ಹಾಗಾದರೆ ರಾಜೀವ್ ಹತ್ಯೆಯ ತನಿಖಾಧಿಕಾರಿಗಳ ಶ್ರಮಕ್ಕೆಲ್ಲಿ ಬೆಲೆ?
ಹಾಗಾದರೆ ರಾಜೀವ್ ಹತ್ಯೆಯ ತನಿಖಾಧಿಕಾರಿಗಳ ಶ್ರಮಕ್ಕೆಲ್ಲಿ ಬೆಲೆ?...
ರಾಜೀವ್ ಗಾಂಧಿಯವರ ಹತ್ಯೆ ಪ್ರಕರಣವನ್ನು ತನಿಖೆ ಮಾಡಿದ ಅಧಿಕಾರಿಗಳು ಈ ಹೊತ್ತಿನಲ್ಲಿ ಮಾತಿಗಿಳಿದಾಗ ಅದನ್ನು ಕೇಳುತ್ತ ನಾಚಿಕೆಯಿಂದ ತಲೆತಗ್ಗಿಸುವುದನ್ನು ಬಿಟ್ಟು ಮತ್ತೇನೂ ಮಾಡಲಿಕ್ಕೆ ತೋಚುವುದಿಲ್ಲ. 'ರಾಜೀವ್ ಗಾಂಧಿ ಮತ್ತು ಇನ್ನೂ 17 ಜನರನ್ನು ಅದೆಷ್ಟು ಭೀಕರವಾಗಿ ಕೊಲ್ಲಲಾಯಿತು ಎಂಬುದನ್ನು ಎಲ್ಲರೂ ಮರೆತುಬಿಟ್ಟಿರುವುದು ದುರದೃಷ್ಟಕರ. ಅದರ ಬದಲು ಸುಪ್ರೀಂಕೋರ್ಟ್ನಿಂದ ಶಿಕ್ಷೆಗೊಳಗಾದ ಅಪರಾಧಿಗಳನ್ನು ಜೈಲಿಂದ ಹೊರತರುವ ಘನಂದಾರಿ ಕೆಲಸಕ್ಕೆ ಶ್ರೇಯಸ್ಸು ಪಡೆಯುವುದಕ್ಕೆ ಪೈಪೋಟಿ ಶುರುವಾಗಿದೆಯಲ್ಲ' ಎನ್ನುತ್ತಾರೆ ಡಿ. ಆರ್. ಕಾರ್ತಿಕೇಯನ್. ಸಿಬಿಐನ ನಿವೃತ್ತ ನಿರ್ದೇಶಕರಾಗಿರುವ ಕಾರ್ತಿಕೇಯನ್, ರಾಜೀವ್ ಗಾಂಧಿ ಹತ್ಯಾ ಪ್ರಕರಣದ ಪ್ರಮುಖ ತನಿಖಾಧಿಕಾರಿಯಾಗಿದ್ದವರು.
ರಾಜೀವ್ ಹಂತಕರನ್ನು ಜೈಲಿನಿಂದ ಬಿಡುಗಡೆಗೊಳಿಸಬೇಕು ಎಂಬ ಜಯಲಲಿತಾ ಅವರ ನಿರ್ಧಾರ ಅಂತಿಮವಾಗದು, ಅದಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಬೇಕಾಗುತ್ತದೆ ಎಂದೇ ಕಾನೂನು ಪರಿಣತರೆಲ್ಲ ಅಭಿಪ್ರಾಯಪಟ್ಟಿದ್ದಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಈ ವಿಷಯದಲ್ಲಿ ಜಯಲಲಿತಾ ನಿರ್ಧಾರವು ಕೇಂದ್ರ ಸರ್ಕಾರಕ್ಕೆ ನೀಡಿರುವ ಒಂದು ಸಲಹೆಯಾಗುತ್ತದೆ ಅಷ್ಟೇ. ಅದೇನೇ ಇದ್ದರೂ ಹಂತಕರನ್ನು ಬಿಡುಗಡೆಗೊಳಿಸುವುದಕ್ಕೆ ವ್ಯವಸ್ಥೆಯೊಂದು ಉಮೇದು ಮಾಡಿರುವ ಈ ಸಂದರ್ಭದಲ್ಲಿ ಆ ಪ್ರಕರಣದ ತನಿಖೆಯಲ್ಲಿ ತೊಡಗಿಸಿಕೊಂಡಿದ್ದವರ ಅಂತರಾಳ ಕೆದಕುವುದು ಉಚಿತವಾಗುತ್ತದೆ.
ಡಿ. ಆರ್. ಕಾರ್ತಿಕೇಯನ್ ಹೇಳುತ್ತಾರೆ- ಈ ಎಲ್ಲ ವಿದ್ಯಮಾನಗಳ ಬಗ್ಗೆ ನೀವು ನನ್ನ ಪ್ರತಿಕ್ರಿಯೆ ಕೇಳುವುದಾದರೆ, ನಾನು ಆ ಬಗ್ಗೆ ಏನೂ ಹೇಳಲಿಕ್ಕಿಲ್ಲ ಎಂದಷ್ಟೇ ಹೇಳಬೇಕಾಗುತ್ತದೆ. ಆದರೆ ಈ ಹತ್ಯಾ ಪ್ರಕರಣವನ್ನು ಬೇಧಿಸುವುದಕ್ಕೆ ನಾವು ವಹಿಸಿದ್ದ ಶ್ರಮ ಎಂಥದ್ದಾಗಿತ್ತು ಎಂಬುದನ್ನು ಮಾತ್ರ ನಿಮಗೆ ಮನದಟ್ಟು ಮಾಡಿಸಬಲ್ಲೆ.
ಘಟನೆ ನಡೆದ ಬೆನ್ನಲ್ಲೇ ರಾಜೀವ್ ಹತ್ಯಾ ಪ್ರಕರಣವನ್ನು ತನಿಖೆ ಮಾಡುವ ಹೊಣೆ ನನ್ನ ಹೆಗಲಿಗೇರಿತು. ಪ್ರಕರಣವನ್ನು ನನಗೆ ವಹಿಸಿದಾಗ ಇದೊಂದು ಸುಳಿವುಗಳಿಲ್ಲದ, ಜಾನ್ ಎಫ್ ಕೆನಡಿ ಕೊಲೆ ಪ್ರಕರಣದಂತೆಯೇ ಗೋಜಲಾಗಿಯೇ ಉಳಿದುಬಿಡಬಹುದಾದ ಪ್ರಕರಣ ಎಂದು ಹೇಳಲಾಗಿತ್ತು. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿಗಳೇನೂ ಲಭ್ಯವಿರಲಿಲ್ಲ. ಇಂಟೆಲಿಜೆನ್ಸ್ ಬ್ಯೂರೊ ಹಾಗೂ ರೀಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ಗಳಿಗೂ ಯಾವುದೇ ಸುಳಿವುಗಳು ಲಭಿಸಿರಲಿಲ್ಲ. ಬಹಳಷ್ಟು ಅಧಿಕಾರಿಗಳು ಈ ಪ್ರಕರಣವನ್ನು ವಹಿಸಿಕೊಳ್ಳುವುದಕ್ಕೆ ಹಿಂದೇಟು ಹಾಕಿದ್ದಾರೆ; ಏಕೆಂದರೆ ವೈಫಲ್ಯ ಕಟ್ಟಿಟ್ಟ ಬುತ್ತಿಯಂತೆ ಕಾಣುತ್ತಿದ್ದು, ಸುಮ್ಮನೇ ಮುಖಭಂಗ ಮಾಡಿಸಿಕೊಳ್ಳುವುದೇಕೆ ಎಂಬ ಯೋಚನೆ ಎಲ್ಲರದ್ದು ಎಂದು ನನಗೆ ಹೇಳಿದ್ದರು. ಇವೆಲ್ಲದರ ನಡುವೆಯೂ ನಾನು ಪ್ರಕರಣ ಕೈಗೆತ್ತಿಕೊಂಡೆ. ಏಕೆಂದರೆ ಅದು ರಾಷ್ಟ್ರಕ್ಕಾಗಿ ನನ್ನ ಕರ್ತವ್ಯ ಎಂದೇ ಭಾವಿಸಿದ್ದೆ. ನಾನು ವಿಧಿಸಿದ್ದ ಒಂದೇ ಷರತ್ತು ಎಂದರೆ ತನಿಖೆಯಲ್ಲಿ ರಾಜಕೀಯದ ಪ್ರವೇಶಕ್ಕೆ ಆಸ್ಪದವಿರಬಾರದು ಎಂಬುದಾಗಿತ್ತು.
ತನಿಖಾ ತಂಡದಲ್ಲಿದ್ದ ನಾವೆಲ್ಲ ದಿನಕ್ಕೆ 20 ಗಂಟೆಯ ಲೆಕ್ಕದಲ್ಲಿ ಕೆಲಸ ಮಾಡಿದೆವು. ತನಿಖೆ ಪ್ರಗತಿಯಲ್ಲಿದ್ದಾಗ ಎಲ್ಟಿಟಿಇ ಕಡೆಯಿಂದಲಂತೂ ಪ್ರಾಣಾಪಾಯದ ಆತಂಕ ಇದ್ದೇ ಇತ್ತು. ನಾವು ಬಹಳಷ್ಟು ರೇಡ್ಗಳನ್ನು ಮಾಡಿದೆವು. ಹಲವಾರು ವಸ್ತುಗಳನ್ನು ವಶಪಡಿಸಿಕೊಂಡೆವು. ಸುಮಾರು ನೂರಕ್ಕೂ ಮಿಕ್ಕಿ ಫೋಟೋಗಳನ್ನು ಪರಿಶೀಲಿಸಿದೆವು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 500 ವಿಡಿಯೋ ಕ್ಯಾಸೆಟ್ಗಳನ್ನೂ ವಶಪಡಿಸಿಕೊಂಡೆವು. ನಮ್ಮ ತಂಡ ಹೀಗೆಲ್ಲ ಗುಡ್ಡೆಹಾಕಿದ ಸಾಕ್ಷ್ಯಗಳ ಆಧಾರದಲ್ಲಿಯೇ ವಿಚಾರಣೆ ನಡೆದು ಆರೋಪಿಗಳ ಅಪರಾಧ ಸಾಬೀತಾಗಿ, ಅವರಿಗೆ ವಿಧಿಸಿದ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯಿತು. ನಾನು, ನನ್ನ ತಂಡ ಈ ಎಲ್ಲ ಪಾತಕಿಗಳನ್ನೂ ದೇಶದ ಅತ್ಯುನ್ನತ ನ್ಯಾಯಾಲಯವು ದೋಷಿಗಳೆಂದು ತೀರ್ಮಾನಿಸುವುದಕ್ಕೆ ಅಗತ್ಯವಾದ ಸಾಕ್ಷ್ಯಾಧಾರಗಳನ್ನು ನಮ್ಮ ಕರ್ತವ್ಯದ ಭಾಗವಾಗಿ ಒದಗಿಸಿದ್ದೆವು. ನಂತರ ಅವರೆಲ್ಲ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿದರು. ಹನ್ನೊಂದು ವರ್ಷಗಳಾದರೂ ಆ ಬಗ್ಗೆ ನಿರ್ಣಯ ತೆಗೆದುಕೊಳ್ಳಲಿಲ್ಲ ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್ ಅವರ ಮರಣದಂಡನೆಯನ್ನು ಜೀವಾವಧಿಯಾಗಿ ಪರಿವರ್ತಿಸಿದೆ. ಆದರೆ ನಾವೆಲ್ಲರೂ ನೆನಪಿಡಬೇಕಾದ ಸಂಗತಿ ಎಂದರೆ ಸುಪ್ರೀಂಕೋರ್ಟ್ ಇವರೆಲ್ಲರೂ ನಿರ್ದೋಷಿಗಳು ಎಂದು ಎಲ್ಲಿಯೂ ಹೇಳಿಲ್ಲ.
ಈಗ ಉದ್ಭವವಾಗಿರುವ ಪರಿಸ್ಥಿತಿ ಬಗ್ಗೆ ನಾನು ಏನು ಹೇಳುವುದಕ್ಕಿದೆ? ತಮಿಳುನಾಡು ಸರ್ಕಾರಕ್ಕೆ ಅವರನ್ನೆಲ್ಲ ಬಿಡುಗಡೆ ಮಾಡಬೇಕು ಎಂದೆನಿಸಿ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಆದೇಶಕ್ಕೆ ಕಾಯುತ್ತಿದೆ. ಅತ್ಯಂತ ದುರ್ಭರವಾದ ಪರಿಸ್ಥಿತಿಯಲ್ಲಿ ನಾವು ಸಾಕ್ಷ್ಯಗಳನ್ನು ಕಲೆಹಾಕಿ ನಮ್ಮ ಕರ್ತವ್ಯವನ್ನು ನಿಭಾಯಿಸಿದ್ದೆವು ಎಂದಷ್ಟೇ ಹೇಳಬಲ್ಲೆವು. ರಾಜಿವ್ ಗಾಂಧಿ ಹಂತಕರ ವಿರುದ್ಧ ನನಗೆ ವೈಯಕ್ತಿಕ ದ್ವೇಷವೇನೂ ಇಲ್ಲ. ಅವರನ್ನು ನೇಣಿಗೆ ಹಾಕುವುದರಿಂದ ನಾನು ವೈಯಕ್ತಿಕವಾಗಿ ಪಡೆಯುವುದಾಗಲೀ, ಕಳೆದುಕೊಳ್ಳುವುದಾಗಲೀ ಏನಿಲ್ಲ. ಕೊನೆಗೂ ಇವರ ಶಿಕ್ಷೆ ಮೊಟಕುಗೊಳ್ಳುವುದಕ್ಕೆ ನಿರ್ಧಾರ ತೆಗೆದುಕೊಳ್ಳಲಾಗದ ಸರ್ಕಾರದ ಅಸಾಮರ್ಥ್ಯವೇ ಕಾರಣ ಎಂದಷ್ಟೇ ಹೇಳಬಹುದು. ರಾಜೀವ್ ಗಾಂಧಿ ಹಾಗೂ ಆ ಸ್ಫೋಟದಲ್ಲಿ ಸತ್ತ ಇನ್ನೂ 17 ಮಂದಿಯನ್ನು ನೆನಪಿಗೇ ತಂದುಕೊಳ್ಳದೇ ಪಾತಕಿಗಳನ್ನು ಬಿಡುಗಡೆಗೊಳಿಸಿದ ಶ್ರೇಯಸ್ಸು ಯಾರದ್ದು ಎಂದು ಹೊಡೆದಾಡಿಕೊಳ್ಳುವ ಮಟ್ಟಕ್ಕೆ ಈ ದೇಶ ಬಂದು ನಿಂತಿರುವುದರ ಬಗ್ಗೆ ನನಗೆ ವಿಷಾದವಿದೆ.
------
ರಾಜೀವ್ ಗಾಂಧಿ ಕೊಲೆ ಪ್ರಕರಣದ ತನಿಖೆಯಲ್ಲಿದ್ದ ಕರ್ನಾಟಕದ ನಿವೃತ್ತ ಪೊಲೀಸ್ ಮುಖ್ಯಸ್ಥ ಆರ್. ಶ್ರೀಕುಮಾರ್ ಹೀಗೆ ಹೇಳುತ್ತಾರೆ- ನನ್ನ ತಿಳಿವಳಿಕೆ ಏನೆಂದರೆ, ಜೀವಾವಧಿ ಶಿಕ್ಷೆ ಎಂದಾಗ ಹಾಗೆ ಶಿಕ್ಷೆಗೊಳಗಾದ ವ್ಯಕ್ತಿ ತನ್ನ ಜೀವನದ ಉಳಿದ ಭಾಗವನ್ನೆಲ್ಲ ಜೈಲಿನಲ್ಲಿ ಕಳೆಯುತ್ತಾನೆ ಅನ್ನೋದು. ಆದರೂ ವಿನಾಯಿತಿ ಎಂಬುದೂ ಇದೆಯಾದ್ದರಿಂದ ಈ ಗೋಜಲಿಗೆ ತಂದು ನಿಲ್ಲಿಸಿದೆ. ಜೀವಾವಧಿ ಜೈಲು ಎಂದರೆ ಜೀವಿತಾವಧಿ ಶಿಕ್ಷೆಯೋ ಹೊರತು ಹಲವರು ವ್ಯಾಖ್ಯಾನಿಸುವಂತೆ 14 ವರ್ಷಗಳ ಜೈಲಲ್ಲ ಎಂಬುದನ್ನು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಈ ವಿದ್ಯಮಾನ ನಿಮ್ಮ ನೈತಿಕ ಶಕ್ತಿಯನ್ನು ಅಧೀರಗೊಳಿಸಿದೆಯೇ ಎಂಬ ಪ್ರಶ್ನೆಗೆ ನಾನೇನು ಉತ್ತರಿಸಲಿ? ನಮ್ಮ ಕೆಲಸ ತನಿಖೆ ಮಾಡಿ ಪೂರಕ ಸಾಕ್ಷ್ಯಗಳನ್ನು ಒದಗಿಸುವುದಾಗಿತ್ತು. ಆ ಕೆಲಸವನ್ನು ಮಾಡಿದ್ದೇವೆ. ಆರೋಪಿಗಳು ಅಪರಾಧಿಗಳೆಂದು ಪರಿಗಣಿತರಾದರು. ನನ್ನ ಅಭಿಪ್ರಾಯದಲ್ಲಿ ಇದೀಗ ಸುಪ್ರೀಂಕೋರ್ಟ್ ಇವರೆಲ್ಲರ ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸುವುದಕ್ಕೆ ಕಾರಣವಾಗಿರುವ ನಿರ್ಧಾರ ವಿಳಂಬದ ಅಧ್ಯಾಯಕ್ಕೆ ಯಾರೆಲ್ಲ ಹೊಣೆಗಾರರೋ ಅವರನ್ನು ಪ್ರಶ್ನೆಗೆ ಒಳಪಡಿಸಬೇಕಿದೆ. ತಮಿಳು ನಾಡು ಸರ್ಕಾರದ ನಿರ್ಧಾರದ ಬಗ್ಗೆ ಕೇಂದ್ರ ಏನು ನಿರ್ಧಾರ ತೆಗೆದುಕೊಳ್ಳುವುದೋ ನೋಡೋಣ.
ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಸಂತೋಷ್ ಹೆಗ್ಡೆ ಹೇಳುತ್ತಾರೆ- ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆ ಎಂದು ಹೇಳುವುದರ ಅರ್ಥ- ಜೀವಿತಾವಧಿಯ ಉಳಿದ ದಿನಗಳನ್ನೆಲ್ಲ ಜೈಲಲ್ಲಿ ಕಳೆಯುವುದು ಎಂದಾಗಿದೆಯೇ ಹೊರತು ಅನೇಕ ರಾಜ್ಯ ಸರ್ಕಾರಗಳು ನಂಬಿರುವಂತೆ 14 ವರ್ಷಗಳ ಅವಧಿಗೆ ಸೀಮಿತ ಜೈಲುಶಿಕ್ಷೆ ಅಲ್ಲ. ಯಾವುದೇ ಸರ್ಕಾರ ಹೀಗೆಲ್ಲ ಬಿಡುಗಡೆ ನಿರ್ಧಾರ ತೆಗೆದುಕೊಳ್ಳುವುದು ಸಂತ್ರಸ್ತರಿಗೆ ಅನ್ಯಾಯ ಮಾಡಿದಂತೆ. ಮಾನವ ಹಕ್ಕುಗಳ ಬಗ್ಗೆ ಮಾತನಾಡುವ ನಾವು, ಸಂತ್ರಸ್ತರಿಗೂ ಹಕ್ಕುಗಳಿರುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕು. ತಮಿಳುನಾಡು ಸರ್ಕಾರದ ನಿರ್ಧಾರದ ಹಿಂದಿರುವ ತರ್ಕವಂತೂ ಅರ್ಥವಾಗುತ್ತಿಲ್ಲ. ಅಪರಾಧವೊಂದಕ್ಕೆ ಸರಿಯಾದ ಶಿಕ್ಷೆ ಕೊಡದಿದ್ದರೆ ಅದು ಮರುಕಳಿಸುತ್ತದೆ ಎಂಬುದನ್ನು ತಮಿಳುನಾಡು ಸರ್ಕಾರ ಅರ್ಥಮಾಡಿಕೊಳ್ಳಬೇಕು. ವಿನಾಯಿತಿಗಳನ್ನು ನೀಡಿ, ಅಪರಾಧಿಗಳನ್ನು ಪೆರೋಲ್ಗಳ ಮೇಲೆ ಹೊರಗೆ ಕಳುಹಿಸಿದ ಪ್ರಕರಣಗಳಲ್ಲಿ ಹರ್ಯಾಣಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್ನ ವಿಚಾರಣೆಯೊಂದರಲ್ಲಿ ನಾನೂ ನ್ಯಾಯಮೂರ್ತಿಯಾಗಿದ್ದೆ. ಅಪರಾಧವೊಂದು ಘಟಿಸಿ ಅದರ ಆರೋಪಿಗಳನ್ನು ಅಪರಾಧಿಗಳೆದು ನಿರೂಪಿಸುವುದಕ್ಕೆ ತನಿಖಾಧಿಕಾರಿಗಳು ಅಷ್ಟೆಲ್ಲ ಶ್ರಮ ಹಾಕಿದ ಸಂದರ್ಭದಲ್ಲಿ ಸರ್ಕಾರಗಳು ನಡೆದುಕೊಳ್ಳುವ ರೀತಿ ಹತಾಶೆ ಹುಟ್ಟಿಸುತ್ತದೆ.
ವಿಕಿ ನಂಜಪ್ಪ
ಪತ್ರಕರ್ತ