ಯೋಧರಿಗೇಕಿಲ್ಲ ಮತದಾನದ ಸಮಾನ ಅವಕಾಶ?
ಇನ್ನು ಮೂರು ತಿಂಗಳಲ್ಲಿ, 16ನೆಯ ಲೋಕಸಭೆಯ ಸದಸ್ಯರನ್ನು ಆಯ್ಕೆ...
ಇನ್ನು ಮೂರು ತಿಂಗಳಲ್ಲಿ, 16ನೆಯ ಲೋಕಸಭೆಯ ಸದಸ್ಯರನ್ನು ಆಯ್ಕೆಮಾಡಲು ಭಾರತದ 88 ಕೋಟಿ ಅರ್ಹ ಮತದಾರರು ಮತಗಟ್ಟೆಗಳಲ್ಲಿ ಸಾಲು ನಿಲ್ಲಲ್ಲಿದ್ದಾರೆ. ಇದು ಜಗತ್ತಿನ ಅತಿದೊಡ್ಡ ಮತದಾರರ ಸಮುದಾಯವನ್ನೊಳಗೊಂಡ ಮುಕ್ತ-ನ್ಯಾಯಸಮ್ಮತವಾಗಿ ನಡೆಯುವ ಮತದಾನದ ವ್ಯಾಪಕ ಪ್ರಕ್ರಿಯೆ. ಮತ್ತು ಸಾರ್ವತ್ರಿಕ ಚುನಾವಣೆಗಳು ನಿಜವಾದ ಅರ್ಥದಲ್ಲಿ ನಮ್ಮ ಪ್ರಜಾಪ್ರಭುತ್ವದ ಸಂಭ್ರಮಾಚರಣೆಯೇ ಆಗಿದೆ.
ಇದೇನು ಸುಲಭದ ಮಾತಲ್ಲ. ಭಾರತದ ಉದ್ದಗಲಕ್ಕೂ ಹರಡಿರುವ ಪ್ರತಿಯೊಬ್ಬ ಮತದಾರನೂ ಕೂಡ ತನ್ನ ಮತದಾನ ಮಾಡುವ ಸಾಂವಿಧಾನಿಕ ಹಕ್ಕನ್ನು ಚಲಾಯಿಸಲು ಅನುಕೂಲವಾಗುವಂತೆ ಭಾರತದ ಚುನಾವಣಾ ಆಯೋಗ ಶ್ರಮಿಸುತ್ತಲೆ ಇದೆ - ಕೇವಲ ಒಬ್ಬ ಮತದಾರನಿಗಾಗಿ ಗುಜರಾತ್ನ 'ಗಿರ್' ಅರಣ್ಯ ಪ್ರದೇಶದಲ್ಲಿ ಮತಗಟ್ಟೆಯನ್ನು ಸ್ಥಾಪಿಸಿದ ಉದಾಹರಣೆ ನಮ್ಮ ಕಣ್ಣೆದುರಿಗಿದೆ.
ಆದರೆ, ಅತ್ಯಂತ ಆಶ್ಚರ್ಯಕರ ಮತ್ತು ಆಘಾತಕರ ಸಂಗತಿಯೆಂದರೆ, ಸರಿಸುಮಾರು 30 ಲಕ್ಷದಷ್ಟು ಮಂದಿ ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಲಾಗದೆ ದೂರವುಳಿದಿದ್ದಾರೆ - ಅವರೇ ನಮ್ಮ ಸಶಸ್ತ್ರ ಸೇನೆ ಮತ್ತು ಅರೆಸೇನಾ ಪಡೆಗಳ ಯೋಧರು ಮತ್ತು ಅವರ ಕುಟುಂಬಗಳು! ಈಗಲೂ ಕೂಡ ನಮ್ಮ ಸಶಸ್ತ್ರ ಸೇನೆಯ ಬಹಳಷ್ಟು ಯೋಧರಿಗೆ ಅವರ ಮೂಲಭೂತ ಪ್ರಜಾಪ್ರಭುತ್ವದ ಹಕ್ಕನ್ನು ನಿರಾಕರಿಸಲಾಗುತ್ತಿದೆ. ಸೋಜಿಗದ ಸಂಗತಿಯೆಂದರೆ ಅವರಲ್ಲಿ ಬಹಳಷ್ಟು ಜನರಿಗೆ ಮತದಾನ ಮಾಡಲು ಸಾಧ್ಯವಾಗಿದ್ದು ನಿವೃತ್ತಿಯ ನಂತರವೇ!
ನಮ್ಮಲ್ಲಿ ಅತ್ಯಂತ ಅಧಿಕವಾಗಿ ದೇಶಸೇವೆಯ ಮನೋಭಾವ ಹೊಂದಿರುವವರಲ್ಲಿ ಸೈನಿಕರೆ ಮೊದಲಿಗರು ಎಂಬುದರಲ್ಲಿ ವಿವಾದವೇ ಇಲ್ಲ. ಆದರೂ, ದೇಶದ ಚುಕ್ಕಾಣಿ ಹಿಡಿಯುವವರನ್ನು ನಿರ್ಧರಿಸುವ ಮತದಾನದ ಹಕ್ಕನ್ನು ಇವರುಗಳಿಗೆ ನಿರಾಕರಿಸಲಾಗುತ್ತಿದೆ. 1971 ರಲ್ಲಿ ಸೇವಾನಿರತ ಯೋಧರು ಕೂಡ ಇತರ ಪ್ರಜೆಗಳಂತೆ ಸಾಮಾನ್ಯ ಮತದಾರರಾಗಿ ಹೆಸರು ನೋಂದಾಯಿಸಿಕೊಳ್ಳಬಹುದೆಂದು ಸರ್ವೋಚ್ಚ ನ್ಯಾಯಾಲಯವೇ ತೀರ್ಪು ನೀಡಬೇಕಾಯಿತು ಮತ್ತು ಆಗ ಚುನಾವಣಾ ಆಯೋಗವು ಈ ಹಕ್ಕನ್ನು ಸಮರ್ಥಿಸಿತ್ತು. ಆದರೆ ನಂತರ ಆಯೋಗವು , ಯಾವುದೊ ರಾಜಕೀಯ ಪ್ರಭಾವಕ್ಕೊಳಗಾದಂತೆ ವರ್ತಿಸಿ, ಸಶಸ್ತ್ರ ಮತ್ತು ಅರೆಸೇನಾಪಡೆಗಳ ಯೋಧರು, ಒಂದು ಸ್ಥಳದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಆ ಸ್ಥಳದಲ್ಲಿ ಮೂರುವರ್ಷ ಸೇವೆ ಸಲ್ಲಿಸಿರಬೇಕು ಮತ್ತು ಅವರ ಕುಟುಂಬಗಳು ಕೂಡ ಅಲ್ಲಿ ನೋಂದಾಯಿಸಿರಬೇಕೆಂಬ ಮಾರ್ಗಸೂಚಿಗಳನ್ನು ರಚಿಸಿತು. ಈ ನಿಬಂಧನೆಯಿಂದ ಬಹುತೇಕ ಯಾವ ಸೇವಾನಿರತ ಸೈನಿಕನೂ ಕೂಡ, ತನ್ನ ಸೇವಾನಿರತ ಕ್ಷೇತ್ರದಲ್ಲಿ ಮತದಾನಕ್ಕೆ ಅರ್ಹನಾಗಲು ಸಾಧ್ಯವಿಲ್ಲ. ಏಕೆಂದರೆ, ಬಹುತೇಕ ಯೋಧರು ಮೇಲಿಂದ ಮೇಲೆ ವರ್ಗಾವಣೆಗೊಳ್ಳುತ್ತಲೇ ಇರುತ್ತಾರೆ ಮತ್ತು ಬಹಳ ಸಂದರ್ಭಗಳಲ್ಲಿ ತಮ್ಮ ಕುಟುಂಬಗಳನ್ನು ಜೊತೆಗೆ ಕರೆದೊಯ್ಯುವುದಿಲ್ಲ.
ಚುನಾವಣಾ ಆಯೋಗ ಇಂತಹ ಮಾರ್ಗಸೂಚಿಗಳನ್ನೇಕೆ ರಚಿಸಿತು ಎಂಬುದು ಇನ್ನೂ ರಹಸ್ಯವಾಗಿದೆ. ಸೇನೆ ಮತ್ತು ಅರೆಸೇನಾಪಡೆಗಳ ಯೋಧರನ್ನು ಚುನಾವಣೆಯಿಂದ ಹೊರಗಿಡುವ ಈ ಪ್ರಯತ್ನಕ್ಕೆ ರಾಜಕೀಯ ಒತ್ತಡವಿತ್ತೆನ್ನಲು ಕಾರಣವೆಂದರೆ ಇವರು ಓಟ್ ಬ್ಯಾಂಕ್ ಅಲ್ಲವಲ್ಲ! ಮತ್ತು ಇದನ್ನು ಒಪ್ಪುವುದೂ ಸಾಧ್ಯವಿಲ್ಲ, ಏಕೆಂದರೆ, ಭಾರತದ ಸಂವಿಧಾನದತ್ತವಾದ ಮತದಾನದ ಹಕ್ಕು ಎಲ್ಲ ಪ್ರಜೆಗಳಿಗೂ ಸಮಾನವಾಗಿ ಅನ್ವಯಿಸುತ್ತದೆ ಮತ್ತು ಇದಕ್ಕೆ ಯಾವ ಅಡೆತಡೆಯನ್ನು ಹಾಕುವಂತಿಲ್ಲ. ಮೂರು ವರ್ಷ ಒಂದೇ ಸ್ಥಳದಲ್ಲಿರಬೇಕು, ಕುಟುಂಬ ಜೊತೆಗಿರಬೇಕು ಎಂಬ ನಿಬಂಧನೆ ಯಾವ ಪ್ರಜೆಗಿದೆ? ನಮ್ಮ ಸೈನಿಕರು ನಾಡಿನ ಪ್ರಜೆಗಳಲ್ಲವೆ?
ಸೇನೆಯಲ್ಲಿದ್ದು ದೇಶಸೇವೆ ಮಾಡುತ್ತಿರುವ ಸುಮಾರು 30 ಲಕ್ಷ ಪುರುಷರು, ಮಹಿಳೆಯರು ಮತ್ತು ಅವರ ಕುಟುಂಬಕ್ಕೆ ನಾವು ತೋರುತ್ತಿರುವ ಅಗೌರವ. ದುರ್ದೈವವೆಂದರೆ, ಈ ವಿಷಯಕ್ಕೆ ಹೆಚ್ಚು ಪ್ರಚಾರ ಸಿಕ್ಕಿಲ್ಲ ಮತ್ತು ನನಗೂ ಕೂಡ ಇತ್ತೀಚೆಗೆ ಈ ನಿಬಂಧನೆಗಳ ಬಗ್ಗೆ ತಿಳಿಯಿತು ಎನ್ನುವುದು.
ಚುನಾವಣಾ ಆಯೋಗ ಸಶಸ್ತ್ರ ಪಡೆಗಳಿಗೆ ಅಂಚೆ ಮತದಾನ ಮತ್ತು ಬದಲಿ (ಪ್ರಾಕ್ಸಿ) ಮತದಾನದ ಅವಕಾಶವನ್ನು ನೀಡಿದೆಯಾದರೂ, ಅನೇಕ ನ್ಯೂನತೆಗಳಿರುವುದರಿಂದ ಆ ಕ್ರಮಗಳು ನಿಂತಲ್ಲೆ ನಿಂತಿವೆ. ದೂರದ ಸ್ಥಳಗಳಲ್ಲಿ ಕಾರ್ಯನಿರ್ವಸುವ ಸೈನಿಕರಿಗೆ ಮತದಾನದ ಪತ್ರಗಳನ್ನು ತಲುಪಿಸಿ ನಂತರ ಅವುಗಳನ್ನು ಪಡೆಯುವಲ್ಲಿ ಆಗುವ ವಿಳಂಬಗಳಿಂದ ಅಂಚೆ ಮತದಾನ ಪದ್ಧತಿ ಅಸಮರ್ಪಕ ಮತ್ತು ಅದಕ್ಷ ವಿಧಾನವೆಂದು ಸಾಬೀತಾಗಿದೆ. ಮತದಾನದ ಪತ್ರಗಳನ್ನು ತುಂಬಿ, ಅಯಾ ನಿಯುಕ್ತರಾದ ಅಧಿಕಾರಿಗಳಿಗೆ ನೀಡಿ, ಅವರು ಅದನ್ನು ಎಣಿಕೆ ಆರಂಭವಾಗುವ ಮುನ್ನವೆ ಎಣಿಕೆ ಕೇಂದ್ರಕ್ಕೆ ತಲುಪಿಸಬೇಕು - ನಿಗದಿತ ಸಮಯದೊಳಗೆ ಇಷ್ಟೆಲ್ಲಾ ನಡೆಯುವುದು ತೀರ ಅಪರೂಪ. ಅಭ್ಯರ್ಥಿಗಳನ್ನು ಹಿಂತೆಗೆದುಕೊಳ್ಳುವ ದಿನದಿಂದ ಮತದಾನದ ದಿನದೊಳಗೆ, ಅಂದರೆ ಸುಮಾರು 10 ದಿನದಲ್ಲಿ, ಚುನಾವಣಾ ಅಯೋಗವು ಅಂಚೆ ಮತಪತ್ರಗಳನ್ನು ಕಳುಹಿಸಿ, ಸೇನಾ ಸಿಬ್ಬಂದಿ ಅದರಲ್ಲಿ ತಮ್ಮ ಮುದ್ರೆಯೊತ್ತಿ ಮತ್ತೆ ಆಯಾ ಮತ ಎಣಿಕೆ ಕೇಂದ್ರಗಳನ್ನು ತಲುಪಬೇಕು.
ಚೀನಾ, ಪಾಕಿಸ್ತಾನ, ಬಾಂಗ್ಲಾದೇಶಗಳ ಗಡಿಗಳಲ್ಲಿ, ಈಶಾನ್ಯ ಭಾರತದ ದಟ್ಟ-ದುರ್ಗಮ ಅರಣ್ಯಗಳಲ್ಲಿ, ಸಿಯಾಚಿನ್ನಿನ ಹಿಮಶ್ರೇಣಿಗಳಲ್ಲಿ ನಮ್ಮ ದೇಶವನ್ನು ಹಗಲಿರುಳು ಕಾಯುತ್ತಲಿರುವ ನಮ್ಮ ಸೈನಿಕರ ಪರಿಸ್ಥಿತಿ-ಮನಸ್ಥಿತಿಗಳನ್ನೊಮ್ಮೆ ಊಹಿಸಿ ನೋಡಿ. ಅವರಿಗೂ, ತಾವು ಅನುಗಾಲ ಕಾಯುತ್ತಿರುವ ದೇಶದ ಆಡಳಿತದ ಹೊಣೆಹೊರುವವರನ್ನು ಆಯ್ಕೆಮಾಡುವ, ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಬಯಕೆಯಿದೆ. ಆದರೆ ವಾಸ್ತವವೆಂದರೆ, ಸಂವಿಧಾನದತ್ತವಾದ ಈ ಹಕ್ಕನ್ನು ಚಲಾಯಿಸಲು ಅವರು ನಿವೃತ್ತರಾಗುವ ತನಕ ಕಾಯಬೇಕು. ಎರಡನೆಯ ಮಹಾಯುದ್ಧದ ಸಮಯದಲ್ಲಿಯೇ, ಸಂಚಾರಿ ಮತಗಟ್ಟೆಗಳಲ್ಲಿ ಬ್ರಿಟಿಷ್ ಯೋಧರು ಮತಚಲಾಯಿಸಿದ್ದರು. ಆರು ದಶಕಗಳು ಕಳೆದರೂ, ಭಾರತೀಯ ಸೇನೆಯ ಯೋಧರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಾವು ನಿರ್ಲಕ್ಷಿತರೆಂಬ ಭಾವನೆ ಹೊಂದುವಂತಹ ಪರಿಸ್ಥಿತಿಯಿದೆ!
ಹತ್ತು ವರ್ಷಗಳ ಹಿಂದೆ ಚುನಾವಣಾ ಆಯೋಗ ಹೇಳಿದ್ದೆಂದರೆ, "ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಸೇನಾ ಸಿಬ್ಬಂದಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ ಮತ್ತು ಇನ್ನೂ ಕಡಿಮೆ ಯೋಧರು ಸಕಾಲದಲ್ಲಿ ಅಂಚೆ ಮತಪತ್ರಗಳನ್ನು ಪಡೆದು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಚಾರದ ಅವಧಿಯನ್ನು 14 ದಿನಗಳಿಗೆ ತಗ್ಗಿಸಿರುವುದರಿಂದ, ಸೇವಾನಿರತ ಯೋಧರಿಗೆ ಅಂಚೆ ಮತಪತ್ರಗಳ ಮೂಲಕ ಮತದಾನದ ವ್ಯವಸ್ಥೆ ಬಹುತೇಕ ಅಪ್ರಾಯೋಗಿಕವಾಗಿದೆ."
ನಂತರ, ಚುನಾವಣಾ ಕಾನೂನುಗಳು (ತಿದ್ದುಪಡಿ) ಕಾಯಿದೆ-2003ರ ಅನ್ವಯ ಬದಲಿ ಮತದಾನದ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಯಿತು. 2009ರಲ್ಲಿ ಆಯೋಗವು, "ಸೇನಾ ಸಿಬ್ಬಂದಿ ತಾವು ಸೇವೆಯಲ್ಲಿರುವ ಸ್ಥಳದ ಮತಪಟ್ಟಿಯಲ್ಲಿ ಸಾಮಾನ್ಯ ಮತದಾರರಂತೆ ನೋಂದಾಯಿಸಿಕೊಳ್ಳಬಹುದು" ಎಂದು ಹೇಳಿ, ಕಮಾಂಡಿಂಗ್ ಅಧಿಕಾರಿಗಳನ್ನು ಸಂಪರ್ಕಿಸಿ, ಈ ವಿಷಯದ ಕುರಿತು ತಮ್ಮ ಹಕ್ಕು ಮತ್ತು ಆಯ್ಕೆಗಳ ಕುರಿತು ಸೈನಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ಕೋರಿತು.
ಅದಾಗಿಯೂ, ವಾಸ್ತವದಲ್ಲಿ ಪರಿಸ್ಥಿತಿ ಹೆಚ್ಚು ಬದಲಾಗಿಲ್ಲ. ಇನ್ನೂ ಕೂಡ ಭಾರತದ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಬಹಳಷ್ಟು ಸೈನಿಕರು ಮತ್ತು ಅಧಿಕಾರಿಗಳು ತಮ್ಮ ಇಡೀ ಯೌವ್ವನ ಮತ್ತು ಪ್ರೌಢಾವಸ್ಥೆಯಲ್ಲಿ ಚುನಾವಣಾ ಪ್ರಕ್ರಿಯೆಯಿಂದ ಹೊರಗೇ ಉಳಿದಿದ್ದಾರೆ. ನಿವೃತ್ತರಾದ ನಂತರವಷ್ಟೆ ಅವರಿಗೆ ಮತದಾನದ ಹಕ್ಕು ಲಭ್ಯ!
ಮುಂಬರುವ ಚುನಾವಣೆಯ ಮತ್ತೊಂದು ಅವಕಾಶವನ್ನು ನಾವು ಕಳೆದುಕೊಳ್ಳುವುದು ಬೇಡ. ಈ ಲೋಕಸಭಾ ಚುನಾವಣೆಯಲ್ಲಿ ನಮ್ಮ ಸಶಸ್ತ್ರ ಸೇನಾಪಡೆಗಳ ಯೋಧರು ಮತದಾನ ಮಾಡುವಂತಾಗಲು ಈ ಕೆಳಗಿನ ಕೆಲವು ಕಾರ್ಯಸಾಧ್ಯ ಪರಿಹಾರ ಮಾರ್ಗಗಳನ್ನು ಚುನಾವಣಾ ಆಯೋಗವು ಅಳವಡಿಸಿಕೊಳ್ಳಬೇಕು:
ಟ ಸಶಸ್ತ್ರ ಸೇನಾಪಡೆ ಮತ್ತು ಅರೆಸೇನಾಪಡೆಗಳ ಯೋಧರ ಮತ್ತು ಅವರ ಕುಟುಂಬದವರ ಮತದಾನದ ಹಕ್ಕಿನ ಮೇಲಿರುವ ಯಾವುದೇ ನಿಬಂಧನೆಗಳನ್ನು ಚುನಾವಣಾ ಆಯೋಗ ತೆಗೆದುಹಾಕಬೇಕು. ಯಾವುದೇ ಅಡೆತಡೆಯಿಲ್ಲದೆ ಅವರುಗಳು ತಾವು ಸೇವೆಸಲ್ಲಿಸುತ್ತಿರುವ ಸ್ಥಳಗಳಲ್ಲಿಯೇ, ಇತರ ಸಾಮಾನ್ಯ ಪ್ರಜೆಯಂತೆಯೇ, ತಮ್ಮ ಸಾಂವಿಧಾನಿಕ ಮತದಾನದ ಹಕ್ಕನ್ನು ಚಲಾಯಿಸುವಂತಿರಬೇಕು.
ಟ ಅಮೆರಿಕ, ಇಂಗ್ಲೆಂಡ್, ಇಸ್ರೇಲ್ ಮುಂತಾದ ಪ್ರಜಾಪ್ರಭುತ್ವ ದೇಶಗಳಲ್ಲಿ ಸಶಸ್ತ್ರ ಸೇನಾಪಡೆಗಳ ಯೋಧರು ಮತಗಟ್ಟೆಗಳಿಗೆ ಸಮವಸ್ತ್ರದಲ್ಲೆ ಬಂದು ಮತಚಲಾಯಿಸಬಹುದೆಂದರೆ ಭಾರತೀಯ ಯೋಧರಿಗೇಕೆ ಈ ಅವಕಾಶವಿಲ್ಲ? ದಂಡು ಪ್ರದೇಶ, ಆಯಾ ಘಟಕಗಳ ಪ್ರಧಾನ ಕೇಂದ್ರಗಳು ಮತ್ತು ಸೇನಾತುಕಡಿಯ ಕೇಂದ್ರ ಕಚೇರಿ ಮುಂತಾದ ಸೇನಾಪ್ರದೇಶಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಬೇಕು.
ಟ ಸೇನಾ ಅಧಿಕಾರಿಗಳ/ಜವಾನರ ಹೆಂಡತಿ ಮತ್ತು ಕುಟುಂಬದವರಿಗೆ ಅವರು ಆ ಸಂದರ್ಭದಲ್ಲಿ ವಾಸಿಸುತ್ತಿರುವ ಸ್ಥಳಗಳಲ್ಲೆ ಮತದಾನ ಮಾಡುವ ಅವಕಾಶ ಕಲ್ಪಿಸಬೇಕು.
ಟ ತಕ್ಷಣದಿಂದಲೆ ಚುನಾವಣಾ ಆಯೋಗವು ಸೇನಾಪಡೆಗಳ ಪ್ರಧಾನ ಕಚೇರಿಗಳ ಸಹಕಾರದಿಂದ ಸೇನಾತುಕಡಿಗಳ ನೋಂದಣಿಯನ್ನಾರಂಭಿಸಬೇಕು ಮತ್ತು ಸ್ಥಳೀಯ ಘಟಕ ಮುಖ್ಯಸ್ಥರ ಬಳಿಯಿರುವ ಸೇವಾನಿರತ ಪುರುಷ/ಮಹಿಳೆಯರ ಪಟ್ಟಿಯನ್ನೇ ಮತದಾರರ ಪಟ್ಟಿಯನ್ನಾಗಿ ಬಳಸಬೇಕು.
ಟ ಸಶಸ್ತ್ರ ಪಡೆಗಳ ಕೇಂದ್ರ ಕಚೇರಿಯು ತನ್ನೆಲ್ಲಾ ಘಟಕಗಳಿಗೆ ಮತದಾರ ನೋಂದಣಿಯನ್ನು ಪ್ರಾರಂಭಿಸಲು ಸೂಚಿಸಬೇಕು.
ಟ ಮತದಾನ ಪ್ರಕ್ರಿಯೆಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲು ಮತ್ತು ಹೊಸ ನೋಂದಣಿ ಪಟ್ಟಿ ರಚನೆಯನ್ನು ಖಚಿತಪಡಿಸಲು ಪ್ರತಿ ಘಟಕಗಳಲ್ಲಿಯೂ ಒಬ್ಬ ಅಧಿಕಾರಿಯನ್ನು ರೆಜಿಮೆಂಟಲ್ ಅಧಿಕಾರಿಯನ್ನಾಗಿ ನೇಮಿಸಬೇಕು.
ನಮ್ಮ ಸಶಸ್ತ್ರ ಸೇನಾಪಡೆಗಳಿಗೆ ಮತದಾನಕ್ಕೆ ಅನುವು ಮಾಡಿಕೊಟ್ಟಲ್ಲಿ ಅವುಗಳಿಗೆ ಕೂಡ ರಾಜಕೀಯದ ಬಣ್ಣ ಮೆತ್ತಿಕೊಳ್ಳುತ್ತದೆ ಎಂದು ವಾದಿಸುವವರು ನಮ್ಮ ಧೀರ ಯೋಧರಿಗೆ ದೊಡ್ಡ ಅನ್ಯಾಯ ಮಾಡುತ್ತಿದ್ದಾರೆ. ದೇಶ-ರಕ್ಷಣೆಯ ಮಹಾನ್ ಕರ್ತವ್ಯದಲ್ಲಿ ಅವರ ಮೇಲೆ ನಾವು ವಿಶ್ವಾಸವಿಟ್ಟಿರುವಾಗ, ತಮ್ಮ ಸಾಂವಿಧಾನಿಕ ಮತದಾನದ ಹಕ್ಕನ್ನು ಚಲಾಯಿಸುವಾಗಲೂ, ಇತರ ಪ್ರಜೆಗಳಂತೆಯೇ ಸೈನಿಕರೂ ಕೂಡ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರೆಂಬ ವಿಶ್ವಾಸವಿರಬೇಕು. ಭಾರತ ಒಂದು ಪ್ರಬುದ್ಧ ಪ್ರಜಾಪ್ರಭುತ್ವ. ಅಂತೆಯೇ ನಮ್ಮ ರಕ್ಷಣಾ ಪಡೆಗಳ ಪ್ರಬುದ್ಧ ಯೋಧರು ಕೂಡ ದಶಕಗಳಿಂದ ತಾವು ರಾಜಕೀಯದಿಂದ ದೂರವಿರುವ, ಅತ್ಯುತ್ತಮ ಶಿಸ್ತನ್ನೆ ಮೈಗೂಡಿಸಿಕೊಂಡಿರುವ ಮತ್ತು ರಾಷ್ಟ್ರಕ್ಕೆ ಬದ್ಧವಾಗಿರುವವರೆಂಬುದನ್ನು ತೋರಿಸಿಕೊಟ್ಟಿದ್ದಾರೆ.
ಪ್ರಸಕ್ತ ಪರಿಸ್ಥಿತಿಯು ಭಾರತದ ಸೇನಾಪಡೆಗಳ ಯೋಧರ ಸಾಂವಿಧಾನಿಕ ಮತದಾನದ ಹಕ್ಕುಗಳಿಗೆ ವ್ಯತಿರಿಕ್ತವಾಗಿದೆ. ಇದು ಸ್ವೀಕಾರಾರ್ಹವೂ ಅಲ್ಲ, ಇದನ್ನು ಸಹಿಸುವುದೂ ಸಾಧ್ಯವಿಲ್ಲ. ಚುನಾವಣಾ ಆಯೋಗ ಅವಶ್ಯ ಕ್ರಮಗಳನ್ನು ಈ ಕೂಡಲೇ ತೆಗೆದುಕೊಂಡು, ಭಾರತೀಯ ಸೇನೆಯ ಯೋಧರೂ ಕೂಡ ನಮ್ಮ ಪ್ರಜಾಪ್ರಭುತ್ವದ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಅನುವುಮಾಡಿಕೊಡಬೇಕು.
-ರಾಜೀವ್ ಚಂದ್ರಶೇಖರ್
ಸಂಸತ್ ಸದಸ್ಯರು, ರಾಜ್ಯಸಭೆ
rajeev.c@sansad.nic.in