ನನ್ನ ಜೀವನಕ್ಕೊಂದು ಅರ್ಥ ಕೊಟ್ಟ ಆರ್‌ಎಸ್‌ಎಸ್
ಇದೇ ತಿಂಗಳ ಎರಡನೇ ತಾರೀಖಿಗೆ ಖುಷವಂತ್ ಸಿಂಗ್ ಅವರು ನೂರನೇ ವರ್ಷಕ್ಕೆ ಕಾಲಿಟ್ಟರು..
ಇದೇ ತಿಂಗಳ ಎರಡನೇ ತಾರೀಖಿಗೆ ಖುಷವಂತ್ ಸಿಂಗ್ ಅವರು ನೂರನೇ ವರ್ಷಕ್ಕೆ ಕಾಲಿಟ್ಟರು. ಆ ದಿನ ನಾನು ಅವರ ಮನೆಗೆ ತೆರಳಿ ನನ್ನ ಬ್ಲಾಗ್ ಬರಹಗಳ ಎರಡನೇ ಸಂಗ್ರಹ ಪುಸ್ತಕ "ಮೈ ಟೇಕ್" ಅನ್ನು ಅವರಿಗೆ ಗೌರವ ಉಡುಗೊರೆಯಾಗಿ ಕೊಟ್ಟೆ. ಎಫ್‌ಐಸಿಸಿಐ ಸಭಾಂಗಣದಲ್ಲಿ ಈ ಪುಸ್ತಕವನ್ನು ಸರಸಂಘ ಚಾಲಕ ಮೋಹನ್ ರಾವ್ ಭಾಗವತ್ ಬಿಡುಗಡೆ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಬಿಜೆಪಿ ನಾಯಕಿ ಶ್ರೀಮತಿ ಸುಷ್ಮಾ ಸ್ವರಾಜ್ ವಹಿಸಿಕೊಂಡಿದ್ದರೆ, ಪೂಜ್ಯ ಬಾಬಾ ರಾಮ್‌ದೇವ್ ನೆರೆದವರನ್ನುದ್ದೇಶಿಸಿ ಮಾತನಾಡಿದರು. ಖುಷವಂತ್ ಸಿಂಗ್‌ಜೀಗೆ ಕೊಟ್ಟ ಆ ಪ್ರತಿಯಲ್ಲಿ ನಾನು, "ನೂರನೇ ವರ್ಷಕ್ಕೆ ಕಾಲಿಟ್ಟಿರುವ ಸರ್ದಾರ್ ಸಿಂಗ್ ಅವರಿಗೆ ಪ್ರಣಾಮಗಳು" ಎಂದು ಬರೆದು ಆ ಹಿರಿಯ ಜೀವಕ್ಕೆ ಗೌರವ ಸಲ್ಲಿಸಿದೆ.
ಆ ಸಂಜೆ ಔಪಚಾರಿಕ ಸಮಾರಂಭವೇನೂ ಇರಲಿಲ್ಲ. ಖುಷವಂತ್ ಸಿಂಗ್ ಅವರ ಕುಟುಂಬ ಮತ್ತು ಕೆಲವು ಗೆಳೆಯರು ಗುಂಪು ಅಲ್ಲಿ ನೆರೆದಿತ್ತು. ಅವರಲ್ಲಿ ಗುಜರಾತ್‌ನ ವೃಂದಾವನ್ ಸೋಲಂಕಿ ಎಂಬ ಚಿತ್ರಕಾರರೂ ಇದ್ದರು. ಹಾಳೆಯ ಮೇಲೆ ಕೆಲವೇ ಕೆಲವು ಗೆರೆಗಳನ್ನು ಎಳೆದು, ಆ ಸಂಜೆಯ ವಿಶೇಷ ವ್ಯಕ್ತಿಯಾಗಿದ್ದ ಖುಷವಂತ್ ಸಿಂಗ್ ಅವರ ಹೃದಯಂಗಮ ಚಿತ್ರವನ್ನು ಸೋಲಂಕಿ ಬಿಡಿಸಿದರು. ಇದನ್ನು ನೋಡಿದ್ದೇ, "ಆಡ್ವಾಣಿಯವರದ್ದೂ ಒಂದು ಚಿತ್ರ ಬಿಡಿಸಬಲ್ಲಿರಾ?"ಎಂದು ನನ್ನ ಸಹಾಯಕ ದೀಪಕ್ ಛೋಪ್ರಾ ಕೇಳಿದರು. ಕೂಡಲೇ ಒಪ್ಪಿಕೊಂಡ ಸೋಲಂಕಿ ಆ ಚಿತ್ರವನ್ನು ಬಿಡಿಸಿಕೊಟ್ಟರು.
ಢಢಢ
1942ರಲ್ಲಿ ನಾನು ಆರ್‌ಎಸ್‌ಎಸ್‌ನ ಕಾರ್ಯಕರ್ತನಾದಾಗ, ಆ ಸಂಘಟನೆಯ ಹೆಸರನ್ನೇ, ಸಿಂಧ್ ಪ್ರಾಂತ್ಯದ ಬಹುತೇಕ ಜನರು ಕೇಳಿರಲಿಲ್ಲ. ನನ್ನ ಆತ್ಮ ಚರಿತ್ರೆ "ಮೈ ಕಂಟ್ರಿ, ಮೈ ಲೈಫ್"ನ ಅಧ್ಯಾಯವೊಂದರಲ್ಲಿ ಸಿಂಧ್‌ನಲ್ಲಿನ ನನ್ನ ಮೊದಲ 20 ವರ್ಷಗಳ ಜೀವನದ ಕುರಿತು ಹೀಗೆ ಬರೆದಿದ್ದೇನೆ:
"ಭವಿಷ್ಯದಲ್ಲಿ ಭಾಗ್ಯದ ಬಾಗಿಲು ತೆರೆಯುವ ದಿನ ಬಂದೇ ಬರುತ್ತದೆ" ಎಂದು ಹೇಳಲಾಗುತ್ತದೆ. ಆದರೆ ಆ ಭವಿಷ್ಯವೆನ್ನುವುದು ನಾನು ಆಟವಾಡಿಕೊಂಡಿದ್ದ ಸಮಯದಲ್ಲೇ ಅಚಾನಕ್ಕಾಗಿ ಬಂದುಬಿಟ್ಟಿತು! ಆರ್‌ಎಸ್‌ಎಸ್ ಸೇರಿದಾಗ ನಾನು 14 ವರ್ಷದ ಹುಡುಗನಷ್ಟೆ. ನಾನು ಮೆಟ್ರಿಕ್ ಮುಗಿಸಿದ ನಂತರ, ಅಪ್ಪ ಕರಾಚಿಯಿಂದ ಹೈದ್ರಾಬಾದ್‌ಗೆ(ಸಿಂಧ್) ನೆಲೆ ಬದಲಿಸಿದ್ದರು. ರಜೆಯ ವೇಳೆಯಲ್ಲಿ ಮತ್ತು ಕಾಲೇಜು ಸೇರುವುದಕ್ಕೂ ಮುನ್ನ ನಾನು ಟೆನ್ನಿಸ್ ಆಡಲು ಶುರುಮಾಡಿದೆ. ಆ ಆಟದಲ್ಲಿ ಹೆಚ್ಚಾಗಿ ಜೊತೆಯಾಗುತ್ತಿದ್ದವನು, ಗೆಳೆಯ ಮುರಳಿ ಮುಖಿ. ಒಂದು ದಿನ ಆಟದ ಮಧ್ಯೆಯೇ ಅವನು "ನಾನು ಹೋಗುತ್ತಿದ್ದೇನೆ" ಎಂದು ಹೇಳಿದ. "ಇನ್ನೂ ಸೆಟ್ ಮುಗಿದಿಲ್ಲ, ಅದ್ಹೇಗೆ ಹೋಗ್ತೀಯಾ?" ಎಂದು ನಾನು ಆಶ್ಚರ್ಯದಿಂದ ಪ್ರಶ್ನಿಸಿದೆ. ಆಗವನು, "ಕೆಲವು ದಿನದ ಹಿಂದೆ ನಾನು ಆರ್‌ಎಸ್‌ಎಸ್ ಸೇರಿದ್ದೇನೆ. ಅಲ್ಲಿ ಸಮಯಪಾಲನೆಗೆ ಪ್ರಾಮುಖ್ಯತೆ ಹೆಚ್ಚು. ಹಾಗೆಲ್ಲ ಶಾಖೆಗೆ ತಡವಾಗಿ ಹೋಗುವಂತಿಲ್ಲ ಎಂದ."
ಢಢಢ
ಇನ್ನು ಕೆಲವು ವಿಮರ್ಶಕರು, ನನ್ನ ಆತ್ಮಕಥೆಯ 18ನೇ ಅಧ್ಯಾಯವನ್ನು ಅತ್ಯುತ್ತಮ ಭಾಗ ಎಂದು ಮೆಚ್ಚಿಕೊಂಡಿದ್ದಾರೆ. "ಜೀವನದ ಅರ್ಥ ಮತ್ತು ಸಂತೋಷದ ಅನ್ವೇಷಣೆ" ಎಂಬ ಆ ಅಧ್ಯಾಯದಲ್ಲಿ ಅಮೆರಿಕದ ಯೇಲ್ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ಜೆಡ್ ರುಬೆನ್‌ಫೆಲ್ಡ್ ಬರೆದ "ದಿ ಇಂಟರ್‌ಪ್ರಿಟೇಷನ್ ಆಫ್ ಮರ್ಡರ್" ಎನ್ನುವ ಪುಸ್ತಕದ ಕೆಲವು ಭಾಗಗಳ ಛಾಯೆಯಿದೆ. ರುಬೆನ್‌ಫೆಲ್ಡ್ ತಮ್ಮ ಪುಸ್ತಕದಲ್ಲಿ ಬರೆಯುತ್ತಾರೆ, "ಸಂತೋಷಕ್ಕೆ ಯಾವ ರಹಸ್ಯಗಳೂ ಇಲ್ಲ. ವ್ಯಾಕುಲಕ್ಕೊಳಗಾದವರೆಲ್ಲ ಒಂದೇ ರೀತಿಯ ಜನರು. ಎಂದೋ ಆದ ಗಾಯ, ಕೈ ತಪ್ಪಿ ಹೋದ ಅವಕಾಶ, ಅಭಿಮಾನಕ್ಕಾದ ಆಘಾತ, ಚಿಗುರೊಡೆದ ಕನಸನ್ನು ಯಾರೋ ಚೂಟಿಹಾಕಿದ್ದು...ಹೀಗೆ ಹಿಂದಿನ ದಿನದ ನೋವಿನ ಹೊದಿಕೆಯನ್ನೇ ಹೊದ್ದುಕೊಂಡು, ಇಂದಿನ ಹೊಸ ಉದಯಕ್ಕೆ ಅವರು ಎದೆಯೊಡ್ಡುವುದಿಲ್ಲ."
ಮುಂದುವರಿದು, "ಸಂತೋಷದ ದಾರಿ ಮತ್ತು ಅರ್ಥ ಒಂದೇ ಅಲ್ಲ. ಸಂತೋಷವಾಗಿರಬೇಕೆಂದರೆ ಮನುಷ್ಯ ವರ್ತಮಾನದಲ್ಲಿ, ಈ ಕ್ಷಣದಲ್ಲಿ ಬದುಕಬೇಕು. ಒಂದು ವೇಳೆ ಆತನಿಗೆ ಅರ್ಥ ಬೇಕೆಂದರೆ, ಆತ ಹಿಂದೆ ತಿರುಗಿ ನೋಡಬೇಕು. ಆದರೆ, ಭವಿಷ್ಯತ್ತಿಗಾಗಿ ಬದುಕಬೇಕು, ಅದು ಎಷ್ಟೇ ಅನಿಶ್ಚಿತ್ತವಾಗಿದ್ದರೂ ಕೂಡ! ಪ್ರಕೃತಿ ನಮ್ಮ ಮುಂದೆ "ಸಂತೋಷ" ಮತ್ತು "ಅರ್ಥ" ಎಂಬ ಎರಡು ಆಯ್ಕೆಗಳನ್ನಿಡುತ್ತದೆ. ಅದರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬೇಕು. ನಾನು "ಅರ್ಥವನ್ನು" ಆಯ್ಕೆ ಮಾಡಿಕೊಂಡಿದ್ದೇನೆ." ಎಂದು ಆತ ಹೇಳುತ್ತಾನೆ.
ಮನುಷ್ಯ ಯಾವುದಾದರೊಂದನ್ನಷ್ಟೇ ಆಯ್ಕೆ ಮಾಡಿಕೊಳ್ಳಬಲ್ಲ ಎಂದು ಆ ಪುಸ್ತಕ ಹೇಳುತ್ತದಾದರೂ, ನಾನು ಸಂತೋಷ ಮತ್ತು ಜೀವನಾರ್ಥವೆರಡನ್ನೂ ಅನುಭವಿಸಿದ್ದೇನೆ. ಅದೂ ದಂಡಿಯಾಗಿ!
8 ದಶಕಗಳ ಹಿಂದೆ ನಾನು ಆ ಟೆನ್ನಿಸ್ ಅಂಗಳದಲ್ಲಿ ನಿಂತಾಗ ನನ್ನ ಬದುಕಿನ ಕರೆಯನ್ನು ಕೇಳಿಸಿಕೊಂಡಿದ್ದೆ. ಪ್ರತಿ ಭಾನುವಾರ ಕರಾಚಿಯಲ್ಲಿ ಸ್ವಾಮಿ ರಂಗನಾಥಾನಂದರಿಂದ ಭಗವದ್ಗೀತೆಯ ಪ್ರವಚನ ಕೇಳಿಸಿಕೊಂಡಾಗ ಜೀವನದ ಅರ್ಥವನ್ನು ಕಂಡುಕೊಂಡೆ. ಆ ಅರ್ಥದ ಗುಣವೃದ್ಧಿಯಾದದ್ದು 55 ವರ್ಷಗಳ ಹಿಂದೆ ನಾನು ನನ್ನ ರಾಜಕೀಯ ಜೀವನಕ್ಕೆ ಕಾಲಿಟ್ಟಾಗ, ಮೊದಲು ಭಾರತೀಯ ಜನಸಂಘದ ಕಾರ್ಯಕರ್ತನಾಗಿ ಮತ್ತು ನಂತರ
ಬಿಜೆಪಿಯ ಭಾಗವಾದಾಗ. ಹದಿನಾಲ್ಕೂವರೆ ವರ್ಷದ ಬಾಲಕನಿದ್ದಾಗಿನಿಂದಲೂ ಹಿಡಿದು ಇಂದಿನವರೆಗೂ ಮಾತೃಭೂಮಿಯ ಸೇವೆಗಾಗಿ ದುಡಿದಿದ್ದೇನೆ.
ಕಳೆದ ವರ್ಷ ನಾನು ಖುಷವಂತ್ ಸಿಂಗ್ ಅವರ ಖುಷವಂತ್ ನಾಮಾ ಪುಸ್ತಕವನ್ನು ಕೈಗೆತ್ತಿಕೊಂಡೆ. ಅದನ್ನು ಬರೆದಾಗ ಅವರಿಗೆ 98 ವರ್ಷ ವಯಸ್ಸು! ಇಂಥ ಇಳಿವಯಸ್ಸಿನಲ್ಲೂ ಇಷ್ಟೊಂದು ಅದ್ಭುತವಾಗಿ ಮತ್ತು ನಿಚ್ಚಳವಾಗಿ ಬರೆದ ಇನ್ನೊಬ್ಬ ವ್ಯಕ್ತಿಯನ್ನು ನಾನು ನೋಡಿಲ್ಲ ಎಂದು ನನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದೆ.
ಖುಷವಂತ್ ಸಿಂಗ್ ಅನೇಕ ವರ್ಷಗಳಿಂದ ಹಿಂದುಸ್ತಾನ್ ಟೈಮ್ಸ್ ಪತ್ರಿಕೆಗೆ ಅಂಕಣ ಬರೆಯುತ್ತಿದ್ದಾರೆ. ಫೆಬ್ರವರಿ 2013ರಲ್ಲಿ ಖುಷವಂತ್‌ನಾಮಾ ಪುಸ್ತಕವೋದಿ ನಾನು ಅವರಿಗೆ ಕರೆ ಮಾಡಿದ್ದೆನಲ್ಲ, ಆ ನಂತರ ಅವರು ತಮ್ಮ ಅಂಕಣದಲ್ಲಿ ನನ್ನ ಕುರಿತು ಬರೆದಿದ್ದರು. ಮಾರ್ಚ್ 17ರಂದು ಪ್ರಕಟವಾದ ಆ ಲೇಖನದಲ್ಲಿ ಅವರು ಹೀಗೆ ಹೇಳುತ್ತಾರೆ: "ಆಡ್ವಾಣಿ, ರಥಯಾತ್ರೆಯನ್ನು ನಡೆಸಿ ಮತ್ತು ಬಾಬ್ರಿ ಮಸೀದಿಯ ಧ್ವಂಸಕ್ಕೆ ಸಾಕ್ಷಿಯಾದ ನಂತರದಿಂದ ನಾನು ಅವರ ಪ್ರಬಲ ಟೀಕಾಕಾರನಾಗಿದ್ದೆ. ಕೆಲವು ಸಾರ್ವಜನಿಕ ಸಮಾರಂಭಗಳಲ್ಲಿ ಅವರನ್ನು ಕಟು ಪದಗಳಿಂದ ನೇರವಾಗಿ ಟೀಕಿಸಿದ್ದೆ."
"ನನ್ನ ಮನೆಗೆ ಅವರು(ಆಡ್ವಾಣಿ) ಬರುತ್ತಿದ್ದಾರೆ ಎನ್ನುವುದು ತಿಳಿದಾಗ, ನನ್ನ ಮೇಲೆ ಅವರು ಹರಿಹಾಯಬಹುದು ಎಂದು ಭಾವಿಸಿದ್ದೆ. ಹಾಗೆ ಹರಿಹಾಯಲು ಅವರ ಬಳಿ ಕಾರಣಗಳೂ ಇದ್ದವು. ಆದರೆ ಅದರ ಬದಲು ಆಡ್ವಾಣಿ, ನನಗೆ ಮತ್ತು ನನ್ನ ಮಗಳಿಗೆ ಹೂಗುಚ್ಛ ತಂದು ಕೊಟ್ಟರು. ಒಂದು ಮಾತಂತೂ ಹೇಳಲೇಬೇಕು, ಅವರು ನನಗಿಂತಲೂ ಉತ್ತಮ ಸಿಖ್(ಅಮಿಲ್ ಸಿಂಧಿ). ನಾವು ಸುಮಾರು ಗಂಟೆಗಳ ಕಾಲ ಮಾತನಾಡಿದೆವು. ಆದರೆ ನಾನು ರಥಯಾತ್ರೆ ಅಥವಾ ಬಾಬ್ರಿ ಮಸೀದಿ ವಿಷಯಗಳ ಪ್ರಸ್ತಾಪ ಮಾಡಲಿಲ್ಲ. ನಮ್ಮ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ, ಮಾತು ಕತೆಯಾಡುವುದರಲ್ಲಿ ತಪ್ಪಿಲ್ಲವಲ್ಲ? ನಾನು ಎಣಿಸಿದ್ದಕ್ಕಿಂತಲೂ ದೊಡ್ಡ ವ್ಯಕ್ತಿತ್ವ ಅವರದ್ದು"
ಒಬ್ಬ ಪ್ರಗತಿಪರ ಮತ್ತು ಹೃದಯವೈಶಾಲ್ಯವುಳ್ಳ ವ್ಯಕ್ತಿ ಮಾತ್ರ ಎದುರಿನ ವ್ಯಕ್ತಿಯೊಂದಿಗೆ ಏನೇ ಭಿನ್ನಾಭಿಪ್ರಾಯವಿದ್ದರೂ, ಹೀಗೆ ಮಾತನಾಡಬಲ್ಲ.
ಕೊನೆಯದಾಗಿ: ಇವತ್ತಿನ ನನ್ನ ಲೇಖನ ಆರ್‌ಎಸ್‌ಎಸ್ ಮತ್ತು ಖುಷವಂತ್ ಸಿಂಗ್ ಕುರಿತೇ ಇದೆ. ಈ ಕಾರಣಕ್ಕೇ ಒಂದೊಮ್ಮೆ ಇಲ್ಲುಸ್ಟ್ರೇಟೆಡ್ ವೀಕ್ಲಿಯ ಸಂಪಾದಕರಾಗಿದ್ದ ಖುಷವಂತ್ ಸಿಂಗ್ ಅವರು 1972ರಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮ.ಸ. ಗೋಳ್ವಾಲ್ಕರ್ ಅವರ ಸಂದರ್ಶನ ನಡೆಸಿದ್ದು ನೆನಪಾಗುತ್ತಿದೆ. ಆ ಸಂದರ್ಶನದ ಮೊದಲ ಸಾಲಿನಲ್ಲಿ ಖುಷವಂತ್ ಬರೆದಿದ್ದರು: " ಕೆಲವೊಬ್ಬರ ಬಗ್ಗೆ ನಾವು ತಿಳಿದುಕೊಳ್ಳದೆಯೇ ದ್ವೇಷ ಬೆಳೆಸಿಕೊಂಡುಬಿಡುತ್ತೇವೆ. ನನ್ನ ಪಟ್ಟಿಯಲ್ಲಿ ಅಂಥ ಸ್ಥಾನ ಪಡೆದವರು ಗುರು ಗೋಳ್ವಾಲ್ಕರ್"
ಖುಷವಂತ್‌ಸಿಂಗ್ ಪ್ರಶ್ನೆ : ಮುಸ್ಲಿಮರ ವಿಚಾರಗಳ ಬಗ್ಗೆ ನಿಮ್ಮ ಆಲೋಚನೆಗಳೇನು?
ಗೋಳ್ವಾಲ್ಕರ್: ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಮುಸಲ್ಮಾನರು ಭಿನ್ನ ನಿಷ್ಠೆಯನ್ನು ಹೊಂದಿರುವುದಕ್ಕೆ ಐತಿಹಾಸಿಕ ಅಂಶಗಳೇ ಕಾರಣ ಎಂಬುದರಲ್ಲಿ ನನಗೆ ಸಂದೇಹವಿಲ್ಲ. ಅದಾಗ್ಯೂ ಇದರಲ್ಲಿ ಹಿಂದು ಮತ್ತು ಮುಸಲ್ಮಾನರಿಬ್ಬರೂ ಸಮಾನ ತಪ್ಪಿತಸ್ಥರು. ಆದರೆ ಕೆಲವರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ. ಮುಸಲ್ಮಾನರ ನಿಷ್ಠೆಯನ್ನು ನಾವು ಪ್ರೀತಿಯಿಂದ ಗೆಲ್ಲಬೇಕು. ಮುಂದೊಂದು ದಿನ ಹಿಂದುತ್ವ ಮತ್ತು ಇಸ್ಲಾಂ ಸಹಬಾಳ್ವೆಯನ್ನು ಕಲಿಯುತ್ತವೆ ಎನ್ನುವ ಕುರಿತು ನನಗೆ ನಂಬಿಕೆ ಇದೆ.
-ಎಲ್. ಕೆ. ಆಡ್ವಾಣಿ