ಪರ್ಸಿನ ಕಾಳಜಿ, ಜೀವದ್ದಲ್ಲ!
ನಾವು ಆಗಾಗ 'ಬೀಚ್‌ನಲ್ಲಿ ವಿದ್ಯಾರ್ಥಿ ಸಾವು' 'ಬೀಚ್‌ಗೆ ಈಜಲು ಹೋದ ಬಾಲಕ ಸಾವು' ಇಂಥ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಓದುತ್ತೇವೆ. ನಮ್ಮ ರಾಜ್ಯದ ಕರಾವಳಿಯಲ್ಲಿ ಪ್ರವಾಸಿಗರಿಂದ ಸುಲಿಗೆ ಮಾಡಿ ತಮ್ಮ ಥೈಲಿಯನ್ನು ತುಂಬಿಸಿಕೊಳ್ಳುವವರಿದ್ದಾಯೇ ಹೊರತು, ಪ್ರವಾಸಿಗರ ಪ್ರಾಣಕ್ಕೆ ಬೆಲೆ ಕೊಡುವವರು ಇಲ್ಲ. ಕಳೆದ ವರ್ಷ ಮಂಗಳೂರು ಮತ್ತು ಉಡುಪಿ ಬೀಚ್‌ಗೆ ಪ್ರವಾಸ ಹೋಗಿದ್ದಾಗ ನಮಗಾದ ಸುಂದರ ಹಾಗೂ ಭಯಾನಕ ಅನುಭವವನ್ನು ನಿಮ್ಮೆಲ್ಲರ ಮುಂದಿಡುತ್ತಿದ್ದೇನೆ.
ಈ ಬೀಚ್‌ಗಳ ಕೆಲವು ಮೀಟರ್‌ಗಳ ಮೊದಲೇ "ಇಲ್ಲಿ ಈಜುವುದು ಅಪಾಯ", "ಯಾರೂ ನೀರಿಗೆ ಇಳಿಯಬಾರದು" ಎಂಬ ಎಚ್ಚರಿಕೆ ಫಲಕಗಳಿವೆ. ಆದರೆ ಮುಂದೆ ಬೀಚ್‌ನಲ್ಲಿ ಸಮುದ್ರದ ನೀರಿನಲ್ಲಿ ಈಜುವವರೂ ಇರುತ್ತಾರೆ; ನೀರಿಗಿಳಿದು ಆಟವಾಡುವವರೂ ಸಹ ಕಾಣಿಸುತ್ತಾರೆ. ಬೀಚ್‌ನಲ್ಲಿ ಒಬ್ಬನೇ ಒಬ್ಬ ಮುಳುಗು ತಜ್ಞರು (diver) ಕಾಣಿಸುವುದೂ ಇಲ್ಲ. ಮಲ್ಪೆ ಬೀಚ್‌ನಲ್ಲಿ ನಮ್ಮನ್ನು ಸೇಂಟ್ ಮೇರಿಸ್ ಎಂಬ ಅತಿ ಸುಂದರ (?) ದ್ವೀಪಕ್ಕೆ ಕರೆದೊಯ್ಯಲು ಬೋಟ್‌ನವರೂ ಸಹ ತಯಾರಿದ್ದರು. ನಾವು ರು. 150/-ತೆತ್ತು ದ್ವೀಪದ ಪ್ರಯಾಣಕ್ಕೆ ತಯಾರಾದೆವು. ನಾವು ಪ್ರಯಾಣಿಸಿದ ಬೋಟ್‌ನ ಸಾಮರ್ಥ್ಯ 12 ಜನರಿರಬಹುದು. ಒಂದಿಬ್ಬರು ನಿಂತೇ ಬಂದರು. ಬೋಟ್‌ನ ಬದಿಯ ಪೈಪ್‌ನ ಮೇಲೆ ಲೈಫ್ ಜಾಕೆಟ್‌ಗಳು ಮಲಗಿದ್ದವು. ಅವನ್ನು ತೊಡುವುದು ಮತ್ತು ಉಪಯೋಗಿಸುವುದು ಹೇಗೆ ಎಂಬುದು ನಮ್ಮಲ್ಲಿ ಯಾರಿಗೂ ಗೊತ್ತಿಲ್ಲ. ಬೋಟ್ ಸಿಬ್ಬಂದಿಗಳಿಗೆ ಅವುಗಳನ್ನು ತೊಡಿಸುವಷ್ಟು ವ್ಯವಧಾನವಿರಲಿಲ್ಲ. ಏಕೆಂದರೆ ಅವರಿಗೆ ನಮ್ಮನ್ನು ದ್ವೀಪದಲ್ಲಿ ಅನ್‌ಲೋಡ್ ಮಾಡಿ ಇನ್ನುಳಿದ ಕುರಿಗಳನ್ನು (ಪ್ರವಾಸಿಗರನ್ನು) ಲೋಡ್ ಮಾಡಿ ತರಲು ಹೋಗಬೇಕಿತ್ತು.
ನಮ್ಮಲ್ಲಿ ಯಾರಿಗೂ ಸಮುದ್ರದ ಅಲೆಗಳನ್ನು ಭೇದಿಸಿ ಈಜುವ ಕಲೆ ಗೊತ್ತಿಲ್ಲ. ಬೋಟ್‌ನ ಸಿಬ್ಬಂದಿಗಳು ಮುಂದಕ್ಕೆ ಹೋಗುವಾಗ ಇಬ್ಬರು, ಹಿಂದಕ್ಕೆ ಬರುವಾಗ ಒಬ್ಬರೇ. ಒಂದು ವೇಳೆ ದೊಡ್ಡದಾದ ಅಲೆ ಬಂದು ನಾವು ನೀರಿಗೆ ಬಿದ್ದಿದ್ದರೆ ನಮ್ಮನ್ನು ರಕ್ಷಿಸಲು ಆ ಒಬ್ಬ ಚಾಲಕ ಮಾತ್ರ. ಆತ ಸಮುದ್ರದಲ್ಲಿ ಈಜಲು ನಿಪುಣನಿರಬಹುದು. ಆದರೆ ಆತನೊಬ್ಬನಿಂದ ನಮ್ಮನ್ನು ರಕ್ಷಿಸಲು ಅಸಾಧ್ಯವೆಂಬುದಂತೂ ಖಂಡಿತ. ಆತ ಯಾರ ಪ್ರಾಣ ಉಳಿಸಿಕೊಳ್ಳುವುದು? ತನ್ನದೇ ಅಥವಾ ನಮ್ಮದು? ಅವಘಡವೇನಾದರೂ ಸಂಭವಿಸಿದರೆ ನಮಗೆ ಕಡಲ ತಳವೇ ಗತಿ. ಹೋಗುವಾಗ ದಾರಿಯಲ್ಲಿ ಪೊಲೀಸನೊಬ್ಬ ತಡೆದು "ಜಾಕೆಟ್ ಯಾಕೆ ಹಾಕಿಲ್ಲ? ನೀವು ಅವರಿಗೆ ಜಾಕೆಟ್ ಹಾಕಿಕೊಳ್ಳಲು ಹೇಳಿದ್ದೀರಾ?" ಎಂದು ಕೇಳಿದ. ನಮ್ಮ ಬೋಟಿನ ಚಾಲಕ "ಹೇಳಿದ್ದೇವೆ ಸಾರ್. ಅವರು ಹಾಕಿಲ್ಲ" ಎಂದು ಸರಾಗವಾಗಿ ಸುಳ್ಳು ಹೇಳಿದ. ಪೊಲೀಸಿನವರಾದರೂ ನಾವು ಜಾಕೆಟ್ ತೊಟ್ಟ ನಂತರ ಹೋಗಬೇಕಿತ್ತು. ಅದೂ ಇಲ್ಲ. ನಾವು ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ದ್ವೀಪ ತಲುಪಿದೆವು. ಅಲ್ಲಿ ಇರುವುದಾದರೂ ಏನು? ಸಹಾಯ ಮತ್ತು ಮಾಹಿತಿ ನೀಡಲು ಪೊಲೀಸ್ ಎಂದು ಬೋರ್ಡ್ ಹಾಕಿದ "ಪೊಲೀಸ್ ರಹಿತ" ಒಂದು ಕೊಠಡಿ. ಐಸ್‌ಕ್ರೀಂ ವ್ಯಾಪಾರಿಯೊಬ್ಬ 2 ಪಟ್ಟು ಹೆಚ್ಚು ಬೆಲೆಗೆ ಕಳಪೆ ಐಸ್‌ಕ್ರೀಂ ಮಾರುತ್ತಿದ್ದ. ದ್ವೀಪದ ಕರಾವಳಿಯಲ್ಲಿ ಅಲೆಗಳು ತಂದು ಹಾಕಿದ ಚಿಪ್ಪುಗಳು. ಅಲ್ಲಿ ನೋಡಲು ಈ ಚಿಪ್ಪುಗಳು ಇರುವುದು ಈ ಚಿಪ್ಪುಗಳು ತುಂಬಿರುವ ದಂಡೆ, ಕೆತ್ತಿದಂತಹ ಬಂಡೆಗಳು ಮಾತ್ರ. ಬೇರೇನಿಲ್ಲ ಉಳಿದಂತೆ ಇರುವುದು ವಿಕೃತ ಮನಸ್ಸಿನವರು ಎಸೆದ ಪ್ಲಾಸ್ಟಿಕ್ ಬಾಟಲಿಗಳು, ಕವರ್‌ಗಳು, ಐಸ್‌ಕ್ರೀಂ ಕಪ್ಪುಗಳು, ಮದ್ಯದ ಖಾಲಿ ಬಾಟಲಿಗಳು ಅಷ್ಟೇ. ವಿಷಾದದ ಸಂಗತಿಯೆಂದರೆ ಕೆಲವು ಕುಡಕ ಕಿಡಿಗೇಡಿಗಳು ತಾವು ಕುಡಿದಾದ ಮೇಲೆ ಖಾಲಿ ಬಾಟಲಿಗಳನ್ನು ಅಲ್ಲಿಯ ಕಲ್ಲು ಬಂಡೆಗಳಿಗೆ ಹೊಡೆದು ಗಾಜಿನ ಚೂರುಗಳನ್ನು ಅಲ್ಲಿ ಇಲ್ಲಿ ಚೆಂಡಾಡುವಂತೆ ಮಾಡಿದ್ದಾರೆ. ಇದರಿಂದಾಗಿ ಬರಿಗಾಲಿನಲ್ಲಿ ನಡೆದಾಡುವುದು ಕಷ್ಟ.
ಪ್ರವಾಸಿಗರಿಗೆ ಎಚ್ಚರಿಕೆ ಕೊಡುವುದೇ ಈ ಪತ್ರದ ಉದ್ದೇಶವಾಗಿರುತ್ತದೆ. ಕೇವಲ ಪ್ರವಾಸಿಗರ ಹಣಕ್ಕೆ ಮಾತ್ರ ಬೆಲೆ ಕೊಡುವ ಇಂಥ ಅಪಾಯಕಾರಿ ತಾಣಗಳಿಗೆ ಭೇಟಿ ಕೊಡುವ ಮೊದಲು ಸಾವಿರಾರು ಬಾರಿ ಯೋಚಿಸಿ, ಪ್ರವಾಸ ಹೊರಟರೆ ಸೂಕ್ತ. ಏಕೆಂದರೆ ಕಡಲು 'ದಯಾಮಯಿ, ಅನ್ನದಾತ, ಆದರೆ ಕ್ರೂರ ಶಿಕ್ಷಕ'. ಕಡಲು ಕೊಟ್ಟ ಶಿಕ್ಷೆಯ ಅನುಭವ ಹೇಳಲು ಶಿಕ್ಷೆ ಅನುಭವಿಸಿದವರು ಜೀವಂತ ಇರುವ ಅವಕಾಶಗಳು ತುಂಬಾ ವಿರಳ.
- ಜಾನ್ ಲೋಬೋ, ಮಡಿಕೇರಿ