ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಇವರ ನಾಯಿ ಪ್ರೀತಿ ಉಳಿದವರಿಗೆ ಫಜೀತಿ

Srinivasa Murthy VN
Updated On : 10 Feb 2014, 10:46 am

ಈ ಬೆಳಗಿನ ವಾಯು ವಿಹಾರಕ್ಕೆ ನಾವು ತೆರಳುವಾಗ, ನಾವು ನಮ್ಮ ಮನೆಯ ಮುಂದೆ,  ನಮ್ಮದೇ ಬೀದಿಯ ನೆರೆ (ಹೊರೆ)ಯವರು ತಮ್ಮ ಮುದ್ದಿನ ನಾಯಿಯನ್ನು ಬೀದಿಯಲ್ಲಿ  ಮುಕ್ತವಾಗಿ ಹಾಗೂ ಸ್ವಚ್ಛಂದವಾಗಿ ಬಿಡುವುದು ಒಂದು ವಿಷಯ. ಅವರ ನಾಯಿ ಪ್ರೀತಿಗೆ ತಕರಾರೇನೂ ಇಲ್ಲ. ಆದರೆ ತಮ್ಮ ಮನೆಯಿಂದ ತುಸು ದೂರ ಸಾಗಿ, ತಮ್ಮದೇ ಬೀದಿಯ ಇನ್ನೊಬ್ಬರ ಮನೆಯ ಮುಂದೆ ಅದನ್ನು ಬಹಿರ್ದೆಸೆಗೆ ಬಿಡುವುದು  ಸರ್ವೇ ಸಾಮಾನ್ಯವಾಗಿದೆ. ಅಸಲಿಗೆ ಹೇಳಬೇಕೆಂದರೆ ಈ ಕೆಲಸ ಹೆಚ್ಚಾಗಿ ಮಾಡುವವರು ಸಾಮಾನ್ಯವಾಗಿ ವಿದ್ಯಾವಂತರೆ. ಈ ನಾಯಿಯ ಮಾಲಿಕರಿಗೆ ಆ ನಾಯಿಯ ಬಗ್ಗೆಯಾಗಲೀ ಅಥವಾ ಅದು ಮಾಡುವ ಹೊಲಸಿನ ಬಗ್ಗೆಯಾಗಲೀ ಪ್ರೀತಿಯಿರಬಹುದು. ಆದರೆ ಅಸಲಿಗೆ  ಯಾವುದೇ ನಾಯಿಯನ್ನು ಸಾಕದ ನನ್ನಂಥಹವನಿಗೆ ಏನು ಗ್ರಹಚಾರ? ಈ ಆಟೋ ಚಾಲಕರು ತಮ್ಮ ವಾಹನದ ಹಿಂದೆ ಸಾಮಾನ್ಯವಾಗಿ ಪ್ರದರ್ಶಿಸುವ 'ಶಬ್ದ ನಮಗೆ, ದಾರಿ ನಿಮಗೆ' ಎನ್ನುವಂತೆ ಇಲ್ಲಿನ ಪರಿಸ್ಥಿತಿ 'ನಾಯಿ ನಮ್ಮದು, ಹೊಲಸು ನಿಮಗೆ' ಎನ್ನುವಂತಾಗಿದೆ.
ಈ ಹಿನ್ನೆಲೆಯಲ್ಲಿ ಈ ನಾಗರಿಕ ಸಮಾಜದಲ್ಲಿ, ಕೆಲ ನೈಟಿ ಧರಿಸಿದ ಆಂಟಿಯರು ಇಲ್ಲ ಬರ್ಮುಡಾ ಚಡ್ಡಿ ಧರಿಸಿದ ಅಂಕಲ್‌ಗಳು ಹಾಗೆಯೇ ಟಿ ಶರ್ಟ್ ಜತೆಗೆ ಮುಕ್ಕಾಲು ಪ್ಯಾಂಟ್ ಧರಿಸಿದ ಷೋಡಶಿಯರು, ನಸುಕಿನಲ್ಲಾಗಲೀ, ಸಂಜೆಯಲ್ಲಾಗಲೀ ತಮ್ಮ ಮೊಬೈಲ್‌ಗಳನ್ನು ಕಿವಿಗೇರಿಸಿ, ಕೆಲಸಕ್ಕೆ ಬಾರದ್ದನ್ನು ಹರಟುತ್ತಾ, ವ್ಯರ್ಥ ಕಾಲಹರಣ ಮಾಡುತ್ತಾ ಬೀದಿಯಲ್ಲಿ, ನಾಯಿಯ ವಿಹಾರಾರ್ಥವಾಗಿ, ಠೀವಿಯಿಂದ ಮೆರವಣಿಗೆ ಹೊರಟು, ಬೇರೆಯವರ ಮನೆಯ ಮುಂದಿನ ಆವರಣವನ್ನು ಅನವಶ್ಯಕವಾಗಿ ತಿಳಿದೋ ತಿಳಿಯದೆಯೋ ಗಲೀಜು ಮಾಡುತ್ತಿದ್ದಾರೆ. ಈ ಪ್ರಾಣಿಗೆ ತಿಳಿವಳಿಕೆ ಇಲ್ಲದಿರಬಹುದು. ಆದರೆ ಅದರ ಯಜಮಾನರಾದವರಿಗೆ ಕಿಂಚಿತ್ತಾದರೂ ತಿಳಿವಳಿಕೆ ಬೇಡವೆ? ನಿಮಗೆ ತಿಳಿದಿದೆಯೋ ಅಥವಾ ಇಲ್ಲವೋ ಪಾಶ್ಚಿಮಾತ್ಯ ರಾಷ್ಟಗಳಲ್ಲಿ, ಈ ರೀತಿ  ಸಾಕುನಾಯಿಗಳಿಂದ ಬೀದಿಯ ಶುಚಿತ್ವಕ್ಕೆ ಧಕ್ಕೆಯಾದರೆ, ನಾಯಿಯ ಮಾಲಿಕರಿಂದ ದಂಡ ವಸೂಲಿ ಮಾಡುವ ಕ್ರಮ ಇದೆ. ನಮ್ಮಲ್ಲೂ ಸಹಾ ಇಂಥಹ ಕ್ರಮ ಜಾರಿಯಾದರೆ ಒಳ್ಳೆಯದು ಎನಿಸುತ್ತದೆ.
