ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಈಶಾನ್ಯ ಭಾರತೀಯರೂ ನಮ್ಮವರೆಂಬ ಅಭಿಮಾನವಿರಲಿ

Srinivasa Murthy VN
Updated On : 8 Feb 2014, 11:21 am

ಈಶಾನ್ಯ ರಾಜ್ಯಗಳ ಜನ ದೇಶದ ಇತರೆಡೆಗಳಲ್ಲಿ ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಮಾತಾಡಿದ್ದಾರೆ ಅಲ್ಲಿನವರ ಹಿತಕ್ಕಾಗಿ ದುಡಿಯುತ್ತಿರುವ ಸಾಮಾಜಿಕ ಕಾರ್ಯಕರ್ತೆ ಡಾ. ರಿನಿ ರಾಲ್ಟೆ

ಚಿಕ್ಕ ಜಗಳವೊಂದು ದೆಹಲಿಯ ಕೆಲ ಅಂಗಡಿಕಾರರಿಗೆ ನಿಡೊ ಟಾನಿಯಾಮ್ ಎಂಬ 19 ವರ್ಷದ ಅರುಣಾಚಲ ಪ್ರದೇಶದ ವಿದ್ಯಾರ್ಥಿಯೊಬ್ಬನನ್ನು ಕೊಲ್ಲುವಷ್ಟರಮಟ್ಟಿಗೆ ಪ್ರಚೋದಿಸಿದ್ದು ದೇಶವನ್ನು ದಿಗ್ಭ್ರಮೆಗೆ ದೂಡಿದೆ. ದೇಶದ ಜನಕ್ಕಿಂತ ತುಸು ಭಿನ್ನವೆನಿಸುವ ರೂಪವೇ ಟಾನಿಯಾಮ್‌ನಂಥ ಹುಡುಗರು ಬಲಿಯಾಗುವುದಕ್ಕೆ ಕಾರಣವಾಯಿತೇ? ಈಶಾನ್ಯ ಭಾರತದವರನ್ನು ನಮ್ಮವರೆಂದು ಅಪ್ಪಿಕೊಳ್ಳುವ ಹೃದಯವೈಶಾಲ್ಯದ ಕೊರತೆ ನಮ್ಮ ದೇಶವಾಸಿಗಳಲ್ಲಿದೆಯೇ? ಈಶಾನ್ಯ ಭಾರತದ ವಿದ್ಯಾರ್ಥಿಗಳು ತಮ್ಮ ರೂಪದ ಕಾರಣದಿಂದ ಕ್ಯಾಂಪಸ್‌ಗಳಲ್ಲಿ ಕುಹಕಕ್ಕೆ ಒಳಗಾಗುತ್ತಿರುತ್ತಾರೆ ಎಂಬ ದೂರೂ ಬಹಳಷ್ಟು ಬಾರಿ ಕೇಳಿಬಂದಿದೆ. ಅವರ ಬಗ್ಗೆ ನಾವೂ ಸಂವೇದನೆ ಬೆಳೆಸಿಕೊಳ್ಳುವುದಕ್ಕೆ ನೆರವಾಗಲಿ ಎಂಬ ಆಶಯದಲ್ಲಿ ಕನ್ನಡಪ್ರಭ, ಬೆಂಗಳೂರಿನ ಥಿಯೋಲಜಿಕಲ್ ಕಾಲೇಜಿನ ಪ್ರೊಫೆಸರ್ ಹಾಗೂ ಈಶಾನ್ಯ ಭಾರತೀಯರ ಹಿತಕ್ಕಾಗಿ ದುಡಿಯುತ್ತಿರುವ ಸಾಮಾಜಿಕ ಕಾರ್ಯಕರ್ತೆ ಡಾ. ರಿನಿ ರಾಲ್ಟೆ ಅವರನ್ನು ಮಾತಿಗೆಳೆಯಿತು....

-ದೆಹಲಿಯ ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಈಶಾನ್ಯ ಭಾರತದ ವಿದ್ಯಾರ್ಥಿ ಬಲಿಯಾಗಿದ್ದಾನೆ..
ಇದು ದುರದೃಷ್ಟಕರ ಘಟನೆ. ದೇಶದ ರಾಜಧಾನಿಯಲ್ಲಿ ನಡೆದಿರುವ ಈ ಘಟನೆ ದೇಶವೇ ತಲೆ ತಗ್ಗಿಸುವಂಥದ್ದು. ಜನರಲ್ಲಿ ಜನಾಂಗೀಯ ತಾರತಮ್ಯ ಭಾವನೆ ಬಲವಾಗಿ ಬೇರೂರಿರುವುದು ಇದಕ್ಕೆ ಕಾರಣ.

-ದೆಹಲಿಯ ಈಶಾನ್ಯ ಭಾರತದ ನಿವಾಸಿಗಳಿಗೆ ಭದ್ರತೆ ಒದಗಿಸಲು ಅಲ್ಲಿನ ಹೈಕೋರ್ಟ್ ಆದೇಶ ಹೊರಡಿಸಿರುವುದು ಸಮಾಧಾನ ತಂದಿದೆಯೇ?
ನ್ಯಾಯಾಲಯ ಆತಂಕದಲ್ಲಿರುವವರ ನೆರವಿಗೆ ಧಾವಿಸಿರುವುದು ಉತ್ತಮ ಸಂಗತಿ. ನೋಡಲ್ ಅಧಿಕಾರಿಗಳ ನೇಮಕದಿಂದ ಜನರು ಧೈರ್ಯದಿಂದ ತಮ್ಮ ದೂರುಗಳನ್ನು ಸಲ್ಲಿಸಲು ಅನುಕೂಲವಾಗಿದೆ. ಆದರೆ, ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ಇಂತಹ ಘಟನೆಗಳು ಮುಂದುವರಿಯದಂತೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು. ನಮ್ಮನ್ನು 'ಚಿಂಕಿ'ಗಳು ಎಂದು ಹೀಯಾಳಿಸುವುದು ಶಿಕ್ಷಾರ್ಹ ಅಪರಾಧ ಎಂದು ಸುಪ್ರೀಂಕೋರ್ಟ್ 2011ರಲ್ಲೇ ತೀರ್ಪು ನೀಡಿದೆ. ಇದು ಅಳವಡಿಕೆಯಾಗಬೇಕು.

-ಈ ಘಟನೆ ಬೆಂಗಳೂರಿನಲ್ಲಿರುವ ಈಶಾನ್ಯ ರಾಜ್ಯಗಳ ಜನರ ಮೇಲೆ ಯಾವ ಪರಿಣಾಮ ಬೀರಿದೆ?
2012ರಲ್ಲಿ ನಡೆದ ದುರದೃಷ್ಟಕರ ಘಟನೆಯಿಂದ  ನಿಧಾನವಾಗಿ ಹೊರಬಂದಿರುವ ಈಶಾನ್ಯ ಜನರಲ್ಲಿ ಈ ಘಟನೆ ಮತ್ತೊಮ್ಮೆ ಭೀತಿ ಉಂಟುಮಾಡಿದೆ. ಇಲ್ಲಿನ ಸಮಾಜದಲ್ಲಿ ತಮ್ಮ ಜೀವಕ್ಕೆ ಭದ್ರತೆ ಇದೆಯೇ ಎಂಬ ಗೊಂದಲದಲ್ಲಿ ದಿನ ದೂಡುವಂತಾಗಿದೆ.

-ಈಶಾನ್ಯ ರಾಜ್ಯಗಳ ಜನರೇ ಹೆಚ್ಚಾಗಿ ಜನಾಂಗೀಯ ನಿಂದನೆಗೆ ಗುರಿಯಾಗುವುದೇಕೆ?
ಈಶಾನ್ಯ ರಾಜ್ಯಗಳ ಜನರನ್ನು ಕೇಂದ್ರ ಸರ್ಕಾರ ಬುಡಕಟ್ಟು ಜನಾಂಗಕ್ಕೆ ಸೇರಿದವರು ಎಂದು ಗುರುತಿಸಿದೆ. ಮೂಲತಃ ನಾವು ಮಂಗೋಲಿಯನ್ ಜನಾಂಗಕ್ಕೆ ಸೇರಿದವರು. ನಮ್ಮ ಮುಖಚರ್ಯೆ ಇತರರಿಗಿಂತ ಭಿನ್ನವಾಗಿರುವುದು ಬಹುತೇಕ ಬಾರಿ ನಮ್ಮನ್ನು ಜನಾಂಗೀಯ ನಿಂದನೆಗೆ ಗುರಿ ಮಾಡುತ್ತಿದೆ. ಸರ್ಕಾರ ಈಶಾನ್ಯ ರಾಜ್ಯಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಈ ಹಿನ್ನೆಲೆಯಲ್ಲಿ, ಅಲ್ಲಿನ ಜನರು ಜೀವನೋಪಾಯಕ್ಕಾಗಿ ಹೊರರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿ ಇದೆ. ಅಲ್ಲಿಂದ ಉದ್ಯೋಗ ಅರಸಿ ಬಂದು ಉತ್ತಮ ಸ್ಥಾನಮಾನದಲ್ಲಿದ್ದು ಬೇರೆಡೆ ನೆಲೆಸಿದವರು ಬಹುತೇಕ ಸುರಕ್ಷಿತರಾಗಿದ್ದಾರೆ. ಆದರೆ, ಈ ರಾಜ್ಯಗಳಿಂದ ಬರುವ ಬಹುದೊಡ್ಡ ಪ್ರಮಾಣದ ವಿದ್ಯಾರ್ಥಿ ವೃಂದ ಈ ಜನಾಂಗೀಯ ನಿಂದನೆಯ ಭೀತಿ ಎದುರಿಸುತ್ತಿದೆ. ಇದರೊಂದಿಗೆ ಭದ್ರತಾ ಸಿಬ್ಬಂದಿ, ಹೋಟೆಲ್, ಮೆಸ್ ಮತ್ತಿತರರ ಕಡೆ ಕೆಳ ಹಂತದ ಕೆಲಸ ನಿರ್ವಹಿಸುತ್ತಿರುವ ಜನರು ನಿರಂತರವಾಗಿ ಜನಾಂಗೀಯ ನಿಂದನೆಗೆ ಗುರಿಯಾಗುತ್ತಿದ್ದಾರೆ.

-ಉತ್ತರಕ್ಕೆ ಹೋಲಿಸಿದರೆ ದಕ್ಷಿಣ ಭಾರತ ಈಶಾನ್ಯ ಭಾಗದವರಿಗೆ ಹೆಚ್ಚು ಸುರಕ್ಷಿತ ಪ್ರದೇಶ ಎಂಬ ಮಾತಿದೆ?
ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತ ಅತ್ಯಂತ ಶಾಂತಿ ಹಾಗೂ ಸೌಹಾರ್ದಯುತ ಪ್ರದೇಶ ಎಂಬುದು ಬಹುತೇಕರ ಅಭಿಪ್ರಾಯ. ಆದರೆ, ಬೆಂಗಳೂರಿನಲ್ಲಿ ಎರಡು ವರ್ಷಗಳ ಹಿಂದೆ ನಡೆದ ಘಟನೆ ಈ ಹೇಳಿಕೆಯನ್ನು ಸುಳ್ಳು ಮಾಡಿದೆ.  ರಂಜಾನ್ ಹಬ್ಬದ ನಂತರ ಈಶಾನ್ಯ ರಾಜ್ಯಗಳ ಜನರನ್ನು ಹತ್ಯೆ ಮಾಡುತ್ತೇವೆ ಎಂದು ಕೆಲವರು ಹಬ್ಬಿಸಿದ ವದಂತಿ ಯಾವ ಮಟ್ಟಿಗೆ ಜನರಲ್ಲಿ ಭೀತಿ ಮೂಡಿಸಿತ್ತೆಂದರೆ, ಹಲವರು ವಾರಗಟ್ಟಲೇ ಮನೆಯಿಂದಲೇ ಹೊರಬಂದಿರಲಿಲ್ಲ. ಈಜಿಪುರದ ಬಳಿಯಲ್ಲಿರುವ ಸುಮಾರು 7 ಜನರನ್ನು ನಾವು ಮಿಲಿಟರಿ ವಾಹನಗಳೊಂದಿಗೆ ಹೋಗಿ ಬಚಾವ್ ಮಾಡಿದ್ದೇವೆ. ಅವರ ಪೋಷಕರು ನಮಗೆ ಕರೆ ಮಾಡಿ ಮೊರೆ ಇಟ್ಟಿದ್ದರು.

-ನಿಮ್ಮ ಭಯವೇನೋ ಸರಿ. ಆದರೆ ಗುಳೆ ಹೊರಟವರಿಗೆ ರಕ್ಷಣೆ ನೀಡುವುದಾಗಿ ಗೃಹ ಸಚಿವರೆ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿ ಭರವಸೆ ನೀಡಿದ್ದರೂ ಜನರು ಪರಿಗಣಿಸಲಿಲ್ಲವೇಕೆ?
ಸಹಸ್ರ ಸಹಸ್ರ ಜನರು ನಗರದಿಂದ ಗುಳೆ ಹೊರಟಿದ್ದರು. ರೈಲ್ವೇ ನಿಲ್ದಾಣದಲ್ಲಿ ಎರಡು ಮೂರು ದಿನಗಟ್ಟಲೇ ರೈಲಿಗಾಗಿ ಕಾಯುತ್ತಾ ಕುಳಿತಿದ್ದರು. ಈ ಸಂದರ್ಭದಲ್ಲಿ ಗೃಹ ಸಚಿವರು ಅಲ್ಲಿಗೆ ಬಂದು ತಾವು ಭದ್ರತೆ ನೀಡುತ್ತೇವೆ. ಗುಳೆ ಹೋಗಬೇಡಿ ಎಂಬ ಹೇಳಿಕೆ ನೀಡಿದ್ದರು. ಆದರೆ, ನಿರಾಶ್ರಿತ ಶಿಬಿರಗಳು ಎಲ್ಲಿವೆ, ಎಷ್ಟಿವೆ ಎಂಬ ಸ್ಪಷ್ಟ ಮಾಹಿತಿ ಅವರ ಬಳಿಯೇ ಇರಲಿಲ್ಲ. ಕೇವಲ ಬಾಯಿ ಮಾತಿನ ಭರವಸೆ ನಂಬಿಕೊಂಡು ಇಲ್ಲಿಯೇ ಇರುವಷ್ಟು ಧೈರ್ಯ ಯಾರಲ್ಲೂ ಉಳಿದಿರಲಿಲ್ಲ.

-ಘಟನೆ ನಡೆದು 2 ವರ್ಷ ಕಳೆದಿವೆ.  ಈಗ ಪರಿಸ್ಥಿತಿ ಹೇಗಿದೆ?
ಅಲ್ಲಲ್ಲಿ ಜನಾಂಗೀಯ ನಿಂದನೆಯ ದೂರುಗಳು ಕೇಳಿ ಬರುತ್ತಲೇ ಇವೆ. ಬೆಂಗಳೂರು ವಿವಿ ಸೇರಿದಂತೆ ಇತರ ಕಾಲೇಜುಗಳ ಆವರಣದಲ್ಲಿ ಈಗಲೂ ದೌರ್ಜನ್ಯ ನಡೆಯುತ್ತಲೇ ಇದೆ. ಕಾಲೇಜುಗಳ ದಾಖಲು ವಿಷಯಗಳಲ್ಲಿ ಕೂಡ ಈ ವಿದ್ಯಾರ್ಥಿಗಳು ಮಧ್ಯವರ್ತಿಗಳಿಂದ ಸುಲಿಗೆಗೊಳಗಾಗುತ್ತಿದ್ದಾರೆ.  ನಗರದಲ್ಲಿ ಬಾಡಿಗೆ ಮನೆ ಪಡೆಯುವುದು ಅತ್ಯಂತ ತ್ರಾಸದಾಯಕವಾಗಿ ಪರಿಣಮಿಸಿದೆ. ಮನೆ ಮಾಲಿಕರು ನಮ್ಮವರಿಗೆ ಇತರರಿಗಿಂತ ಹೆಚ್ಚಿನ ಬಾಡಿಗೆ, ಮುಂಗಡ ಹಣದ ಬೇಡಿಕೆ ಇಡುತ್ತಾರೆ. ಬಡ ಕುಟುಂಬಗಳಿಂದ ಬಂದಿರುವ ಜನರು ಅಷ್ಟು ಪ್ರಮಾಣದ ಬಾಡಿಗೆ ನೀಡಲು ವಿಫಲರಾಗುತ್ತಾರೆ.

-ಪೊಲೀಸರಿಂದ ನಿಮಗೆ ಸಂಪೂರ್ಣ ಸಹಕಾರ ದೊರೆಯುತ್ತಿದೆಯೇ?
ನಮ್ಮ ಜನರ ದೂರುಗಳನ್ನು ಪೊಲೀಸರು ಗಂಭೀರವಾಗಿ ಸ್ವೀಕರಿಸುವುದೇ ಇಲ್ಲ. ಅವರ ದೂರುಗಳನ್ನು ಸ್ವೀಕರಿಸುವುದಿರಲಿ, ಹಲವು ಬಾರಿ ಮುಖ ಕೊಟ್ಟು ಮಾತೂ ಕೂಡ ಆಡುವುದಿಲ್ಲ. ಅನೇಕ ಪ್ರಕರಣಗಳಲ್ಲಿ ನಾವು ದೂರು ಸ್ವೀಕರಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡುವಂತೆ ಪೊಲೀಸ್ ಆಯುಕ್ತರು ಇಲ್ಲವೇ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದ್ದೇವೆ. ಅವರ ಹೇಳಿಕೆ ನಂತರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

-ಕ್ಯಾಂಪಸ್‌ಗಳಲ್ಲಿ ಕುಹಕ ಎದುರಿಸುತ್ತಿರುವ ವಿದ್ಯಾರ್ಥಿಗಳ ಬವಣೆ ತಪ್ಪಿಸಲೆಂದು ಪ್ರತ್ಯೇಕ ಸೆಲ್ ನಿರ್ಮಿಸುವ ಪ್ರಸ್ತಾಪವಾಗುತ್ತಿದೆ. ಇದರಿಂದ ಸಮಸ್ಯೆ ಬಗೆಹರಿಯುತ್ತದೆಯೇ?
ಪ್ರತ್ಯೇಕತೆ ಎಂದಿಗೂ ಸಮಸ್ಯೆಗೆ ಪರಿಹಾರವಲ್ಲ. ಈಶಾನ್ಯ ರಾಜ್ಯಗಳು ಪ್ರತ್ಯೇಕತೆಗಾಗಿ ಹೋರಾಡುತ್ತಿವೆ. ಆದರೆ, ಇದರಿಂದ ಸಮಸ್ಯೆಗಳು ಉಲ್ಬಣವಾಗುತ್ತವೆ. ಪ್ರತ್ಯೇಕತೆ ನಮ್ಮನ್ನು ಎರಡು ದಶಕಗಳ ಹಿಂದಕ್ಕೆ ಕರೆದುಕೊಂಡು ಹೋಗುತ್ತದೆ. ನಾವು ಸದ್ಯದ ಪರಿಸ್ಥಿತಿಯನ್ನು ಸುಧಾರಿಸಿಕೊಂಡು ಮುಂದೆ ಸಾಗಬೇಕಿದೆ. ಮುಕ್ತವಾಗಿ ಬೆರೆಯುವುದರಿಂದಲೇ ಜನಾಂಗೀಯ ನಿಂದನೆ ಹಾಗೂ ಪೂರ್ವಾಗ್ರಹ ಪೀಡಿತ ವರ್ತನೆಯನ್ನು ತಡೆಯಲು ಸಾಧ್ಯ. ಈಶಾನ್ಯ ರಾಜ್ಯಗಳ ಜನರು, ಅವರ ಜೀವನ ಶೈಲಿಯ ಕುರಿತು ದೇಶದ ಇತರೆ ಭಾಗದ ಜನರಲ್ಲಿ ಅರಿವಿನ ಕೊರತೆಯಿದೆ. ಕಾರಣ, ನಮ್ಮ ಪಠ್ಯ ಪುಸ್ತಕಗಳಲ್ಲಿ ನೂರಾರು ವರ್ಷಗಳ ಇತಿಹಾಸವಿದೆಯಾದರೂ, ಯಾವುದರಲ್ಲೂ ಈಶಾನ್ಯ ರಾಜ್ಯಗಳ ಕುರಿತು ಒಂದು ಪಠ್ಯವೂ ಇಲ್ಲ. ಅನೇಕ ರಾಜ್ಯಗಳ ಪಠ್ಯಪುಸ್ತಕಗಳಲ್ಲಿ ಈಶಾನ್ಯ ರಾಜ್ಯಗಳ ಇತಿಹಾಸ, ಸಂಸ್ಕೃತಿಯನ್ನು ಪಾಠದ ಒಂದು ಭಾಗವಾಗಿ ಕೂಡ ಪರಿಗಣಿಸಿಲ್ಲ. ಇತರೆ ರಾಜ್ಯಗಳ ಜನರು ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಲು ಕೇಂದ್ರ ಸರ್ಕಾರದಿಂದ ವಿಶೇಷ ಅನುಮತಿ ಪಡೆಯಬೇಕು. ನಮ್ಮನ್ನು ಇತರ ರಾಜ್ಯಗಳಂತೆ ಕೇಂದ್ರ ಸರ್ಕಾರ ಎಂದಿಗೂ ಪರಿಗಣಿಸಿಲ್ಲ. ಇದರಿಂದ ಇಂದಿಗೂ ನಮ್ಮ ರಾಜ್ಯ ಹಿಂದುಳಿದ ರಾಜ್ಯಗಳಾಗಿಯೇ ಇವೆ.

-ನಿಮ್ಮ ಪ್ರಕಾರ, ಪರಿಸ್ಥಿತಿ ಸುಧಾರಣೆಗೆ ಕೈಗೊಳ್ಳಬೇಕಿರುವ ತುರ್ತು ಕ್ರಮಗಳೇನು?
ಸದ್ಯದ ಪರಿಸ್ಥಿತಿಯಲ್ಲಿ ಜನರಿಗೆ ಸಮಗ್ರತೆ, ಐಕ್ಯತೆಯ ಕುರಿತು ಅರಿವು ಮೂಡಿಸುವ ತುರ್ತು ಅಗತ್ಯವಿದೆ. ಒಂದು ಭಾಗದ ಜನರ ಮುಖಚರ್ಯೆ, ಕೂದಲುಗಳ ಮೂಲಕ ಅವರ ವ್ಯಕ್ತಿತ್ವವನ್ನು ಅಳೆಯುವ ಮನಸ್ಥಿತಿ ಬದಲಾಗದಿದ್ದಲ್ಲಿ ಈ ಜನಾಂಗೀಯ ದ್ವೇಷ ಮುಂದುವರಿಯುತ್ತಲೇ ಇರುತ್ತದೆ. ದ್ವೇಷದ ಕಿಡಿ ಎಷ್ಟು ಭೀಕರವಾಗಿರುತ್ತದೆ ಎಂದರೆ ಜನರು ನಮ್ಮ ಜನರ ಪ್ರಾಣ ತೆಗೆಯಲು ಹೇಸುವುದಿಲ್ಲ. ಇಂತಹ ದ್ವೇಷದ ದಳ್ಳುರಿಗೆ ಮುಗ್ಧ ಜನರು ಬಲಿಯಾಗುತ್ತಿರುವುದು ವಿಷಾದನೀಯ.

-ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳ ವರ್ತನೆ ಕುರಿತು ಕೂಡ ದೂರುಗಳು ಕೇಳಿಬರುತ್ತಿವೆಯಲ್ಲಾ?
ಈಶಾನ್ಯ ರಾಜ್ಯಗಳಿಂದ ವಲಸೆ ಬರುವ ವಿದ್ಯಾರ್ಥಿಗಳಲ್ಲಿ ಕೆಲವರು ಒರಟಾಗಿ ನಡೆದುಕೊಳ್ಳುವುದು, ತರಗತಿಗಳಿಗೆ ನಿರಂತರವಾಗಿ ಗೈರುಹಾಜರಾಗುವುದು, ಕೆಟ್ಟ ಅಭ್ಯಾಸಗಳಿಗೆ ಬಲಿಯಾಗುವ ಉದಾಹರಣೆಗಳಿವೆ. ಅನೇಕರು ಇಲ್ಲಿನ ಸಂಸ್ಕೃತಿಗೆ ಹೊಂದಿಕೊಳ್ಳಲು ವಿಫಲರಾಗುತ್ತಾರೆ. ಕೆಲವರ ಈ ವರ್ತನೆ ಇತರ ವಲಸಿಗ ವಿದ್ಯಾರ್ಥಿಗಳನ್ನು ತೊಂದರೆಗೆ ನೂಕುತ್ತಿದೆ. ಇಂತಹ ವಿದ್ಯಾರ್ಥಿಗಳಿಗೆ ಕೂಡ ತಿಳಿವಳಿಕೆ ಹೇಳಿ ಪರಿಸ್ಥಿತಿಗೆ ಹೊಂದಿಕೊಂಡು, ಇತರರೊಂದಿಗೆ ಬೆರೆಯುವಂತೆ ಅರಿವು ಮೂಡಿಸುವುದು ಕೂಡ ತುರ್ತು ಅಗತ್ಯಗಳಲ್ಲೊಂದಾಗಿದೆ.

-ಸುಪ್ರೀತಾ ಹೆಬ್ಬಾರ್, ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement