ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕಳೆದು ಹೋಗುತ್ತಿರುವ ಜಾತ್ರೆಗಳು

Mainashree
Updated On : 21 Feb 2014, 10:25 am

"ಕಸವು ಹೊಡೆದಾ ಕೈಯು ಕಸ್ತೂರಿ ನಾತಾವ/ ಬಸವಣ್ಣ ನಿನ್ನ ಸೆಗಣಿಯೇ ಬಳಿದ ಕೈ/ ಎಸಳ ಯಾಲಕ್ಕಿ ಗೋವಿನಾತ"
ಈ ಜನಪದ ತ್ರಿಪದಿಯನ್ನು ನಾವು ಸಣ್ಣವರಿದ್ದಾಗ ಕೇಳಿ ಆನಂದಿಸಿದ್ದೆವು. ಆದರೀಗ ಬಸವಣ್ಣನೂ ಇಲ್ಲ, ಸೆಗಣಿಯೂ ಇಲ್ಲ" ಅನ್ನುವಂತಾಗಿದೆ.
ಸಂಕ್ರಾಂತಿ ಹಬ್ಬ ಮುಗಿಯುತ್ತಿದ್ದಂತೆ ದನಗಳ ಜಾತ್ರೆಗಳು ಒಂದರ ಹಿಂದೆ ಒಂದು ಪ್ರಾರಂಭ. ಒಂದು ಜಾತ್ರೆ ಮುಗಿಯುತ್ತಿದ್ದಂತೆ ಬೇರೆ ಕಡೆ ಮತ್ತೊಂದು ಜಾತ್ರೆ ಸುರುವಾಗುತ್ತಿತ್ತು. ಇಲ್ಲಿ ದೂರದ ದನಗಳನ್ನು ಇನ್ನೊಂದು ಜಾತ್ರೆಗೆ ಹೊಡೆಯುತ್ತಿದ್ದರು. ಹೊಳೆಪರುಸೆ, ಶಿವನಹಳ್ಳಿ ಜಾತ್ರೆ, ಮುಡುಕುತೊರೆ, ಕಬ್ಬಾಳು ಜಾತ್ರೆ, ಕೆಂಗಲು ಜಾತ್ರೆ ಹೀಗೆ ಒಂದರ ಹಿಂದೆ ಒಂದು.
ನಮ್ಮೂರಿನಿಂದ ಐದು ಕಿ.ಮಿ. ದೂರದಲ್ಲಿರುವ ಕಬ್ಬಾಳಮ್ಮನ ಜಾತ್ರೆ ಈ ಭಾಗದಲ್ಲಿ ಬಹಳ ಹೆಸರುವಾಸಿ. ರಾಮನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಿಂದ ದನಗಳನ್ನು ಮಾರಲು ದನಗಳನ್ನು ಕೊಳ್ಳಲು ಇಲ್ಲಿಗೆ ಬರುತ್ತಿದ್ದರು. ಊರಿನ ಉದ್ದಗಲ ಎರಡು ಕಿ.ಮೀ. ದೂರದವರೆಗೆ ದನಗಳು ಕಟ್ಟುತ್ತಿದ್ದವು . ಆ ದನಗಳ ಪರುಸೆ ನೋಡುವುದೇ ಒಂದು ಆನಂದ. ಅತ್ಯುತ್ತಮವಾದ ದನಗಳನ್ನು, ಎತ್ತುಗಳನ್ನು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮಾಡುತ್ತಿದ್ದರು. ಜೊತೆಗೆ ಉತ್ತಮ ತಳಿಯ ಕುರಿ/ಟಗರುಗಳ ಮೆರವಣಿಗೆ ಸಹ ನಡೆಯುತ್ತಿತ್ತು. ಸಾಮಾನ್ಯವಾಗಿ ಜಾತ್ರೆಗಳು ಚಳಿಗಾಲದಲ್ಲಿ ನಡೆಯುವುದರಿಂದ ಮಧ್ಯರಾತ್ರಿಗೆ ಎದ್ದು ಬೆಂಕಿ ಹಾಕಿಕೊಂಡು ಕಾಯುವ ದೃಶ್ಯ ಮನೋಹರ. ಜಾತ್ರೆಯ ಉದ್ದಗಲಕ್ಕೂ ಉರಿಯುವ ಬೆಂಕಿ!
ಬೆಳಗಾಯಿತೆಂದರೆ ಗಿರಾಕಿಗಳ ಹಿಂಡು. ಹಿಂಡು ದನಗಳ ಗೊತ್ತಿಗೆ ಬರುವರು. ತಮಗೆ ಒಪ್ಪಿಗೆಯಾದ ದನಗಳನ್ನೂದಲ್ಲಾಳಿಗಳ ಮೂಲಕ ವ್ಯಾಪಾರಕ್ಕೆ ಕೂರುವರು. ದಲ್ಲಾಳಿ ಎರಡು ಕಡೆಗೂ ಸರಿದೂಗುವ ರೀತಿ ಮಧ್ಯಸ್ಥಿಕೆ ವಹಿಸಿ ವ್ಯಾಪಾರ ಮಾಡುವನು. ಮುಂಗಾರು ಮಳೆ ಬೀಳುವ ಮುನ್ನ ಕೊಟ್ಟಿಗೆಯಲ್ಲಿ ದನಗಳಿಲ್ಲದಿದ್ದರೆ ರೈತನ ಕಣ್ಣಿಗೆ ನಿದ್ರೆ ಬರುತ್ತಿರಲಿಲ್ಲ. ಮಳೆ ಬೀಳುವುದೇ ತಡ, ಎಲ್ಲರ ಹೊದಲ್ಲೂ ಏರುಗಳ ಸಾಲು ಸಾಲು. ಹಾಗಾಗಿ ರೈತ ಜಾತ್ರೆಗಳ ಬರುವಿಕೆಗಾಗಿ ಕಾಯ್ದು ದನಗಳನ್ನು ತರುತ್ತಿದ್ದ. ಒಂದಕ್ಕಿಂತ ಒಂದು ಹೆಚ್ಚು ಎನ್ನುವಂತೆ ದನಗಳು ಕಟ್ಟುತ್ತಿದ್ದವು. ಮೂರ್ನಾಲ್ಕು ದಿನ ದನಗಳ ಜಾತ್ರೆಯಾದರೆ ಇನ್ನೂ ಮೂರ್ನಾಲ್ಕು ದಿನ ಕೊಂಡ-ಬಂದಿ, ಉತ್ಸವ ಹಾಗೂ ಸಿಡಿ, ಮೆರವಣಿಗೆ ನಡೆಯುವುದು. ರಸ್ತೆಗಳ ಇಕ್ಕೆಲಗಳಲ್ಲಿ ಅಂಗಡಿಗಳ ಸಾಲು -ಸಾಲು. ಸಿಹಿ ಅಂಗಡಿಗಳಲ್ಲಿ ಜೋಡಿಸಿರುವ ಸಿಹಿ ತಿನಿಸುಗಳನ್ನು ಕಂಡ ಹೈಕಳ ಬಾಯಲ್ಲಿ ನೀರೂರುವುದು. ಮತ್ತೊಂದೆಡೆ ಆಟಿಕೆಗಳ ಅಂಗಡಿಗಳು, ಪೀಪಿ, ಕೊಳಲು, ಇತ್ಯಾದಿ ಹೋಟೆಲುಗಳಿಗೇನು ಕಡಿಮೆಯಿಲ್ಲ. ಬೋಂಡದ ವಾಸನೆಯಂತೂ ಎಲ್ಲರನ್ನೂ ತನ್ನತ್ತ ಕರೆಯುತ್ತಿತ್ತು. ಜಾತ್ರೆ ನಡೆಯುವ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಬ್ಬದ ಸಡಗರ, ನೆಂಟರಿಷ್ಟರು ಬಂದು ಇಡೀ ಹಳ್ಳಿಗಳು ವಿಜೃಂಭಿಸುತ್ತಿದ್ದವು. ಅದರಲ್ಲೂ ಮಕ್ಕಳಂತೂ ಹೊಸ ಬಟ್ಟೆ ತೊಟ್ಟು ಅಂಗಡಿ ಬೀದಿಗಳ ಉದ್ದಗಲಕ್ಕೂ ಸುತ್ತಾಡಿ ತಮಗೆ ಬೇಕಾದ ತಿಂಡಿ-ತಿನಿಸುಗಳು, ಆಟಿಕೆಗಳನ್ನು ಕೊಂಡು ನಲಿಯುತ್ತಿದ್ದರು. ಜಾತ್ರೆ ಏಳೆಂಟು ತಿಂಗಳಿರುವಾಗಲೇ ಹಣ ಕೂಡುವ ಕೆಲಸ ಮಕ್ಕಳದಾಗುತ್ತಿತ್ತು.
ಆದರೆ ಇಂದಿನ ಮಕ್ಕಳಿಗೆ ಇದ್ಯಾವುದೇ ಬಾಲ್ಯದ ಅನುಭವ ಇಲ್ಲವಾಗುತ್ತಿದೆ. ದನಗಳಿಂದ ವ್ಯವಸಾಯ ಮಾಡುವುದನ್ನೂ ರೈತ ಬಿಟ್ಟಿದ್ದಾನೆ. ಯುವ ಜನಾಂಗ ಹಾಗೂ ಕೆಲ ರೈತರು ಬೆಂಗಳೂರಿನತ್ತ ಸಾಗಿದ್ದಾರೆ. ವರ್ಷಪೂರ್ತಿ ದುಡಿದರೂ ಕೈಯಲ್ಲಿ ನಾಲ್ಕು ಕಾಸು ಹಳ್ಳಿಗಳಲ್ಲಿ ಸಿಗುವುದಿಲ್ಲ. ಪಟ್ಟಣದಲ್ಲಾದರೆ ಕಾಸು ಓಡಾಡುತ್ತದೆ. ಇದರಿಂದ ಎಷ್ಟೋ ಹಳ್ಳಿಗಳಲ್ಲಿ ಶಾಲೆಗಳು ಮುಚ್ಚುತ್ತಿವೆ. ಶಾಲೆಗೆ ಸೇರಿಸಲು ಮಕ್ಕಳೇ ಇಲ್ಲದ ಮೇಲೆ ಶಾಲೆ ಹೇಗೆ ಉಳಿಯುವುದು? ಊರಿನಲ್ಲಿ ವ್ಯವಸಾಯ ಮಾಡುವವರೇ ಇಲ್ಲವೆಂದ ಮೇಲೆ ದನಗಳನ್ನು ಯಾರು ಸಾಕುವರು? ಹಳ್ಳಿಗಳಲ್ಲೇ ಉಳಿದಿರುವ ಕೆಲವರು ಸಹ ನಾಟಿ ದನಗಳ ಬದಲಾಗಿ ದಿನವೂ ಹಣ ಕೊಡುವ ತಳಿ ಹಸುಗಳನ್ನು ಸಾಕುತ್ತಿದ್ದಾರೆ. ಇವುಗಳೇನಿದ್ದರೂ ಹಾಲು ಕರೆಯುವುದಕ್ಕೆ ಮಾತ್ರ. ಉಳಿಮೆಗೆ ಇದ್ದೇ ಇದೆ ಟ್ರ್ಯಾಕ್ಟರ್! ಹೀಗಾಗಿ ಹಳ್ಳಿಗಳಲ್ಲಿ ನಾಟಿ ದನಗಳ ಸಂಖ್ಯೆ ಕಡಿಮೆಯಾಗುತ್ತಿದೆ. ದಿನ ಉರುಳಿದಂತೆ ಜಾತ್ರೆಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಒಂದು ಸಾಂಸ್ಕೃತಿಕ ಕೊಂಡಿ ಕಳಚುತ್ತಿದೆ. ಮುಂದೊಂದು ದಿನ ನಮ್ಮ ಮಕ್ಕಳಿಗೆ ಜಾತ್ರೆಗಳ ನೈಜ ಅನುಭವ ಸಿಗದಂತಾಗಿ ಕೇವಲ ಪಠ್ಯ ಪುಸ್ತಕಗಳಲ್ಲಿ ಚಿತ್ರಗಳಲ್ಲಿ ಜಾತ್ರೆಗಳ ಬಗ್ಗೆ ತಿಳಿಯಬೇಕಾಗುತ್ತದೆ.

- ಸಾ.ಮ. ಶಿವಮಲ್ಲಯ್ಯ
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement