ನೆಪ ಹುಡುಕಿದ ಆಪ್ಗೆ ಎದುರಾಗಿರುವ ಪ್ರತಿತಂತ್ರ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರು ಎಲ್ಲ ರಾಜಕಾರಣಿಗಳ ಸಾಲಿಗೆ ಸೇರುವವರಲ್ಲ. ಬೇರೆ ರಾಜ್ಯಗಳ ಮುಖ್ಯಮಂತ್ರಿಗಳೆಲ್ಲ ತಾವು ಅಧಿಕಾರದಲ್ಲಿ ಮುಂದುವರಿಯುವುದು ಹೇಗೆ ಎಂಬ ಸರ್ಕಸ್ಸಿನಲ್ಲಿ ತೊಡಗಿಕೊಂಡಿರುತ್ತಾರೆ. ಆದರೆ ಈ ಕೇಜ್ರಿವಾಲರನ್ನು ನೋಡಿ. ಇವರು ದಿನ ಬೆಳಗಾದರೆ ತಾವು ರಾಜೀನಾಮೆ ಕೊಡುವುದಾಗಿ ಹೆದರಿಸುತ್ತಿರುತ್ತಾರೆ! ಕೆಲವೊಮ್ಮೆ ಅವರು ಈ ಮಾತನ್ನು ದಿನಕ್ಕೆ ಒಂದೇ ಬಾರಿ ಹೇಳಿ ಸುಮ್ಮನಾಗದೇ ಮೂರು ಬಾರಿ ಪುನರುಚ್ಚರಿಸುತ್ತಾರೆ. ಅವರಿಗೆ ನೀವು ಯಾವುದೇ ಪ್ರಶ್ನೆ ಕೇಳಿದರೂ ಸಿದ್ಧ ಉತ್ತರವೊಂದನ್ನು ತೂರಿಯೇಬಿಡುತ್ತಾರೆ- 'ನಾನು ಇಲ್ಲಿರುವುದು ಅಧಿಕಾರಕ್ಕಾಗಿ ಅಲ್ಲ. ಯಾವ ಸಮಯಕ್ಕಾದರೂ ರಾಜೀನಾಮೆ ಕೊಡುವುದಕ್ಕೆ ನಾನು ತಯಾರಿದ್ದೇನೆ.'
ಇದೀಗ ಅವರು ಅಧಿಕಾರ ಬಿಡುವುದಾಗಿ ಹೇಳುತ್ತಿರುವುದು ಜನಲೋಕಪಾಲ ಮಸೂದೆ ಸಂಬಂಧದಲ್ಲಿ. ಈ ವಾರ ಅವರು ದೆಹಲಿ ವಿಧಾನಸಭೆಯಲ್ಲಿ ಅದನ್ನು ಮಂಡಿಸಬೇಕಿತ್ತು. ಈ ಮಸೂದೆ ಈಗಿರುವ ಸ್ಥಿತಿಯಲ್ಲೇ ಅದನ್ನು ಬೆಂಬಲಿಸುವುದಕ್ಕೆ, ಆಪ್ ಸರ್ಕಾರಕ್ಕೆ ತನ್ನ ಎಂಟು ಶಾಸಕರ ಬಲದ ಬೆಂಬಲ ನೀಡಿರುವ ಕಾಂಗ್ರೆಸ್ ಹಿಂದೇಟು ಹಾಕಿದೆ. ಆಪ್ಗೆ ಬೆಂಬಲ ನೀಡಿದ್ದ ಇನ್ನೆರಡು ಶಾಸಕರು ಪ್ರತಿದಿನವೂ ಈ ಬಗ್ಗೆ ತಮ್ಮ ನಿಲುವು ಬದಲಾಯಿಸಿಕೊಂಡಿದ್ದಾರೆ. ಇನ್ನು, ಆಪ್ನಿಂದ ಹೊರಬಿದ್ದಿರುವ ಶಾಸಕ ವಿನೋದ್ ಕುಮಾರ್ ಬಿನ್ನಿ ಅವರಂತೂ ಕೇಜ್ರಿವಾಲ್ ಹೊರನಡೆಯಲೇಬೇಕು ಎಂಬ ಅಬ್ಬರ ಮಾಡುತ್ತಿದ್ದಾರೆ. 70 ಸದಸ್ಯ ಬಲದ ವಿಧಾನಸಭೆಯಲ್ಲಿ ಸ್ಪೀಕರ್ ಅವರನ್ನೂ ಸೇರಿಸಿಕೊಂಡು ಆಪ್ ಸರ್ಕಾರದ ಬಲ 27ಕ್ಕೆ ಕುಸಿದಿದೆ.
ಹಾಗಾದರೆ ಕೇಜ್ರಿವಾಲ್ ಸರ್ಕಾರ ಉಳಿದುಕೊಳ್ಳುವ ಬಗೆಯಾದರೂ ಹೇಗೆ? ಬಿಜೆಪಿಯ 32 ಶಾಸಕರ ಬೆಂಬಲ ಅವರಿಗೆ ಒದಗಿದಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ. ಪ್ರತಿಪಕ್ಷ ನಾಯಕರಾಗಿರುವ ಡಾ. ಹರ್ಷವರ್ಧನ ಅವರು ತಮ್ಮ ಟ್ವೀಟ್ನಲ್ಲಿ ಕೇಜ್ರಿವಾಲರು ತಮ್ಮ 'ನಾಟಕ'ವನ್ನು ಕೊನೆಗೊಳಿಸಲಿ ಎಂದೇ ಹೇಳಿದ್ದಾರೆ. 'ನಾನು ರಾಜೀನಾಮೆ ಕೊಡುತ್ತೇನೆ ಎನ್ನುತ್ತ ಜವಾಬ್ದಾರಿಗಳಿಗೆ ಬೆನ್ನು ತೋರಿಸಿ ಉತ್ತರದಾಯಿತ್ವವಿಲ್ಲದೇ ಓಡಿಹೋಗುವುದಕ್ಕೆ ಕೇಜ್ರಿವಾಲರಿಗೆ ಬಿಡುವುದಿಲ್ಲ. ನಾವೂ ಭ್ರಷ್ಟಾಚಾರ ವಿರೋಧಿ ಅಭಿಯಾನಕ್ಕೆ ಬದ್ಧತೆ ಹೊಂದಿದವರಾಗಿದ್ದೇವೆ. ಇವರು ಪ್ರತಿಪಾದಿಸುತ್ತಿರುವ ಜನಲೋಕ್ಪಾಲ್ ಮಸೂದೆಯಲ್ಲಿ ಏನಿದೆಯೋ ನೋಡೋಣ. ನಮಗೊಂದು ಪ್ರತಿ ಕಳುಹಿಸಿಕೊಡಲಿ' ಎಂದಿದ್ದಾರೆ ಹರ್ಷವರ್ಧನ್. ನಾನು ರಾಜೀನಾಮೆ ಕೊಟ್ಟುಬಿಡುತ್ತೇನೆ ಎಂದು ಹೆದರಿಸುವುದು ಕೇಜ್ರಿವಾಲರಿಗೆ ದೀರ್ಘಾವಧಿಯಲ್ಲಿ ಯಾವುದೇ ಅನುಕೂಲವನ್ನು ತಂದುಕೊಡುವುದಿಲ್ಲ.
ಹರ್ಷವರ್ಧನರ ಟ್ವೀಟು ಕೇಜ್ರಿವಾಲರಿಗೆ ಒಳ್ಳೇ ಇಕ್ಕಟ್ಟನ್ನೇ ತಂದಿದೆ. ನಮಗೆ ಮಸೂದೆಯನ್ನು ಪಾಸು ಮಾಡುವುದಕ್ಕೆ ಅಗತ್ಯ ಬೆಂಬಲವಿಲ್ಲವಾದ್ದರಿಂದ ರಾಜೀನಾಮೆ ಕೊಟ್ಟೆ ಎಂದು ಎಲ್ಲವನ್ನೂ ಕಾಂಗ್ರೆಸ್- ಬಿಜೆಪಿಗಳ ತಲೆಗೆ ಕಟ್ಟಿ ನಿರ್ಗಮಿಸುವ ಅವಕಾಶವನ್ನು ಕೇಜ್ರಿವಾಲ್ ಕಳೆದುಕೊಂಡಂತಾಗಿದೆ. ಅವರ ಒಂದು ಕಾಲದ ಗುರು ಅಣ್ಣಾ ಹಜಾರೆ ಅವರೂ ಕೇಜ್ರಿವಾಲರು ಜನಲೋಕಪಾಲವನ್ನು ಜಾರಿ ಮಾಡಲಿ ಎಂದು ಹೇಳಿದ್ದಾರೆ.
ಆದರೆ ಜನಲೋಕಪಾಲವನ್ನು ತರುವುದು ಮಾತನಾಡಿದಷ್ಟು ಸುಲಭದಲ್ಲಿ ಆಗುವುದಿಲ್ಲ ಎಂಬುದೇ ವಾಸ್ತವ. ಜನಲೋಕಪಾಲವನ್ನು ಜಾರಿ ಮಾಡುವಾಗ ಕೇಜ್ರಿವಾಲರು ಸಂವಿಧಾನವನ್ನು ಆಮೂಲಾಗ್ರವಾಗಿ ತಿಳಿದುಕೊಂಡಿರಬೇಕಾಗುತ್ತದೆ. ಈಗಾಗಲೇ ಇರುವ ನಿಯಮಗಳನ್ನು ಅದು ಉಲ್ಲಂಘಿಸುವಂತಿಲ್ಲ. ಜನಲೋಕಪಾಲದ ವಿಷಯದಲ್ಲಿ ಕಾನೂನು ವಲಯವೂ ಭಿನ್ನ ಅಭಿಪ್ರಾಯಗಳನ್ನು ಹೊಂದಿ ಇಬ್ಭಾಗವಾಗಿದೆ. ದೆಹಲಿ ಸರ್ಕಾರವು ಲೆಫ್ಟಿನೆಂಟ್ ಗವರ್ನರ್ ಅವರ ಸೂಕ್ತ ಅನುಮತಿ ಇಲ್ಲದೇ ಮಸೂದೆಯನ್ನು ಪಾಸು ಮಾಡುವುದಕ್ಕೆ ಆಗುವುದಿಲ್ಲ ಎಂದು ಒಂದು ವಲಯ ಅಭಿಪ್ರಾಯಪಡುತ್ತದೆ. ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿಯೇನೂ ಕಡ್ಡಾಯವಲ್ಲ ಎಂಬುದು ಇನ್ನೊಂದು ಬಣದ ಪ್ರತಿಪಾದನೆ. ಅದೇನೇ ಇದ್ದರೂ ಈ ಮಸೂದೆ ಅಂಗೀಕಾರವಾಗುತ್ತಲೇ ಸುಪ್ರೀಂಕೋರ್ಟ್ನ ಆವಾರ ತಲುಪುವ ಲಕ್ಷಣಗಳು ನಿಚ್ಚಳವಾಗಿವೆ.
ಜನಲೋಕಪಾಲ ವಿಷಯವನ್ನು ಕೇಜ್ರಿವಾಲರು ಅದು ಹೇಗೋ ನಿಭಾಯಿಸಿಬಿಡುತ್ತಾರೆ ಅಂದುಕೊಂಡರೂ ಪ್ರತಿದಿನದ ಆಡಳಿತದಲ್ಲಿ ಅವರು ಸಾಕಷ್ಟು ಅಡೆತಡೆಗಳನ್ನು ಎದುರಿಸುತ್ತಲೇ ಸಾಗಬೇಕಿದೆ. ಎರಡು ಭಿನ್ನ ಮತಬ್ಯಾಂಕ್ಗಳ ನಡುವೆ ಸಮತೋಲನವನ್ನು ಸಾಧಿಸುವುದು ಹೇಗೆ ಎಂಬ ಸಂಕಷ್ಟದಲ್ಲಿ ಅವರಿದ್ದಾರೆ. ಕೇಜ್ರಿವಾಲರು ದೆಹಲಿಯ ಆಟೊ ಡ್ರೈವರ್ಗಳನ್ನು ಹಿಂದೆ ಮುಂದೆ ನೋಡದೇ ಬೆಂಬಲಿಸಿರುವುದು ಅಲ್ಲಿನ ಮಧ್ಯಮ ವರ್ಗವನ್ನು ರೊಚ್ಚಿಗೆ ಏಳಿಸಿದೆ. ಆಟೊ ಡ್ರೈವರ್ಗಳಿಗೆ ಸಂಪೂರ್ಣ ಬೆಂಬಲವನ್ನು ನೀಡುವುದರ ಮೂಲಕ ಪ್ರಯಾಣಿಕರನ್ನು ಶೋಷಿಸುವುದಕ್ಕೆ ಆಪ್ ಸರ್ಕಾರವೇ ದಾರಿ ಮಾಡಿಕೊಡುತ್ತಿದೆ ಎಂದು ಅವರೆಲ್ಲ ಬುಸುಗುಡುತ್ತಿದ್ದಾರೆ. ಶೀಲಾ ದೀಕ್ಷಿತರ ಸರ್ಕಾರವನ್ನು ಸಂಪೂರ್ಣ ವಿರೋಧಿಸಿ ಆಪ್ನ ಬೆನ್ನಿಗೆ ನಿಂತಿದ್ದ ಆಟೊ ಚಾಲಕರ ವರ್ಗ, ಇದೀಗ ತಮ್ಮ ಬೆಂಬಲದ ಪಕ್ಷವೇ ಅಧಿಕಾರಕ್ಕೆ ಬಂದಿರುವುದರಿಂದ ಪ್ರತಿಫಲವನ್ನು ಅಪೇಕ್ಷಿಸಿದ್ದಾರೆ. ಲೋಕಸಭೆ ಚುನಾವಣೆಗೆ ಈ ಶ್ರಮವರ್ಗ ಮತ್ತು ಮಧ್ಯಮವರ್ಗಗಳೆರಡೂ ಆಪ್ಗೆ ಬೇಕು. ಅದೇ ಅದರ ದ್ವಂದ್ವ.
ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಆಕ್ರೋಶವನ್ನು ತಣ್ಣಗಾಗಿಸುವುದಕ್ಕೂ ಕೇಜ್ರಿವಾಲರು ಹರಸಾಹಸ ಪಡುತ್ತಿದ್ದಾರೆ. ಅವರ ಕೆಲಸವನ್ನು ಕಾಯಂ ಆಗಿಸುತ್ತೇವೆ ಎಂದು ಸಾರಿತ್ತು ಆಪ್ ಪ್ರಣಾಳಿಕೆ. ಆದರೆ ಅಧಿಕಾರಕ್ಕೆ ಬರುತ್ತಲೇ ಹೀಗೆಲ್ಲ ಏಕಾಏಕಿ ಜಾರಿ ಎಂಬುದು ಆಗದ ಮಾತು ಎಂಬುದು ಆಪ್ಗೆ ಮನದಟ್ಟಾಯಿತು. ಅವರನ್ನೆಲ್ಲ ಕಾಯಂ ಆಗಿಸುವುದು ನಿಯಮಗಳ ಪ್ರಕಾರ ಅಷ್ಟು ಸುಲಭದ ಕೆಲಸವೇನೂ ಅಲ್ಲ. ಬದಲಾವಣೆಯ ನಿಯಮಗಳನ್ನು ರೂಪಿಸುವುದಕ್ಕೆ ಸರ್ಕಾರಕ್ಕೆ ಒಂದಿಷ್ಟು ಸಮಯ ಬೇಕೆ ಬೇಕಾಗಿದೆ.
ವಿದ್ಯುತ್ ಮತ್ತು ನೀರಿನ ವಿಷಯದಲ್ಲೂ ಸರ್ಕಾರ ಇನ್ನೂ ಸ್ಪಷ್ಟತೆ ಸಾಧಿಸಿಲ್ಲ ಎಂಬ ಬಗ್ಗೆ ಸಾಮಾನ್ಯ ಜನ ಸಿಟ್ಟು ಮಾಡಿಕೊಂಡಿದ್ದಾರೆ. ಅವರ ಸಹನೆ ದಿನೇ ದಿನೆ ಕಡಿಮೆಯಾಗುತ್ತಿದೆ. ಇವೆಲ್ಲದರ ನಡುವೆಯೇ ಆಪ್ ಲೋಕಸಭೆ ಚುನಾವಣೆಗೆ ಸಿದ್ಧವಾಗಬೇಕಿದೆ. ಕೇಜ್ರಿವಾಲರಿಗೂ ಲೋಕಸಭೆಗೆ ಸ್ಪರ್ಧಿಸುವ ಉಮೇದು ಇದ್ದಂತಿದೆ. ಹಾಗಿದ್ದರೆ ದೆಹಲಿ ಸರ್ಕಾರದ ನೇತೃತ್ವ ಯಾರು ವಹಿಸುತ್ತಾರೆ? ಇಷ್ಟಕ್ಕೂ ಲೋಕಸಭೆ ಚುನಾವಣೆಯವರೆಗೆ ಆ ಸರ್ಕಾರ ಬಾಳುತ್ತದೆಯೇ?
ಕೆಲವು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಅಭಿಪ್ರಾಯ ಪಡುವ ಪ್ರಕಾರ ಕೇಜ್ರಿವಾಲರಿಗೆ ಈ ಪಕ್ಷಗಳು ತಮ್ಮ ಸರ್ಕಾರವನ್ನು ಬೀಳಿಸಲಿ ಎಂಬ ಅಭಿಲಾಷೆ ಇದೆ. ಹಾಗಾದರೆ ಅವರು ತಮ್ಮ ಅಸಹಾಯಕತೆಯನ್ನೇ ನೆಪ ಮಾಡಿಕೊಳ್ಳಬಹುದು. ಅವರಿಗೆ ಈ ಲಾಭ ಸಿಗದಿರಲಿ ಎಂದೇ ಕಾಂಗ್ರೆಸ್ ಮತ್ತು ಬಿಜೆಪಿಗಳು ಲೋಕಸಭೆ ಚುನಾವಣೆವರೆಗೂ ಆಪ್ ಅಧಿಕಾರದಲ್ಲಿ ಮುಂದುವರಿಯಲಿ ಎಂದು ಬಯಸಿವೆ.
ಪ್ರಸ್ತಾವಿತ ಜನಲೋಕಪಾಲ ಮಸೂದೆ ಆಪ್ಗೆ ಅಗ್ನಿಪರೀಕ್ಷೆಯಂತಾಗಿದೆ. ಇದರ ಯಶಸ್ಸು ಅಥವಾ ವೈಫಲ್ಯಗಳೇ ದೆಹಲಿಯಲ್ಲಿ ಆಪ್ ಸರ್ಕಾರದ ಭವಿಷ್ಯವನ್ನು ನಿರ್ಧರಿಸುವ ಅಂಶ. 'ನಾನು ಅಧಿಕಾರ ಬಿಡುವುದಕ್ಕೆ ಸಿದ್ಧ' ಎಂಬ ಕೇಜ್ರಿವಾಲರ ಮಾತು ಈಗ ಕ್ಲೀಷೆ ಎನಿಸಿಬಿಟ್ಟಿದೆ. ಅದು ಜನರಿಗೆ ಆಘಾತವನ್ನೇನೂ ಕೊಡದೆ ವ್ಯಂಗ್ಯಕ್ಕೆ ಅವಕಾಶ ಮಾಡಿಕೊಡುತ್ತಿದೆ. ಕೇಜ್ರಿವಾಲ್ ಸಹ ವೃತ್ತಿಪರ ರಾಜಕಾರಣಿಗಳಂತೆ ಬೆದರಿಕೆ ಮಾರ್ಗಕ್ಕೆ ಎಳಸಿದ್ದಾರೆ ಎಂದು ಕೆಲವರು ಟೀಕೆಗಿಳಿದಿದ್ದಾರೆ. ಹೀಗಾಗಿ ಈ ಹಾದಿ ಅವರನ್ನು ಬಹುದೂರವೇನೂ ಕರೆದೊಯ್ಯದು.
-ಡಿ. ಪಿ ಸತೀಶ್
ಸಿಎನ್ಎನ್-ಐಬಿಎನ್