ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅರಾಜಕತೆಯ ನಡುವೆ ಪ್ರಾಮಾಣಿಕತೆಯ ಪಾಠ?

Vishwanath S
Updated On : 7 Feb 2014, 12:29 pm

"ಆತ ಭ್ರಷ್ಟ, ಈತ ಭ್ರಷ್ಟ" ಎಂದು ಇನ್ನೊಬ್ಬರ ಹುಳುಕುಗಳನ್ನು ಎತ್ತಿ ತೋರಿಸುತ್ತಿರುವ ಅರವಿಂದ್ ಕೇಜ್ರಿವಾಲ್ ಬದಲಾವಣೆಯ ಆಶಾಭಾವನೆ ಹೊಂದಿರುವ ಯುವ ಜನತೆಯನ್ನು ಹಾದಿ ತಪ್ಪಿಸುತ್ತಿದ್ದಾರೆಯೇ? ಮುಖ್ಯಮಂತ್ರಿಯಾದ ನಂತರವಾದರೂ ಮಾಡಬೇಕಾದ ಸಾಕಷ್ಟು ಕೆಲಸಗಳ ಬಗ್ಗೆ ಗಮನ ಹರಿಸಬೇಕಿತ್ತಲ್ಲವೇ?
ದೆಹಲಿಯನ್ನು ಹೇಗೆ ಅಭಿವೃದ್ಧಿಪಡಿಸುತ್ತೇವೆ, ಭ್ರಷ್ಟಾಚಾರವನ್ನು ದೆಹಲಿಯಿಂದ ಹೇಗೆ ನಿರ್ಮೂಲನೆ ಮಾಡುತ್ತೇವೆ ಎಂಬುದನ್ನು ಅವರು ಈವರೆಗೂ ಸ್ಪಷ್ಟಪಡಿಸಿಲ್ಲ. ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮವೇನು, ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆಯೇನು, ಹಂತ ಹಂತವಾಗಿ ಉದ್ಯೋಗ ಸೃಷ್ಟಿಸುವ ಯೋಜನೆಗಳೇನು,  ದೆಹಲಿಯ ಸ್ಲಮ್‌ವಾಸಿಗಳಿಗೆ ಯಾವ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ? ಈ ಯಾವುದರ ಬಗ್ಗೆ ಚಿಂತನೆಯಾಗಲಿ, ಯೋಜನೆಗಳಾಗಲಿ ಎಎಪಿಯಿಂದ ಬಂದಿಲ್ಲ.
ವ್ಯಕ್ತಿಯೊಬ್ಬ ತಪಸ್ಸು ಮಾಡಿ ದೇವರನ್ನು ಒಲಿಸಿಕೊಂಡು, ತಾನು ಬೇಲಿ ಹಾಕಿದಷ್ಟು ಭೂಮಿ ತನಗೆ ನೀಡು ಎಂದು ವರವನ್ನು ಕೇಳುತ್ತಾನೆ. ದೇವರು ಅಸ್ತು ಎಂದ ನಂತರ ಬೇಲಿ ಹಾಕಿ ತನ್ನ ಜಾಗವನ್ನು ಭದ್ರಪಡಿಸಿಕೊಳ್ಳುತ್ತಾ ಹೋಗುತ್ತಾನೆ. ಒಂದು ಎಕರೆ, ಹತ್ತು ಎಕರೆ, ನೂರು ಎಕರೆ ಹೀಗೆ ಅವನ ಆಸೆ ತಣಿಯದೆ ಬೇಲಿ ಹಾಕುತ್ತಲೇ, ಕೊನೆಗೊಂದು ದಿನ ಸಾಯುತ್ತಾನೆ. ಅವನು ತನ್ನದೆಂದು ಗುರುತು ಮಾಡಿದ ಜಾಗದಲ್ಲಿ ಮನೆಯನ್ನೂ ಕಟ್ಟಲಿಲ್ಲ, ಬೆಳೆಯನ್ನೂ ಬೆಳೆಯಲಿಲ್ಲ. 72 ವಿಧಾನಸಭಾ ಕ್ಷೇತ್ರಗಳಿರುವ ದೆಹಲಿಯಲ್ಲಿ ಬಾಹ್ಯ ಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಒಂದು ತಿಂಗಳಿನಲ್ಲೇ 543 ಲೋಕಸಭಾ ಕ್ಷೇತ್ರಗಳ ಚುನಾವಣೆ ಎದುರಿಸಲು ಎಎಪಿ ತಯಾರಾಗುತ್ತಿರುವುದನ್ನು ಗಮನಿಸಿದರೆ ಮೇಲಿನ ಕತೆ ಕೇಜ್ರಿವಾಲ್ ಮತ್ತು ಎಎಪಿಗೆ ಸೂಕ್ತವಾಗುತ್ತದೆ.  
ಮುಂದಿನ ಪ್ರಧಾನಮಂತ್ರಿಯಾಗಲು ಯಾರು ಸೂಕ್ತ ವ್ಯಕ್ತಿ ಎಂದು ನಡೆಯುತ್ತಿರುವ ಚರ್ಚೆಯಲ್ಲಿ ಕೇಜ್ರಿವಾಲ್ ಹೆಸರನ್ನೂ ತೂರಿಬಿಡಲಾಗುತ್ತಿದೆ. ಪ್ರಾಮಾಣಿಕತೆಯೊಂದೇ ಪ್ರಧಾನಿ ಹುದ್ದೆಗೆ ಅರ್ಹತೆಯೇ?  ಹಾಗಿದ್ದರೆ, ಮನಮೋಹನ್ ಸಿಂಗ್ ಅವರೂ ಪ್ರಾಮಾಣಿಕರು.  ಆದರೆ ಕಳೆದ ಹತ್ತು ವರ್ಷಗಳ ಅವರ ಆಡಳಿತದ ಬಗ್ಗೆ ಬಿಡಿಸಿ ಹೇಳಬೇಕಾದ ಅಗತ್ಯವಿದೆಯೇ? ಪ್ರಾಮಾಣಿಕರಾಗಿದ್ದರಷ್ಟೇ ಸಾಲದು, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಸಾಮರ್ಥ್ಯವುಳ್ಳವರು, ಸಾಮಾನ್ಯ ಜನರ ಬಗ್ಗೆ ಕಾಳಜಿಯುಳ್ಳವರೂ ಆಗಿರಬೇಕು. ದೆಹಲಿ ಮುಖ್ಯಮಂತ್ರಿಯಾದ ನಂತರವೂ ಜನಪರ ಆಡಳಿತ ಹಾಗೂ ಅಭಿವೃದ್ಧಿಯ ಬಗ್ಗೆ ನೀಲ ನಕಾಶೆಯನ್ನೂ ಹೊಂದಿರದ, ಬೀದಿ ರಂಪಾಟಗಳಲ್ಲಿ ತೊಡಗಿರುವ ಅರವಿಂದ್ ಕೇಜ್ರಿವಾಲ್‌ರನ್ನು ಪ್ರಧಾನಿ ಹುದ್ದೆಗೆ ಅರ್ಹ ವ್ಯಕ್ತಿ ಎಂದು ಕರೆಯಲು ಸಾಧ್ಯವೇ?
ದೂರ ದೃಷ್ಟಿಯ ಜನಪರ ಯೋಜನೆಗಳು ಹಾಗೂ ಅವುಗಳ ಅನುಷ್ಠಾನದ ಮೂಲಕ ಜನಮನ್ನಣೆ ಗಳಿಸುತ್ತಾ, ಭಿನ್ನಮತಕ್ಕೆ ಅವಕಾಶ ಕೊಡದೆ ಸಮರ್ಥ ನಾಯಕತ್ವದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ "ವೈಬ್ರಂಟ್ ಗುಜರಾತ್‌" ಹಿಂದೆ ಮೋದಿಯವರ ಹನ್ನೆರಡು ವರ್ಷಗಳ ಶ್ರಮವಿದೆ. ಪ್ರಧಾನಿಯಾದರೆ ತಮ್ಮಿಂದ ನಿರೀಕ್ಷಿಸಬಹುದಾದದ್ದು ಏನು ಎಂಬುದನ್ನು ದೇಶದ ಜನರಲ್ಲಿ ಮನವರಿಕೆ ಮಾಡಿಕೊಡುತ್ತಿರುವ ಮೋದಿಯವರೊಂದಿಗೆ ಕೇಜ್ರಿವಾಲ್ ಹೆಸರು ತೇಲಿ ಬರುತ್ತಿರುವುದು ಹಾಸ್ಯಾಸ್ಪದವೆನಿಸುತ್ತಿದೆ. ದೆಹಲಿ ಚುನಾವಣೆಗೂ ಮುನ್ನ ಕಾಂಗ್ರೆಸ್‌ನ ಭ್ರಷ್ಟಾಚಾರದ ವಿರುದ್ಧ ಮಾತನಾಡಿ, ನಂತರ ಅದರ ಹುಳುಕಿನ ಅಡಿಪಾಯದ ಮೇಲೆಯೇ ಅಧಿಕಾರದ ಸೌಧ ನಿರ್ಮಿಸಿಕೊಂಡಿರುವ ಕೇಜ್ರಿವಾಲ್ ಇದೀಗ ದೇಶದ ಪ್ರಮುಖ ರಾಜಕಾರಣಿಗಳ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಇದನ್ನು ತಪ್ಪು ಎನ್ನುತ್ತಿಲ್ಲ. ಆದರೆ ಜವಾಬ್ದಾರಿಯುತ ಹುದ್ದೆಯಲ್ಲಿರುವ ತಾವು ಆ ರೀತಿ ಮಾತನಾಡುವಾಗ ಸರಿಯಾದ ಆಧಾರಗಳನ್ನು ಒದಗಿಸದೇ, ಅವರಿಗೆ ಮತದಾನ ಮಾಡಬೇಡಿ, ಇವರನ್ನು ದೂರವಿಡಿ ಎಂದು ಹೇಳುವುದು ಎಷ್ಟು ಸರಿ?  ಅವರ ಪಟ್ಟಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಹೆಸರೂ ಇದೆ. ಕೇಜ್ರಿವಾಲ್ ಮಾತೆತ್ತಿದರೆ ಜನಸಾಮಾನ್ಯರ ಬಗ್ಗೆ ಮಾತನಾಡುತ್ತಾರೆ. ಆದರೆ ಜನಸಾಮಾನ್ಯರನ್ನು ಹೇಗೆ ತಲುಪಬೇಕು ಎನ್ನುವುದೇ ಅವರಿಗೆ ತಿಳಿದಿಲ್ಲ. "ಜನತಾ ದರ್ಬಾರ್‌" ನಡೆಸಿ ಕೆಲ ಹೊತ್ತಿನಲ್ಲೇ ವೈಫಲ್ಯ ಕಂಡ ಕೇಜ್ರಿವಾಲ್ ನಿಜವಾಗಲೂ ಸಾಮಾನ್ಯ ಜನರ ಬಳಿಗೆ ಅಧಿಕಾರವನ್ನು ಹೇಗೆ ಕೊಂಡೊಯ್ಯಬಹುದು ಎಂಬುದನ್ನು ಹೆಚ್.ಡಿ.ಕೆ.ಯಿಂದ ತಿಳಿದುಕೊಳ್ಳಬೇಕಾಗಿದೆ. ಬಡವರು, ಅಂಗವಿಕಲರ ಆದಿಯಾಗಿ ಎಲ್ಲಾ ವರ್ಗಗಳ ಶ್ರೀಸಾಮಾನ್ಯ ಜನರು ತಮ್ಮ ಸಂಕಷ್ಟಗಳನ್ನು ನೇರವಾಗಿ ರಾಜ್ಯದ ಆಡಳಿತ ಕೇಂದ್ರಕ್ಕೆ ಬಂದು ಮುಖ್ಯಮಂತ್ರಿ, ಸಚಿವರನ್ನು ಕಂಡು ಪರಿಹಾರ ಕಾಣುವ "ಜನತಾ ದರ್ಶನ" ಎಂಬ ಕಾರ್ಯಕ್ರಮವನ್ನು ಹೆಚ್‌ಡಿಕೆ 2006ರಲ್ಲೇ ಆರಂಭಿಸಿದ್ದರು. ಗ್ರಾಮ ವಾಸ್ತವ್ಯದ ಮೂಲಕ ಆಡಳಿತ ಕೇಂದ್ರವನ್ನು ಹಳ್ಳಿಗಳಿಗೆ ಕೊಂಡೊಯ್ದರು.
ಒಂದೇ ಯೋಜನೆಯಡಿ ಹಳ್ಳಿಯೊಂದಕ್ಕೆ ಸಮರ್ಪಕ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಉತ್ತಮ ರಸ್ತೆ, ಶೌಚಾಲಯ, ಶಾಲೆ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸುವ ಸುವರ್ಣ ಗ್ರಾಮ ಯೋಜನೆ ಜಾರಿಗೊಳಿಸಿ, ಆ ಮೂಲಕ ಗಾಂಧೀಜಿಯವರ ಗ್ರಾಮಾಭಿವೃದ್ಧಿ ಕಲ್ಪನೆಯನ್ನು ವಾಸ್ತವದಲ್ಲಿ ಜಾರಿಗೆ ತಂದು, ಅಂದಿನ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ಪ್ರಶಂಸಿಸಲ್ಪಟ್ಟವರು ಹೆಚ್.ಡಿ.ಕುಮಾರಸ್ವಾಮಿ. ಐಐಟಿಯಲ್ಲಿ ಓದಿರುವುದನ್ನೇ ಬದಲಾವಣೆಯ ಅಸ್ತ್ರ ಎನ್ನುವಂತೆ ಕೇಜ್ರಿವಾಲರನ್ನು ಬಿಂಬಿಸಲಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆ ಹಾಗೂ ವಿದ್ಯಾವಂತ ಯುವ ಜನತೆಯ ಭವಿಷ್ಯದ ಬಗ್ಗೆ ಕೇಜ್ರಿವಾಲರ ಅಭಿಪ್ರಾಯವೇನೆಂದೇ ತಿಳಿದಿಲ್ಲ. ಸಮಗ್ರ ಅಭಿವೃದ್ಧಿಯ ಕಲ್ಪನೆ ಹೊಂದಿದ್ದ ಹೆಚ್.ಡಿ.ಕೆ. ಅವರ ಇಪತ್ತೇ ತಿಂಗಳ ಸರ್ಕಾರದಲ್ಲಿ 1000 ಪ್ರೌಢಶಾಲೆಗಳು, 260 ಪದವಿ ಕಾಲೇಜು, 500ಕ್ಕೂ ಹೆಚ್ಚು ಪದವಿ ಪೂರ್ವ ಕಾಲೇಜುಗಳ ನಿರ್ಮಾಣ ಕಾರ್ಯ ಆರಂಭವಾಯಿತು. ಅರವತ್ತು ವರ್ಷಗಳ ಅವಧಿಯಲ್ಲಿ 900 ಪ್ರೌಢಶಾಲೆಗಳಷ್ಟೇ ಇದ್ದ ಕರ್ನಾಟಕದಲ್ಲಿ ಇದೊಂದು ದಾಖಲೆ ಎನಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕೇಜ್ರಿವಾಲ್ ದೆಹಲಿ ನಗರದ ಅಭಿವೃದ್ಧಿಯ ಬಗ್ಗೆ ಈವರೆಗೂ ಮಾತನಾಡಿಲ್ಲ. ಕುಮಾರಸ್ವಾಮಿಯವರು ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ, ಸುಮಾರು 40 ಸಾವಿರ ಎಕರೆಗೂ ಹೆಚ್ಚು ಭೂಮಿ ಅತಿಕ್ರಮಣವಾಗಿರುವುದನ್ನು ಪತ್ತೆ ಹಚ್ಚಿದರು. ತೆವಳುತ್ತಾ ಸಾಗಿದ್ದ ಬೆಂಗಳೂರು ಜನರ ಬಹುನಿರೀಕ್ಷಿತ "ನಮ್ಮ ಮೆಟ್ರೋ" ಯೋಜನೆಗೆ ಇದೇ ಅವಧಿಯಲ್ಲಿ ಚಾಲನೆ ಸಿಕ್ಕಿದ್ದಲ್ಲದೇ, ಕಾವೇರಿ ನಾಲ್ಕನೇ ಹಂತದ ಕುಡಿಯುವ ನೀರು ಯೋಜನೆಗೂ ಆರಂಭ ದೊರಕಿತು. ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದ್ದ ಬೆಂಗಳೂರು ಮಹಾನಗರ ಪಾಲಿಕೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂದು ಮರುನಾಮಕರಣ ಮಾಡಿ, ವಾರ್ಡುಗಳ ಸಂಖ್ಯೆಯನ್ನು 100ರಿಂದ 197ಕ್ಕೆ ಹೆಚ್ಚಿಸಿ, 7 ನಗರಸಭೆಗಳು, 1 ಪಟ್ಟಣ ಪಂಚಾಯಿತಿ, 110 ಹಳ್ಳಿಗಳನ್ನು ಬಿ.ಬಿ.ಎಂ.ಪಿ.ಯ ವ್ಯಾಪ್ತಿಗೆ ಸೇರಿಸಿದರು. ಕೇಜ್ರಿವಾಲ್ ಇಂತಹ ಜನಪರ ಕೆಲಸಗಳನ್ನೇಕೆ ಮಾಡುತ್ತಿಲ್ಲ? ತಾವೊಬ್ಬ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರೂ ದುರ್ಗಾಶಕ್ತಿ, ಅಶೋಕ್ ಖೇಮ್ಕಾ ಅವರ ಬೆಂಬಲಕ್ಕೆ ನಿಲ್ಲದಿರುವ ಕೇಜ್ರಿವಾಲ್‌ರಿಂದ ಹೆಚ್.ಐ.ವಿ. ಪೀಡಿತರ ಮನೆಯಲ್ಲಿ ವಾಸ್ತವ್ಯ ಹೂಡಿ ಆತ್ವವಿಶ್ವಾಸ ತುಂಬಿದ ಹೆಚ್.ಡಿ.ಕೆ. ಅವರಂತಹ ಜನಪರ ಕಾಳಜಿಯುವಳ್ಳವರನ್ನೂ "ಸೋಲಿಸಿ" ಎಂಬ ಮಾತುಗಳು ಕೇಳಿ ಬಂದಿವೆ.
ತಾವು ಪ್ರಾಮಾಣಿಕ ಎಂದು ಬಿಂಬಿಸಿಕೊಳ್ಳುತ್ತಿರುವ ಕೇಜ್ರಿವಾಲ್ ತಮ್ಮ  "ಸ್ವರಾಜ್‌" ಪುಸ್ತಕದ ಹಲವು ಅಂಶಗಳನ್ನು ಅಜಯ್‌ಪಾಲ್‌ನಗರ್ ಎಂಬುವವರ "ಭಾರತೀಯ ರಾಜ ವ್ಯವಸ್ಥೆ" ಎಂಬ ಪುಸ್ತಕದಿಂದ  ಕೃತಿಚೌರ್ಯ ಮಾಡಿದ್ದಾರೆ ಎಂಬ ಆರೋಪವಿದೆ. ಇದಕ್ಕೇಕೆ ಅವರು ಸ್ಪಷ್ಟೀಕರಣವನ್ನು ನೀಡುತ್ತಿಲ್ಲ?
ಇಂದು ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದೆ ಎಂದರೆ ಅದರ ಮೂಲ ಕಾರಣಕರ್ತರು ಡಾ. ಹರ್ಷವರ್ಧನ್.  ವ್ಯವಸ್ಥೆಯಲ್ಲಿ ಬದಲಾವಣೆಯ ಕಾಳಜಿಯುಳ್ಳ ಹಾಗೂ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಿಸಿ ದೆಹಲಿ ಜನರು ಬೆಂಬಲಿಸಿದ್ದ ಡಾ. ಹರ್ಷವರ್ಧನ್ ಅವರೊಂದಿಗೆ ಸರ್ಕಾರ ರಚಿಸಿ ಭ್ರಷ್ಟಾಚಾರದ ಬಗ್ಗೆ ಇನ್ನೊಬ್ಬರಿಗೆ ಪಾಠ ಹೇಳಿದ್ದರೆ ಒಪ್ಪಬಹುದಿತ್ತು. ಕಾಂಗ್ರೆಸ್ ವಿರೋಧಿ ಮತಗಳನ್ನೇ ಪಡೆದು, ಕಾಂಗ್ರೆಸ್ ಬೆಂಬಲದಿಂದಲೇ ಮುಖ್ಯಮಂತ್ರಿಯಾಗಿರುವ ಕೇಜ್ರಿವಾಲ್, ಶೀಲಾ ದೀಕ್ಷಿತ್ ಹಗರಣಗಳ ಬಗ್ಗೆ ತುಟಿ ಪಿಟಕ್ ಎನ್ನದೆ ಇದೀಗ ಮತ್ತೊಬ್ಬರ ಬಗ್ಗೆ ಮಾತನಾಡುತ್ತಿದ್ದಾರೆ? ದೇಶದಲ್ಲಿ ಶಾಸ್ತ್ರಿ, ಇಂದಿರಾಗಾಂಧಿ, ಪಿ.ವಿ.ನರಸಿಂಹರಾವ್, ವಾಜಪೇಯಿಯವರನ್ನು ಜನ ಮತ್ತೆ ಮತ್ತೆ ನೆನೆದರೆ, ರಾಜ್ಯದಲ್ಲಿ ದೇವರಾಜ ಅರಸು ಅವರ ಸಾಮಾಜಿಕ ಪರಿಕಲ್ಪನೆ, ರಾಮಕೃಷ್ಣ ಹೆಗಡೆ ಅವಧಿಯ ಜನಪರ ಕಾರ್ಯಕ್ರಮಗಳು, ಎಸ್.ಎಂ.ಕೃಷ್ಣ ಅವರ ಲಯ ತಪ್ಪದ ಆಡಳಿತ, ಹೆಚ್.ಡಿ.ಕುಮಾರಸ್ವಾಮಿಯವರ ಇಪ್ಪತ್ತೇ ತಿಂಗಳ ಆಡಳಿತವನ್ನು ಇಂದಿಗೂ ಜನ ನೆನೆಯುತ್ತಾರೆ. ಆಗೆಲ್ಲಾ ಭ್ರಷ್ಟಾಚಾರ ಇರಲಿಲ್ಲವೆಂದಲ್ಲ, ಆಡಳಿತದಲ್ಲಿ ದಕ್ಷತೆ ಇತ್ತು. ದೂರದೃಷ್ಟಿಯ ಯೋಜನೆಗಳಿದ್ದವು.
ಎಎಪಿಯವರು ಕಾರ್ಯಕರ್ತರೇ ಹೈಕಮಾಂಡ್ ಎಂದರು, ಆದರೆ ವಿನೋದ್ ಕುಮಾರ್ ಬಿನ್ನಿಯನ್ನು ಉಚ್ಛಾಟಿಸುವಾಗ ಯಾರ ಅಭಿಪ್ರಾಯವನ್ನೂ ಕೇಳಲಿಲ್ಲ. ಇತರೆ ಪಕ್ಷಗಳಂತೆಯೇ ಎಎಪಿಯೂ ಹೈಕಮಾಂಡ್ ಮನಸ್ಥಿತಿಯನ್ನು ಹೊಂದುತ್ತಿರುವುದರಿಂದ ಬೇಸತ್ತು ಪಕ್ಷ ಕಟ್ಟಿದವರಲ್ಲಿ ಒಬ್ಬರಾದ ಮಧು ಬಾದುರಿ ಎಎಪಿಯಿಂದ ಹೊರ ನಡೆದಿದ್ದಾರೆ.
ಜನ ನಿರೀಕ್ಷಿಸುವುದು ಉದ್ಯೋಗ, ಹಣ, ನೆಮ್ಮದಿಯ ಕುಟುಂಬ ಜೀವನ, ಶಾಂತಿಯ ಸಾಮಾಜಿಕ ಜೀವನವನ್ನು. ಕಟ್ಟ ಕಡೆಯ ವ್ಯಕ್ತಿಗೂ ಇವುಗಳನ್ನು ಒದಗಿಸುವಲ್ಲಿ ಕಾರ್ಯೋನ್ಮುಖರಾಗದೆ ಮಾಧ್ಯಮಗಳ ಮುಂದೆ ಅವರು ಸರಿ ಇಲ್ಲ ಇವರು ಸರಿ ಇಲ್ಲ ಎನ್ನುತ್ತಾ ಕುಳಿತರೆ ದೆಹಲಿ ಜನರ ಕಷ್ಟ ಕೇಳುವವರು ಯಾರು?  ಸಾವಿರಾರು ಜನರು ಇವರಿಗಾಗಿ ಕೆಲಸ ಕಾರ್ಯಗಳನ್ನು ಬಿಟ್ಟು ಹೋರಾಟ ಮಾಡಿದ್ದಾರೆ. ಹಣವನ್ನೂ ಒದಗಿಸಿದ್ದಾರೆ. ದೊರೆತಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೆ ಅಧಿಕಾರಕ್ಕೇರಿದ ಒಂದು ತಿಂಗಳಲ್ಲೇ ಲೋಕಸಭಾ ಚುನಾವಣೆಗೆ ತಯಾರಾಗುತ್ತಿರುವುದನ್ನು ಗಮನಿಸಿದರೆ, ಬದಲಾವಣೆಯ ಆಶಾಭಾವನೆ ಹೊಂದಿರುವ ಯುವ ಜನತೆಯನ್ನು ಮತ್ತೆ ದಿಕ್ಕು ತಪ್ಪಿಸುವುದರಲ್ಲಿ ಸಂಶಯವಿಲ್ಲ.


 - ಗೋಪಾಲಕೃಷ್ಣ.ಸಿ
gkckm@yahoo.in


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement