ಎಗ್ಗಿಲ್ಲದ ರಾಜ್ಯ ವಿಭಜನೆ ಅಪಾಯಕಾರಿ
ಆಂಧ್ರಪ್ರದೇಶ ಈಗ ಧಗಧಗಿಸುತ್ತಿದೆ. ರಾಜ್ಯ ವಿಭಜನೆ ಅಥವಾ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯೇ ಈ ಪರಿಸ್ಥಿತಿಗೆ ಕಾರಣ...
ಆಂಧ್ರಪ್ರದೇಶ ಈಗ ಧಗಧಗಿಸುತ್ತಿದೆ. ರಾಜ್ಯ ವಿಭಜನೆ ಅಥವಾ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯೇ ಈ ಪರಿಸ್ಥಿತಿಗೆ ಕಾರಣ. ಈಗಾಗಲೇ ಲೋಕಸಭೆಯಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಅಂಗೀಕಾರ ದೊರಕಿದೆ. ಆದರೆ ಅದು ಮುಸುಕಿನಲ್ಲಾಗಿದೆ. ಕಲಾಪ ಬಹಿರಂಗಗೊಳ್ಳಲಿಲ್ಲ. ಇದರಲ್ಲಿ ರಾಜಕೀಯ ಸಂಚಿದೆ ಎಂದು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹುಯಿಲೆಬ್ಬಿಸಿದ್ದಾರೆ. ಕಳೆದ ಒಂಬತ್ತು ದಿನಗಳಿಂದ ವಿಭಜನೆಯನ್ನು ವಿರೋಧಿಸಿ ಸದನದಲ್ಲಿ ಇವರು ಕೋಲಾಹಲ ನಡೆಸಿರುವ ಪರಿ ಸಂಸದೀಯ ವ್ಯವಸ್ಥೆಗೆ ಕಳಂಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಲ್ಲದೆ ಸೀಮಾಂಧ್ರ ಪ್ರದೇಶದ ಜನಪ್ರತಿನಿಧಿಗಳು ಹಾಗೂ ಅವರ ಅಪಾರ ಬೆಂಬಲಿಗರು ಜಂತರ್ ಮಂತರ್ ಮತ್ತು ಸಂಸತ್ತಿನ ಮುಂಭಾಗದಲ್ಲಿ ಧರಣಿ ನಡೆಸಿದ್ದಾರೆ. ಮುಂದುವರಿದು ಕಿರಣ್ ಕುಮಾರ್ ರೆಡ್ಡಿ ಮುಖ್ಯಮಂತ್ರಿ ಸ್ಥಾನಕ್ಕಲ್ಲದೆ ಕಾಂಗ್ರೆಸ್ ಸದಸ್ಯತ್ವಕ್ಕೂ ತ್ಯಾಗಪತ್ರ ನೀಡಿದ್ದಾರೆ. ಅವರು ನೀಡಿದ ಬಂದ್ ಕರೆ ಆಂಧ್ರದಾದ್ಯಂತ ಯಶಸ್ವಿಯಾಗಿದೆ. ಅಂದರೆ ವಿಭಜನೆ ಅಥವಾ ಹೊಸರಾಜ್ಯ ರಚನೆ ಸರ್ವಸಮ್ಮತವಾಗಿಲ್ಲ ಎಂಬುದು ವೇದ್ಯ.
ಸಾಮಾನ್ಯವಾಗಿ ಒಂದು ಪ್ರದೇಶವನ್ನು ಬೇರ್ಪಡಿಸುವ ಅಥವಾ ಅದರ ಗಡಿಯನ್ನು ಗುರುತಿಸುವ ವಿಚಾರಕ್ಕೆ ಭಾಷೆಯೇ ಆಧಾರ ಎಂದರೆ ಅವಸರದ ಹೇಳಿಕೆಯಾಗಲಾರದು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಾಷಾ ನೆಲೆಯಲ್ಲಿ ಗುರುತಿಸಲ್ಪಟ್ಟ ಪ್ರದೇಶವೆಂದರೆ ಒಡಿಶಾ (ಈಗಿನ ಒರಿಸ್ಸಾ). 1936ರಲ್ಲಿ ಇದರ ರಚನೆಗೆ ಪ್ರಯತ್ನಿಸಿದವರಲ್ಲಿ ಮಧುಸೂದನ್ ದಾಸ್ ಮತ್ತಿತರರು ಪ್ರಮುಖರು. ನಮಗೆ ಸ್ವಾತಂತ್ರ್ಯ ದೊರಕಿದ ಬಳಿಕ 1950ರಲ್ಲಿ ಸಂವಿಧಾನ ರಚಿಸಲಾಯ್ತು. ಆ ಕಾಲಕ್ಕೆ ರಾಜ್ಯಗಳ ಗಡಿ ಗುರುತಿಸುವ ಬಗ್ಗೆ ಮೂರು ಸಾಮಾನ್ಯ ವಿಧಾನವನ್ನು ಬಳಸಲಾಯ್ತು. ಬ್ರಿಟಿಷರ ಆಳ್ವಿಕೆಯಲ್ಲಿ ಗವರ್ನರ್ ಜನರಲ್ಗಳ ನೇತೃತ್ವದ ಪ್ರದೇಶಗಳು ಒಂದು ವರ್ಗ. ಅರಸರ ಆಳ್ವಿಕೆ ಇದ್ದು ರಾಜ್ ಪ್ರಮುಖರಾಗಿದ್ದ ರಾಜ್ಯಗಳು (ಉದಾ: ಮೈಸೂರು) ಇನ್ನೊಂದು ವರ್ಗ ಹಾಗೂ ಚೀಫ್ ಕಮೀಶನರ್ ಮತ್ತು ಸಣ್ಣಪುಟ್ಟ್ಟ ಅರಸೊತ್ತಿಗೆ (ಉದಾ:ಕೂರ್ಗ್) ಹೊಂದಿದ ಪ್ರದೇಶಗಳು ಮೂರನೇ ವರ್ಗ. ಹೀಗೆ ಮೂರು ಸೂತ್ರಗಳನ್ನು ಅಳವಡಿಸಿ ಗಡಿ ಗುರುತಿಸಲಾಯ್ತು.
ಸ್ವಾತಂತ್ರ್ಯಾನಂತರ ರಾಜ್ಯ ವಿಭಜನೆಗೆ ಬಲವಾದ ಬೇಡಿಕೆ ಮೂಡಿಬಂದುದು ತೆಲುಗು ಮಾತಾಡುವ ಜನರಿಂದಲೇ. 1953ರಿಂದಲೇ ಒತ್ತಾಯ ಆರಂಭವಾಯ್ತು. ಇದು ಭಾಷಾವಾರು ಪ್ರಾಂತ ರಚನೆಗೆ ನಾಂದಿಯಾಯ್ತು. ಆಗಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರು ಇದರ ಸಾಧ್ಯಾಸಾಧ್ಯತೆಯನ್ನು ಅಧ್ಯಯನ ಮಾಡಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರಾದ ಫಾಸಲ್ ಆಲಿ ನೇತೃತ್ವದ ಸಮಿತಿಯನ್ನು ನೇಮಕ ಮಾಡಿದರು. ಸದ್ರಿ ಸಮಿತಿ ಸಲ್ಲಿಸಿದ ವರದಿ ಸಂಸತ್ತಿನ ವಿಸ್ತೃತ ಚರ್ಚೆಗೆ ಒಳಪಟ್ಟಿತು. ರಾಜ್ಯಗಳನ್ನು ಪುನರ್ ವಿಂಗಡನೆ ಮಾಡುವುದೆಂದೇ ಸಂಸತ್ತಿನಲ್ಲಿ ತೀರ್ಮಾನಿಸಲಾಯಿತು. ಈ ಪ್ರಕ್ರಿಯೆಗೆ ಅನುಕೂಲವಾಗುವಂತೆ ಸಂವಿಧಾನದ ಏಳನೇ ತಿದ್ದುಪಡಿಯಲ್ಲಿ ಸೂಕ್ತ ಅವಕಾಶ ಕಲ್ಪಿಸಲಾಯ್ತು. ಇದರಿಂದಾಗಿ ಈಗ ಪ್ರಸ್ತಾಪದಲ್ಲಿರುವ ಆಂಧ್ರ ಪ್ರದೇಶಕ್ಕೆ ಆಗಲೇ 1953ರಲ್ಲಿ ಮದ್ರಾಸ್ ಆಧಿಪತ್ಯದ ಉತ್ತರದ ತೆಲುಗು ಭಾಷಿಕ ವಲಯದ 16 ಜಿಲ್ಲೆಗಳು ಸೇರಲ್ಪಟ್ಟಿರುವುದಲ್ಲದೆ, 1956ರಲ್ಲಿ ತೆಲುಗು ಭಾಷಿಕರಿರುವ ತೆಲಂಗಾಣ ಸೇರಿ ಅಖಂಡ ಆಂಧ್ರಪ್ರದೇಶ ಸೃಷ್ಟಿಯಾಯ್ತು. ನಮ್ಮ ಮೈಸೂರ್ ರಾಜ್ಯಕ್ಕೂ ಮುಂಬೈ ಪ್ರಾಂತದ ದಕ್ಷಿಣದ ಕನ್ನಡ ಮಾತಾಡುವವರಿರುವ ಪ್ರದೇಶ ಮತ್ತು ಪಶ್ಚಿಮ ಹೈದ್ರಾಬಾದ್ನ ಕನ್ನಡ ಭಾಷಿಕ ವಲಯ ಹಾಗೂ ಮಡಿಕೇರಿ (ಕೂರ್ಗ್) ಸೇರಲ್ಪಟ್ಟಿತು.
ನಮ್ಮ ಸಂವಿಧಾನದ ಆರ್ಟಿಕಲ್ (3)ರಲ್ಲಿ ರಾಜ್ಯವನ್ನು ವಿಭಜಿಸಿ ಎರಡು ಪ್ರತ್ಯೇಕ ರಾಜ್ಯಗಳನ್ನಾಗಿಯೂ, ಕೆಲವು ರಾಜ್ಯಗಳ ತುಂಡುಗಳನ್ನು ಸೇರಿಸಿ ಒಂದು ಮಾಡಿ ಹೊಸ ರಾಜ್ಯವನ್ನಾಗಿ ರೂಪಿಸುವ ಅಧಿಕಾರ ಸಂಸತ್ತಿಗೆ ದತ್ತವಾಗಿದೆ. ರಾಜ್ಯ ಪುನರ್ ವಿಂಗಡನೆ ಹಾಗೂ ಮರುನಾಮಕರಣಕ್ಕೆ ದತ್ತವಾದ ಸಂಸತ್ತಿನ ಈ ಅಧಿಕಾರ ಪ್ರಶ್ನಾತೀತವಾದದ್ದು ಹಾಗೂ ಅನುಸರಿಸಬೇಕಾದ ಉಪಕ್ರಮಗಳು ಸರಳ. ಈ ವಿಚಾರದಲ್ಲಿ ಭಾರತಕ್ಕೂ ಸಂಯುಕ್ತ ಅಮೆರಿಕಕ್ಕೂ ಗುರುತರವಾದ ವ್ಯತ್ಯಾಸವಿದೆ. ಭಾರತದಲ್ಲಿ ರಾಜ್ಯ ವಿಭಜನೆಗೆ ರಾಜ್ಯಗಳ ಅನುಮತಿ ಅಥವಾ ಸಹಮತ ಅಗತ್ಯವಿಲ್ಲ. ಸಂಸತ್ತೇ ಪಾರಮ್ಯ. ಆದರೆ ಅಮೆರಿಕದಲ್ಲಿ ಆಯಾ ರಾಜ್ಯಗಳ ಅನುಮತಿ ಅಥವಾ ಒಪ್ಪಿಗೆ ಇಲ್ಲದೆ ವಿಂಗಡನೆ ಮಾಡಲು ಅಮೆರಿಕದ ಕಾಂಗ್ರೆಸ್ಸಿಗೆ ಯಾವ ಅಧಿಕಾರವೂ ದತ್ತವಾಗಿಲ್ಲ. ಅಲ್ಲಿನ ಸಂವಿಧಾನ ರಚನೆಯ ಕಾಲಕ್ಕೆ ಹಾಕಿದ ಗೆರೆಯೊಳಗೆ ಎಲ್ಲ ರಾಜ್ಯಗಳೂ ಸುಖವಾಗಿ ಆಡಳಿತ ನಡೆಸಿಕೊಂಡು ಬರುತ್ತಿವೆ. ಸಂಯುಕ್ತ ಅಮೆರಿಕ ಒಕ್ಕೂಟ ವ್ಯವಸ್ಥೆಯುಳ್ಳ ಪ್ರಜಾಸತ್ತೆಯನ್ನು ಹೊಂದಿದೆ. ಅಲ್ಲಿ ಗಡಿಯ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಇರತಕ್ಕ ಸಮನ್ವಯತೆಗೆ ಧಕ್ಕೆಯುಂಟಾದುದೇ ಇಲ್ಲ. ಇತ್ತ ಭಾರತವೂ ಒಕ್ಕೂಟ ವ್ಯವಸ್ಥೆಯನ್ನೇ ಪರಿಪಾಲಿಸುತ್ತಿದೆ. ಆದರೆ ಭಾರತದಲ್ಲಿ ನಿರಂತರ ಗೊಂದಲವಿದೆ. ರಾಜ್ಯ ವಿಂಗಡನೆ ಅಥವಾ ಹೊಸ ರಾಜ್ಯ ರಚನೆಯ ವಿಚಾರದಲ್ಲಿ ರಾಜ್ಯಗಳು ತಮ್ಮ ನಿಲುವನ್ನು ಪ್ರತಿಪಾದಿಸುವ ಸ್ವಾತಂತ್ರ್ಯ ಅಥವಾ ನೀಡಬೇಕಾದ ಒಪ್ಪಿಗೆಗೆ ಭಾರತೀಯ ಸಂವಿಧಾನದಲ್ಲಿ ಅವಕಾಶ ಕಲ್ಪಿಸದಿರುವುದು ಒಂದು ರಚನಾತ್ಮಕ ದೋಷವೆಂಬಂತೆ ತೀರ್ಮಾನಿಸುವುದು ಅವಸರವಾದೀತು. ಅದರ ಹಿಂದಿನ ಆದರ್ಶ ಕೆದಕಬೇಕಾಗಿದೆ.
ನಮ್ಮ ಸಂವಿಧಾನ ನಿರ್ಮಾತೃಗಳು ಸಾಕಷ್ಟು ದೂರದರ್ಶಿತ್ವವುಳ್ಳವರು ಎಂಬುದರಲ್ಲಿ ಅನುಮಾನವಿಲ್ಲ. ಭಾರತೀಯ ಒಕ್ಕೂಟ ವ್ಯವಸ್ಥೆ ಮುಖ್ಯವಾಗಿ ಆಡಳಿತಾತ್ಮಕ ಅನುಕೂಲಕ್ಕಾಗಿ ರಚಿಸಿದ ಪ್ರಜಾಸತ್ತಾತ್ಮಕ ವ್ಯವಸ್ಥೆ. ಹಾಗಾಗಿ ರಾಜ್ಯಗಳ ಗಡಿಗಳು ಸಂವಿಧಾನ ರಚನೆಯ ಕಾಲಕ್ಕೆ ಇದ್ದ ಹಾಗೆ ಕಾಪಾಡಿಕೊಂಡು ಬರಬೇಕಾದ ಅನಿವಾರ್ಯತೆ ಇಲ್ಲ. ನಮ್ಮ ಸಂವಿಧಾನ ಸಮಾನತೆಯನ್ನು ಪ್ರತಿಪಾದಿಸುತ್ತದೆ. ದೇಶ, ಭಾಷೆ, ಲಿಂಗ, ಮತ ಇತ್ಯಾದಿಗಳ ಆಧಾರದಲ್ಲಿ ಸಮಾಜವನ್ನು ವಿಭಜಿಸುವುದಿಲ್ಲ. ಈ ನಿಲುವಿನಿಂದಾಗಿಯೇ ನಮ್ಮಲ್ಲಿನ ನೂರಾರು ತುಂಡರಸರ ರಾಜ್ಯವನ್ನು ಭಾರತದಲ್ಲಿ ವಿಲೀನಗೊಳಿಸಲು ಸಾಧ್ಯವಾಯ್ತು. ಸಂದರ್ಭಕ್ಕೆ ತಕ್ಕಂತೆ ಕೊಡು ಕೊಳ್ಳುವಿಕೆ, ಸಂಕುಚಿತ ವಿಸ್ತಾರಕ್ಕೆ ಅವಕಾಶ ಸರಳವಾಗಿರಬೇಕೆಂಬ ಉದ್ದೇಶದಿಂದಲೇ ಸಂಸತ್ತಿಗೆ ವಿಶೇಷಾಧಿಕಾರ ದತ್ತವಾಗಿದೆ. ಆದರೆ ನಮ್ಮ ದೇಶದ ದೊಡ್ಡ ದುರಂತವೆಂದರೆ ಈ ಅವಕಾಶಗಳು ನ್ಯಾಯಯುತವಾಗಿ ಬಳಸಿದ ದೃಷ್ಟಾಂತವೇ ಇಲ್ಲ. ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುವುದೇ ಹೆಚ್ಚು. ಈಗ ಪ್ರಸ್ತಾಪದಲ್ಲಿರುವ ತೆಲಂಗಾಣ ರಾಜ್ಯ ರಚನೆಯೂ ಅವಕಾಶ ದುರುಪಯೋಗಕ್ಕೆ ಒಂದು ಜ್ವಲಂತ ನಿದರ್ಶನ.
ಪ್ರತ್ಯೇಕ ತೆಲಂಗಾಣ ರಚನೆಯ ಪ್ರತಿಪಾದನೆಗೆ ಭಾಷೆ ಕಾರಣವಲ್ಲವೆಂದು ಘಂಟಾಘೋಷವಾಗಿ ನುಡಿಯಬಹುದು. ಯಾಕೆಂದರೆ ಸೀಮಾಂಧ್ರ ಹಾಗೂ ತೆಲಂಗಾಣ ಸೇರಿ ರಚಿತವಾದ ಅಖಂಡ ಆಂಧ್ರಪ್ರದೇಶವೇ ಭಾಷಾವಾರು ಪ್ರಾಂತ ರಚನೆಯ ಕೂಸು. ಹಾಗಾದರೆ ಈ ದಳ್ಳುರಿ, ಅತೃಪ್ತಿ, ಪ್ರತ್ಯೇಕ ರಾಜ್ಯದ ಬೇಡಿಕೆ ಏಕೆ? ಪ್ರಗತಿಯಲ್ಲಿ ಸಮಾನತೆ ಇಲ್ಲ, ತಾರತಮ್ಯ ಎಸಗಲಾಗಿದೆ ಎಂಬ ನೆಪ ಒಡ್ಡಬಹುದು. ಅದು ಆಡಳಿತದ ದೋಷ. ರಚನಾತ್ಮಕ ದೋಷವಲ್ಲ. ಕಳೆದ ಐವತ್ತು ವರ್ಷಗಳಿಂದ ಆ ಭಾಗವನ್ನು ಪ್ರತಿನಿಧಿಸಿದ ರಾಜಕಾರಣಿಗಳು ಉತ್ತರಿಸಬೇಕಾದ ಪ್ರಶ್ನೆ. ನಾಳೆ ಕರ್ನಾಟಕದಲ್ಲಿಯೂ ಇಂಥ ಪರಿಸ್ಥಿತಿ ಪ್ರಾಪ್ತವಾಗಬಹುದು. ಕರ್ನಾಟಕದ ಇತರೆಡೆಯಾದ ಪ್ರಗತಿ ಉತ್ತರ ಕರ್ನಾಟಕ ಭಾಗದಲ್ಲಿ ಆಗಲಿಲ್ಲವೆಂಬ ವಾದ ವಿಭಜನೆಯನ್ನು ಬಯಸುವವರು ಮುಂದಿಡಬಹುದು. ಅದಕ್ಕೆ ಆ ಭಾಗವನ್ನು ಈ ತನಕ ಪ್ರತಿನಿಧಿಸಿದ ರಾಜಕಾರಣಿಗಳು ಸಮರ್ಥನೆ ನೀಡಬೇಕು. ಅಲ್ಲಿ ಕೆಲವರು ಒಂದೇ ಕ್ಷೇತ್ರವನ್ನು ಏಳೆಂಟು ಬಾರಿ ಪ್ರತಿನಿಧಿಸಿದ ಉದಾಹರಣೆಯುಂಟು. ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ಕೇವಲ ವಿಭಜನೆ ಅಥವಾ ಹೊಸರಾಜ್ಯ ರಚನೆಯಿಂದ ಅಭಿವೃದ್ಧಿ ಸಾಧ್ಯವೆಂಬ ವಾದದಲ್ಲಿ ಹುರುಳಿಲ್ಲ ಹಾಗೂ ಸಾಕಷ್ಟು ಪರಾಮರ್ಶೆಯಿಲ್ಲದೆ ಒಪ್ಪತಕ್ಕ ವಿಷಯವಲ್ಲ.
ಆಂಧ್ರದ ರಾಜಕೀಯ ಕ್ಷೋಭೆಗೆ ಕಾಂಗ್ರೇಸ್ ನೇತೃತ್ವದ ಯುಪಿಎ ಸರಕಾರದ ರಾಜಕೀಯ ನೀತಿಯೇ ಕಾರಣವೆಂಬುದು ಕನ್ನಡಿಯಲ್ಲಿ ಮುಖ ನೋಡಿದಂತೆ ಸ್ಪಷ್ಟ. ರಾಜ್ಯಗಳ ಅಭಿಪ್ರಾಯ ಶಿವಾಯಿ ವಿಭಜನೆ ಮಾಡುವ ಅಧಿಕಾರ ಸಂಸತ್ತಿಗೆ ದತ್ತವಾಗಿರಬಹುದು. ಆದರೂ ನಮ್ಮದು ಪ್ರಜಾಸತ್ತೆ. ಇಲ್ಲಿ ಸಾರ್ವಜನಿಕ ಅಭಿಪ್ರಾಯಕ್ಕೆ ಬೆಲೆ ಇದೆ. ಆಂಧ್ರಪ್ರದೇಶದಲ್ಲಿ ಜನಪ್ರಿಯ ಸರಕಾರ ಇದೆ. ಅದು ಯಾವುದೇ ರಾಜಕೀಯ ಪಕ್ಷದ ನೇತೃತ್ವವಿರಲಿ. ಅದು ಇಡಿಯ ಆಂಧ್ರಪ್ರದೇಶವನ್ನು ಪ್ರತಿನಿಧೀಕರಿಸುತ್ತದೆ. ಆ ಸರಕಾರ ವಿಭಜನೆ ಬೇಡ ಎನ್ನುತ್ತಿದೆ ಎಂಬಾಗ ಕೇಂದ್ರದ ಯುಪಿಎ ಸರಕಾರಕ್ಕೇನಾಸಕ್ತಿ? ತೆಲಂಗಾಣದ ಜನರ ಬೇಡಿಕೆಯನ್ನು ಅಲ್ಲಿನ ಸರಕಾರವೇ ಒಪ್ಪಿಕೊಳ್ಳದಿರುವುದಾದರೆ ಕಾಂಗ್ರೇಸ್ ನೇತೃತ್ವದ ಯುಪಿಎ ಸರಕಾರಕ್ಕೇನಾಸಕ್ತಿ? ಅಂದರೆ ಕಾಂಗ್ರೆಸ್ ಯಾವುದೋ ರಾಜಕೀಯ ಲಾಭದ ನಿರೀಕ್ಷೆಯಲ್ಲಿ ವಿಭಜನೆಯನ್ನು ಬೆಂಬಲಿಸುತ್ತಿದೆ ಎಂದರ್ಥ. ಹೀಗೆ ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಬಹುದಾದ ಸಂವಿಧಾನದ ಯಾವುದೇ ವಿಧಿಯ ಪರಾಮರ್ಶೆ ಅತಿ ಅಗತ್ಯ. ಇಲ್ಲವಾದರೆ ಮುಂದೊಂದು ದಿನ ದೇಶ ವಿಭಜನೆಗೂ ನಾಂದಿಯಾದೀತು ಹಾಗೂ ಭಾರತದ ಅಖಂಡತೆಗೂ ಧಕ್ಕೆಯಾದೀತು.
ಈ ಹಿನ್ನೆಲೆಯಲ್ಲಿ ಆಗಾಗ ದೇಶದೆಲ್ಲೆಡೆ ಸಂಭವಿಸುವ ರಾಜ್ಯ ವಿಭಜನೆಯನ್ನು ತಡೆಯುವ ಸರ್ವ ಸಮ್ಮತ ಸೂತ್ರವನ್ನು ರೂಪಿಸಬೇಕಾಗಿದೆ. 1956ರ ರಾಜ್ಯ ಪುನರ್ ವಿಂಗಡನಾ ಕಾಯಿದೆಯನ್ವಯ ಮರುಪರಾಮರ್ಶೆ ನಡೆಸಿ ಒಂದು ಸರ್ವಸಮ್ಮತ ಗಡಿಯನ್ನು ಅಖೈರುಗೊಳಿಸುವುದು ವಿಹಿತ. ತನ್ಮೂಲಕ ಸ್ಪಷ್ಟ ತಾಂತ್ರಿಕ ಕಾರಣಗಳಲ್ಲದೆ ಕೇವಲ ರಾಜಕೀಯ ಲಾಭಕ್ಕಾಗಿ ಆಗಾಗ ರಾಜ್ಯ ವಿಭಜನೆಯಾಗುವುದನ್ನು ತಡೆಯಬಹುದಾಗಿದೆ.
- ಬೇಳೂರು ರಾಘವ ಶೆಟ್ಟ್ಪಿ
lalithraghava@hotmail.com