ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕುಂವೀ, ಬಶೀರ್ 'ಪ್ರವರ'

ಜ್ಞಾನಪೀಠ ಪ್ರಶಸ್ತಿ ಪಡೆದವರು ಮಾತ್ರ ಸಾಹಿತಿಗಳಲ್ಲ ಎಂದ ಸಾಹಿತಿ ಕುಂ.ವೀರಭದ್ರಪ್ಪನವರ ಹೇಳಿಕೆ ಬಾರೀ ಚರ್ಚೆಗೀಡಾಗಿತ್ತು...

Rashmi Kasaragodu
Updated On : 13 Feb 2014, 8:06 am

ಜ್ಞಾನಪೀಠ ಪ್ರಶಸ್ತಿ ಪಡೆದವರು ಮಾತ್ರ ಸಾಹಿತಿಗಳಲ್ಲ ಎಂದ ಸಾಹಿತಿ ಕುಂ.ವೀರಭದ್ರಪ್ಪನವರ ಹೇಳಿಕೆ ಬಾರೀ ಚರ್ಚೆಗೀಡಾಗಿತ್ತು. ಪ್ರಸ್ತುತ ಹೇಳಿಕೆ  ಸಾಹಿತ್ಯವಲಯದಲ್ಲಿ ಮಾತ್ರವಲ್ಲ ಫೇಸ್‌ಬುಕ್‌ನಲ್ಲೂ ಅಷ್ಟೇ ಚರ್ಚೆಗೊಳಪಟ್ಟಿತ್ತು. ಈ ಬಗ್ಗೆ ಕುಂವೀ ಅವರ ಪುತ್ರ ಪ್ರವರ ಕೊಟ್ಟೂರು ಮತ್ತು ಪತ್ರಕರ್ತ ಬಿಎಂ ಬಶೀರ್ ನಡುವೆ ಫೇಸ್‌ಬುಕ್‌ನಲ್ಲಿ ನಡೆದ ಪ್ರಶ್ನೆ -ಪ್ರತಿಪ್ರಶ್ನೆಗಳನ್ನೇ ಈ ಬಾರಿ ಫೇಸ್‌ಬುಕ್‌ನಲ್ಲಿ ಕಂಡಂತೆ ಅಂಕಣಕ್ಕೆ ಆಯ್ದುಕೊಳ್ಳಲಾಗಿದೆ.

ಪ್ರವರ ಕೋಪ ಮಾಡಿಕೊಂಡಿದ್ದೇಕೆ?


ನಮಸ್ತೆ ಬಶೀರಣ್ಣ...
ನೀವು ಪತ್ರಕರ್ತರೆನ್ನೋ ಕಾರಣಕ್ಕೆ ಒಂದು ಮಾತು ಹೇಳಲು ಬಯಸುತ್ತೇನೆ,
ಯಾವುದೇ ವಿಷಯವನ್ನ ಸಂಪೂರ್ಣವಾಗಿ ತಿಳಿದುಕೊಳ್ಳದೆ ಉಡಾಫೆಯಾಗಿ ತಮ್ಮ ವಾಲಿನ ಮೇಲೆ ಬರೆದುಕೊಳ್ಳುವುದನ್ನ ಆದಷ್ಟು ಅವಾಯ್ಡ್ ಮಾಡಿ, ನೀವು ಅಂದುಕೊಂಡಿದ್ದೆಲ್ಲಾ ಸತ್ಯ, ಅದೇ ಫೈನಲ್ ಎನ್ನುವ ಮನಸ್ಥಿತಿ ಅರೋಗ್ಯಕರವಲ್ಲ.
* ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಪ್ರಯತ್ನಿಸುತ್ತಿದ್ದಾರೆಂದು ಕುಂವೀಯವರು ತಮಗೆ ಹೇಳಿದ್ದಾರೆಯೇ?
* ಕುಂವೀಯವರು ವೇದಿಕೆ ಮೇಲೆ ಏನು ಹೇಳಿದ್ದಾರೆ, ಯಾವ ಪ್ರಶ್ನೆಗೆ ಉತ್ತರಿಸಿದ್ದಾರೆ ನಿಮಗೆ ಪೂರ್ತಿ ಗೊತ್ತಿದೆಯೇ?  

ಕೆಲವು ದಿನಗಳ ಹಿಂದೆ ಪ್ರವರ  ಹೀಗೊಂದು ಸ್ಟೇಟಸ್ ಹಾಕಿದ್ದರು. ಈ ಸ್ಟೇಟಸ್‌ಗೆ ಕಾರಣವಾಗಿದ್ದು ಪತ್ರಕರ್ತ ಬಿಎಂ ಬಶೀರ್ ಅವರ ಸ್ಟೇಟಸ್
 
ಬಶೀರ್ ಅವರ ಸ್ಟೇಟಸ್
"ಸರಸ್ವತಿ ಸಮ್ಮಾನ್'' ಪಡೆಯಲು ಕುಂ. ವೀ. ಪೀಠಿಕೆಯೇ ?

ಜ್ಞಾನಪೀಠ ಪ್ರಶಸ್ತಿ ಪಡೆದವರು ಮಾತ್ರ ಸಾಹಿತಿಗಳಲ್ಲ ಎಂದಿದ್ದಾರೆ ಕುಂ. ವೀರಭದ್ರಪ್ಪ. ನನ್ನ ಕೆಂಡದಂತಹ ಯೌವನದ ಕಾಲದಲ್ಲಿ ಕುಂವೀ ಅವರ ‘ಕೆಂಡದ ಮಳೆ ಸುರಿವಲ್ಲಿ ಉದಕವಾದೋರು’ ಕೃತಿ ಓದಿ ಮೈಯನ್ನು ಇನ್ನಷ್ಟು ಬೆಚ್ಚ ಮಾಡಿಕೊಂಡವನು ನಾನು. ಆದರೆ ಅವರ ಇತ್ತೀಚಿನ ಕೆಲವು ಬರಹಗಳ ಕುರಿತಂತೆ ನನಗೆ ಕೆಲವು ಆಕ್ಷೇಪಗಳಿವೆ. ಅದು ಪಕ್ಕಕ್ಕಿರಲಿ.
ಜ್ಞಾನಪೀಠ ಪ್ರಶಸ್ತಿ ಮಾತ್ರವಲ್ಲ, ಯಾವ ಪ್ರಶಸ್ತಿಯೂ ಒಂಬ ಸಾಹಿತಿಯ ಪ್ರತಿಭೆಗೆ ಮಾನದಂಡವಲ್ಲ. ನೋಬೆಲ್ ಬಹುಮಾನ ಕೂಡ ಅಷ್ಟೇ. ಗಾಂಧಿಗೆ ಸಿಗದ ನೋಬೆಲ್ ಕುರಿತಂತೆ ಇಂತಹ ಮಾತುಗಳನ್ನು ಧಾರಾಳವಾಗಿ ಆಡಬಹುದು. ಆದರೆ ಒಂದು ಪ್ರಶಸ್ತಿಯನ್ನು ನಾನ್‌ಸೆನ್ಸ್ ಎನ್ನೋದು ಮಾತ್ರ ಸರಿಯಲ್ಲ. ಯಾಕೆಂದರೆ ಜ್ಞಾನ ಪೀಠ ಪ್ರಶಸ್ತಿ ಪಡೆದವರಷ್ಟೇ ಸಾಹಿತಿಗಳಲ್ಲ ಎನ್ನುವುದು ನಿಜ. ಹಾಗೆಂದು ಆ ಕಾರಣಕ್ಕಾಗಿಯೇ ಜ್ಞಾನಪೀಠ ಪ್ರಶಸ್ತಿ ಪಡೆದವರು ಸಾಹಿತಿಗಳಲ್ಲ ಎನ್ನುವುದು ನಾನು ನಂಬೋಲ್ಲ. ಇದರಲ್ಲಿ ಕುಂ. ವೀ. ಅವರ ಹತಾಶೆಯನ್ನು ನಾನು ಗುರುತಿಸಬಲ್ಲೆ.
ಒಂದೆಡೆ ಜ್ಞಾನಪೀಠವನ್ನು ನಾನ್‌ಸೆನ್ಸ್ ಎಂದೂ ಕುಂವೀ ಕರೆಯುತ್ತಾರೆ. ಮಗದೊಂದೆಡೆ ಅನಂತಮೂರ್ತಿ ಮತ್ತು ಕಾರ್ನಾಡ್ ಅವರು ಜ್ಞಾನಪೀಠಕ್ಕೆ ಅಪಾತ್ರರು ಎಂದೂ ಕರೆಯುತ್ತಾರೆ. ಈ ಸಾಲು ಪರಸ್ಪರ ವಿರೋಧಾಭಾಸದಿಂದ ಕೂಡಿದೆ. ಜ್ಞಾನಪೀಠ ನಾನ್‌ಸೆನ್ಸ್ ಆದ ಕಾರಣಕ್ಕೆ ಅನಂತಮೂರ್ತಿ, ಕಾರ್ನಾಡ್ ಅನರ್ಹರು ಎಂಬಂತಹ ಧ್ವನಿಯೂ ಇದರ ಹಿಂದೆ ಇದೆ. ಅದೇನೇ ಇರಲಿ. ಜ್ಞಾನಪೀಠ ಪ್ರಶಸ್ತಿ ಈ ಹಿಂದೆ ಹತ್ತು ಹಲವು ಮಹನೀಯ ಲೇಖಕರಿಗೆ ದೊರಕಿದೆ. ಪಕ್ಕದ ಕೇರಳ, ಪಂಜಾಬ್, ಪಶ್ಚೀಮ ಬಂಗಾಳ ಸೇರಿದಂತೆ ಹಲವು ಶ್ರೇಷ್ಟ ಲೇಖಕ ಮಹನೀಯರಿಗೆ ಸಿಕ್ಕಿದ ಕಾರಣಕ್ಕಾಗಿಯೇ ಜ್ಞಾನಪೀಠ ಇವತ್ತು ಘನತೆಯನ್ನು ಪಡೆದಿದೆ. ಜ್ಞಾನಪೀಠವನ್ನು ನೀಡಲು ಖಾಸಗಿ ಸಮಿತಿಗೆ ಅವರದೇ ಆದ ಮಾನದಂಡ ಇರಬಹುದು. ನೋಬೆಲ್ ಪ್ರಶಸ್ತಿಯ ಹಿಂದೆ ರಾಜಕೀಯ ಇದೆ. ಗಾಂಧಿಗೆ ನೋಬೆಲ್ ಸಿಗಲಿಲ್ಲ ಎಂದು, ನೋಬೆಲ್ ದೊರಕಿದವರನ್ನು ನೀವಾಳಿಸಿ ತೆಗೆಯಲು ಸಾಧ್ಯವಿಲ್ಲ. ನೋಬೆಲ್‌ನ್ನು ನಾನ್‌ಸೆನ್ಸ್ ಎಂದವರೂ ಇದ್ದಾರೆ. ಹಾಗೆಂದು ನೋಬೆಲ್ ಇರಬಾರದು ಎಂದರೂ ಅರ್ಥವಿಲ್ಲ.
ಜ್ಞಾನಪೀಠದಂತಹ ಶ್ರೇಷ್ಠ ಪ್ರಶಸ್ತಿ ಇರಲಿ. ಅದು ತನ್ನ ಕೆಲಸ ಮಾಡುತ್ತಿರಲಿ. ಅದು ಸಿಗದೇ ಇದ್ದ ಕಾರಣಕ್ಕಾಗಿ ಯಾರೂ ಲಂಕೇಶನ್ನು, ತೇಜಸ್ವಿಯನ್ನು ತಿರಸ್ಕರಿಸಲಿಲ್ಲ ಎನ್ನೋದು ನೆನಪಿರಲಿ. ಗೋಕಾಕ್‌ರಂತಹ ಲೇಖಕ ಬರೆದ ಭಾರತ ಸಿಂಧೂ ರಶ್ಮಿಗೆ ಜ್ಞಾನಪೀಠ ಸಿಕ್ಕಿದೆ. ಆದರೆ ಆ ಕೃತಿ ಈಗ ಎಲ್ಲಿದೆ, ಎಷ್ಟು ಜನರ ಮನಸ್ಸಿನಲ್ಲಿದೆ? ಎನ್ನೋದನ್ನು ಕುಂವೀ ಹೇಳುತ್ತಾರೆಯೆ? ಹಾಗೆಂದು ಜ್ಞಾನಪೀಠ ಪ್ರಶಸ್ತಿ ಸಿಕ್ಕಿದ ಕೃತಿಗಳೆಲ್ಲವೂ ಜನರನ್ನು ತಲುಪಿಯೇ ಇಲ್ಲ ಎಂದೂ ಹೇಳಲಾಗುತ್ತದೆಯೆ? ಎಲ್ಲದಕ್ಕೂ ಅದರದೇ ಆದ ಮಿತಿಗಳಿವೆ. ಯಾವುದೂ ಅಂತಿಮ ಅಲ್ಲ.
ಅಂದ ಹಾಗೆ ಜ್ಞಾನಪೀಠ ಪ್ರಶಸ್ತಿಯ ಮಾತನ್ನು ಆಡುವಾಗ "ಸರಸ್ವತಿ ಸಮ್ಮಾನ್'' ಎನ್ನುವ ಪ್ರಶಸ್ತಿಯೊಂದರ ಬಗ್ಗೆ ಕುಂವೀ ಜಾಣ ವೌನ ತಾಳಿದ್ದರು. ಇದು ಶೀಘ್ರದಲ್ಲೇ ಕುಂ. ವೀರಭದ್ರಪ್ಪ ‘ಸರಸ್ವತಿ ಸಮ್ಮಾನ್’ಗೆ ಆಯ್ಕೆಯಾಗುವ ಸೂಚನೆಯಾಗಿದೆಯೆ? ಅದೇನೇ ಇರಲಿ. ಜ್ಞಾನಪೀಠ ಸಿಕ್ಕಲಿ, ಸಿಗದೇ ಇರಲಿ, ಸಂಸ್ಕಾರದ ಅನಂತಮೂರ್ತಿ ಇಂದಿಗೂ ಈ ನಾಡಿನ ಕಷ್ಟ ಸುಖದ ಸಂದರ್ಭದಲ್ಲಿ ಬಾಯಿತೆರೆದು ಮಾತನಾಡುತ್ತಿದ್ದಾರೆ. ಕುಂವೀಯಂಥಹ ಹಿರಿಯರು ಸದಾ ಸಮಯ ಸಂದರ್ಭ ನೋಡಿ ಬಾಯಿ ತೆರೆಯುತ್ತಾರೆ. ಅನಂತಮೂರ್ತಿಯನ್ನು ಇಷ್ಟ ಪಡಲು ಸಂಸ್ಕಾರ ಒಂದು ಸಾಕು. ಕಾರ್ನಾಡ್‌ನ್ನು ಮೆಚ್ಚಲು ತುಘಲಕ್ ಸಾಕು. ಅನಗತ್ಯವಾಗಿ ಕುಂವೀ ಮಾಡಿರುವ ರಂಪದಿಂದ, ಸಂಘಪರಿವಾದ ಜನರು ಭೂರಿ ಭೋಜನ ಸಿಕ್ಕಿದವರಂತೆ ಹಾರಾಡುತ್ತಿದ್ದಾರೆ. ಸಂಘಪರಿವಾರಕ್ಕೆ ಆಹಾರ ಮಾಡಿಕೊಟ್ಟದ್ದರ ಹಿಂದೆ ಅದೇನು ಸಾಹಿತ್ಯ ರಾಜಕೀಯವಿದೆಯೋ ಕಾಲವೇ ಹೇಳಬೇಕು.


ಇವರಿಬ್ಬರ ನಡುವೆ ಫೇಸ್‌ಬುಕ್‌ನಲ್ಲಿ ನಡೆದ ಕಾಮೆಂಟ್ ವಿನಿಮಯ ಹೀಗಿದೆ.

Bm Basheer Bm Bm: ಪ್ರೀತಿಯ ಪ್ರವರ, ನೀವು ಹುಟ್ಟಿ, ಜಗತ್ತನ್ನು ಸರಿಯಾಗಿ ಕಣ್ಣು ಬಿಟ್ಟು ನೋಡುವ ಮೊದಲೇ ನಾನು ಕುಂ ವೀ ಅವರ ಬರಹಗಳನ್ನು ಓದಿ ರೋಮಾಂಚನ ಗೊಂಡವನು. ಅವರ ಬರಹಗಳನ್ನು ಓದುತ್ತಾ ಬೆಳೆದವನು. ಹೀಗಿರುವಾಗ ಅವರ ಬಗ್ಗೆ ಅಭಿಮಾನ ಪಡಲು ನಿಮಗಿಂತ ಹೆಚ್ಚು ಕಾರಣಗಳು ನನ್ನಲ್ಲಿವೆ. ನಾನು ಎಂದು ಉಡಾಫೆ ಯಾಗಿ ಬರೆದು ಕೊಳ್ಳಲು ನನ್ನ ವಾಲ್ ನ್ನು ಬಳಸಿಕೊಂಡಿಲ್ಲ. ನಾನು ನಂಬಿದ್ದನ್ನು ಅಷ್ಟೇ ನಾನು ಬರಕೊಂಡಿದ್ದೇನೆ. ನಾನು ಬರೆದದ್ದೇ ಸತ್ಯ ಎಂದು ನಾನು ಯಾವತ್ತು ಬರೆದಿಲ್ಲ. ನನಗೆ ಸತ್ಯ ಅಂತ ಕಂಡದ್ದನ್ನಷ್ಟೇ ಬರೆದಿದ್ದೇನೆ. ಮತ್ತು ಕುಂ ವೀ ಮಾತುಗಳು ಯಾಕೆ ಅಪ್ರಾಮಾಣಿಕ ಎನ್ನೋದಕ್ಕೆ ಕಾರಣಗಳನ್ನು ಇಟ್ಟಿದ್ದೇನೆ. ನನ್ನ ತಮ್ಮನ ಸಿಟ್ಟು ಅವನ ಕವಿತೆಗಳಷ್ಟೇ ಮುದ್ದಾಗಿವೆ. ಬೇಜಾರಾಗಿದ್ರೆ ಕ್ಷಮಿಸಿ


Pravara Kottur : ನೀವು ಕಥೆಗಳನ್ನ ತುಂಬಾ ಓದಿರಬಹುದು... ಆದರೆ ಹತ್ತಿರವಿದ್ದು ಎಲ್ಲವನ್ನೂ ಗಮನಿಸುತ್ತಾ ಬಂದಿದ್ದೇನೆ, ನಾನು ಯಾವುದಕ್ಕೂ ಸಮರ್ಥಿಸಿಕೊಳ್ಳುತ್ತಿಲ್ಲ, ಆ ಜಾಯಮಾನವೂ ನನ್ನದಲ್ಲ, ಆದರೆ ಒಂದು ಹೇಳಿಕೆಯ ಹಿಂದೆ ಏನೆಲ್ಲಾ ಕಾರಣಗಳಿರಬಹುದು ನಿಮಗೆ ಗೊತ್ತೆ?
ಜ್ನಾನಪೀಠದ ಬಗ್ಗೆ ಹೇಳಿಕೆ ಕೊಟ್ಟಾಗ ಅದನ್ನು ಜರಿಯುವ ಭರದಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಪೀಠಿಕೆ ಹಾಕುತಿದ್ದಾರೆ ಎಂದು ತಾವು ಬರೆದುಕೊಂಡಿದ್ದೀರಿ... ಸಂತೋಷ... ಆದರೆ ಯಾವ ಅಧಾರದ ಮೇಲೆ ನೀನು ಮನುಷ್ಯನನ್ನು ಎಡ- ಬಲವೆಂದು ತೀರ್ಮಾನಿಸುತ್ತೀರಿ? ಎಲ್ಲಾ ಶಾಲೆಗಳ ಗೋಡೆಗಳ ಮೇಲೆ ಜ್ನಾನಪೀಠಿಗಳ ಚಿತ್ರಗಳನ್ನು ಬರೆದು ಸಾಹಿತ್ಯ ಲೋಕಕ್ಕೆ ವಾರಸುದಾರರು ಎಂದು ಬಿಂಬಿಸುವ ಕೆಲಸ ಮಾಡುತಿದ್ದಾರೆ, (ಅದರಲ್ಲೂ ಕಾರ್ನಾಡರು ಮತ್ತು ಅನಂತಮೂರ್ತಿಯವರು) ಅವರ ಹೊರತಾಗಿಯೂ ಕನ್ನಡ ಸಾಹಿತ್ಯಕ್ಕೆ ಹೆಚ್ಚು ಕೊಡುಗೆ ನೀಡಿದ ಹಲವು ಸಾಹಿತಿಗಳಿದ್ದಾರೆ ಅವರ್ಯಾರು ಲೆಕ್ಕಕ್ಕೇ ಇಲ್ಲವೇ ಎಂದು ಪ್ರಶ್ನೆ? ನೀವು ನಿಮ್ಮ ಗುರುಗಳಾದ ಅನಂತಮೂರ್ತಿಯವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಕುಂವೀಯವರು ಸಂಘಿಗಳಿಗೆ ಮಣೆ ಹಾಕುತಿದ್ದಾರೆ ಹಾಗೆ ಹೀಗೆ ಎಂದು ವಿಷಯಾಂತರ ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದೀರಿ ಅನ್ನಿಸುತ್ತಿದೆ... ಈ ಬಗ್ಗೆ ಗಮನ ಕೊಡಿ....

ಈ ಮಾತುಗಳನ್ನು ಕುಂವೀಯವರ ಮಗನಾಗಿಯೂ, ನಿಮ್ಮ ಬರಹಗಳ ಅಭಿಮಾನಿಯಾಗಿಯೂ ಹೇಳುತಿದ್ದೇನೆ
Bm Basheer Bm Bm




ಫೇಸ್‌ಬುಕ್‌ನಲ್ಲಿ ನಡೆದ ಈ ಚರ್ಚೆಗೆ ಉಳಿವರು ಹಾಕಿದ ಕಾಮೆಂಟು
Shivanand Kubsad :ನಾನು ಕುಂ.ವೀ.ಯವರ ನಾಲ್ಕೈದು ಭಾಷಣಗಳನ್ನು ಕೇಳಿದ್ದೇನೆ..
ನಾ ಕಂಡಂತೆ ಅವರದು ನೇರ,ಸಿದ್ಧಪಡಿಸದೇ ,ಹೇಗನಿಸುತ್ತದೋ ಹಾಗೆ ಬರುವ ಮಾತು..
ಉಳಿದವರ ಹಾಗೆ "ಪಾಲೀಶ್" ಗೊಂಡ ಮಾತು ಅಲ್ಲ.
ಅವರು ಅಂದು ಹೇಳಿದ್ದನ್ನು ಬಹುತೇಕ ಕನ್ನಡಿಗರು ಮನಸ್ಸಿನಲ್ಲೇ ಅಂದು ಕೊಂಡಿದ್ದಾರೆ.
ಅವರು ಅದನ್ನು 'ಓಪನ್' ಆಗಿ ಹೇಳಿದ್ದಾರೆ..ಅಷ್ಟೇ....!!
ಅಲ್ವಾ...? (ಮಾತಿನ ಕೊನೆಗೆ "ಆಲ್ವಾ"..ಅನ್ನುವುದೂ ಕೂಡ ಅವರದೇ ಸ್ಟೈಲು..!!)


Abhinav Zen: ಕುಂ.ವಿ. ಯವರ ಮಗನಾದ ಮಾತ್ರಕ್ಕೆ ಪರವಾಗಿ ಮಾತನಾಡಬೇಕಾದ ಅಥವಾ ಅವ ಬರಹಗಾರನಾದ ಮಾತ್ರಕ್ಕೆ ವಿರೋಧಿಸಲೇಬೇಕಾದ ಅನಿವಾರ್ಯತೆ ಇಲ್ಲ. ಅವನಿಗೆ ಅನ್ನಿಸಿದ್ದನ್ನು ಹೇಳಲು, ಸಮರ್ಥಿಸಲು ಆ ಅಭಿವ್ಯಕ್ತಿ ಸ್ವಾತಂತ್ರ್ಯ ಅವನಿಗಿರುವಾಗ ನಮ್ಮಗಳ ಅಭಿಪ್ರಾಯವನ್ನು ಅವನ ಮೇಲೆ ಹೇರಲಾಗದು... ನಾವು ವಿಷಯಕ್ಕೆ ಬರಬೇಕು, ಸಂಬಂಧಗಳಿಗೆ ಅಲ್ಲವೇ ಅಲ್ಲ.



Pramod Pammi: ಪ್ರವರಣ್ಣ ಕುಂ.ವಿ ಸರ್ ಮಾತಿನಲ್ಲಿ ನನಗೆ ಯಾವ ತಪ್ಪೂ ಕಾಣಲಿಲ್ಲ. ಅವರ ಮಾತುಗಳನ್ನು ಸರಿಯಾಗಿ ಕೇಳಿದವರು, ಅವರ ಮಾತುಗಳಿಗೆ ಪ್ರತಿಯಾಗಿ ಮಾತನಾಡುತ್ತಿರಲಿಲ್ಲ. ಅವರ ಮಾತುಗಳನ್ನು ವಿರೋಧಿಸುವ ಕೆಲವರು ಯಾವುದೋ ಮಾಧ್ಯಮ ಬಿತ್ತರಿಸಿದ ಸುದ್ದಿಗಳಿಂದ ಪ್ರಭಾವಿತರಾಗಿ ಮಾತನಾಡುತ್ತಿದ್ದಾರೆ ಎಂದೆನಿಸುತ್ತದೆ. ನೀವು ಕುಂ.ವಿಯವರ ಮಾತಿನ ಭಾವಾರ್ಥವನ್ನು ಮೇಲಿನ ಸಾಲುಗಳೊಂದಿಗೆ ಸೇರಿಸಿದ್ದರೆ ಚೆನ್ನಿತ್ತು. ಇರಲಿ ಪ್ರತಿ ಮಾತನಾಡುವವರಿಗೆ ಅವರ ಭಾವಾರ್ಥವನ್ನು ವಿವರಿಸುವ ಪ್ರಯತ್ನ ಮಾಡುತ್ತೇನೆ.
ಅವರು ಹೇಳಿದ ವಾಕ್ಯವೊಂದು ಎಲ್ಲಾ ಪತ್ರಿಕೆಗಳ ತಲೆ ಬರಹವಾವಾಗಿತ್ತು ಅದೇನೆಂದರೆ, "ಜ್ಞಾನಪೀಠ ಎನ್ನುವುದು ನಾನ್ ಸೆನ್ಸ್". ಅವರು ಹಾಗೆ ಹೇಳುವುದಕ್ಕೆ ಕಾರಣವಿದೆ, ಅದೇನೆಂದರೆ ಜ್ಞಾನಪೀಠ ಪ್ರಶಸ್ತಿ ಕೊಡುವ ಸಾಹಿತ್ಯ ವೇದಿಕೆಯಲ್ಲಿ ಕೇವಲ ಆಂಗ್ಲ ಭಾಷೆಗೆ ಅನುವಾದವಾದ ಕೃತಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಆದರೆ ಅನುವಾದಗೊಳ್ಳದ ಎಷ್ಟೋ ಸಂಪದ್ಭರಿತ ಕೃತಿಗಳಿವೆ. ಆದರೆ ಅದು ಪರಿಗಣನೆಗೆ ಬರದೆ ಎಲೆ ಮರೆ ಕಾಯಿಯಾಗುತ್ತವೆ. ಇದನ್ನು ಅವರು ತಮ್ಮ ಎಂದಿನ ಧಾಟಿಯಲ್ಲಿ ನೇರವಾಗಿ ಹೇಳಿದ್ದಾರೆ.
ಇನ್ನೂ ಅವರು ಅನಂತಮೂರ್ತಿಯವರ ಹಾಗೂ ಕಾರ್ನಾಡರ ಸಾಹಿತ್ಯ ಕುಸುರಿಯನ್ನು ತೆಗಳಲಿಲ್ಲ ಆದರೆ ಅವರು ಹೇಳಿರುವುದು ಜ್ಞಾನಪೀಠ ಪಡೆದವರೊಳಗಿದ್ದ ಸತು ಇವರೊಳಗಿಲ್ಲ ಎಂದು ಮಾತ್ರ.
ಕುಂ.ವಿ ಯವರು ಬರೆದ ಅರಮನೆ ಕೃತಿಯನ್ನು ರಚಿಸಲು ೧೪ ವರ್ಷಗಳ ಕಾಲ ಸಂಶೋಧನೆ ನಡೆಸಿದ್ದಾರೆ ಎಂದು ನಾನು ತಿಳಿದಾಗ ತುಂಬಾ ಆಶ್ಚರ್ಯವಾಯಿತು, ಒಂದು ಕೃತಿ ರಚನೆ ಎಷ್ಟು ಕಷ್ಟ ಎಂದು ಆಗಲೇ ತಿಳಿದದ್ದು. ಇವರ ರೀತಿಯಲ್ಲೇ ಎಷ್ಟೊಂದು ಸಾಹಿತಿಗಳು ಅನೇಕ ವರ್ಷಗಳು ಕಷ್ಟ ಪಟ್ಟು ನಿರಂತರವಾಗಿ ಸಾಹಿತ್ಯ ರಚಿಸಿಯೂ ಗೌಣವಾಗುವುದು ಎಂತವರನ್ನೂ ನೋಯಿಸುತ್ತದೆ. ಕನ್ನಡಕ್ಕೆ ಇರುವವರು ಕೇವಲ ೮ನ ಕವಿಗಳು ಎಂಬ ಭಾವನೆಯನ್ನು ನಾವು ಬಿಡಬೇಕು, ಎಲ್ಲಾ ಕೃತಿಗಳನ್ನು ಓದಬೇಕು, ಯಾವ ಕೃತಿ ಹೆಚ್ಚು ಕಾಡುತ್ತದೊ ಅದರ ಕರ್ತೃವೇ ನಿಜವಾದ ಸರಸ್ವತಿ ಪುತ್ರರು. ಪ್ರಶಸ್ತಿಗಳು ಕೇವಲ ನೆಪಗಳಷ್ಟೇ. ಅದು ಸಾಹಿತಿಗಳ ಸತುವನ್ನು ಅಳತೆ ಮಾಡುವ ಮಾಪನವಾಗದು. ಪ್ರಶಸ್ತಿಗಳಿಂದ ವ್ಯಕ್ತಿಗಳನ್ನು ಗುರುತಿಸಬಾರದು. ಜನಮನ ಗೆದ್ದವರೇ ಇಲ್ಲಿ ಪ್ರಶಸ್ತಿಗಳು.


Ganesh Nempe :Pravara Kottur - ಲಂಕೇಶರಂತ ಲಂಕೇಶರೆ ತೇಜಸ್ವಿಯಂತ ತೇಜಸ್ವಿಯವರನ್ನೇ ಟೀಕಿಸದೆ ಬಿಡಲಿಲ್ಲ. ಆದರೂ ತೇಜಸ್ವಿಯ ತೇಜಸ್ಸು ಒಂದು ಚೂರು ಕುಂದಲಿಲ್ಲ. ಚಿನ್ನ ಪುಟವಿಟ್ಟಷ್ಟು ಹೊಳೆಯೋದು ಜಾಸ್ತಿ (ಹೊಳೆಯುವ ಸಮಯ ಬಂದಿದೆ ಹೊಳೀಲಿ ಬಿಡು). ಆದರೆ ದುರಾದೃಷ್ಟಕ್ಕೆ ಆ ನಂತರ ಅವರಿಬ್ರು ಒಟ್ಟಿಗೆ ಕೆಲಸ ಮಾಡಲಿಲ್ಲ. ಈ ದೇಶದಲ್ಲಿ ನೀವು ಕೆಲವೊಂದು ಸತ್ಯಗಳನ್ನ ಹೇಳಿದರೆ ಕೋಮುವಾದಿಗಳಾಗುತ್ತೀರ, ಸಂಘ ಪರಿವಾರದವರ ದೋಸ್ತಿಗಳಾಗುತ್ತೀರ. ಇದನ್ನು ಕೆಲವೊಂದು 'ಗುಂಪುಗಳು' ತುಂಬಾ ವ್ಯವಸ್ತಿತವಾಗಿ ಮಾಡುತ್ತವೆ. ಇನ್ನೂ ಮಾಡುತ್ತಲೇ ಇವೆ. ಈ 'ಗುಂಪುಗಳಿಗೆ' ಆದ್ಯಾಕೆ ಇಷ್ಟು ಅಭದ್ರತೆ, ಕೀಳರಿಮೆ ಕಾಡುತ್ತೋ ಏನೋ, ಪಾಪ!!. ನೀನು ಇಂತಹ ವಿಷಯಗಳಿಗೆ ಸ್ವಲ್ಪ ಹುಷಾರಾಗಿ ಸ್ಪಂದಿಸು ಮಾರಾಯ. ಇಲ್ಲವೆಂದರೆ ನಿನ್ನನ್ನೂ ಯಾವುದಾದರು ಗುಂಪಿಗೆ ಸೇರಿಸಿ ಬಿಡುತ್ತಾರೆ. ಇಂತಹ ಸಲ್ಲದ ರಾಜಕೀಯ ಹಾಗು ರಗಳೆಗಳು ನಿನ್ನ ಸೃಜನಶೀಲ ವ್ಯಕ್ತಿತ್ವಕ್ಕೆ ಮಾರಕವಾಗಬಾರದು..


-ರಶ್ಮಿ ಕಾಸರಗೋಡು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement