ಅಡುಗೆ ಅನಿಲದ ಅವಾಂತರ
ಜನವರಿ 2014 ರಿಂದ ಗೃಹಬಳಕೆ ಗ್ರಾಹಕರು ಅಧಾರ ಕಾರ್ಡ್ ಮತ್ತು ಬ್ಯಾಂಕ್ ಪಾಸ್ಬುಕ್ಗಳ ನಕಲು ಪ್ರತಿಯನ್ನು ದಾಖಲಿಸಿ ....
ಜನವರಿ 2014 ರಿಂದ ಗೃಹಬಳಕೆ ಗ್ರಾಹಕರು ಅಧಾರ ಕಾರ್ಡ್ ಮತ್ತು ಬ್ಯಾಂಕ್ ಪಾಸ್ಬುಕ್ಗಳ ನಕಲು ಪ್ರತಿಯನ್ನು ದಾಖಲಿಸಿ ಗರಿಷ್ಠ 12 ಸಬ್ಸಿಡಿ ಸಿಲಿಂಡರ್ ಪಡೆಯಬಹುದಾಗಿದೆ. ಆದರಿಲ್ಲಿ ಸಿಲಿಂಡರ್ ಕೊಳ್ಳುವಾಗ ಮಾರುಕಟ್ಟೆ ದರವನ್ನು ಪಾವತಿಸಬೇಕು. 12 ಸಿಲಿಂಡರ್ ತನಕದ ಸಬ್ಸಿಡಿ ಹಣವನ್ನು ಬಳಕೆದಾರರೆ ಒದಗಿಸಿದ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತದೆ. ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮತ್ತು ದುರುಪಯೋಗ ತಡೆಯುವಲ್ಲಿ ನೇರ ಸಬ್ಸಿಡಿ ಯೋಜನೆಯಿಂದಾಗಿ ಗ್ರಾಹಕನ ಕೋಟಾದಲ್ಲಿ ಅಕ್ರಮ ಸಾಧ್ಯವಿಲ್ಲ. ಪಡಿತರ ವ್ಯವಸ್ಥೆಯು ಸುಗಮವಾದ ಸಿಲಿಂಡರ್ ಸರಬರಾಜಿಗೆ ನಾಂದಿ ಹಾಡಿದೆ. 12ಕ್ಕಿಂತ ಹೆಚ್ಚು ಸಿಲಿಂಡರ್ ಬೇಕಾದಲ್ಲಿ ಮಾರುಕಟ್ಟೆ ದರವೇ ಅನಿವಾರ್ಯ.
ಗ್ಯಾಸ್ ವಿತರಕರು ಸುರಕ್ಷತಾ ದೃಷ್ಟಿಯಿಂದ ಸಿಲಿಂಡರನ್ನು ಡಿಪೋದಲ್ಲಿ ಗ್ರಾಹಕನ ಕೈಗೆ ನೀಡದೆ, ಗ್ರಾಹಕನ ಮನೆ ಬಾಗಿಲಿಗೆ ಸರಬರಾಜು ಮಾಡಬೇಕಾದುದು ಕಡ್ಡಾಯ. ಆದರೆ, ವಿತರಿಸುವ ಬಹುತೇಕ ಹುಡುಗರು ಮನೆ ಬಾಗಿಲಿಗೆ ಸಿಲಿಂಡರ್ ಸರಬರಾಜು ಮಾಡುವಾಗ ಬಿಲ್ ಮೇಲೆ 25 ರಿಂದ 30 ರುಪಾಯಿ ಹೆಚ್ಚಿಗೆ ಕೇಳಿ ಪಡೆಯುತ್ತಾರೆ. ಪ್ರಶ್ನಿಸಿದಲ್ಲಿ ಕನಿಷ್ಠ ಸಂಬಳ ಮಾತ್ರ ಪಡೆಯುವ ನಾವು ಆಟೋಗೆ ಪೆಟ್ರೋಲ್ ಹಾಕಿಸಿ ಸಿಲಿಂಡರನ್ನು ಸರಬರಾಜು ಮಾಡುತ್ತೇವೆ. ನಮ್ಮ ಹೊಟ್ಟೆ ಮೇಲೆ ಹೊಡಿಯಬೇಡಿ ಸಾರ್ ಎನ್ನುತ್ತಾರೆ. ವಾಸ್ತವದಲ್ಲಿ ಆ ಹಣವು ವಿತರಕನ ಕೈ ಸೇರುತ್ತದೆ. ಹೀಗೆ ಒಬ್ಬ ವಿತರಕನಿಗೆ ತಿಂಗಳಿಗೆ 5000 ಸಿಲಿಂಡರ್ ಕೋಟಾ ಇದ್ದಲ್ಲಿ 5000 ್ಗ 30 ರು. ನಂತೆ ತಿಂಗಳಿಗೆ 1,50,000 ಮತ್ತು ವರ್ಷಕ್ಕೆ ಹತ್ತಾರು ಲಕ್ಷ ರುಪಾಯಿ ಅನಾಯಾಸ ಆದಾಯವನ್ನು ಪಡೆಯುತ್ತಾನೆ. ಗ್ರಾಹಕರನ್ನು ರಾಜಾರೋಷ ದೋಚುವ ಈ ಅಪರಾಧವನ್ನು ಯಾವ ಸರ್ಕಾರಿ ಇಲಾಖೆಯೂ ಪ್ರಶ್ನಿಸಿ ಕೇಸು ದಾಖಲಿಸಿಕೊಂಡ ಉದಾಹರಣೆ ಇಲ್ಲ. ಇನ್ನು ಹೊಸ ಸಿಲಿಂಡರ್ ಸಂಪರ್ಕಕ್ಕೆ ಸರ್ಕಾರದ ಅನುಮತಿ ಇರುವ ದಿನಗಳಲ್ಲಿ ಸಂಪರ್ಕ ಬಯಸಿದವರಿಗೆ ತಡರಾತ್ರಿ ಬರಲು ತಿಳಿಸಿ ರಸೀದಿ ಮೇಲೆ ಹೆಚ್ಚಿನ ಹಣ ಪಡೆಯುತ್ತಾರೆ. ಕೆಲವು ವಿತರಕರು ಸರ್ಕಾರಿ ನಿಯಮಕ್ಕೆ ವಿರುದ್ಧವಾಗಿ ತಮ್ಮಲ್ಲಿರುವ ಗ್ಯಾಸ್ ಸ್ಟವ್ ಕೊಂಡರೆ ಮಾತ್ರ ತಕ್ಷಣ ಹೊಸ ಗ್ಯಾಸ್ ಸಂಪರ್ಕ ಎನ್ನುತ್ತಾರೆ. ತಕರಾರಿನವರನ್ನು ಸತಾಯಿಸಲು ಮುಂದಾಗುತ್ತಾರೆ. ಇದಕ್ಕೆ ಆನ್ಲೈನ್ ಅಪ್ಲಿಕೇಶನ್ ಮದ್ದಾಗಬಹುದೇನೊ?
ವಿತರಕರ ಕಚೇರಿಯಲ್ಲಿ ನಿತ್ಯ ಪ್ರದರ್ಶಿಸಬೇಕಾದ ಯಾವುದೇ ಮಾಹಿತಿ ಫಲಕ ತೂಗುಹಾಕುವುದಿಲ್ಲ. ತೂಕದ ಯಂತ್ರವನ್ನಿಟ್ಟು ಕಡ್ಡಾಯವಾಗಿ ತೂಕ ಮಾಡಿಯೇ ಕೊಡಬೇಕೆಂಬ ನಿಯಮವನ್ನು ಗಾಳಿಗೆ ತೂರುತ್ತಾರೆ. ಗ್ಯಾಸ್ ರೆಗ್ಯುಲೇಟರ್ ಮಾರಾಟಕ್ಕೂ ವಿಶೇಷ ಪರವಾನಗಿ ಬೇಕು. ಅಡುಗೆ ಅನಿಲ ಕಾಯ್ದೆ 2000 ಪ್ರಕಾರ ಇದು ಕಡ್ಡಾಯ. ಇದನ್ನು ಉಲ್ಲಂಘಿಸಿದರೆ ಅಗತ್ಯ ವಸ್ತು ಕಾಯ್ದೆಯಡಿ ಕ್ರಮ ಜರುಗಿಸಬಹುದಾಗಿದೆ, ಐಖಕ ಗುರುತು ಇಲ್ಲದ ರೆಗ್ಯುಲೇಟರ್ಗಳು ಅಲ್ಲಲ್ಲಿ ಬಿಕರಿಯಾಗುತ್ತಿದ್ದರೂ, ಅನಿಲ ವಿತರಣಾ ವ್ಯವಸ್ಥೆಯ ನಿರ್ವಹಣೆಯನ್ನು ನೋಡಿಕೊಳ್ಳುತ್ತಿರುವ ರಾಜ್ಯದ ಅಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಜಾಣ ಕುರುಡು ಪ್ರದರ್ಶಿಸುತ್ತಿದೆ
ವಿತರಕರ ಜನವಿರೋಧಿ ಕೃತ್ಯಗಳೆಲ್ಲವೂ ಆಯಾ ಜಿಲ್ಲೆಗಳ ವಿವಿಧ ಇಲಾಖೆಗಳ ನೆರಳಲ್ಲಿಯೇ ನಡೆಯುತ್ತಿವೆ. ಸಾಮಾಜಿಕ ಪ್ರಸ್ತುತತೆಯನ್ನು ಬಿಂಬಿಸುವ ಗ್ಯಾಸ್ ವಿತರಣಾ ಜಾಲದ ವಿಷಯದಲ್ಲೂ ಬೇಲಿಯೇ ಎದ್ದು ಹೊಲ ಮೇಯುವಾಗ ಕ್ಷೀಣವಾದ ಸ್ಥಾನಿಕ ಪ್ರತಿರೋಧದ ದನಿಗಳಿಗೆ ಬೆಲೆ ಇಲ್ಲದಂತಾಗಿದೆ.
ಈ ಪಡಿತರ ಸಿಲಂಡರಿನ ಮೇಲಿನ ಮಿತಿಯಿಂದಾಗಿ ಅತ್ತೆಗೊಂದು ಒಲೆ, ಸೊಸೆಗೊಂದು ಒಲೆ ಎಂಬ ಹೊಸ ಗಾದೆ ಸೃಷ್ಟಿಸಹೊರಟಿದೆ ಎಂಬ ಅಪಸ್ವರ ಕೇಳಿ ಬರುತ್ತಿದೆ. ಆದರಿಲ್ಲಿ ಗಂಡ-ಹೆಂಡತಿ-ಮಗು ಮೂರೇ ಜನರಿರುವ ಗ್ರಾಹಕರಿಗೆ 3-4 ತಿಂಗಳಿಗೊಮ್ಮೆ ಒಂದು ಸಿಲಿಂಡರ್ ಸಾಕಾಗುತ್ತದೆ. ಅಂಥವರನ್ನು ಪತ್ತೆ ಹಚ್ಚಿ ಖಾಸಗಿ ಲಾಬಿಯ ಅಪಾಯವನ್ನು ತಳ್ಳಿಹಾಕುವಂತಿಲ್ಲ. ಹೀಗಾದಲ್ಲಿ ಸಬ್ಸಿಡಿ ನೀಡಿಕೆಯ ಮೂಲ ಉದ್ದೇಶಕ್ಕೆ ಅಪಚಾರವೆಸಗಿದಂತೆ. ಹಾಗಾಗಿ ವಿತ್ತೀಯ ಕೊರತೆ ನೀಗಿಸಲು ಕುಟುಂಬದ ಒಟ್ಟು ಜನಸಂಖ್ಯೆ ಮತ್ತದರ ಆರ್ಥಿಕ ಪರಿಸ್ಥಿತಿ ಆಧರಿಸಿ ಸಬ್ಸಿಡಿ ನೀಡುವುದೇ ಸೂಕ್ತವಾದಿತು.
-ವಿಶ್ವನಾಥ ಅಡಿಗ, ಕೊಟ್ಟೂರು, ಬಳ್ಳಾರಿ