ಅಸಮಾನತೆ ಸಹ್ಯವಲ್ಲ ಪ್ರತ್ಯೇಕತೆಯೇ ದಾರಿಯಲ್ಲ
ಸೀಮಾಂಧ್ರ ನೌಕರರು ರಾಜ್ಯ ವಿಭಜನೆ ವಿರೋಧಿಸಿ, ಕಠೋರ ಧರಣಿ, ಮುಷ್ಕರ ಮಾಡುತ್ತಿರುವ ಸುದ್ದಿಗಳನ್ನು ಓದುತ್ತಿದ್ದೇವೆ. ಸಂಸತ್ತಿನಲ್ಲಿ ಆಂಧ್ರ ವಿಭಜನೆ ವಿಧೇಯಕ ಪಾಸಾಗಿದ್ದರೂ ಈ ಕುರಿತ ಪರ- ವಿರೋಧಗಳು ನಿಲ್ಲುವಂತೇನೂ ಕಾಣುತ್ತಿಲ್ಲ.
ವಿದ್ಯುತ್ ಇಲಾಖೆಯ ನೌಕರರು ಮುಷ್ಕರ ಮಾಡಿದ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಸಾಮಾನ್ಯ ಜನ ಪರಿತಪಿಸುವಂತಾಯಿತು. ಸರ್ಕಾರಿ ಆಸ್ಪತ್ರೆಗಳಲ್ಲಿ ಎಷ್ಟು ಶಿಶುಗಳ ಮರಣವಾರ್ತೆ, ರೋಗಿಗಳ ನರಳಾಟ ಎಲ್ಲವೂ ಆಯಿತು. ಇಲ್ಲಿ ತೊಂದರೆ ಅನುಭವಿಸುವುದು ಬಡವರು. ಶ್ರೀಮಂತರು ದೊಡ್ಡ ದೊಡ್ಡ ಹವಾನಿಯಂತ್ರಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ.
ಹಾಗೆಂದು ಮುಷ್ಕರ, ಧರಣಿ ಮಾಡಬಾರದು ಎನ್ನುತ್ತಿಲ್ಲ. ಅದು ಒಂದು ದಿನಕ್ಕೆ ಸೀಮಿತವಾಗಿರಬೇಕು. ಈ ಮೊದಲು ಮಾಧ್ಯಮಗಳ ಮೂಲಕ ಮಾಹಿತಿ ನೀಡಬೇಕು. ಇದಕ್ಕೆ ಸರ್ಕಾರ ಸ್ಪಂದಿಸದೆ ಹೋದರೆ ಮತ್ತೆ ಮುಷ್ಕರ ನಡೆಸುತ್ತೇವೆ ಎನ್ನುವುದಾಗಿ ಎಚ್ಚರಿಕೆ ನೀಡಬೇಕಿತ್ತು. ಆದರೆ ಇನ್ನೊಂದು ಮುಖದ ಚಿತ್ರವೂ ಶೋಚನೀಯವೇ.
ನಿಮಗೆ ನನ್ನ ಅನುಭವದ ಕೆಲ ಘಟನೆಗಳನ್ನು ಹೇಳುತ್ತೇನೆ. 2010-11ರಲ್ಲಿ ಹುಬ್ಬಳ್ಳಿಯ ಹಳೆ ಬಸ್ ಸ್ಟಾಂಡಿನಿಂದ ಬಿಗ್ ಬಜಾರ್ಗೆ ತೆರಳಲು ಗೋಕುಲ ರೋಡ್ ಬಸ್ ಹತ್ತಿದೆ. ಏನೋ ಒಂದು ತರಹದ ಬೇಸರ, ಸಿಟ್ಟು. ಕಾರಣ ಮೈಸೂರು-ಬೆಂಗಳೂರಿನಲ್ಲಿ ಓಡಿ ಹಳೆಯದಾದ ಡಬ್ಬಾ ಗಾಡಿಯನ್ನು ಎನ್ಡಬ್ಲುಕೆಎಸ್ಆರ್ಟಿಸಿಗೆ ಕಳುಹಿಸಿದ್ದರು. ಹೀಗೇಕೆ ಅನ್ನಿಸಿತು ಎಂದರೆ ಬಸ್ ಒಳಗೆ ಗಿಣಿ ಹಸಿರು ಬಣ್ಣದ ಪೇಂಟ್ ಮಾಡಲಾಗಿತ್ತು.
ಕೆಲ ತಿಂಗಳುಗಳ ನಂತರ ಬೆಂಗಳೂರಿಗೆ ಹೋದೆ. ಬಿಎಂಟಿಸಿ ಬಸ್ ಸ್ಟಾಂಡಿನಲ್ಲಿ ವಜ್ರ ಎಸಿ ಬಸ್ಸುಗಳು ಒಂದಾದ ಮೇಲೊಂದರಂತೆ ಬರುತ್ತಿದ್ದವು. ಆ ಬಸ್ಸಿನಲ್ಲಿಯೇ 4-5 ಬಾರಿ ಓಡಾಡಿದೆ. ಆಗ ನನಗೆ ಅನಿಸಿದ್ದು ನಮ್ಮಲ್ಲಿ ಜನ ಕುರಿ ತುಂಬಿದ ಹಾಗೆ ಬಸ್ಸಿನಲ್ಲಿ ಹತ್ತಿ ಪ್ರಯಾಣಿಸುತ್ತಿರುತ್ತಾರೆ. ಇಲ್ಲಿ ಸೀಟಿಗೆ ಒಬ್ಬರ ಪಕ್ಕದಲ್ಲಿ ಯಾರೂ ಕೂಡುವುದಿಲ್ಲ. ಹೆಚ್ಚೆಂದರೆ 10-15 ಜನ. ಎಂತಹ ವ್ಯತ್ಯಾಸ? ಅಲ್ಲಿ ಓಡಿ ಹಳೆಯದಾದ ಬಸ್ಸುಗಳಿಗೆ ಪೈಂಟ್ ಮಾಡಿ ನಮ್ಮವರು ನೋಡಿ ಹೊಸ ಬಸ್ಸು ಎನ್ನುತ್ತಾರೆ.
ೆಬೆಂಗಳೂರಿನಿಂದ ಆಗಲೇ ಶಿವಮೊಗ್ಗಕ್ಕೆ ಹೋದೆ. ಹೋಗುವಾಗ ರೈಲಿನಲ್ಲಿ ಹೋದೆ. ಅಲ್ಲಿಂದ ತೆರಳುವಾಗ ಶಿವಮೊಗ್ಗ ಬಸ್ ಸ್ಟಾಂಡ್ಗೆ ಹೋದರೆ ಆಶ್ಚರ್ಯ. ಅದು ಸಾಕ್ಷಾತ್ ಮಹಲ್ಲಿನಂತೆ ಇದೆ.
ಆದೆ ನಮ್ಮ ಹುಬ್ಬಳ್ಳಿ-ಧಾರವಾಡ-ಬೆಳಗಾವಿ-ಹಾವೇರಿ ಬಸ್ ಸ್ಟಾಂಡ್ಗಳನ್ನು ನೆನಪಿಸಿಕೊಂಡಾಗ ದನಗಳ ದೊಡ್ಡಿ ಇದ್ದ ಹಾಗೆ ಇದೆ.
ನಮ್ಮಲ್ಲಿ ಒಂದು ಗಾದೆ ಮಾತಿದೆ. ಬಡವನ ಕೋಪ ದವಡೆಗೆ ಮೂಲ. ಧಾರವಾಡ ಜಿಲ್ಲಾ ಕೇಂದ್ರ ಬಸ್ ಸ್ಟಾಂಡ್ನಲ್ಲಿ ಟಾರ್ ಸಹಿತ ಕಾಣುತ್ತಿಲ್ಲ. ಬಸ್ ಸ್ಟಾಂಡ್ನಲ್ಲಿ ಎರಡು ನಿಮಿಷ ನಿಲ್ಲೋಕೂ ಆಗೋದಿಲ್ಲ. ಆದರೂ ನಾನು ನನ್ನ ಪ್ರಯತ್ನ ಮಾಡಿದೆ. ನಾವೇನು ಹೈ-ಟೆಕ್ ಬಸ್ ನಿಲ್ದಾಣ ಬೇಕು, ಎಸಿ ಬಸ್ ಬೇಕು ಎನ್ನುತ್ತಿಲ್ಲ. ಇದ್ದದ್ದನ್ನೇ ಸರಿ ಮಾಡಿ ಕೊಡಿ. ಅಲ್ಲಿ ಧೂಳು ಏಳದ ಹಾಗೆ ಸಿಮೆಂಟ್ ಕಾಂಕ್ರೀಟ್ ಹಾಕಿ. ಇದೇ ನಮ್ಮ ವಿನಂತಿ. ಬಸ್ ಸ್ಟಾಂಡ್ ಎದುರಿಗೆ ಅಂಜುಮನ್ ಕಾಲೇಜ್ ಆವರಣ ಇದೆ. ಅಥವಾ ಕಾಲೇಜು ಪಕ್ಕ ಬಸವಣ್ಣನವರ ಪ್ರತಿಮೆ ಹಿಂದೆ ಮೈದಾನವಿದೆ. ಅಲ್ಲಿ ನಾಲ್ಕು ದಿನದಮಟ್ಟಿಗೆ ಜನರಿಗೆ ಓಡಾಡುವಂತೆ ವಿನಂತಿಸಿ ಕಾಂಕ್ರೀಟ್ ಹಾಕಿ ಸರಿಪಡಿಸುವುದು ಕಷ್ಟದ ಕೆಲಸವೇ?
ಇನ್ನು ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಹಳ್ಳಿಗಳಲ್ಲಿ ರಸ್ತೆಗಳೇ ಇಲ್ಲ. ಸ್ವತಃ ಸಾರಿಗೆ ಸಚಿವರೇ ಹೇಳುತ್ತಾರೆ. ಸರ್ಕಾರ ರಸ್ತೆ ಸಂಪರ್ಕ ಕಲ್ಪಿಸಿದರೆ ನಾವು ಬಸ್ಗಳನ್ನು ಓಡಿಸಲು ಸಿದ್ಧ ಎಂದು. ಸಾರಿಗೆ ಬಿಡಿ. ಮಲಪ್ರಭಾ, ಘಟಪ್ರಭಾ, ಕೃಷ್ಣಾ, ಭೀಮಾ ಮತ್ತು ತುಂಗಭದ್ರಾ ಅನೇಕ ನದಿಗಳಿದ್ದರೂ ಈವತ್ತಿಗೂ ಹೈ-ಕ ಜನ ಕುಡಿಯುವ ನೀರಿಗಾಗಿ ಕಿಮೀ ಗಟ್ಟಲೆ ಅಲೆದಾಡುತ್ತಾರೆ.
ಇನ್ನು ಶಿಕ್ಷಣದ ಬಗ್ಗೆ ಏನು ಬರೆಯುವುದು? ಶಾಲೆ ಇದ್ದರೆ ಮಾಸ್ತರ್ ಇಲ್ಲ. ಮಾಸ್ತರ್ ಇದ್ದರೆ ಶಾಲೆ ಇಲ್ಲ. ಶಾಲೆ ಇದೆ. ಮಾಸ್ತರು ಇದ್ದಾರೆ ಅಂದ್ರೆ ಮಕ್ಕಳಿಲ್ಲ. ಬಡವರು -ಕೂಲಿ ಕಾರ್ಮಿಕರು ಗುಳೆ ಹೋಗುವುದು.
ಈ ಹಿಂದಿನ ಸರ್ಕಾರದಲ್ಲಿ ಪಶುಸಂಗೋಪನಾ ಸಚಿವರಾಗಿದ್ದ ಬೆಳಮಗಿಯವರು ಮಾಧ್ಯಮದಲ್ಲಿ ಹೀಗೆ ಹೇಳಿದ್ದರು 'ರೆಸಾರ್ಟ್ನಲ್ಲಿ ನಾಲ್ಕು ದಿನ ಆರಾಮ ಇರಲಿಕ್ಕೆ ಬಂದಿದೀವಿ. ಊರಾಗಿದ್ರೆ ನೀರಿಲ್ಲ ಅದು ಇಲ್ಲ ಅಂತ ಗೋಳು...' ಇದು ಸಚಿವರು ಹೇಳಿದ ಮಾತು.
ಇದು ಬಿಡಿ ಬರಗಾಲವಿದೆ ಎಂದರೂ ವಿದೇಶಿ ಪ್ರವಾಸಕ್ಕೆ (ಮೋಜಿನ ಪ್ರವಾಸಕ್ಕೆ) ಅಲ್ಲ ಅಧ್ಯಯನ ಪ್ರವಾಸಕ್ಕೆ ಹೋಗುತ್ತಾರೆ.
ಪ್ರಜ್ಞಾವಂತ ಸಮಾಜ ಎಚ್ಚೆತ್ತುಕೊಂಡು ತಮ್ಮ ಬೇಡಿಕೆಗಳ ಬಗ್ಗೆ ಆಗ್ರಹಿಸಬೇಕು. ಸಚಿವರನ್ನು, ಶಾಸಕರನ್ನು ಅಷ್ಟೇ ಅಲ್ಲದೇ ವಿರೋಧಪಕ್ಷದವರನ್ನು ಪ್ರಶ್ನೆ ಮಾಡಬೇಕು. ಸಮಸ್ಯೆ ಬಗ್ಗೆ ಯಾವ ಕ್ರಮಕೈಗೊಂಡಿದ್ದೀರಿ? ಎಷ್ಟು ಹಣ ಬಿಡುಗಡೆಯಾಗಿದೆ? ಅಧಿಕಾರಿಗಳು ಯಾವಾಗ ಕೆಲಸ ಆರಂಭಿಸುತ್ತಾರೆ? ಯಾವಾಗ ಮುಗಿಯುತ್ತದೆ? ಅವರನ್ನು ಕೇಳಬೇಕು. ಇದು ಪ್ರಜಾಪ್ರಭುತ್ವ ದೇಶ. ಸರ್ವಾಧಿಕಾರಿಗಳ ದೇಶ ಅಲ್ಲ.
ಹಾಗೆಂದು ವಿಭಜನೆ ಒಂದರಿಂದಲೇ ಅಭಿವೃದ್ಧಿಯಾಗುತ್ತದೆ, ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎನ್ನುವುದು ಸುಳ್ಳು.
ಪವನದುರ್ಗ