ಅನಿವಾಸಿ ಭಾರತೀಯನ ಅನಿವಾರ್ಯ ಅಳಲು
ಅಕ್ಕಿ ಯೋಗದ ಲೇಸು, ಮೆಕ್ಕೆ ಹಾಡಿಯು ಲೇಸುಮಕ್ಕಳನು ಹೆರುವ ಸತಿ ಲೇಸು...
ಅಕ್ಕಿ ಯೋಗದ ಲೇಸು, ಮೆಕ್ಕೆ ಹಾಡಿಯು ಲೇಸು
ಮಕ್ಕಳನು ಹೆರುವ ಸತಿ ಲೇಸು, ಜಗಕೆಲ್ಲಾ
ರೊಕ್ಕವೇ ಲೇಸೆಂದ ಸರ್ವಜ್ಞ
ಈ ವಚನದಷ್ಟೇ ಸತ್ಯ ನಮ್ಮ ಈ ವಲಸೆಗಿನ ಕಾರಣ. ಹಣವೊಂದಿದ್ದರೆ ನಮ್ಮ ಅಪ್ಪ ಅಮ್ಮ ಊರಿಂದ ಹೊರಗೆ ಹೋಗುಕ್ಕೆ ಬಿಡುತ್ತಿದ್ದರೋ ಇಲ್ಲವೋ? ಕೆಲವಿರಿಗಿದು ಅನಿವಾರ್ಯ. ಕೆಲವರಿಗಿದು ಕರ್ಮ. "ಯಾವ ದೇಶಾನೋ ಏನೋ.. ಯಾವೂರ್ಗೆ ಬಂದು ಸೇರ್ಕೊಂಡ್ಬಿಟ್ಟಿದೀವಿ" ಅಂತ ಒಮ್ಮೊಮ್ಮೆ ಅನ್ಸುತ್ತೆ.
ನಮ್ಮ ಹಳ್ಳಿ ಬಿಟ್ಟು ಹೊರಟು ಆಗಲೇ 40 ವರ್ಷ ಆಯ್ತು. ಕರ್ನಾಟಕದಲ್ಲಿ ಬೆಂಗಳೂರು ಸೇರಿ ಬೇರೆ ಬೇರೆ ನಗರಗಳಲ್ಲಿ ಜೀವನ ಆಯ್ತು. ಅರಬ್ ದೇಶ ಆಯ್ತು, ಯುರೋಪ್ ದೇಶಗಳಾದವು, ಕಡೆಗೆ ಅಮೆರಿಕೆಗೆ ಬಂದಿದ್ದೂ ಆಯ್ತು. ಇದರ ಹಿಂದೆ ಇದ್ದಿದ್ದು ಒಂದೇ ಉದ್ದೇಶ. ತುಂಬಾ ಹಣ ಮಾಡೋದು, ಅಪ್ಪನ ಸಾಲ ತೀರಿಸೋದು ಅಂತ. ಒಂದು ವಿಚಿತ್ರ ಅಂದರೆ ನಮ್ಮಪ್ಪನ ಪ್ರತಿಕ್ರಿಯೆ ಬೇರೆ ಬೇರೆ ದೇಶಗಳಿಗೆ ಹೊರಟಾಗ ಬೇರೆ ಬೇರೆ ತರಹ ಇದ್ದಿದ್ದು. ನಮ್ಮಪ್ಪಾನೋ ಕಟ್ಟಾ ಬ್ರಾಹ್ಮಣವಾದಿ. ಅರಬ್ ದೇಶಕ್ಕೆ ಹೊರಟಾಗ 'ಸಾಲ ತೀರ್ದೇ ಹೋದ್ರು ಪರ್ವಾಗಿಲ್ಲ ನೀ ಮಾತ್ರ ಆ ದೇಶಕ್ಕೆ ಹೋಗ್ಬೇಡ' ಅಂತ ಕಣ್ಣೀರಿಟ್ಟಿದ್ದರು. ಯುರೋಪಿಗೆ ಹೊರಟಾಗ 'ಪರವಾಗಿಲ್ಲ ಬಿಡು ಬಾಯಿಗೆ ಅಕ್ಕಿ ಕಾಳು ಹಾಕುಕ್ಕಾದರೂ ಬರೋ ಅಷ್ಟು ಹತ್ತಿರದಲ್ಲಿ ಇದೀಯ' ಅಂದ್ರು. ಅದೇ ಅಮೆರಿಕೆಗೆ ಹೊರಟಾಗ 'ದೂರವಾಗಿ ಬಿಟ್ಟೆ ಮಗು, ನನಗ್ಯಾರ್ ಅಕ್ಕಿ ಕಾಳು ಹಾಕ್ತಾರೆ' ಅಂದಿದ್ರು. ಆದರೆ ಅಮ್ಮ ಆಶಾವಾದಿ. 'ಮಗ ಹ್ಯಾಗಾದ್ರು ಮಾಡಿ ಮನೆ ಸಾಲ ತೀರ್ಸಿದರೆ ಸಾಕು. ಸಾಕಾಗಿದೆ ಈ ಸಾಲ ಹೊರೆ ಹೊತ್ಕೊಂಡು' ಅನ್ನೋ ಅಂಬೋಣ ಅಮ್ಮಂದು. ಹಾಗಾಗಿ ನನಗೂ ದೇಶ ಬಿಡೋ ದೌರ್ಭಾಗ್ಯ ದೊರೀತು. ಅರಬ್ ದೇಶದಲ್ಲಿ ಕೆಲಸ ಮಾಡಿದ್ದೂ ಆಯ್ತು, ಅವಮಾನಗಳ ಸಹಿಸ್ಕೊಂಡಿದ್ದೂ ಆಯ್ತು, ಹಣ ಮಾಡಿದ್ದೂ ಆಯ್ತು, ಸಾಲ ತೀರ್ಸಿದ್ದೂ ಅಲ್ದೇ, ಅಪ್ಪ ಅಮ್ಮಂಗೆ ಒಂದು ಸೂರು ಕಟ್ಟಿಸಿದ್ದೂ ಆಯ್ತು. ಅರಬ್ ಒಂದೇ ಅಲ್ಲ ಇಟಲಿ, ಇಂಗ್ಲೆಂಡ್, ಸಿಂಗಪೂರ್‌ಗಳಲ್ಲೂ ಕೆಲಸ ಮಾಡಿ ಇನ್ನೇನು ಬೆಂಗಳೂರ್ಗೆ ಬಂದು ಒಳ್ಳೇ ಮನೆ ಕಟ್ಕೊಂಡು ಸೆಟ್ಲ್ ಆಗೋಣ ಅನ್ನೋ ಅಷ್ಟರ ಒಳಗೆ ಅಮೆರಿಕಾದಿಂದ ಕೆಲಸಕ್ಕೆ ಕರೆ ಬಂತು.
ಅರಬಬ್ದೇಶಕ್ಕೆ ಹೊರಟಾಗ ನನ್ನ ಮನಸ್ಸಿನಲ್ಲಿದ್ದಿದ್ದೂ ದುಡ್ಡು ಮಾಡ್ಕೊಂಡು ಬರಬೇಕೂ ಅಂತ. ಅಲ್ಲಿ ಸೆಟಲ್ ಆಗೋ ಪ್ರಶ್ನೆಯೇ ಬರುವುದಿಲ್ಲ ಹಾಗೂ ಮನಸ್ಸಿನಲ್ಲಿ ಸುಳಿಯುವುದೂ ಇಲ್ಲ. ಯುರೋಪಿಗೆ ಹೋದಾಗಲೂ ಅಷ್ಟೆ. ಅಮೆರಿಕಾಗೆ ಹೊರಟಾಗಲೂ ನನ್ನ ಮನಸ್ಸಿನಲ್ಲಿದ್ದಿದ್ದೂ ಅದೇ. ನನಗೆ ಬರೋ ಸಂಬಳಾನ ಆಗಿನ ಕಾಲಕ್ಕೆ ತಕ್ಕಂತೆ 25 ರಿಂದ ಗುಣಿಸಿ ಎಷ್ಟು ಲಕ್ಷ ರೂಪಾಯಿ ಅಂತ ಜಂಬದಿಂದ ಹೇಳ್ಕೊಂಡು ಇಷ್ಟು ವರ್ಷದಲ್ಲಿ ಇಷ್ಟು ಉಳಿಸ್ಬೋದು, 4-5 ವರ್ಷದಲ್ಲಿ ಬಂದ್ಬಿಡ್ತೀನಿ ಅಂತ ಆಶ್ವಾಸನೆಯನ್ನು ಅಪ್ಪ ಅಮ್ಮಂಗೆ ಕೊಟ್ಟಿದ್ದೂ ಆಯ್ತು. ಮಗಳು 5ನೇ ಕ್ಲಾಸಿಗೆ ಹೋಗೋ ಹೊತ್ತಿಗೆ ಖಂಡಿತವಾಗೂ ಬೆಂಗಳೂರಿಗೆ ಬಂದು ಸೆಟಲ್ ಆಗ್ತೀವಿ ಅಂತ, ಅಪ್ಪ ಅಮ್ಮ ಏನು, ಅತ್ತೆ ಮಾವಂಗೂ ಹುಸಿ ಭರವಸೆ ಕೊಟ್ಟಿದ್ದಾಯ್ತು.
ವಲಸೆಗಾರರ ನೆಲ ಎಂದೇ ಕರೆಯಲ್ಪಡಲಾಗುವ ಈ ದೇಶಕ್ಕೆ ವಿಸಾಗೆ ಅಂತ ಚೆನ್ನೈನಲ್ಲಿ ಗಂಟೆಗಟ್ಟಲೆ ಬೆಳಗಿನಿಂದ ಬಿಸಲಲ್ಲಿ ಕ್ಯೂನಲ್ಲಿ ನಿಂತು ಬೆವತುಗೊಂಡು, ಒಳಗೆ ಹೋದಾಗ, ಕೌಂಟರ್ನಲ್ಲಿ ಇರೋ ದೇಸಿ ತನ್ನ ತಾಯ್ನಾಡನ್ನೇ ಆಕ್ರಮಣಕಾರರಿಂದ ರಕ್ಷಿಸ್ತಿರೋ ಹಾಗೆ ಒರಟಾಗಿ ನಿಮ್ಮ ಸರ್ಟಿಫಿಕೆಟ್ ನೋಡಿ ಗರ್ಭಗುಡಿಗೆ ಕಳಿಸಿದಾಗಲೇ ಅಮೆರಿಕದ ಮೊದಲ ರುಚಿ ಸಿಗುತ್ತೆ.
ವಿಸಾ ಸಿಕ್ಕಿ ಮುಂದಿನ ಹೆಜ್ಜೆ ಪ್ರಾರಂಭವಾಗೋದು ವಿಮಾನದ ಬೆಲ್ಟ್ ಸೊಂಟಕ್ಕೆ ಸುತ್‌ಕೊಂಡು, ಕೈ ಕಾಲು ಅಲ್ಲಾಡಸಕ್ಕೂ ಆಗದೇ ಇರೋ ಇಕ್ಕಟ್ಟಿನಲ್ಲಿ, 16ಕ್ಕೂ ಹೆಚ್ಚು ಗಂಟೆಗಳ ಪ್ರಯಾಣ ಮಾಡಿದಾಗ. ನಂತರ ಕಡೆಗೂ ನಮ್ಮ ತಾಣಕ್ಕೆ ಬಂದು ಇಳೀತೀವಿ. ಇನ್ನೇನು ಬಂದ್ನಲ್ಲಾ ಅಂತ ಖುಷೀಲಿ ಇರೋವಾಗಲೇ ಇನ್ನೊಂದು ಕ್ಯೂ ಪ್ರಾರಂಭ. ಅದೇ immigration stamping. ಅದೆಲ್ಲಾ ಮುಗಿಸ್ಕೊಂಡು ಹೊರಗಡೆ ಬಂದು ಜಪಾನಿನ ದೊಡ್ಡ ಕಾರುಗಳಲ್ಲಿ ಕೂತು, ನಮಗೆ ಅಭ್ಯಾಸವಿರದ ಸೀಟ್‌ಬೆಲ್ಟ್ ಹಾಕ್ಕೊಂಡು, ಕೇಳರಿಯದ ವೇಗದಲ್ಲಿ ಬಲ ಭಾಗದ ರಸ್ತೆಯಲ್ಲಿ ಹೋದಾಗಲೇ ಮೊದಲನೇ ಆಘಾತ. ತುಂಬಾ ದೂರ ಇಲ್ಲ, ಇಲ್ಲೇ ಇದೇ ಅಂತ ಏರ್‌ಪೋರ್ಟ್‌ನಿಂದ 2 ಗಂಟೆ ಪ್ರಯಾಣ ಮಾಡಿಸಿ, ಬರ್ತಾ ದಾರೀಲಿ ಪೆಟ್ರೋಲ್‌ಗೆ... ಅಲ್ಲ 'ಗ್ಯಾಸ್'ಗೆ ನಿಲ್ಲಿಸೋದು.
ಇಲ್ಲಿನ ಜನ ಸಣ್ಣ ಸಣ್ಣ ವಿಚಾರಗಳಿಗೆಲ್ಲಾ Sorry, Excuse me ಅಂತ ಔಪಚಾರಿಕವಾಗಿ ಮಾತನಾಡೋದು ನೋಡಿ ಇಲ್ಲಿನ ಜನ ಎಂತಹ ಗೌರವಸ್ತರು ಅನ್ನಿಸುತ್ತೆ. ಕಿರಾಣಿ ಅಂಗಡಿಗಳಿಗೆ ಹೋದಾಗ, ರೆಸ್ಟೋರೆಂಟ್‌ಗಳಿಗೆ ಹೋದಾಗ ಅಲ್ಲಿಯ ಸೈಜುಗಳನ್ನು ನೋಡಿ ಪ್ರಭಾವಿತರಾಗ್ತೇವೆ. ಕಾಫಿ ಕಪ್ ದೊಡ್ಡದು, ಬರ್ಗರ್ ದೊಡ್ಡದು, ಕುಡಿಯೋ ಕೂಲ್ ಡ್ರಿಂಕ್ ಕಪ್ ದೊಡ್ಡದು, ಕಾರು ದೊಡ್ಡದು, ರಸ್ತೆ ದೊಡ್ಡದು, ಮನೆ ದೊಡ್ಡದು, ಕಲ್ಪನೆಗೂ ಮೀರಿದಂತ ಲೋಕಕ್ಕೆ ಬಂದ ಅನುಭವ. ಬೀರ್ ಕುಡಿಯೋದು ಇಂಡಿಯಾದಲ್ಲೇ ಒಂದು ತರಹ, ಅಮೆರಿಕಾದಲ್ಲೇ ಒಂದು ತರಹ. ಇಂಡಿಯಾದಲ್ಲಿ ಬೀರ್ ಕುಡಿಯೋ ಪಾರ್ಟಿ ಅಂದರೆ ಕ್ಲಬ್‌ನಲ್ಲಿ ನಡೆಯೋ ಪಾರ್ಟಿಗಳು, ಬೀರ್ ಕುಡಿಯೋದು ಇಲ್ಲಿನ ಸಮಾಜದಲ್ಲಿ ಒಪ್ಪಿಕೊಂಡಂತೆ ಕಂಡು ಬಂದು ಎಲ್ಲರ ಎದುರಿಗೆ ಬೀರು ಬಾಟಲ್‌ಗಳನ್ನು ಎತ್ತುವಾಗ ಒಂದು ಮುಕ್ತ ವಾತಾವರಣದಲ್ಲಿ ಕುಡಿದಹಾಗೆ ಆಗುತ್ತೆ. ಅದೇ ನಮ್ಮೂರಗಳಲ್ಲಿ ಬೀರ್ ಕುಡಿಯುವಾಗ ಯಾವುದೋ ಸಮಾಜಕ್ಕೆ ಒಪ್ಪದ ಕೆಲಸ ಮಾಡ್ತಾ ಇದೀವೇನೋ ಅನ್ನುವ ಭಾವನೆ. ಹೊಸದಾಗಿ ಬಂದಾಗ ಇಂತಹ ಮುಕ್ತ ವಾತಾವರಣ, ಬೀರು ಪಿಡ್ಜಾಗಳ ಆಪ್ತ ಸ್ನೇಹಿತನನ್ನಾಗಿ ಮಾಡಿಸಿಬಿಡುತ್ತದೆ.
ಆದರೆ ಕಷ್ಟ ಪ್ರಾರಂಭವಾಗೋದು ಯಾವಾಗ ಅಂದರೆ ನಮ್ಮ ಇಂಗ್ಲೀಷ್ ಬೇರೆಯವರಿಗೆ ಅರ್ಥವಾಗದೇ ಇರೋವಾಗ, ಇನ್ನೊಬ್ಬರ ಜೊತೆಗಿನ ಸಂಭಾಷಣೆಗಳಲ್ಲಿ ತೊಡಕುಗಳು ಉಂಟಾದಾಗ. ಇಲ್ಲಿ ಇಂಗ್ಲೀಷೇ ಬೇರೆ ಭಾಷೆನೇನೋ ಅನ್ನಿಸುವಷ್ಟು ಸ್ಥಿತಿಗೆ ಬರ್ತೀವಿ. ವಿಮಾನದಲ್ಲಿ ನೀವು ಕೂತರೆ ನಿಮ್ಮ ಪಕ್ಕದ ಸೀಟು ಭರ್ತಿಯಾಗೋದು ಕಟ್ಟ ಕಡೇಗೆ ಅನ್ನೋದನ್ನ ಅರಿತಾಗ ಆಫ್ರಿಕಾದಲ್ಲಿ ಗಾಂಧಿ ಎಷ್ಟು ಅಪಮಾನಗಳನ್ನ ಸಹಿಸಿಕೊಂಡಿದ್ರು ಅಂತ ಅನ್ಸುತ್ತೆ. ಇಲ್ಲಿನವರಲ್ಲಿ ಎಲ್ಲಾ ಕೃತಕ ಅನ್ನಿಸುತ್ತೆ. ಹೊಸ ಜಾಗ ಸುಖದ ಸುಪ್ಪತ್ತಿಗೆಯಲ್ಲ ಅಂತ ನಿಧಾನವಾಗಿ ಅರಿವಾಗುತ್ತಾ ಹೋಗುತ್ತೆ. ತೌರಿನ ಗಾಳಿ, ಬೆಳಕು, ಬಣ್ಣ ಮತ್ತು ಶಬ್ದಗಳಿಂದ ವಂಚಿತರಾಗ್ತೀವಿ. ಅಮೆರಿಕ ಒಂದು ಕನಸಿನ ಲೋಕ ಎನ್ನೋ ಭ್ರಮೆ ಕಡಿಮೆ ಆಗ್ತಾ ಹೋಗುತ್ತೆ. ಹಾಸ್ಯ ಪ್ರಜ್ಞೆ ಕಡಿಮೆ ಆಗ್ತಾ ಹೋಗುತ್ತೆ. ಮನ ತೌರಿಗಾಗಿ ಹಂಬಲಿಸುತ್ತೆ.
ಮುಂದಿನ ಪರ್ವ ಪ್ರಾರಂಭವಾಗುವುದು ಯಾವಾಗ ಅಂದರೆ ಯಾವಾಗ ತೌರಿನ ಮಣ್ಣಿನ ಸೊಗಡಿನ ಪರಿಮಳ ಈ ನೆಲದಲ್ಲಿ ಕಾಣಿಸುವುದಕ್ಕೆ ಶುರುವಾಗುತ್ತೋ ಆವಾಗ. ಈ ಪರ್ವದಲ್ಲಿ, ಇಲ್ಲಿ ನಡೆಯುವ ಕಾರ್ಯಗಳು ಮನಸ್ಸಿಗೆ ಹಿಡಿಸ್ತಾ ಹೋಗುತ್ತೆ. ಎಲ್ಲೋ ಬಂದು ಕಳೆದು ಹೋಗೀದಿನಲ್ಲ ಅನ್ನೋ ಭಾವನೆ ಕಮ್ಮಿ ಆಗ್ತಾ ಹೋಗುತ್ತೆ. ಕ್ರಿಕೆಟ್ ಮರೀತಾ ಹೋಗಿ ಅಮೆರಿಕನ್ ಫುಟ್ಬಾಲ್‌ನಲ್ಲಿ ಆಸಕ್ತಿ ಬರ್ತಾ ಹೋಗುತ್ತೆ, ಈ ಸ್ಥಿತೀಲಿ ನಮ್ಮ ಸಂಸ್ಕೃತಿಗೂ ಇಲ್ಲಿನ ಸಂಸ್ಕೃತಿಗೂ ಹೋಲಿಸಿ ಯಾವುದು ಒಳ್ಳೇದು, ಯಾವುದು ಕೆಟ್ಟದು ಅನ್ನೋದನ್ನ ಹುಡುಕ್ತೀವಿ. ಹಾಸ್ಯ ಪ್ರಜ್ಞೆ ವಾಪಸಾಗೋಕೆ ಶುರುವಾಗುತ್ತೆ.
ನಮ್ಮ ಸಂಸ್ಕೃತಿ ಉಳಿಸ್ಕೊಳ್ಳೋ ಪ್ರಯತ್ನದಲ್ಲಿ ಮಕ್ಕಳ ಸ್ವಾತಂತ್ರ್ಯವನ್ನೇ ಬಲಿ ತಗೆದುಕೊಳ್ಳುತ್ತೇವೆ ಅಂತ ಅನ್ಸುತ್ತೆ, ಮಕ್ಕಳನ್ನ ಅವರಿಗೆ ಇಷ್ಟವಿಲ್ಲದಲೇ ಹೋದರೂ ಕನ್ನಡ ಕಲಿ, ಸಂಗೀತ, ನೃತ್ಯ, ಬಾಲವಿಹಾರ ಅಂತ ಮಕ್ಕಳ ವಾರದ ರಜೆ ದಿನಗಳನ್ನೆಲ್ಲಾ ಭರ್ತಿ ಮಾಡ್ತೀವಿ.
ಇಲ್ಲಿ ಬದುಕುವ ರೀತಿ ಬೇರೆ ದೇಶಗಳಿಗೆ ಹೋಲಿಸಿದರೆ ನಿರಾತಂಕ ಅನ್ನಿಸಬಹುದು. ಉಚ್ಚ ಜೀವನ ಗುಣಮಟ್ಟದಂತಹ ಕೆಲ ವಿಚಾರಗಳಲ್ಲಿ ಅದು ನಿಜವಾದರೂ, ಬಹುತೇಕ ಅಮೆರಿಕನ್ನರು ಹೆಚ್ಚು ಗಂಟೆಗಳ ಕಾಲ ಉತ್ಪಾದಕ ಕೆಲಸ ಮಾಡ್ತಾರೆ. ಇನ್ನೊಂದು ದೇಶಕ್ಕೆ ಹೋಲಿಸಿದರೆ ಇಲ್ಲಿನ ಜನಜೀವನ ಕ್ಷಿಪ್ರಗತಿಯಲ್ಲಿ ನಡೆಯುತ್ತೆ. ಈ ದೇಶದ ಉದ್ಯೋಗ ನೈತಿಕತೆ ಬಲಿಷ್ಠವಾದದ್ದು. ಇಲ್ಲಿನ ಉದ್ಯಮ ಸ್ಪರ್ಧಾತ್ಮಕವಾದದ್ದು. ಆದ್ದರಿಂದ ಬಹುತೇಕ ಉದ್ಯಮಗಳಲ್ಲಿ ನೌಕರರಿಗೆ ಸಿಗುವ ಸಂಬಳವಲ್ಲದೇ, ರಜಾ ದಿನಗಳು, ವೈದ್ಯಕೀಯ ಹಾಗೂ ದಂತ ವೈದ್ಯಕೀಯ ವಿಮೆ ಹೀಗೆ ಹಲವಾರು ಸವಲತ್ತುಗಳು ಸಿಗುತ್ತವೆ. ಇಲ್ಲಿನ ಜನ ತಮ್ಮ ವಾಸಸ್ಥಳಕ್ಕಾಗಲೀ, ಹುಟ್ಟೂರಿಗಾಗಲೀ ಭಾವಪರವಶರಾಗಿ ಉದ್ವೇಗಕ್ಕೆ ಒಳಗಾಗುವುದು ಕಮ್ಮಿ. ಉದ್ಯೋಗಾರ್ಥ ಊರಿಂದ ಊರಿಗೆ ಸ್ಥಳಾಂತರಿಸಲು ಸಿದ್ಧರಿರುತ್ತಾರೆ.
ಮುಂದಿನ ಪರ್ವ ನೆಮ್ಮದಿ ಪರ್ವ. ಇಲ್ಲಿನ ಸಂಸ್ಕೃತೀನ ಅರೆದು ಹುಯ್ಕೊಳ್ತೇವೆ, Super Bowl ದಿವಸದ ಪಾರ್ಟಿಗೆ ಕಾದು ಬೇರೆ ಬೇರೆ ಫುಟ್ಬಾಲ್ ತಂಡಗಳ ಮೇಲೆ ಬಾಜಿ ಕಟ್ತೇವೆ. ಬಾರ್ಬೆಕ್ಯೂ ಪಾರ್ಟಿಗಳು, ಬಿಯರ್ ಪಾರ್ಟಿಗಳು, ಮಿಡ್ಲ್ ಸ್ಕೂಲ್, ಹೈಸ್ಕೂಲ್ ಗ್ರಾಜ್ಯುವೇಟ್ ಪಾರ್ಟಿಗಳಿಗೆ ಒಗ್ಗಿ ಹೋಗ್ತೀವಿ. ಮಕ್ಕಳೆಲ್ಲಾ ನಮ್ಮ ಸಂಸ್ಕೃತಿ ಜೊತೆಗೆ ಅನ್ಯ ಸಂಸ್ಕೃತಿ ಬೆರಸ್ಕೊಂಡು ABCD (American Born Confused Desi) ಆಗಿ ದೊಡ್ಡೋರಾಗ್ತಾರೆ. ಕೆಲಸಗಳಲ್ಲಿ ಸ್ಥಿರತೆ ಬಂದಿರುತ್ತೆ. ಇಲ್ಲಿನ ಕಟ್ಟಳೆ, ಕಾನೂನಿಗಳಿಗೆ ಜೀವ ಒಗ್ಗಿ ಹೋಗಿರುತ್ತೆ. ತೌರಿಗೆ ವಾಪಸ್ ಹೋಗಬೇಕು ಅನ್ನೋ ಅನಿಸಿಕೆಗಳು ಮರೆಯಾಗ್ತಾ ಹೋಗುತ್ತೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರಾಶಸ್ತ್ಯ ಕೊಡ್ತೇವೆ. ತೌರಿಗೆ ಭೇಟಿ ಕೊಡೋದು ಕಡಿಮೆ ಆಗ್ತಾ ಹೋಗುತ್ತೆ. ಬಹಳಷ್ಟು ಸ್ನೇಹಿತರ ಮುಖದ ಛಾಯೆಯೇ ಮನಸ್ಸಿನಿಂದ ಮಾಯವಾಗುತ್ತೆ. ಇನ್ನೂ ಕೆಲವರ ದೂರವಾಣಿ ಸಂಪರ್ಕವೂ ಕಡಿದು ಹೋಗುತ್ತೆ. ಕೆಲವರಂತು ಇಹಲೋಕ ಸೇರ್ಕೋತಾರೆ. ತೌರಿನ ಪ್ರಯಾಣದ ಮೂಲ ಉದ್ದೇಶ ತಂದೆ, ತಾಯಿಯರನ್ನ ನೋಡ್ಕೊಂಡು ಬರೋದು. ವಯಸ್ಸು ಆದ ಹಾಗೆ ಅವರೂ ಸ್ವರ್ಗ ಕಂಡರೆ ತೌರಿನ ಒಂದು ಕೊಂಡೀನೆ ಕಳ್ಕೊಂಡ ಹಾಗೆ ಆಗುತ್ತೆ.
ವಿದೇಶಕ್ಕೆ ಕಾರ್ಯನಿಮಿತ್ತವೋ, ಕರ್ಮನಿಮಿತ್ತವೋ ಹೋಗಿ ನೆಲೆಸಿರೋ ಬಹುತೇಕ ಮಧ್ಯಮ ವರ್ಗದವರಿಗೆ ಕಾಡುವ ನೋವೊಂದು ಎಲ್ಲೂ ದಾಖಲಾಗಿಲ್ಲ ಎಂಬುದು ನನ್ನ ಅನಿಸಿಕೆ. ಇಂತಹವರ ಸಂಬಂಧಿಕರಿಗೆ, ಹತ್ತಿರದ ಸ್ನೇಹಿತರಿಗೆ ಒಂದು ಭ್ರಮೆ ಇರುತ್ತೆ. ಅಮೆರಿಕಾಗೆ ಬಂದೋರೆಲ್ಲಾ ಒಂದು ಡಾಲರ್ ಮರ ಬೆಳಿಸಿರ್ತಾರೆ, ಅಲ್ಲಾಡಿಸಿದರೆ ದುಡ್ಡು ಬೀಳುತ್ತೆ ಅಂತ. ಕಷ್ಟಕ್ಕೆ ಹಣ ಬೇಕಾದರೂ ಅಷ್ಟೆ ಸುಖಕ್ಕೆ ಹಣ ಬೇಕಾದರೂ ಅಷ್ಟೆ ಇವನೇ ಕರ್ಣ, ಕಿತ್ಕೊಂಡು ತಿಂತಾರೆ. ಆದರೂ ನಾವು ಕೊಟ್ಟಿದ್ದು ಸಾಲಾನೇ ಅಲ್ಲ. ಸಾಲ ಅನ್ಕೊಂಡ್ರು ಅದು ಬೆಳೆಯೋದೆ ಇಲ್ಲ. ಕೇಳಿದಾಗೆಲೆಲ್ಲಾ ಹಣ ಹರಿತಾ ಇದ್ರೆ ಆಪ್ತ. ಯಾವಾಗಲಾದರೂ ಒಂದು ಸಾರಿ ಆಗೊಲ್ಲ ಅಂದ್ರೆ ನಂಟೇ ದೂರ. ರಜಾ ದಿನಗಳಲ್ಲಿ ಖುಷಿಯಾಗಿ ಎಲ್ಲರನ್ನೂ ನೋಡಿ ಮಾತನಾಡಿಸಿಕೊಂಡು ಹೋಗೋಣ ಅಂತ ತೌರಿಗೆ ಹೋದರೆ, ಒಂದೆರಡು ಈ ರೀತಿ ನೆಂಟರೋ, ಆಪ್ತ ಸ್ನೇಹಿತರೋ ಈ ರಜಾ ಮಜಾದ ವಾತಾವರಣವನ್ನೇ ಕಲುಶಿತಗೊಳಿಸ್ತಾರೆ. ಕೆಲವರು ಕೊಟ್ಟ ಹಣ ವಾಪಸ್ ಕೊಡ್ತೀನಿ ಅಂತ ಹೆಳ್ಕೊಂಡು ವರ್ಷಾನುಗಟ್ಟಲೆ ತಳ್ತಾರೆ. ಕೆಲವರು ಹತ್ತಾರು ವರ್ಷದ ಮೇಲೆ ಕೊಡಲು ಬರುವುದು ಅಥವಾ ಹತ್ತಾರು ವರ್ಷದ ಹಿಂದೆ ಕೊಟ್ಟ ಹಣದ ಮೊತ್ತವನ್ನೇ ಕಂತಿನ ರೂಪದಲ್ಲಿ ತೀರಿಸಲು ಬರುತ್ತಾರೆ.
ಇನ್ನೊಂದು ಸಮಸ್ಯೆ ಅಂದರೆ ರಜೆಗೆ ಹೊರಟಾಗ ತೌರಿಂದ 'ಅದನ್ನ ತಗೊಂಡ್ಬನ್ನಿ, ಇದನ್ನ ಮಗನಿಗೆ ತಗೊಂಡ್ಬನ್ನಿ' ಅಂತ ಒಂದು ಪಟ್ಟೀನೇ ತಯಾರಾಗುತ್ತೆ. ನಾವು ವರ್ಷ ಆದ ಮೇಲೆ ಹೋಗ್ತಾ ಇದೀವಲ್ಲಾ ಅಂತ ಎಲ್ಲರಿಗೂ ಒಂದೊಂದು ಉಡುಗೊರೆ ತಗೊಂಡ ಹೋಗೋಣ ಅಂತ ವಾರಗಟ್ಟಲೆ ಮುಂಚೇನೆ ಅದಕ್ಕೋಸ್ಕರ ತಯಾರೀನೆ ನಡೆಯುತ್ತೆ. ಇಷ್ಟು ಕಷ್ಟಪಟ್ಟು ಚಾಕಲೇಟ್‌ಗಳೇನು, ಹೊಸ ಹೊಸ ಎಲೆಕ್ಟ್ರಾನಿಕ್ ಸಾಮಾನುಗಳು, ಆಟದ ಸಾಮಾನುಗಳನ್ನು ತೆಗೆದುಕೊಂಡು ಹೋದರೂ, ವಿಮಾನ ಇಳಿದು ಮನೆ ತಲುಪಿ ಸೂಟ್‌ಕೇಸ್ ತೆಗೆದು ಕೆಲವೇ ಗಂಟೆಯಲ್ಲಿ ಎಲ್ಲಾ ಮಾಯ. ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಇದ್ದ ಹಾಗೆ. 'ಅವರಿಗೆ ಚಾಕಲೇಟ್ ಸಿಗಲಿಲ್ಲ, ಆ ಎಲೆಕ್ಟ್ರಾನಿಕ್ ಕೆಲಸ ಮಾಡ್ತಿಲ್ಲ, ಅದು ಇಲ್ಲೇ ಬರ್ಮಾ ಬಜಾರ್‌ನಲ್ಲಿ ಸಿಗ್ತಾ ಇತ್ತು..' ಹೀಗೆ ಎಲ್ಲದಕ್ಕೂ ನಾವೇ ಹೊಣೆ ಆಗ್ತೇವೆ.
ಬದುಕಿನ ಇಷ್ಟು ಜಟಿಲ ಗೋಜಲಗಳನ್ನು ನೋಡಿ ಮಾತೃಭೂಮಿಯ ಮೇಲಿನ ಪ್ರೇಮ ಇಳೀತಾ ಬರುತ್ತೆ. ಒಂದೊಂದೆ ಕೊಂಡಿಗಳು ಕಳಚಿಕೊಳ್ಳುತ್ತಾ ಬರುತ್ತೆ. ಅಮೆರಿಕವನ್ನೆ ನಮ್ಮ ನೆಲೆಯನ್ನಾಗಿ ಮಾರ್ಪಡಿಸಿಕೊಳ್ತಾ ಹೋಗ್ತೇವೆ. ಪರದೇಶದಲ್ಲಿದ್ದರೂ ಭಾರತದ ಪ್ರಜೆಯಾಗೇ ಉಳಿತೀನಿ, ಯಾವತ್ತಾದರೂ ಒಂದು ದಿವಸ ವಾಪಸ್ಸು ಹೋಗ್ತೀನಿ ಅಂತ ಕನಸನ್ನ ಕಟ್ಟಿಕೊಂಡು, ಪರದೇಶದ ನಾಗರೀಕನಾಗುವುದನ್ನೂ ಮುಂದೂಡ್ತಾ, ಮೊದಲು ಹೆಂಡ್ತಿ ಮಕ್ಕಳ ನಾಗರಿಕತ್ವವನ್ನು ಬದಲಾಯಿಸಿ, ತೌರಿನ ಕೊಂಡಿಗಳೆಲ್ಲಾ ಕಳಚಿಕೊಂಡ ಮೇಲೆ ತಾನೂ ಪರದೇಶದ ನಾಗರೀಕನಾಗಿ, ಪರದೇಶದಲ್ಲಿ ಅತಿ ಕಠಿಣವಾದ ವೃದ್ಧಪರ್ವವನ್ನು ಪ್ರಾರಂಭಿಸುತ್ತಾನೆ ಈ ಅನಿವಾಸಿ.
- ವಲ್ಲೀಶ ಶಾಸ್ತ್ರಿ
vshastry@yahoo.com