ಶಿಕ್ಷಣದ ಆದ್ಯತೆ ಬದಲಾದರೆ ನಷ್ಟಕ್ಕೆ ಹೊಣೆ ಯಾರು?
ಮನೆಯೊಳಗಡೆ ಮನೆಯೊಡೆಯನಿದ್ದಾನೋ ಇಲ್ಲವೋ.. ಎಂಬ ವಚನದ ಸಾಲುಗಳನ್ನು ನೀವು ಕೇಳಿರಬಹುದು. ನಮ್ಮ ಪ್ರಸ್ತುತ ಶಿಕ್ಷಣ ವ್ಯವಸ್ಥೆಗೆ ಈ ಮಾತು ಹೇಳಿ ಮಾಡಿಸಿದಂತಿದೆ. ಜ್ಞಾನಾರ್ಜನೆಯ ಕೇಂದ್ರಗಳಾಗಬೇಕಿದ್ದ ನಮ್ಮ ಶಾಲೆಗಳು ಇಂದು ರಾಜಕೀಯ ಲೆಕ್ಕಾಚಾರಗಳನ್ನು ಅಳೆದು ತೂಗುವ, ಲಾಭ ನಷ್ಟಗಳನ್ನು ಕೂಡಿಸಿ ಕಳೆಯುವ ಪ್ರಯೋಗ ಶಾಲೆಗಳಂತೆ ಮಾರ್ಪಟ್ಟಿರುವುದು ನಿಜಕ್ಕೂ ದುರ್ದೈವವೇ ಸರಿ. ಈ ನಿಟ್ಟಿನಲ್ಲಿ ನ. ವೆಂ. ರಂಗನಾಥ ಮತ್ತು ಕಿರಣ್ ಜೋಶಿಯವರ ಬರಹಗಳಿಗೆ ನನ್ನ ಪ್ರತಿಕ್ರಿಯೆ.
ಸಣ್ಣ ಪುಟ್ಟ ಸಂದಿಗ್ಧತೆಗಳು ಬದುಕಿನ ಅವಿಭಾಜ್ಯ ಅಂಗ ಎಂದು ಶಿಕ್ಷಕ ತನ್ನ ವೃತ್ತಿಯನ್ನು ಸ್ವೀಕರಿಸಬೇಕು ಎನ್ನುವ ರಂಗನಾಥರವರ ನಿಲುವು ಶಿಕ್ಷಕರಲ್ಲೇನೋ ಕೊಂಚ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಬಹುದು, ಆದರೆ ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಇಷ್ಟರವರೆಗೆ ಸ್ವೀಕರಿಸುತ್ತಾ ಬಂದಿರುವ ಶಿಕ್ಷಕರಿಗೆ ಸಂದಿಗ್ಧತೆಗಳೇ ಬದುಕಾಗಬಾರದಲ್ಲವೇ? ಇವತ್ತಿನ ಶಿಕ್ಷಕರ ಬದುಕು ಪಡಿಪಾಟಲುಗಳಿಗಿಂತ ಭಿನ್ನವಾಗಿ ಏನೂ ಇಲ್ಲ. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಪ್ರತಿಬಾರಿಯೂ ಶಿಕ್ಷಕರನ್ನು ಎಗ್ಗಿಲ್ಲದೆ ಆಡಳಿತಾತ್ಮಕ ಕೆಲಸಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಚುನಾವಣಾ ಪ್ರಕ್ರಿಯೆ, ಜನಗಣತಿ, ಮಕ್ಕಳಗಣತಿ, ಸಾಕ್ಷರತೆ, ಎಂದೆಲ್ಲಾ ಒಂದಷ್ಟು ದಿನ ಆ ಕ್ಷೇತ್ರದಲ್ಲಿ ತಲ್ಲೀನರಾಗಿ ಕೆಲಸಗಳನ್ನೆಲ್ಲಾ ಅಚ್ಚುಕಟ್ಟಾಗಿ ಮುಗಿಸಿಕೊಟ್ಟು ಆ ನಂತರದ ದಿನಗಳಲ್ಲಿ ಶಾಲೆಯ ಕದ ತಟ್ಟುತ್ತಿದ್ದ ಶಿಕ್ಷಕರು ನಂತರವಾದರೂ ಕಲಿಕೆಯ ಕಡೆ ಗಮನ ಕೊಡಬಹುದಾಗಿತ್ತು. ಆದರೆ ಇಂದಿನ ವ್ಯವಸ್ಥೆ ಹೇಗಿದೆಯೆಂದರೆ ಪ್ರತಿನಿತ್ಯ ಬೇಯುವ ತರಕಾರಿಯಲ್ಲಿ, ಉಕ್ಕೇರುವ ಅನ್ನದಲ್ಲಿ ಲೋಪದೋಷವಾಗಿ ಎಲ್ಲಿ ತನ್ನ ವೃತ್ತಿಗೆ ಸಂಚಕಾರ ಬಂದೆರಗಬಹುದೋ ಎಂಬ ಚಿಂತೆ ಅನುಕ್ಷಣವೂ ಬೆಂಬಿಡದೆ ಕಾಡುತ್ತಿದೆ. ಈ ಎಲ್ಲ ಒತ್ತಡಗಳ ಮಧ್ಯೆ ಮೇಷ್ಟ್ರು ಅದ್ಹೇಗೆ ಏಕಚಿತ್ತದಿಂದ ಪಾಠ ಮಾಡಲು ಸಾಧ್ಯ ಹೇಳಿ? ಇವತ್ತಿನ ಬಿ. ಎಡ್, ಡಿ.ಎಡ್ ಶಿಕ್ಷಣಾರ್ಥಿಗಳು ಜಿದ್ದಿಗೆ ಬಿದ್ದವರಂತೆ ಅಸೈನ್ಮೆಂಟು, ಪ್ರಾಜೆಕ್ಟು, ಇಂಟರ್ನ್ಶಿಪ್, ಪರೀಕ್ಷೆ ಎಂದೆಲ್ಲಾ ತಲೆಕೆಡಿಸಿಕೊಂಡು ಓದಿ ಭವಿತವ್ಯದ ತಲೆಮಾರುಗಳನ್ನು ಸಿದ್ಧಪಡಿಸುವ ಕನಸಿನೊಂದಿಗೆ ಶಾಲೆಯ ಮೆಟ್ಟಿಲೇರಿದರೆ ಅಲ್ಲಿ ಸಿಗುವುದು ಬರೀ, ಸೌಟು, ಉಪ್ಪು, ಹುಳಿ, ಖಾರ, ಎಂಬೆಲ್ಲ ಕಟು ವಾಸ್ತವಗಳು. ಹಾಗಾದರೆ ಕಲಿತ ಕೋರ್ಸ್ನ ಸಾರ್ಥಕ್ಯವೇನು? ಇನ್ನು ಮುಂದೆ ಬಿ. ಎಡ್, ಡಿ.ಎಡ್ ಕೋರ್ಸ್ ಕಾಲೇಜು ನಡೆಸುವವರು ಇರುವ ಪಠ್ಯಗಳ ಜೊತೆಗೆ ಪಾಕಶಾಸ್ತ್ರದ ಪಾಠವೊಂದನ್ನು ಸೇರಿಸುವುದೊಳಿತು. ಪ್ರಾಯಶಃ ಇದು ಮುಂದೆ ಬದುಕು ದೊಡ್ಡದು ಎನ್ನುವ ತತ್ವದಡಿಯಲ್ಲಿ ಶಿಕ್ಷಕರ ತಲೆಕಾಯಲೂಬಹುದು!
ಮೂಲಮೂರ್ತಿ ಗರ್ಭಗುಡಿಯೊಳಗೆ ಕುಳಿತು ಉತ್ಸವ ಮೂರ್ತಿ ವಿಜೃಂಭಿಸುವ ಆಭಾಸಗಳನ್ನು ನೀವು ನೋಡಿರಬಹುದು, ನಮ್ಮ ಜ್ಞಾನದೇಗುಲಕ್ಕೂ ಇದು ವಕ್ಕರಿಸಿಬಿಟ್ಟಿದೆ. ಶಿಕ್ಷಣ ಪ್ರಥಮ ಆದ್ಯತೆಯ ವಿಷಯವಾಗಿರದೆ ಎರಡನೆಯ ಅಥವಾ ಮೂರನೆಯ ಆದ್ಯತೆಗೆ ತಳ್ಳಲ್ಪಟ್ಟಿದೆ. ತರಕಾರಿ, ಬೇಳೆ, ಪಲ್ಯ, ಸಾಂಬಾರು, ಪುಸ್ತಕ ವಿತರಣೆ, ಸೈಕಲ್ ವಿತರಣೆ, ಶಿಕ್ಷಕ-ವಿದ್ಯಾರ್ಥಿಗಳ ಜಗಲಿಯ ಚರ್ಚೆಗಳಾಗಿಬಿಟ್ಟಿವೆ. ಭಾಗ್ಯಗಳು ನೂರೇ ಬರಲಿ ಆದರೆ ಕಲಿಯೋ ಭಾಗ್ಯವನ್ನು ಕಸಿಯದಿರಲಿ ಎಂಬ ಆಶಯಗಳು ರಾಜಕೀಯ ಮೇಲಾಟಗಳ ಮಧ್ಯೆ ಕಮರಿ ಹೋಗಿವೆ. ಛಾವಣಿ, ಗೋಡೆ, ಬೆಂಚು ಡೆಸ್ಕುಗಳೇ ಇಲ್ಲದ ಕಾಲದಲ್ಲಿ, ಮಾವಿನಮರವೋ, ಅರಳೀ, ಅಶ್ವಥ್ಥ ವೃಕ್ಷಗಳ ನೆರಳಲ್ಲಿ ಚಕ್ಕಳ-ಮಕ್ಕಳ ಹಾಕಿಕೊಂಡು ರಾಮಾಯಣ, ಮಹಾಭಾರತ , ದುಷ್ಟ-ಶಿಷ್ಟ ಕಥೆಗಳನ್ನು ಕೇಳಿ ಮಕ್ಕಳ ಕೈಯಲ್ಲೇ ನೀತಿ ಹೇಳಿಸಿಕೊಂಡು ಹತ್ತಾರು ದಿನ ಕತೆಗಳು ನೆನಪಾಗಿ ಕಾಡುತ್ತಿದ್ದ ರೀತಿ-ರಿವಾಜುಗಳು ಮಂಗಮಾಯವಾಗಿದೆ. ಹಾಗಾದರೆ ಕಾಲ ಕಾಲಕ್ಕೆ ಶಿಕ್ಷಣ ಬದಲಾಗಿದೆ, ಅಭಿವೃದ್ಧಿಯಾಗಿದೆ ಎಂದು ಬಡಬಡಿಸುವ ವ್ಯಾಖ್ಯಾನಗಳ ಔಚಿತ್ಯವೇನು? ಶಿಕ್ಷಕರು ಕರ್ತವ್ಯ ಮರೆಯುತ್ತಿದ್ದಾರೆ ಎನ್ನುವ ಮೊದಲು ಶಿಕ್ಷಣದ ರೂಪುರೇಷೆ, ಸಾರ್ಥಕತೆ ಶಿಕ್ಷಕನ ಪಾಲುದಾರಿಕೆ, ಜವಾಬ್ದಾರಿಗಳ ಬಗೆಗೆ ವಿಸ್ತೃತ ಚರ್ಚೆಯಾಗಲಿ. ಶಿಕ್ಷಣವೆಂಬುದು ನಾಲ್ಕು ಗೋಡೆಗಳ ಮಧ್ಯೆ ರೂಪುಗೊಳ್ಳುವುದಿಲ್ಲ ಎಂದ ಮಾತ್ರಕ್ಕೆ ವ್ಯಕ್ತಿತ್ವ ರೂಪಿಸದ, ಗುಮಾಸ್ತಿಕೆಯ ಕೆಲಸಕ್ಕೆ ಎತ್ತಿ ಎಸೆಯಬೇಕೆಂದೇ? ಈ ರೀತಿಯ ವ್ಯವಸ್ಥೆಯಲ್ಲಿ ಎಷ್ಟು ಜನ ಸಿ. ಎನ್. ಆರ್. ರಾವ್ ಆಗುವ ಕನಸು ಕಂಡಾರು?
ಅಚ್ಚರಿಯ ಸಂಗತಿಯೆಂದರೆ ಶಾಲಾಭಿವೃದ್ಧಿ ಸಮಿತಿಯನ್ನು ವಾಚ್ಡಾಗ್ಗೆ ಹೋಲಿಸಿರುವುದು ರಾಜಕೀಯ ದೊಂಬರಾಟಗಳಿಂದ ರಾಜಕೀಯದ ಬಗೆಗೇ ಭ್ರಮನಿರಸನಗೊಂಡಿರುವ ಈ ಕಾಲಘಟ್ಟದಲ್ಲಿ ರಾಜಕೀಯದ ಗಾಳಿ ಸೋಕಿಸಿಕೊಂಡಿರುವ ಸಮಿತಿಗಳು ಎಷ್ಟರ ಮಟ್ಟಿಗೆ ಪಾರದರ್ಶಕತೆ ಉಳಿಸಿಕೊಳ್ಳಬಲ್ಲವು? ಕೆಲ ದುಡ್ಡು ಮಾಡುವ ರಾಜಕಾರಣಿಗಳಿಗೆ ಶಾಲೆಯೂ ಒಂದೇ ರಿಯಲ್ ಎಸ್ಟೇಟೂ ಒಂದೆ. ಊರಿನ ಹಿರಿಯರು, ಧರ್ಮದರ್ಶಿಗಳು, ಗಣ್ಯರು ಕಷ್ಟಪಟ್ಟು ಕಟ್ಟಿಸಿದ್ದ ಶಾಲೆಗಳ ನೆಲದಲ್ಲಿ ಇಂದು ಬಣ್ಣ ಬಣ್ಣದ ಬೋರ್ಡ್ ತಗುಲಿಸಿಕೊಂಡು ಆಡಳಿತ ಪಕ್ಷ, ವಿರೋಧಪಕ್ಷಕ್ಕೊಂದರಂತೆ ರಾಜಕೀಯ ಕೃಪಾಪೋಷಿತ ಶಿಕ್ಷಣ ಸಂಸ್ಥೆಗಳು ತಲೆಯೆತ್ತಿ ನಿಂತಿವೆ ಎಂದರೆ ಅವೆಲ್ಲಾ ಪುಕ್ಕಟೆ ಕಲಿಸುತ್ತವೆ ಎಂದುಕೊಳ್ಳಲಾದೀತೇ? ಇನ್ನು ಅನುದಾನ, ಫಂಡು, ಎಂದೆಲ್ಲಾ ಸರ್ಕಾರದಿಂದ ಬರುವ ಹಣವನ್ನು ಇವರೆಲ್ಲ ಸದ್ವಿನಿಯೋಗ ಮಾಡಿಕೊಳ್ಳುತ್ತಾರೆಯೇ? ಪಾಠ ಮಾಡುವುದನ್ನು ಬಿಟ್ಟು ಮೇಷ್ಟ್ರು ಅವರ ಬಳಿ ಲೆಕ್ಕ ಕೇಳಲಿಕ್ಕೆ ಕೂರೊಕ್ಕಾಗುತ್ತದೆಯೇ? ಅಷ್ಟಕ್ಕೂ ಸಣ್ಣ ಶಾಲೆಗಳ ಬಗೆಗೆ, ಪಾರದರ್ಶಕತೆಯ ಬಗೆಗೆ ಇಷ್ಟೆಲ್ಲ ಹುಯಿಲೆಬ್ಬಿಸುವವರು ವಿಶ್ವ ವಿದ್ಯಾನಿಲಯಗಳಲ್ಲಿ ಬಂದಷ್ಟೇ ವೇಗವಾಗಿ ಹೊರಗೋಡುವ, ಒಂದು ಗಂಟೆ ಪಾಠ ಮಾಡಿ ರಿಯಲ್ ಎಸ್ಟೇಟ್, ಮೀಟರ್ ಬಡ್ಡಿ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಕೆಲ ಆಸಾಮಿಗಳ ಬಗೆಗೇಕೆ ತುಟಿ ಪಿಟಿಕ್ ಎನ್ನುವುದಿಲ್ಲ? ಈ ಮಹಾನುಭಾವರುಗಳ ಎರಡು ತಿಂಗಳ ಸಂಬಳ ವರ್ಷಪೂರ್ತಿ ದುಡಿದರೂ ಮೇಷ್ಟ್ರುಗಳಿಗೆ ದಕ್ಕುವುದಿಲ್ಲವಲ್ಲ? ಶಿಕ್ಷಕರು ಬಗ್ಗಿದವನಿಗೊಂದು ಗುದ್ದು ಜಾಸ್ತಿ ಎಂಬ ನಿಲುವಿನಂತೆ ಹೇಳಿದ್ದನ್ನೆಲ್ಲಾ ಕೇಳುತ್ತಾರೆ. ಅವರ ಮೇಲೆ ಎಷ್ಟಾದರೂ ಹೇರಬಹುದು ಎಂಬ ಹುಂಬತನವೇ?
ನಾನು ಗಮನಿಸಿದಂತೆ ಕಿರಣ್ ಜೋಶಿಯವರು ಶಾಲಾಭಿವೃದ್ಧಿ ಸಮಿತಿಯ ರೂಪುರೇಷೆ ಮತ್ತು ಪರ್ಯಾಯಗಳ ಬಗೆಗೆ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ. ಊರಿನ ನಿವೃತ್ತ ಸೈನಿಕ, ಸರ್ಕಾರಿ ಅಧಿಕಾರಿ, ಸ್ವಾತಂತ್ರ ಹೋರಾಟಗಾರರಿರುವ ಸಮಿತಿಯೊಂದರ ಅಗತ್ಯದ ಬಗ್ಗೆ ಆ ಲೇಖನ ಬೆಳಕು ಚೆಲ್ಲಿದೆ. ಅಂತಹ ಸಮಿತಿ ಬೇಡ, ಎನ್ನುವುದರಲ್ಲಿ ಯಾವ ಅರ್ಥವೂ ಇಲ್ಲ. ದೇಶಕ್ಕಾಗಿ ಜೀವ ಸವೆಸಿದವರು ರಾಜಕಾರಣಿಗಳಿಗಿಂತ ಭಿನ್ನವಾದ ದೃಷ್ಟಿಕೊನವನ್ನು ಹೊಂದಿರಬಹುದು. ಸಮಿತಿಗಳು ರಾಜಕೀಯದ ಕಪಿಮುಷ್ಟಿಯಿಂದ ತಪ್ಪಿದರೆ ನಿರಾಳತೆಯಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ.
ಏಕೋಪಾಧ್ಯಾಯ ಶಾಲೆಗಳಿರುವ ದುರ್ದೈವ ಸ್ಥಿತಿಯಲ್ಲಿ ನಾವಿರುವಾಗ, ಮುಖ್ಯೋಪಾಧ್ಯಾಯ ಹುದ್ದೆಯ ಜಂಜಡವೇ ಬೇಡ ಎಂದು ಮಾರುದೂರ ನಿಲ್ಲುವವರು ಅನೇಕರು ನಮ್ಮ ನಡುವೆ ಇಂದಿಗೂ ಇದ್ದಾರೆ. ಅಂತಹುದರಲ್ಲಿ ಶಾಲೆಯ ಆಗುಹೋಗುಗಳಿಗೆ ಭಾದ್ಯಸ್ಥನಾಗಿ ರಚನಾತ್ಮಕ ಕಾರ್ಯಕ್ರಮಗಳಿಗೆ ಹೊಸ ಕಾಯಕಲ್ಪ ನೀಡುವ ಕೆಲಸಕ್ಕೆ ಸನ್ನಿವೇಶ ನಿರ್ಮಾಣ ಮಾಡುವ ಕೆಲಸ ಸರ್ಕಾರ ಮಾಡಿಕೊಡಬೇಕಾಗಿರುವುದು ಇಂದಿನ ಬಹುದೊಡ್ಡ ಆದ್ಯತೆಗಳಲ್ಲೊಂದು. ಕುಡಿದು ಬರುವ ಶಿಕ್ಷಕರ ಬಗೆಗೆ, ಲೈಂಗಿಕ ಕಿರುಕುಳ ನೀಡುವ ಶಿಕ್ಷಕರ ಬಗೆಗಿನ ಸುದ್ದಿಗಳು ಅಲ್ಲಲ್ಲಿವೆಯಾದರೂ ಸಾರ್ವಜನಿಕರೇ ಬುದ್ಧಿ ಕಲಿಸಿದ ಸುದ್ದಿಗಳೂ ಮಾಧ್ಯಮಗಳಲ್ಲಿ ಸದ್ದುಮಾಡಿವೆ. ಕುರ್ಚಿಗೆ ಅಂಟಿಕೊಳ್ಳುವ, ಲಾಭ ನಷ್ಟ ಲೆಕ್ಕಾಚಾರ ಹಾಕುವ ಮುಖ್ಯ ಶಿಕ್ಷಕರ ಬಗೆಗೆ ಶಿಕ್ಷಣ ಇಲಾಖೆ ನಿಗಾ ವಹಿಸುವ ಅಗತ್ಯ ಖಂಡಿತಾ ಇದೆ. ಹಾಗೆಂದು ಇಂತಹ ಋಣಾತ್ಮಕ ಸಂಗತಿಗಳ ಮಧ್ಯೆ ಪ್ರತಿಭಾಕಾರಂಜಿ, ಸೇವಾದಳ, ಸ್ಕೌಟ್, ಗೈಡ್, ಎನ್ಸಿಸಿಗಳ ಕೊಡುಗೆಗಳು ಗೌಣವಾಗದಿರಲಿ. ಈ ಎಲ್ಲ ಪ್ರಕ್ರಿಯೆಗಳ ನಡುವೆ ತರಬೇತಿ ನೀಡುವ ಕಾರ್ಯಾಗಾರಗಳನ್ನು ಶಾಲಾಸಮಯದಲ್ಲಿ ಇಟ್ಟುಕೊಂಡು ವಿದ್ಯಾರ್ಥಿಗಳ ಪಾಠಪ್ರವಚನಗಳಿಂದ ವಂಚಿತರನ್ನಾಗಿ ಮಾಡುವ ನೀತಿಗಳ ಬಗೆಗೂ ಇಲಾಖೆ ಮರುಪರಿಶೀಲನೆ ಮಾಡಬೇಕಾಗಿದೆ. ಈ ತರಬೇತಿಗಳನ್ನು ರಜಾ ಅವಧಿಯಲ್ಲಿ ಇಟ್ಟುಕೊಳ್ಳಬಹುದಲ್ಲವೇ?
ಅಬ್ದುಲ್ ಕಲಾಂ ಅವರು "ಶಿಕ್ಷಕ ವೃತ್ತಿ ನನಗೆ ಅತೀವ ಖುಷಿ ಕೊಡುವ ವೃತ್ತಿ" ಎಂದುಬಿಟ್ಟರು. ಅವರಿಗೆ ಈ ರಾಜಕೀಯ ಸರ್ಕಸ್ಸುಗಳ ಅರಿವಿದ್ದಂತಿಲ್ಲ! ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್ ಮೊದಲಾದ ಮೇಲ್ಪಂಕ್ತಿ ನಾಯಕರ ಯಶೋಗಾಥೆ ಅವರ ನಿಲುವುಗಳನ್ನು ರೂಪಿಸಿರಬಹುದು. ಯಾಕೆಂದರೆ ಆ ವೃತ್ತಿಗೆ, ಸವಾಲುಗಳಿಗೆ ಸಮಷ್ಠಿರೂಪದ ಉತ್ತರ ಸಿದ್ಧಪಡಿಸುವ ತಾಕತ್ತಿದೆ. ವ್ಯಕ್ತಿತ್ವಕ್ಕೆ ಜೀವತುಂಬುವ ಚೈತನ್ಯವಿದೆ. ಇಂತಹ ಪ್ರಖರ ಶಕ್ತಿಯನ್ನು ಲೆಕ್ಕಪತ್ರ ಬರೆಯಲು, ಬಿಟ್ಟ ಸ್ಥಳ ತುಂಬಿಸಲು ಬಳಸಿಕೊಂಡರೆ ಆಗುವ ನಷ್ಟಕ್ಕೆ ಯಾರು ಹೊಣೆ?
-ಶಿವಪ್ರಸಾದ್ ಸುರ್ಯ, ಉಜಿರೆ