ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಬೇಕೇ ಈ ಮೂರನೆಯವರ ಮಂಗಾಟ?

Mainashree
Updated On : 28 Feb 2014, 11:42 am

2014ರ ಲೋಕಸಭಾ ಮಹಾ ಸಮರಕ್ಕೆ ದಿನಗಣನೆ ಆರಂಭವಾಗಿದೆ. ಮಾಧ್ಯಮಗಳು ಇನ್ನಿತರ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು ದೇಶದಲ್ಲಿ ಪ್ರಬಲವಾದ ಆಡಳಿತ ವಿರೋಧಿ ಅಲೆ ಇದ್ದು, ಕಾಂಗ್ರೆಸ್ 67 ವರ್ಷಗಳ ಇತಿಹಾಸದಲ್ಲಿ ಅತಿ ಕೆಟ್ಟ ಸೋಲು ಕಾಣಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರ ಕಳೆದು ಕೊಳ್ಳಲಿದೆ ಎಂದು ಸ್ಪಷ್ಟವಾಗಿ ಹೇಳಿವೆ. ಇಂಥ ಸಮೀಕ್ಷೆಯಿಂದ ಹುಮ್ಮಸ್ಸು ಪಡೆದವರೋ ಎನ್ನುವಂತೆ ದೆಹಲಿಯಲ್ಲಿ ಮಂಗಳವಾರ ಸಿಪಿಐನ ಎ.ಬಿ.ಬರ್ಧನ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಸಿಪಿಎಂನ ಪ್ರಕಾಶ್ ಕಾರಟ್, ಜೆಡಿಯುನ ಶರದ್ ಯಾದವ್, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಮತ್ತು ಅಣ್ಣಾ ಡಿಎಂಕೆಯ ತಂಬಿ ದೊರೈ ಮತ್ತಿತರ ನಾಯಕರನ್ನೊಳಗೊಂಡ ಒಂದಿಷ್ಟು ವಿಭಿನ್ನ ಮನಸ್ಥಿತಿಯ ಸಮಾನ ಮನಸ್ಕರು (?) ಒಂದು ಗೂಡಿ ತೃತೀಯ ರಂಗವೆಂಬ ಮೈತ್ರಿಕೂಟ ಮಾಡಿಕೊಂಡಿದ್ದಾರೆ. ಇದೊಂದು ಅವಕಾಶವಾದಿಗಳ ಕೂಟವೆಂದು ಸ್ಪಷ್ಟವಾಗಿ ಹೇಳಬಹುದು.
ದೇಶದಲ್ಲಿ ಹಲವು ಬಾರಿ ತೃತೀಯ ಶಕ್ತಿ ಹುಟ್ಟಿ ಕಣ್ಣು ಬಿಡುವುದರೊಳಗೆ ಸತ್ತಿದೆ. ಅಸಲಿಗೆ ಪದೇ ಪದೆ ಈ  ತೃತೀಯ ರಂಗದ ಮಾತನಾಡುವುದು, ಅದರ ಬಲವಾದ ಅವಶ್ಯಕತೆ ಇರುವುದು ಕಮ್ಯುನಿಷ್ಟರಿಗೆ. ದೇಶದಲ್ಲಿ ನಿನ್ನೆ ಮೊನ್ನೆ ಕಣ್ಣು ತೆರೆದ ಆಮ್ ಆದ್ಮಿಯಂಥ ಪಕ್ಷಗಳ ಸಾಧನೆ ಕಮ್ಯುನಿಷ್ಠರಿಗೆ ನಿದ್ದೆ ಗೆಡಿಸಿದೆ. ಕೇರಳ ಮತ್ತು ಬಂಗಾಳದಲ್ಲಿ ಅಧಿಕಾರ ಕಳೆದುಕೊಂಡ ಎಡಚರರಿಗೆ ಪಕ್ಷವನ್ನು ದೇಶದಾದ್ಯಂತ ಬಲಪಡಿಸುವ ಮಹತ್ತರ ಹೊಣೆ ಇದೆ. ಆ ಮೂಲಕ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಬೇಕಾಗಿದೆ. ಹಾಗೇ ತಮ್ಮ ಇರುವಿಕೆಯನ್ನು ತೋರಿಸಿಕೊಳ್ಳಲು ಅವರಿಗೆ ಪ್ರಾದೇಶಿಕ ಪಕ್ಷಗಳನೊಳಗೊಂಡ ತೃತೀಯ ರಂಗ ಅನಿವಾರ್ಯ. ಇನ್ನು ದೇಶದ ಯುವ ಜನತೆ ಭರವಸೆಯಿಂದ ನೋಡಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೋಜು ಮಸ್ತಿ, ಚಿತ್ರ ನಟಿಯರ ಜೊತೆ ಹೆಜ್ಜೆ ಹಾಕುತ್ತಾ, ಓರ್ವ ಹೊಣೆಗೇಡಿ ಮುಖ್ಯಮಂತ್ರಿ ಎನ್ನಿಸಿಕೊಂಡಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಕೋಮು ಗಲಭೆಗಳು, ಅದನ್ನು ನಿಭಾಯಿಸುವಲ್ಲಿ ಅಖಿಲೇಶ್ ವಿಫಲನಾಗಿದ್ದು,  ಅಲ್ಲಿನ ಜನರಲ್ಲೂ ಸಮಾಜವಾದಿ ಪಕ್ಷದ ಮೇಲೆ ನಿರಾಸೆ ಮೂಡಿಸಿದೆ. ಅಲ್ಲಿ ಮೋದಿ ಅಲೆ ಪ್ರಬಲವಾಗಿ ಬೀಸುತ್ತಿದೆ. ಹೀಗಿರುವಾಗ ಮುಂದಿನ ಚುನಾವಣೆಗೆ ಸಜ್ಜಾಗಲು ಮುಲಾಯಂಗೆ ಇಂಥದೊಂದು ಮೈತ್ರಿ ಕೂಟದ ಅವಶ್ಯಕತೆ ಇದೆ.
ಎನ್‌ಡಿಎ ಮೈತ್ರಿಕೂಟದ ನೇತೃತ್ವ ವಹಿಸಿರುವ ಬಿಜೆಪಿ ಒಂದು ವಿಭಜಕ ಶಕ್ತಿ. ಬಿಜೆಪಿ ಅಧಿಕಾರಕ್ಕೆ ಬಂದರೆ ಕೋಮು ಸೌಹಾರ್ದ ಕದಡುತ್ತದೆ. ದೇಶದ ಜಾತ್ಯತೀತ ಪದರ ಹರಿದು ಹೋಗುತ್ತದೆ. ಸಾಮಾಜಿಕ ನ್ಯಾಯ, ರೈತರು, ಅಲ್ಪಸಂಖ್ಯಾತರು, ಮಹಿಳೆಯರ ಹಿತಾಸಕ್ತಿ ಕಾಪಾಡುವುದು ಕಾಂಗ್ರೆಸ್-ಬಿಜೆಪಿಯೇತರ ಪಕ್ಷಗಳಿಗಷ್ಟೇ ಸಾಧ್ಯ. ಹಾಗಾಗಿ, ನಾವು ತೃತೀಯ ರಂಗ ಬಲಪಡಿಸುತ್ತಿಸುತ್ತಿದ್ದೇವೆ ಎನ್ನುವ ಈ ನಾಯಕರ ಸಮಯ ಸಾಧಕತನ, ರಾಜಕೀಯ ನಿಲುವು, ದೇಶದ ಏಕತೆ ಬಗ್ಗೆ ಇವರಿಗಿರುವ ಕಾಳಜಿ, ಇವರ ರಾಷ್ಟ್ರೀಯತೆ ಎಲ್ಲವನ್ನು ನಮ್ಮ ಇತಿಹಾಸ ಸ್ಪಷ್ಟಪಡಿಸುತ್ತದೆ. ಬಾಯಿ ತೆರೆದರೆ ಸಮಾಜವಾದ, ಜಾತ್ಯತೀತವಾದದ ಬಗ್ಗೆ ಮಾತನಾಡುವ ಇವರಿಗೆ ಅಧಿಕಾರ ಪಡೆಯಲು ಯಾರಾದರು ನಡೆಯಿತು, ಅದಕ್ಕೊಂದು ತತ್ವ, ಸಿದ್ಧಾಂತ, ರೂಪುರೇಷೆ ಇಲ್ಲ.  ಅಧಿಕಾರಕ್ಕಾಗಿ ಯಾರೊಂದಿಗೆ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳುವ ಜಾಯಮಾನದವರು. ಇಂದು ಎನ್‌ಡಿಎ ಮೈತ್ರಿಕೂಟದ ನೇತೃತ್ವ ವಹಿಸಿರುವ ಬಿಜೆಪಿ ಒಂದು ವಿಭಜಕ ಶಕ್ತಿ, ನರೇಂದ್ರ ಮೋದಿ ಕೋಮುವಾದಿ, ಸರ್ವಾಧಿಕಾರಿ ಎಂದು ಜರಿಯುವ ನಿತೀಶ್ ಕುಮಾರ್ ಈ ಹಿಂದೆ ಅದೇ ಎನ್‌ಡಿಎ ಮೈತ್ರಿಕೂಟದಲ್ಲಿ ಮಂತ್ರಿಯಾಗಿ ನಂತರ ಅದೇ ಬಿಜೆಪಿ ಬೆಂಬಲದೊಂದಿಗೆ ಬಿಹಾರ್‌ನ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದವರು. ಅಧಿಕಾರ ಅನುಭವಿಸುವಾಗ ಇವರಿಗೆ ಆ ವಿಭಜಕ ಶಕ್ತಿ, ಸರ್ವಾಧಿಕಾರಿ ಯಾರು ಅಡ್ಡಿಯಾಗೋಲ್ಲ.  
ಆ ಮೈತ್ರಿ ಕೂಟದ ಇನ್ನೊಂದು ಕೃತಘ್ನಜೀವಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ. ದೇಶದ  ಪ್ರಧಾನಿಯನ್ನೇ ಕೊಂದ ಹಂತಕರನ್ನು ರಾಜಕೀಯ ಲಾಭಕ್ಕಾಗಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.  ಈಕೆಗೆ ಪ್ರತಿಯೊಂದರಲ್ಲೂ ರಾಜಕೀಯ. ಸದಾ ಕಾವೇರಿ ವಿಷಯದಲ್ಲಿ ಒಂದಲ್ಲ ಒಂದು ಕ್ಯಾತೆ ಎತ್ತುವ ಇವರು ಅವಕಾಶವಾದಿ ಮೈತ್ರಿಕೂಟದ ಮೂಲಕ ದೇಶದ ಪ್ರಧಾನಿಯಾದರೆ ಕನ್ನಡಿಗರು ಮತ್ತು ತಮಿಳರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡೋಲ್ಲ ಎಂದು ಹೇಗೆ ನಂಬೋದು? ಅದೇ ಮೈತ್ರಿ ಕೂಟದಲ್ಲಿ ಇರುವ ದೇವೇಗೌಡರು ಈ ವಿಷಯದಲ್ಲಿ ಹೇಗೆ ನಡೆದು ಕೊಳ್ಳಬಹುದು? ಅವರ ನಿಲುವು ಏನಿರಬಹುದು?
ಒಡಿಶಾ ಮುಖ್ಯಮಂತ್ರಿ  ನವೀನ್ ಪಟ್ನಾಯಕ್  'ಅತ್ತ ಸೇರೋದಾ ಬೇಡವಾ' ಎನ್ನುವ ಗೊಂದಲದಲ್ಲಿ ಇದ್ದಾರೆ.  ಅವರು ಈ ಹಿಂದೆ ಎನ್‌ಡಿಎ ಮೈತ್ರಿಕೂಟದಲ್ಲೇ ಇದ್ದವರು. ಅತ್ತ ಆ ಕೂಟಕ್ಕೆ ಬೆಂಬಲವಿದೆ ಎನ್ನುತ್ತಾ ಅಂದಿನ ಸಭೆಗೆ ಗೈರಾದರು. ಅಸಲಿಗೆ ಈ ಎಲ್ಲಾ ಪಕ್ಷಗಳಿಗೆ ಚುನಾವಣೆಗೆ ಮುನ್ನ ತಮ್ಮ ಕಾರ್ಯಕರ್ತರಲ್ಲಿ ಒಂದು ಹುರುಪು ಹುಮ್ಮಸ್ಸು ತುಂಬಾ ಬೇಕಾಗಿದೆ. ಇಲ್ಲಿ ತನಕ ದೇಶದ ಇತಿಹಾಸದಲ್ಲಿ ತೃತೀಯ ರಂಗವೊಂದು ಸ್ಥಿರ ಸರ್ಕಾರ ನೀಡಿದ, ಅವಧಿ ಪೂರ್ಣಗೊಳಿಸಿದ ಉದಾಹರಣೆ ಇಲ್ಲ. ಇಂದು ಕೇಂದ್ರದಲ್ಲಿ ಪ್ರಭಾವ ಹೊಂದಿರೋ ಪ್ರಾದೇಶಿಕ ಪಕ್ಷಗಳು ಆಯಾ ರಾಜ್ಯಕ್ಕೆ ಹೆಚ್ಚಿನ ಅನುದಾನ ಕೊಡಿಸುವತ್ತ ಗಮನ ಹರಿಸುತ್ತಿದ್ದಾವೆಯೇ ವಿನಹ, ದೇಶದ ಸರ್ವತೋಮುಖ ಅಭಿವೃದ್ಧಿಯನ್ನಲ್ಲ.


 ಅಜಿತ್ ಶೆಟ್ಟಿ ಕಿರಾಡಿ
asshetty8@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement