ಮುಗಿಲು ಮುಟ್ಟಿದ್ದರೆ ಸೌಹಾರ್ದಯುತವಾಗಿ ಬೇರೆಯಾಗಲು ಸಾಧ್ಯವಿದೆಯೇ ಎಂಬುದು ಈಗ ಎದುರಾಗಿರುವ ಪ್ರಶ್ನೆ.
ಇನ್ನು ಹೈಕೋರ್ಟ್‌ನಲ್ಲಿರುವ 37 ಮಂದಿ ನ್ಯಾಯಾಧೀಶರಲ್ಲಿ ತೆಲಂಗಾಣ ಪ್ರದೇಶಕ್ಕೆ ಸೇರಿದವರು ಕೇವಲ 7 ಮಂದಿ ಮಾತ್ರ ಇದ್ದಾರೆ. ಹೈಕೋರ್ಟ್ ಕೆಳಗಿನ ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯಲ್ಲಿ ಶೇ.80 ಮಂದಿ ಸೀಮಾಂಧ್ರ ಪ್ರದೇಶಕ್ಕೆ ಸೇರಿದವರೇ ಆಗಿದ್ದಾರೆ. ಉಭಯ ರಾಜ್ಯಗಳಿಗೆ ಬೇರೆ ಬೇರೆ ಹೈಕೋರ್ಟ್‌ಗಳು ಬೇಕು ಹಾಗಾಗಿ ಮಸೂದೆಯ 30, 31, 32, 33 ಸೆಕ್ಷನ್‌ಗಳನ್ನು ತೊಲಗಿಸಬೇಕು ಮತ್ತು ಆ ಜಾಗದಲ್ಲಿ ಮಧ್ಯಪ್ರದೇಶ್ ರಾಜ್ಯ ಪುನರ್‌ರಚನೆ ಕಾಯ್ದೆ 2000ರ ವಿಭಾಗ- 4ರಲ್ಲಿನ 21, 22, 23 ಸೆಕ್ಷನ್‌ಗಳನ್ನು ಸೇರಿಸಬೇಕು ಎಂದು ತೆಲಂಗಾಣ ಪ್ರದೇಶದ ನಾಯಕರು ಒತ್ತಾಯಿಸಿದ್ದಾರೆ. ಹಾಗಾದರೆ ಆಂಧ್ರಕ್ಕೆ ಹೈಕೋರ್ಟ್ ಎಲ್ಲಿ, ಯಾವಾಗ ನಿರ್ಮಿಸಿಕೊಡುತ್ತಾರೆ. ಸೀಮಾಂಧ್ರ ನೌಕರರ ರಕ್ಷಣೆಗೆ ಯಾವ ಕಾಯ್ದೆ ಜಾರಿಗೆ ತರುತ್ತಾರೆ ಎಂಬುದಕ್ಕೆ ಉತ್ತರವಿಲ್ಲ.
ಆಂಧ್ರ ರಾಜ್ಯ ವಿಭಜನೆ ನಡೆದು ಸೀಮಾಂಧ್ರ ಮತ್ತು ತೆಲಂಗಾಣ ರಾಜ್ಯಗಳು ಜಾರಿಗೆ ಬಂದರೆ ಉಭಯ ಪ್ರದೇಶಗಳನ್ನು ಕಾಡಲಿರುವ ಸಮಸ್ಯೆಗಳಲ್ಲಿ ಇವು ಕೇವಲ ಸ್ಯಾಂಪಲ್ ಮಾತ್ರ. ಇಂತಹ ಹಲವಾರು ಸಮಸ್ಯೆಗಳು ಭವಿಷ್ಯದಲ್ಲಿ ಎದುರಾಗಲಿವೆ. ಅವುಗಳ ಮುಂದಾಲೋಚನೆ ಇಲ್ಲದೆ ಉಭಯ ಪ್ರದೇಶಗಳ ಜನರ ಅಭಿಪ್ರಾಯ ಶೇಖರಿಸದೆ ಆತುರದ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ ಈಗಲೂ ವೇಗದಲ್ಲಿಯೇ ಮಸೂದೆಗೆ ಅಂಗೀಕಾರ ಪಡೆಯಲು ಪ್ರಯತ್ನಿಸುತ್ತಿದೆ. ಲೋಕಸಭೆಯಲ್ಲಿ ಮಸೂದೆಗೆ ಬೆಂಬಲ ಸಿಗದೆ ತಿರಸ್ಕೃತವಾಗಬಹುದೆಂದು ಊಹಿಸಿ ಮೊದಲು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯುವ ಹುನ್ನಾರ ನಡೆಸುತ್ತಿದೆ. ಆದರೆ ಇದಕ್ಕೆ ಸೀಮಾಂಧ್ರ ಪ್ರದೇಶಕ್ಕೆ ಸೇರಿದ ಕಾಂಗ್ರೆಸ್ ನಾಯಕರೇ ವಿರೋಧ ವ್ಯಕ್ತಪಡಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದು, ಇವರ ಬೇಜವಾಬ್ದಾರಿಗೆ ಸಂಸತ್ ಕಲಾಪ ಬಲಿಯಾಗುತ್ತಿದೆ.
ಕಾಂಗ್ರೆಸ್ ಈ ಆತುರದ ನಿರ್ಧಾರ ಕೈಗೊಳ್ಳಲು ಪ್ರಮುಖ ಕಾರಣ ಆಂಧ್ರದಲ್ಲಿ ಕೇವಲ ಲೋಕಸಭಾ ಚುನಾವಣೆ ಮಾತ್ರವಲ್ಲ ವಿಧಾನಸಭಾ ಚುನಾವಣೆಯೂ ನಡೆಯಲಿದೆ. ಸೀಮಾಂಧ್ರದಲ್ಲಿ ತೆಲಂಗಾಣ ರಾಜ್ಯರಚನೆಗೆ ವಿರೋಧ ವ್ಯಕ್ತವಾದರೂ ತೆಲಂಗಾಣ ರಾಷ್ಟ್ರಸಮಿತಿಯನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದಕ್ಕೆ ಕಾಂಗ್ರೆಸ್ ಆತುರದ ನಿರ್ಧಾರಗಳು ಪುಷ್ಟಿ ನೀಡುತ್ತಿವೆ. ಒಂದು ವೇಳೆ ಟಿಆರ್‌ಎಸ್ ಕಾಂಗ್ರೆಸ್‌ನಲ್ಲಿ ವಿಲೀನವಾದರೆ ತೆಲಂಗಾಣದಲ್ಲಿ ಅಧಿಕಾರ ಹಿಡಿಯುವುದರ ಜೊತೆಗೆ ಎಲ್ಲ ಸಂಸತ್ ಸ್ಥಾನಗಳನ್ನು ಕೈವಶ ಮಾಡಿಕೊಳ್ಳಬಹುದು ಎಂಬ ಯೋಚನೆ ಕಾಂಗ್ರೆಸ್‌ನದ್ದು ಎಂದು ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ಇದಕೆ ಪುಷ್ಟಿ ನೀಡುವಂತೆ ಟಿಆರ್‌ಎಸ್‌ನ ಚಂದ್ರಶೇಖರರಾವ್ ಕಳೆದ ಸೋಮವಾರ ದೆಹಲಿಗೆ ಪ್ರಯಾಣ ಬೆಳೆಸುವಾಗ 'ತಾನು ದೆಹಲಿಯಿಂದ ವಾಪಸ್ ಬಂದು ತೆಲಂಗಾಣ ರಾಜ್ಯದಲ್ಲಿಯೇ ನನ್ನ ಹೆಜ್ಜೆ ಇಡುತ್ತೇನೆ' ಎಂದು ಹೇಳಿದ್ದಾರೆ.
'ಮೊದಲು ವಿಭಜನೆಗೆ ಬೆಂಬಲ ನೀಡಿ ಲಿಖಿತಪೂರ್ವಕವಾಗಿ ಬೆಂಬಲಿಸಿದವರು ಇದೇ ಚಂದ್ರಬಾಬು ನಾಯ್ಡು. ಆದರೆ ರಾಜ್ಯಾದ್ಯಂತ ಈಗ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೂಟರ್ನ್ ತೆಗೆದುಕೊಂಡು ವಿಭಜನೆಯನ್ನು ವಿರೋಧಿಸುತ್ತಿದ್ದಾರೆ. ತೆಲಂಗಾಣದಲ್ಲಿ ತೆಲುಗುದೇಶಂ ಪಕ್ಷಕ್ಕೆ ಜನ ಬೆಂಬಲವಿಲ್ಲದ ಕಾರಣ ಅವರು ಸೀಮಾಂಧ್ರದಲ್ಲಿ ಮರ್ಯಾದೆ ಉಳಿಸಿಕೊಳ್ಳುವ ಯತ್ನಮಾಡುತ್ತಿದ್ದಾರೆ' ಎಂದು ಟಿಡಿಪಿಯನ್ನು ವೈಎಸ್‌ಆರ್ ಕಾಂಗ್ರೆಸ್ ದೂರುತ್ತದೆ.
ಇನ್ನು ವೈಎಸ್‌ಆರ್ ಕಾಂಗ್ರೆಸ್‌ನ ಜಗನಮೋಹನರೆಡ್ಡಿ ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋಗಿ ಬಂದವರು. ಅವರು ಅಖಂಡ ಆಂಧ್ರದ ಹೆಸರಿನಲ್ಲಿ ಜನರನ್ನು ತಪ್ಪುದಾರಿಗೆ ಎಳೆಯುತ್ತಾ ಕಾಂಗ್ರೆಸ್‌ನೊಂದಿಗೆ ಒಳ ಒಪ್ಪಂದಮಾಡಿಕೊಂಡಿದ್ದಾರೆ ಎಂಬುದು ಟಿಡಿಪಿ ಆರೋಪ.
ಒಟ್ಟಿನಲ್ಲಿ ಆರೋಪ ಪ್ರತ್ಯಾರೋಪಗಳಲ್ಲಿ ಮುಳುಗಿರುವ ಎಲ್ಲ ರಾಜಕೀಯ ಪಕ್ಷಗಳು ಜನಹಿತವನ್ನು ಮರೆತು ತಮ್ಮ ಸ್ವಾರ್ಥ ಸಾಧನೆಗಾಗಿ ಅಮೂಲ್ಯ ಸಮಯ ವ್ಯರ್ಥ ಮಾಡುತ್ತಿರುವುದು ಜನರ ಗಮನ ಬೇರೆಡೆ ಸೆಳೆಯಲು ಎಂಬುದರಲ್ಲಿ ಸಂಶಯವಿಲ್ಲ.


- ಅಶ್ವತ್ಥನಾರಾಯಣ ಎಲ್.,  ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement