ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮೋದಿಯವರೇ ಬರಿ ಭಾಷಣ ಮಾಡಿದರೆ ಸಾಲದು ಯೋಗ್ಯ ಅಭ್ಯರ್ಥಿಗಳ ಆಯ್ಕೆ ಅದಕ್ಕಿಂತ ಮುಖ್ಯ!

Mainashree
Updated On : 24 Feb 2014, 10:46 am

ಇನ್ನು ಕೆಲವು ರಾಜಕಾರಣಿಗಳಿಗೆ, "ಇದು ತಮಗೆ ಕೊನೆಯ ಅವಕಾಶ" ಎನ್ನುವುದರ ಸುಳಿವು ಹತ್ತಿದ್ದೇ ತಡ, ಅವರೆಲ್ಲರೂ ಮೋದಿಯವರ ಬಿಜೆಪಿಯ ಪ್ರಚಾರ ಕಾರ್ಯಕ್ರಮಗಳಿಗೆ ತೆರಳಿ, ಅವರೊಂದಿಗೆ ವೇದಿಕೆ ಹಂಚಿಕೊಳ್ಳತೊಡಗಿದ್ದಾರೆ! ತಾವು ವೇದಿಕೆಯಲ್ಲಿ ಕುಳಿತಿದ್ದನ್ನು ನೋಡಿ ಮತದಾರರು ಮೂಗು ಮುರಿಯುತ್ತಿದ್ದಾರೆ ಎನ್ನುವುದು ಅವರಿಗೆ ಅರ್ಥವಾಗುತ್ತಲೇ ಇಲ್ಲ.


ಭಾರತದಲ್ಲಿ ಚುನಾವಣಾ ಪೂರ್ವ ಅಭಿಪ್ರಾಯ ಸಂಗ್ರಹಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆಯಿದೆ. ಕೆಲವೊಂದು ಬಾರಿ ಅಭಿಪ್ರಾಯ ಸಂಗ್ರಹ ಮತ್ತು ಫಲಿತಾಂಶದ ನಡುವೆ ಬಹಳಷ್ಟು ಅಸಮಾನತೆ ಇರುತ್ತದೆ. ಇದಕ್ಕೆ ಮೊದಲ ಕಾರಣವೆಂದರೆ ಹಣಕಾಸು ವೆಚ್ಚ. ನಿಜವಾಗಲೂ ರ್ಯಾಂಡಮ್ ಆಗಿ ಮತ್ತು ಸಾಮಾಜಿಕವಾಗಿ ಪ್ರಾತಿನಿಧಿಕವಾದ ಜನಾಭಿಪ್ರಾಯವನ್ನು ಕಲೆಹಾಕುವುದು ಬಲು ದುಬಾರಿ ಕೆಲಸ. ಎರಡನೆಯದಾಗಿ ನೇರ ಹಣಾಹಣಿ, ತ್ರಿಕೋನ ಸೆಣಸಾಟ ಮತ್ತು ರಾತ್ರೋ ರಾತ್ರಿ ಹೊಸ ಪಕ್ಷಗಳ ಉಗಮವಾಗುವ ನಮ್ಮ ದೇಶದಲ್ಲಿ ಮತಗಳು ಸೀಟುಗಳಾಗಿ ಬದಲಾಗುವುದನ್ನು ಲೆಕ್ಕ ಹಾಕುವುದು ಬಲು ಕಷ್ಟದ ಕೆಲಸ, ಅದೊಂದು ಕೆಟ್ಟ ಕನಸಿದ್ದಂತೆ. ಇನ್ನು ಅಭಿಪ್ರಾಯ ಸಂಗ್ರಾಹಕರ ಮುನ್ನೂಹೆ/ ಅಂದಾಜು ನಿಜವಾಯಿತೆಂದರೆ, ಅದಕ್ಕೆ ಕಾರಣ ಅವರುಗಳ 'ಲಕ್‌' ಎಂದಷ್ಟೇ ಹೇಳಬಹುದು.
ಅಭಿಪ್ರಾಯ ಸಂಗ್ರಹದಲ್ಲಿನ ಈ ಅನಿಶ್ಚಿತತೆಯ ಕಾರಣದಿಂದಲೇ, ಇಂದು ಸುದ್ದಿ ವಾಹಿನಿಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಪ್ರಕಟವಾಗುವ ಸಮೀಕ್ಷೆಗಳನ್ನು ರಾಜಕೀಯ ಗಿಮಿಕ್ ಎಂಬಂತೆಯೇ ನೋಡಲಾಗುತ್ತದೆ. ತಮಗೆ ಕಡಿಮೆ ಮತಗಳು ದೊರೆಯಲಿವೆ ಎಂದು ಹೇಳುತ್ತಿರುವುದನ್ನು ನೋಡಿ 'ಸಂಭವನೀಯ ಲೂಸರ್‌ಗಳು' ಈ ಸಮೀಕ್ಷೆಯ ಹಿಂದೆ ವಿರೋಧಿಗಳ ಕೈವಾಡವಿದೆ ಎಂದು ಗೊಣಗುತ್ತಾರೆ. ಇನ್ನೊಂದೆಡೆ ಗೆಲ್ಲುತ್ತೇವೆಂದು ಖುಷಿ ಪಡಬೇಕಾದ ಪಕ್ಷಗಳು, 'ಸಮೀಕ್ಷೆಯಲ್ಲಿ ಹೇಳುವುದು ನಿಜವಾಗುತ್ತದಾ' ಎಂದು ಅನುಮಾನದಲ್ಲಿ ಮುಳುಗುತ್ತವೆ.
ವಾರಗಳಿಂದ ಕೆಲವು ಚುನಾವಣಾ ಸಮೀಕ್ಷೆಗಳು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ 200ರ ಗಡಿ ದಾಟಿ, 200-225 ಸ್ಥಾನ ಪಡೆಯಲಿದೆ ಎಂದು ಹೇಳುತ್ತಿವೆ. ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರಿಂದ ಬಿಜೆಪಿಗೆ ಬಹಳಷ್ಟು ಲಾಭವಾಗಲಿದೆ ಎಂದು ಸೂಚಿಸುತ್ತಿರುವ ಈ ಸಮೀಕ್ಷೆಗಳು, ಇದರೊಟ್ಟಿಗೆ ಬಿಜೆಪಿ ಕೂಡ ತನ್ನ ಹಿಂದಿನ ದಾಖಲೆಯನ್ನು(1999ರಲ್ಲಿ ಗಳಿಸಿದ್ದ 181ಸ್ಥಾನಗಳು) ಮುರಿಯಲಿದೆ ಎನ್ನುತ್ತಿವೆ. ಇಲ್ಲಿ ಬಿಜೆಪಿ ಗಳಿಸುತ್ತದೆ ಎಂದು ಹೇಳಲಾಗುತ್ತಿರುವ ಅಂಕಿ-ಸಂಖ್ಯೆಗಳ ಬಗ್ಗೆ ಪ್ರಶ್ನೆಯೆತ್ತಬಹುದಾದರೂ, ಬಿಜೆಪಿ ಮೇಲೇರುತ್ತಿದೆ ಮತ್ತು ಕಾಂಗ್ರೆಸ್ ಕುಸಿಯುತ್ತಿದೆ ಎನ್ನುವ ಸತ್ಯವನ್ನು ಮಾತ್ರ ನಮ್ಮಿಂದ ತಳ್ಳಿಹಾಕುವುದಕ್ಕೆ/ ಪ್ರಶ್ನಿಸುವುದಕ್ಕೆ ಸಾಧ್ಯವಿಲ್ಲ.
ಬಿಜೆಪಿಗಂತೂ ಈ ಬೆಳವಣಿಗೆ ಬಹಳ ಉತ್ತೇಜನ ನೀಡಿದೆ. ಆದರೆ ಮನಮೋಹನ್ ಸಿಂಗ್ ಅವರ ದೆಹಲಿಯ ರೇಸ್‌ಕೋರ್ಸ್‌ನಲ್ಲಿರುವ ನಿವಾಸಕ್ಕೆ ನರೇಂದ್ರ ಮೋದಿಯವರು ಮನೆ ಬದಲಿಸುವುದು ಖಾತ್ರಿಯಾಗಬೇಕೆಂದರೆ, ಬಿಜೆಪಿ ಬೇರು ಮಟ್ಟದಲ್ಲಿ ಮಾಡಲೇಬೇಕಾದ ಬಹಳಷ್ಟು ಕೆಲಸಗಳಿವೆ.
ಮಧ್ಯಪ್ರದೇಶ, ಛತ್ತೀಸ್‌ಗಡ, ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಬಿಜಪಿಗಂತೂ ಬಿಗಿ ಹಿಡಿತವಿದೆ. ಇದರೊಟ್ಟಿಗೆ ಬಿಹಾರ, ಜಾರ್ಖಂಡ್, ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲೂ ಆ ಪಕ್ಷದ ಪರ ಅಲೆ ತುಸು ಹೆಚ್ಚುತ್ತಿದೆ. ಆದಾಗ್ಯೂ ಅದು ಉತ್ತರಪ್ರದೇಶ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ಮತ್ತಷ್ಟು ಬಲಗೊಳ್ಳಬೇಕಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದಿಂದ, ಒಡಿಶ್ಶಾ ಮತ್ತು ಆಂಧ್ರಪ್ರದೇಶದ ಪ್ರಾದೇಶಿಕ ಪಕ್ಷಗಳಿಂದ ಅದಕ್ಕೆ ತುಸು ಅಪಾಯವಂತೂ ಇದ್ದೇ ಇದೆ. ಇನ್ನೊಂದೆಡೆ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ಪ್ರಾದೇಶಿಕ ಪಕ್ಷಗಳ ಪ್ರಬಲ ಬೆಂಬಲ ಅದಕ್ಕೆ ಅತ್ಯವಶ್ಯಕ. ಮೋದಿ ಪ್ರಧಾನಿ ಹುದ್ದೆಗಾಗಿನ ಓಟದಲ್ಲಿ ಮುಂಚೂಣಿಯಲ್ಲಿರಬಹುದು, ಆದರೆ ಅವರ ಓಟದಲ್ಲಿ ಅಡಚಣೆಗಳು ಎದುರಾಗಲಾರವು ಎಂದು ಭಾವಿಸುವುದು ಖಂಡಿತ ತಪ್ಪಾದೀತು.
ಬಿಜೆಪಿಯ ದೃಷ್ಟಿಯಿಂದ ನೋಡಿದಾಗ, ಅದರ ಚುನಾವಣಾ ಪ್ರಚಾರದಲ್ಲಿ ಬಹಳ ಉತ್ತಮ ವಾತಾವರಣ ನಿರ್ಮಾಣವಾಗಿದೆ. 1999ರ ನಂತರ ಮೊದಲ ಬಾರಿಗೆ ಆ ಪಕ್ಷದ ಕಾರ್ಯಕರ್ತರು ಉತ್ಸುಕರಾಗಿದ್ದಾರೆ, ಅಲ್ಲದೆ ಒಂದು ದಶಕದಿಂದ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದ್ದ ತಮ್ಮ ಪಕ್ಷಕ್ಕೀಗ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎನ್ನುವುದು ಅವರ ಅರಿವಿಗೆ ಬಂದಿದೆ. ಇದರೊಟ್ಟಿಗೆ ಲಕ್ಷಾಂತರ ನಿಷ್ಠಾವಂತ ಬೆಂಬಲಿಗರನ್ನು ಹೊಂದಿರುವ ಆರ್‌ಎಸ್‌ಎಸ್ ಕೂಡ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. 1991ರ ಅಯೋಧ್ಯಾ ಕೇಂದ್ರಿತ ಪ್ರಚಾರದ ನಂತರ ಇದೇ ಮೊದಲಬಾರಿಗೆ ಅದು ಈ ಪರಿ ಶ್ರಮಿಸುತ್ತಿದೆ. ಇನ್ನು ಗಮನಸೆಳೆಯುತ್ತಿರುವ ಮತ್ತೊಂದು ಅಂಶವೆಂದರೆ, ನರೇಂದ್ರ ಮೋದಿಯವರು ಮತದಾನದಿಂದ ವಿಮುಖರಾಗುತ್ತಿದ್ದ ಯುವ ಮತದಾರರನ್ನು ಪಕ್ಷದತ್ತ ಸೆಳೆಯಲು ಸಫಲರಾಗಿದ್ದಾರೆ ಎನ್ನುವುದು. ಮೋದಿಯವರ ರ್ಯಾಲಿಗಳಲ್ಲಿ, ಅದರಲ್ಲೂ ಮುಖ್ಯವಾಗಿ ಇಂಫಾಲ್, ಚೆನ್ನೈ ಮತ್ತು ಕೋಲ್ಕತ್ತಾದಂಥ ಬಿಜೆಪಿಯ ಭದ್ರನೆಲೆಯಲ್ಲದ ಪ್ರದೇಶಗಳಲ್ಲೂ ಪ್ರಚಾರ ಸಮಾರಂಭಗಳಿಗೆ ಜನರು ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವುದು, ಮೋದಿಯವರ ಶ್ರಮ ಸಾರ್ಥಕವಾಗುವ ಸಾಧ್ಯತೆಯನ್ನು ಸೂಚಿಸುತ್ತಿದೆ.
ವ್ಯಂಗ್ಯವೆಂದರೆ, ಬಿಜೆಪಿಯನ್ನು ಹಿಂದಕ್ಕೆಳಿಯುತ್ತಿರುವುದು ಮತ್ತು ಮೋದಿ ಬೆಂಬಲಿಗರು ಪೂರ್ಣಪ್ರಮಾಣದ ಉತ್ಸಾಹದಲ್ಲಿರುವುದರಿಂದ ತಡೆಯುತ್ತಿರುವುದು ಮತ್ಯಾರೂ ಅಲ್ಲ. ಅದು 'ಬಿಜೆಪಿಯ ಸಾಂಸ್ಥಿಕ ವ್ಯವಸ್ಥೆಯೇ'!. ಹೀಗೆ ಹೇಳುವುದಕ್ಕೆ ಕಾರಣವಿಲ್ಲವೆಂದಲ್ಲ,  ಅನೇಕ ವಿಧಾನಸಭಾ ಚುನಾವಣೆಗಳಲ್ಲಿ ಗೆಲುವು(ಮತ್ತು ಸೋಲು) ಕಂಡರೂ, 2000ನೇ ಇಸವಿಯಿಂದ ಇಲ್ಲಿಯವರೆಗೂ ಬಿಜೆಪಿಯ ಸಾಂಸ್ಥಿಕ ಉಪಕರಣ ಬಹುತೇಕ ಸ್ತಬ್ದವಾಗಿಯೇ ನಿಂತಿದೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ, 2004ರ ನಂತರದಿಂದ ಆ ಪಕ್ಷದಲ್ಲಿ ನಾಯಕತ್ವ ಮತ್ತು ಸಂಘಟನೆಯ ನೇತೃತ್ವಕ್ಕಾಗಿ ನಡೆಯುತ್ತಿರುವ ಕಿತ್ತಾಟಗಳು.
ನಿತಿನ್ ಗಡ್ಕರಿಯವರ ಮೂರು ವರ್ಷದ ಅವಧಿ ಮತ್ತು ರಾಜ್‌ನಾಥ್ ಸಿಂಗ್ ಅವರ ಮೊದಲ ಅಧಿಕಾರಾವಧಿ ಇದೇ ಗೊಂದಲದಲ್ಲಿ ಹಾಳಾದವು. ಪಕ್ಷದಲ್ಲಿ ಹೊಸ ರಕ್ತವನ್ನು ಅಥವಾ ಹೊಸ ಪ್ರತಿಭೆಗಳನ್ನು ಸೇರಿಸಿಕೊಳ್ಳುವ ಪ್ರಯತ್ನಗಳು ಬಹಳ ವರ್ಷಗಳಿಂದ ಬಿಜೆಪಿಯಲ್ಲಿ ಆಗಿಯೇ ಇಲ್ಲ. ಬದಲಾಗಿ ಸಕ್ರಿಯವಾಗುವುದಕ್ಕೆ ಶಕ್ತಿಯಿಲ್ಲದ ಮತ್ತು ಸಾರ್ವಜನಿಕವಾಗಿ ಇಮೇಜ್ ಕೆಡಿಸಿಕೊಂಡಿರುವ ಅವೇ ಹಳೆಯ ತಲೆಗಳನ್ನೇ ಪಕ್ಷದಲ್ಲಿ ಮುಂದುವರಿಸಲಾಯಿತು. ಕಳೆದ ಬಾರಿ ಬಿಜೆಪಿ ತನ್ನಲ್ಲಿ ಹೊಸ ರಕ್ತವನ್ನು ಸೇರಿಸಿಕೊಂಡಿದ್ದೆಂದರೆ ಅಯೋಧ್ಯಾ ಆಂದೋಳನದ ಸಮಯದಲ್ಲಿ, ಅಂದರೆ, 1990-93ರಲ್ಲಿ! ಅಲ್ಲಿಂದೀಚೆಗೆ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿ ಹೊಸ ಪ್ರತಿಭೆಗಳ ಸೇರ್ಪಡೆಯಂತೂ ಅದರಲ್ಲಿ ಆಗಿಯೇ ಇಲ್ಲ.
ಇಂಥ ಜಡತೆಯ ಪ್ರತಿಫಲವಾಗಿ, ಪಕ್ಷದಲ್ಲೇ ಪ್ರತಿಸ್ಪರ್ಧಿ ಬಣಗಳು ಹುಟ್ಟಿಕೊಳ್ಳುತ್ತಾ ಸಾಗಿದವು. ಇದರಿಂದಾಗಿ ಬಿಜೆಪಿಯ ಓಟ, ವೇಗ ಕಳೆದುಕೊಂಡಿತು.
ಈ ಸಾಂಸ್ಥಿಕ ಪಾರ್ಶ್ವವಾಯುವಿನಿಂದಾಗಿ ಪಕ್ಷದಲ್ಲಿ ಉದ್ಭವವಾದ ತೊಂದರೆ ಸ್ಪಷ್ಟವಾಗಿ ಗೋಚರಿಸಿದ್ದು ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣಾ ಸಮಯದಲ್ಲಿ. ಹರ್ಷವರ್ಧನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸುವ ಪ್ರಕ್ರಿಯೆಯಲ್ಲಿ ಬಿಜೆಪಿ ತೋರಿದ ವಿಳಂಬ ಮತ್ತು ರಾಜ್ಯಾಧ್ಯಕ್ಷ ವಿಜಯ್ ಗೋಯಲ್ ಅವರ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಹುಡುಕುವುದರಲ್ಲಿ ತೋರಿದ ಮಂದಗತಿಯೇ ಈ ಜಡತ್ವಕ್ಕೊಂದು ಉದಾಹರಣೆ. ಬಿಜೆಪಿಯ ಈ ಅಸಾಮರ್ಥ್ಯದಿಂದಾಗಿಯೇ ಅಲ್ಲವೇ ಆಪ್‌ಗೆ ರಾಜಕೀಯ ಜಾಗ ದೊರೆತದ್ದು?
ಅದರಂತೆಯೇ ಉತ್ತರಪ್ರದೇಶದಲ್ಲಿ ಬಿಜೆಪಿ ಪರ ನಿಲುವುಗಳು ಗೋಚರಿಸುತ್ತಿವೆಯಾದರೂ, ಅಲ್ಲಿನ ಪಕ್ಷದ ಸಂಘಟನೆ ಕಚ್ಚಾಡುವವರ ಗುಂಪಾಗಿ ಬದಲಾಗಿದೆ ಎನ್ನುವುದೂ ಅಷ್ಟೇ ಸ್ಪಷ್ಟವಾಗಿ ಕಾಣಿಸುತ್ತಿದೆ. ನಿನ್ನೆಯ ನೀರಸ ಮುಖಗಳಿಗೆ, "ಇದು ತಮಗೆ ಕೊನೆಯ ಅವಕಾಶ" ಎನ್ನುವುದರ ಸುಳಿವು ಹತ್ತಿದ್ದೇ ತಡ, ಅವರೆಲ್ಲರೂ ಮೋದಿಯವರ ಬಿಜೆಪಿಯ ಪ್ರಚಾರ ಕಾರ್ಯಕ್ರಮಗಳಿಗೆ ತೆರಳಿ, ಅವರೊಂದಿಗೆ ವೇದಿಕೆ ಹಂಚಿಕೊಳ್ಳತೊಡಗಿದ್ದಾರೆ! ತಾವು ವೇದಿಕೆಯಲ್ಲಿ ಕುಳಿತಿದ್ದನ್ನು ನೋಡಿ ಮತದಾರರು ಮೂಗು ಮುರಿಯುತ್ತಿದ್ದಾರೆ ಎನ್ನುವುದು ಅವರಿಗೆ ಅರ್ಥವಾಗುತ್ತಲೇ ಇಲ್ಲ. ಇನ್ನು ಮಹಾರಾಷ್ಟ್ರದಲ್ಲೂ ಇಂಥದ್ದೇ ಪರಿಸ್ಥಿತಿಯಿದೆ. ಅಲ್ಲಿನ ಭ್ರಷ್ಟಾಚಾರ, ಪ್ರಚಾರ ಕಾರ್ಯಗಳಿಗೆ ಹೆಚ್ಚುವರಿ ಕ್ಲಿಷ್ಟತೆಯನ್ನು ತಂದೊಡ್ಡುತ್ತಿದೆ. ಕುತೂಹಲಕರ ಅಂಶವೆಂದರೆ, ಇಂಥ ಸೂಕ್ಷಗಳನ್ನೆಲ್ಲ ತಿದ್ದುವ ಗುಣ ಹೊಂದಿದ್ದಾರೆ ಎಂದು ಪ್ರಸಿದ್ಧಿ ಪಡೆದಿರುವ ಮೋದಿ ಸಂಸ್ಥೆಯನ್ನು ಸರಿಪಡಿಸಲು ವೈಯಕ್ತಿಕ ಗಮನವನ್ನು ಮೀಸಲಿಡುತ್ತಿಲ್ಲ ಎನ್ನುವುದು. ಅವರೇನಿದ್ದರೂ ಈಗ ತಮ್ಮ ದೃಷ್ಟಿಯನ್ನು ಸಾರ್ವಜನಿಕ ಸಮಾವೇಶಗಳು ಮತ್ತು ಪಕ್ಷದ ರಚನೆಗೆ ಹೊರಗಿನಿಂದ ಪೂರಕ ಬೆಂಬಲ ನೀಡುತ್ತಿರುವವರತ್ತಲೇ ಹರಿಸುತ್ತಿದ್ದಾರೆ. ಒಂದು ವೇಳೆ ಇದು ಹೀಗೆಯೇ ಮುಂದುವರಿದರೆ, ಅವರು ಭರವಸೆ ನೀಡಿರುವ ಶಕ್ತಿಯುತ ಬದಲಾವಣೆಯಲ್ಲ, ಬದಲಾಗಿ ಅದಕ್ಕೆ ತದ್ವಿರುದ್ಧ ಗುಣಹೊಂದಿರುವ ಕಳಂಕಿತ ಅಭ್ಯರ್ಥಿಗಳೇ ಪಕ್ಷದಲ್ಲಿ ತುಂಬಿಕೊಳ್ಳಬಹುದು.   
ಚುನಾವಣಾ ಪ್ರಚಾರದ ಕೊನೆಯ ಹಂತ ಅತಿ ಮುಖ್ಯವಾದದ್ದು. ಆರಂಭಿಕ ವೇಗ ಗೆಲುವಿನ ಓಟಕ್ಕೆ ಕಾರಣವಾಗುತ್ತದೋ ಇಲ್ಲವೋ ಎನ್ನುವುದನ್ನು ನಿರ್ಧರಿಸುವ ಸಮಯವಿದು. ಇಲ್ಲಿ ಜಾರಿಬಿದ್ದರೆ ಹಳೆಯ ಮತದಾನದ ಮಾದರಿಯೇ ಮತ್ತೊಮ್ಮೆ ಎದುರಾಗಬಹುದು. ಪ್ರಧಾನಿ ಹುದ್ದೆಗಾಗಿ ರಣರಂಗಕ್ಕಿಳಿಯುತ್ತಿರುವ ಮೋದಿಯವರು ಈ ವಿಷಯದತ್ತ ಕೂಡಲೇ ಗಮನಹರಿಸಲೇಬೇಕಾಗಿದೆ.



-ಸ್ವಪನ್‌ದಾಸ್ ಗುಪ್ತಾ, ಅಂಕಣಕಾರರು
 swapan55@gmail.com
 ಟ್ವಿಟರ್: @swapan55

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement