ಮಾತೃಭಾಷೆ ಅರಿವಿನ ದಾರಿ
ತಾಯಿಗೆ ಹಾಗೂ ತಾಯಿ ಭಾಷೆಗೂ ಸಹ ಬಿಡಿಸಲಾರದ ನಂಟಿದೆ. ಈ ನಂಟು ಮಗುವಿನ ಪಾಲಿಗೆ ಇಡುಗಂಟಾಗುತ್ತದೆ. ಮಗು ಸುಮಾರು 2 ವರ್ಷಕ್ಕೆ ಮಾತನಾಡಲಿಕ್ಕೆ ಕಲಿಯುತ್ತದೆ. ಆ ಮಾತು ಮಾತೃಭಾಷೆಯಲ್ಲಿಯೇ ಇರುತ್ತದೆ. ಆಗ ಮಗುವಿಗೆ ಇನ್ನೊಂದು ಭಾಷೆ ಅರ್ಥವಾಗುವುದಿಲ್ಲ. ಆ ವಯಸ್ಸಿನಲ್ಲಿ ಮಗುವಿನ ಬುದ್ಧಿ, ಹಲವುಭಾಷೆಗಳನ್ನು ಗ್ರಹಿಸುವ ಧಾರಣಾ ಶಕ್ತಿಯನ್ನು ಹೊಂದಿರುವುದಿಲ್ಲ. 2 ರಿಂದ 5 ವರ್ಷದವರೆಗೆ ಮಕ್ಕಳ ಮನಸ್ಸು ಅತ್ಯಂತ ಕೋಮಲ ಮತ್ತು ಸೂಕ್ಷ್ಮವಾಗಿರುತ್ತದೆ. ಅನುಕರಣೆ ಹೆಚ್ಚಿನ ಮಟ್ಟದಲ್ಲಿ ಕಂಡುಬರುತ್ತದೆ. ಆದ್ದರಿಂದ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡಬೇಕು. ಅವರಿಗೆ ತಿಳಿಯದ ಭಾಷೆಯಲ್ಲಿ ಮಾತನಾಡಿಸಿದರೆ ಮಕ್ಕಳು ದಿಗಿಲುಗೊಳ್ಳುತ್ತಾರೆ. ತಮಗೇನೂ ತಿಳಿಯುವುದಿಲ್ಲ ಎನ್ನುವ ಕೀಳರಿಮೆ ಅವರನ್ನು ಬಾಧಿಸಲು ಆರಂಭಿಸುತ್ತದೆ.
ಜಗತ್ತಿನಲ್ಲಿ ಅದು ಯಾವ ಭಾಷೆಯೇ ಇರಲಿ. ಮಕ್ಕಳ ಸಂಗಡ ಅದನ್ನು ಹೇಗೆ ಬಳಸಬೇಕು ಎನ್ನುವ ಒಳಸುಳಿ ತಾಯಂದಿರಿಗೆ ತಿಳಿದಿರುತ್ತದೆ. ಆದಕಾರಣ ಮಾತೃಭಾಷೆಯನ್ನು ಇನ್ನೂ ಸಮರ್ಥವಾಗಿ ಬಳಸಿಕೊಳ್ಳಲಿಕ್ಕೆ ತಾಯಂದಿರೆ ಸಮರ್ಥರು. ತಾಯಂದಿರು ತಾಯ್ತನದ ತುಡಿತದಲ್ಲಿ ಮಗುವಿನ ಮೇಲಿರುವ ಅಕ್ಕರೆಯಿಂದ ನುಡಿದಾಗ ಮಗುವಿನ ಪಾಲಿಗೆ ಮಾತೃಭಾಷೆಯಲ್ಲಿ ಬಂದಿರುವ ಆ ವಾಕ್ಯ ಸಕ್ಕರೆಯಂತೆ ಸಿಹಿಯಾಗುತ್ತದೆ. ಆದಕಾರಣ ಮಾತೃಭಾಷೆಗೆ ತಾಯಿಯೇ ಸಮರ್ಥ ನಿರ್ವಹಣಾಧಿಕಾರಿ. ಆದ್ದರಿಂದ ಮಾತೃಭಾಷೆ ಎನ್ನುವ ಶಬ್ದ ಪ್ರಯೋಗವಿದೆಯೇ ಹೊರತು ಪಿತೃಭಾಷೆ ಎಂದು ಇಲ್ಲ.
ಅಹೋ ಬಾಲಾಃ ಪರಪ್ರತ್ಯಯಃ (ಆಶ್ಚರ್ಯ ಚೂಡಾಮಣಿ) ಅಂದರೆ ಬಾಲಕರು ಎಷ್ಟೆಂದರೂ ಮತ್ತೊಬ್ಬರ ಮಾತನ್ನು ನಂಬುತ್ತಾರೆ. ದೊಡ್ಡವರಾದ ನಂತರ ಇತರರ ಮಾತನ್ನೂ ನಾವು ನಂಬುತ್ತೇವೆ. ಆದರೆ ಬುದ್ಧಿಯ ಒರೆಗಲ್ಲಿಗೆ ಹಚ್ಚಿದಾಗ ಮಾತ್ರ. ಆದರೆ ಚಿಕ್ಕಮಕ್ಕಳು ಕೂಡಲೆ ನಂಬುತ್ತಾರೆ. ಮಕ್ಕಳನ್ನು ನಂಬಿಸಲಿಕ್ಕೆ ಒಂದು ವಿಷಯವನ್ನು ಅವರ ಬುದ್ಧಿಯಲ್ಲಿ ಬಿಂಬಿಸಲಿಕ್ಕೆ ಮಾತೃಭಾಷೆಯೇ ಶಕ್ತಿಶಾಲಿಯಾದ ಸಂವಹನ ಎನ್ನುವುದನ್ನು ಮರೆಯಬಾರದು.
ಅಂತಾರಾಷ್ಟೀಯ ಮಟ್ಟದಲ್ಲಿಯೂ ಮಾತೃಭಾಷೆಗೆ ಅದರದೇ ಆದ ಮಹತ್ವವಿದೆ. ದೊಡ್ಡವರಾದ ನಂತರ ಮಾತಿನ ಅರ್ಥ ಬೇಗನೆ ಆಗುತ್ತದೆ. ಆದರೆ ಮಕ್ಕಳಿಗೆ ಅಷ್ಟು ಬೇಗನೆ ಆಗುವುದಿಲ್ಲ. ಕಾರಣ ಮಕ್ಕಳ ಬುದ್ಧಿಯ ಕವಾಟ ಮೆಲ್ಲನೆ ತೆರೆಯುವ ಕಾಲ ಅದು. ಆ ಕಾಲದಲ್ಲಿ ಅವರಿಗೆ ತಿಳಿಯದೇ ಇರುವ ಭಾಷೆಯನ್ನು ಬಳಸಿದರೆ ಬುದ್ಧಿಯ ಕವಾಟ ಬೇಗನೆ ತೆರೆಯಲಾರದು. ಆದರೆ ಮಾತೃಭಾಷೆಯಲ್ಲಿ ಮಕ್ಕಳಿಗೆ ವಿಷಯವನ್ನು ಹೇಳಿದರೆ, ಬುದ್ಧಿಯ ಬಾಗಿಲು ಬೇಗನೆ ತೆರೆದು ಅರ್ಥಸಂಪನ್ನತೆ ಉಂಟಾಗುತ್ತದೆ. ಈ ಅರ್ಥವಾಗುವ ಪ್ರಕ್ರಿಯೆಯೇ ಮುಂದೆ ಗ್ರಹಣ ಶಕ್ತಿ ಎಂದು ಕರೆಸಿಕೊಳ್ಳುತ್ತದೆ. ಆದಕಾರಣ ಜೀವಮಾನ ಪರ್ಯಂತ ಗ್ರಹಣ ಶಕ್ತಿಯ ವರ್ಧನೆಗೆ ಮೂಲದಲ್ಲಿ ಮಗುವಿಗೆ ಮಾತೃಭಾಷೆಯಲ್ಲಿ ಕೊಡುವ ಶಿಕ್ಷಣವೇ ನಾಂದಿಯಾಗುತ್ತದೆ.
ಈ ಮಾತೃಭಾಷೆ ತಲೆ ತಲಾಂತರದಿಂದ ಬಂದದ್ದು. ಆದ್ದರಿಂದ ಆ ಭಾಷೆಯಲ್ಲಿ ಅದೇನೋ ವಿಚಿತ್ರತೆ ಇರುತ್ತದೆ. ಮಗುವಿಗೆ ತಿಳಿಯದೇ ಇದ್ದರೂ ಮಾತೃಭಾಷೆಯ ಬಗ್ಗೆ ಪ್ರೀತಿ ಅವ್ಯಕ್ತವಾಗಿ ಅಡಕವಾಗಿರುತ್ತದೆ. ಆ ಭಾಷೆಯನ್ನು ಕೇಳಿದಾಗ ಮಕ್ಕಳು ಚುರುಕಾಗಿ ತಿರುಗಿ ನೋಡುತ್ತಾರೆ, ಆಲಿಸುತ್ತಾರೆ, ಲಾಲಿಸುತ್ತಾರೆ. ಆದ್ದರಿಂದ ಮಕ್ಕಳ ಬುದ್ಧಿ ಸಹಜವಾಗಿ ಹೂ ಅರಳಿದಂತೆ ಅರಳಬೇಕು ಎಂದಾದರೆ, ಮಾತೃಭಾಷೆಯ ಸ್ಪರ್ಶ ಆ ಹೂವಿಗೆ ಆಗಬೇಕು.
ಇಂದು ನಗರ ನಾಗರಿಕತೆಯ ಕಾರಣದಿಂದ ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚುತ್ತಿದೆ. ಚಿಕ್ಕ ಮಕ್ಕಳಿಗೆ ತಿಳಿಯದೆ ಇದ್ದರೂ ಅದನ್ನು ಬಲಾತ್ಕಾರದಿಂದ ಅವರ ಮೇಲೆ ಹೇರುವ ಪ್ರಯತ್ನ ನಿರಂತರವಾಗಿ ನಡೆದಿದೆ. ಕೆಲವು ತಂದೆ ತಾಯಿಗಳಿಗೆ ತಮ್ಮ ಮಕ್ಕಳು ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡಿದರೆ ಸಂತೋಷವಿಲ್ಲ. ಆದರೆ ಎರಡು ಶಬ್ದ ಆಂಗ್ಲ ಭಾಷೆಯಲ್ಲಿ ಮಾತನಾಡಿದರೂ ಸ್ವರ್ಗಕ್ಕೆ ಮೂರೆ ಗೇಣು ಇದ್ದಂತೆ ಭಾವಿಸುತ್ತಾರೆ. ಪಾಪ ಮಕ್ಕಳ ಮನಸ್ಸು ಇಂತಹ, 'ಡ್ಯಾಡಿ', 'ಮಮ್ಮಿ'ಗಳಿಗೆ ಅರ್ಥವಾಗುವುದೇ ಇಲ್ಲ. ಫೆಬ್ರವರಿ 21- ಅಂತಾರಾಷ್ಟೀಯ ಮಾತೃಭಾಷಾ ದಿನವಾಗಿದೆ. ಮಾತೃಭಾಷೆಯ ಮಹತ್ವವನ್ನು ಅರಿಯಲಿಕ್ಕೆ ಪ್ರಯತ್ನಿಸಬೇಕು. ಆ ಭಾಷೆಯ ಪ್ರಯೋಜನವನ್ನು ಮನಗಾಣಬೇಕು. ಹೆತ್ತವರು ಈ ದಿಶೆಯಲ್ಲಿ ಜಾಗೃತರಾಗಬೇಕಾಗಿದೆ.
-ಪ್ರೊ. ವಿಷ್ಣು ಜೋಶಿ, ಕುಮಟಾ