ಬ್ಯಾಂಕ್ ನೌಕರರ ಹೋರಾಟ ಸೌಲಭ್ಯಕ್ಕೋ, ಸಂಘಗಳ ಅಸ್ತಿತ್ವಕ್ಕೋ?
ಹೋರಾಟಕ್ಕೂ ಬ್ಯಾಂಕ್ ನೌಕರರಿಗೂ ಅವಿಭಾಜ್ಯ ಸಂಬಂಧ. ಹೋರಾಟವಿಲ್ಲದೆ ಬದುಕಲಾರದಷ್ಟು ಅದು ...
ಹೋರಾಟಕ್ಕೂ ಬ್ಯಾಂಕ್ ನೌಕರರಿಗೂ ಅವಿಭಾಜ್ಯ ಸಂಬಂಧ. ಹೋರಾಟವಿಲ್ಲದೆ ಬದುಕಲಾರದಷ್ಟು ಅದು ಅವರನ್ನು ಆವರಿಸಿಕೊಂಡಿದೆ. ಇನ್ನಿತರ ಕ್ಷೇತ್ರಗಳ ಉದ್ಯೋಗಿಗಳು ಸ್ವಲ್ಪ ಅಸೂಯೆ ಪಡುವಷ್ಟು ಸೌಲಭ್ಯಗಳನ್ನು ಇವರು ಪಡೆದಿದ್ದರೆ, ಅದರ ಹಿಂದೆ ಅವರ ನಿರಂತರ ಹೋರಾಟದ ಸುದೀರ್ಘ ಇತಿಹಾಸವಿದೆ. ಕಳೆದ ಆರು ದಶಕಗಳಲ್ಲಿ ಅವರು ಮಾಡಿದ ಹೋರಾಟವೆಷ್ಟೋ, ಅದಕ್ಕಾಗಿ ಕಳೆದುಕೊಂಡ ಸಂಬಳವೆಷ್ಟೋ ನೌಕರಿಯನ್ನು ಕಳೆದುಕೊಂಡವರೆಷ್ಟೋ?! ಕಾರ್ಮಿಕರು ಸಾಮಾನ್ಯವಾಗಿ ಹೋರಾಟವನ್ನು ಹೆಚ್ಚಿನ ಹಣಕಾಸು ಸೌಲಭ್ಯಗಳಿಗಾಗಿ ಮಾಡುತ್ತಾರೆ. ಆದರೆ ಬ್ಯಾಂಕ್ ನೌಕರರು ಈ ಬೇಡಿಕೆಗಳೊಂದಿಗೆ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ವಿದೇಶಿ ಬಂಡವಾಳ ಹೂಡಿಕೆಯಂಥ ವಿಷಯಗಳ ಬಗೆಗೂ ಹೋರಾಟ ಮಾಡುತ್ತಾರೆ. ಈಗಾಗಲೇ ಮೂರು ಬಾರಿ ಮುಷ್ಕರ ನಡೆದಿದ್ದು, ದೀರ್ಘ ಹೋರಾಟದ ಮುನ್ಸೂಚನೆ ಕೊಟ್ಟಿದ್ದಾರೆ.
ಹಿಂದಿನ ವೇತನ ಒಪ್ಪಂದ ಮುಗಿದು ವರ್ಷವಾದರೂ, ಮುಂದಿನ ಒಪ್ಪಂದಕ್ಕೆ ಹಣಕಾಸು ಮಂತ್ರಾಲಯದಿಂದ ವೇತನ ಹೆಚ್ಚಳದ ಪ್ರಮಾಣದ ಬಗೆಗೆ ನಿರ್ದೇಶನ ಬಂದಿಲ್ಲವೆಂದು ಮಾತುಕತೆ ನಡೆಸುವ ಭಾರತೀಯ ಬ್ಯಾಂಕರುಗಳ ಸಂಘ ಹೇಳಿದ್ದು ಮತ್ತು ಬ್ಯಾಂಕರುಗಳ ಸಂಘ ಮಾತುಕತೆಯಲ್ಲಿ ಬಿಗಿ ನೀತಿ ಅನುಸರಿಸಿದ್ದು ಮತ್ತು ಯಾವುದೇ ಗಂಭೀರ ಚರ್ಚೆ ನಡೆಸದಿದ್ದುದು ಮತ್ತು ಕೇವಲ ಶೇ. 10 ವೇತನ ಏರಿಕೆಗೆ ಒಲವು ತೋರಿಸಿದ್ದು, ಕಾರ್ಮಿಕ ಸಂಘಗಳು ಈ ಹಾದಿಯನ್ನು ಹಿಡಿಯುವಂತೆ ಮಾಡಿದೆ. ಈ ಹೋರಾಟದ ಹಿನ್ನೆಲೆ ಬ್ಯಾಂಕ್ ಆಡಳಿತವರ್ಗ ಮತ್ತು ನೌಕರರ ಸಂಘಗಳ ನಡುವೆ 2007-12ರ ಅವಧಿಗಾಗಿ ವೇತನ ಸಂಬಂಧಿ ದ್ವಿಪಕ್ಷೀಯ ಒಪ್ಪಂದವಾಗಿದೆ. ಇದು 31-1-12 ಕ್ಕೆ ಮುಗಿಯುತ್ತಿದ್ದು 1.11.12 ರಿಂದ ಇನ್ನೊಂದು ಒಪ್ಪಂದ ಏರ್ಪಾಡಾಗಬೇಕಾಗಿದೆ. ಎಂಬತ್ತರ ದಶಕದವರೆಗೆ ಇಂಥ ಒಪ್ಪಂದ ಮೂರು ವರ್ಷಗಳಿಗೊಮ್ಮೆ ಆಗುತ್ತಿತ್ತು. ನಂತರ ತೊಂಬತ್ತರ ದಶಕದಲ್ಲಿ ಅದು ನಾಲ್ಕು ವರ್ಷಗಳಿಗೊಮ್ಮೆ ಏರಿತು. ಈಗ ಇದು ಐದು ವರ್ಷಗಳಿಗೊಮ್ಮೆ ಆಗುತ್ತಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ಸಂಘಗಳು ಈಗಾಗಲೇ ತಮ್ಮ ಬೇಡಿಕೆಗಳನ್ನು ಕ್ರೋಢೀಕರಿಸಿ ಚರ್ಚೆಗಾಗಿ ಆಡಳಿತವರ್ಗದ ಮುಂದೆ ಇಟ್ಟಿದೆ. ಈಗಾಗಲೇ ಏಳು ಸುತ್ತುಗಳ ಮಾತುಕತೆ ಮುಗಿದಿದ್ದು, ಮೂಲವೇತನದಲ್ಲಿ ತುಟ್ಟಿ ಭತ್ತೆಯ ವಿಲೀನ ಮತ್ತು ಮುಂದಿನ ವೇತನ ಒಪ್ಪಂದದ ಅನುಷ್ಟಾನದ ದಿನಾಂಕದ ಬಗೆಗೆ ನಿರ್ಧಾರವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಬಹುಮುಖ್ಯವಾದ ವೇತನ ಹೆಚ್ಚಳದ ಪ್ರಮಾಣ, ಹೊರಗುತ್ತಿಗೆ ಬಗೆಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದು, ಅದಿನ್ನೂ ಮಾತುಕತೆಯ ಅರಂಭದ ಹಂತದಲ್ಲಿದ್ದು, ಎರಡೂ ಪಕ್ಷಗಳು ಬಿಗಿ ಮುಷ್ಟಿ ಹಿಡಿದಿದ್ದು ಸಮಸ್ಯೆ ಜಟಿಲಗೊಂಡಿದೆ. ಹಾಗೆಯೇ ಬ್ಯಾಂಕ್ ನೌಕರರಿಗೆ ಐಟಿ ಕಂಪನಿಗಳಂತೆ ವೇರಿಯಬಲ್ ಪೇ, ಫಿಕ್ಸಡ್ ಪೇ ಪದ್ದತಿಯನ್ನು ತರಲು ಮ್ಯಾನೇಜ್ಮೆಂಟ್ ಗಂಭೀರವಾಗಿ ಪ್ರಯತ್ನಿಸುತ್ತಿದ್ದು, ನೌಕರವರ್ಗ ಕೂಡಾ ಈ ಪ್ರಯತ್ನವನ್ನು ಸಾರಾ ಸಗಟಾಗಿ ವಿರೋಧಿಸುತ್ತಿದೆ. ಸಾರ್ವಜನಿಕ ರಂಗದಲ್ಲಿ ಈಗ 26 ಬ್ಯಾಂಕುಗಳಿದ್ದು ಅವುಗಳನ್ನು ವಿಲೀನಗೊಳಿಸಿ ಜಾಗತಿಕ ಮಟ್ಟದ 4-5 ಬ್ಯಾಂಕುಗಳಿಗೆ ಇಳಿಸಬೇಕೆನ್ನುವ ಅಭಿಪ್ರಾಯ ಕಳೆದ ಎರಡು ದಶಕಗಳಿಂದ ಚಲಾವಣೆಯಲ್ಲಿದ್ದು, ಈ ನಿಟ್ಟಿನಲ್ಲಿ ರಂಗರಾಜನ್ ಸಮಿತಿ ಎರಡು ಪೂರಕ ವರದಿಗಳನ್ನು ಸಲ್ಲಿಸಿದೆ. ಸ್ಟೇಟ್ ಬ್ಯಾಂಕ್ ಅಫ್ ಇಂದೋರ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಸೌರಾಷ್ಟ್ರಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ವಿಲೀನವಾಗಿದ್ದು ಬಿಟ್ಟರೆ, ಈ ನಿಟ್ಟಿನಲ್ಲಿ ಯಾವುದೇ ಮಹತ್ವದ ಬೆಳವಣಿಗೆ ಯಾಗಿಲ್ಲ. ಈಗ ಪುನಃ ಈ ವಿಷಯ ರೆಕ್ಕೆ ಪುಕ್ಕ ಬಿಚ್ಚಿ ಹಾರುತ್ತಿದ್ದು, ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದ್ದು ಯಾವುದೇ ಕ್ಷಣದಲ್ಲಿ ಸಕಾರಾತ್ಮಕ ನಿರ್ಣಯ ಹೊರಹೊಮ್ಮುವ ಸಾಧ್ಯತೆ ಇದೆ. ಬ್ಯಾಂಕ್ ನೌಕರರು ನೌಕರಿ ಲಾಸ್, ಗ್ರಾಮಾಂತರ ಪ್ರದೇಶದಲ್ಲಿ ಶಾಖೆಗಳ ಕಡಿತ, ಹಣಕಾಸು ಸೇರ್ಪಡೆ ಕಾರ್ಯಕ್ರಮಕ್ಕೆ ಹಿನ್ನಡೆ, ಸರ್ಕಾರದ ಅರ್ಥಿಕ-ಸಾಮಾಜಿಕ ಜನೋಪಯೋಗಿ ಕಾರ್ಯಕ್ರಮಕ್ಕೆ ಹಿನ್ನಡೆ, ಬ್ಯಾಂಕ್ ರಾಷ್ಟ್ರೀಕರಣ ಮೂಲ ತತ್ವಕ್ಕೆ ತಿಲಾಂಜಲಿ ಮುಂತಾದ ಕಾರಣಗಳನ್ನು ಮುಂದೆ ಮಾಡಿ ಬ್ಯಾಂಕುಗಳ ವಿಲೀನವನ್ನು ವಿರೋಧಿಸುತ್ತಿದ್ದಾರೆ. ಈ ಮಧ್ಯೆ ಬ್ಯಾಂಕ್ ನೌಕರರ ಸೇವಾ ನಿಯಮಾವಳಿ ಮತ್ತು ಸಂಬಳ ಸಾರಿಗೆಯನ್ನು ಅಮೂಲಾಗ್ರವಾಗಿ ಪರಿಶೀಲಿಸಿ, ಪರಿಷ್ಕರಿಸಿ ಶಿಫಾರಸು ಮಾಡಲು ನೇಮಿಸಿದ ಬ್ಯಾಂಕ್ ಆಫ್ ಬರೋಡಾದ ಮಾಜಿ ಅಧ್ಯಕ್ಷ ಖಾಂಡೇಲವಾಲಾ ಸಮಿತಿ ತನ್ನ ಶಿಫಾರಸುಗಳನ್ನು ಸರ್ಕಾರಕ್ಕೆ ಕಳಿಸಿದ್ದು, ಸರ್ಕಾರ ಏಕ ಪಕ್ಷೀಯವಾಗಿ ಇದನ್ನು ಅನುಷ್ಟಾನಗೊಳಿಸಲು ಹೊರಟಿರುವುದು ಬ್ಯಾಂಕ್ ನೌಕರರನ್ನು ಕೆರಳಿಸಿದೆ. ಹಾಗಿದ್ದರೆ ಇದರಲ್ಲೇನಿದೆ?
1) ಮಾನವ-ಸಂಪನ್ಮೂಲದ ವಿಚಾರದಲ್ಲಿ ಬ್ಯಾಂಕ್ ನಿರ್ದೇಶಕರ ಮಂಡಳಿಯ ನಿರ್ಧಾರವೇ ಅಂತಿಮ (ಕಾರ್ಮಿಕ ಸಂಘಗಳಿಗೆ ಇಲ್ಲಿ ಅವಕಾಶವಿಲ್ಲ). 2) ಸಿಬ್ಬಂದಿ ವೆಚ್ಚದ ಮೇಲೆ ನಿಯಂತ್ರಣ (ಸಿಬ್ಬಂದಿ ಕಡಿತ) 3)1966 ರಿಂದಲೂ ಜಾರಿಯಲ್ಲಿರುವ ಮತ್ತು ಈವರೆಗೂ ನಡೆದು ಬಂದ ಬ್ಯಾಂಕ್ ಉದ್ಯೋಗಿಗಳಿಗೆಲ್ಲಾ ಏಕ ರೀತಿಯ ವೇತನ ನೀತಿಗೆ ವಿರುದ್ಧವಾಗಿ ಪ್ರತಿ ಬ್ಯಾಂಕಿಗೆ ಬೇರೆ ಬೇರೆ ವೇತನ ನೀತಿ. (ಬ್ಯಾಂಕ್ ನೌಕರರನ್ನು ಒಡೆದು ಆಳುವ ನೀತಿ ಮತ್ತು ಏಕ ರೂಪ ಕೆಲಸಕ್ಕೆ ಏಕ ರೀತಿಯ ವೇತನ ನೀತಿಗೆ ತಿಲಾಂಜಲಿ) 4) ಈಗಿರುವ ಸ್ಥಿರ ಸಂಬಳದ ಬದಲಿಗೆ ಸ್ಥಿರ ಮತ್ತು ವೇರಿಯೆಬಲ್ ಸಂಬಳ ನೀತಿ ಜಾರಿ (ಸಾಧನೆ ಆಧಾರಿತ ಸಂಬಳ) 5) ಎಲ್ಲಾ ರೀತಿಯ ಬ್ಯಾಂಕ್ ಕೆಲಸಗಳನ್ನು ಹೊರಗುತ್ತಿಗೆ ಮೂಲಕ ಮಾಡಿಸಲು ಬ್ಯಾಂಕ್ಗಳಿಗೆ ಪೂರ್ಣ ಸ್ವಾತಂತ್ರ್ಯ (ಖಾಯಂ ಉದ್ಯೋಗಿಗಳ ಸಂಖ್ಯೆಯ ಹಾಗೂ ವೇತನ ಬಿಲ್ನ ಕಡಿತ) 6) ಈವರೆಗೂ ದ್ವಿಪಕ್ಷೀಯ ಒಪ್ಪಂದದ ಪ್ರಕಾರವಾಗುವ ವರ್ಗಾ-ವರ್ಗಿ, ಬಡ್ತಿ, ಸಿಬ್ಬಂದಿ ನೇಮಕ ಪ್ರಕ್ರಿಯೆಗಳು ಇನ್ನು ಮೇಲೆ ಮ್ಯಾನೇಜ್ಮೆಂಟ್ ನಿರ್ಧರಿಸಿದಂತೆ. ( ಕಾರ್ಮಿಕ ಸಂಘಗಳ ಪಾತ್ರಕ್ಕೆ ಕತ್ತರಿ). ಸಮಿತಿಯ ಈ ಶಿಫಾರಸುಗಳನ್ನು ಒಪ್ಪಿದರೆ ಬ್ಯಾಂಕ್ಗಳಲ್ಲಿ ಕಾರ್ಮಿಕ ಚಳವಳಿಯ ಇತಿಶ್ರೀ ಆಗುತ್ತದೆ ಎನ್ನುವುದು ಕಾರ್ಮಿಕ ನಾಯಕರ ಭಯ. ಇದರೊಂದಿಗೆ ಅವರ ಈ ಕೆಳಗಿನ ಬೇಡಿಕೆಗಳಿಗೆ ಕೂಡಾ ಪಟ್ಟು ಹಿಡಿದಿದ್ದಾರೆ. ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ.
1) ಒಪ್ಪಂದವಾದರೂ ಅನುಷ್ಟಾನವಾಗದ ಅನುಕಂಪ ಆಧಾರಿತ ನೇಮಕಾತಿ. (ಇವು ರಿಸರ್ವ್ ಬ್ಯಾಂಕ್, ಕೇಂದ್ರ ಸರ್ಕಾರದ ಕಚೇರಿಗಳಲ್ಲಿ, ವಿಮಾ ಕಂಪನಿಗಳಲ್ಲಿ ಇವೆ) 2) ಬ್ಯಾಂಕ್ಗಳಲ್ಲಿ ಬಹುಮಂದಿ ನೌಕರರು ನಿವೃತ್ತಿಯಾಗುತ್ತಿದ್ದರೂ ಅಗತ್ಯಕ್ಕೆ ಅನುಗುಣವಾಗಿ ನೇಮಕಾತಿಯಾಗದಿರುವದು. ಬಹುತೇಕ ಬ್ಯಾಂಕುಗಳಲ್ಲಿ ಸಾಕಷ್ಟು ಅಧಿಕಾರಿಗಳಿಲ್ಲದೇ ದಿನ-ನಿತ್ಯದ ಕೆಲಸಕ್ಕೆ ತೊಂದರೆಯಾಗುತ್ತಿದೆ. 3) ಬ್ಯಾಂಕುಗಳ ಲಾಭದಲ್ಲಿ ವೃದ್ಧಿಯಾದರೂ ಅದಕ್ಕನುಗುಣವಾಗಿ ನೌಕರರ ಕ್ಷೇಮ ನಿಧಿಯಲ್ಲಿ ಹೆಚ್ಚಳವಾಗದಿರುವುದು. 4) ಲಾಭ ಗಳಿಸದ ಶಾಖೆಗಳ ಮುಚ್ಚುವಿಕೆಯ ಸೂಚನೆ, ಬ್ಯಾಂಕುಗಳ ವಿಲೀನದ ತೂಗುಕತ್ತಿ,ದೊಡ್ಡ ಕಾರ್ಪೊರೇಟ್ ಹೌಸ್ಗಳಿಗೆ ಬ್ಯಾಂಕ್ ತೆರೆಯಲು ಅನುಮತಿ ಮತ್ತು ಅಡ್ಡ ಹಾದಿಯ ಮೂಲಕ ವಿದೇಶಿ ಬ್ಯಾಂಕುಗಳಿಗೆ ದೇಶದಲ್ಲಿ ಶಾಖೆ ತೆರೆಯಲು ಮತ್ತು ಭಾರತೀಯ ಖಾಸಗಿ ಬ್ಯಾಂಕುಗಳನ್ನು ಕಬಳಿಸಲು ಅನುಮತಿ. ಸಾರ್ವಜನಿಕರ ಮತ್ತು ಜನಸಾಮಾನ್ಯರ ಅಭಿಪ್ರಾಯ ಏನೇ ಇರಲಿ, ಇನ್ನಿತರ ಕೆಲವು ಇಲಾಖೆಗಳಿಗೆ ಹೋಲಿಸಿದರೆ, ನಿರಂತರ ವರ್ಗಾವರ್ಗಿ ಆಗುವ ಮತ್ತು ಕೆಲಸದ ಪ್ರತಿ ಹಂತದಲ್ಲಿಯೂ ಹಣಕಾಸು ರಿಸ್ಕ್ ಹೊಂದಿರುವ ಬ್ಯಾಂಕ್ ಉದ್ಯೋಗದಲ್ಲಿ ಸಂಬಳ-ಸೌಲಭ್ಯ ತುಂಬಾ ಕಡಿಮೆ. ಆರಂಭಿಕ ಹಂತದ ಸಂಬಳ ಉದ್ಯೋಗಾಂಕ್ಷಿಗಳನ್ನು ಆಕರ್ಷಿಸುವಲ್ಲಿ ಬ್ಯಾಂಕುಗಳು ವಿಫಲವಾಗಿವೆ. ಅಂತೆಯೇ ಬ್ಯಾಂಕುಗಳಲ್ಲಿ ಹೊಸಬರ ತ್ವರಿತ ನಿರ್ಗಮನ ಮತ್ತು ಸ್ವಯಂ ನಿವೃತ್ತಿ ಹೆಚ್ಚಾಗುತ್ತಿದೆ ಎಂದು ಬ್ಯಾಂಕಿನ ಉನ್ನತ ಅಧಿಕಾರಿಗಳ ಅಭಿಪ್ರಾಯ.
2013-2014 ಬ್ಯಾಂಕ್ ನೌಕರರಿಗೆ ಇನ್ನೊಂದು ಹೋರಾಟದ ವರ್ಷ. ಆದರೆ ಇದು ಈ ಹಿಂದಿನ ಹೋರಾಟಗಳಿಗಿಂತ ತೀರಾ ಭಿನ್ನ ಮತ್ತು ದೀರ್ಘವಾಗಿರುವುದರಲ್ಲಿ ಸಂಶಯವಿಲ್ಲ. ಅದಕ್ಕೂ ಮಿಗಿಲಾಗಿ ಇದು ಹಣಕಾಸು ಬೇಡಿಕೆಗಳಿಗಿಂತ ಕಾರ್ಮಿಕ ಸಂಘಗಳ ಅಸ್ತಿತ್ವದ ಪ್ರಶ್ನೆಯೂ ಇದರಲ್ಲಿ ಗೌಪ್ಯವಾಗಿ ಅಡಕವಾಗಿದೆ. ಬ್ಯಾಂಕ್ ಸಿಬ್ಬಂದಿಗಳ ವೇತನ ಏರಿಕೆ ಬೇಡಿಕೆಯು ಒಂದೆರಡು ದೊಡ್ಡ ಕಾರ್ಪೊರೇಟ್ ಹೌಸ್ಗಳ ಸುಸ್ತಿ ಸಾಲಕ್ಕೆ ಸಾಟಿ ಇಲ್ಲವೆನ್ನುವ ಕಾರ್ಮಿಕ ನಾಯಕರ ಅಭಿಪ್ರಾಯದಲ್ಲಿ ಹುರುಳಿಲ್ಲದಿಲ್ಲ. ಹಣದುಬ್ಬರವೇ ಸುಮಾರು 10 ಪ್ರತಿಶತ ಇರುವಾಗ ಶೇ.10 ಏರಿಕೆ ಯಾವ ಲೆಕ್ಕ ಎಂದು ಅವರ ಪ್ರಶ್ನೆ. ಕಳೆದ ಆರು ದಶಕಗಳಲ್ಲಿ ಅವರು ಸರಾಸರಿ 12 ರಿಂದ 14 ಪ್ರತಿಶತ ವೇತನ ಏರಿಕೆ ಪಡೆದಿದ್ದಾರೆ. ಬ್ಯಾಂಕ್ ಸಿಬ್ಬಂದಿಗಳು ಅದಕ್ಕೇ ತೃಪ್ತರಾಗಿದ್ದಾರೆ ಕೂಡಾ.
ಮ್ಯಾನೇಜ್ಮೆಂಟ್ ಎಷ್ಟೇ ಜಿಗುಟುತನ ತೋರಿಸಿದರೂ ಅವರು ತಮ್ಮ ಮುಷ್ಟಿಯನ್ನು ಕೊನೆಗೊಮ್ಮೆ ಸಡಿಲ ಮಾಡಲೇಬೇಕಾಗುತ್ತದೆ. ಈ ಮಧ್ಯೆ ಈ ನಾಟಕವೇಕೆ ಎಂದು ಬ್ಯಾಂಕ್ ಸಿಬ್ಬಂದಿಗಳು ಕೇಳುತ್ತಾರೆ. ಕೆಲಸವಿಲ್ಲ, ಅಂತೆಯೇ ಸಂಬಳವಿಲ್ಲ, ನೀತಿಯಡಿ ಸಿಬ್ಬಂದಿಗಳ ಒಂದು ದಿನದ ಮುಷ್ಕರಕ್ಕೆ ಅವರು ಕಳೆದುಕೊಳ್ಳುವುದು 200 ಕೋಟಿಗಳನ್ನು. ಆದರೆ ಜನಸಾಮಾನ್ಯರಿಗಾಗುವ ಅನಾನುಕೂಲ ಮತ್ತು ಬಿಜಿನೆಸ್ಗೆ ಆಗುವ ತೊಂದರೆ?
ರಮಾನಂದ ಶರ್ಮಾ
ಬೆಂಗಳೂರು