ಅಂತೆಯೇ ನಮ್ಮ ಮನೆಯ ಬಳಿ ಒಬ್ಬ ಪುಣ್ಯಾತ್ಮ, ಪರಂಪರೆಯಂತೆ ತನ್ನ ಮುದ್ದಿನ ನಾಯಿಯನ್ನು ಬಹಿರ್ದೆಸೆಗಾಗಿ ನಮ್ಮ ಬೀದಿಯಲ್ಲಿ ಮುಕ್ತವಾಗಿ ವಿಹರಿಸಲು ಬಿಟ್ಟಿದ್ದನು. ಆಗ ಆ ನಾಯಿಯು ನೆಲವನ್ನು ಮೂಸುತ್ತಾ, ಮೂಸುತ್ತ, ನೋಡ ನೋಡುತ್ತಾ, ಕೊನೆಗೆ ನನ್ನ ಮನೆಯ ಮುಂದೆ ರಂಗೋಲಿ ಹಾಕುವೆಡೆ, ಬಹಿರ್ದೆಸೆಗೆ ಕುಳಿತು ಬಿಟ್ಟಿತು. ಆಗ ಅಲ್ಲೇ ಇದ್ದ ನಾನು, ಆ ಮಾಲಿಕರನ್ನು ಕುರಿತು ಏನ್ಸಾರ್ ನೀವೇಕೆ ಈ ರೀತಿ ಮಾಡುತ್ತಿರುವಿರಿ? ನಿಮ್ಮ ನಾಯಿಗೆ ಬಹಿರ್ದೆಸೆಗೆ ನಮ್ಮ ಮನೆ ಬಿಟ್ಟು, ಬೇರಾವ ಮನೆಯೂ ಸಿಗಲಿಲ್ಲವೇ ಎಂದೆ. ಅದಕ್ಕೆ ಆ ವ್ಯಕ್ತಿ ಕೊಂಚವೂ ವಿಚಲಿತನಾಗದೆ, ನಿರ್ವಿಕಾರ ಭಾವದಿಂದ ಸಾರ್ ಅದು ಮೂಕ ಪ್ರಾಣಿ ನಾನೇನು ಮಾಡಲಿಕ್ಕಾಗುತ್ತದೆ ಎಂದು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾ, ಹಲ್ಲು ಕಿರಿಯುತ್ತಾ ನಿಂತ.
ಈ ನನ್ನ ಅನುಭವ, ಓದುಗರಾದ  ತಮ್ಮಲ್ಲೂ ಸಹಾ ಹಲವಾರು ಜನಕ್ಕೆ ಆಗಿರಬಹುದು. ನೀವು ಇದನ್ನು ಯಾರದೋ ಮುಲಾಜಿಗೆ ಅಥವಾ ದಾಕ್ಷಿಣ್ಯಕ್ಕೆ ವ್ಯಕ್ತಪಡಿಸದೇ ಇರಬಹುದು. ಇದು ನೋಡುವುದಕ್ಕೆ ಸಣ್ಣ ವಿಷಯವೆನಿಸಬಹುದು. ಆದ್ದರಿಂದ ಈ ಸಾಕು ನಾಯಿಗಳ ಮಾಲಿಕರು ಯಾರೇ ಆಗಿರಲಿ, ತಮ್ಮ ನೆರೆಯವರನ್ನು ಮೇಲೆ ತಿಳಿಸಿದಂಥಹ ಉಪದ್ರಗಳಿಂದ, ಮುಜುಗರ ಪಟ್ಟುಕೊಳ್ಳುವಂಥಹ ಸನ್ನಿವೇಶಕ್ಕೆ ದೂಡದೇ, ಈ ಪ್ರಾಣಿಗಳ ಬಹಿರ್ದೆಸೆಗೆ, ವಿದೇಶದಲ್ಲಿ ಅನುಸರಿಸುವಂಥಹ ಪರ್ಯಾಯ ವ್ಯವಸ್ಥೆ ಮಾಡಿಕೊಂಡು, ನಿಮ್ಮ ಬೀದಿಯ ನೈರ್ಮಲ್ಯಕ್ಕೆ ಹಾಗೂ ಶುಚಿತ್ವಕ್ಕೆ ಒತ್ತು ಕೊಟ್ಟು, ನಿಮ್ಮ ನೆರೆಯವರ ಪ್ರೀತಿ ಹಾಗೂ ವಿಶ್ವಾಸವನ್ನು ಗಳಿಸಿರಿ. ಆಗ ನಾವು ನಿಮ್ಮನ್ನೂ ಪ್ರೀತಿಸುವೆವು ಹಾಗೆಯೇ ನಿಮ್ಮ ನಾಯಿಯನ್ನೂ ಸಹ.
-ನಾಗಮಂಗಲ ನರಸಿಂಹ ಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement