ಅಡಿಕೆಯ ಮೇಲಿನ ಅಪಪ್ರಚಾರಗಳಿಗೆ ಅಂತ್ಯ ಎಂದು?
ಹೊಟ್ಟೆ ಹುಳ ನಿಯಂತ್ರಣಕ್ಕೆ, ಎದೆ ಉರಿತ ಇತ್ಯಾದಿ ಸಾಮಾನ್ಯ ಕಾಯಿಲೆಗಳ ನಿಯಂತ್ರಣದಿಂದ ಹಿಡಿದು ಇಂದು ಸಾಮಾನ್ಯವಾಗಿರುವ ಸಿಹಿಮೂತ್ರ ರೋಗ, ಲೈಂಗಿಕ ನಿರಾಸಕ್ತಿ ಅಷ್ಟೇಕೆ ಅಧಿಕವಾಗುತ್ತಿರುವ ಮುಪ್ಪಿನ ಮರೆವು ಕಾಯಿಲೆಗೂ ಅಡಿಕೆ ಸಿದ್ಧೌಷಧವಾಗಬಹುದಾಗಿದೆ.
ಅಡಿಕೆಯ ಸಂಕಷ್ಟಗಳ ಬಗ್ಗೆ ಇಂದು ಬರೆಯಬೇಕೆಂದರೆ ಎಲ್ಲಿಂದ ಶುರು ಮಾಡಬೇಕೆಂದು ತಿಳಿಯುತ್ತಿಲ್ಲ. ಮಲೆನಾಡು ಮತ್ತು ಕರಾವಳಿ ಜನರ ಜೀವನಾಡಿಯಾಗಿರುವ ಈ ಬೆಳೆ ಇಂದು ರಾಜ್ಯದಾದ್ಯಂತ ಇತಿ ಮಿತಿ ಇಲ್ಲದೆ ವ್ಯಾಪಿಸಿ ಸುಮಾರು 140 ತಾಲೂಕುಗಳಲ್ಲಿ ತನ್ನ ಅಸ್ತಿತ್ವ ಸಾರಿರುತ್ತದೆ. ದೇಶದಲ್ಲೇ ಪುರಾತನವೂ, ವಿಸ್ತೃತವೂ ಆದ ಸಹಕಾರ ಮಾರಾಟ ವ್ಯವಸ್ಥೆ ಜೊತೆಗೆ ಅಷ್ಟೇ ವ್ಯವಸ್ಥಿತ ಖಾಸಗಿ ವರ್ತಕರ ಮಾರಾಟ ಜಾಲವಿರುವ ಏಕೈಕ ಕೃಷಿ ಉತ್ಪನ್ನ ಎಂಬ ಹೆಗ್ಗಳಿಕೆಗೆ ಅಡಿಕೆ ಪಾತ್ರವಾಗಿದೆ. ಆದರೆ ಅಗ್ಗದ ಅಮದು ಅತೀಯಾಗುತ್ತಾ ಆಗಾಗ್ಗೆ ಅಡಿಕೆ ಧಾರಣೆ ನೆಲಕಚ್ಚುವಂತಾಗಿದ್ದು ಅರ್ಥವಾಗದ ವಿಚಾರವಾಗಿದೆ. ಕಳೆದ ಸಾಲಿನ ಅಡಿಕೆ ಆಮದು ಪ್ರಮಾಣ ಏನಿಲ್ಲಾ ಅಂದರೂ ಲಕ್ಷ ಟನ್ ಮುಟ್ಟಿರುವ ಸಾಧ್ಯತೆಯಿರುತ್ತದೆ.
ಗುಟ್ಕಾದಿಂದಲ್ಲ ಅಡಿಕೆ ಸೇವನೆಯೇ ಆರೋಗ್ಯಕ್ಕೆ ಅಪಾಯಕಾರಿ, ಮಾತ್ರವಲ್ಲ ಇದರಿಂದಲೇ ಅರ್ಭುದ ರೋಗ ಬರಲಿದೆಯೆಂಬ ಅತ್ಯಂತ ಆಘಾತಕಾರಿ ವ್ಯಾಪಕ ಅಪಪ್ರಚಾರ ಎಲ್ಲೆಡೆ ನೆಡೆಯುತ್ತಿದೆ. ಪರಿಣಾಮವಾಗಿ, ಈಗ ಅಡಿಕೆಯ ಸೇವನೆಯನ್ನೇ ನಿಷೇಧಿಸುವ ಎಲ್ಲಾ ತಯಾರಿ ನೆಡೆಯುತ್ತಿದೆ ಎಂಬ ವರದಿ ದಟ್ಟವಾಗುತ್ತಿದೆ.
ಭಾರತೀಯರ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಬದುಕಿನಲ್ಲಿ ಆಳವಾಗಿ ಬೇರುಬಿಟ್ಟಿರುವ ಅತ್ಯಂತ ಮಹತ್ವದ ಕೃಷಿ ಉತ್ಪನ್ನ ಅಡಿಕೆ. ದೇಶಾದ್ಯಂತ ಎಲ್ಲಾ ಜಾತಿ, ಧರ್ಮದ ಜನ ಬರಿದೇ ಜಗಿಯಲು ಮಾತ್ರವಲ್ಲ, ಜನನದಿಂದ ಮರಣದವರೆಗೆ ಎಲ್ಲಾ ಅಲೌಕಿಕ ಕ್ರಿಯೆ, ಸಾಂಸ್ಕೃತಿಕ ಕಾರ್ಯಗಳಲ್ಲೂ ಬಳಸಲ್ಪಡುವ ಏಕೈಕ ವಸ್ತು ಅಡಿಕೆ. ಹಲವು ದೃಷ್ಟಿಯಿಂದ ಅಡಿಕೆ ಕರ್ನಾಟಕದ ಅತ್ಯಂತ ಪ್ರಮುಖ ವಾಣಿಜ್ಯ ಬೆಳೆ. ರಾಜ್ಯದ ಸುಮಾರು 6 ಲಕ್ಷ ಎಕರೆ ಪ್ರದೇಶದಲ್ಲಿ ನಾಲ್ಕು ಲಕ್ಷ ಬೆಳೆಗಾರರು ಕನಿಷ್ಠ 35 ಲಕ್ಷ ಕ್ವಿಂಟಾಲ್ ಅಡಿಕೆಯನ್ನು ಪ್ರತಿವರ್ಷ ಉತ್ಪಾದಿಸುತ್ತಿರುವರು. ಈ ಮೂಲಕ ಅಡಿಕೆ ಏನಿಲ್ಲಾ ಅಂದರೂ ಕನಿಷ್ಠ 2500 ಕೋಟಿ ರು. ಗಳ ಕಾಣಿಕೆ ರಾಜ್ಯದ ಆದಾಯಕ್ಕೆ ಮತ್ತು ನಂತರ ಮೌಲ್ಯ ವರ್ಧನೆಗೊಂಡು ರು. 15,000 ಕೋಟಿಗೂ ಮೀರಿ ರಾಷ್ಟ್ರೀಯ ಆದಾಯಕ್ಕೆ ಪ್ರತಿ ವರ್ಷ ಪಾಲು ನೀಡುತ್ತಿದೆ. ರಾಜ್ಯದ ರೈತರು ಈ ಅಡಿಕೆ ಕೃಷಿಯ ಮೇಲೆ ಹೂಡಿರುವ ಬಂಡವಾಳ ಏನಿಲ್ಲಾ ಅಂದರೂ 40,000 ಕೋಟಿ ರು. ಗಳನ್ನು ಮೀರಿರುತ್ತದೆ.
ಮೈಸೂರಿನ ಆಹಾರ ತಂತ್ರಜ್ಞಾನ ಸಂಶೋಧನಾ ಕೇಂದ್ರದ ಪ್ರಕಾರ ಅಡಿಕೆಯಲ್ಲಿ ಶೇ. 46 ರಷ್ಟು ಶರ್ಕರಪಿಷ್ಠ, ಶೇ.4.2 ರಷ್ಟು ಪ್ರೋಟೀನ್,ಶೇ.8-12 ರಷ್ಟು ಕೊಬ್ಬು, ಜೊತೆಗೆ ಕಬ್ಬಿಣ, ಕ್ಯಾಲ್ಸಿಯಂನಂತಹ ಉಪಯುಕ್ತ ಲವಣಗಳೂ ಹಾಗೇ, ಕೆಲ ಜೀವಸತ್ವಗಳೂ ಇರುವುದು ದೃಢಪಟ್ಟಿರುತ್ತದೆ. ಪಚನಕ್ರಿಯೆ ಅಧಿಕಗೊಳಿಸಲು, ಬಾಯಿ ಸ್ವಚ್ಛ ಮಾಡಲು, ಹೊಟ್ಟೆ ಹುಳ ನಿಯಂತ್ರಣಕ್ಕೆ, ಎದೆ ಉರಿತ, ಹೊಟ್ಟೆ ಉಬ್ಬುವುದು ಇತ್ಯಾದಿ ದಿನನಿತ್ಯದ ಹಲವಾರು ಸಾಮಾನ್ಯ ಕಾಯಿಲೆಗಳ ನಿಯಂತ್ರಣದಿಂದ ಹಿಡಿದು ಇಂದು ಸಾಮಾನ್ಯವಾಗಿರುವ ಸಿಹಿಮೂತ್ರ ರೋಗ, ಲೈಂಗಿಕ ನಿರಾಸಕ್ತಿ ಅಷ್ಟೇಕೆ ಪಾಶ್ಚಾತ್ಯ ದೇಶಗಳಲ್ಲಿ ಅಧಿಕವಾಗುತ್ತಿರುವ ಆಟಝಜ್ಝಟಜ್ಠ ಕಾಯಿಲೆಗಳಿಗೂ ಅಡಿಕೆ ಸಿದ್ಧೌಷಧವಾಗಬಹುದಾಗಿದೆ. ಅಡಿಕೆ ಸೇವನೆಯಿಂದ ಮದುಮೇಹವನ್ನು ನಿಯಂತ್ರಿಸಬಹುದೆಂದು ಡಾ. ಅಮೆನ್ 1969ರಲ್ಲೇ ವರದಿ ಮಾಡಿರುತ್ತಾರೆ. ಆಂಧ್ರದ ಡಾ. ಮದನ್ ಟೊಂಗೆ 1996ರಲ್ಲಿ ಅಡಿಕೆಯಿಂದ ಮದುಮೇಹ ನಿಯಂತ್ರಣ ಸಾಧ್ಯತೆಯ ಮೇಲೆ ಆಳವಾದ ಸಂಶೋಧನೆ ನಡೆಸಿ ಉನ್ನತ ಪ್ರಬಂಧ ಮಂಡಿಸಿರುವರು. ಇವೆಲ್ಲಕ್ಕಿಂತ ಮಿಗಿಲಾಗಿ, ವಿಳ್ಯದೆಲೆ ಮಿಶ್ರಿತ ನಮ್ಮ ಸಾಂಪ್ರದಾಯಿಕ ತಾಂಬೂಲ ಸೇವೆನೆಯಿಂದ ರಕ್ತದ ಕ್ಯಾನ್ಸರ್ಗೆ ಪರಿಹಾರ ಸಿಗುವ ಸಾಧ್ಯತೆ ಬೆಳಕಿಗೆ ಬಂದಿದೆ.
ಈ ಹಿಂದೆ, 1993-94ರಲ್ಲಿ, ಅಡಿಕೆಯನ್ನು ಜಗಿಯುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಕೇಂದ್ರ ಸರ್ಕಾರ ಘೋಷಸಿ ಇದನ್ನು ಅಡಿಕೆ ಚಿಲ್ಲರೆ ಮಾರಾಟ ಪೊಟ್ಟಣಗಳಲ್ಲಿ ಎದ್ದು ಕಾಣುವಂತೆ ಮುದ್ರಿಸಬೇಕೆಂಬ ಕಾಯಿದೆ ತಂದಾಗ ಎಲ್ಲಡೆ ಪ್ರತಿರೋಧ ಬಂದಿರುತ್ತದೆ. ಅಂದು ನಮ್ಮ ಸಾಗರದ ಹೆಗ್ಗೋಡಿನ ರಂಗಕರ್ಮಿ ದಿವಂಗತ ಕೆ.ವಿ. ಸುಬ್ಬಣ್ಣನವರು ಉದಯವಾಣಿ ದಿನಪತ್ರಿಕೆಯಲ್ಲಿ ಈ ಬಗ್ಗೆ ಒಂದು ವಿವರವಾದ ಲೇಖನವನ್ನೇ ಬರೆದು, ಎರಡು ಸಾವಿರ ವರ್ಷಗಳ ರಾಷ್ಟ್ರೀಯ ಗ್ರಂಥಗಳಲ್ಲಾಗಲಿ, ರೂಢಿ ನಡಾವಳಿಗಳಲ್ಲಾಗಲಿ ಅಥವಾ ಆಧುನಿಕ ವೈಜ್ಞಾನಿಕ ಸಂಶೋಧನೆಗಳಲ್ಲಾಗಲಿ, ಅಡಿಕೆ ಸೇವನೆ ಹಾನಿಕಾರಕವೆಂದು ಎಲ್ಲೂ ಹೇಳದಿರುವಾಗ ಇಂಥಾ ಕಾಯಿದೆ ಜನವಿರೋಧಿ ಎಂದು ಜರಿದಿರುವರು. ಈ ಅತ್ಯಂತ ತರ್ಕಬದ್ಧ ವಿಚಾರಗಳನ್ನು ಗಟ್ಟಿಯಾಗಿ ಎತ್ತಿ ಹೇಳಬೇಕು ಎನ್ನುವಾಗಲೇ ಅಡಿಕೆ ಆರೋಗ್ಯಕ್ಕೆ ಹಾನಿಕರ ಮಾತ್ರವಲ್ಲ ಅರ್ಭುದಕಾರಕ ಎಂಬ ಅತ್ಯಂತ ಆಘಾತಕಾರಿ ಅಪಪ್ರಚಾರ ಇಂದು ಮೇಲೆದ್ದಿರುತ್ತದೆ. ಈ ಎಲ್ಲಾ ಆಘಾತಕಾರಿ ನಿಲುವಿಗೆ ಬೊಟ್ಟು ಮಾಡಿ ತೋರಿಸಿರುವುದು ವಿಶ್ವ ಆರೋಗ್ಯ ಸಂಸ್ಥೆ 2008ರಲ್ಲಿ ಹೊರತಂದಿರುವ ಒಂದು ಅಷ್ಟೇ ಆಘಾತಕಾರಿ ವರದಿ. ಆಶ್ಚರ್ಯವೆಂದರೆ, ವೈಜ್ಞಾನಿಕ ಸಂಶೋಧನೆಗೆ ವಿರುದ್ಧವಾಗಿ ಅಡಿಕೆ ಸೇವನೆಯಿಂದಲೇ ಮದುಮೇಹ ಪ್ರಕಾರ 2 ಬರುವ ಗಂಡಾಂತರ ಇದೆಯೆಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ನೂರಾರು ಸಂಶೋಧನಾ ಲೇಖನಗಳನ್ನು ಪೂರ್ವ ನಿರ್ಧಾರಿತ ನಿಲುವನ್ನು ಸಮರ್ಥಿಸುವ ಸಲುವಾಗಿಯೇ ಅನುಕೂಲಕ್ಕೆ ತಕ್ಕಂತೆ ತಿರುಚಿ ಬಳಸಿದ ವರದಿ.
ಡಾ. ರಮೇಶ್ ರಾವ್ ಮತ್ತು ಡಾ. ಪದ್ಮಾ ದಾಸ್ ಎನ್ನುವ ವಿಜ್ಞಾನಿಗಳು ನಡೆಸಿದ ಒಂದು ಸಂಶೋಧನೆಯಿಂದ, ಬೇಯಿಸಿ, ಸಂಸ್ಕರಿಸಿದ ಅಡಿಕೆಯಿಂದ ಯಾವುದೇ ರೀತಿಯಲ್ಲಿ ಆರೋಗ್ಯಕ್ಕೆ ಹಾನಿ, ಅಪಾಯವಿಲ್ಲ ಎಂಬ ಫಲಿತಾಂಶ ಹೊರಬಂದಿರುತ್ತದೆ. ನಮ್ಮ ಮಲೆನಾಡು ಪ್ರಾಂತ್ಯದ ಬೇಯಿಸಿ ಸಂಸ್ಕರಿಸಿದ ಅಡಿಕೆ ಪಾನ್ ಮಸಾಲ, ಬೀಡಗಳಿಗೆ ಬಳಕೆಯಾಗುತ್ತಿದೆ. ಈ ಮಹತ್ವದ ಫಲಿತಾಂಶವನ್ನು ವಿಶ್ವ ಆರೋಗ್ಯ ಸಂಸ್ಥೆಯ ಅಡಿಕೆ ವಿರುದ್ದದ ಆ ವರದಿಯಲ್ಲಿ ಮರೆಮಾಚಿದ್ದು ಮಾತ್ರವಲ್ಲ, ಡಾ. ರಮೇಶ್ರ ಸಂಶೋಧನೆಯನ್ನೇ ಅಡಿಕೆ ಮೇಲಿನ ಅಪಪ್ರಚಾರಕ್ಕೆ ಬಳಸಿರುವುದು ಸತ್ಯವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡುವ ಒಂದು ದೊಡ್ಡ ಸಂಚಾಗಿರುತ್ತದೆ.
ಗುಟ್ಕಾ ಮೇಲಿನ ಆಪಾದನೆಗಳು ಶ್ರೇಷ್ಠನ್ಯಾಯಲಯದ ಮೆಟ್ಟಿಲೇರಿರುವುದರಿಂದ, ವಿವರವಾದ ವರದಿಯೊಂದನ್ನು ತಯಾರಿಸಿ ಸಲ್ಲಿಸುವಂತೆ ಕೇಂದ್ರಸರ್ಕಾರಕ್ಕೆ ಈ ಹಿಂದೆ ಆದೇಶ ನೀಡಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ, ಕೇಂದ್ರದ ರಾಷ್ಟ್ರಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ವರದಿಯನ್ನು ಸಿದ್ಧಪಡಿಸಿರುತ್ತದೆ. ಆಶ್ಚರ್ಯವೆಂದರೆ, ಗುಟ್ಕಾ ಮತ್ತಿತರ ಉತ್ಪನ್ನಗಳು ಮಾನವನ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ವರದಿಯನ್ನು ಶ್ರೇಷ್ಠನ್ಯಾಯಲಯ ಕೇಳಿದ್ದರೆ, ಈ ಬೃಹತ್ ವರದಿ, ಹಿಂದೆ ತಿಳಿಸಿದ ಅತಾರ್ಕಿಕ ಸಂಶೋಧನೆಗಳನ್ನು ಆಧಾರವಾಗಿಟ್ಟುಕೊಂಡು ಅಡಿಕೆಯೇ ಆರೋಗ್ಯಕ್ಕೆ ಹಾನಿಕಾರಕ ಎಂದು ಒತ್ತಿ ಹೇಳಿರುವುದು ಅರ್ಥವಾಗದ ವಿಚಾರ. ಈಗ, ನ್ಯಾಯಲಯ ಅಡಿಕೆ ಸೇವನೆಯನ್ನೇ ನಿಷೇಧ ಮಾಡಬಹುದೆಂದು ಆತಂಕ ವ್ಯಾಪಕರೂಪ ಪಡೆದಿದ್ದು ಮಾಧ್ಯಮ, ಶಾಸನ ಸಭೆಗಳು, ಎಲ್ಲೆಡೆ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅಡಿಕೆಯ ವಿರುದ್ಧದ ಆ ಬೃಹತ್ ವರದಿಯೇ ಕೇಂದ್ರ ಸರ್ಕಾರದ ಮುಂದಿರುವಾಗ ಕೇಂದ್ರದ ಹೆಚ್ಚುವರಿ ಪ್ರಧಾನ ಕಾನೂನು ಸಲಹೆಗಾರರು ಶ್ರೇಷ್ಠ ನ್ಯಾಯಾಲಯಕ್ಕೆ ಈ ಬಗ್ಗೆ ಪೂರ್ವಸಮ್ಮತಿ ಅರ್ಜಿ ಕೊಟ್ಟಿರುವುದರಲ್ಲಿ ಏನೂ ಆಶ್ಚರ್ಯವಿರುವುದಿಲ್ಲ.
ತತ್ ಕ್ಷಣದ ಕ್ರಮವಾಗಿ ಕೇಂದ್ರ ಸರ್ಕಾರ ಶ್ರೇಷ್ಠ ನ್ಯಾಯಾಲಯಕ್ಕೆ ಈಗಾಗಲೇ ಸಲ್ಲಿಸಿರುವ ಆ ಪೂರ್ವಸಮ್ಮತಿ ಅರ್ಜಿಯನ್ನು ಹಿಂದೆ ಪಡೆಯಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಇದಕ್ಕೆ ಪೂರ್ವ ಭಾವಿಯಾಗಿ ಅಡಿಕೆಯ ವಿರುದ್ಧ ತಂದಿರುವ ಆ ಬೃಹತ್ ವರದಿಯನ್ನು ತಕ್ಷಣ ತಿರಸ್ಕರಿಸಬೇಕಾಗಿದೆ. ಹಾಗೇ, ಅಡಿಕೆ ಬರಿದೇ ಒಂದು ಆಹಾರವಲ್ಲ, ಔಷಧಿ ಗುಣಗಳನ್ನು ಹೊಂದಿರುವ ಅತ್ಯುಚ್ಚ ಆರೋಗ್ಯಕರ ಆಹಾರವೆಂದು ಘೋಷಿಸಬೇಕು. ಈ ಎರಡು ಕಾರ್ಯಗಳು ಮೊದಲು ಶಾಸನಸಭೆಯಲ್ಲಾಗಬೇಕು. ಅಡಿಕೆ ನಿಜವಾದ ಅರ್ಥದಲ್ಲಿ ಕಲ್ಪವೃಕ್ಷವಾಗಿದ್ದು ಇದರ ಸಿಪ್ಪೆ, ಸೋಗೆ, ಹಾಳೆ, ಮರಮಟ್ಟುಗಳು ಮಾತ್ರವಲ್ಲ ಇದರ ಜೊಗರು (ಬಣ್ಣ) ಮತ್ತು ಕೊಬ್ಬು ಇವೆಲ್ಲಾ ವಾಣಿಜ್ಯ ಉಪಯೋಗಕ್ಕೆ ಬಳಸಬಹುದು. ಈ ರೀತಿ ಅಡಿಕೆಯ ಪರ್ಯಾಯ ಉತ್ಪನ್ನಗಳ ಔದ್ಯಮೀಕರಣ ನಿರಂತರವಾಗಿ ನಡೆಯುವಂತಾಗಲು, ಅಡಿಕೆಗೆ ಒಂದು ಪ್ರತ್ಯೇಕ ಉದ್ಯಮ ಅಭಿವೃದ್ಧಿ ಮಂಡಳಿ ಸ್ಥಾಪಿಸುವುದು ಸೂಕ್ತ. ಈ ಮಂಡಳಿ ಕೇಂದ್ರ ಸರ್ಕಾರದ ವಾಣಿಜ್ಯ ಅಥವಾ ಕೃಷಿ ಸಚಿವಾಲಯದ ವ್ಯಾಪ್ತಿಗೆ ಬಂದಾಗ ಮಾತ್ರ ಅದಕ್ಕೆ ಶಕ್ತಿ ಬರುತ್ತದೆ.
ಈ ಪ್ರಯತ್ನಗಳ ನಡುವೆಯೂ, ನ್ಯಾಯಾಲಯದ ತೀರ್ಪು ಯಾವುದೇ ಕ್ಷಣದಲ್ಲಿ ಹೊರಬೀಳಬಹುದು, ಮತ್ತು ಅಡಿಕೆ ಬೆಳೆಗಾರರ ವಿರುದ್ಧವಾಗಲೂಬಹುದು. ಅದು ಪಶ್ಚಿಮ ಘಟ್ಟದ ಕೃಷಿಕರ ಜೀವನ ಭದ್ರತೆಗೆ ಮಾತ್ರವಲ್ಲ ಅವರ ಸಂಸ್ಕೃತಿ, ಒಟ್ಟಾರೆ ಜೀವನ ಶೈಲಿಗೆ ಬರೆ ಎಳೆದಂತಾಗುತ್ತದೆ.
-ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿಪ್ರಾಧ್ಯಾಪಕರು, ಕೃಷಿ ಅರ್ಥಶಾಸ್ತ್ರ ಕೃಷಿ ವಿಶ್ವ ವಿದ್ಯಾನಿಲಯ, ಬೆಂಗಳೂರು
prakashtnk@yahoo.com