ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ವೆಂಡಿ ಪ್ರಕರಣ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವೇ?

Srinivasa Murthy VN
Updated On : 14 Feb 2014, 11:33 am

ಎಲ್ಲದಕ್ಕೂ ಮುನ್ನ ನಾವು ಎರಡು ಪ್ರಮುಖ ಅಂಶಗಳನ್ನು ಸರಿಯಾದ ದೃಷ್ಟಿಕೋನದಿಂದ ನೋಡಬೇಕಿದೆ:
ಮೊದಲನೆಯದು, ವೆಂಡಿ ಡೊನಿಗರ್‌ಳ ಪುಸ್ತಕವನ್ನು (ಹಿಂದೂಸ್: ಆ್ಯನ್ ಅಲ್ಟರ್ನೇಟಿವ್ ಹಿಸ್ಟರಿ) ನಿಷೇಧಿಸಲಾಗಿಲ್ಲ. ಆ ಪುಸ್ತಕವನ್ನು ಪ್ರಕಾಶಕ ಸಂಸ್ಥೆಯಾದ ಪೆಂಗ್ವಿನ್ ಸಂಸ್ಥೆ ಸ್ವಯಂಪ್ರೇರಿತವಾಗಿಯೇ ಹಿಂಪಡೆದಿದೆಯಷ್ಟೆ.
ಇನ್ನು ಎರಡನೆಯದಾಗಿ ಈ ಘಟನೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತ ವಿವಾದವಂತೂ ಅಲ್ಲ. ಏಕೆಂದರೆ ಅತ್ತ ಪೆಂಗ್ವಿನ್ ಪ್ರಕಾಶನವಾಗಲಿ,  ಇತ್ತ ಫಿರ್ಯಾದಿದಾರನಾಗಲಿ ವಾಕ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಭಾರತದ ಕಾನೂನಿನ ರೇಖೆಯಂತೂ ದಾಟಿಲ್ಲ.
ಡೊನಿಗರ್ ಅವರ ಪುಸ್ತಕವನ್ನು ಮಾರುಕಟ್ಟೆಯಿಂದ ಹಿಂಪಡೆಯುವ ಪೆಂಗ್ವಿನ್‌ನ ನಡೆಯನ್ನು ಹೆಚ್ಚಾಗಿ ಖಂಡಿಸುತ್ತಿರುವವರು, ತಮ್ಮನ್ನು ತಾವು ಪ್ರಗತಿಪರರು ಎಂದು ಕರೆದುಕೊಳ್ಳುವವರು. ಈ ಪ್ರಗತಿಪರರ ಖಂಡನೆ, ವೆಂಡಿಯ ವಿದ್ವತ್ ಸಾಮರ್ಥ್ಯವನ್ನು ಓರೆಗಲ್ಲಿಗೆ ಹಚ್ಚುವ ವಿಮರ್ಶಕರ ವಾದವನ್ನು ಬದಿಸರಿಸಿ, ಅತ್ಯಂತ ಚಾಣಾಕ್ಷತನದಿಂದ ಈ ವಿವಾದಕ್ಕೆ ಕೇವಲ "ನಿಷೇಧ" ಮತ್ತು 'ಹಿಂದೂ ಮೂಲಭೂತವಾದದ' ರಂಗನ್ನು ಬಳಿಯುತ್ತಿದೆ. ಡ್ಯಾನಿಶ್ ವ್ಯಂಗ್ಯಚಿತ್ರವೊಂದು ಪ್ರಪಂಚದಾದ್ಯಂತ ಹಚ್ಚಿದ ಕಿಚ್ಚು ಮತ್ತು ಹಿಂಸಾಚಾರವೇ ಮೂಲಭೂತವಾದಕ್ಕೆ ಸ್ವಷ್ಟ ವ್ಯಾಖ್ಯಾನ.
ಆದರೆ ಈ ಪ್ರಕರಣದಲ್ಲಿ ಅರ್ಜಿದಾರರು ಕಾನೂನಿನ ಮೊರೆ ಹೋಗಿದ್ದರು. ಅಲ್ಲದೆ, ಈ ವಿಚಾರವನ್ನು ನ್ಯಾಯಾಲಯದ ಹೊರಗೇ ಇತ್ಯರ್ಥಗೊಳಿಸುವ ನಿರ್ಧಾರ ಮಾಡಿ, ಪುಸ್ತಕವನ್ನು ಹಿಂಪಡೆಯುವ ತೀರ್ಮಾನಕ್ಕೆ ಬಂದಿದ್ದು ಪೆಂಗ್ವಿನ್ ಪ್ರಕಾಶನವೇ. ಹಾಗಾಗೇ ಹಿಂದುತ್ವ ಶಕ್ತಿಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕುತ್ತು ಬಂದಿದೆ ಎಂದು ಕೂಗುವುದು ಅರ್ಥಹೀನವೆನಿಸುತ್ತದೆ.
ಈ ವಿದ್ಯಮಾನದ ಇನ್ನೊಂದು ಪ್ರಮುಖ ಅಂಶವೆಂದರೆ, ಸಾರ್ವಜನಿಕರು ಮತ್ತು ಅಕಾಡೆಮಿಕ್ ವಲಯದಲ್ಲಿನ ಶಕ್ತಿಯ ಅಸಮತೋಲನ. ಇವರುಗಳು ಕೇವಲ ನಿರ್ದಿಷ್ಟ ದೃಷ್ಟಿಕೋನಗಳನ್ನಷ್ಟೇ ಬೆಂಬಲಿಸುತ್ತಾರೆ. ತಮಗೆ ವಿರುದ್ಧವಾದ ನಿಲುವನ್ನು 'ಹಿಂದುತ್ವ ಶಕ್ತಿಗಳ ಕುತಂತ್ರ' ಎಂದೇ ಕರೆದುಬಿಡುತ್ತಾರೆ. ದೀರ್ಘಕಾಲದಿಂದ ಇವರಿಬ್ಬರೂ, ವೆಂಡಿ ಡೊನಿಗರ್‌ರಂಥ ಪಶ್ಚಿಮ ವಿದ್ವಾಂಸರು ಮತ್ತು ಭಾರತದ ಬಹುತೇಕ ಮಾನವಶಾಸ್ತ್ರ ಪರಿಣತರನ್ನು ಪ್ರಾಮಾಣಿಕ ಪರೀಕ್ಷೆಗೊಳಪಡಿಸುವ ಪ್ರಯತ್ನಗಳನ್ನು ತಡೆಗಟ್ಟುತ್ತಲೇ ಬಂದಿದ್ದಾರೆ. ಈಗಲೂ ಹಾಗೆಯೇ ಆಗುತ್ತಿದೆ: ಈ ವಿವಾದಕ್ಕೆ "ಅಭಿವ್ಯಕ್ತಿ ಸ್ವಾತಂತ್ರ್ಯದ" ತೇಪೆ ಹಚ್ಚಿ, ವೆಂಡಿಯ ಪರಿಣತಿಯನ್ನು ಪರೀಕ್ಷಿಸುವ ಕೆಲಸವನ್ನು ತಪ್ಪಿಸಲು ಯತ್ನಿಸಲಾಗುತ್ತಿದೆ.
ಈ ಅಸಮತೋಲನಕ್ಕೆ ಸಂಬಂಧಿಸಿದ ಅಗಾಧ ಸಾಹಿತ್ಯವು ಇಂದು ಅಸ್ತಿತ್ವದಲ್ಲಿದೆ. ಅದರಲ್ಲೂ ಮುಖ್ಯವಾಗಿ ಅಮೆರಿಕದ ಶಿಕ್ಷಣ ಕ್ಷೇತ್ರದ ಭಾರತಾಧ್ಯಯನದಲ್ಲಿ! ದಶಕದ ಹಿಂದೆ, ಲೇಖಕ ರಾಜೀವ್ ಮಲ್ಹೋತ್ರಾ ಅವರು ವೆಂಡಿ ಮತ್ತು ತಂಡದ ಹಳಂಡವನ್ನು ಮೊದಲು ಅನಾವರಣಗೊಳಿಸುವ ಕೆಲಸವನ್ನು ಶುರುಮಾಡಿದರು. ರಾಜೀವ್ 'ವೆಂಡೀಸ್ ಚೈಲ್ಡ್ ಸಿಂಡ್ರೋಮ್‌" ಎನ್ನುವ ಪದವನ್ನೂ ಹುಟ್ಟುಹಾಕಿದರು. ಇನ್ನು ಅದೇ ಸಮಯದಲ್ಲಿ, ಏಷ್ಯನ್ ಅಧ್ಯಯನದಲ್ಲಿ ಪಿಹೆಚ್‌ಡಿ ಮಾಡುತ್ತಿದ್ದ ಯುವೆಟ್ಟಿ ರೊಸ್ಸೆರ್ ಎನ್ನುವ ವಿದ್ಯಾರ್ಥಿ, ದಕ್ಷಿಣ ಏಷ್ಯಾದ ಅಧ್ಯಯನದಲ್ಲಿ "ನಾಶವಾಗುತ್ತಿರುವ ಪಾಂಡಿತ್ಯ"ದ ಬಗ್ಗೆ ಆಳವಾದ ಅಧ್ಯಯನ ನಡೆಸಿ ಐದು ಭಾಗಗಳನ್ನು ಸರಣಿಯಲ್ಲಿ ಪ್ರಕಟಿಸಿದರು. ಘೆಂಟ್ ವಿ.ವಿ.ಯ ಎಸ್.ಎನ್. ಬಾಲಗಂಗಾಧರ ಅವರು ಜೆಫ್ರಿ ಕ್ರಿಪಾಲ್(ಡೊನಿಗರ್ ಅವರ ಕಟ್ಟಾ ಬೆಂಬಲಿಗ) ಅವರ ಕೃತಿಗಳಿಗೆ ಪ್ರತಿವಾದವನ್ನು ಬರೆದರು, ಅದರಲ್ಲಿ ವೆಂಡಿಯ ವಿದ್ವತ್ತಿನ ಕಟು ವಿಮರ್ಶೆಯೂ ಇತ್ತು. ಭಾರತದ ಅಧ್ಯಯನದ ಕುರಿತು ಅಮೆರಿಕದ ಶೈಕ್ಷಣಿಕ ವಲಯದಲ್ಲಿನ ಸ್ಥಿತಿಯನ್ನು ಅರಿತುಕೊಳ್ಳಬೇಕಾದರೆ "ಇನ್ವೇಡಿಂಗ್ ದಿ ಸೇಕ್ರೆಡ್‌" ಅನ್ನುವ ಪುಸ್ತಕವನ್ನು ಓದಬೇಕು. ವಿಮರ್ಶೆ ಮತ್ತು ಪ್ರಬಂಧಗಳ ಆ ಸಂಗ್ರಹ ವೆಂಡಿ ಮತ್ತು ಅಂಥದ್ದೇ ಮನಸ್ಥಿತಿಯ ವಿದ್ವಾಂಸರ ಹುಳುಕುಗಳನ್ನು ಯಶಸ್ವಿಯಾಗಿ ಹೊರಗೆಡವುತ್ತದೆ.
ಸರಳವಾಗಿ ಹೇಳಬೇಕೆಂದರೆ, ವೆಂಡಿ ಡೊನಿಗರ್ ಎನ್ನುವುದು ಒಂದು ರೋಗಲಕ್ಷಣ! ಈ ರೋಗಲಕ್ಷಣ ವಸಾಹತು ಯುಗದಿಂದಲೇ, ಅಂದರೆ ಭರತಶಾಸ್ತ್ರ, ಸಂಸ್ಕೃತ ಮತ್ತು ಪ್ರಾಚ್ಯವಿದ್ಯಾಸಂಸ್ಥೆಗಳಿಗೆ ಹಣಹೂಡುತ್ತಿದ್ದ ಬ್ರಿಟಿಷ್ ವಸಾಹತು ಆಡಳಿತ ಕಾಲದಿಂದಲೂ ಇದೆ. ಏಕೆಂದರೆ ಇಂಥ ವಿದ್ವಾಂಸರುಗಳು ಭಾರತೀಯ ಸಂಪ್ರದಾಯಗಳಿಗೆ, ಆಚಾರ ಮತ್ತು ಕಾನೂನುಗಳಿಗೆ ಹೊಸ ವ್ಯಾಖ್ಯಾನ ಕೊಟ್ಟರೆ, ಅದರಿಂದಾಗಿ "ಸ್ಥಳೀಯರನ್ನು" ಆಳುವುದಕ್ಕೆ ಸುಲಭವಾದ ನೀತಿಗಳನ್ನು ರೂಪಿಸಬಹುದು ಎನ್ನುವುದು ಬ್ರಿಟಿಷರ ಲೆಕ್ಕಾಚಾರವಾಗಿತ್ತು. ಹಾಗಾಗೇ ವಿಲಿಯಂ ಜೋನ್ಸ್‌ರಿಂದ ಹಿಡಿದು ವೆಂಡಿ ಡೊನಿಗರ್‌ವರೆಗೆ, ಭಾರತ ಮತ್ತು ಹಿಂದೂ ಧರ್ಮದ ಕುರಿತ ಸಂಶೋಧನೆ, ನಿರೂಪಣೆ ಮತ್ತು ಅರ್ಥವಿವರಣೆಗಳೆಲ್ಲದರಲ್ಲೂ ವಸಾಹತಿನ ಲೇಪವಿದ್ದೇ ಇರುತ್ತದೆ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ಅದು ಐರೋಪ್ಯ ಕೇಂದ್ರಿತವಾಗಿರುತ್ತದೆ! ಈಗಲೂ ವೇದ, ಪುರಾಣಗಳು, ಋಷಿಗಳು, ದೇವ-ದೇವತೆಯರನ್ನು ಪುನರ್‌ವ್ಯಾಖಾನಿಸುವ ಕೆಲಸವನ್ನು ಈ ಪಾಶ್ಚಾತ್ಯ ಪಂಡಿತರು ಮುಂದುವರಿಸಿದ್ದಾರೆ.
ಈ ಕಾರಣಕ್ಕಾಗಿಯೇ ಇವರ ವಿದ್ವತ್ ಕೃತಿಗಳನ್ನೆಲ್ಲ ಕೇವಲ ಸ್ಕಾಲರ್‌ಗಳಷ್ಟೇ ಅಲ್ಲದೆ, ಸಾಮಾನ್ಯ ಹಿಂದೂಗಳೂ ಖಂಡಿಸುವುದು ಕಾಕತಾಳೀಯವೇನೂ ಅಲ್ಲ. ಡೊನಿಗರ್ ವಿಷಯಕ್ಕೆ ಬಂದರೆ, ಆಕೆ ತನ್ನ ತಲೆಯಲ್ಲಿರುವ ಎಣಿಕೆಗೆ ಸರಿಹೊಂದುವ ಹಾಗೆಯೇ ಸಂಸ್ಕೃತವನ್ನು ತಪ್ಪಾಗಿ ಅನುವಾದಿಸಿದ ಅನೇಕ ಉದಾಹರಣೆಗಳಿವೆ:
-ಹೋಲಿ ವಸಂತದ ಹಬ್ಬ. ಆ ಸಮಯದಲ್ಲಿ ಎಲ್ಲಾ ಜಾತಿಯ ಗಂಡಸರು ಜೊತೆಯಾಗಿ, ಪರಸ್ಪರ ಬಣ್ಣವೆರಚಿಕೊಳ್ಳುತ್ತಾರೆ. ಬಹುಶಃ ಹಿಂದಿನ ಶತಮಾನಗಳಲ್ಲಿ ಬಳಸಲಾಗುತ್ತಿದ್ದ ರಕ್ತವನ್ನು ಇದು ಸಂಕೇತಿಸುತ್ತದೆ.
-ಭೂತಾಯಿಯ ಮೇಲಿಂದ ಭಾರವನ್ನು ಕಡಿಮೆಗೊಳಿಸಲು ಕೃಷ್ಣ, ಎಲ್ಲಾ ಮನುಷ್ಯ ಜೀವಿಗಳಿಗೆ ಕೊಲೆ ಮತ್ತು ಸ್ವಯಂ ನಾಶಕ್ಕೆ ಕಾರಣವಾಗುವ-ಯುದ್ಧವನ್ನು ಮಾಡಲು ಪ್ರಚೋದಿಸುತ್ತಾನೆ.  
- ತಾನೂ ಕೂಡ ಎಲ್ಲಿ ತನ್ನ ಲೈಂಗಿಕ ವ್ಯಸನಿ ತಂದೆಯ ಹಾದಿಯಲ್ಲಿ ನಡೆಯುತ್ತೀನೋ ಎನ್ನುವ ಭಯ ರಾಮನಿಗಿತ್ತು. ಈ ಕಾರಣಕ್ಕಾಗಿಯೇ ಆತ ಸೀತೆಯನ್ನು ತ್ಯಜಿಸಿದ. (ಪೌಲ್ ಕೋರ್ಟ್‌ರೈಟ್)
ಇನ್ನು ಇಂಥ ವಿದ್ವಾಂಸರ ಅನೇಕ ಕೃತಿಗಳಲ್ಲಿ ಹಿಂದುಗಳನ್ನು ಜನಾಂಗೀಯ ದೃಷ್ಟಿಯಲ್ಲಿ ಗುರುತು ಮಾಡುವ ಅಂಶಗಳಿವೆ. ಉದಾಹರಣೆಗೆ, ಸ್ಟ್ಯಾಲ್ ಕರ್ಟ್ಜ್ ಹೇಳುತ್ತಾರೆ, "ಹಿಂದು ತಾಯಂದಿರು, ಬಿಳಿಯ ತಾಯಂದಿರಂತೆ ತಮ್ಮ ಶಿಶುವಿನೊಂದಿಗೆ ಅನ್ಯೋನ್ಯವಾಗಿ ಬೆರೆಯಲು ವಿಫಲರಾಗುತ್ತಾರೆ" ಎಂದು! ಒಂದು ವೇಳೆ ಈ ರೀತಿ ಬೇರೇ ಜನಾಂಗದವರನ್ನು, ಬೇರೆ ದೇಶದವರನ್ನು ಚಿತ್ರಿಸಿದ್ದರೆ, ಆಗ ಏನಾಗುತ್ತಿತ್ತೋ ಯೋಚಿಸಿ? "ಜನಾಂಗೀಯ ದ್ವೇಷ" ಎಂದು ಬೊಬ್ಬಿಡಲಾಗುತ್ತಿತ್ತಲ್ಲವೇ! ಆದರೆ ಹಿಂದು ಪರಿಣತರು ಇಂಥ ವಿದ್ವಾಂಸರ ಕೃತಿಗಳಿಗೆ ನೈಜ ತಳಹದಿಯಲ್ಲಿ, ಪುರಾವೆಯೊಂದಿಗೆ ಉತ್ತರಿಸಲು ಹೋದಾಗ ಅವರಿಗೆ ಮತಾಂಧರು ಎಂಬ ಪಟ್ಟ ಕಟ್ಟಲಾಗುತ್ತದೆ. ವೆಂಡಿ ಕೂಡ ತನ್ನ ವಿರೋಧಿಗಳೇನಿದ್ದರೂ ಮತಾಂಧ ಹಿಂದೂಗಳಷ್ಟೆ ಎಂದು ಹೇಳುತ್ತಾ, ವ್ಯಾಪಕವಾಗಿರುವ ನೈಜ ಟೀಕೆಗೆ ಉತ್ತರಿಸದೆ ಕಳಚಿಕೊಂಡುಬಿಡುತ್ತಾಳೆ.
ವೆಂಡಿಯಂಥ ವಿದ್ವಾಂಸರ ವಿರುದ್ಧ ಹಿಂದೂಗಳು ಸಿಡಿದೇಳುವುದಕ್ಕೆ, ಆಕೆ ಹಿಂದೂ ಧರ್ಮವನ್ನು ಬಿಂಬಿಸುತ್ತಿರುವ ರೀತಿಯೇ ಕಾರಣವಲ್ಲ. ಬದಲಾಗಿ, ಆ ಕಾರಣ, ಮೂಲಭೂತ ಮತ್ತು ಉಪಪ್ರಜ್ಞೆಯ ಮಟ್ಟದಲ್ಲಿದೆ. ಆಕೆ ಹಿಂದೂಗಳು ತಮ್ಮ ಧರ್ಮದ ಬಗ್ಗೆ ಏನು ಭಾವಿಸುತ್ತಾರೋ ಅದನ್ನೆಲ್ಲ ಅಲ್ಲಗಳೆಯುತ್ತಾ ಹೋಗುತ್ತಾಳೆ. ಸರಳವಾಗಿ ಹೇಳಬೇಕೆಂದರೆ, "ಹಿಂದೂ ಹೆಣ್ಣುಮಕ್ಕಳು ಶಿವಲಿಂಗವನ್ನು ಪ್ರಾರ್ಥಿಸುತ್ತಾರೆ. ಅಂದರೆ ಅವರು ಶಿಶ್ನವನ್ನು ಪೂಜಿಸುತ್ತಾರೆ" ಎನ್ನುವ ವಾದವಿದು!
ಆದರೆ ಇದೊಂದು ಕಲ್ಪನೆ ಅಥವಾ ಸಿದ್ಧಾಂತವಷ್ಟೆ. ಹಿಂದೂ ಮಹಿಳೆಯರು ಶತಮಾನಗಳಿಂದ ಶಿವಲಿಂಗವನ್ನು ಪೂಜಿಸುತ್ತಾ ಬಂದಿರುವುದಕ್ಕೂ, ಈ ಪಾಶ್ಚಾತ್ಯ ಪಂಡಿತರು ಹೇಳುವುದಕ್ಕೂ ಸಂಬಂಧವೇ ಇರುವುದಿಲ್ಲ.
ಅದರಂತೆಯೇ, ಶಿವಲಿಂಗದ ಕುರಿತ ಈ ರೀತಿಯ ವಾದ ಮೂಲ ಹಿಂದೂ ಗ್ರಂಥಗಳಲ್ಲೆಲ್ಲೂ ಇಲ್ಲ. ಹಾಗಾಗೇ ವೆಂಡಿಯಂಥವರು ಹೇಳುವುದೆಲ್ಲ ತಪ್ಪು. ಆದರೂ ಅದು ಅಮೆರಿಕದ ಶೈಕ್ಷಣಿಕವಲಯದಲ್ಲಿ 'ಸತ್ಯ'ವಾಗುತ್ತದೆ. ದುರದೃಷ್ಟವಶಾತ್, ಈಗ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ನರಳುತ್ತಾ ಊಳಿಡುತ್ತಿರುವ ನಮ್ಮ ಪ್ರಗತಿಪರರ್ಯಾರೂ ಈ ಸನ್ನಿವೇಶದ ಬಗ್ಗೆ ಮಾತನಾಡುತ್ತಿಲ್ಲ. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ನಿಷೇಧದ ಪ್ರಶ್ನೆಯೇ ಉದ್ಭವವಾಗುವುದಿಲ್ಲ, ಆದರೆ ಪ್ರಶ್ನೆ ಉದ್ಭವಿಸುವುದು ಪುಸ್ತಕವನ್ನು ಹಿಂಪಡೆದದ್ದನ್ನು 'ನಿಷೇಧ' ಎಂದು ಬಿಂಬಿಸಿದ ಬೂಟಾಟಿಕೆಯ ಮನಸ್ಥಿತಿಗಳ ಬಗ್ಗೆ. ಈಗ ಪೆಂಗ್ವಿನ್‌ನ ನಡೆಯನ್ನು ಪ್ರಶ್ನಿಸುತ್ತಿರುವವರೆಲ್ಲ ಹಿಂದೆ 'ಇನ್ವೇಡಿಂಗ್ ದಿ ಸೇಕ್ರೆಡ್‌"ನಂಥ ಪುಸ್ತಕಗಳನ್ನೆಲ್ಲ ಕಡೆಗಣಿಸಿ/ ಖಂಡಿಸಿದವರೇ!
ನಾನು ಈ ಲೇಖನವನ್ನು ವೆಂಡಿ ಡೊನಿಗರ್ ಹೇಳಿದ ಮಾತೊಂದನ್ನು ಉಲ್ಲೇಖಿಸುವ ಮೂಲಕ ಮುಗಿಸುತ್ತೇನೆ:  'ಅಮೆರಿಕನ್ನರು ತಿಳಿದಿರುವಂತೆ ಭಗವದ್ಗೀತೆ ಉತ್ತಮ ಕೃತಿಯಲ್ಲ. ತನ್ನ ಸುತ್ತಲಿರುವವರಿಗೆಲ್ಲ ಕ್ರೂರ ಮತ್ತು ಸ್ವಯಂ ನಾಶಕ್ಕೆ ಕಾರಣವಾದ 'ಯುದ್ಧ'ವನ್ನು ಮಾಡಲು ಕೃಷ್ಣ ಪ್ರಚೋದಿಸುತ್ತಾನೆ. ಗೀತೆ ಒಂದು ಅಪ್ರಾಮಾಣಿಕ ಕೃತಿ' -ವೆಂಡಿ !

-ಸಂದೀಪ್ ಬಾಲಕೃಷ್ಣ
deepu.sandeep@gmail.com  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement